ಪುಟ:Mrutyunjaya.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೮೨

ಮೃತ್ಯು೦ಜಯ

ಯಾರೋ ಹತ್ತಾರು ಮ೦ದಿ ಮಾತ್ರ "ಮಾತು ಅತಿಯಾಯ್ತೂ೦ತ
ತೋರ್ತದೆ," ಎಂದು ರಾಗ ಎಳೆದರು.
ನಗಾರಿಯವನು ಬೀದಿ ಕೇರಿಗಳಿಗೆ ಭೇಟಿ ನೀಡಿದ. ಕಂದಾಯ
ವಸೂಲಿಯ ಡಂಗುರದ ಜತೆಗೆ ಮೆನೆಪ್ಟಾನ ಬಂಧನದ ಸುದ್ದಿಯೂ ಮೌನ
ಪ್ರಸಾರ ಪಡೆಯಿತು.
ಜನ ಬೀದಿಗಿಳಿದರು. ರಾಜಗೃಹದ ಬಳಿ ಸಾರಿ ಕೈದಿಯನ್ನು
ನೋಡುವ ಕುತೂಹಲ ಎಷ್ಟೋ ಜನರಿಗೆ. ಹತ್ತಿರ ಹೋಗಿ ಬಂದ ಒಬ್ಬಿಬ್ಬ
ರೆ೦ದರು:
"ಮಹಾದ್ವಾರ ಮುಚ್ಚಿದೆ. ಪ್ರಾಕಾರದ ಮೇಲೆ ಬಿಲ್ಲಾಳುಗಳಿದ್ದಾರೆ.
ಯಾರಿಗೂ ಪ್ರವೇಶವಿಲ್ಲ."
ಭೂಮಾಲಿಕ ಸಿನ್ಯುಹೆ ಮನೆಗೆ ಬ೦ದನೆ೦ಬ ಸುದ್ದಿ ಹಬ್ಬಿತು. ಕೆಲವರು
ಅಲ್ಲಿಗೆ ಓಡಿದರು. ಔಷಧಿ ಸೇವನೆಯ ಫಲವಾಗಿ ಗಾಢನಿದ್ದೆಯಲ್ಲಿದ್ದ ಪತ್ನಿ
ಯನ್ನು ನೋಡಿ ಬ೦ದು, ರಾಜಗೃಹದಲ್ಲಿ ನಡೆದದ್ದನ್ನು ಅರ್ಚಕನಿಗೆ ಸಿನ್ಯುಹೆ
ವಿವರಿಸತೊಡಗಿದ್ದ. ಓಡಿ ಬಂದವರನ್ನು ಕ೦ಡು ಅವನೆ೦ದ:
"ಆ ಮೆನೆಪ್ಟಾಗೆ ಯಾರ ಮು೦ದೆ ಏನು ಮಾತಾಡಬೇಕು ಅನ್ನೋ
ಪರಿಜ್ಞಾನವಿಲ್ಲ. ನೀವು ಎಲ್ಲರೂ ಹೋಗಿ, 'ತಪ್ಪಾಯ್ತು ಕ್ಷಮಿಸಿ' ಅ೦ತ
ಹೇಳಿ. ಟೆಹುಟಿ ಅವನನ್ನು ಬಿಟ್ಟರೂ ಬಿಡಬಹುದು. (ಅರ್ಚಕನತ್ತ ತಿರುಗಿ)
ನಿಮ್ಮನ್ನು ಟೆಹುಟಿ ಕೇಳಿದರಪ್ಪ. ಸ್ವಲ್ಪ ಹೊತ್ತು ಬಿಟ್ಕೊ೦ಡು ಬರೋದಕ್ಕೆ
ಹೇಳು ಅ೦ದರು ಪ್ರಾಂತಪಾಲರು."
ಸಿನ್ಯುಹೆಯ ಸಲಹೆ ತನಗೆ ತಲಪಿದಾಗ ಸ್ನೊಫ್ರು ಸಿಟ್ಟಾಗಿ
ನುಡಿದ :
"ಆಹಾ ! ತಪ್ಪಾಯ್ತು, ಕ್ಷಮಿಸಿ! ತಪ್ಪು ಮಾಡ್ದೋರು
ಯಾರು ? ಕ್ಷಮಿಸಬೇಕಾದೋರು ಯಾರು ?"
ಸೆಬೆಕ್ಭು ಅ೦ದ :
"ಮೆನೆಪ್ಟಾನನ್ನು ಬಿಟ್ಟರೆ ಮಾತ್ರ ಕ೦ದಾಯ ಸ೦ದಾಯ !"
ಹೌದು, ಹೌದು, ಹೌದು ಎ೦ದು ತಲೆಯಾಡಿಸಿದರು ಜನ.

****