ಪುಟ:Mysore-University-Encyclopaedia-Vol-1-Part-1.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಿಮಜಯದ ಅನಿಶ್ಚಿತತೆ-ಅಂತಿಮಬಲ

ಅಂತಿಮಗತಿಯ ವಿಚಾರದಲ್ಲಿ ಕೆಲವು ಪ್ರಮುಖ ಮತಧರ್ಮಗಳ ಅಭಿಪ್ರಾಯವೇನೆಂಬುದನ್ನು ಸ್ಥೂಲವಾಗಿ ತಿಳಿಯಬಹುದು.ಪುರಾತನ ಕ್ರೈಸ್ತಧರ್ಮದಂತೆ ಸತ್ತ ಬಳಿಕ ಮಾನವನ ಆತ್ಮ ದೇವದೂತರೊಂದಿಗೆ ಭಗವಂತನ ಎದುರುಹೋಗಿ ನಿಲ್ಲುತ್ತದೆ.ಅವನ ತಾತ್ಕಾಲಿಕ ತೀರ್ಪಿನಂತೆ ಸ್ವರ್ಗದ ತೋಟದಲ್ಲಿ ತನೆಗೆ ನಿಶ್ಚಿತಗೊಳಿಸಿದ ಜಾಗದಲ್ಲಿ ಅಂತಿಮ ತೀರ್ಮಾನದ ದಿನ ಅಥವಾ ಭಗವಂತನ ದಿನಕ್ಕಾಗಿ ಕಾದಿರುತ್ತದೆ.ಅಂತಿಮ ತೀರ್ಪಿನ ದಿನ ಬಂದಾಗ ಕೂಗಿದ ಕಹಳೆಯ ದನಿಗೆ ಇಂಥ ಎಲ್ಲ ಚೇತನಗಳು ಓಗೊಟ್ಟು ಭಗವಂತನ ಮುಂದೆ ತಮ್ಮ ತೀರ್ಪಿಗಾಗಿ ಕಾದು ನಿಲ್ಲುತ್ತವೆ.ಅವನ ತೀರ್ಪು ಆ ಚೇತನಗಳ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ಅವಲಂಬಿಸಿರುತ್ತದೆ.ಬಾಳಿನ ಗ್ರಂಥ(ಬುಕ್ ಆಫ್ ಲೈಫ್)ಎಂಬ ಪುಸ್ತಕದಲ್ಲಿಲ್ಲದವರು ಪಾಪಿಗಳೆಂದು ತೀರ್ಮಾನಿಸಿ ಅವರನ್ನು ಅಗ್ನಿಯ ಕೂಪಕ್ಕೆ ತಳ್ಳಲಾಗುತ್ತದೆ.ಅಂಥವರು ಮೃತ್ಯುವನ್ನು ಮತ್ತೊಮ್ಮೆ ಅನುಭವಿಸಬೇಕು.ಪುಣ್ಯಾತ್ಮರು ಪವಿತ್ರತಮವಾದ ಸ್ವರ್ಗವಾಸಿಗಳಾಗುತ್ತಾರೆ.

