ಪುಟ:Mysore-University-Encyclopaedia-Vol-1-Part-1.pdf/೧೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬಟ್ಟಲು, ಭರಣಿ, ತಾಯಿತಿ, ಉಡಿದಾರ, ಪನ್ನೀರುದಾನಿ, ದೇವರಪಟಗಳು ಮುಂತಾದುವನ್ನು ತಯಾರಿಸುತ್ತಾರೆ. ಹಿಂದೂಗಳು ದೇವತಾರಾಧನೆಗೆ ಬಳಸುವ ಬೆಳ್ಳಿ ಮತ್ತು ಬಂಗಾರ ಎರಡೂ ಲೋಹಗಳಿಂದ ಆದ ವಿಗ್ರಹಗಳು, ಪ್ರಭಾವಳಿಗಳು, ಹಲವಾರು ಬಗೆಯ ಹಿಡಿಕೆಗಳು, ಛತ್ರಿಗಳು, ಬೀಸಣಿಕೆಗಳು, ಲಾಂಛನಗಳು ಇವುಗಳನ್ನು ತಯಾರಿಸಲು ಶಾಸ್ತ್ರ ಪ್ರಮಾಣಗಳ ಪರಿಜ್ಞಾನವಿರುವ ಅಕ್ಕಸಾಲಿಗರೇ ಆಗಬೇಕಾಗುತ್ತದೆ. ಇದ್ದಿಲನ್ನುರಿಸುವ ಅಗ್ಗಿಷ್ಟಿಕೆ, ಊದುಕೊಳವೆ, ತಿದಿ, ಮೂಸೆ, ಅಡಿಗಲ್ಲು (ಪಟ್ಟಡೆ), ಬಗೆಬಗೆಯ ಅಚ್ಚುಗಳು, ಸುತ್ತಿಗೆ, ಉಳಿ, ಕತ್ತರಿ, ಬೈರಿಗೆ, ತ್ರಿಜ್ಯಮಾಪಕ, ಇಕ್ಕಳ, ಚಿಮ್ಮಟ, ಅರಗಳು, ಕುಂಚಗಳು ಇವು ಅಕ್ಕಸಾಲಿಗರು ಸಾಮಾನ್ಯವಾಗಿ ಬಳಸುವ ಆಯುಧಗಳು. ಬಹುತೇಕ ಆಯುಧಗಳು ಕಬ್ಬಿಣ ಅಥವಾ ಉಕ್ಕಿನಿಂದ ಮಾಡಲ್ಪಟ್ಟಿರುತ್ತವೆ. ಕಾಲಕಳೆದಂತೆ ಅಕ್ಕಸಾಲಿಗರ ಆಯುಧಗಳಲ್ಲೇನೂ ವಿಶೇಷ ಬದಲಾವಣೆಗಳು ಕಂಡುಬರುವುದಿಲ್ಲ. (ಕೋಲಿನ ಎರಡು ತುದಿಗಳಿಗೆ ದಾರದ ಎರಡು ತುದಿಗಳನ್ನು ಬಿಗಿದು ಅದನ್ನು ಬೈರಿಗೆ ಸ್ತಂಭದ ಸುತ್ತ ಹಾಯಿಸಿ ಕೋಲನ್ನು ಅಡ್ಡಗಲಕ್ಕೆ ಆಡಿಸಿ ರಂಧ್ರಕೊರೆಯುವ ಬದಲು, ಮೇಲೆ - ಕೆಳಕ್ಕೆ ಒತ್ತುವ ಸ್ಪ್ರಿಂಗು ಬೈರಿಗೆ ಬಳಸುವುದು; ಇಂಥ ಅತಿ ಸಾಮಾನ್ಯ ಬದಲಾವಣೆಗಳು ಮಾತ್ರ ಕಾಣಸಿಗುತ್ತವೆ.) ಸಮುದ್ರದ ಉಪ್ಪು, ಪೆಟ್ಲುಪ್ಪು (ಪೊಟಾಸಿಯಂ ನೈಟ್ರೇಟ್), ನುಣ್ಣನೆಯ ಕೆಂಪು ಮರಳು, ಪಟಿಕ, ರಸಕರ್ಪೂರ (ಪಾದರಸದಿಂದಾದ ಒಂದು ಸಿದ್ಧವಸ್ತು - ಕ್ಯಾಲೊಮೆಲ್), ಗಂಧಕಾಮ್ಲ, ನೈಟ್ರಿಕ್ ಆಮ್ಲ, ಬಿಳಿಗಾರ (ಬೋರಾಕ್ಸ್) - ಇವನ್ನು ಅಕ್ಕಸಾಲಿಗರು ವಿಶೇಷವಾಗಿ ಬಳಸುತ್ತಾರೆ. ತಯಾರಿಸಿದ ಇಂಥ ಆಭರಣಕ್ಕೆ ಇಂತಿಷ್ಟು ಎನ್ನುವ ಪ್ರಕಾರ ಸಿದ್ಧಪಡಿಸಿದ ತೂಕವನ್ನು ಅನುಸರಿಸಿ ಅಕ್ಕಸಾಲಿಗರು ಪ್ರತಿಫಲವನ್ನು ಪಡೆಯುತ್ತಾರೆ. ಅಕ್ಕಸಾಲಿಗರ ಉದ್ಯಮದ ಉದ್ದಕ್ಕೂ ಅವರ ಅವಿಭಾಜ್ಯ ಅಂಗವಾಗಿ ಮತ್ತು ಬಹುತೇಕ ಸಂದರ್ಭಗಳಲ್ಲಿ ಅಕ್ಕಸಾಲಿಗರಿಗೂ ಗ್ರಾಹಕರಿಗೂ ನಡುವೆ ಬಂಡವಾಳಕಾರ ಮಧ್ಯಸ್ಥಕಾರರಾಗಿ ಷರಾಫರು ನಿಲ್ಲುತ್ತಾರೆ. 1962ರ ಭಾರತ ಸುವರ್ಣ ನಿಯಂತ್ರಣ ಆಜ್ಞೆ ಅಕ್ಕಸಾಲಿಗರ ಜೀವನೋಪಾಯದ ಮೇಲೆಯೇ ತೀವ್ರತರವಾದ ಪರಿಣಾಮ ಬೀರಿತು. ಬಂಗಾರವನ್ನು ಶೇಖರಿಸಬಾರದೆಂದೂ ಶೇ.58.5 (14 ಕ್ಯಾರೆಟ್)ಗಿಂತ ಹೆಚ್ಚು ಶುದ್ಧ ಬಂಗಾರವನ್ನೊಳಗೊಂಡ ಆಭರಣಗಳನ್ನು ತಯಾರಿಸಬಾರದೆಂದೂ ನಿರ್ಬಂಧವನ್ನು ಹೇರಿದ ನಿಯಂತ್ರಣ ಆಜ್ಞೆಯನ್ನು ಮಾರ್ಪಾಟು ಮಾಡಲಾಯಿತಾದರೂ ಹಲವಾರು ನಿರ್ಬಂಧಗಳು ಅಕ್ಕಸಾಲಿಗರ ಪಾಲಿಗೆ ಪ್ರೋತ್ಸಾಹಕರವಾಗಲಿಲ್ಲ. ತಮ್ಮ ಕಲೆಯನ್ನು ಇತರ ಕ್ಷೇತ್ರಗಳಿಗೆ ಹಾಯಿಸಿಕೊಳ್ಳಲು ಕಾಲಾವಕಾಶವೇ ಇಲ್ಲದಂತಾದಾಗ ಬಹುತೇಕ ಅಕ್ಕಸಾಲಿಗರು ಆಭರಣ ನಿರ್ಮಾಣ ಕಲೆಯನ್ನೇ ತೊರೆದರು. ನಿಜವಾಗಿ ಅಕ್ಕಸಾಲಿಗರದು ಲಾಭದಾಯಕವಾದ ಒಂದು ಉದ್ಯಮ. ಅದರಲ್ಲಿ ಬಹು ಉತ್ತಮಮಟ್ಟದ ಕಲೆಯೂ ಇದೆ. ಪಶ್ಚಿಮ ರಾಷ್ಟ್ರಗಳಲ್ಲಿ ಈ ಉದ್ಯಮವನ್ನು ಬೃಹದ್ ಪ್ರಮಾಣದಲ್ಲಿ ಬೆಳೆಸಿಕೊಂಡಿದ್ದಾರೆ. ಭಾರತೀಯರೂ ಈ ಕಡೆ ಗಮನ ಹರಿಸಬೇಕಾದುದು ಅಗತ್ಯ. (ಎಸ್.