ಪುಟ:Mysore-University-Encyclopaedia-Vol-1-Part-1.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಕ್ಯಾಬ್ - ಅಕಿಮಿನೀಸ್

ಮೂಳೆಯಂಥ ವಸ್ತುವಿನಿಂದಾದ ವಜ್ರಾಕಾರದ ಹುರುಪೆಗಳು ದೇಹವನ್ನು ರಕ್ಷಿಸುತ್ತಿದ್ದವು. ತಲೆಯ ಮೇಲಿನ ಹುರುಪೆಗಳು ದೊಡ್ಡವಾಗಿದ್ದು ನಿರ್ದಿಷ್ಟ ರೀತಿಯಲ್ಲಿ ಹರಡಿದ್ದವು. ಒಂದು ಅಥವಾ ಎರಡು ಬೆನ್ನಿನ ಈಜುರೆಕ್ಕೆಗಳು ಬಾಲದ ಈಜುರೆಕ್ಕೆ ಮತ್ತು ಗುದದ್ವಾರದ ಈಜುರೆಕ್ಕೆ- ಇವು ಒಂಟಿ ಈಜುರೆಕ್ಕೆಗಳು. ಇವು ಸಾಮಾನ್ಯವಾಗಿ ಅಲುಗಾಡುತ್ತಿರಲಿಲ್ಲ. ಮುಂಭಾಗದಲ್ಲಿ ಇವಕ್ಕೆ ಒಂದೊಂದು ದೃಢವಾದ ಮುಳ್ಳುಗಳಿದ್ದವು. ಭುಜದ ಮತ್ತು ಸೊಂಟದ ಜೋಡಿ ಈಜುರೆಕ್ಕೆಗಳು ಸಾಮಾನ್ಯ ರೀತಿಯವು. ಕೆಲವು ಜಾತಿಗಳಲ್ಲಿ ಭುಜದ ಈಜುರೆಕ್ಕೆಗೂ ಸೊಂಟದ ಈಜುರೆಕ್ಕೆಗೂ ಮಧ್ಯೆ ಐದು ಈಜುರೆಕ್ಕೆಗಳ ಸಾಲು ಇತ್ತು. ಕೊನೆಕೊನೆಗೆ ಕಾಣಿಸಿಕೊಂಡವುಗಳಲ್ಲಿ ಅವುಗಳ ಸಂಖ್ಯೆ ಕ್ಷೀಣಿಸಿ ಒಂದೇ ಒಂದು ಈಜುರೆಕ್ಕೆಯಿತ್ತು. ಬಾಲದ ಈಜುರೆಕ್ಕೆ ವಿಷಮವೃತ್ತಾಕಾರದ್ದಾಗಿತ್ತು.

ಕಿವಿರುರಂಧ್ರಗಳು ಬಿಡಿಯಾಗಿ ಹೊರಕ್ಕೆ ತೆರೆಯುತ್ತಿದ್ದವು. ಕೆಲವು ಜಾತಿಗಳಲ್ಲಿ ಸ್ವಲ್ಪಮಟ್ಟಿಗೆ ಕಿವಿರುಕವಚದಂತಿದ್ದು ಚರ್ಮದ ತುಣುಕಿನಿಂದ ಮುಚ್ಚಿದ್ದವು. ವಿಸರಲ್ ಆರ್ಚ್ ಸಂಖ್ಯೆ ಒಂದೊಂದರಲ್ಲಿ ಒಂದೊಂದು ರೀತಿಯಿತ್ತು. ೩,೪ ಮತ್ತು ೫ನೆಯ ಕಿವಿರು ಕಮಾನುಗಳು ಒಂದೊಂದೂ ಪಕ್ಕದಲ್ಲಿದ್ದ ಕಿವಿರುಗಳಿಗೆ ಆಧಾರವಾಗಿದ್ದವು. ಒಳಭಾಗದಲ್ಲಿ ಒಂದೊಂದರಿಂದಲೂ ಹೊರ ಚಾಚಿದ ಕಿವಿರು ಕಡ್ಡಿಗಳು ಆಹಾರವನ್ನು ಶೋಧಿಸಲು ಸಹಕಾರಿಯಾಗಿದ್ದವು. ಮ್ಯಾಂಡಿಬ್ಯುಲರ್ ಆರ್ಚ್ ತಲೆಬುರುಡೆಗೆ ಆಟೋಸ್ಟೈಲಿಕ್ ರೀತಿಯಲ್ಲಿ ನೇರ ಸಂಪರ್ಕ ಹೊಂದಿತ್ತೆಂದು ತೋರುತ್ತದೆ. ಪೂರ್ವ ಡಿವೋನಿಯನ್ ಕಾಲದಲ್ಲಿ ಜೀವಿಸುತ್ತಿದ್ದ ಕ್ಲೈಮೇಟಿಯಸ್ ಮೀನಿನಲ್ಲಿ ಕೆಳದವಡೆ ಮೂಳೆ ತಲೆಬುರುಡೆಗೆ ನೇರವಾಗಿ ಕೂಡಿಕೊಂಡಿತ್ತು. (ಪಿ.ಎ.ಆರ್.)

ಅಕ್ಯಾಬ್: ಮಯನ್ಮಾರ್ ನ ಅರಕಾನ್ ಪ್ರಾಂತ್ಯದ ಪಶ್ಚಿಮ ತೀರದಲ್ಲಿ ಮಾಯಿಕಲಾಡನ್ ಮತ್ತು ಲೆಮ್ರೊ ನದಿಗಳ ಸಂಗಮದಲ್ಲಿರುವ ಮುಖ್ಯ ರೇವುಪಟ್ಟಣ. ಹಿಂದೆ ಮೀನುಗಾರಿಕೆಯ ಒಂದು ಹಳ್ಳಿಯಾಗಿದ್ದು ಇಂದು ಮಯನ್ಮಾರಿನ ಒಂದು ಪ್ರಮುಖ ರೇವುಪಟ್ಟಣವಾಗಿ ಬೆಳೆದಿದೆ.ಬೌದ್ಧರೇ ೧/೨ ಭಾಗದಷ್ಟಿದ್ದಾರೆ. ಅಕ್ಕಿಯನ್ನು ಹೆಚ್ಚಾಗಿ ರಫ್ತು ಮಾಡುತ್ತಾರೆ. ಇಲ್ಲಿ ಅನೇಕ ಸಾರ್ವಜನಿಕ ಕಟ್ಟಡಗಳ ಜೊತೆಗೆ ದೊಡ್ಡ ಅಕ್ಕಿ ಗಿರಣಿಗಳೂ ಇವೆ. (ಎಮ್. ಎಸ್. ಎಮ್.)

ಅಕ್ಯಾಲಿಫ : ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಅಲಂಕಾರ ಸಸ್ಯ. ಉದ್ಯಾನ ವ್ಯವಸಾಯದಲ್ಲಿ ಬಹು ಪ್ರಸಿದ್ಧಿ ಪಡೆದಿರುವ ಇವನ್ನು ಉದ್ಯಾನವನದ ಮಡಿಗಳಲ್ಲಿ, ಅಲಂಕಾರದ ಬೇಲಿಗಳಲ್ಲಿ ಬೆಳೆಸುತ್ತಾರಲ್ಲದೆ ಅಂಚುಸಸ್ಯಗಳಾಗಿಯೂ ಬೆಳೆಸುತ್ತಾರೆ. ಈ ಜಾತಿಯ ಸಸ್ಯಗಳು ಸುಲಭವಾಗಿ ರೋಗಕೀಟಗಳ ಬಾಧೆಯಿಲ್ಲದೆ ಗಟ್ಟಿಮುಟ್ಟಾಗಿ ಬೆಳೆಯುವುದರಿಂದ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿವೆ. ಇವುಗಳ ಎಲೆಗಳ ವರ್ಣವಿನ್ಯಾಸ ವೈವಿಧ್ಯಮಯವಾಗಿರುವುದರಿಂದ ವಿವಿಧ ಬಣ್ಣದ ಆಕರ್ಷಕ ಸಸ್ಯಗಳು ಕಾಣಿಸಿಕೊಳ್ಳುತ್ತವೆ. ಬಣ್ಣದ ಎಲೆಗಳ ಮಧ್ಯದಲ್ಲಿ ಬಾಲದಂತಿರುವ ಹೂಗೊಂಚಲು ಈ ಗಿಡಗಳನ್ನು ಬಹಳ ಭವ್ಯವಾಗಿ ಕಾಣುವಂತೆ ಮಾಡುತ್ತವೆ.