ಈ ವಿಚಾರದಲ್ಲಿ ಮಹಮ್ಮದೀಯರ ಕಲ್ಪನೆಗೂ ಯೆಹೂದಿಗಳ,ಕ್ರೈಸ್ತ ಮತ್ತು ಪಾರಸಿಗಳ ಕಲ್ಪನೆಗೂ ಬಹುಮಟ್ಟಿಗೆ ಸಾಮ್ಯವಿದೆ.ಸತ್ತ ಮನುಷ್ಯನ ಗೋರಿಯ ಬಳಿಗೆ ಇಬ್ಬರು ದೇವದೂತರು ಬಂದು ಅವನ ಆತ್ಮಕ್ಕೆ ಇರುವ ಧಾರ್ಮಿಕಶ್ರದ್ಧೆಯನ್ನು ಪರೀಕ್ಷಿಸುತ್ತಾರೆ.ಶ್ರದ್ಧೆ ತೃಪ್ತಿಕರವಾಗಿ ಕಂಡಲ್ಲಿ ಅವನನ್ನು ಗೋರಿಯಲ್ಲಿ ಶಾಂತಿಯಿಂದ ಮಲಗಲು ಬಿಡುತ್ತಾರೆ.ಇಲ್ಲವಾದರೆ ಅವನನ್ನು ಸುತ್ತಿಗೆಯಿಂದ ಹೊಡೆದು ಹಿಂಸಿಸುತ್ತಾರೆ.ಅಂತಿಮತೀರ್ಪಿನ ದಿನಕ್ಕಾಗಿ ಆತ್ಮಗಳು ಕಾದಿರುತ್ತವೆ.ಭಗವಂತನಿಗೆ ಸರಿಕಂಡಾಗ ದೇವದೂತ ನಿರ್ಣಯದ ದಿನ ಬಂದಿತೆಂಬುದನ್ನು ಸೂಚಿಸುವ ಕಹಳೆಯನ್ನು ಊದುತ್ತಾನೆ.ಆ ಕೂಗನ್ನು ಅನುಸರಿಸಿ ಜಗತ್ತಿನಲ್ಲಿ ಒಂದು ಪ್ರಳಯವೇ ಆಗುತ್ತದೆ ಮತ್ತು ಬದುಕಿದ್ದ ಮಾನವರೆಲ್ಲರೂ ಸಾಯುತ್ತಾರೆ.ಕೊನೆಗೊಮ್ಮೆ ಕಹಳೆಯ ದನಿಯನ್ನು ಕೇಳಿ ಎಲ್ಲ ಆತ್ಮಗಳೂ ಪುನಶ್ಚೇತನಗೊಂಡು ತಮ್ಮ ಪಾಪಪುಣ್ಯಗಳ ವರದಿಯನ್ನೊಪ್ಪಿಸಲು ಸಿದ್ಧವಾಗಿತ್ತವೆ.ಭಗವಂತನ ಸಿಂಹಾಸನದ ಎದುರು ಜೀವಿಗಳು ಮಾಡಿದ ಪಾಪಪುಣ್ಯಗಳ ತುಲನಾತ್ಮಕ ಪರೀಕ್ಷೆ ನಡೆಯುತ್ತದೆ.ಈ ತೀರ್ಪು ಸು.೧೦೦೦ ವರ್ಷದಿಂದ ೫೦,೦೦೦ ವರ್ಷಗಳವರೆಗೂ ನಡೆಯುತ್ತದಂತೆ.ಕೊನೆಗೆ ಎಲ್ಲ ಜೀವಿಗಳೂ ಸಿರಾತ್ ಎಂಬ ಸೇತುವೆಯ ಮೂಲಕ ನರಕವನ್ನು ದಾಟಿ ಸ್ವರ್ಗವನ್ನು ಪ್ರವೇಶಿಸಬೇಕು.ಇವರು ದಾಟುವ ಸೇತುವೆ ಕೂದಲಿಗಿಂತ ಸೂಕ್ಷ್ಮವೂ ಕತ್ತಿಯ ಅಲಗಿಗಿಂತ ಹರಿತವೂ ಆಗಿರುತ್ತದೆ.ಪುಣ್ಯಶಾಲಿಗಳು ಮಾತ್ರ ಸುರಕ್ಷಿತವಾಗಿ ದಾಟಬಲ್ಲರು.ಪಾಪಾತ್ಮರು ಸೇತುವೆ ಕುಸಿದು ನರಕದಲ್ಲಿ ಬೀಳುತ್ತಾರೆ.

