ಪುಟ:Mysore-University-Encyclopaedia-Vol-1-Part-1.pdf/೧೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮೊಟ್ಟೆಯಲ್ಲಿರುವ ಪ್ರಾಣಿವಲಯ ಹಾಗೂ ಆಹಾರ ವಲಯಗಳಲ್ಲಿ ನಡೆಯುವ ಜೈವಿಕ ಕ್ರಿಯೆಗಳಲ್ಲಿ ಬಹಳ ವ್ಯತ್ಯಾಸಗಳು ಕಂಡುಬರುತ್ತವೆ. ಇದು ಚೈಲ್ಡ್ ಎಂಬುವನ ಮೆಟಬಾಲಿಕ್ ಆಕ್ಸಿಯಲ್ ಗ್ರೇಡಿಯೆಂಟ್ ಎಂಬ ತತ್ವದ ತಿರುಳು. ಈ ಜೈವಿಕ ಕ್ರಿಯೆಗಳ ಕಾರ್ಯರಂಗವನ್ನು ಪ್ರಾಯೋಗಿಕವಾಗಿ ಪರಿಶೀಲಿಸಿ ಚೈಲ್ಡ್ ಈ ತತ್ವವನ್ನು ಪ್ರತಿಪಾದಿಸಿರುತ್ತಾನೆ. ಪ್ರಾಣಿವಲಯದ ಭಾಗದಲ್ಲಿ ಜೈವಿಕ ಕ್ರಿಯೆಗಳ ಪ್ರಮಾಣ ಹೆಚ್ಚು. ಇದರಿಂದಾಗಿ ಅಲ್ಲಿ ಕೋಶವಿಭಜನೆ ತೀವ್ರಗತಿಯಲ್ಲಿ ನಡೆಯುತ್ತಿರುತ್ತದೆ. ಪ್ರಾಣಿವಲಯದಿಂದ ಕೆಳಗೆ ಬಂದಂತೆ ಈ ಕೋಶವಿಭಜನಾ ಪ್ರಮಾಣದ ಗತಿ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದಾಗಿ ಚೈಲ್ಡ್, ಮೊಟ್ಟೆಯಲ್ಲಿ ಮೆಟಬಾಲಿಕ್ ಆಕ್ಸಿಯಲ್ ಗ್ರೇಡಿಯೆಂಟ್ ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ಇರುತ್ತದೆ ಎಂಬ ತೀರ್ಮಾನಕ್ಕೆ ಬಂದ. ಈ ಆಕ್ಸಿಯಲ್ ಗ್ರೇಡಿಯೆಂಟ್ ಸ್ಥಿತಿಗತಿಗಳು ಮೊಟ್ಟೆಯೊಳಗಿರುವ ಕೋಶರಸದಲ್ಲಿರುವ ವಿವಿಧ ರಾಸಾಯನಿಕ ವಸ್ತುಗಳಿಗೆ ಸಂಬಂಧಿಸಿರುವುದನ್ನು ಸೂಚಿಸಿದನು. ಡ್ರೋಸಾಫಿಲ ನೊಣದ ಮೊಟ್ಟೆಯನ್ನೇ ತೆಗೆದುಕೊಂಡರೆ ಅದರಲ್ಲಿರುವ ವಿವಿಧ ಭಾಗಗಳ ಕೋಶರಸದ ಸ್ಥಿತಿಗತಿಗಳನ್ನು ಹಾಗೂ ಅದರ ಆಕಾರವನ್ನು ಅಭ್ಯಾಸಮಾಡಿದರೆ ಮೊಟ್ಟೆಯ ಬೆಳವಣಿಗೆಯ ಪರಿಸರ ಅತಿ ಮುಖ್ಯಎಂಬುದು ಅರ್ಥವಾಗುತ್ತದೆ. ಚೈಲ್ಡ್ ಈ ತತ್ವವನ್ನು ಕಡಲ ಕುಡಿಕೆಗಳಲ್ಲಿ ಪ್ರಾಯೋಗಿಕವಾಗಿ ತೋರಿಸಿದ್ದಾನೆ. ಈ ತತ್ವವನ್ನೇ ಆಧರಿಸಿದ ಸುಧಾರಿತ ವಿವರಣೆಗಳು ಈಗ ಲಭ್ಯ.

