ಪುಟ:Mysore-University-Encyclopaedia-Vol-1-Part-1.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತೂರಿಯಮ್- ಅಂತೆ-ಕಂತೆ

ಅಥವಾ ರಚನಾಭಾರವನ್ನು ಅವುಗಳ ಅಂತಿಮಬಲದೊಂದಿಗೆ ಹೋಲಿಸಿ,ಬಲದ ಅಂಶವನ್ನು ತಿಳಿಯಬಹುದು.ಈ ಬಲದ ಅಂಶ ಸುರಕ್ಷತೆಯ ಅಂಶಕ್ಕಿಂತ ಉತ್ತಮ ಮತ್ತು ಅರ್ಥಪೂರ್ಣವಾದದ್ದು.ಏಕೆಂದರೆ ಕಟ್ಟಡ ಎಷ್ಟರಮಟ್ಟಿಗೆ ಸುಭದ್ರವಾಗಿದೆ ಎಂಬುದನ್ನು ಬಲದ ಅಂಶ ಸೂಚಿಸುತ್ತದೆ.ಉಕ್ಕು ಮತ್ತು ಕಾಂಕ್ರೀಟ್ ರಚನಾ ವಿನ್ಯಾಸಗಳನ್ನು ಸುಭದ್ರವಾಗಿ ಅಲ್ಪ ಖರ್ಚಿನಲ್ಲೇ ಅಂತಿಮ ಬಲದ ಆಧಾರದಿಂದ ಸುಲಭವಾಗಿ ರಚಿಸುವ ಒಂದು ವಿಧಾನವನ್ನು ಇತ್ತೀಚೆಗೆ ಹೆಚ್ಚಿಗೆ ಬಳಸಲಾಗುತ್ತಿದೆ.(ವಿ.ಡಿ.ಪಿ.)

ಅಂತೂರಿಯಮ್:ಏರೇಸೀ ಕುಟುಂಬಕ್ಕೆ ಸೇರಿದ ಒಂದು ಜನಪ್ರಿಯ ಆಲಂಕಾರಿಕ ಸಸ್ಯ.ಈ ಜಾತಿಯ ಅನೇಕ ಪ್ರಭೇದಗಳು ಸುಂದರವಾದ ಎಲೆ,ಹೂಗೊಂಚಲ ಕವಚ(ಸ್ಪೇತ್)ಇರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು.ಮಧ್ಯ ಅಮೆರಿಕದ ಮೂಲ ನಿವಾಸಿಗಳು ಅಂತೂರಿಯಮ್ ಸಸ್ಯಗಳನ್ನು ಮನೆಯ ಕೈತೋಟಗಳಲ್ಲಿ ಮತ್ತು ಉದ್ಯಾನವನಗಳಲಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ.ಇವುಗಳ ಹೂಗೊಂಚಲುಗಳನ್ನು ಮೇಜಿನ ಅಲಂಕಾರಕ್ಕಾಗಿ ಬಳಸುತ್ತಾರೆ.

