ಪುಟ:Mysore-University-Encyclopaedia-Vol-1-Part-1.pdf/೧೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


120

           ಅಂಧಕ - ಅಂಧಕಾರಯುಗ
 ಅಂಧಕ:ಒಬ್ಬ ರಾಕ್ಷಸ,ತಂದೆ ಕಶ್ಯಪ,ತಾಯಿ ಮಹಾಭಾರತದ ಪ್ರಕಾರ ದಿತಿ,ಮತ್ಸ್ಯಪುರಾಣದ ಪ್ರಕಾರ ದನು.ಶಿವನಿಂದ ಹತನಾದ ಎಂದು ಭಾರತವೂ ವಿಷ್ಣುಪುರಾಣವೂ ಮಹಾಲಕ್ಷ್ಮಿಯಿಂದ ಹತನಾದ ಎಂದು ಮಾರ್ಕಂಡೇಯ ಪುರಾಣವೂ ತಿಳಿಸುತ್ತದೆ.
 ಅಂಧಕಾಯುಗ:ಮೆಡಿಟರೇನಿಯನ್ ಸಮುದ್ರದ ಸುತ್ತಲಿನ ದೇಶಗಳನ್ನೆಲ್ಲ ಆಕ್ರಮಿಸಿ ಸು.೫ ಶತಮಾನಗಳ ಕಾಲ(೫ನೇಯ ಶತಮಾನದವರೆಗೂ)ಅತ್ಯಂತ ವೈಭವದಿಂದ ಮೆರೆದ ರೋಮನ್ ಸಾಮ್ರಾಜ್ಯದ ಪತನಾನಂತರದ ೫ ಶತಮಾನಗಳ ಕಾಲವನ್ನು(೫೦೦-೧೦೦೦)ಅಂಧಕಾರಯುಗವೆಂದು(ಡಾರ್ಕ್ ಏಜಸ್)ಇತಿಹಾಸಕಾರರು ಕರೆದಿದ್ದಾರೆ.ಯುರೋಪಿನ ಸಂಸ್ಕೃತಿ ಮೊದಲು ಬೆಳೆದದ್ದು ಗ್ರೀಸಿನಲ್ಲಿ;ಗ್ರೀಸಿನ ಪತನಾನಂತರ ರೋಮನರು ಅದನ್ನು ಷೋಷಿಸಿ ಬೆಳೆಸಿದರು.೫ನೇಯ ಶತಮಾನದಲ್ಲಿ ವೈಭವ,ಸಮೃದ್ಧಿ,ಸುಖಲೋಲುಪತೆಗಳಿಂದ ಬಲಗುಂದಿದ್ದ ಆ ಸಾಮ್ರಾಜ್ಯದೊಳಕ್ಕೆ ಅನಾಗರಿಕರಾದರೂ ಬಲಿಷ್ಠರಾದ ಹೊರಜನರು ನುಗ್ಗಿದರು;ಅವರ ಧಾಳಿಯನ್ನೆದುರಿಸಲಾರದೆ ಸಾಮ್ರಾಜ್ಯ ಕುಸಿಯಿತು.ಈ ಜನರು ರೋಮನ್ ಸಾಮ್ರಾಜ್ಯದಲ್ಲಿ ನಿಂತು,ರಾಜ್ಯಗಳನ್ನು ಕಟ್ಟಿ,ದೇಶಿಯರೊಂದಿಗೆ ಬೆರೆತು,ಬಾಳಿದ ನಾಲ್ಕೈದು ಶತಮಾನಗಳನ್ನು ಅಂಧಕಾರ ಯುಗವೆಂದು ಕೆಲವು ಚರಿತ್ರಕಾರರು ಕರೆದಿದ್ದಾರೆ.ಆ ಕಾಲಕ್ಕೆ ಈ ಹೆಸರು ಉಚಿತವೆಂದು ಹೇಳಲಾಗುವುದಿಲ್ಲ.ಆಗಿನ ಪರಿಸ್ಥಿತಿಯನ್ನು ಗಮನಿಸಿದರೆ ಹಿಂದಿನಿಂದಲೂ ಬೆಳೆದು ಬಂದ ರೋಮನ್ ಸಂಸ್ಕೃತಿ ಅಳಿಯಿತೇನೋ ಎನ್ನುವಂತಿತ್ತು ನಿಜ.ಆದರೆ ವ್ಯಾಪಕವಾಗಿ ಬೆಳೆದು ಜನರಲ್ಲಿ ಬೇರೂರಿದ್ದ ಯಾವ ಸಂಸ್ಕೃತಿಯೂ ಅಷ್ಟು ಸುಲಭವಾಗಿ ನಾಶ ಹೊಂದಲಾರದು.