ಪುಟ:Mysore-University-Encyclopaedia-Vol-1-Part-1.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿದ್ಧತೆಗಳಿಂದ ಬರೆಯಲಾರಂಭಿಸಿದಾಗ ಅಗ್ರಲೇಖನದ ಪದಪ್ರಯೋಗ ಸೂಕ್ಷ್ಮ ಮಾತ್ರವಲ್ಲ, ಸರಳವೂ ಸುಂದರವೂ ಆಗುತ್ತದೆ. ಏಕೆಂದರೆ ಸತ್ಯ ಸರಳತೆಯನ್ನೇ ಆಶ್ರಯಿಸುತ್ತದೆ; ಸೌಂದರ್ಯವನ್ನೇ ಅಪ್ಪುತ್ತದೆ. ಶೈಲಿ ಲಲಿತವೂ ಗಂಭೀರವೂ ಆಗುತ್ತದೆ. ಅಗ್ರಲೇಖನಕ್ಕೆ ಆರಿಸುವ ವಿಷಯವೂ ಪವಿತ್ರತೆಯ, ಗಾಂಭೀರ್ಯದ, ಮಟ್ಟವನ್ನು ಹೆಚ್ಚಿಸುತ್ತದೆ. ಆಗ ತಾನು ಬರೆದ ಲೇಖನದಲ್ಲಿ ಅನಪೇಕ್ಷಿತವಾಗಿ ಭಾಷೆಯ, ಉತ್ತಮೋತ್ತಮ ಸಾಹಿತ್ಯದ, ಲಕ್ಷಣಗಳು ಕಂಡುಬರುತ್ತವೆ. ಹಿರಿಯ ಸಾಹಿತಿ ಪತ್ರಿಕಾಸಂಪಾದಕನೆನಿಸುವುದು ಕಷ್ಟ. ಯಶಸ್ವಿ ಸಂಪಾದಕ ಉತ್ತಮ ಸಾಹಿತಿಯೆನಿಸುವುದೂ ಕಷ್ಟವೇ. ಒಂದು ವೇಳೆ ಇದು ಸಾಧ್ಯವಾದರೆ ಅದೊಂದು ಅಪೂರ್ವ ಸಂಗಮನೇ ಸರಿ. ಅಗ್ರಲೇಖನದಲ್ಲಿ ಸರ್ವತೋಮುಖವಾದ ತಿಳಿವಳಿಕೆಯನ್ನು ಎಷ್ಟು ಅಪೇಕ್ಷಿಸುವೆವೋ ಅಷ್ಟೇ ಲೋಕಾನುಭವ ಮತ್ತು ವಿಮರ್ಶಾಗುಣವನ್ನೂ ಅಪೇಕ್ಷಿಸುತ್ತೇವೆ. ದಿನದಿನ, ಕ್ಷಣ ಕ್ಷಣ, ನಮ್ಮನ್ನು ದುರುಗುಟ್ಟಿಕೊಂಡು ನೋಡುವ, ಹೆದರಿಸುವ ಸಮಸ್ಯೆಗಳಿಗೆ ಪರಿಹಾರೋ ಪಾಯಗಳನ್ನು ಕುರಿತು ಆಲೋಚನೆ ಮಾಡುವಾಗ ಅಗ್ರಲೇಖನಕಾರ ದೂರದೃಷ್ಟಿಯುತನಾಗಿ, ಉದಾರಹೃದಯಿಯಾಗಿ, ಪ್ರತಿಪಕ್ಷಕ್ಕೆ ಯಾವ ರೀತಿಯಿಂದಲೂ ಯಾವ ಪ್ರಮಾಣದಲ್ಲೂ ನೋವಾಗದಂತೆ ತನ್ನ ವಾದ ಸಮರ್ಥನೆ ಮಾಡುವ ಮಧುರಮಾರ್ಗವನ್ನು ಹಿಡಿಯಬೇಕು. ಅವನಲ್ಲಿ ಪರಿಹಾಸ ಮನೋಧರ್ಮವಿರಬೇಕು. ಉಗ್ರತೆಯನ್ನು ತೋರುವ ಅಗ್ರಲೇಖನ ಅಗ್ಗದ ಲೇಖನವಾಗಿ ಪರಿಣಾಮದಲ್ಲಿ ನಿರೀಕ್ಷಿಸಿದ್ದಕ್ಕೆ ವಿರುದ್ಧವೇ ಆದೀತು. ಅಗ್ರಲೇಖನ ಒಂದು ಸ್ವಸಂಪೂರ್ಣಪ್ರಬಂಧ; ಸಾಂಗವಾಗಿ, ತೀಡಿ ತಿದ್ದಿದ, ಕಣ್ಡರಿಸಿದ ಒಂದು ರೂಪಕರ್ಮ. ಇದರಲ್ಲಿ ಯಾವ ಕಳಂಕವೂ ಇರಬಾರದು. ನಿಜವನ್ನು ಮುಚ್ಚಿಡುವುದೂ ಸುಳ್ಳನ್ನು ಸೂಚಿಸುವುದೂ ನ್ಯಾಯವಲ್ಲ, ನೀತಿಯಲ್ಲ, ಅಗ್ರಲೇಖನ ಕ್ಷೇತ್ರ ಕುರುಕ್ಷೇತ್ರ ಧರ್ಮಕ್ಷೇತ್ರಗಳ ಐಕ್ಯಸ್ಥಳ. (ಟಿ.