ಈ ಜಾತಿಯಲ್ಲಿ ಸು.೫೦೦ ಪ್ರಭೇದಗಳು ಇವೆ.ಸಾಮನ್ಯವಾಗಿ ಇವು ೧-೨ ಮೀಟರ್ ಎತ್ತರ ಬೆಳೆಯುವ ಮೂಲಿಕೆ ಬಗೆಯ ಸಸ್ಯಗಳು.ತಾಳು ಮೆತುವಾಗಿರುತ್ತದೆ.ಕೆಲವು ಬಗೆಗಳಲ್ಲಿ ದೃಢವಾಗೂ ಇರುತ್ತದೆ.ಬೆಳೆ ಬಹುಕಾಲ ನಿಲ್ಲುತ್ತದೆ.ಈ ಸಸ್ಯಗಳು ಅಡರು ಬಳ್ಳಿಗಳಾಗಿಯೂ ಇರಬಹುದು.ಎಲೆ ಸರಳ ರೀತಿಯದು.ಹೃದಯಾಕಾರ,ಅಂಬಿನಾಕಾರ ಮತ್ತು ಈಟಿಯಾಕಾರದಲ್ಲಿರಬಹುದು.ಸಾಮಾನ್ಯವಾಗಿ ಎಲೆಯ ಬಣ್ಣ ಹಸಿರು.ಅಲಂಕಾರ ಜಾತಿಯ ಬಗೆಗಳಲ್ಲಿ ವಿವಿಧ ಬಣ್ಣಗಳಿರುತ್ತವೆ.ಎಲೆತೊಟ್ಟು ಉದ್ದ ಅಥವಾ ಮೋಟು;ಬಣ್ಣ ಮತ್ತು ಆಕಾರಗಳಲ್ಲಿ ವೈವಿಧ್ಯವುಂಟು.ಬೇರು ಗಡ್ಡೆರೂಪದ್ದು ಹೂಗೊಂಚಲು ಸ್ಪೇಡಿಕ್ಸ್ ಮಾದರಿಯದು.ಇವುಗಳ ಕೆಳಭಾಗದಲ್ಲಿ ಬಣ್ಣಬಣ್ಣದ ಹೂಗೊಂಚಲ ಕವಚಗಳು ಇರುತ್ತವೆ.ಹೂಗಳು ಉಪಪುಷ್ಟಪತ್ರಗಳಿಂದ ಕೂಡಿದ್ದು ತೊಟ್ಟಿಲ್ಲದೆ ದಿಂಡಿಗೆ ಸೇರಿಕೊಂಡಿರುತ್ತವೆ.ದ್ವಿಲಿಂಗಪುಷ್ಟಗಳಾದ ಅವುಗಳಲ್ಲಿ ೫ ದಳಗಳೂ ೫ ಪುಷ್ಟಪತ್ರಗಳೂ ಕೂಡಿಕೊಂಡಿವೆ.೫ ಕೇಸರಗಳೂ ೫ ವಿಭಾಗವಾದ ಅಂಡಕೋಶವೂ ಇವೆ.

ಅಂತೂರಿಯಮ್ ‌‌‌ಆಂಡ್ರಸಿನಮ್:ಈ ಪ್ರಭೇದ ಕೊಲಂಬಿಯ ದೇಶದ್ದು.ಈ ಸಸ್ಯವನ್ನು ೧೮೭೬ರಲ್ಲಿ ಎಡ್ಮಂಡ್ ಆಂಡ್ರೆ ಎಂಬುವನು ಮೊದಲು ವಿವರಿಸಿದ ಕಾರಣ ಈ ಹೆಸರು ಬಂದಿದೆ.ಕಾಂಡ ಕುಳ್ಳಾಗಿ ನೇರವಾಗಿ ಬೆಳೆಯುತ್ತದೆ.ಎಲೆಯ ತೊಟ್ಟುಗಳು ತೆಳುವಾಗಿ ಎಲೆಗಳಿಗಿಂತ ಉದ್ದವಾಗಿರುತ್ತವೆ.ದೀರ್ಘಚತುರಸ್ರಾಕಾರದ ಈ ಎಲೆಗಳು ಕರಣೆಯಾಕಾರ ಅಥವಾ ಹೃದಯಾಕಾರವಾಗಿರುತ್ತವೆ;ಬಣ್ಣ ಹಸಿರು.ಕಿತ್ತಲೆಯ ಬಣ್ಣದ ಹೂಗೊಂಚಲ,ಕವಚ ನೆಲಕ್ಕೆ ಸಮಾನಾಂತರವಾಗಿದ್ದು ದಪ್ಪನಾಗಿ ಹೃದಾಯಾಕಾರದಲ್ಲಿರುತ್ತದೆ.ಹೂಗೊಂಚಲು ಸ್ಪೇಡಿಕ್ಸ್ ಮಾದರಿಯದು.ಸು.೧೫೨ ಮಿ.ಮೀ.ಉದ್ದವಾಗಿದ್ದು ಹಳದಿ ಬಣ್ಣಕ್ಕಿರುತ್ತದೆ.

