ಪುಟ:Mysore-University-Encyclopaedia-Vol-1-Part-1.pdf/೧೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಕೇಯನ್ ಒಕ್ಕೂಟ : ಅಕೇಯನ್ ಪಂಗಡದ ಹನ್ನೆರಡು ಪ್ರಮುಖ ನಗರರಾಷ್ಟ್ರಗಳು ಪ್ರ.ಶ.ಪೂ.4ನೆಯ ಶತಮಾನದಲ್ಲಿ ರಚಿಸಿಕೊಂಡ ಒಂದು ಒಕ್ಕೂಟ. ಕಾರಿಂತ್ ಕೊಲ್ಲಿಯಿಂದ ಉಪದ್ರವ ಕೊಡುತ್ತಿದ್ದ ಕಡಲ್ಗಳ್ಳರ ಹಾವಳಿಯನ್ನು ತಡೆಗಟ್ಟಲು ಈ ಒಕ್ಕೂಟ ಸ್ಪಾರ್ಟ ಮತ್ತು ತೀಬ್ಸಿನ ಪ್ರಾಬಲ್ಯವನ್ನು ತಡೆಗಟ್ಟಲು ಹೋರಾಡಿತು. ಪ್ರ.ಶ.ಪೂ. 338ರಲ್ಲಿ ಮ್ಯಾಸಿಡೋನಿಯದ 2ನೆಯ ಫಿಲಿಪ್ಪನ ಆಕ್ರಮಣವನ್ನು ತಡೆಗಟ್ಟಲು ಒಕ್ಕೂಟ ಹೋರಾಡಿತು. ಅಲೆಕ್ಸಾಂಡರ್ ಮಹಾಶಯನ ಮರಣಾನಂತರದ ಗೊಂದಲದಲ್ಲಿ ದುರ್ಬಲವಾಗಿದ್ದ ಈ ಒಕ್ಕೂಟ ನಾಮಾವಶೇಷವಾಯಿತು. ಆದರೆ ಕೆಲವು ಅಕೇಯನ್ ರಾಷ್ಟ್ರಗಳ ಪ್ರಯತ್ನದಿಂದ ಪುನಃ ಸಂಯುಕ್ತರೀತಿಯ ರಾಜಕೀಯ ಒಕ್ಕೂಟವೊಂದು ಸ್ಥಾಪಿತವಾಯಿತು. ಕಾಲಕ್ರಮೇಣ ಅಕೇಯನ್ ಪಂಗಡಕ್ಕೆ ಸೇರದ ಇತರ ನಗರರಾಷ್ಟ್ರಗಳಾದ ಆರ್ಗಾಲಿಸ್, ಕಾರಿಂತ್ ಮತ್ತು ಏಜಿಯಾನ್‍ಗಳೂ ಸಮಾನತೆಯ ಆಧಾರದ ಮೇಲೆ ರೂಪಿತವಾಗಿದ್ದವು. ಕೇಂದ್ರ ಆಡಳಿತ ಸಮಿತಿಗೆ ಯುದ್ಧಕಾಲದಲ್ಲಿ ಸಂಪೂರ್ಣ ಅಧಿಕಾರವಿತ್ತಲ್ಲದೆ ಶಾಸಕಾಂಗಗಳ ಮುಂದೆ ಪ್ರಮುಖ ಸಮಸ್ಯೆಗಳನ್ನು ಚರ್ಚೆಗೆ ತರುವ ಅಧಿಕಾರವೂ ಇತ್ತು. ಪ್ರಾದೇಶಿಕ ಸಮಾನತೆಯ ಆಧಾರದ ಮೇಲೆ ಚುನಾಯಿತರಾದ ಸದಸ್ಯರಿಂದ ಕೂಡಿದ ಎರಡು ಶಾಸಕಾಂಗಗಳಿದ್ದುವು. ಸರ್ವೋತ್ಕøಷ್ಟ ಫೆಡರಲ್ ನ್ಯಾಯಾಲಯವಿದ್ದಿತು. ಒಕ್ಕೂಟದ ರಾಜ್ಯಗಳಲ್ಲೆಲ್ಲ ಏಕರೂಪದ ನಾಣ್ಯಪದ್ಧತಿಯಿತ್ತು. ಒಕ್ಕೂಟದ ಸದಸ್ಯ ರಾಷ್ಟ್ರಗಳು ಒಳಾಡಳಿತದಲ್ಲಿ ಸ್ವತಂತ್ರವಾಗಿದ್ದುವು. ವಿದೇಶಾಂಗ ನೀತಿ ಮತ್ತು