ಭ್ರೂಣಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿವಿಜೇತನಾದ ಸ್ಟೀಮನ್ನನ ಆರ್ಗನೈಸರ್ಸ್ ತತ್ವ ಅತಿ ಮುಖ್ಯವಾದದ್ದು. ಆದರೆ ಈ ತತ್ವಪ್ರತಿಪಾದನೆಗೆ ಆತ ಉಪಯೋಗಿಸಿದ ಜೀವಿ ಕಶೇರುಕ. ಒಟ್ಟಿನಲ್ಲಿ ಹೇಳುವುದಾದರೆ ಭ್ರೂಣಶಾಸ್ತ್ರದಲ್ಲಿ ಫಲಿತ ಮೊಟ್ಟೆಯೊಳಗೆ ನಡೆಯುವ ನಾನಾ ಭೌತಿಕ ಹಾಗೂ ರಾಸಾಯನಿಕ ಕ್ರಿಯೆಗಳನ್ನು ಚಾಚೂ ತಪ್ಪದಂತೆ ಪ್ರತಿ ಹಂತದಲ್ಲಿಯೂ ಅಭ್ಯಾಸಮಾಡಲು ಸಹಾಯಕವಾಗಿದೆ. ಆದುದರಿಂದ ಭ್ರೂಣಶಾಸ್ತ್ರದ ಅಧ್ಯಯನ ಮೊಟ್ಟೆ ಹಾಗೂ ವೀರ್ಯಾಣುಗಳ ಮಿಲನದಿಂದ ಆರಂಭವಾಗುತ್ತದೆ. ಮೊಟ್ಟೆಯಿಂದ ಮರಿ ಹೊರಬರುವವರೆಗಿನ ಪರಿಶೀಲನೆಯೆಲ್ಲ ಅದರ ಪರಿಮಿತಿಯಲ್ಲಿ ಸೇರುತ್ತದೆ.(ಎಲ್.ಎಸ್.ಜಿ)

ಅಕಾಲಿ ಚಳವಳಿ: ಸಿಕ್ಕರ ಧಾರ್ಮಿಕ ಮತ್ತು ರಾಜಕೀಯ ಸಂಸ್ಥೆಯಾದ ಶಿರೋಮಣಿ ಅಕಾಲಿ ದಳ ಸಿಕ್ಕರಿಗಾಗಿ ಪಂಜಾಬಿನಲ್ಲಿ ಪ್ರತ್ಯೇಕ ಸಿಕ್ಕ್ ರಾಜ್ಯಕ್ಕಾಗಿ ಹೋರಾಡಲು ಸ್ಥಾಪಿತವಾದ ಸಂಸ್ಥೆ. ಸಿಕ್ಕರ ಹಕ್ಕುಬಾಧ್ಯತೆಗಳನ್ನು ಕಾಪಾಡುವುದೇ ಇದರ ಮುಖ್ಯ ಧ್ಯೇಯ. ಈ ಸಂಸ್ಥೆ ಕಾಲಾನುಕ್ರಮದಲ್ಲಿ ಪಂಜಾಬಿ ಭಾಷೆಯ ಆಧಾರದ ಮೇಲೆ ಪ್ರತ್ಯೇಕ ರಾಜ್ಯಸ್ಥಾಪನೆಗೆ ಬೇಡಿಕೆಯನ್ನೊಡ್ಡಿತು. ಅಕಾಲಿದಳ ರಾಜಕೀಯ ವ್ಯವಹಾರದಲ್ಲಿ ಇಂದಿಗೂ ಕಾರ್ಯಾಚರಣೆಯಲ್ಲಿದೆ.