ಅಂತೂರಿಯಮ್ ಕ್ರಿಸ್ಟಲೈನಮ್ ಎಂಬುದು ಈ ಜಾತಿಯ ಇನ್ನೊಂದು ಪ್ರಬೇದ.ಇದರ ಮೂಲಸ್ಥಾನ ಕೊಲಂಬಿಯ ಅಥವಾ ಪೆರು.ಹಸಿರು ಬಣ್ಣದ ಮೃದುವಾದ ಎಲೆಯ ಬುಡದ ವಿಭಾಗಗಳು ಒಂದರಮೇಲೊಂದು ಇರುತ್ತವೆ.ಹೂಗೊಂಚಲ ಕವಚ ಬಹಳ ಕಿರಿದು.ಆಕಾರ ನೀಳಚತುರಸ್ರ,ತುದಿ ಮೊನಚು.ನೆಲಕ್ಕೆ ಸಮಾನಾಂತರವಾಗಿ ಅಥವಾ ಕೆಳಮುಖವಾಗಿ ಬಾಗಿರುತ್ತದೆ.ಹೂಗೊಂಚಲು ಸ್ಪೇಡೆಕ್ಸ್ ಮಾದರಿಯದು.

ಅಂತೂರಿಯಮ್ ಮೆಗಸ್ಪಿಕಮ್ ಎಂಬುದು ಈ ಜಾತಿಯ ಮತ್ತೊಂದು ಪ್ರಭೇದ.ಇದು ಕೂಡ ಕೊಲಂಬಿಯ ಮೂಲದ್ದು.ಇದರ ಎಲೆಗಳ ತೊಟ್ಟುಗಳ ಮೇಲುಭಾಗದಲ್ಲಿ ರೆಕ್ಕೆಗಳು ಇರುತ್ತವೆ.ಚತುರ್ಮುಖಿ ಎಲೆಗಳು ಹೃದಯಾಕಾರ ಅಥವಾ ಕರಣೆಯಾಕಾರವಾಗಿ ೦.೫-೧ಮೀ. ಮೀಟರ್ ಉದ್ದವಾಗಿರುತ್ತವೆ.ಬಿಳಿಯ ನಾಳಗಳು ಪರಮುಖವಾಗಿ ಎದ್ದುಕಾಣುತ್ತ ಅಂಚಿನಲ್ಲಿ ಸೇರಿಕೊಂಡಿರುತ್ತವೆ.ಹಸಿರುಬಣ್ಣದ ಹೂಗೊಂಚಲು ಸ್ಪೇಡೆಕ್ಸ್ ಮಾದರಿಯದು.

ಅಂತೂರಿಯಮ್ ವಾರೊಕ್ಯೂಯೆನಮ್ ಎಂಬ ಇನ್ನೊಂದು ಪ್ರಭೇದ ಮೂಲತಃ ಮೆಕ್ಸಿಕೋದೇಶದ್ದು.ಇದಕ್ಕೆ ವಾರೊಕ್ಯೂ ಎಂಬ ಪ್ರಸಿದ್ಧ ಅಂತೂರಿಯಮ್ ಬೇಸಾಯಗಾರನ ಹೆಸರನ್ನೇ ಇಟ್ಟಿದೆ.ಇದರ ಎಲೆಗಳ ತೊಟ್ಟುಗಳು ಗುಂಡಾಗಿರುತ್ತವೆ.ಎಲೆ ೧.೨ ಮೀಟರ್ ಉದ್ದವಾಗಿ ನೀಳಾಕಾರ,ದೀರ್ಘಚತುರಸ್ರಾಕಾರ ಅಥವಾ ಹೃದಯಾಕಾರವಾಗಿರುತ್ತವೆ.ಲಂಬಾಗ್ರ ತುದಿಯುಳ್ಳ ಎಲೆಗಳ ಮೇಲುಭಾಗ ಮೃದುವಾಗಿರುತ್ತದೆ.ಅದರ ಎರಡುಪಕ್ಕದ ನಾಳಗಳು ಅಂಚಿಗೆ ಸಮಾನಾಂತರವಾಗಿ ಮುಖ್ಯನಾಳದಿಂದ ಹೊರಡುತ್ತವೆ.ಸ್ಪೇಡೆಕ್ಸ್ ಮಾದರಿಯ ಹೂಗೊಂಚಲು ೦.೩ಮೀಟರ್ ಉದ್ದವಾಗಿರುತ್ತದೆ.ಹೂಗೊಂಚಲಕವಚ ಗೊಂಚಲ ತಳಭಾಗದಲ್ಲಿ ಸರಿಯಾಗಿ ಹೊಂದಿಕೊಳ್ಳುತ್ತವೆ.