ಸಿ.ಜಿ.) ಅಕ್ಕಾಡ್ : ಮೆಸಪೊಟೇಮಿಯದ ಬ್ಯಾಬಿಲೋನಿಯ ಪ್ರದೇಶದ ಉತ್ತರ ಭಾಗ. ಈ ಹೆಸರು ಮೊದಲನೆಯ ಸಾರಗಾನ್ ರಾಜ ಸ್ಥಾಪಿಸಿದ ಪಟ್ಟಣದ ಹೆಸರಿನಿಂದ ಬಂದಿದೆ. ಶರ್ರುಂಕಿನ್ ಅಥವಾ ಸಾರಗಾನನೇ ಮೊಟ್ಟಮೊದಲನೆಯ ಸೆಮಿಟಿಕ್ ವರ್ಗದ ಬ್ಯಾಬಿಲೋನಿಯದ ರಾಜ. ಇಷ್ಟಾರ್ ದೇವತೆಯ ವರಪ್ರಸಾದದಿಂದ ಇವನು ಅತ್ಯಂತ ಪ್ರಭಾವಯುತ ದೊರೆಯಾದನೆಂದು ಸಾಹಿತ್ಯಗ್ರಂಥಗಳಿಂದ ತಿಳಿಯುತ್ತದೆ. ಸಾರಗಾನನು ಕಿಷ್ ಎಂಬಲ್ಲಿ ಆಳುತ್ತಿದ್ದ ಉರ್‍ಜಬಾಬ ಎಂಬುವನನ್ನು ಸೋಲಿಸಿ ಅಕ್ಕಾಡ್‍ನ ರಾಜಮನೆತನವನ್ನು ಸ್ಥಾಪಿಸಿದ. ಇವನ ರಾಜ್ಯ ಮೆಡಿಟರೇನಿಯನ್ ಸಮುದ್ರದಿಂದ ಪರ್ಷಿಯನ್ ಕೊಲ್ಲಿಯವರೆಗೂ ಹರಡಿದ್ದಿತು. ಆಗೇಡ್ ಅಥವಾ ಅಕ್ಕಾಡ್ ಎಂಬ ವೈಭವಯುತವಾದ ರಾಜಧಾನಿಯನ್ನು ಸ್ಥಾಪಿಸಿದ ಕೀರ್ತಿಯೂ ಇವನಿಗೆ ಸಲ್ಲುತ್ತದೆ. ಇವನಿಗೆ ಸೆಮಿಟಿಕ್ ಭಾಷೆಯಲ್ಲಿ ಬಹುಪಾಂಡಿತ್ಯವಿದ್ದಿತು. ಸಾರಗಾನನು 56 ವರ್ಷಗಳ ಕಾಲ (ಪ್ರ.ಶ.ಪೂ. 2356-2300) ರಾಜ್ಯಭಾರ ಮಾಡಿದ. ಇವನ ಮರಣಾನಂತರ ಇವನ ಮಕ್ಕಳಾದ ರಿಮಸ್ ಮತ್ತು ಮನಿಷ್ಟುಷು ರಾಜ್ಯವಾಳಿದರು. ಇವರ ಅನಂತರ ಸಾರಗಾನನ ಮೊಮ್ಮಗನಾದ ನರಮುಸಿನ್ ಎಂಬುವನು ದೊರೆಯಾದ. ಇವನೂ ತನ್ನ ತಾತನಂತೆಯೇ ಪ್ರಭಾವಯುತನಾದ ದೊರೆಯಾಗಿದ್ದ. ಇವನ ರಾಜ್ಯಭಾರದ ಅಂತ್ಯಕಾಲದಲ್ಲಿ ಗುಟಿ ಎಂಬಲ್ಲಿಂದ ಬಂದ ಜನಗಳು ಅಕ್ಕಾಡ್ ರಾಜ್ಯದ ಮೇಲೆ ಯುದ್ಧವನ್ನು ಮಾಡಿ ಅಕ್ಕಾಡ್ ನಗರವನ್ನು ನಾಶಮಾಡಿ, ಅಕ್ಕಾಡ್ ರಾಜಮನೆತನದ ಪತನಕ್ಕೆ ಕಾರಣರಾದರು. ಅಕ್ಕಾಡ್ ರಾಜಮನೆತನದವರ ಕಾಲದಲ್ಲಿ ಅಕ್ಕೇಡಿಯನ್ ಭಾಷೆ ಮತ್ತು ಲಿಪಿ ಅಭಿವೃದ್ಧಿಯಾಯಿತು. ವಾಸ್ತುಶಿಲ್ಪವೂ ಉತ್ತಮ ಸ್ಥಿತಿಯನ್ನು ಪಡೆದಿತ್ತು. ಸಾರಗಾನನ ಕಾಲದಲ್ಲಿ ವ್ಯಾಪಾರವು ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಪರ್ಷಿಯ ದೇಶದಿಂದ ವ್ಯಾಪಾರಕ್ಕಾಗಿ ಹಡಗುಗಳು ಇಲ್ಲಿಗೆ ಬರುತ್ತಿದ್ದವು. ಭಾರತದ ಸಿಂಧೂ ನಾಗರಿಕತೆಯ ಅವಶೇಷಗಳಾದ ಮಣ್ಣಿನ ಮುದ್ರೆಗಳು ಅಕ್ಕಾಡಿನಲ್ಲಿ ದೊರಕಿರುವುದು ಗಮನಾರ್ಹ. ಇದರಿಂದ ಭಾರತಕ್ಕೂ ಮತ್ತು ಅಕ್ಕಾಡ್ ರಾಜ್ಯಕ್ಕೂ ವಾಣಿಜ್ಯ ಮತ್ತು ಸಾಂಸ್ಕøತಿಕ ಸಂಬಂಧಗಳಿದ್ದವೆಂದು ತಿಳಿಯುತ್ತದೆ. (ಎ.ವಿ.ಎನ್.) ಅಕ್ಕಿ : ಪ್ರಪಂಚದ ಮೂರರಲ್ಲೊಂದು ಪಾಲು ಜನರ ಮುಖ್ಯ ಆಹಾರ (ರೈಸ್). ಪಕ್ವ ಮಾಡಿದ ಅಕ್ಕಿಯನ್ನು ಅನ್ನವೆನ್ನುತ್ತಾರೆ. ಕೂಳು ಕನ್ನಡ ಪದ. ಸಾಮಾನ್ಯವಾಗಿ ಯಂತ್ರಗಳ ಮೂಲಕ ಬತ್ತದಿಂದ ಸಿಪ್ಪೆಯನ್ನು ಬೇರ್ಪಡಿಸಿ ಬರುವ ಕಾಳನ್ನು ಚೆನ್ನಾಗಿ ಪಾಲಿಷ್ ಮಾಡಿದಾಗ ಬಿಳಿಯ ಹೊಳೆಯುವ ಅಕ್ಕಿ ಸಿಗುತ್ತದೆ. ಪಾಲಿಷ್ ಮಾಡಿದ ಅಕ್ಕಿ ತಿನ್ನಲು ಹೆಚ್ಚು ಹಿತಕರವಾಗಿದ್ದರೂ ಪಾಲಿಷ್ ಮಾಡದ ಮಬ್ಬು ಬಣ್ಣದ ಕೊಟ್ಟಣದ ಅಕ್ಕಿಯೇ ನಿಜವಾಗಿ ಹೆಚ್ಚು ಪೌಷ್ಟಿಕ ಆಹಾರ. ಹಿಂದೆ ಹಳ್ಳಿಗಳವರೆಲ್ಲ ಹೀಗೆ ಕೈಯಿಂದ ಕುಟ್ಟಿದ ಅಕ್ಕಿಯನ್ನೇ ಬಳಸುತ್ತಿದ್ದರು. ಅಕ್ಕಿಯ ಮೂಗು (ಭ್ರೂಣ) ಮತ್ತು ಮೇಲಿನ ತೆಳುಪೊರೆಯ ತೌಡಿನಲ್ಲಿ ಬಿ.