ಈ ಆಂದೋಲನ ಗುರುದ್ವಾರ ಸುಧಾರಣ ಚಳವಳಿಯ ರೂಪದಲ್ಲಿ ಪ್ರಾರಂಭವಾಗಿ ಅದಕ್ಕೆ ಮುಂಚೆ ಇದ್ದ ರಾಜಕೀಯ ಸಿಂಗ್ ಸಭಾಪಕ್ಷವನ್ನು ಹಿಂದೂಡಿತು. ಸಿಕ್ಕ್ ಧರ್ಮದಲ್ಲಿ ಧಾರ್ಮಿಕ ಮತ್ತು ರಾಜಕೀಯ ತತ್ವಗಳು ಒಂದನ್ನೊಂದು ಅವಲಂಬಿಸಿರುವುದೆಂದೂ ಸಿಕ್ಕರು ಪ್ರತ್ಯೇಕವಾದ ಜನಾಂಗವೆಂದೂ ತೋರಿಸುವುದೇ ಇದರ ಮುಖ್ಯ ಉದ್ದೇಶ.

ಈ ಚಳವಳಿಯ ಉಗಮ ೧೯೨೦ರ ಗುರುದ್ವಾರ ಸುಧಾರಣಾ ಚಳವಳಿಯ ಕಾಲಕ್ಕೆ ಹೋಗುತ್ತದೆ. ಪ್ರಾರಂಭದಲ್ಲಿ ಇದು ಭಾಗಶಃ ಒಂದು ಸೈನಿಕಸಂಸ್ಥೆಯಾಗಿದ್ದು ಅಕಾಲಿದಳ ಎಂಬ ಹೆಸರನ್ನು ಪಡೆಯಿತು. ಈ ಸಂಸ್ಥೆಯ ಇತಿಹಾಸ ಅದರ ಶ್ರೇಷ್ಟನಾಯಕನಾದ ಯಜಮಾನ ತಾರಾಸಿಂಗನ ರಾಜಕೀಯ ಜೀವನದೊಂದಿಗೆ ಬೆಸೆದಿತ್ತು.

ಅಮೃತಸರದಲ್ಲಿರುವ ಸುವರ್ಣದೇವಾಲಯ ಅಕಾಲಿದಳದ ಕಾರ್ಯಚಟುವಟಿಕೆಗಳ ಕೇಂದ್ರಸ್ಥಾನವಾಗಿದೆ. ಇದನ್ನು ಸಿಕ್ಕರ ಮೆಕ್ಕ ಎಂದು ಕರೆಯುತ್ತಾರೆ. ಅಕಾಲಿದಳದ ಸದಸ್ಯತ್ವ ಸಿಕ್ಕ ಜನಾಂಗಕ್ಕೆ ಮಾತ್ರ ಸೀಮಿತವಾಗಿದೆ. ದಳದ ಮೇಲ್ವಿಚಾರಣೆಗಾಗಿ ಒಬ್ಬ ಅಧ್ಯಕ್ಷನಿರುವನು. ೧೯೩೦ರಿಂದಲೂ ಯಜಮಾನ ತಾರಾಸಿಂಗನು ತಾನು ೧೯೬೮ರಲ್ಲಿ ಸಾಯುವತನಕ ಈ ದಳದ ಅಧ್ಯಕ್ಷನಾಗಿದ್ದ.