ಕರ್ಮ ಮತ್ತು ಪುನರ್ಜನ್ಮದಲ್ಲಿನ ನಂಬಿಕೆ ಭಾರತೀಯ ಮತಗಳಿಗೆ ವಿಶಿಷ್ಟವಾದದ್ದು.ಬೌದ್ಧರು ಇತರ ಭಾರತೀಯರಂತೆ ಪರಮದೈವವನ್ನು ನಂಬದಿದ್ದರೂ ಕರ್ಮ ಮತ್ತು ಪುನರ್ಜನ್ಮಗಳನ್ನು ಒಪ್ಪಿಕೊಂಡಿದ್ದಾರೆ.ಆದ್ದರಿಂದ ಪಾಪಪುಣ್ಯಗಳನ್ನು ನಿರ್ಧರಿಸಿ ತಕ್ಕ ಫಲವನ್ನು ಕೊದಲು ಬೌದ್ಧರ ಪ್ರಕಾರ ಈಶ್ವರನ ಅಗತ್ಯವಿಲ್ಲ.ಅದನ್ನು ಅವರವರ ಕರ್ಮವೇ ನಿರ್ಧರಿಸುತ್ತದೆ.ಜೀವರು ಅವರವರ ಕರ್ಮಕ್ಕೆ ತಕ್ಕಂತೆ ಉನ್ನತವಾದ ಇಲ್ಲವೆ ಕೀಳಾದ ಜೀವನವನ್ನು ಪಡೆಯುತ್ತಾರೆ.ಮಾನವನ ಕರ್ಮದ ಫಲವೆಲ್ಲವೂ ಸೇರಿ ಐದು ರೀತಿಯ ಸ್ಕಂದಗಳ ರೂಪದಲ್ಲಿ ಅವರ ಮುಂದಿನ ಜನ್ಮವೆಂಥದೆಂಬುದನ್ನು ನಿರ್ಣಯಿಸಲು ಶಕ್ತವಾಗುತ್ತವೆ.ಬೌದ್ಧಧರ್ಮದಲ್ಲಿಯೂ ಸ್ವರ್ಗ,ಮರ್ತ್ಯ ಮತ್ತು ಪಾತಾಳಗಳ ಕಲ್ಪನೆಯುಂಟು.ಪಾಪಕ್ಕೆ ಪ್ರಾಯಶ್ಚಿತ್ತವಾಗಿ ನರಕದ ನೋವನ್ನು ಪುಣ್ಯದ ಫಲವಾಗಿ ಸ್ವರ್ಗದ ಸುಖವನ್ನೂ ಜೀವಿ ಅನುಭವಿಸುತ್ತಾನೆ.ಆದರೆ ಬೌದ್ಧಧರ್ಮದಲ್ಲಿ ಬಾಳಿನ ಪರಮಪುರುಷಾರ್ಥವಾದ ಜೀವನ್ಮುಕ್ತಿ ಸ್ವರ್ಗಕ್ಕಿಂತಲೂ ಅತೀತವಾದದ್ದು.ಜೀವನ್ಮುಕ್ತಿ ದಶೆಯೇ ಬೌದ್ಧರ ನಿರ್ವಾಣ.