ಕಾಂಪ್ಲೆಕ್ಸ್ ಮೊದಲಾದ ಉತ್ತಮ ಅನ್ನಾಂಗಗಳಿವೆ. ಬತ್ತವನ್ನು ಬೇಯಿಸಿ ತಯಾರಿಸಿದ ಕುತುಬಲಕ್ಕಿ ಅಥವಾ ಕುಸುಬಲಕ್ಕಿ ಬಹು ಜನಪ್ರಿಯವಾಗಿದೆ. ಇದು ಪಾಲಿಷ್ ಆದ ಅಕ್ಕಿಗಿಂತ ಉತ್ತಮ. ಅಕ್ಕಿಯಲ್ಲಿ ಪಿಷ್ಟ ಪದಾರ್ಥವೇ (ಕಾರ್ಬೊಹೈಡ್ರೇಟ್) ಹೆಚ್ಚು. ಪ್ರೋಟೀನು ಮತ್ತು ಕೊಬ್ಬು ತೀರ ಕಡಿಮೆ. ಮಾಂಸ, ಎಣ್ಣೆ, ಬೆಣ್ಣೆ, ಹಾಲು, ಬೇಳೆಕಾಳು ಮತ್ತು ತರಕಾರಿಗಳೊಂದಿಗೆ ಸೇರಿದಾಗ ಒಳ್ಳೆಯ ಆಹಾರವಾಗಬಲ್ಲುದು. ಅಕ್ಕಿಯಿಂದ ಕೋಡುಬಳೆ, ಚಕ್ಕುಲಿ, ದೋಸೆ, ಇಡ್ಲಿ, ರೊಟ್ಟಿ, ಹಪ್ಪಳ, ಸಂಡಿಗೆ ಮೊದಲಾದ ರುಚಿಕರವಾದ ತಿಂಡಿಗಳನ್ನು ತಯಾರಿಸಿ ಬಳಸಲಾಗುತ್ತಿದೆ. ನೇರವಾಗಿ ಚಿತ್ರಾನ್ನ, ಪುಳಿಯೊಗರೆ, ಪೊಂಗಲು ಮೊದಲಾದು ವನ್ನು ಮಾಡುತ್ತಾರೆ. ಅಕ್ಕಿಯ ಬೇರೆ ರೂಪಗಳಾದ ಅವಲಕ್ಕಿ, ಪುರಿ, ಅರಳುಗಳೂ ಜನಪ್ರಿಯವಾಗಿವೆ. ಇದರ ನುಚ್ಚನ್ನು ದನಗಳಿಗೆ ಹಾಕುತ್ತಾರೆ. ಅಕ್ಕಚ್ಚು ಅವುಗಳಿಗೆ ಬಹು ಪ್ರಿಯವಾದ ಪಾನೀಯ, ತೌಡಂತೂ ಕರೆಯುವ ದನಕ್ಕೆ ಅಗತ್ಯವಾದ ಮೇವು. ಅಕ್ಕಿಯಿಂದ ಮದ್ಯವನ್ನು ತಯಾರಿಸುವ ವಾಡಿಕೆ ಹಿಂದಿನಿಂದಲೂ ಪ್ರಚಾರದಲ್ಲಿದೆ. ಜಪಾನಿನಲ್ಲಿ ಈಗಲೂ ಅಕ್ಕಿಯ ಮದ್ಯ (ಸಾಕೆ) ತಯಾರಿಸುತ್ತಾರೆ. ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಕ್ಕಿಯ ಬಳಕೆ ಬಹಳ ಹೆಚ್ಚು. (ನೋಡಿ- ಬತ್ತ). (ಎನ್.ಪಿ.) ಅಕ್ಕಿ, ಟಿ.