ಅಕಾಲಿದಳ ಪಂಜಾಬಿ ಸುಭಾ ಸ್ಥಾಪನೆಯ ಹೋರಾಟಕಾಲದಲ್ಲಿ ಅನೇಕ ದೊಡ್ಡ ದೊಡ್ಡ ಹಣಕಾಸಿನ ಸಂಸ್ಥೆಗಳಿಂದ ಸಹಾಯವನ್ನು ಪಡೆಯುತ್ತಿತ್ತು. ರಾಜಕೀಯ ಹೋರಾಟ, ಕ್ರಮೇಣ ಆಕ್ರಮಣ ನೀತಿ ಮತ್ತು ಚಳವಳಿಗಳು ಇದರ ಗುರಿ ಸಾಧನೆಯ ಮಾರ್ಗಗಳಾದವು. ಇಂಥ ಚಳವಳಿಗಳಲ್ಲಿ ಪಂಜಾಬಿ ಸುಭಾ ಸ್ಥಾಪನೆಯಾಗಿ ೧೯೫೫ ಮತ್ತು ೧೯೬೦-೬೧ರಲ್ಲಿ ಮಾಡಿದ ಘೋಷಣೆಗಳು ಬಹು ಮುಖ್ಯವಾದವು. ಅಕಾಲಿದಳ ತನ್ನ ಅನೇಕ ಕಾರ್ಯಚಟುವಟಿಕೆಗಳಲ್ಲಿ ಬಹಳ ಮಟ್ಟಿಗೆ ಯಶಸ್ಸು ಸಾಧಿಸಿತು. ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ೧೯೬೬ರಲ್ಲಿ ಅಕಾಲಿದಳದವರ ಪಂಜಾಬಿ ಸುಭಾ ಬೇಡಿಕೆಯ ಮೇರೆಗೆ, ಪಂಜಾಬಿ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿ ಹೊಂದಿರುವ ಪ್ರತ್ಯೇಕ ಪಂಜಾಬು ರಾಜ್ಯಸ್ಥಾಪನೆಗೆ ಅನುಮೋದನೆ ನೀಡಿತು. ಅಂತೆಯೆ ೧೯೬೭ರಲ್ಲಿ ಪಂಜಾಬು ರಾಜ್ಯ ವಿಭಜಿಸಲ್ಪಟ್ಟು ಹರಿಯಾನ ಮತ್ತು ಪಂಜಾಬುಗಳೆಂಬ ಎರಡು ಪ್ರತ್ಯೇಕ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. (ಆರ್. ಜಿ.ಎಸ್: ಎಸ್.ಎಂ. ಎಚ್.)

ಅಕ್ಯಾಂತೋಟೆರಿಜಿಮೈ: ಮೂಳೆಯ ಮೀನುಗಳಲ್ಲಿ ಇವು ವಿಕಾಸದ ದೃಷ್ಟಿಯಿಂದ ಮುಂದುವರೆದ ಉಪವರ್ಗಕ್ಕೆ ಸೇರಿವೆ. ಮುಂದಿನ ಈಜುರೆಕ್ಕೆಯ ಕಿರಣಗಳು ಬಿಡುವಾಗಿದ್ದು ಮೊದಲನೆಯದು ಮುಳ್ಳಾಗಿ ಪರಿವರ್ತನೆಹೊಂದಿದೆ. ಮೈಮೇಲಿನ ಹುರುಪೆಗಳು ಸಾಧಾರಣವಾಗಿ ಟೀನಾಯಿಡ್ ರೀತಿಯವು. ಪ್ರೌಢಜೀವಿಗಳಲ್ಲಿ ಅನ್ನನಾಳಕ್ಕೂ ಗಾಳಿಯ ಕೋಶಕ್ಕೂ ಸಂಬಂಧವಿರುವುದಿಲ್ಲ. ಸೊಂಟದ ಈಜುರೆಕ್ಕೆಗಳು ಮುಂದೆ ಸರಿದು ಎದೆಯ, ಕೊರಳಿನ ಅಥವಾ ಕೆಳದವಡೆಯ ತಳದಲ್ಲಿ ಇರುತ್ತವೆ. ನಡುಕಟ್ಟು ಕ್ಲೈತ್ರಂ ಮೂಳೆಗೆ ಅಂಟಿಕೊಂಡಿರುತ್ತದೆ. ಮೇಲ್ದವಡೆಯ ಮ್ಯಾಕ್ಸಿಲ್ಲ ಮೂಳೆಗಳಲ್ಲಿ ಹಲ್ಲುಗಳಿರುವುದಿಲ್ಲ ಮತ್ತು ಅವು ಬಾಯಿಯ ಅಂಚಿಗೆ ಸೇರಿರುವುದಿಲ್ಲ.

