ಪುಟ:Mysore-University-Encyclopaedia-Vol-1-Part-1.pdf/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಉದಯಕ್ಕೆ ದಾರಿಮಾಡಿಕೊಟ್ಟಿದೆ ಎಂಬ ತೀರ್ಮಾನಕ್ಕೆ ಬರಲು ಸಹಾಯಮಾಡಿದೆ. ಏಕೆಂದರೆ ಎಕೈನೋಡರ್ಮೇಟ ವಂಶದ ಡೆಪ್ಲುರುಲ ಲಾರ್ವ, ಹೆಮಿಕಾರ್ಡೇಟ ವಂಶದ ಟಾರ್ನೇರಿಯ ಲಾರ್ವಾಕ್ಕೆ ಅತಿ ಹೆಚ್ಚಿನ ಹೋಲಿಕೆಯನ್ನು ತೋರಿಸುತ್ತದೆ. ಎಕೈನೋಡರ್ಮೇಟ ವಂಶದ ಜೀವಿಗಳ ಶರೀರ ಪಂಚ ಬಾಹುಗಳನ್ನು ಸಾಮಾನ್ಯವಾಗಿ ಹೊಂದಿರುತ್ತವೆ. ಇವುಗಳ ಶರೀರದಲ್ಲಿ ಸುಣ್ಣ ಮಿಶ್ರಿತವಾದ ತಟ್ಟೆಗಳು ರಕ್ಷಾಕವಚದಂತಿವೆ. ಆದುದರಿಂದ ಇವುಗಳನ್ನು ಕಠಿಣಚರ್ಮಿಗಳೆನ್ನುತ್ತಾರೆ.(ಎಲ್. ಎಸ್. ಜಿ.).

ಅಕಶೇರುಕ ಭ್ರೂಣಶಾಸ್ತ್ರ: ಅಂಡದಲ್ಲಿ(ಮೊಟ್ಟೆ) ಅಡಗಿರುವ ಜೀವಿ ಬೆಳೆದು ಮರಿಯಾಗಿ ಹೊರಬರುವ ವಿವಿಧ ಹಂತಗಳ ವಿವರವೇ ಭ್ರೂಣಶಾಸ್ತ್ರ. ಮೊದಮೊದಲು ಜೀವದ ಸೃಷ್ಟಿಯಬಗ್ಗೆ ವೈಜ್ಞಾನಿಕವೆನಿಸದ ಅನೇಕ ಕಲ್ಪನೆಗಳು ಇದ್ದವು. ಆ ರೀತಿಯ ಕಲ್ಪನೆಗಳನ್ನೇ ಸತ್ಯವೆಂದು ನಂಬುವವರು ಇಂದಿಗೂ ಇಲ್ಲದೇಇಲ್ಲ. ೧೮೩೯ರಲ್ಲಿ ಮ್ಯಾಥ್ಯೂಸ್ ಜೇಕಬ್ ಶ್ಲೈಡನ್ ಮತ್ತು ಥಿಯೋಡರ್ ಶ್ವಾನ್ ಎಂಬುವರು ಜೀವಕೋಶ ತತ್ವವನ್ನು ಪ್ರತಿಪಾದಿಸಿದರು. 