ಪುಟ:Mysore-University-Encyclopaedia-Vol-1-Part-1.pdf/೧೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮುಂದಿನ ಹಂತವೇ ಅಕ್ಷರಲಿಪಿ. ಅಕ್ಷರಲಿಪಿ ಎಲ್ಲಿ ಉಗಮವಾಯಿತು ಮತ್ತು ಅದು ಯಾವ ಜನಾಂಗದ ಕೊಡುಗೆ ಎಂಬ ಪ್ರಶ್ನೆಗಳು ಇನ್ನೂ ಚರ್ಚಾಸ್ಪದವಾಗಿಯೇ ಇದೆ. ಈಜಿಪ್ಟಿನ ಹೈರೊಗ್ಲಿಫ಼ಿಕ್ ಲಿಪಿ, ಸುಮೇರಿಯದ ಕ್ಯೂನಿಫಾರಂಲಿಪಿ, ಹೆಟ್ಟೈಟ್ ಭಾವಲಿಪಿ, ಸೈಪ್ರೆಸ್‍ನ ಭಾವಲಿಪಿ ಇವುಗಳಿಂದ ಅಕ್ಷರಲಿಪಿ ಹುಟ್ಟಿತೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ ಸರ್ ಆರ್ಥರ್ ಇವಾನ್ಸ್ ಅಕ್ಷರಲಿಪಿ ಕ್ರೀಟಿನ ಲೀನಿಯರ್ ಲಿಪಿಗಳಿಂದ ಉಗಮವಾಯಿತೆಂದು ವಾದಿಸಿದ್ದಾನೆ. ಕ್ರೀಟ್‍ನಿಂದ ಅಕ್ಷರಲಿಪಿ ಪ್ಯಾಲಸ್ತೀನಿಗೆ ಫಿಲಿಸ್ಟೈನ್ ಜನಗಳಿಂದ ಒಯ್ಯಲ್ಪಟ್ಟಿತೆಂದೂ ಅದನ್ನು ಅವರಿಂದ ಫೋನೀಷಿಯನ್ನರೂ ಕಲಿತರೆಂದೂ ಇವಾನ್ಸನ ಅಭಿಪ್ರಾಯ. ಚರಿತ್ರಪೂರ್ವಯುಗದ ರೇಖಾಚಿತ್ರಗಳೇ ಮುಂದೆ ವಿಕಾಸಹೊಂದಿ ಅಕ್ಷರಗಳಾದವು ಎಂದು ಫ್ಲಿಂಡರ್ಸ್ ಪೆಟ್ರಿಯ ವಾದ. ಬಿಬ್ಬೊಸ್‍ನಲ್ಲಿ ದೊರಕಿರುವ ಭಾವಲಿಪಿಯೇ ಅಕ್ಷರದ ಮೂಲವೆಂದು ಮತ್ತೆ ಕೆಲವರು ವಾದಿಸುತ್ತಾರೆ. ಡಿರಿಂಜರ್ ಅವರು ಪ್ಯಾಲಸ್ತೀನ್ (ಅಕ್ಷರನಗರ) ಬಿಬ್ಲೊಸ್ (ಪುಸ್ತಕನಗರ) ಮತ್ತು ಸಿರಿಯಗಳು ಅಕ್ಷರಲಿಪಿಯ ಉಗಮಕ್ಕೆ ಬೇಕಾದ ಎಲ್ಲ ಮಾಹಿತಿಗಳನ್ನೂ ಒದಗಿಸುತ್ತವೆಂದು ಅಭಿಪ್ರಾಯಪಡುತ್ತಾರೆ. ಅಕ್ಷರಲಿಪಿಯ ಉಗಮಕ್ಕೆ ಒಂದೇ ಜನಾಂಗ ಕಾರಣವಲ್ಲದಿರಬಹುದೆಂದೂ ಪ್ರಾಚೀನ ಪ್ರಪಂಚದ ಅನೇಕ ಸಂಸ್ಕøತಿಗಳ ಪ್ರಭಾವ ಮತ್ತು ಕೊಡುಗೆಗಳಿಂದ ಅಕ್ಷರಲಿಪಿ ಉಗಮವಾಗಿರಬೇಕೆಂದೂ ಡಿರಿಂಜರ್ ತನ್ನ ನಿರ್ಧಾರವನ್ನು ಸೂಚಿಸಿದ್ದಾನೆ. ಪ್ರೋಟೋ ಸೆಮಿಟಿಕ್ ಲಿಪಿಯನ್ನು ದಕ್ಷಿಣ ಸಿಮಿಟಿಕ್ ಮತ್ತು ಉತ್ತರ ಸಿಮಿಟಿಕ್ ಎಂದು ಎರಡು ಭಾಗಗಳನ್ನಾಗಿ ಮಾಡಬಹುದು. ದಕ್ಷಿಣ ಸಿಮಿಟಿಕ್ ಲಿಪಿಯ ಒಂದು ಪ್ರಕಾರ ಅರೇಬಿಯ ಸಿನಾಯ್ ಸಿರಿಯಗಳಿಗೂ ಮತ್ತೊಂದು ಇಥಿಯೋಪಿಯಕ್ಕೂ ಪ್ರವೇಶಿಸಿ, ಅಲ್ಲಿ ಬೇರೆ ಬೇರೆ ಲಿಪಿಗಳಾಗಿ ಪರಿಣಮಿಸಿದುವು. ದಕ್ಷಿಣ ಅರೇಬಿಯನ್ ಲಿಪಿಗಳಲ್ಲಿ ಸಬೇಯನ್ ಲಿಪಿಯೂ ಉತ್ತರ ಅರೇಬಿಯನ್‍ನಲ್ಲಿ ಥಾಮುಡಿಕ್, ಡೆಡನೈಟ್ ಮತ್ತು ಸಫೈಟಿಕ್ ಲಿಪಿಗಳನ್ನೂ ಕಾಣಬಹುದು. ಕ್ಯಾನನೈಟ್ ಎಂಬುದು ಉತ್ತರ ಸಿಮಿಟಿಕ್‍ಗೆ ಸೇರಿದ ಒಂದು ವರ್ಗ. ಈ ಲಿಪಿಯನ್ನು ಪ್ರಾಚೀನಹೀಬ್ರೂ (ಮೋಬೈಟ್, ಎಡೊಮೈಟ್ ಮತ್ತು ಅಮೊನೈಟ್) ಮತ್ತು ಫಿನೀಷಿಯನ್ ಎಂದು ವಿಭಾಗಿಸಬಹುದು. ಫಿನೀಷಿಯನ್ ಅಕ್ಷರಲಿಪಿಯಿಂದ ಲಿಬಿಯನ್ ಮತ್ತು ಐಬೀರಿಯನ್ ಲಿಪಿಗಳು ಉಗಮವಾದುವು. ಅರಾಮೇಯಿಕ್ ಲಿಪಿಗಳು ಉತ್ತರ ಸಿಮಿಟಿಕ್ ವರ್ಗಕ್ಕೆ ಸೇರಿದವು. ಈ ಲಿಪಿಯ ಅತ್ಯಂತ ಪ್ರಾಚೀನ ಶಾಸನ ಪ್ರ.ಶ.ಪೂ. 9ನೆಯ ಶತಮಾನಕ್ಕೆ ಸೇರಿದ್ದು ಟೆಲ್ ಹಲಾಫ್‍ನಲ್ಲಿ ದೊರಕಿದೆ. ಪ್ರ.ಶ.ಪೂ. 500 ವರ್ಷಗಳ ಅನಂತರ ಅರಾಮೇಯಿಕ್ ಲಿಪಿ ಪರ್ಷಿಯದಲ್ಲಿ ವಿಶೇಷವಾಗಿ ಬಳಕೆಗೆ ಬಂದಿತು. ಆಫ್ಘಾನಿಸ್ಥಾನದಲ್ಲಿ ದೊರಕಿರುವ ಒಂದು ಅಶೋಕನ ಶಾಸನ ಅರಾಮೇಯಿಕ್ ಲಿಪಿಯಲ್ಲಿರುವುದು ಗಮನಾರ್ಹ. ಹೀಬ್ರೂ, ನಬತೇನ್, ಪಲ್ಮೈರೀನ್, ಸಿರಿಯಾಕ್, ಮಂಡೇನ್ ಮತ್ತು ಮನಿಷೇನ್ ಲಿಪಿಗಳು ಅರಾಮೇಯಿಕ್ ಲಿಪಿಯಿಂದ ಉತ್ಪತ್ತಿಯಾದುವು. ಇವೆಲ್ಲವೂ ಸಿಮಿಟಿಕ್ ವರ್ಗಕ್ಕೆ ಸೇರಿದವು. ಇದಕ್ಕೆ ಸೇರದ ಪಹ್ಲವಿ, ಖರೋಷ್ಠಿ, ಅವೆಸ್ತ, ಸೊಗಡಿಯನ್, ಮಂಗೋಲಿಯನ್ ಮುಂತಾದ ಲಿಪಿಗಳೂ ಅರಾಮೇಯಿಕ್ ಲಿಪಿಯಿಂದಲೇ ಉತ್ಪತ್ತಿಯಾದುವು. ಭಾರತದ ವಾಯವ್ಯದಿಕ್ಕಿನ ದೇಶಗಳಲ್ಲಿ ಖರೋಷ್ಠಿಯನ್ನು ಕತ್ತೆಯ ಚರ್ಮದ ಮೇಲೆ ಬರೆಯುತ್ತಿದ್ದುದರಿಂದಲೂ ಈ ಬರೆವಣಿಗೆ ಡೊಂಕಾಗಿ ಇದ್ದುದರಿಂದಲೂ ಇದನ್ನು ಭಾರತೀಯರು ಕತ್ತೆಯ ತುಟಿ (ಖರ+ಓಷ್ಠ) ಎಂದು ಕುಚೋದ್ಯದಿಂದ ಕರೆದಿರಬಹುದು. ಆದರೆ ಖರೋಷ್ಠಿ ಎಂಬ ಪದ ಇರಾನಿಯನ್ ಭಾಷೆಯ ಖರಪೊಸ್ತ ಎಂಬ ಪದದಿಂದ ಬಂದಿರಬೇಕೆಂಬ ವಾದವನ್ನು ಎಲ್ಲರೂ ಒಪ್ಪುತ್ತಾರೆ. ಅರಾಮೇಯಿಕ್ ಲಿಪಿಗೂ ಖರೋಷ್ಠಿ ಲಿಪಿಗೂ ಬಹಳ ಹೋಲಿಕೆಗಳಿವೆ. ಖರೋಷ್ಠಿಲಿಪಿ ಸು. ಪ್ರ.ಶ..ಪೂ. 5ನೆಯ ಶತಮಾನದಲ್ಲಿ ಉಗಮವಾಗಿರಬೇಕು. ಭಾರತದಲ್ಲಿ ಈ ಲಿಪಿ ಇನ್ನೆಲ್ಲಿಯೂ ಬಳಕೆಗೆ ಬರದೆ, ಕೇವಲ ವಾಯುವ್ಯಗಡಿಯಲ್ಲಿ ಮಾತ್ರ ಉಪಯೋಗದಲ್ಲಿತ್ತು. ಅಶೋಕನ ಶಾಬಾಸ್‍ಗರಿ ಮುಂತಾದಲ್ಲಿನ ಶಾಸನಗಳು ಖರೋಷ್ಠಿ ಲಿಪಿಯಲ್ಲಿವೆ. ಬ್ರಾಹ್ಮೀಲಿಪಿ ಪ್ರಾಚೀನ ಭಾರತದಲ್ಲಿ ವಿಶೇಷವಾಗಿ ಬಳಕೆಯಲ್ಲಿತ್ತು. ಬ್ರಹ್ಮನಿಂದ ರಚಿತವಾದ ಅಥವಾ ಬ್ರಹ್ಮವಿದ್ಯೆಗೋಸ್ಕರ ರಚಿತವಾದ ಈ ಲಿಪಿಗೆ ಬ್ರಾಹ್ಮೀ ಎಂದು ಹೆಸರಾಯಿತೆಂದು ಸಾಂಪ್ರದಾಯಿಕ ಮತ. ಆದರೆ ಬ್ರಾಹ್ಮೀಲಿಪಿ ಸಿಮಿಟಿಕ್ ಜನರ ಕೊಡುಗೆ ಎಂಬುದು ಬಹುಮಂದಿ ವಿದ್ವಾಂಸರ ಮತ. ಬ್ರಾಹ್ಮೀಲಿಪಿಯ ಅಕ್ಷರಗಳಿಗೂ ಅರಾಮೇಯಿಕ್‍ಲಿಪಿಗೂ ಅನೇಕ ಹೋಲಿಕೆಗಳಿರುವುದರಿಂದಲೂ ಅರಾಮೇಯಿನ್ ದೇಶಕ್ಕೂ ಭಾರತಕ್ಕೂ ವ್ಯಾಪಾರ ಸಂಬಂಧಗಳಿದ್ದುದರಿಂದಲೂ ಅರಾಮೇಯಿಕ್‍ಲಿಪಿಯೇ ಬ್ರಾಹ್ಮೀಲಿಪಿಯ ಉತ್ಪತ್ತಿಗೆ ಕಾರಣವೆಂದು ಕೆಲವರು ವಾದಿಸುತ್ತಾರೆ. ಬ್ರಾಹ್ಮೀಲಿಪಿ ಭಾರತದಲ್ಲಿಯೇ ಉಗಮವಾಯಿತೆನ್ನುವ ವಿದ್ವಾಂಸರು ಕೆಲವರಿದ್ದಾರೆ. ಈ ಲಿಪಿ ಸಿಂಧೂಲಿಪಿಯ ವಿಕಾಸದಿಂದ ಉಂಟಾಯಿತೆನ್ನುವ ವಿದ್ವಾಂಸರಿಗೂ ಕೊರತೆ ಇಲ್ಲ. ಪ್ರ.ಶ.ಪೂ. 