ಹಿಂದೂ ಧರ್ಮದಲ್ಲಿ ಕರ್ಮ ಅಥವಾ ಅದೃಷ್ಟಕ್ಕೆ ಪ್ರಮುಖ ಸ್ಥಾನವಿದೆ.ಮಾನವ ಅರಿತೋ ಅರಿಯದೆಯೋ ಎಸಗುವ ಅನೇಕ ತಪ್ಪುಗಳಿಗೆ ಸೂಕ್ತವಾದ ವಿಧಿವತ್ತಾದ ಪರಿಹಾರಗಳೂ ಇವೆ.ಆದರೂ ಬಾಳನ್ನೆಲ್ಲ ನಿಯಂತ್ರಿಸುವ ಒಂದು ವ್ಯಾಪಕತತ್ತ್ವವನ್ನು ವಿಧಿ ಎಂದು ಕರೆಯಲಾಗಿದೆ.ಹಿಂದೂ ಧರ್ಮದಲ್ಲಿ ಅಂತ್ಯೇಷ್ಟಿ ಅಂದರೆ ಸತ್ತಾಗ ಆಚರಿಸಬೇಕಾದ ವೈದಿಕಕರ್ಮಗಳನ್ನು ಬಹಳ ವಿವರವಾಗಿ ಅಥರ್ವವೇದ ಶತಪಥಬ್ರಾಹ್ಮಣ ಮುಂತಾದ ಗ್ರಂಥಗಳಲ್ಲಿ ಹೇಳಲಾಗಿದೆ.ಮೃತ್ಯುವಿನ ಅಧಿದೇವತೆ ಅಥವಾ ಧರ್ಮದ ದೇವತೆ ಎನಿಸಿದ ಯಮ ಮಾನವನ ಪಾಪಪುಣ್ಯಗಳ ವಿಚಾರದಲ್ಲಿ ತೀರ್ಮಾನಿಸತಕ್ಕವ.ಋಗ್ವೇದದಲ್ಲಿ ಯಮ ಧರ್ಮದ ದೇವತೆಯಾಗಿ ಕಂಡುಬಂದರೂ ಅವನು ಭಯಂಕರರೂಪಿಯೂ ನರಕದ ಅಧಿಪತಿಯೂ ಎನಿಸಿದಂತೆ ವಿವರಗಳಿವೆ.ಅಥರ್ವವೇದದಲ್ಲಿ ಅವನು ಧರ್ಮಾಧರ್ಮಗಳನ್ನು ನಿರ್ಣಯಿಸುವ ಅಧಿದೇವತೆ ಎಂಬ ಮಾತುಗಳಿವೆ.ಸತ್ತಮೇಲೆ ಆತ್ಮ ಅನುಭವಿಸುವ ಸುಖದುಃಖಗಳ ವಿಚಾರದಲ್ಲಿ ಸಾಧಾರಣವಾಗಿ ಪ್ರಚಾರದಲ್ಲಿರುವ ಅನೇಕ ಅಭಿಪ್ರಾಯಗಳು ಶತಪಥಬ್ರಾಹ್ಮಣದಿಂದ ಬಂದಂತೆ ಕಾಣುತ್ತವೆ.ಅಶರೀರಿ ಆತ್ಮ ಬೆಂಕಿಯ ಬೇಗೆಗೆ ಸಿಕ್ಕುತ್ತದೆ.ಪುಣ್ಯಶಾಲಿಯಾದರೆ ಅದನ್ನು ಸುಲಭವಾಗಿ ಸಹಿಸುತ್ತದೆ.ಇಲ್ಲವಾದರೆ ದಾರುಣವಾದ ನೋವನ್ನು ಅನುಭವಿಸಬೇಕಾಗುತ್ತದೆ.ಇದಾದಮೇಲೆ ಪುಣ್ಯವಂತರು ಸ್ವರ್ಗಾರೋಹಿಗಳಾಗುತ್ತಾರೆ.ಪಾಪಿಗಳು ನರಕಕ್ಕೆ ಬೀಳುತ್ತಾರೆ.ಹೀಗೆ ಯಮಧರ್ಮ ಅವರವರ ಪಾಪಪುಣ್ಯಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಿ ಅದನ್ನು ಅನುಭವಿಸುವಂತೆ ನೋಡಿಕೊಳ್ಳುತ್ತಾನೆ.