ಅಂತೂರಿಯಮ್ ವಿಚ್ಚೈ ಈ ಜಾತಿಯ ಇನ್ನೊಂದು ಪ್ರಭೇದ.ಇಂಗ್ಲೆಂಡಿನ ವಿಚ್ಜ್ ಎಂಬ ಸಸ್ಯ ಮಾರಾಟಗಾರನ ಜ್ಞಾಪಕಾರ್ಥವಾಗಿ ಈ ಹೆಸರು ಬಂದಿದೆ.ಈ ಪ್ರಭೇದದ ಮೂಲಸ್ಥಾನ ಕೊಲಂಬಿಯ.ಈ ಬಗೆ ಎತ್ತರವಾಗಿ ಬೆಳೆಯುವಂಥದ್ದು.ಇದರ ಕಾಂಡ ಸು.೧ಮೀ. ಎತ್ತರವಾಗಿರುತ್ತದೆ.ಎಲೆಯ ತೊಟ್ಟು ಕೋನಾಕಾರವಾಗಿರುತ್ತದೆ.ಎಲೆ ತೆಳ್ಳಗೆ ಕೋಲುಕೋಲಾಗಿ ರೀರ್ಘಚತುರಸ್ರಾಕಾರದಲ್ಲಿ ೧.೨ಮೀ. ಉದ್ದವಾಗಿರುತ್ತದೆ.

ಅದರ ತುದಿ ಮೊನಚಾಗಿದ್ದು ಲೋಹದ ಹೆಸರು ಬಣ್ಣದಿಂದ ಕೂಡಿರುತ್ತದೆ.ಬಿಳಿಯನಾಳಗಳು ಎಲೆಯ ಮೇಲೆ ಪ್ರಧಾನವಾಗಿ ಎದ್ದು ಕಾಣುತ್ತವೆ.ಹೂಗೊಂಚಲು ಸ್ಪೇಡೆಕ್ಸ್ಮಾದರಿಯದು;೦.೭೫ಮೀ. ತೊಟ್ಟಿನ ಮೇಲಿರುತ್ತದೆ.

ಅಂತೂರಿಯಮ್ ಸ್ಕರ್ಜೆರಿಯಾನಮ್ ಎಂಬುದು ಈ ಜಾತಿಯ ಮತ್ತೊಂದು ಪ್ರಭೇದ.ಇದು ಗ್ವಾಟೆಮಾಲದ ಮೂಲವಾಸಿ.ಇದರ ಕಾಂಡ ಕುಳ್ಳು.ಎಲೆಯ ತೊಟ್ಟುಗಳು ಎಲೆಗಳಷ್ಟೇ ಅಥವಾ ಎಲೆಗಳಿಗಿಂತ ಸ್ವಲ್ಪ ಹೆಚ್ಚು ಉದ್ದವಾಗಿರುತ್ತವೆ.ಎಲೆ ದೀರ್ಘಚತುರಸ್ರಾಕಾರ,ಕರಣೆಯಾಕಾರದ ಅಥವಾ ಹೃದಯಾಕಾರದಲ್ಲಿರುತ್ತದೆ.ಬಣ್ಣ ಹಸಿರು.ಹೂಗೊಂಚಲಿಗೆ ಕವಚವೂ ಉದ್ದವಾದ ತೊಟ್ಟೂ ಇರುತ್ತವೆ.ಇದರ ಹೊಗೊಂಚಲು ಅತಿ ಕೆಂಪುಬಣ್ಣದ್ದಾಗಿದ್ದು ಬಾಗಿರುತ್ತದೆ.ಅಥವಾ ಸುರುಟಿಕೊಂಡಿರುತ್ತದೆ.

