ಪುಟ:Mysore-University-Encyclopaedia-Vol-1-Part-1.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫

ಅಕ್ರೋಟ್ - ಅಕ್ವಿನಸ್, ಸೆಂಟ್ ಥಾಮಸ್

ಅಕ್ರೋಟ್ : ಜ್ಯೂಗ್ಲಂಡೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಫಲವೃಕ್ಷ. ಇದರಲ್ಲಿ ೬ ಅಥವಾ ೭ ಜಾತಿಗಳೂ ಸುಮಾರು ೬೦ ಪ್ರಭೇದಗಳೂ ಇವೆ. ಈ ಸಸ್ಯಗಳು ಉತ್ತರ ಸಮಶೀತೋಷ್ಣ ವಲಯದ ಭೂಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತವೆ. ಅಲ್ಲದೆ ಮಧ್ಯ ಮತ್ತು ದಕ್ಷಿಣ ಅಮೆರಿಕ, ಏಷ್ಯದ ಉಷ್ಣ ಪ್ರದೇಶಗಳು, ಜಾವ ಮತ್ತು ನ್ಯೂಗಿನಿ ದೇಶಗಳಲ್ಲಿಯೂ ಬೆಳೆಯುತ್ತವೆ. ಇವು ಪೊದರು ಮತ್ತು ಮರಗಳ ರೂಪದಲ್ಲಿರುತ್ತವೆ. ಎಲೆಗಳು ಸಂಯುಕ್ತ ಮಾದರಿಯವು. ಇದರ ಒಂದು ಬಗೆಯದಕ್ಕೆ ಸುವಾಸನೆಯುಂಟು. ಪ್ರತಿವರ್ಷ ಹಳೆ ಎಲೆಗಳು ಉದುರಿ ಹೊಸ ಎಲೆಗಳು ಹುಟ್ಟುತ್ತವೆ. ಹೂಗೊಂಚಲುಗಳು ಕ್ಯಾಟ್ ಕಿನ್ ಮಾದರಿಯವು. ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣು ಜಾತಿಯ ಹೂ ಗೊಂಚಲುಗಳೆರಡೂ ಒಂದೇ ಸಸ್ಯದಲ್ಲಿ ಬಿಡುತ್ತವೆ. ಆದರೆ ಎಂಗೆಲ್ ಹಾರ್ಡಿಟ ಜಾತಿಗೆ ಸೇರಿದ ಕೆಲವು ಪ್ರಭೇದಗಳಲ್ಲಿ ಗಂಡು ಮತ್ತು ಹೆಣ್ಣು ಜಾತಿಯ ಹೂಗೊಂಚಲುಗಳು ಪ್ರತ್ಯೇಕ ಸಸ್ಯಗಳಲ್ಲಿ ಅರಳುತ್ತವೆ. ಗಂಡು ಹೂಗಳಲ್ಲಿ ೪ ಅಥವಾ ಕಡಿಮೆ ಪೆರಿಯಾಂತ್ ದಳಗಳು (ಇವು ಇಲ್ಲದಿರುವುದು ಕೇವಲ ಅಪೂರ್ವ) ೩-೧೦೦ ಕೇಸರಗಳೂ ಇರುತ್ತವೆ. ಹೆಣ್ಣು ಹೂಗಳಲ್ಲಿ ೪ ಪೆರಿಯಾಂತ್ ದಳಗಳೂ ನೀಚಸ್ಥಾನದ ಅಂಡಾಶಯವೂ ಇರುತ್ತವೆ. ಸಂಯುಕ್ತ ಅಂಡಾಶಯದಲ್ಲಿ ೨ ಅಥವಾ ೩ ವಿಭಾಗಗಳಿದ್ದು ಒಂದೇ ಒಂದು ಮೂಲಬೀಜ ಇರುತ್ತದೆ. ಈ ಸಸ್ಯಗಳಿಗೆ ಗಾಳಿಯಿಂದ ಪರಾಗಸ್ಪರ್ಶವಾಗುತ್ತದೆ. ಕಾಯಿಗಳು ಗೋಳಕಾರವಾಗಿದ್ದು ನಟ್ ಜಾತಿಗೆ ಸೇರಿರುತ್ತವೆ. ಭಾರತ ದೇಶದಲ್ಲಿ ಜುಗ್ಲಾನ್ಸ್ ಜಾತಿಗೆ ಸೇರಿದ ಒಂದು ಪ್ರಭೇದವಾದ ಜುಗ್ಲಾನ್ಸ್ ರೀಜಿಯ ಮತ್ತು ಎಂಗೆಲ್ ಹಾರ್ಡಿಟಕ್ಕೆ ಸೇರಿದ ಐದು ಪ್ರಭೇದಗಳೂ ಇವೆ. ಇವುಗಳಲ್ಲಿ ಜುಗ್ಲಾನ್ಸ್ ರೀಜಿಯ ಬಹು ಮುಖ್ಯವಾದದ್ದು. ಇದನ್ನು ಸಾಮಾನ್ಯವಾಗಿ ವಾಲ್ ನಟ್, ಪರ್ಷಿಯಾ ದೇಶದ ವಾಲ್ ನಟ್ ಅಥವಾ ಐರೋಪ್ಯ ದೇಶದ ವಾಲ್ ನಟ್ ಎಂದು ಕರೆಯುತ್ತಾರೆ. ಇದು ಹಿಮಾಲಯ ಪ್ರದೇಶದಲ್ಲಿ ಮತ್ತು ಅಸ್ಸಾಮಿನ ಬೆಟ್ಟಗುಡ್ಡ ಪ್ರದೇಶದಲ್ಲಿ ಸುಮಾರು ೧೦೦೦ಮೀಗಳಿಂದ ೩,೫೦೦ಮೀ ಎತ್ತರದ ಪರ್ವತ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದನ್ನು ಪಂಜಾಬ್, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲೂ ಬೆಳೆಸುವುದುಂಟು.