ಪಿ : 1908-. ಕರ್ನಾಟಕದ ಹೆಸರಾಂತ ಕಲಾವಿದರು. ಇಂದಿನ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ 1908 ಡಿಸೆಂಬರ್ 31ರಂದು ಜನಿಸಿದರು. ಉತ್ತಮ ಕಲಾಸಂಸ್ಕಾರದ ಪರಿಸರದಲ್ಲಿ ಬೆಳೆದ ಇವರು ವಿದ್ಯಾರ್ಥಿದೆಸೆಯಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ತಳೆದರು. ಮುಂಬಯಿಯ ಜೆ.ಜೆ.ಸ್ಕೂಲ್ ಆಫ್ ಆಟ್ರ್ಸ ಕಾಲೇಜಿನಲ್ಲಿ ಮಾಸ್ಟರ್ ಪದವಿ ಗಳಿಸಿದರು. ಮುಂಬಯಿ, ನವಸಾರಿ, ಫಟಿಯಾಳ, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡು ಜನಮೆಚ್ಚುಗೆ ಗಳಿಸಿದರು. ವಿಜಯನಾಟ್ಯ ಸಂಸ್ಥೆ ಮತ್ತು ವಿಜಯ ಕಲಾ ಮಂದಿರವನ್ನೂ ಸ್ಥಾಪಿಸಿ (1947) ಪ್ರತಿವರ್ಷ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಹಲವಾರು ಕಲಾಸಂಸ್ಥೆಗಳಲ್ಲಿ ಸಲಹಾ ಸಮಿತಿ ಸದಸ್ಯರಾಗಿ, ಅಧ್ಯಕ್ಷರಾಗಿ, ಉಚ್ಚಕಲಾಪರೀಕ್ಷೆಗಳ ಪರೀಕ್ಷಕರಾಗಿ, ನಿಯಂತ್ರಕರಾಗಿ, ಸಲಹೆಗಾರರಾಗಿ, ರಾಜ್ಯ ಮತ್ತು ಕೇಂದ್ರ ಲಲಿತಕಲಾ ಅಕಾಡೆಮಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ (1967). ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಕಲಾ ಪ್ರದರ್ಶನದಲ್ಲಿ ಮತ್ತು ಕೋಲ್ಕತದಲ್ಲಿ ನಡೆದ ಅಖಿಲಭಾರತ ಕಲಾವಿದರ ಸಮ್ಮೇಳನದಲ್ಲಿ ಪ್ರತಿನಿದಿsಯಾಗಿ ಭಾಗವಹಿಸಿದ್ದರು (1967). ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ (1981-84). (ಜಿ.