3ನೆಯ ಶತಮಾನದಿಂದ ಪ್ರಾರಂಭವಾಗಿ ಬ್ರಾಹ್ಮೀಲಿಪಿಯ ಶಾಸನಗಳು ದೊರಕಿವೆ. ಅಶೋಕನ ಶಾಸನಗಳು ವಿಶೇಷವಾಗಿ ಈ ಲಿಪಿಯಲ್ಲಿವೆ. ಭಾರತದೇಶದ ಮತ್ತು ಆಗ್ನೇಯ ಏಷ್ಯದ ಎಲ್ಲ ಲಿಪಿಗಳೂ ಅಶೋಕನ ಕಾಲದ ಬ್ರಾಹ್ಮೀಲಿಪಿಯಿಂದ ಉತ್ಪತ್ತಿಯಾದವು. ಸಾತವಾಹನ, ಕದಂಬ, ಗಂಗ, ಬಾದಾಮಿಚಳುಕ್ಯ, ರಾಷ್ಟ್ರಕೂಟ, ಕಲ್ಯಾಣಿಚಾಳುಕ್ಯ, ಹೊಯ್ಸಳ, ವಿಜಯನಗರ ಕಾಲಗಳಲ್ಲಿ ಕ್ರಮೇಣ ವಿಕಾಸಹೊಂದಿ, ಇದು ಇಂದಿನ ಕನ್ನಡಲಿಪಿಯಾಗಿದೆ. ಇದೇ ರೀತಿಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲ ಲಿಪಿಗಳೂ ಬ್ರಾಹ್ಮೀ ಲಿಪಿಗೆ ಋಣಿಯಾಗಿವೆ. ಪಾಶ್ಚಾತ್ಯ ಲಿಪಿಗಳಿಗೆ ಮಾತೃಪ್ರಾಯವಾಗಿರುವ ಗ್ರೀಕ್‍ಲಿಪಿ, ಫಿನೀಷಿಯನ್ನರ ಲಿಪಿಯಿಂದ ಉಗಮವಾಯಿತೆಂಬ ವಾದವನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಪ್ರ.ಶ.ಪೂ. ಸು. 11ನೆಯ ಶತಮಾನದಲ್ಲಿ ಗ್ರೀಕರು ಫಿನೀಷಿಯನ್ನರಿಂದ ಲಿಪಿಯನ್ನು ಕಲಿತರು ಎಂದು ಹೇಳಬಹುದು. ಅತ್ಯಂತ ಪ್ರಾಚೀನ ಗ್ರೀಕ್‍ಲಿಪಿ ಬಲದಿಂದ ಎಡಕ್ಕೆ ಬರೆಯಲ್ಪಡುತ್ತಿತ್ತು. ಆದರೆ ಪ್ರ.ಶ. ಐದನೆಯ ಶತಮಾನದ ಅನಂತರ ಎಡದಿಂದ ಬಲಕ್ಕೂ ಮತ್ತು ಮೇಲಿನಿಂದ ಕೆಳಕ್ಕೂ ಬರೆಯಲ್ಪಡುತ್ತಿತ್ತು. ಗ್ರೀಕರ ಕೈಲಿ ಸಿಮಿಟಿಕ್ ವ್ಯಂಜನಗಳು ಉತ್ತಮವಾದ ವರ್ಣಮಾಲೆಯಾದುವು. ಗ್ರೀಕ್‍ಲಿಪಿಯಿಂದ ಎಟ್ರೂಸ್ಕನ್, ಲಿಡಿಯನ್, ಗ್ಲಗೋಲಿಟಿಕ್, ಸೈರಿಲಿಕ್ ಮುಂತಾದ ಅನೇಕ ಲಿಪಿಗಳು ಉತ್ಪತ್ತಿಯಾದುವು. ಲ್ಯಾಟಿನ್‍ಲಿಪಿ ಎಟ್ರೂಸ್ಕನ್‍ಲಿಪಿಯ ಮೂಲಕ ಗ್ರೀಕ್ ಲಿಪಿಯಿಂದ ಉಗಮವಾಯಿತೆಂದು ಎಲ್ಲರೂ ಒಪ್ಪುತ್ತಾರೆ. ಅತ್ಯಂತ ಪ್ರಾಚೀನ ಲ್ಯಾಟಿನ್‍ಲಿಪಿಯ ಶಾಸನ ಪ್ರ.ಶ.ಪೂ. 6ನೆಯ ಶತಮಾನಕ್ಕೆ ಸೇರಿದೆ. ಎಟ್ರೂಸ್ಕನ್ ವರ್ಣಮಾಲೆಯಲ್ಲಿ ಇಪ್ಪತ್ತಾರು ಅಕ್ಷರಗಳಿದ್ದುವು. ರೋಮನ್ನರು