ಈ ಕುಟುಂಬದಲ್ಲಿ ಬೆಲೆಬಾಳುವ ಉತ್ಕೃಷ್ಟವಾದ ಮರಗಳೂ ತಿನ್ನಲು ಕಾಯಿಗಳನ್ನು ಒದಗಿಸುವ ಸಸ್ಯಗಳೂ ಸೇರಿದ್ದು ಉಪಯುಕ್ತತೆಯ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. (ಎಂ.ಎನ್)

ಅಕ್ರೋಪೊಲಿಸ್ : ಅಥೆನ್ಸ್ ಪಟ್ಟನದಲ್ಲಿ ಸುಂದರ ಮಂದಿರಗಳಿರುವ ನಗರ ಭಾಗ. ಗ್ರೀಕ್ ಭಾಷೆಯಲ್ಲಿ ಇದಕ್ಕೆ ಎತ್ತರದಲ್ಲಿಯ ಪಟ್ಟಣ ಎಂಬರ್ಥವಿದೆ. ಸುತ್ತಲೂ ಕಡಿದಾದ ಇಳಿಜಾರಿರುವ ಬೆಟ್ಟದ ಮೇಲೆ ಕಟ್ಟಿದ ಅಥೆನ್ಸ್ ಪಟ್ಟಣದ ಕೇಂದ್ರಬಿಂದುವಿದು. ಸು. ೨,೩೦೦ ವರ್ಷಗಳ ಹಿಂದೆ ಪೆರಿಕ್ಲೀಸನ ಕಾಲದಲ್ಲಿ ಗ್ರೀಕರು ಕಟ್ಟಿದ ಸುಂದರ ಶುಭ್ರಸಂಗಮವರಿ ಕಲ್ಲಿನ ಮಂದಿರಗಳೂ ಇಲ್ಲಿವೆ. ಅವುಗಳಲ್ಲಿ ಪಾರ್ಥೆನಾನ್ ದೇವಾಲಯವೂ ಒಂದು. ಇದು ಅಥೆನ್ಸ್ ನಗರದ ಮಧ್ಯದಲ್ಲಿ ಎತ್ತರವಾದ ಪ್ರದೇಶದಲ್ಲಿ ನಿಂತಿದೆ. ಪಟ್ಟಣದ ಬುಡದಿಂದ ೭೮ಮೀ ಎತ್ತರ, ೩೦೪ಮೀ ಉದ್ದ ಮತ್ತು ೧೪೦ಮೀ ಅಗಲವುಳ್ಳ ಈ ಪ್ರದೇಶ ೩ ಹೆಕ್ಟೇರ್ ಕ್ಷೇತ್ರವನ್ನೊಳಗೊಂಡಿದೆ. ಸಂಗಮವರಿ ಕಲ್ಲನ್ನು ೧೬ಕಿಮೀ ದೂರದಲ್ಲಿರುವ ಪೆಂಟೆಲಿಕಸ್ ಗುಡ್ಡದಿಂದ ಹೊತ್ತು ತರಲಾಗಿದೆ.