ಬೀಜಗಳಿಂದ ಗಿಡ ಪಡೆಯಲು ಹೆಚ್ಚುಕಾಲ ಹಿಡಿಯುವುದಲ್ಲದೆ,ಈ ವಿಧಾನದಲ್ಲಿ ಬೆಳೆಸಿದ ಪೀಳಿಗೆ ಅನೇಕಸಾರಿ ತನ್ನ ತಾಯಿಸಸ್ಯದ ಗುಣಗಳನ್ನು ಹೋಲುವುದಿಲ್ಲ.ಆದ್ದರಿಂದ ನಿರ್ಲಿಂಗರೀತಿಯ ವೃದ್ಧಿಕಾರ್ಯ ಹೆಚ್ಚು ಬಳಕೆಯಲ್ಲಿದೆ.ಅಂತೂರಿಯಮ್ ಸಸ್ಯಗಳನ್ನು ಬೇರು ತುಂಡುಗಳಿಂದ ಸುಲಭವಾಗಿಯೂ ಶೀಘ್ರವಾಗಿಯೂ ವೃದ್ಧಿಮಾಡಬಹುದು.ಅಂಥ ಬೇರಿನ ತುಂಡುಗಳಲ್ಲಿ ಮೋಸುಗಳು ಅಗತ್ಯವಾಗಿ ಇರಬೇಕು.ಸಾಮಾನ್ಯಾವಾಗಿ ಈ ಸಸ್ಯಗಳನ್ನು ಕುಂಡಗಳಲ್ಲಿ ಬೆಳೆಸುತ್ತಾರೆ.ಇವುಗಳಿಗೆ ಧಾರಾಳವಾಗಿ ಗಾಳಿ ಮತ್ತು ಬೆಳಕು ಅಗತ್ಯ.ನೆರಳಿನಲ್ಲಿ ಇವು ಚೆನ್ನಾಗಿ ಬೆಳೆಯುತ್ತವೆ.ಹೆಚ್ಚಿನ ಬಿಸಿಲಿನಲ್ಲಿ ಇಟ್ಟಾಗ ಎಲೆ ಮತ್ತು ಹೂಗಳ ಬಣ್ಣ ಕಂದಿಹೋಗುತ್ತದೆ.

ಈ ಸಸ್ಯಗಳಿಗೆ ಹೆಚ್ಚಿನ ರೋಗ ಮತ್ತು ಕೀಟಗಳ ಹಾವಳಿ ಇಲ್ಲ.ಆದರೆ ಕೆಲವುಸಾರಿ ಹೂಗೊಂಚಲು ಮತ್ತು ಬೇರುಗಳಲ್ಲಿ ಕೊಳತೆ ಕಾಣಿಸಿಕೊಳ್ಳುತ್ತದೆ.ಇದನ್ನು ಬೋರ್ಡ್ ದ್ರಾವಣ,ಬ್ಲೈಟೆಕ್ಸ್ ಮುಂತಾದವುಗಳಿಂದ ತಡೆಗಟ್ಟಬಹುದು.ನುಸಿ,ಹೇನು,ಥ್ರಿಪ್ಸ್,ಮಿಡತೆ ಮುಂತಾದ ಕೀಟಗಳು ಈ ಕುಲದ ಸಸ್ಯಗಲನ್ನು ಪೀಡಿಸುತ್ತವೆ.ಇವುಗಳನ್ನು ಫಾಲಿಡಾಲ್,ಬಿ.ಎಚ್.ಸಿ.,ಥೈಯಮೇಟ್ ಮುಂತಾದವುಗಳಿಂದ ತಡೆಯಬಹುದು. (ಎಂ.ಎಚ್.ಎಂ.)