ಆದರೆ ಹಿಂದೂ ಧರ್ಮ ಆತ್ಮನಿಗೆ ಇದೇ ಕೊನೆಯ ಗತಿ ಎಂದು ಹೇಳಿಲ್ಲ.ಸ್ವರ್ಗದ ಸುಖವಾಗಲೀ,ನರಕದ ಯಾತನೆಯಾಗಲೀ ಶಾಶ್ವತವಲ್ಲ.ಪಾಪಪುಣ್ಯಗಳು ಕ್ಷೀಣವಾದರೆ ಪುನಃ ಪುನಃ ಮರ್ತ್ಯಲೋಕಕ್ಕೆ ಆಗಮಿಸಲೇಬೇಕು.ಈ ಪುನರ್ಜನ್ಮವನ್ನು ಮೀರಿ ಜೀವ ನಿತ್ಯ ಮುಕ್ತವಾಗಬೇಕಾದರೆ ಶೈವರ ಪ್ರಕಾರ ಶಿವನ.ವೈಷ್ಣವರ ಪ್ರಕಾರ ವಿಷ್ಣುವಿನ ಅನುಗ್ರಹ ಪಡೆಯಬೇಕು.ಇದು ಸಾವಿನ ಆಚಿನ ಮುಕ್ತಿದಶೆ.ಶಂಕರಾಚಾರ್ಯರ ಪ್ರಕಾರ ಪರಮಮುಕ್ತಿಯೆಂದರೆ ಬ್ರಹ್ಮನ ಸಾನ್ನಿಧ್ಯದಲ್ಲಿ ಬ್ರಹ್ಮನಲ್ಲಿ ಐಕ್ಯವಾಗುವುದು.ಈ ಮುಕ್ತಿ ಇಹಲೋಕದಲ್ಲಿ ಜೀವಂತವಾಗಿರುವಾಗಲೇ ಪಡೆಯಬಹುದಾದ ಪರಮಗತಿ.

ಹೀಗೆ ವಿವಿಧ ಧರ್ಮಗಳು ತಮ್ಮ ಧಾರ್ಮಿಕ ನಂಬಿಕೆ ಮತ್ತು ತತ್ತ್ವದರ್ಶನಕ್ಕೆ ಹೊಂದಿದಂತೆ ಸಾವಿನಿಂದಾಚೆಗೆ ಮಾನವನ ಅಂತಿಮ ಗತಿ ಏನು ಎಂಬ ಬಗ್ಗೆ ಯೋಚಿಸಿವೆ.ಅಷ್ಟೇ ಏಕೆ,ಅದಕ್ಕನುಗುಣವಾಗಿಯೇ ಶವಸಂಸ್ಕಾರಗಳ ವಿಧಾನಗಳೂ ಏರ್ಪಟ್ಟಿವೆ.ಸತ್ತವನನ್ನು ಸಮಾಧಿ ಮಾಡುವ ಕ್ರಮ,ಇಲ್ಲವೆ ಚಿತೆಯಲ್ಲಿ ಸುಡುವ ವಿಧಾನಗಳು ಧಾರ್ಮಿಕಶ್ರದ್ಧೆಗೆ ಅನುಗುಣವಾಗಿ ರೂಢಿಗೆ ಬಂದಿವೆ.ಮಾನವನ ಅಂತಿಮಗತಿ ಏನು ಎಂದು ಚಿಂತಿಸಿದ ಹಾಗೆಯೇ ಈ ಜಗತ್ತಿನ ಅಂತಿಮಗತಿ ಏನು ಎಂಬ ವಿಚಾರದಲ್ಲಿಯೂ ತಮ್ಮ ದೃಷ್ಟಿ ಹಾರಿಸಿದ್ದಾರೆ.ವಿಶ್ವದ ಕಾಲವನ್ನು ಯುಗಯುಗಗಳ ಮಾನದಲ್ಲಿ ಅಳೆದು ಕಲ್ಪಿಸಿದ್ದಾರೆ.ಅಂತೂ ಕೊನೆಗೊಮ್ಮೆ ಜಗತ್ತಿನ ಲಯವೂ ಅನಿವಾರ್ಯವೆಂಬುದು ಎಲ್ಲ ಧರ್ಮಗಳ ಒಮ್ಮತ.