ಇವು ಸಾಧಾರಣವಾಗಿ ಸಮುದ್ರವಾಸಿಗಳು. ಇವುಗಳಲ್ಲಿ ಸುಮಾರು ೩೬ ಕುಟುಂಬಗಳಿವೆ. ಹಾರುಮೀನು, ಬಾಸ್, ಗೋಬಿ, ಫ್ಲೌಂಡರ್, ಬಾಂಗಡಮೀನು, ಉಬ್ಬುಮೀನು, ಮೂರ್ಖಮೀನು, ಸಂದೂಕಮೀನು, ಮುಳ್ಳುಹಂದಿಮೀನು, ತಲೆಮೀನು, ಆಳಿಮೀನು ಮುಂತಾದವು ಈ ಉಪವರ್ಗಕ್ಕೆ ಸೇರಿವೆ.

ಇವುಗಳ ಕೆಲವು ಜಾತಿಗಳು ಕ್ರಿಟೇಷಿಯಸ್ ಯುಗದಲ್ಲಿ ಹುಟ್ಟಿ ಟರ್ಷಿಯರಿ ಯುಗದಲ್ಲಿ ಅಧಿಕವಾಗಿದ್ದವು.(ಪಿ.ಎ.ಆರ್.)

ಅಕ್ಯಾಂತೋಪೀನಿಕ್ಸ್: ಪಾಮೀ(ಅರಿಕೇಸೀ) ಕುಟುಂಬದ ಸುಂದರವಾದ ಉದ್ಯಾನ ಸಸ್ಯ. ತಾಳೆ(ಪಾಮ್) ಜಾತಿಯ ಪ್ರಭೇಧಗಳಲ್ಲಿ ಹೆಸರುವಾಸಿಯಾಗಿದ್ದು. ಇದರ ಪ್ರಬೇಧಗಳು ಸಾಧಾರಣ ಗಾತ್ರದಿಂದ ಹಿಡಿದು ದೊಡ್ಡ ಮರದ ಗಾತ್ರಕ್ಕೆ ಬೆಳೆಯುವುದರಿಂದ ಕುಂಡಗಳಲ್ಲೋ ಉದ್ಯಾನವನಗಳಲ್ಲೊ ಬೆಳೆಸಲು ಯೋಗ್ಯವಾಗಿವೆ.

ಎಲೆ ಸಂಯುಕ್ತಗರಿಯ ರೂಪದಲ್ಲಿದೆ: ಕಿರುಗರಿಗಳು ನೀಳಾಕಾರವಾಗಿದ್ದು ಭರ್ಜಿಯಾಕಾರದ ಮೊನಚುತುದಿ ಉಳ್ಳವಾಗಿವೆ. ಅಪರೂಪವಾಗಿ ಲಂಬಾಗ್ರ ತುದಿಯವೂ ಉಂಟು. ಕಾವು ಮೂರು ಮುಖವಾಗಿರುತ್ತದೆ. ಇದರ ರೆಕ್ಕೆಗಳ ಅಂಚು ನಯವಾಗಿರುತ್ತದೆ. ಮುಳ್ಳು ಅಂಚೂ ಉಂಟು. ಹೂಗೊಂಚಲು ಎರಡು ಭಾಗವಾಗಿರುವ ತಾಳಗುಚ್ಛದ ಮಾದರಿಯಲ್ಲಿದೆ. ಚಪ್ಪಟೆಯಾಗಿರುವ ಎರಡುಭಾಗದ ಉಪಪತ್ರಯುಗ್ಮವೂ ಇದೆ. ತಿರುಪು ಮೊಳೆಯಾಕಾರವಾಗಿ ಜೋಡಣೆಯಾಗಿರುವ ಹೂವಿನ ಮೂರು ಸಾಲುಗಳಿವೆ. ಲಿಂಗ ಪ್ರತ್ಯೇಕವಾಗಿದೆ. ಹೂವು, ಉಪಪತ್ರ ಯುಗ್ಮ ಮತ್ತು ಹೂದಳ ಇವೆಲ್ಲ ಕೆಂಪು, ನಸುಗೆಂಪು ಅಥವಾ ಕಿತ್ತಳೆಬಣ್ಣವಾಗಿರುವುದುಂಟು. ಗಂಡು ಹೂಗಳಲ್ಲಿ ೧೨ ಕೇಸರಗಳು ಇವೆ. ಹೆಣ್ಣು ಹೂಗಳಲ್ಲಿ ಬಂಜೆ ಕೇಸರುಗಳು ಉಂಗುರಾಕೃತಿಯಲ್ಲಿವೆ.