'ಜೀವಕೋಶಗಳು ಹಿಂದಿದ್ದ ಜೀವಕೋಶಗಳಿಂದಲೇ ಹುಟ್ಟಿಬಂಉಟದಿವೆ; ಜೀವ ಜೀವಿಯಿಂದಲೇ ಹುಟ್ಟಿಬರಬೇಕು' ಎಂಬುದು ಅವರ ತತ್ವದ ತಿರುಳು. ಜೀವಿ ವಿಕಾಸದ ಪರಿಣಾಮವೇ ಹೊರತು ಭಗವಂತ ಒಮ್ಮೆಗೇ ಸೃಷ್ಟಿಮಾಡಿದ್ದಲ್ಲ ಎಂಬ ಮಾತನ್ನು ಲೂಯಿ ಎತ್ತಿಹಿಡಿದ. ಈ ನೂತನ ವಿಚಾರಧಾರೆಗಳಿಗೆ ಪ್ರಯೋಗಗಳೂ ಸಾಕ್ಷಿಯನ್ನು ಹೊಂದಿಸಿದುವು. ಇಲ್ಲಿಂದ ಮುಂದೆ ಜೀವಿಗಳ ಹುಟ್ಟು ಹಾಗೂ ಬೆಳವಣಿಗೆಯನ್ನು ಅರಿಯಲು ಅಧ್ಯಯನಗಳು ನಡೆದವು. ಜೀವದ ಬೆಳವಣಿಗೆಯನ್ನು ಕೆಲವು ತತ್ವಗಳ ಆಧಾರದ ಮೇಲೆ ಅರ್ಥಮಾಡಿಕೊಳ್ಳಲು ಹಾಗೂ ಅರಿಯಲು ಪ್ರಯತ್ನಿಸಿದರು. ಈ ತತ್ವಗಳಲ್ಲಿ ಪೂರ್ವೋಧ್ಭವ ತತ್ವ(ಪ್ರಿಫಾರ್ಮೇಷನ್ ಥಿಯರಿ) ಹಾಗೂ ಜೈವಾಂಕುರತತ್ವ(ಎಪಿಜೆನೆಸಿಸ್ ಥಿಯರಿ) ಅತಿ ಮುಖ್ಯವಾದವು.


ಪೂರ್ವೋದ್ಭವತತ್ವದ ಪ್ರಕಾರ ಅಂಡಾಶಯದಿಂದ ಉದಯವಾದ ಮೊಟ್ಟೆ ಅಥವಾ ವೃಷಣದಿಂದ ಉದಯವಾದ ರೇತಸ್ಸು ಅತಿಮುಖ್ಯವಾದವು. ಹೆಣ್ಣುಜೀವಿ ಉತ್ಪಾದನೆ ಮಾಡುವ ಅಂಡಾಣುವಿನೊಳಗೆ ಭವಿಷ್ಯಜೀವಿಯ ಒಂದು ಸೂಕ್ಷ್ಮಾಕೃತಿ ಇರುತ್ತದೆ ಎಂಬುದಾಗಿ ಕೆಲವು ವಿಜ್ಞಾನಿಗಳು ನಂಬಿದ್ದರು. ಈ ಸೂಕ್ಷ್ಮಜೀವಿಗೆ ಅದರ ಪಿತೃಗಳಂತೆಯೇ ಇರುವ ಎಲ್ಲ ಅಂಗಾಂಗಗಳೂ ಇರುವುದೆಂದೂ ಪುರುಷಜೀವಿಯಿಂದ ಬರುವ ವೀರ್ಯಾಣು ಈ ಅಂಡಾಣು ಬೆಳೆಯಲು ಬೇಕಾದ ಪ್ರಚೋದನೆಯನ್ನು ನೀಡುತ್ತದೆಂದೂ ಪ್ರತಿಪಾದಿಸಿದರು. ಆದರೆ ಇದನ್ನು ಕೆಲವರು ಒಪ್ಪಲಿಲ್ಲ. ಅವರಿಗೆ ಅಂಡಾಣುವಿಗಿಂತ ವೀರ್ಯಾಣು ಮುಖ್ಯವಾಗಿ ಕಂಡುಬಂದಿತು. ಮುಂದೆ ಬೆಳೆಯಬೇಕಾದ ಜೀವಿಯ ಸೂಕ್ಷ್ಮಾಕಾರ ವೀರ್ಯಾಣುವಿನಲ್ಲೇ ಇರುತ್ತದೆಯೆಂದು ಅವರು ಪ್ರತಿಪಾದಿಸಿದರು. ಕೀಟವರ್ಗ, ಪ್ರಾಣಿಗಳ ಮೊಟ್ಟೆಗಳು ಹಾಗೂ ಕೋಳಿ ಮೊಟ್ಟೆಯ ಬೆಳವಣಿಗೆಗಳನ್ನು ಅಭ್ಯಾಸಮಾಡಿದ ಅವರು ಅಂಡಾಣುವಿನೊಳಗೇ ಮುಂದಿನ ಪೀಳಿಗೆಯ ಸೂಕ್ಞ್ಮಾಕಾರವಿರುತ್ತದೆ, ವೀರ್ಯಾಣುವಿನಲ್ಲಲ್ಲ ಎಂದು ವಾದಿಸಿದರು. ಆದರೆ ಅವರಿಗೆ ಈ ಅಂಡಾಣುಗಳು ಗರ್ಭಧರಿಸಿದ್ದ ಅಂಡಾಣುಗಳೆಂಬುದು ಹೊಳೆಯಲಿಲ್ಲ. ಚಾರ್ಲ್ಸ್ ಬಾಲೆಟ್ ಮಾತ್ರ ಕೀಟವರ್ಗಗಳಾದ ಏಫಿಡ್ ಗಳ ಅಂಡಾಣು ವೀರ್ಯಾಣುಗಳ ಸಂಪರ್ಕವಿಲ್ಲದೆ ಬೆಳೆಯುವುದನ್ನು ಪತ್ತೆಹಚ್ಚಿ, ವೀರ್ಯಾಣುಗಳು ಇಲ್ಲದಿದ್ದರೂ ಅಂಡಾಣು ಬೆಳೆದು ಮರಿಯಾಗಬಲ್ಲದು ಎಂದು ತೋರಿಸಿದನು. ಇದು ವಾಸ್ತವವಾದರೂ ಬೆಳವಣಿಗೆಯ ಪೂರ್ವದಲ್ಲಿ ಈ ಅಂಡಾಣುವಿನೊಳಗೆ ಮುಂದಿನ ಪೀಳಿಗೆಯ ಸರ್ವಾಂಗಗಳೂ ಅಡಕವಾಗಿರುತ್ತವೆಂಬುದು ಆಧಾರರಹಿತವಾಗಿತ್ತು.

ಭ್ರೂಣಶಾಸ್ತ್ರದ ಬೆಳವಣಿಗೆಯಲ್ಲಿ ಬರುವ ಮತ್ತೊಂದು ವಾದ ಜೀವಾಂಕುರ ಸೃಷ್ಟಿವಾದ. ಇದು ಅಂಡಾವಿನಲ್ಲಾಗಲೀ ವೀರ್ಯಾಣುವಿನಲ್ಲಾಗಲೀ ಪೀಳಿಗೆಯ ಸೂಕ್ಷ್ಮಾಕೃತಿ ಅಡಗಿರುವುದಿಲ್ಲ. ಭ್ರೂಣದ ಬೆಳವಣಿಗೆಗೆ ಸಹಕಾರಿಯಾಗುವ ಅಂಡಾಣುವಿನೊಳಗೆ ಜೀವರಸ ಹಾಗೂ ಕ್ರೋಮೋಸೋಮ್ ಗಳ ಸಮುದಾಯವಿರುತ್ತವೆ, ಈ ಅಂಡಾಣು ಗರ್ಭಧರಿಸಿದ ಮೊದಲ ಹಂತದಲ್ಲಿ ಭ್ರೂಣದ ಯಾವುದೇ ಅಂಗಗಳಿರುವುದಿಲ್ಲ ಎಂದು ಪ್ರತಿಪಾದುಸುವ ಇದನ್ನು ಅರಿಸ್ಟಾಟಲನೂ ಅನುಮೋದಿಸಿರುತ್ತಾನೆ. ಆದರೆ ಇದನ್ನು ಪೂರ್ಣವಾಗಿ ನಂಬಲು ಆಗ ವೈಜ್ಞಾನಿಕ ಪ್ರಯೋಗಗಳ ಸಾಕ್ಷ್ಯಗಳಿಲ್ಲದಿದ್ದುದರಿಂದ ಅದು ಪ್ರಕಾಶಕ್ಕೆ ಬರಲಿಲ್ಲ. ೧೭೫೦ರಲ್ಲಿ ಕ್ಯಾಸ್ಟರ್ ಎಫ್. ವುಲ್ಫ್ ಈ ತತ್ವವನ್ನು ಮತ್ತೆ ಪ್ರತಿಪಾದಿಸಿದ. ಸ್ತನಿಗಳ ಭ್ರೂಣದ ಬೆಳವಣಿಗೆಯ ಬಗ್ಗೆ ಪ್ರಯೋಗಗಳನ್ನು ನಡೆಸಿದ. ಆದ್ದರಿಂದ ಇದರ ಕತೃ ವುಲ್ಫ್ ಎಂದು ಹೇಳಬೇಕಾಗುತ್ತದೆ. ೧೮೨೧ ರಲ್ಲಿ ಜಾನ್ ಫ್ರೆಡ್ರಿಕ್ಸ್ ಮಕೆಲ್ ಎಂಬ ಜೀವವಿಜ್ಞಾನಿ ವುಲ್ಫ್ ನ ವಾದದಲ್ಲಡಗಿದ್ದ ತಿರುಳನ್ನು ಕಂಡುಕೊಂಡ. ಮುಂದೆ ಅವನ ನಂಬಿಕೆ ಸರ್ವ ಸಾಮಾನ್ಯವಾಯಿತು.

ಈ ತತ್ವದ ಪ್ರಕಾರ ಪ್ತತಿಯೊಂದು ಜೀವಿಯೂ ತನ್ನದೇ ಆದ ಅನುವಂಶೀಯತೆಯನ್ನು ಹೊಂದಿದೆ. ಈ ಜೀವಿಯ ಸರ್ವ ಕ್ರಿಯೆಗಳೂ ಕೂಡ ಅನುವಂಶೀಯತೆಯ ಚೌಕಟ್ಟಿನಲ್ಲಿಯೇ ನಡೆಯುತ್ತವೆ. ಅನುವಂಶೀಯತೆ ಸಫಲವಾಗಬೇಕಾದರೆ ಪರಿಸರ ಅಗತ್ಯ. ಆದುದರಿಂದ ಯಾವುದೇ ಜೀವಿ ತನ್ನ ಬೆಳವಣಿಗೆಯ ಪೂರ್ಣತೆಯನ್ನು ಸಾಧಿಸಬೇಕಾದರೆ ಪರಿಸರವೂ ಮುಖ್ಯ. ಇವೆರಡು ಸರಿಯಾಗಿದ್ದಾಗ ಮಾತ್ರ ಬೆಳವಣಿಗೆ ಪರಿಪೂರ್ಣವಾಗುತ್ತದೆ. ಒಂದು ಕಪ್ಪೆಯ ಅಂಡಾಣು ಕಪ್ಪೆಯಾಗಲು ಬೇಕಾದ ಅನುವಂಶೀಯ ಕಾರ್ಯಸೂಚಿ ಇರುತ್ತವೆ. ಅದರಂತೆಯೇ ಮಾನವ ಭ್ರೂಣ ಮಾನವನಾಗಿ ಬೆಳೆಯಲು ಅನುವಂಶೀಯ ಗುಣಾಕಾರಗಳನ್ನು ಹೊಂದಿರುತ್ತದೆ. ಈ ಅನುವಂಶೀಯ ಗುಣಗಳಿಗೆ ಸೂಕ್ತ ಪರಿಸರ ಇದ್ದಾಗ ಮಾತ್ರ ಅವುಗಳ ಬೆಳವಣಿಗೆ ಸಾಧ್ಯ.