ಅಂತೆ-ಕಂತೆ:ಅಂತೆ-ಕಂತೆ(ಫ಼ೋಕ್-ಸೇ)ಎಂಬ ಈ ಶಬ್ದವನ್ನು ಬಿ.ಏ.ಬೋಟ್ಕಿನ್ ತಮ್ಮ ಜಾನಪದ ಸಂಗ್ರಹದ ವಾರ್ಷಿಕ ಸಂಕಲನದ(೧೯೨೯-೩೨)ತಲೆಬರೆಹವಾಗಿ ರೂಢಿಗೆ ತಂದರು.ಜಾನಪದದ ಇಂದಿನ,ಪ್ರಾಚೀನ ಹಾಗೂ ಕಾಲವೈಪರೀತ್ಯರೀತಿಯುಳ್ಳ(ಅನಾಕ್ರೊನಿಸ್ಟಿಕ್ ಫ಼ೇಸ್)ಬಾಯಿಮಾತಿನ,ಭಾಷಾವೈಜ್ಞಾನಿಕ,(ಲಾವಣಿ ಅಥವಾ ಕಥೆಯಾಗಲಿ ಇರುವ)ಕಥನಸ್ವರೂಪದ ಸಾಹಿತ್ಯವೆಂದು ಈ ಶಬ್ದಕ್ಕೆ ಅವರು ವ್ಯಾಖ್ಯೆ ಮಾಡಿರುವರು.ಜಾನಪದದ ಅರ್ಥವಿಸ್ತಾರಮಾಡಿ ಅದನ್ನು ಹೊಸ ಉಪಯೋಗಗಳಿಗೆ ಬಳಸುವುದು ಇದರ ಉದ್ದೇಶವೆಂದು ಅವರು ತಿಳಿಸಿದ್ದಾರೆ.ಇದು ೧.ಇಂಥವರು ಹೇಳಿದ್ದು ಹಳೆಯ ನೆನಪುಗಳು,ಅಜ್ಜ ಅಜ್ಜಿಯ ಕಥೆಗಳು,ಜಾನಪದ ಇತಿಹಾಸ,ತಮ್ಮ ಮಾತಿನಲ್ಲಿಯೇ ಜನರು ತಮ್ಮನ್ನು ಕುರಿತು ಹೇಳಿದ ಸಂಗತಿಗಳು.೨.ಜಾನಪದ ಸಾಮಾಗ್ರಿಗಳನ್ನು ರಚನಾತ್ಮಕವಾಗಿ ಬಳಸುವುದು.೩.ಗಾದೆಗಳು,ಪಳೆಮಾತು.ಆಲಂಕಾರಿಕ ಭಾಷೆ,ದೇಸಿನುಡಿ-ಇತ್ಯಾದಿಗಳನ್ನೊಳಗೊಳ್ಳುತ್ತದೆ.ಗ್ರಂಥವಚನ(ಬುಕ್-ಸೇ) ಹಾಗೂ ಜನವಚನ(ಫ಼ೋಕ್-ಸೇ)ವಿರುದ್ಧಾರ್ಥಕಗಳೆಂದು ಬೆನ್.ಸಿ.ಕ್ಲೋ ಹೇಳುತ್ತಾರೆ.