ಯುದ್ಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ಸರ್ಕಾರ ಪರಮಾಧಿಕಾರವನ್ನು ಹೊಂದಿತ್ತು. ಒಕ್ಕೂಟ ತನ್ನ ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಸ್ಪಾರ್ಟ ಮತ್ತು ಮ್ಯಾಸಿಡೋನಿಯದ ಐದನೆಯ ಫಿಲಿಪ್ಪನೊಡನೆ ಯುದ್ಧಗಳಲ್ಲಿ ಹೋರಾಡಿತು. ಕೊನೆಗೆ ಅಯ್‍ಟೋಲಿಯನ್ನರೊಡನೆ ಸೇರಿ ರೋಮನ್ನರನ್ನು ಎದುರಿಸಿತು. ಪ್ರ.ಶ.ಪೂ. 168ರಲ್ಲಿ ರೋಮನರು ಪಿಡ್ನ ಎಂಬಲ್ಲಿ ಅಕೇಯನ್ನರನ್ನು ಸಂಪೂರ್ಣವಾಗಿ ಸೋಲಿಸಿದರು. ಪ್ರ.ಶ.ಪೂ. 146ರಲ್ಲಿ ರೋಮನರು ಅಕೇಯನ್ ರಾಜಕೀಯ ಒಕ್ಕೂಟವನ್ನು ವಿಸರ್ಜಿಸಿದರು. ಅದು ಕೇವಲ ಸಾಂಸ್ಕøತಿಕ ಹಾಗೂ ನಾಮಮಾತ್ರ ಸಂಸ್ಥೆಯಾಗಿ ಉಳಿಯಿತು. ಅಕೇಯನ್ ನಗರ ರಾಜ್ಯಗಳನ್ನು ಮ್ಯಾಸಿಡೋನಿಯದೊಡನೆ ವಿಲೀನಗೊಳಿಸಿ ಒಂದು ಪ್ರಾಂತ್ಯವನ್ನಾಗಿ ವಿಂಗಡಿಸಿ ರೋಮನರು ತಮ್ಮ ಆಡಳಿತವನ್ನು ಸ್ಥಾಪಿಸಿದರು. ಅಕೇಯನ್ ಒಕ್ಕೂಟ ಸಮಾನತೆ ಹಾಗೂ ಸ್ವಾತಂತ್ರ್ಯ ಧ್ಯೇಯಗಳಿಗಾಗಿ ಶತಮಾನಗಳ ಕಾಲ ಹೋರಾಡಿತು. ಇದು ಸಂಯುಕ್ತ ಪ್ರಜಾಪ್ರಭುತ್ವ ಸಂಪ್ರದಾಯಕ್ಕೆ ತನ್ನದೇ ಆದ ಕಾಣಿಕೆಯನ್ನು ಸಲ್ಲಿಸಿದೆ. (ಜಿ.ಆರ್.ಆರ್.) ಅಕೋಲ : ಮಹಾರಾಷ್ಟ್ರ ಪ್ರಾಂತ್ಯದ ಒಂದು ಮುಖ್ಯ ಪಟ್ಟಣ ಹಾಗೂ ತಾಲ್ಲೂಕು ಕೇಂದ್ರ. ಊರು ಪೂರ್ಣಾನದಿಯ ಉಪನದಿಯಾದ ಮುರ್ನಾ ನದಿಯ ಪಶ್ಚಿಮದಡದ ಭಾಗವನ್ನು ಆಕ್ರಮಿಸಿಕೊಂಡಿದೆ. ಪೂರ್ವದಡದ ಭಾಗದಲ್ಲಿ ತಾಜ್ನಾಪೇಟೆ, ಸರ್ಕಾರಿ ಕಟ್ಟಡಗಳು ಮತ್ತು ಐರೋಪ್ಯರ ನಿವಾಸಗಳಿವೆ. ಜನಸಂಖ್ಯೆ 4,00,520 (2006) ಪೌರಸಭೆಯ ಆಡಳಿತಕ್ಕೆ ಒಳಪಟ್ಟಿದೆ. ಪಟ್ಟಣದ ಸುತ್ತಲಿನ ಕೋಟೆ 19ನೆಯ ಶತಮಾನದ್ದು. ಈ ಪಟ್ಟಣ ಹತ್ತಿ ಮತ್ತು ಹೊಗೆಸೊಪ್ಪಿನ ವ್ಯಾಪಾರಕ್ಕೆ ಹೆಸರುವಾಸಿಯಾದ ಕೇಂದ್ರ. ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಅನೇಕ ಕಾರ್ಖಾನೆಗಳುಂಟು. ವಿದ್ಯಾಭ್ಯಾಸದ, ಕೈಗಾರಿಕಾ ಶಾಲೆಯ ಸೌಲಭ್ಯಗಳು ದೊರಕುತ್ತವೆ. ಊರಿನ ತುಂಬ ವಖಾರಗಳು ದಲಾಲಿ ಸಂಸ್ಥೆಗಳೇ ಕಂಡುಬರುತ್ತವೆ. ಅಕೋಲ ಜಿಲ್ಲೆಯ ವಿಸ್ತೀರ್ಣ ಸು. 10,598 ಚ.ಕಿಮೀ. ಜನಸಂಖ್ಯೆ 16,29,305 (2001). ಜನಸಾಂದ್ರತೆ ಚ.ಕಿಮೀಗೆ 800 ಜನರು. ಈ ಜಿಲ್ಲೆಯ ಭೂಭಾಗ ಚಪ್ಪಟೆಯಾಗಿದ್ದು ಕಣಿವೆಯ ಪ್ರದೇಶ ಸಾಕಷ್ಟಿದೆ. ಉತ್ತರ ಭಾಗದಲ್ಲಿ ಮೇಲ್‍ಫಟ್ ಬೆಟ್ಟಗಳಿವೆ. ಪೂರ್ವದಲ್ಲಿ ಅಜಂತ ಬೆಟ್ಟಗಳು ಜಿಲ್ಲೆಗೆ ಸೇರಿಕೊಂಡಂತಿವೆ. ಈ ಭಾಗ ಸಮುದ್ರಮಟ್ಟಕ್ಕಿಂತ 610 ಮೀ.ಗಳಷ್ಟು ಎತ್ತರದಲ್ಲಿದ್ದು ಬಾಸಿಮ್ ಪ್ರಸ್ಥಭೂಮಿಯನ್ನು ಒಳಗೊಂಡಿದೆ. ಅಜಂತ ಬೆಟ್ಟಗಳ ಉತ್ತರ ಭಾಗದಲ್ಲಿ ತಪತಿಗೆ ಉಪನದಿಯಾದ ಪೂರ್ಣಾ ಮತ್ತು ಅದರ ಉಪನದಿಗಳು ಹರಿಯುತ್ತವೆ. ಬೇಸಗೆಯಲ್ಲಿ ಶಾಖ ಹೆಚ್ಚು. ವಾರ್ಷಿಕ ಸರಾಸರಿ ಮಳೆ 26 ಸೆಂ.ಮೀ ಪೂರ್ಣಾ ಕಣಿವೆ ಮೆಕ್ಕಲುಮಣ್ಣಿನಿಂದ ಕೂಡಿದ ಫಲವತ್ತಾದ ಕಪ್ಪುಮಣ್ಣಿನಿಂದ ಕೂಡಿದ್ದು ಹತ್ತಿ ಬೆಳೆಗೆ ಉತ್ಕøಷ್ಟ ಪ್ರದೇಶವಾಗಿದೆ. ಈ ಭಾಗವೆಲ್ಲವನ್ನೂ ಕೃಷಿಗೆ ಅಳವಡಿಸಿಕೊಳ್ಳಲಾಗಿದೆ. (ಎಂ.ಎಸ್.; ಡಿ.ಕೆ.) ಅಕ್ಕಣ್ಣ - ಮಾದಣ್ಣ : ವಾರಂಗಲ್ ಜಿಲ್ಲೆಗೆ ಸೇರಿದ ಹನುಮಕೊಂಡ ಗ್ರಾಮದಲ್ಲಿ ಬ್ರಾಹ್ಮಣ ಮನೆತನಕ್ಕೆ ಸೇರಿದ ಇಬ್ಬರು ಪಂಡಿತರೆಂದರೆ ಏಕನಾಥ ಮತ್ತು ಅವನ ಸಹೋದರ ಮಾದಣ್ಣ. ಇವರು ದಕ್ಷಿಣ ಭಾರತದ ಇತಿಹಾಸದಲ್ಲಿ ಅಕ್ಕಣ್ಣ-ಮಾದಣ್ಣ ಎಂಬುದಾಗಿ ಪ್ರಸಿದ್ಧರಾಗಿದ್ದಾರೆ. 