ಸುಸ್ಥಿತಿಯಲ್ಲಿರುವ ಒಂದು ಭ್ರೂಣ ಸರಿಯಾದ ಪರಿಸರದಲ್ಲಿದ್ದಾಗ ಅದರಲ್ಲಿ ಊಹೆಗೆ ನಿಲುಕದಂಥ ಬದಲಾವಣೆಗಳಾಗುತ್ತಿರುತ್ತವೆ. ಪ್ರತಿ ಬದಲಾವಣೆಯೂ ಅತಿಸೂಕ್ಷ್ಮವೂ ಸಂಕೀರ್ಣವೂ ಆದದ್ದು. ಇಂಥದರಲ್ಲಿ ಈ ಭ್ರೂಣದ ಪರಿಸರವನ್ನೇನಾದರೂ ಉದ್ದೇಶಪೂರ್ವಕವಾಗಿ ಪ್ರಯೋಗಕಾರ ಬದಲಾಯಿಸಿದರೆ ಅದರ ಬೆಳವಣಿಗೆ ಅಸ್ತವ್ಯಸ್ತವಾಗಿ, ಹಾನಿಯಾಗುತ್ತದೆ. ಭ್ರೂಣದ ಬೆಳವಣಿಗೆ ಕುಂಠಿತವಾಗುತ್ತದೆ. ಆದುದರಿಂದ ಗರ್ಭಧರಿಸಿರುವ ಮೊಟ್ಟೆ ತನ್ನ ಅನುವಂಶಿಕವಸ್ತುವಿನ ನಿರ್ದೇಶನದಂತೆ ಒಂದು ಗೊತ್ತಾದ ಪರಿಸರದಲ್ಲಿ ಹಂತ ಹಂತವಾಗಿ ಪರಿವರ್ತನೆ ಹೊಂದಿ ತನ್ನ ಅಂತಿಮ ಸ್ವರೂಪವನ್ನು ಪಡೆಯುತ್ತದೆ. ಆದುದರಿಂದ ಅಂಡಾಣುವಿನಲ್ಲಾಗಲೀ ಅಥವಾ ವೀರ್ಯಾಣುವಿನಲ್ಲಾಗಲೀ ಜೀವಿಯ ಪೂರ್ಣಚಿತ್ರ ಇರುವುದಿಲ್ಲ.

ಭ್ರೂಣಶಾಸ್ತ್ರದ ಬೆಳವಣಿಗೆಗೆ ವ್ಲಾನ್ ಬೇರ್(೧೭೯೨-೧೮೭೬) ಪ್ರತಿಪಾದಿಸಿದ ಜರ್ಮ್ ಲೇಯರ್ ವಾದವೂ ನೆರವಾಯಿತು. ಅಲ್ಲದೆ ಕೆಲವು ಸ್ತನಿಗಳು ಮೊಟ್ಟೆಯಿಡುವುದು ಬೆಳಕಿಗೆ ಬಂದಮೇಲೆ ಅದಕ್ಕೆ ಸಾಮಾನ್ಯ ಸ್ವರೂಪವೂ ಗೋಚರಿಸಹತ್ತಿತ್ತು. ಅಷ್ಟರಲ್ಲಿ ಭ್ರೂಣಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ವಿಜ್ಞಾನಿಗಳ ಅಭಿಪ್ರಾಯವನ್ನು ಒಂದೆಡೆ ಕ್ರೋಡೀಕರಿಸಲಾಯಿತು. ಇವೆಲ್ಲದರ ಫಲವಾಗಿ ಭ್ರೂಣಶಾಸ್ತ್ರಕ್ಕೆ ಒಂದು ಹೊಸ ತಿರುವು ಸಿಕ್ಕಿತು.

ಜೀವಕೋಶತತ್ವ ಪ್ರತಿಪಾದನೆಯಾದಮೇಲೆ ಭ್ರೂಣಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳಿಗೆ ಒಂದು ಹೊಸ ಹಾದಿ ತೆರೆಯಿತು. ಅಂಡಾಣು ಒಂದು ಕೋಶವೆಂತಲೂ ಹಾಗೂ ಆ ಕೋಶ ವಿಭಜನೆಯಾಗಿ ಜೀವಾಂಕುರವಾಗಲು ಅದರೊಡನೆ ವೀರ್ಯಾಣು ಮಿಲನಗೊಳ್ಳಬೇಕೆಂತಲೂ ಈ ರೀತಿ ಇವೆರಡೂ ಮಿಲನಗೊಳ್ಳುವ ಕ್ರಿಯೆಗೆ ನಿಶೇಚನವೆಂತಲೂ ಕರೆಯಲಾಯಿತು. ಹೀಗೆ ಇವೆರಡರ ಮಿಲನದಿಂದ ಉಂಟಾಗುವ ಸಂಯುಕ್ತ ಜೀವಕೋಶಕ್ಕೆ ನಿಶೇಚಿತ ಅಂಡಾಣು(ಜೈಗೋಟ್) ಎಂದು ಹೆಸರು. ಮುಂದೆ ಈ ಜೈಗೋಟ್ ಕೋಶ ವಿಭಜನೆ ಹೊಂದಿ, ಬೆಳೆದು ಭ್ರೂಣವಾಗುತ್ತದೆ. ಎಂದರೆ ತಡೆಯಿಲ್ಲದೇ ನಡೆಯುವ ಕೋಶವಿಭಜನೆ ಮತ್ತು ಕೋಶಗಳ ಸಕಾಲಿಕ ವಿಭೇಧೀಕರಣವೇ ಭ್ರೂಣದ ಬೆಳವಣಿಗೆಯೆಂದು ಕರೆಯಬಹುದು.

೧೮೫೯ರಲ್ಲಿ ಚಾರ್ಲ್ಸ್ ಡಾರ್ವಿನ್ ಜೀವ ವಿಕಾಸತತ್ವವನ್ನು ಪ್ರತಿಪಾದಿಸಿದ ಮೇಲಂತೂ ಭ್ರೂಣಶಾಸ್ತ್ರದ ಬೆಳವಣಿಗೆಯಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಯಿತು. ಬಿಡಿಸಲಾಗದಿದ್ದ ಭ್ರೂಣ ಬೆಳವಣಿಗೆಯ ಕ್ಲಿಷ್ಟಸಮಸ್ಯೆಗಳಿಗೆ ವಿಕಾಸ ತತ್ವ ಉತ್ತರ ನೀಡಿತು. ಜೀವವಿಜ್ಞಾನದ ಪ್ರಯೋಗಗಳಿಗೆ ಹೊಸ ಬಗೆಯ ಉಪಕರಣಗಳು ಬೆಳಕಿಗೆ ಬಂದವು. ಭ್ರೂಣದ ಬೆಳವಣಿಗೆಯ ಪ್ರಾರಂಭದಿಂದ ಹಿಡಿದು ಪೂರ್ಣಗೊಳ್ಳುವವರೆಗೆ ಅದನ್ನು ಪ್ರತಿ ಹಂತದಲ್ಲಿಯೂ ಅಭ್ಯಸಿಸಲು ಈಗ ಸಾಧ್ಯ.