ಈ ಜಾತಿಯಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಪ್ರಭೇದಗಳಿವೆ. ಇವು ನೆಟ್ಟಗೆ ಮೇಲ್ಮುಖವಾಗಿ ಬೆಳೆಯುವ ಪೊದೆಗಳೋ ಪರ್ಣಸಸಿಗಳೋ ಆಗಿವೆ. ಎಲೆಗಳು ಸರಳ ರೀತಿಯವು. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿರುವುವು. ಆಕಾರ ಕರಣೆ ಅಥವಾ ಭರ್ಜಿಯಂತೆ. ಎಲೆಯಂಚು ಹಲ್ಲುಗಳಾಗಿ ಒಡೆದಿರುತ್ತದೆ. ಅದರ ಮೇಲೆ ಗರಿಮಾದರಿಯ ನಾಳ ರಚನೆಯಿರುತ್ತದೆ. ತೊಟ್ಟು ಉದ್ದ, ಹೂಗೊಂಚಲು ಸ್ಪೈಕ್ ಮಾದರಿಯದು. ಹೂವುಗಳು ಏಕಲಿಂಗಿಗಳು ಅಥವಾ ದ್ವಿಲಿಂಗಿಗಳು. ಅಂಡಕಗಳು ಮೂರು. ಹಣ್ಣು(ಕ್ಯಾಪ್ ಸೂಲ್) ಮಾದರಿಯದು.

ಅಕ್ಯಾಲಿಫ ಇಂಡಿಕ: ಎಂಬ ಪ್ರಭೇದದ ಸಸ್ಯ ೧ ಮೀ ಎತ್ತರವಾಗಿ ಬೆಳೆಯುವ ಸಣ್ಣ ಪೊದೆ. ಎಲೆಗಳು ಹಸುರುಬಣ್ಣದವು. ಇವುಗಳಲ್ಲಿ ಮಿಶ್ರಬಣ್ಣವಿಲ್ಲದೆ ಇರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುವುದಿಲ್ಲ. ತೊಟ್ಟು ಎಲೆಗಿಂತ ಉದ್ದವಾಗಿರುತ್ತದೆ. ಎಲೆ ಅಗಲವಾಗಿಯೂ ಕರನೆಯಾಕಾರವಾಗಿಯೂ ಇರುತ್ತದೆ. ಹೂಗೊಂಚಲು ಸುಮಾರು ೮ ಸೆಂಮಿ ಉದ್ದ ಸ್ಪೈಕ್ ಮಾದರಿಯಲ್ಲಿರುತ್ತದೆ.

ಅಕ್ಯಾಲಿಫ ಬೈಕಲರ್ ಎಂಬ ಇನ್ನೊಂದು ಪ್ರಭೇದದ ಎಲೆಯ ತೊಟ್ಟು ಸುಮಾರು ೧೦ ಸೆಂಮೀ ಉದ್ದವಿರುತ್ತದೆ. ಎಲೆ ೨೦ ಸೆಂಮೀ ಉದ್ದವೂ ೧೫ ಸೆಂಮೀ ಅಗಲವಾಗಿರುತ್ತದೆ. ತಾಮ್ರದ ಹಸುರುಬಣ್ಣದ ಇವುಗಳ ನಡುದಿಂಡು ಮಾಸಲು ಕೆಂಪಾಗಿಯೂ ತಳಭಾಗ ಕಂದುಬಣ್ಣವಾಗಿಯೂ ಎಳೆಯಭಾಗ ಕೇಸರಿಬಣ್ಣವಾಗಿಯೂ ಇದ್ದು ಎಲೆ ಒಟ್ಟಾರೆಯಾಗಿ ವರ್ಣರಂಜಿತವಾಗಿರುತ್ತದೆ.