ಅಕ್ಯಾಂತೋಫೀನಿಕ್ಸ್ ಕ್ರೈನಿಟ ಎಂಬ ಪ್ರಭೇಧ ಸು.೨೫ ಕಿಮೀ ಎತ್ತರ ಬೆಳೆಯುತ್ತದೆ. ಗರಿಗಳು ಸು. ೫ಕಿಮೀ ಉದ್ದವಾಗಿದ್ದು, ತೊಟ್ಟಿನ ಬುಡಭಾಗದಲ್ಲಿ ಒತ್ತಾದ ಒರಟಾದ ಉದ್ದವಾದ ಮುಳ್ಳುಗಳು ಇರುತ್ತವೆ. ಎಲೆ ತೊಟ್ಟಿನ ಅಗಲವಾದ ಭಾಗದಲ್ಲಿ ಒರಟಾದ ಕಪ್ಪುಬಣ್ಣದ ಬಿರುಸು ರೋಮಗಳೂ ಮುಳ್ಳುಗಳೂ ಇರುತ್ತವೆ. ಕಿರುಗರಿಗಳ ತಳಭಾಗ ಬಿಳಿಯ ಬಣ್ಣವಾಗಿವೆ. ಹೂಗೊಂಚಲು ಕಪ್ಪುಬಣ್ಣದ ತಾಳಗುಚ್ಛದ ಮಾದರಿಯಲ್ಲಿದೆ. ಹೂಗೊಂಚಲಿನಲ್ಲಿ ಕಂದುಬಣ್ಣದ ನಾರು ಮತ್ತು ಮುಳ್ಳು ಇರುತ್ತವೆ. ಪುಷ್ಪಪತ್ರ ಮತ್ತು ದಳಗಳು ಕೆಂಪು, ಕಂದು ಅಥವಾ ಬಿಳುಪು ಬಣ್ಣವಾಗಿರುತ್ತವೆ.

ಅಕ್ಯಾಂತೋಫೀನಿಕ್ಸ ರುಬ್ರ ಎಂಬ ಪ್ರಭೇದ ಸಸ್ಯ ಸುಮಾರು ೨೦ ಮೀ ಎತ್ತರ ಬೆಳೆಯುತ್ತದೆ. ಎಳೆಯ ಸಸ್ಯದ ಎಳೆಯ ಗರಿಗಳು ಅತಿ ಹಸಿರುಬಣ್ಣವಾಗಿರುತ್ತವೆ. ನಾಳಗಳು ಕೆಂಪು. ಗರಿಗಳು ೨-೪ ಮೀ ಉದ್ದವಾಗಿವೆ. ನವಿರಾದ ರೋಮಗಳು ಗರಿತೊಟ್ಟಿನ ಮೇಲುಭಾಗದಲ್ಲಿವೆ. ತೊಟ್ಟಿನ ಬುಡದ ಅಗಲವಾದ ಭಾಗದಲ್ಲಿ ನೇರವಾಗಿ, ಒರಟಾಗಿರುವ ಕಪ್ಪುಬಣ್ಣದ ಮುಳ್ಳುಗಳು ಇರುತ್ತವೆ. ಹೂಗೊಂಚಲು ಹಿಂದಕ್ಕೆ ಬಾಗಿದ ಮುಳ್ಳುಗಳಿಂದ ಕೂಡಿರುತ್ತದೆ. ಪುಷ್ಪಪತ್ರ ಕೂಡಿಕೊಂಡಿದ್ದು ದಳಗಳು ಕೆಂಪು ಅಥವಾ ಕಂದುವಾಗಿರುತ್ತವೆ.