ಭ್ರೂಣಶಾಸ್ತ್ರದ ಬೆಳವಣಿಗೆಯಲ್ಲಿ ಬರುವ ಮತ್ತೊಂದು ಅಮೋಘ ತತ್ವವೆಂದರೆ, ಹೆಕೆಲ್ ನ ಜೀವಾನುವಂಶೀಯ ತತ್ವ. ಇದನ್ನು ಫಿಟ್ಸ್ ಮುಲ್ಲರ್(೧೮೨೧-೯೭) ಹೆಕೆಲ್ ಗಿಂತ ಹಿಂದೆಯೇ ಪ್ರತಿಪಾದಿಸಿದ್ದ. ಬೆಳೆಯುತ್ತಿರುವ ಭ್ರೂಣ ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ತನ್ನ ಪೂರ್ವಜರನ್ನು ನೆನೆಸಿಕೊಳ್ಳುತ್ತದೆ ಎಂಬುದೇ ಈ ತತ್ವದ ತಿರುಳು. ಮುಲ್ಲರ್ ಈ ತತ್ವವನ್ನು ಪ್ರತಿಪಾದಿಸಬೇಕಾದರೆ ಕ್ರಸ್ಷೇಷಿಯಾ ವರ್ಗದ ಭ್ರೂಣ ಬೆಳವಣಿಗೆಯನ್ನು ಕೂಲಂಕುಷವಾಗಿ ಅಭ್ಯಸಿಸಿದನು. ಆ ವರ್ಗದ ವಿವಿಧ ಪ್ರಭೇಧಗಳ ಭ್ರೂಣಗಳಲ್ಲಿ ವೈವಿಧ್ಯ ಇದ್ದರೂ ಅವೆಲ್ಲವೂ ನಾಪ್ಲಿಯಸ್ ಲಾರ್ವದ ಹಂತದಲ್ಲಿ ಒಂದೇ ತೆರನಾಗಿರುತ್ತವೆ. ಕ್ರಸ್ಷೇಷಿಯಾ ವರ್ಗದ ಎಲ್ಲ ಜೀವಿಗಳಲ್ಲಿಯೂ ಅವುಗಳ ಭ‍್ರೂಣ ನಾಪ್ಲಿಯಸ್ ಲಾರ್ವವಾಗಿಯೇ ಬೆಳೆದು ಮುಂದೆ ಬೇರೆ ಬೇರೆ ದಾರಿಯನ್ನು ಹಿಡಿಯುತ್ತವೆ. ಜೀವವಿಜ್ಞಾನಕ್ಕೆ ಅಕಶೇರುಕ ಭ್ರೂಣಶಾಸ್ತ್ರದ ಮಹತ್ವದ ಕೊಡುಗೆಯೆಂದರೆ ಈ ' ಜೀವಾನುವಂಶೀಯ ತತ್ವ '.

ಹಕೆಲ್ಲನ ಶಿಷ್ಯ ಆಸ್ಕರ್ ಹರ್ಟವಿಗ್ ಪ್ರಪ್ರಥಮವಾಗಿ ಜೀವಿಗಳಲ್ಲಿ ಫಲೀಕರಣ ಕ್ರಿಯೆಯನ್ನು ಕಂಡನು. ಈತ ಕಡಲಕುಡಿಕೆ ಅಂಡಾಣುವಿನೊಳಕ್ಕೆ ಆ ಜೀವಿಗಳ ವೀರ್ಯಾಣು ಪ್ರವೇಶಿಸುವುದನ್ನು ಸೂಕ್ಷ್ಮದರ್ಶಕದಲ್ಲಿ ಕಂಡನು. ಅಂಡಾಣು ಹಾಗೂ ರೇತಸ್ಸು ಇವೆರಡರ ಮಿಲನವೇ ಫಲೀಕರಣ(ನಿಶೇಚನ) ಎಂದು ಮೊಟ್ಟಮೊದಲು ಪ್ರಕಟಿಸಿದನು. ಈತನೂ ಮತ್ತು ಇವನ ಸೋದರ ರಿಚರ್ಡ್ ಹರ್ಟ್ ವಿಗ್ ಭ್ರೂಣಶಾಸ್ತ್ರಕ್ಕೆ ಮಹತ್ತರ ಕೊಡುಗೆಯನ್ನು