ಅಕ್ಯಾಲಿಫ ಡೆನ್ರಿಫ್ಲೋರ ಎಂಬುದು ಮಧ್ಯಮ ಎತ್ತರದ ಪೊದೆಯಾಗಿ ಬೆಳೆಯುವಂಥದು. ಎಲೆಯತೊಟ್ಟು ೧೦ ಸೆಂಮಿ ಉದ್ದವಾಗಿದ್ದು ಎಲೆ ಮಾಸಲು ಕೆಂಪುಬಣ್ಣದ್ದು. ೧೫ ಸೆಂಮಿ ಉದ್ದ ೨೦ ಸೆಂಮಿ ಅಗಲ ಇರುತ್ತದೆ. ಬಣ್ಣ ವಯಸ್ಸನ್ನು ಅನುಸರಿಸಿ ವ್ಯತ್ಯಾಸವಾಗುತ್ತದೆ. ಸಾಧಾರಣವಾಗಿ ಆಲಿವ್ ಹಸುರು ನಡುದಿಂಡೂ ಕಂದುಬಣ್ಣದ ಹೂಗೊಂಚಲೂ ಇರುತ್ತವೆ. ಹೂಗೊಂಚಲು ಮಿಶ್ರ(ಕ್ಯಾಟ್ಕಿನ್) ಮಾದರಿಯದು. ಹೂಗಳು ನಿಬಿಡವಾಗಿದ್ದು ಸುಟ್ಟ ಇಟ್ಟಿಗೆ ಬಣ್ಣದವಾಗಿವೆ.

ಅಕ್ಯಾಲಿಫ ಇಲಸ್ಟ್ರೇಟ ಎಂಬ ಇನ್ನೊಂದು ಪ್ರಭೇದ ಎತ್ತರವಾಗಿ ಬೆಳೆಯುತ್ತದೆ. ಎಲೆಯ ತೊಟ್ಟು ೧೨ ಸೆಂಮಿ ಉದ್ದವಾಗಿದ್ದು ಮಾಸಲು ಹಸುರು ಬಣ್ಣವನ್ನು ತಳೆದಿರುತ್ತದೆ. ಎಲೆ ೨೦ ಸೆಂಮಿ ಉದ್ದ ೧೫ ಸೆಂಮಿ ಅಗಲವಾಗಿದ್ದು ಹಳದಿ ಮಿಶ್ರಿತ ಹಸುರುಬಣ್ಣವನ್ನು ತಳೆದಿರುತ್ತದೆ. ಮೇಲುಭಾಗದಲ್ಲಿ ಮಚ್ಚೆಗಳು ಇರುತ್ತವೆ. ತಿಳಿ ಮತ್ತು ಆಳವಾದ ಹಸುರು ಬಣ್ಣಗಳು ನಿರ್ದಿಷ್ಟವಾಗಿ ಬೇರೆ ಬೇರೆ ಕಾಣುತ್ತವೆ.

ಅಕ್ಯಾಲಿಫ ಗೊಡ್ ಸೆಫಿಯಾನ ಎಂಬುದು ಮತ್ತೊಂದು ಪ್ರಭೇದ. ಇದು ಕುಳ್ಳಾಗಿ ಬೆಳೆಯುವ ಗಿಡ. ನೆರಳಿನಲ್ಲಿ ಸಮೃದ್ಧಿಯಾಗಿ ಬೆಳೆಯುವ ಇದರ ಎಲೆ ತೊಟ್ಟು ೫ ಸೆಂಮೀ ಉದ್ದವಿರುತ್ತದೆ. ಬಣ್ಣ ತಿಳಿ ಹಸುರು. ಎಲೆ ೧೫ ಸೆಂಮೀ ಉದ್ದ ೫ ಸೆಂಮೀ ಅಗಲವಾಗಿ ಭರ್ಜಿ ಅಥವಾ ಕರಣೆಯಾಕಾರವಾಗಿರುತ್ತದೆ. ಎಲೆ ಬಹುಭಾಗ ಹಸುರಾಗಿರುತ್ತದೆ. ಅಂಚು ಹಲ್ಲುಗಳಾಗಿ ಒಡೆದು ಬೆಳ್ಳಗಿರುತ್ತದೆ. ಅಲ್ಲಲ್ಲಿ ಕೆಂಪು ಪಟ್ಟಿಗಳು ಇರುತ್ತವೆ.