ಆರ್.ಟಿ.) ಅಕ್ಕಿಪತಂಗ : ಶೇಖರಣೆ ಮಾಡಿದ ಖಾದ್ಯ ವಸ್ತುಗಳಿಗೆ ಅತ್ಯಂತ ಹಾನಿಯನ್ನುಂಟು ಮಾಡುವ ಪತಂಗದ (ಚಿಟ್ಟೆಯ) ಗುಂಪಿಗೆ ಸೇರಿದ ಜೀವಿಯೆಂದರೆ ಅಕ್ಕಿ ಚಿಟ್ಟೆ. ಕಾರ್ಸೈರಾ ಕಿಫಲೋನಿಕ ಎಂಬ ಹೆಸರುಳ್ಳ ಈ ಕೀಟ ಲೆಪಿಡಾಪ್ಟಿರ ಗಣದ ಪೈರಾಲಿಡೀ ಕುಟುಂಬಕ್ಕೆ ಸೇರಿದ್ದು. ಈ ಹುಳುವಿನ ಕಾಟಕ್ಕೆ ತುತ್ತಾಗುವ ಆಹಾರ ಪದಾರ್ಥಗಳ ಶ್ರೇಣಿ ಅತ್ಯಂತ ವಿಸ್ತಾರ. ಉದಾಹರಣೆಗೆ: ಆಹಾರ ಧಾನ್ಯಗಳು ಅದರಲ್ಲೂ ಒಡೆದು ಬೀಸಿದವು (ನುಚ್ಚು, ತರಿ, ರವೆ, ಹಿಟ್ಟು, ಆಟ್ಟ, ಬೂಸ, ಬೇಸಿನ್, ಮೈದಾ, ಇತ್ಯಾದಿ), ಸಾಂಬಾರ ವಸ್ತುಗಳು, ಸೇಂಗಾ ಬೀಜ, ಒಣ ಹಣ್ಣುಗಳು, ಬಿಸ್ಕತ್, ಹಿಂಡಿ, ಕೋಕೋ, ಇತ್ಯಾದಿಗಳು. ತಿಂದು ಮುಗಿಸುವುದಕ್ಕಿಂತ ಹೆಚ್ಚಾಗಿ ನೂಲು ಎಳೆಗಳಿಂದ ಆಹಾರ ಪದಾರ್ಥಗಳ ಆದ್ಯಂತ ದಟ್ಟವಾದ ಬಲೆ ಕಟ್ಟುವುದರಿಂದ, ಹುಳುಬಿದ್ದ ಖಾದ್ಯ ವಸ್ತುಗಳನ್ನು ಶುಚಿಮಾಡಿ ಉಪಯೋಗಿಸಲು ಸಾಧ್ಯವಿಲ್ಲವಾಗುವುದು. ಪ್ರಾಯದ ಚಿಟ್ಟೆ ಕಂದು ಬಣ್ಣದ್ದು; ರೆಕ್ಕೆ ಪೂರ್ತಿ ಪಸರಿಸಿದಾಗ ತುದಿಯಿಂದ ತುದಿಗೆ 1.25 - 2 ಸೆಂಮೀ ಇರುತ್ತದೆ. ಗಂಡು ಚಿಟ್ಟೆ ಹೆಣ್ಣಿಗಿಂತ ಚಿಕ್ಕದು. ಹಗಲಿನಲ್ಲಿ ಉಗ್ರಾಣದ ಕತ್ತಲು ಪ್ರದೇಶಗಳಲ್ಲಿ ಅಂದರೆ ಗೋಡೆ, ಚಾವಣಿ, ಮೂಟೆ ಮುಂತಾದ ಜಾಗಗಳಲ್ಲಿ ಕುಳಿತಿದ್ದು, ರಾತ್ರಿಕಾಲದಲ್ಲಿ ಚಟುವಟಿಕೆಯಿಂದ ಹಾರಾಡುತ್ತದೆ. ತಾಯಿ ಚಿಟ್ಟೆ ಸು. 200 ದುಂಡುತತ್ತಿಗಳನ್ನು ಒಂಟಿ ಒಂಟಿಯಾಗಿ ಆಹಾರ ವಸ್ತುಗಳ ಬಳಿ ಇಡುತ್ತದೆ.