ಜನರ ಸ್ಮರಣಕೋಶದಲ್ಲಿನ ಪವಾಡೆಕಥೆಗಳು,ಸ್ಥಳಕಥೆಗಳು,ಅನೇಕ ನಂಬಿಕೆ-ಮೂಢನಂಬಿಕೆಗಳು,ನಡೆದ ಸಂಗತಿಗಳಿಗೆ ಉಪ್ಪುಕಾರ ಹಚ್ಚಿ ಹೇಳಿದ ಸಂಗತಿಗಳು-ಇವೆಲ್ಲವೂ ಮಾತಿನ ರೂಪದಲ್ಲಿ ಹರಿದಾಡುತ್ತವೆ.ವೈಜ್ಞ್ನಾಕಿಕ ಹಾಗೂ ಐತಿಹಾಸಿಕ ದೃಷ್ಟಿ ಕಡಿಮೆಯಿರುವ ಜನರು ಇರಬಹುದು,ದೇವರೇ ಬಲ್ಲ,ಯಾರೋ ಅಂದರು ಎಂಬ ರೀತಿಯಲ್ಲಿ ಇಂಥ ಮಾತುಗಳನ್ನು ಹೇಳುತ್ತಾರೆ;ಕೇಳುತ್ತಾರೆ.ಅನೇಕ ವಿಧಿನಿಷೇಧಗಳು ಇಂಥ ಅಂತೆ-ಕಂತೆಯ ಮೂಲಕವಾಗಿಯೆ ನಿರ್ಮಿತವಾಗಿವೆ-ಕೆಟ್ತ ಸ್ವಪ್ನ ಬಿದ್ದರೆ ನಸುಕಿನಲ್ಲಿ ಕೊಟ್ಟಿಗೆಗೆ ಹೋಗಿ ಆಕಳ ಕಿವಿಯಲ್ಲಿ ಅದನ್ನು ಸುರಿದರೆ ದೋಷ ಪರಿಹಾರವಾಗುತ್ತದೆ.ಹೊಸದಾಗಿ ಮುಟ್ಟಾದ ಸ್ತ್ರೀಯರು ಬಾವಿಯನ್ನು ದಾಟಬಾರದು;ದಾಟಿದರೆ,ಬಾವಿಯ ನೀರು ಬುತ್ತುತ್ತದೆ.ಮುಟ್ಟಾದವರು ಶಿಶುಗಳನ್ನು ಮುಟ್ಟಿದರೆ ಅವರ ದೇಹದ ಶಾಖದಿಂದ ಶಿಶುಗಳು ಬಾಡಿ ಸೊರಗುತ್ತವೆ ಇತ್ಯಾದಿ.

ಸ್ಥಳದ ಹೆಸರುಗಳಲ್ಲಿಯೂ ಮೂಢನಂಬಿಕೆಯ ಹಿನ್ನೆಲೆಯುಂಟು.ಹೊಲನಗದ್ದೆ ಎಂಬ ಊರಿನಲ್ಲಿ ಮಾಣಿಕಟ್ಟು ಎಂಬ ಗದ್ದೆಯಿದೆ(ಖಾರ್ ಲ್ಯಾಂಡ್).ಅದರ ದಂಡೆಯ ಕಟ್ಟನ್ನು ಎಷ್ಟು ಸಲ ಕಟ್ಟಿದರೂ ನೀರಿನ ಹೊಡೆತಕ್ಕೆ ನಿಲ್ಲದೆ ಅದು ಮುರಿದುಹೋಗುತ್ತಿತ್ತಂತೆ;ಒಬ್ಬ ಹುಡುಗನನ್ನು ಕಟ್ಟಿನ ಮಣ್ಣಿನ ಸಂಗಡ ಸೇರಿಸಿ ಜೀವಂತ ಸಮಾಧಿ ಮಾಡಿದ ಮೇಲೆ ಕಟ್ಟು ನಿಂತಿತಂತೆ.ಜನರು ಈ ಊರ ಹೆಸರಿನ ಬಗ್ಗೆ ಕೊಡುವ ಹೇಳಿಕೆ ನಿಜವೋ ಅಥವಾ ಮಾಣಿ ಎಂಬವನು ಕಟ್ಟಿದ್ದರಿಂದ ಮಾಣಿಕಟ್ಟು ಎಂಬ ಹೆಸರು ಬಂತೋ,ಹೇಳಲು ಬಾರದು.ಅನೇಕ ಸ್ಥಳಗಳ ಹೆಸರುಗಳು ಹಿಂದೆ ಇಂಥ ಕಥೆಗಳಿವೆ.ಯಲ್ಲಾಪುರ ತಾಲ್ಲೂಕಿನಲ್ಲಿ ಬಾರೆ,ಸೀರೆ,ಕಳಚೆ ಎಂಬ ಹತ್ತಿರ ಹತ್ತಿರ ಇರುವ ಊರಗಳುಂಟು.