ಅಕ್ಯಾಲಿಫ ಹ್ಯಾಮಿಲ್ಟೋನಿಯ ಎಂಬುದು ಈ ಜಾತಿಯ ಇನ್ನೊಂದು ಪ್ರಭೇದ. ಇದರ ಎಲೆಯತೊಟ್ಟು ೧೨ ಸೆಂಮಿ ಉದ್ದವಾಗಿರುತ್ತದೆ. ಎಲೆ ೧೮ ಸೆಂಮಿ ಉದ್ದ ೧೦ ಸೆಂಮಿ ಅಗಲವಾಗಿರುತ್ತದೆ. ಬಲಿತ ಎಲೆಯ ಅಂಚು ಬಿಳುಪಾಗಿದ್ದು ಹಲ್ಲುಗಳಾಗಿ ಒಡೆದಿರುತ್ತವೆ. ಎಳೆಯ ಎಲೆಯ ಅಂಚಿನ ಹೆಚ್ಚುಭಾಗ ಬಿಳುಪಾಗಿರುತ್ತದೆ. ಎಲೆಯ ಮೇಲೆ ಬಿಳಿ ಪಟ್ಟಿಗಳು ಹರಡಿಕೊಂಡಿದ್ದು ನೋಡಲು ಮನೋಹರವಾಗಿರುತ್ತದೆ.

ಅಕ್ಯಾಲಿಫ ಹಿಸ್ಪಿಡ ಎಂಬ ಪ್ರಭೇದದ ಕೆಂಪು ಬಣ್ಣದ ಉದ್ದವಾದ ಹೂಗೊಂಚಲು ಬೆಕ್ಕಿನ ಬಾಲದಂತೆ ನೇತುಬೀಳುವುದರಿಂದ ಬಹಳ ಸುಂದರವಾಗಿ ಕಾಣುತ್ತದೆ. ಇದು ಮಧ್ಯಮ ಎತ್ತರದ ಸಸ್ಯ. ಎಲೆಯತೊಟ್ಟು ೧೦ ಸೆಂಮಿ ಉದ್ದ. ಬಣ್ಣ ಹಸುರು ಕಡುಗೆಂಪು ಮಿಶ್ರ, ನಡುದಿಂಡು ನಸುಗೆಂಪು. ೩೫ ಸೆಂಮಿ ಉದ್ದದ ಗೊಂಚಲು ಕ್ಯಾಟ್ಕಿನ್ ಮಾದರಿಯದು.

ಅಕ್ಯಾಲಿಫ ಮ್ಯಾಕ್ರೋಫೈಲ ಎಂಬುದು ಅಗಲವಾದ ಎಲೆಗಳಿಗೆ ಹೆಸರುವಾಸಿಯಾಗಿದೆ. ಎಲೆತೊಟ್ಟು ಹಸುರು ನಸುಗೆಂಪು ಮಿಶ್ರಿತ. ಎಲೆ ೩೫ ಸೆಂಮಿ ಉದ್ದ ೨೫ ಸೆಂಮಿ ಅಗಲ ಬಣ್ಣ ಸೀಸೆ ಹಸುರು, ನಾಳ ಮತ್ತು ನಡುದಿಂಡು ನಸುಗೆಂಪು. ಎಲೆಯ ಮೇಲು ಭಾಗದಲ್ಲಿ ನಸುಗೆಂಪು ಮತ್ತು ಕೆಂಪುಬಣ್ಣದ ಮಚ್ಚೆಗಳು ಇರುತ್ತವೆ. ಎಳೆಯ ಎಲೆಗಳು ನಸುಗೆಂಪು. ಅಲ್ಲಲ್ಲಿ ಹಸುರುಬಣ್ಣದ ಮಚ್ಚೆಗಳೂ ಇರುತ್ತವೆ.

ಅಕ್ಯಾಲಿಫ ಟ್ರೈಕಲರ್ ಎಂಬುದು ಮೂರು ಬಣ್ಣದ ಎಲೆಗಳುಳ್ಳ ಪ್ರಭೇದ. ಎಲೆಯ ತೊಟ್ಟು ೭ ಸೆಂಮಿ ಉದ್ದ. ಎಲೆ ೨೫ ಸೆಂಮಿ ಉದ್ದ ೧೮ ಸೆಂಮಿ ಅಗಲ. ಮಾಸಲು ತಾಮ್ರವರ್ಣದ ಜೊತೆಗೆ ಆಲಿವ್ ಹಸುರು, ಕಂಚಿನ ಹಸುರು ಬಣ್ಣಗಳಿದ್ದು ಮೇಲುಭಾಗದಲ್ಲಿ ಕೇಸರಿಬಣ್ಣದ ಪಟ್ಟಿಗಳು ಇರುತ್ತವೆ. ಎಳೆಯ ಎಲೆಗಳು ಪೂರ್ತಿಯಾಗಿ ಕೇಸರಿಬಣ್ಣದಲ್ಲಿರುತ್ತವೆ.

ಅಕ್ಯಾಲಿಫ ಸಸ್ಯಗಳನ್ನು ಎಳೆಯ ಕಾಂಡದ ತುಂಡುಗಳಿಂದ ವೃದ್ಧಿಮಾಡುವುದು ರೂಢಿಯಲ್ಲಿದೆ. ಮಳೆಗಾಲದಲ್ಲಿ ಈ ತುಂಡುಗಳು ಸುಲಭವಾಗಿ ಬೇರು ಬಿಡುವುದರಿಂದ ವೃದ್ಧಿಕಾರ್ಯಕ್ಕೆ ಇದು ಯೋಗ್ಯವಾದ ಕಾಲ.

ಈ ಸಸ್ಯಗಳು ಸುಲಭವಾಗಿ ಗಟ್ಟಿಮುಟ್ಟಾಗಿ ಬೆಳೆಯುವುದರಿಂದ ಇವುಗಳ ಬೇಸಾಯಕ್ಕೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿಲ್ಲ. ಇವುಗಳ ಬೇರುಗಳು ಆಳವಾಗಿ ಇಳಿಯುವುದರಿಂದ ಸರಿಯಾದ ಸೌಲಭ್ಯ ಒದಗಿಸುವುದು ಅಗತ್ಯ. ಕುಂಡಗಳಲ್ಲಿ ಅಕ್ಯಾಲಿಫ ಸಸ್ಯಗಳನ್ನು ಬೆಳೆಯುವಾಗ ದೊಡ್ಡ ಕುಂಡಗಳನ್ನು ಆರಿಸಿಕೊಳ್ಳಬೇಕು. ಗಿಡಗಳ ಆಕಾರವನ್ನು ನಿಯಂತ್ರಿಸದಿದ್ದಲ್ಲಿ ವಿಕಾರವಾಗಿ ಕಾಣುತ್ತವೆ. ಅಲಂಕಾರ ಬೇಲಿಯಾಗಿ ಬೆಳೆಸುವಾಗ ಕ್ರಮವಾಗಿ ಕತ್ತರಿಸಿ ಸರಿಯಾದ ಆಕಾರದಲ್ಲಿ ಇಟ್ಟಿರಬೇಕು. ಸೂರ್ಯನ ಬೆಳಕು ಸರಿಯಾಗಿ ಬೀಳದೆ ಇದ್ದಲ್ಲಿ ಸರಿಯಾದ ಬಣ್ಣ ಬಾರದೆ ಹೋಗುತ್ತದೆ. (ಎಂ.ಎಚ್.ಎಂ.)