ಅಂತಿಮಜಯದ ಅನಿಶ್ಚಿತತೆ:ಸೈನ್ಯಾಧಿಕಾರಿ ತ್ವರಿತವಾಗಿಯಾಗಲೀ ಮಂದಗತಿಯಲ್ಲಾಗಲೀ ಕಾರ್ಯಕ್ರಮವನ್ನು ಕೈಕೊಳ್ಳಲು ಬಾರದ ಯುದ್ಧ ಪ್ರಸಂಗ(ಫ಼ಾಗ್ ಆಫ಼್ ವಾರ್).ಸಾಮನ್ಯವಾಗಿ ಯುದ್ಧದಲ್ಲಿ ಜಯಾಪಜಯಗಳು ಅನಿಶ್ಚಿತ.ಆದರೆ ಇಂಥ ವಿಶಿಷ್ಟ ಪ್ರಸಂಗಗಳು ಅನಿರೀಕ್ಷಿತ ಸಂಗತಿ ಅಥವಾ ಘಟನೆಗಳ ಪರಿಣಾಮವಾಗಿ ಉದ್ಭವಿಸುತ್ತವೆ.ಉದಾಹರಣೆಗಾಗಿ ಹೇಳುವುದಾದರೆ ಶತ್ರು ಅಧಿಕ ಪ್ರಮಾಣದಲ್ಲಿ ಅಗ್ನಿಶಕ್ತಿಯನ್ನೋ ಸೈನ್ಯಬಲವನ್ನೊ ಪ್ರಯೊಗಿಸಬಹುದು ಇಲ್ಲವೆ ಯುದ್ಧ ಕಾರ್ಯಚರಣೆಯ ಕ್ಷೇತ್ರ ಸೈನ್ಯದ ಚಲನವಲನಕ್ಕೆ ಅಡ್ಡಿ ಆತಂಕಗಳನ್ನು ಉಂಟುಮಾಡುವಂಥದಾಗಿರಬಹುದು.ಇವೇ ಮುಂತಾದ ಸನ್ನಿವೇಶಗಳಲ್ಲಿ ಆತುರದ ನಿರ್ಣಯ ಪ್ರಸಂಗವನ್ನು ಮತ್ತಷ್ಟು ಹದಗೆಡಿಸಬಹುದು.ಆತುರಾತುರವಾಗಿ ನಿರ್ಣಯ ಮಾಡುವುದಾದರೆ ಅನಿರೀಕ್ಷಿತವಾದ ವಿನಾಶಕ್ಕೆ ಎಡೆಗೊಡಬಹುದು.

ಅಂತಿಮಬಲ:ಕಟ್ಟಡ ಮತ್ತು ಯಂತ್ರಗಳ ರಚನೆಯಲ್ಲಿ ಉಪಯೋಗಿಸಲಾಗುವ ವಸ್ತುಗಳು ಭೌತಿಕ ಗುಣಗಳಲ್ಲಿ ಅವುಗಳ ಶಕ್ತಿ ಸಾಮರ್ಥ್ಯವೂ ಪ್ರಮುಖವಾದ ಅಂಶ.ಪ್ರಯೋಗಶಾಲೆಯಲ್ಲಿ ಉಕ್ಕು,ಕಬ್ಬಿಣ,ಹಿತ್ತಾಳೆ,ತಾಮ್ರ,ಅಲ್ಯೂಮಿನಿಯಂ ಮುಂತಾದ ರಚನಾಲೋಹಗಳನ್ನು ಕಲ್ಲು,ಇಟ್ಟಿಗೆ,ಮರ,ಕಾಂಕ್ರೀಟ್ ಇತ್ಯಾದಿ ವಸ್ತುಗಳನ್ನೂ ಸರ್ವಪರೀಕ್ಷಕಯಂತ್ರದಲ್ಲಿ(ಯೂನಿರ್ಸಲ್ ಟೆಸ್ಟಿಂಗ್ ಮಷೀನ್)ಪರೀಕ್ಷೆ ಗೊಳಪಡಿಸಿ,ಅವುಗಳ ಶಕ್ತಿ ಸಾಮರ್ಥ್ಯವನ್ನು ಅಳೆಯಬಹುದು.