ಪ್ರ.ಶ.ಪೂ. ೬೦೦ ವರ್ಷಗಳ ಹಿಂದೆ ಲೆಕೆಡೆಮಾನಿಯನ್ಸ್ ಮತ್ತು ಪರ್ಷಿಯನ್ನರು ಈ ಸುಂದರ ಮಂದಿರಗಳನ್ನು ಹಾಳುಗೆಡವಿದರು. ರೋಮನ್ನರ ಆಳ್ವಿಕೆಯ ಕಾಲದಲ್ಲಿ ಇವು ಮತ್ತೆ ಊರ್ಜಿತಗೊಂಡವು. ಈ ಕಾಲವೇ ಅದರ ಸುವರ್ಣಯುಗವೆಂದು ಹೇಳಬಹುದು. ೫ನೆಯ ಶತಮಾನದ ಅನಂತರ ಇದನ್ನು ಚರ್ಚನ್ನಾಗಿಯೂ ೧೫ನೆಯ ಶತಮಾನದಲ್ಲಿ ಮಸೀದಿಯಾಗಿಯೂ ಮಾರ್ಪಡಿಸಲಾಯಿತು. ವೆನಿಸ್ ದೇಶದೊಡನೆ ನಡೆದ ಯುದ್ಧಕಾಲದಲ್ಲಿ ಇದು ಮದ್ದುಗುಂಡುಗಳ ಸಂಗ್ರಾಹಾಲಯವಾಗಿ ಸಂಪೂರ್ಣ ಹಾಳಾಯಿತು. ೧೮ ಮತ್ತು ೧೯ನೆಯ ಶತಮಾನದಲ್ಲಿ ಅಳಿದುಳಿದ ಮಂದಿರಗಳು ವಿದೇಶೀ ಪ್ರಾಚ್ಯಕಲಾ ವಸ್ತುಸಂಗ್ರಹಕಾರರ ದಾಳಿಗೆ ಬಲಿಯಾದುವು. ಇಲ್ಲಿನ ದೇವಾಲಯಗಳ ಆಕರ್ಷಕ ಭಾಗಗಳು ಬ್ರೀಟಿಷ್ ವಸ್ತುಸಂಗ್ರಹಾಲಯದಲ್ಲಿ ಈಗಲೂ ಇವೆ. ೧೮೩೫ರಲ್ಲಿ ಕೆಲವನ್ನು ಗ್ರೀಕರು ಪುನಃ ಕಟ್ಟಿದರು.

ಈ ಅವಶೇಷಗಳನ್ನು ಕಾಯ್ದ ಪ್ರದರ್ಶಿಸುವುದಕ್ಕಾಗಿಯೇ ಒಂದು ಪ್ರಾಚ್ಯ ವಸ್ತುಸಂಗ್ರಹಾಲಯವನ್ನು ಈಗ ನಿರ್ಮಿಸಿದ್ದಾರೆ. ಗ್ರೀಕರು ಅಥೆನ್ಸ್ ನಗರದ ಹೆಮ್ಮೆಯ ಸವಿನೆನಪಿಗಾಗಿ ರಚಿಸಿದ ಸುಂದರ ಕಲಾಕೃತಿಗಳನ್ನು ಯುದ್ಧಗಳಾಗಲೀ ಕಾಲಚಕ್ರವಾಗಲೀ ನಿರ್ನಾಮ ಮಾಡಲಾರದೆಂಬ ಸತ್ಯವನ್ನು ಇಂದಿನ ಈ ಸುಂದರ ಅವಶೇಷಗಳು ಎತ್ತಿ ತೋರಿಸುತ್ತಿವೆ. (ಡಿ.ಕೆ.;ಜಿ.ವಿ)

ಅಕ್ಲೇದಿತ ವಸ್ತ್ರ : ಮಳೆಯಲ್ಲಿ ತಿರುಗಾಡುವಾಗ ಉಪಯೋಗಿಸಲೂ ವಸ್ತ್ರಗಳು ನೀರಿನಲ್ಲಿ ನೆನೆಯದಂತೆ ಮೇಲೆ ಹೊದಿಸುವುದಕ್ಕೂ ಗುಡಾರ ಮತ್ತು ರಂಧ್ರವಸ್ತ್ರಗಳಲ್ಲಿ (ಶ್ಯಾಮಿಯಾನಾ) ಮಳೆಯ ನೀರು ಒಳನುಗ್ಗದಂತೆ ಮಾಡಲೂ ವಿಶೇಷಗುಣವುಳ್ಳ ಬಟ್ಟೆ ಬೇಕಾಗುತ್ತದೆ. ಇಂಥ ಬಟ್ಟೆಗೆ ಅಕ್ಲೇದಿತ (ಜಲಾಭೇದ್ಯ, ವಾಟರ್ ಪ್ರೂಫ್) ವಸ್ತ್ರವೆನ್ನುತ್ತಾರೆ. ಇದಕ್ಕಾಗಿ ತಯಾರಾದ ಬಟ್ಟೆ ಒತ್ತಾಗಿ ನೇಯಲ್ಪಟ್ಟಿರಬೇಕು. ಅಲ್ಲದೆ ಕೆಲವು ರಾಸಾಯನಿಕ ವಸ್ತುಗಳ ಪ್ರಯೋಗದಿಂದ ಬಟ್ಟೆಗಳಿಗೆ ಅಕ್ಲೇದನಗುಣ ಬಂದಿರಬೇಕು.

ಈ ಗುಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು. ೧. ಜಲಾಭೇದ್ಯ ಮತ್ತು ೨. ಜಲಾಕ್ಲೇದ (ಜಲಾಪಕರ್ಷಕ)ಜಲಾಭೇದ್ಯ ವಸ್ತ್ರದಲ್ಲಿ ನೀರು ಮತ್ತು ಗಾಳಿ ಬಟ್ಟೆಯೊಳಗೆ ಹಾಯ್ದು ಹೋಗಲಾರದು. ಬಟ್ಟೆ ಒಂದು ವೇಳೆ ಸ್ವಲ್ಪ ಒದ್ದೆಯಾಗಬಹುದು, ಅಷ್ಟೆ. ಜಲಾಕ್ಲೇದ ವಸ್ತ್ರದಲ್ಲಿ ನೀರು ಹರಿಯದೇ ಗಾಳಿ ಹೋಗಬಹುದು. ಆದರೆ ಬಟ್ಟೆ ಎಂದಿಗೂ ಒದ್ದೆಯಾಗುವುದಿಲ್ಲ.

ಜಲಾಭೇದ್ಯಕಾರಕವಾಗಿ ರಬ್ಬರ್,ಮೇಣ,ಕೃತಕರಾಳ, ಘೋಷಣತೈಲ ಮುಂತಾದ ಪದಾರ್ಥಗಳನ್ನು ಬಟ್ಟೆಯ ಮೇಲೆ ತೆಳುವಾಗಿ ಬಳಿಯುವರು. ಬಳಿಯಲು ಕುಂಚ ಅಥವಾ ದಿಂಡು ಯಂತ್ರಗಳನ್ನು ಉಪಯೋಗಿಸುವರು. ರಬ್ಬರ್, ಮೇಣ ಮುಂತಾದುವುಗಳನ್ನು ಸೇಂದ್ರಿಯ ದ್ರಾವಕಗಳಲ್ಲಿ ಕರಗಿಸಿ ಬಟ್ಟೆಯ ಮೇಲೆ ಹರಡಿಸುವರು. ಲಿನ್ಸೀಡ್ ಎಣ್ಣೆ ಮೊದಲಾದುವನ್ನು ಹಾಗೆಯೇ ಬಳಿದು ಒಣಗಿಸಬಹುದು. ಈ ರೀತಿಯಾಗಿ ದುರ್ಗಮಕ್ರಮದಲ್ಲಿ ಬಟ್ಟೆಯಲ್ಲಿರುವ ರಂಧ್ರಗಳು ಮುಚ್ಚಲ್ಪಟ್ಟು ನೀರು ಮತ್ತು ಗಾಳಿ ತೂರದಂತಾಗುವುದು.