17ನೆಯ ಶತಮಾನದಲ್ಲಿ ಗೋಲ್ಕೊಂಡ ಷಾಹಿ ರಾಜ್ಯವನ್ನಾಳುತ್ತಿದ್ದ ಕುತುಬ್‍ಷಾಹನ ವಿಖ್ಯಾತ ಮಂತ್ರಿಯಾದ ಮೀರ್‍ಜುಮ್ಲಾನ ಸೇವೆಯಲ್ಲಿದ್ದುಕೊಂಡು ತಮ್ಮ ಶಕ್ತಿ ಮತ್ತು ದಕ್ಷತೆಯಿಂದ ಉನ್ನತಾಧಿಕಾರಕ್ಕೆ ಬಂದರು. ಗಲಭೆಕೋರರನ್ನು ಅಡಗಿಸಲು ಮಾದಣ್ಣನೇ ಸರಿಯಾದ ವ್ಯಕ್ತಿಯೆಂದು ಅರಿತ ರಾಜನು ಅವನಿಗೆ ಉನ್ನತಾಧಿಕಾರವನ್ನು ಕೊಟ್ಟು ಆಡಳಿತ ಸುಧಾರಣಾಕಾರ್ಯವನ್ನು ವಹಿಸಿಕೊಟ್ಟ. ಬಹಳ ವರ್ಷಗಳ ಕಾಲ ಮಾದಣ್ಣ ಷಾಹನಿಗೆ ನಿಷ್ಠೆಯಿಂದಿದ್ದುಕೊಂಡು ತನ್ನ ಸೇವೆಯನ್ನು ಸಲ್ಲಿಸಿದನು. ಸಂಸ್ಕøತ, ಪರ್ಷಿಯನ್ ಮತ್ತಿತರ ಭಾಷೆಗಳಲ್ಲಿ ಪ್ರವೀಣನೂ ದಕ್ಷಿಣ ಭಾರತದ ರಾಜಕೀಯದಲ್ಲಿ ತಕ್ಕಷ್ಟು ಪಳಗಿದವನೂ ಆದ ಮಾದಣ್ಣ ಕುತುಬ್‍ಷಾಹಿ ರಾಜ್ಯಭಾರವನ್ನು ನಿರ್ವಹಿಸಿದ. ಮಾದಣ್ಣ ಪಂಡಿತನೂ ನಿಗರ್ವಿಯೂ ಶಾಂತಸ್ವಭಾವದವನೂ ಆದರೆ ಅವನ ಅಣ್ಣನಾದ ಅಕ್ಕಣ್ಣ ಮುಂಗೋಪಿಯೂ ಚಪಲಸ್ವಭಾವದವನೂ ಆಗಿದ್ದ ಎಂಬುದಾಗಿ ಆಗಿನ ಕಾಲದ ಯುರೋಪಿಯನ್ ಪ್ರವಾಸಿಗಳು ವರ್ಣಿಸಿದ್ದಾರೆ. ಕುತುಬ್‍ಷಾಹಿ ರಾಜ್ಯಕ್ಕೆ ಸೇರಿದ ಕರ್ನಾಟಕದ ಪ್ರದೇಶಗಳ ಆಡಳಿತವನ್ನು ಅಕ್ಕಣ್ಣ ಕೆಲವು ಕಾಲ ನಿರ್ವಹಿಸಿದ ಅನಂತರ ಮಾದಣ್ಣ ಪ್ರಧಾನಿಯಾಗಿದ್ದು, ಅನಂತರ ಬಿಜಾಪುರದಲ್ಲಿ ರಾಯಭಾರಿಯಾಗಿದ್ದ. ಆಮೇಲೆ ಷಾಹಿ ಸೈನ್ಯದ ದಂಡನಾಯಕನಾದ. 1677ರಲ್ಲಿ ಶಿವಾಜಿ ಕರ್ನಾಟಕದ ದಂಡಯಾತ್ರೆಯನ್ನು ಕೈಗೊಂಡಾಗ ಈ ಸಹೋದರರೂ ಅವನೊಂದಿಗೆ ಬಹಳವಾಗಿ ಸಹಕರಿಸಿದರು. (ಬಿ.ಎಂ.) ಅಕ್ಕನಾಗಮ್ಮ : 12ನೆಯ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯಳು. ಬಾಗೇವಾಡಿ ಈಕೆಯ ಜನ್ಮಸ್ಥಳ. ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಮಗ ಚನ್ನಬಸವೇಶ್ವರ, ಸಹೋದರ ಬಸವೇಶ್ವರ, ಗುರು ಕಪ್ಪಡಿ ಸಂಗಮದ ಜಾತವೇದಸ್ವಾಮಿ. ಮಹಾಯೋಗಿನಿಯಾದ ಈಕೆಯ ಸ್ಮಾರಕಗಳು ಬಿಜಾಪುರ ಜಿಲ್ಲೆಯ ಇಂಗಳೇಶ್ವರ, ಬೀದರ್ ಜಿಲ್ಲೆಯ ಕಲ್ಯಾಣ, ಉತ್ತರಕನ್ನಡ ಜಿಲ್ಲೆಯ ಉಳವಿಯಲ್ಲಿವೆ. ಬಸವೇಶ್ವರರು ಕೈಗೊಂಡ ಎಲ್ಲ ಚಟುವಟಿಕೆಗಳಲ್ಲೂ ಈಕೆ ಬೆಂಬಲಿಗಳಾಗಿದ್ದಳು. ಕರ್ನಾಟಕದ ಶಿವಶಣರು ಈಕೆಯ ಬಗ್ಗೆ ಹೆಚ್ಚಿನ ಭಕ್ತಿಗೌರವಗಳನ್ನು ತಾಳಿದ್ದಾರೆ. ಚೆನ್ನಬಸವಪುರಾಣ, ಪುರಾತನ ದೇವಿಯರ ತ್ರಿಪದಿ, ಬಸವಪುರಾಣ ಈ ಗ್ರಂಥಗಳಲ್ಲಿ ಈಕೆಯ ಹೆಸರು ನಿರೂಪಿತವಾಗಿದೆ. (ಬಿ.ಎಸ್.) ಅಕ್ಕಮಹಾದೇವಿ : 12ನೆಯ ಶತಮಾನದ ಪ್ರಸಿದ್ಧ ಶಿವಶರಣೆ. ಕನ್ನಡದ ಮೊದಲ ಕವಯಿತ್ರಿ ಎಂಬ ಬಿರುದಿಗೆ ಪಾತ್ರಳಾಗಿದ್ದಾಳೆ. ಇವಳು ಉಡುತಡಿಯವಳು ಎಂದು ಹರಿಹರ ಮುಂತಾದವರು ಹೇಳಿದ್ದಾರೆ. ಉಡುತಡಿ ಈಗಿನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುಗಣಿ ಮತ್ತು ತಡುಗಣಿಗಳೇ ಆಗಿವೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಇವಳ ತಂದೆತಾಯಿಗಳ ಹೆಸರುಗಳನ್ನು ಬೇರೆ ಬೇರೆ ಕವಿಗಳು ಬೇರೆ ಬೇರೆ ರೀತಿಗಳಲ್ಲಿ ಹೇಳಿದ್ದಾರೆ. ಹರಿಹರ ಅವರನ್ನು ಶಿವಭಕ್ತರೆಂದು ಸಾಮಾನ್ಯ ರೂಪದಲ್ಲಿ ಹೆಸರಿಸಿದ್ದರೆ, ಚಾಮರಸ ಅವರ ಹೆಸರನ್ನು ನಿರ್ಮಲ, ಸುಮತಿ ಎಂಬುದಾಗಿ ಹೇಳುತ್ತಾನೆ. ರಾಚಕವಿ ಓಂಕಾರಶೆಟ್ಟಿ, ಲಿಂಗಮ್ಮ ಎಂದು ಹೇಳುತ್ತಾನೆ. ಚಾಮರಸನ ಹೆಸರುಗಳು ಅವನ ಕಾವ್ಯದಲ್ಲಿ ಬರುವ ಇತರ ಹೆಸರುಗಳಂತೆ ಸಾಂಕೇತಿಕ ಎಂದು ಭಾವಿಸಬಹುದು. ರಾಚಕವಿ ಬಹಳ ಈಚಿನವನು. ಆದ್ದರಿಂದ ಆ ಬಗ್ಗೆ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈಕೆ ಶಿವನಲ್ಲಿ ಅಪಾರವಾದ ಭಕ್ತಿಯನ್ನಿಟ್ಟುದಲ್ಲದೆ, ಅವನನ್ನೇ ತನ್ನ ಗಂಡನೆಂದು ಭಾವಿಸಿದ್ದಳು. ಊರಿನ ರಾಜ ಕೌಶಿಕನ ದೃಷ್ಟಿ ಈ ಯುವತಿಯ ಮೇಲೆ ಬಿತ್ತು. ಮದುವೆಯಾಗಬಯಸಿದ. ಇವಳಿಗಾದರೋ ಅವನ ಕೈಹಿಡಿಯಲು ಸ್ವಲ್ಪವೂ ಇಷ್ಟವಿರಲಿಲ್ಲ. ರಾಜನಿಂದ ತನ್ನ ತಂದೆ ತಾಯಿಗಳಿಗೆ ಉಂಟಾಗಬಹುದಾದ ತೊಂದರೆಗಳನ್ನು ನೆನೆದು ಮೂರು ಷರತ್ತುಗಳೊಂದಿಗೆ ಮದುವೆಯಾಗಲು ಒಪ್ಪಿದಳು. ಮದುವೆಗೆ ಇದಕ್ಕಿಂತಲೂ ಇದ್ದ ದೊಡ್ಡ ಅಡ್ಡಿಯೆಂದರೆ ಕೌಶಿಕ ಜೈನ, ಅಷ್ಟೇ ಅಲ್ಲ, ಭವಿ. ಆತ ಸಂಸಾರದಲ್ಲಿ ಆಸಕ್ತ, ರಾಗಿ; ಇವಳು ಸಂಸಾರದಲ್ಲಿ ನಿರಾಸಕ್ತೆ, ವಿರಾಗಿ. ಕೌಶಿಕ ಲೌಕಿಕವ್ಯಕ್ತಿ; ಮಹಾದೇವಿ ಅಲೌಕಿಕವ್ಯಕ್ತಿ. ಅವನ ವ್ಯವಹಾರವೆಲ್ಲ ಪ್ರಾಪಂಚಿಕ, ಇವಳದೋ ಆಧ್ಯಾತ್ಮಿಕ. ಮದುವೆಯಾದರೂ ಆ ದಾಂಪತ್ಯ ಹೆಚ್ಚುಕಾಲ ಉಳಿಯಲಿಲ್ಲ. ಕೌಶಿಕ ತನ್ನ ಮೂರು ಷರತ್ತುಗಳನ್ನೂ ಮುರಿದಾಗ, ಇವಳು ಅವನನ್ನು ತ್ಯಜಿಸಿ ಕೇಶಾಂಬರಿಯಾಗಿ, ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಹೊರಟು ದಾರಿಯಲ್ಲಿ ಹಲವಾರು ರೀತಿಯ ಕೋಟಲೆಗಳನ್ನು ಅನುಭವಿಸಿದಳು. ಈ ಎಲ್ಲ ಅಸಹನೀಯವಾದ ನೋವನ್ನೂ ನುಂಗಿ ಸಹಿಸಿಕೊಳ್ಳಲು ಧೈರ್ಯ ಕೊಟ್ಟದ್ದು ಇವಳ ಶಿವನಿಷ್ಠೆ. ತಾನು ಶಿವನ ವಧುವಾದ್ದರಿಂದ ಯಾರಿಗೂ ಅಳುಕಬೇಕಾಗಿಲ್ಲವೆಂಬ ಕೆಚ್ಚು ಇವಳದು. ಶ್ರೀಶೈಲಕ್ಕೆ ಹೋಗುವ ಮಾರ್ಗದಲ್ಲಿ ಈಕೆ ಕಲ್ಯಾಣಕ್ಕೂ ಬಂದಳು. ಕಲ್ಯಾಣ ಆಗ ವೀರಶೈವ ಧಾರ್ಮಿಕ ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದ್ದಿತು. ಬಸವ, ಅಲ್ಲಮ ಮುಂತಾದವರ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿಯೊಂದು ರೂಪುಗೊಳ್ಳುತ್ತಿದ್ದಿತು. ಆ ಶರಣರ ಕಿವಿಗಾಗಲೇ ಅಕ್ಕನ ನಿಷ್ಠೆ ಭಕ್ತಿಗಳು ಕೇಳಿ ಬಂದಿದ್ದವು. ಕಲ್ಯಾಣದಲ್ಲಿ ಕೆಲವು ಕಾಲ ನಿಂತು ಅನುಭಾವಿಗಳ ಸಂಗದಲ್ಲಿ ಸುಖ ಶಾಂತಿಗಳನ್ನು ಕಂಡಳು. ಬಸವಣ್ಣ, ಅಲ್ಲಮಪ್ರಭು-ಮುಂತಾದ ಅನುಭಾವಿಗಳಿಂದ