ವಸ್ತುಗಳ ಶಕ್ತಿ ಸಾಮರ್ಥ್ಯವನ್ನು ನಿರ್ಧಾರ ಮಾಡಲು.ಒತ್ತಡ ಮತ್ತು ರೂಪ ವ್ಯತ್ಯಾಸಗಳಿಗೆ ಸಂಬಂಧಿಸಿದ ಒಂದು ರೇಖಾನಕ್ಷೆಯನ್ನು ತಯಾರಿಸಬೇಕು.ಈ ನಕ್ಷೆಯಲ್ಲಿ ಒತ್ತಡ ಅತ್ಯಂತ ಅಧಿಕವಾಗಿರುವ ಭಾಗವನ್ನು ಅಂತಿಮ ಬಲ(ಅಲ್ಟಿಮೇಟ್ ಸ್ಟ್ರೆಸ್)ಎಂದು ಗುರುತಿಸಬಹುದು.ಉದಾಹರಣೆಗಾಗಿ ಉಕ್ಕಿನ ಒತ್ತಡ ರೂಪ ವ್ಯತ್ಯಾಸ ಇವಕ್ಕೆ ಸಂಬಂಧಿಸಿದ ಚಿತ್ರದಲ್ಲಿ ಅಂತಿಮಬಲದ ಭಾಗವನ್ನು ತೋರಿಸಲಾಗಿದೆ.

ರಚನಾವಸ್ತುಗಳಲ್ಲಿ ಅವುಗಳ ಅಂತಿಮಬಲದ ಆಧಾರದ ಮೇಲೆ ವಸ್ತುಗಳ ಮೇಲಿನ ಕ್ರಿಯಾಒತ್ತಡ(ವರ್ಕಿಂಗ್ ಸ್ಟ್ರೆಸ್)ಅಥವಾ ರಚನಾಒತ್ತಡವನ್ನು(ಡಿಸೈನ್ ಸ್ಟ್ರೆಸ್)ಸುರಕ್ಷತೆಯ ಅಂಶದ(ಫ್ಯಾಕ್ಟರ್ ಆಫ್ ಸ್ಟ್ರೆಸ್)ಸಹಾಯದಿಂದ ಕಂಡುಹಿಡಿಯಬಹುದು.ಈ ಮೂಲಕ ರಚನಾವಸ್ತುಗಳ ರೂಪ ಮತ್ತು ಗಾತ್ರಗಳನ್ನು ಅವುಗಳ ಮೇಲೆ ಬೀಳುವ ಭಾರ ಅಥವಾ ತೂಕಗಳಿಗೆ ಸಂಬಂದಿಸಿದಂತೆ ನಿರ್ಣಯಮಾಡಬಹುದು.

ಇತ್ತೀಚಿನ ಎರಡು ದಶಕಗಳಲ್ಲಿ ರಚನಾವಸ್ತುಗಳ ರೂಪ ಮತ್ತು ಗಾತ್ರಗಳನ್ನು ಅಂತಿಮಶಕ್ತಿ ಸಿದ್ಧಾಂತದ ಆಧಾರದ ಮೇಲೆ ನಿರ್ಧರಿಸಲು ನಡೆಸಿರುವ ಪ್ರಯೋಗಗಳು ಯಶಸ್ವಿಯಾಗಿವೆ.ಇದರಂತೆ ಕಟ್ತಡದಲ್ಲಿ ಉಪಯೋಗಿಸುವ ವಸ್ತುಗಳ ಅಂತಿಮಬಲ ಸಾಮರ್ಥ್ಯವನ್ನು ಅಂದಾಜು ಮಾಡಬಹುದು.ಅಲ್ಲದೆ ವಸ್ತುಗಳ ಮೇಲೆ ಬರುವ ಕ್ರಿಯಾಭಾರ