ಜಲಾಪಕರ್ಷಣಕ್ಕೆ ಜಲವಿರೋಧಿ ವಸ್ತುಗಳನ್ನು ಪ್ರಯೋಗಿಸುತ್ತಾರೆ. ಇದರಿಂದ ಬಟ್ಟೆ ನೆನೆಯದಂತೆ ಮೇಲೆ ಬಿದ್ದ ನೀರು ಹರಿದು ಹೋಗುವುದು. ಇದಕ್ಕೆ ಉಪಯೋಗಿಸುವ ವಸ್ತುಗಳೆಂದರೆ:

೧. ಅಲ್ಯೂಮಿನಿಯಂ ಲವಣ ಮತ್ತು ಅಲ್ಯೂಮಿನಿಯಂ ಸಾಬೂನು ೨. ಎಣ್ಣೆ, ಮೇಣ, ಕೊಬ್ಬುಗಳಿಂದ ತಯಾರಾದ ವಸ್ತುಗಳು ೩. ಕೃತಕ ರಾಸಾಯನಿಕ ವಸ್ತುಗಳು ಇತ್ಯಾದಿ.

ಮೇಲ್ಕಂಡವುಗಳನ್ನು ಬಟ್ಟೆಯ ಮೇಲೆ ಸಮನಾಗಿ ಹರಡಿ, ಅನುಗುಣವಾಗಿ ದೃಢೀಕರಿಸಿದರೆ ಅದು ಜಲಾಪಕರ್ಷಕವಾಗುವುದು.

ಅಕ್ವಿನಸ್, ಸೇಂಟ್ ಥಾಮಸ್: ೧೨೨೬-೧೨೭೪. ಪ್ರಸಿದ್ಧ ತಾರ್ಕಿಕ. ಮತಧರ್ಮ ಶಾಸ್ತ್ರಜ್ಞನಾದ ಈತ ಶ್ರೀಮಂತ ಮನೆತನದಲ್ಲಿ ಹುಟ್ಟಿ, ತಂದೆತಾಯಿಗಳ ಇಷ್ಟಕ್ಕೆ ವಿರೋಧವಾಗಿ ಸೇಂಟ್ ಡಾಮಿನಿಕ್ ಪಂಥದ ಸಂನ್ಯಾಸಿಯಾದ. ಇವನ ಅಸಾಧಾರಣ ಪ್ರತಿಭೆ ಬಾಲ್ಯದಲ್ಲೇ ಕಂಡುಬಂದಿತು. ಪ್ರಖ್ಯಾತ ದೇವತಾಶಾಸ್ತ್ರಪಂಡಿತನಾದ ಆಲ್ಬರ್ಟಸ್ ಮ್ಯಾಗ್ನಸ್ ಎಂಬುವನ ಶಿಷ್ಯನಾಗಿದ್ದು ಮತಧರ್ಮಪಾಂಡಿತ್ಯದಲ್ಲಿ ಅದ್ವಿತೀಯನೆಂದು ಹೆಸರು ಗಳಿಸಿದ. ಕ್ರೈಸ್ತಧರ್ಮೀಯರಲ್ಲಿ ಅಭಿಪ್ರಾಯಭೇದಗಳು ಹುಟ್ಟಿ ನಾನಾ ಪಂಥಗಳು ನಿರ್ಮಾಣವಾಗುತ್ತಿದ್ದ ಕಾಲ ಅದು. ಡಾಮಿನಿಕ್ ಪಂಥದ ತತ್ವ್ತಗಳನ್ನು ಸಮರ್ಥಿಸುವುದಕ್ಕಾಗಿ ಧರ್ಮಸಮ್ಮೇಳನಗಳು