ಅಕ್ಯಾಂತೋಫೀನಿಕ್ಸ್ ಸಸ್ಯಗಳನ್ನು ಬೀಜಗಳಿಂದ ವೃದ್ಧಿಮಾಡಬಹುದು. ಬಿತ್ತನೆ ಮಾಡಿದ ಬೀಜಗಳು ಮೊಳೆಯಲು ೨-೩ ವರ್ಷಗಳ ಕಾಲ ಬೇಕಾಗುತ್ತದೆ. ಇತರ ವಿವರಗಳಿಗೆ (ನೋಡಿ-ಪಾಮ್ಸ್) (ಡಿ.ಎಮ್.)

ಅಕ್ಯಾಂಥೋಡಿಯೈ: ಪೇಲಿಯೋಜೋಯಿಕ್ ಯುಗದಲ್ಲಿ ಬದುಕಿದ್ದ, ಈಗ ಗತವಂಶಿಗಳಾಗಿರುವ ಮೀನುಗಳ ಒಂದು ವರ್ಗ. ನಿಜವಾದ ದವಡೆಗಳುಳ್ಳ ಸರಳರಚನೆಯ ಕಶೇರುಕಗಳಲ್ಲಿ ಇವೇ ಅತಿ ಪ್ರಾಚೀನವಾದುವು. ಇವು ಸೈಲೂರಿಯನ್ ಯುಗದ ಉತ್ತರಾರ್ಧದಲ್ಲಿ ಕಾಣಿಸಿಕೊಂಡು ಪರ್ಮಿಯನ್ ಯುಗದ ಪಶ್ಚಿಮಾರ್ಧದವರೆಗೂ ಬದುಕಿದ್ದವು. ಆನಂತರ ಕಾಣೆಯಾದುವು.

ಸಿಹಿನೀರಿನ ನದಿ ಮತ್ತು ಸರೋವರಗಳಲ್ಲಿ ವಾಸಿಸುತ್ತಿದ್ದ ಈ ಪ್ರಾಚೀನ ಮೀನುಗಳು ಕೆಲವು ಸೆಂಮೀ ಗಳಷ್ಟು ಮಾತ್ರ ಉದ್ದವಿದ್ದವು. ಆಕೃತಿಯಲ್ಲಿ ಕದಿರಿನಾಕಾರದ ಷಾರ್ಕ್ ಮೀನುಗಳನ್ನು ಹೋಲುತ್ತಿದ್ದವು. ತಲೆ ತುಂಬ ಚಿಕ್ಕದು; ಬಾಯಿ ತಲೆಯ ತುದಿಯಲ್ಲಿತ್ತು. ತಲೆಯ ಮುಂಭಾಗದಲ್ಲಿದ್ದ ಕಣ್ಣುಗಳು ದೊಡ್ಡವು. ಮೇಲಿನ ಮತ್ತು ಕೆಳಗಿನ ದವಡೆಗಳಿದ್ದು ಅನೇಕ ಜಾತಿಗಳಿಗೆ ಹಲ್ಲುಗಳಿರಲಿಲ್ಲ. ಇದ್ದಲ್ಲಿ ಮಾರ್ಪಟ್ಟ ಮೊನೆಗಳುಳ್ಳ ಹುರುಪೆಗಳಂತಿದ್ದವು.