ಅಕಿಮಿನೀಸ್ : ಜೆಸ್ನೀರಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರಿಕ ಸಸ್ಯ ಜಾತಿ. ಇದರ ವಿವಿಧ ಪ್ರಭೇದಗಳ ಹೂಗಳು ಕೆಂಪು, ನಸುಗೆಂಪು, ಹಳದಿ, ಬಿಳುಪು, ನಸುಬಿಳುಪು, ಕೇಸರಿ ಇತ್ಯಾದಿ ಬಣ್ಣಗಳಲ್ಲಿದ್ದು ಬಹಳ ಸುಂದರವಾಗಿ ಕಾಣುತ್ತವೆಯಲ್ಲದೆ ದೀರ್ಘ ಕಾಲವಿರುವುದರಿಂದ ತೋಟಗಾರಿಕೆಯಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ. ಅಕಿಮಿನೀಸ್ ಜಾತಿಯ ಪ್ರಭೇದಗಳನ್ನು ಅಂಚುಸಸ್ಯಗಳಾಗಿಯೂ ಮಡಿಸಸ್ಯಗಳಾಗಿಯೂ ಕುಂಡಸಸ್ಯಗಳಾಗಿಯೂ ಬೆಳೆಸುತ್ತಾರೆ.

ಈ ಜಾತಿಯಲ್ಲಿ ೪೦ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಅನೇಕವು ಗ್ವಾಟೆಮಾಲ ಮತ್ತು ಮೆಕ್ಸಿಕೊ ದೇಶದ ಮೂಲವಾಸಿಗಳು. ಇವುಗಳ ಪೈಕಿ ಕೆಲವು ಮಾತ್ರ ಉದ್ಯಾನವನದಲ್ಲಿ ಪ್ರಾಮುಖ್ಯ ಪಡೆದಿವೆ. ಅಕಿಮಿನೀಸ್ ಸಸ್ಯಗಳಲ್ಲಿ ಗುಪ್ತಕಾಂಡವೂ ಅದರಿಂದ ಹೊರಡುವ ಎಲೆಗಳೂ ಇವೆ. ಎಲೆಗಳನ್ನು ಕೊಡುತ್ತವೆ. ಎಲೆಗಳು ಅಭಿಮುಖ ಸಂಯೋಜನೆಯನ್ನೂ ಕೆಲವು ಸಸ್ಯಗಳಲ್ಲಿ ವರ್ತುಲಜೋಡಣೆಯನ್ನೂ ಪ್ರದರ್ಶಿಸುತ್ತವೆ. ಅವುಗಳ ಅಂಚು ಗರಗಸದ ಹಲ್ಲಿನಂತಿದೆ. ಹೂಗಳು ಒಂಟಿಯಾಗಿಯೋ ಗುಂಪಾಗಿಯೋ ಇರಬಹುದು. ಕೊಳವೆಯಾಕಾರದ ಪುಷ್ಪಪತ್ರಗಳು ಅಂಡಾಶಯಕ್ಕೆ ಅಂಟಿದಂತಿದ್ದು ಐದು ಅಸಮ ಭಾಗಗಳಿಂದ ಕೂಡಿದೆ.ಐದು ದಳಗಳಿವೆ. ಇವು ಕೂಡಿಕೊಂಡಿದ್ದು ಬುಡದಲ್ಲಿ ಕೊಳವೆಯಾಕಾರದಲ್ಲಿಯೂ ತುದಿ ಹರಡಿಕೊಂಡಂತೆಯೂ ಇರುತ್ತದೆ. ಕೇಸರಗಳ ಸಂಖ್ಯೆ ೫. ಅವುಗಳ ಬುಡ ದಳಗಳಿಗೆ ಅಂಟಿಕೊಂಡಿರುತ್ತದೆ. ಕೇಸರಗಳಲ್ಲಿ ಒಂದು ಬಂಜೆಕೇಸರ. ಎರಡು ಕೋಶ ಅಂಡಾಶಯಗಳುಳ್ಳ ನೀಚ ಸ್ಥಿತಿಯದಾಗಿರುತ್ತದೆ.