ಅದು ಕೆಲವು ಕಾಲ ಕಾಂತಿಮಾಲಿನ್ಯ ಹೊಂದಿತ್ತೇ ಹೊರತು ಅಳಿಯಲಿಲ್ಲ.ಅಲ್ಲದೆ ರೋಮನ್ ಸಾಮ್ರಾಜ್ಯ ಕ್ಷೀಣಿಸಿದಂತೆಲ್ಲ ಕ್ರೈಸ್ತಧರ್ಮ ಬೆಳೆಯುತ್ತ ಬಂದು,ಅದನ್ನು ಪರೋಕ್ಷವಾಗಿ ಷೋಷಿಸಿತು.ಊಳಿಗಮಾನ್ಯ ಪದ್ಧತಿ,ವ್ಯವಸಾಯದಲ್ಲಿ ಸಮುದ್ರಯಾನದಲ್ಲಿ ಸುಧಾರಣೆಗಳು-ಇವೆಲ್ಲ ಹಳೆಯ ಸಂಸ್ಕೃತಿ ಅಳಿಯಲವಕಾಶಕೊಡಲಿಲ್ಲ.ನಿಜವಾಗಿ ಆ ಯುಗ ಮುಂದೆ ಬಂದ ಮಧ್ಯಯುಗಕ್ಕೆ ಸುಭದ್ರ ತಳಹದಿಯನ್ನು ಹಾಕಿತು.ಈ ಕಾರಣಗಳಿಂದ,ಇತ್ತೀಚಿನ ಚರಿತ್ರಕಾರರು ಆ ಕಾಲವನ್ನು ಪೂರ್ವಮಧ್ಯಯುಗ(ಅರ್ಲಿ ಮಿಡ್ಲ್ ಏಜಸ್) ಎಂದು ಕರೆದಿದ್ದಾರೆ.
 ರೋಮನ್ ಚಕ್ರಾಧಿಪತ್ಯದೊಳಕ್ಕೆ ನುಗ್ಗಿ ಬಂದು ನೆಲೆಸಿದ ಆ ಹೊಸ ಜನರು ಆ ಚಕ್ರಾಧಿಪತ್ಯದ ಪ್ರಸಿದ್ಧ ಆಡಳಿತವ್ಯವಸ್ಥೆಯನ್ನು ಸಂಪೂರ್ಣವಾಗಿ ಕೆಡಿಸಿಬಿಟ್ಟರು.ಈ ಅವಧಿಯಲ್ಲಿ ವ್ಯವಸ್ಥಿತ ಆಡಳಿತವಿರಲೇ ಇಲ್ಲ.೮೦೦ರಿಂದ ೮೧೪ರವರೆಗೆ ಆಳಿದ ಚಾರ್ಲಮಾನ್ ನ(ಚಾರಲ್ಸ್ ದಿ ಗ್ರೇಟ್)ಕಾಲದಲ್ಲಿ ಮಾತ್ರ ಮಧ್ಯ ಯುರೋಪು ಕ್ರಮವಾದ ಅಡಳಿತಕ್ಕೆ ಒಳಪಟ್ಟಿತ್ತು.ಚಕ್ರಾಧಿಪತ್ಯದಲ್ಲಿದ್ದ ಸಾರಿಗೆ ಸಂಪರ್ಕವ್ಯವಸ್ಥೆ ಕೆಟ್ಟು,ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಜನರ ಪ್ರಯಾಣ ನಿಂತಿತು.ಗುಂಪುಗಾರಿಕೆ ಬೆಳೆಯಿತು;ಇದರೊಂದಿಗೆ ಕಲಹಗಳೂ ಹೆಚ್ಚಿದವು.ಗ್ರೀಕರ ಕಾಲದಿಂದ ಬಂದು,ರೋಮನರ ಕಾಲದಲ್ಲಿ ಭವ್ಯವಾಗಿ ಬೆಳೆದಿದ್ದ ಲಲಿತಕಲೆಗಳು ಅವನತಿ ಹೊಂದಿದವು.ಲ್ಯಾಟಿನ್ ಭಾಷೆ ಒಡೆದು ಫ್ರೆಂಚ್,ಇಟಾಲಿಯನ್,ಸ್ಪ್ಯಾನಿಷ್ ಮುಂತಾದ ದೇಶೀಯ ಭಾಷೆಗಳ ಉಗಮಕ್ಕೆ ಕಾರಣವಾಯಿತು.ಸಾಹಿತ್ಯ,ದರ್ಶನಶಾಸ್ತ್ರ ಮುಂತಾದವು ಕಡೆಗಣಿಸಲ್ಪಟ್ಟವು;ಆಗಿನ ಅಲ್ಪಸ್ವಲ್ಪ ಬರಹಗಾರರು ಸಿಸಿರೊ,ವರ್ಜಿಲ್ ಮುಂತಾದ ಪ್ರೌಢಪ್ರಾಚೀನ ಸಾಹಿತಿಗಳನ್ನು ಅನುಸರಿಸಲು ಯತ್ನಿಸಿದರೇ ಹೊರತು ಸ್ವಂತ ಪ್ರೌಢಿಮೆಯನ್ನು ಹೊಂದಿರಲಿಲ್ಲ.
 ಇಂಥ