ಟಿ.ಎಸ್.) ಅಗ್ರವಾರ್ತೆ : ವೃತ್ತಪತ್ರಿಕೆಯಲ್ಲಿ ಪ್ರಕಟವಾಗುವ ನಾನಾರೀತಿಯ ಸುದ್ದಿ ಸಮಾಚಾರ ಗಳಲ್ಲಿ ಅತಿಮುಖ್ಯವಾದುದು. ಸಾಮಾನ್ಯವಾಗಿ ಪತ್ರಿಕೆಯ ಮೊದಲ ಪುಟದ ಮೊದಲ ಸಾಲಿನಲ್ಲೇ ಅತಿ ದೊಡ್ಡ ಅಕ್ಷರಗಳಲ್ಲಿ ಅಚ್ಚುಗೊಳ್ಳುವ ಯೋಗ್ಯತೆಯುಳ್ಳದ್ದು. ಇದನ್ನು ನಿಶ್ಚಯ ಮಾಡಬೇಕಾದರೆ ಸುದ್ದಿಯ ಮೌಲ್ಯವೊಂದನ್ನೇ ಅಲ್ಲ, ವಾಚಕರ ಆತುರ, ಅಪೇಕ್ಷೆ, ಮನೋಧರ್ಮ, ಆತಂಕ, ಕ್ಷೇಮ ಇವುಗಳನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳಬೇಕು. ನಿಷ್ಕಾರಣವಾಗಿ ಜನತೆಯ ಚಿತ್ತಸ್ವಾಸ್ಥ್ಯವನ್ನು ಕೆಡಿಸಿ ಗುಲ್ಲೆಬ್ಬಿಸುವ ವಾರ್ತೆ ಎಷ್ಟೇ ಕೌತುಕಕಾರಿಯಾಗಿರಲಿ ಅದು ಪತ್ರಿಕೆಯ ಅಗ್ರವಾರ್ತೆಯಾಗಬಾರದು. ಪತ್ರಿಕೆ ಜನತೆಯನ್ನು ಸನ್ಮಾರ್ಗದಲ್ಲಿ ನಡೆಸುವ ಕೈದೀವಿಗೆ, ಹಿತವನ್ನು ರಕ್ಷಿಸುವ ಕಾವಲುನಾಯಿ ಎಂಬ ಮಾತು ಸದಾ ನೆನಪಿನಲ್ಲಿರಬೇಕು. ಒಂದೆರಡು ದಿನಗಳ ಅಥವಾ ತಿಂಗಳ ಅಭ್ಯಾಸದಿಂದ ಲೇಖಕನಿಗೆ ಈ ಶಕ್ತಿ ಲಭ್ಯವಾಗುವುದಿಲ್ಲ; ಆ ವೃತ್ತಿಯ ದೀರ್ಘಕಾಲದ ಅನುಭವದಿಂದ ಇದಕ್ಕೆ ಬೇಕಾದೊಂದು ಅಪೂರ್ವಶಕ್ತಿ ಕೈಗೂಡುತ್ತದೆ. ಅಗ್ರವಾರ್ತಾನಿರೂಪಣೆಯಲ್ಲಿ ಬಳಸುವ ಪ್ರತಿಯೊಂದು ಮಾತಿನಲ್ಲೂ ರಚಿಸುವ ಒಂದೊಂದು ವಾಕ್ಯದ ಸರಳತೆಯಲ್ಲೂ ಎಲ್ಲಕ್ಕಿಂತ ಹೆಚ್ಚಾಗಿ ತೋರಿಸುವ ಪ್ರಾಮಾಣಿ ಕತೆಯಲ್ಲೂ ಆ ಸಮಾಚಾರದ ಬೆಲೆ ಅಡಗಿರುತ್ತದೆ. ಅನಂತರ ಒಟ್ಟು ರಚನೆಗೆ ಒಂದು ಹೆಸರನ್ನೂ ಕೊಡಬೇಕು. ಇದು ಮೂಲರಚನೆಗಿಂತಲೂ ಕಷ್ಟವಾದ ಕೆಲಸ. ಅಗ್ರವಾರ್ತೆಯನ್ನು ವಾಚಕರು ಓದುವಾಗ, ಅವರ ಮನಸ್ಸಿನ ಮೇಲಾಗಬಹುದಾದ ಒಳಿತಿಗಿಂತ ಹೆಚ್ಚಾಗಿ ವಿಪತ್ತಿನ ಪ್ರಜ್ಞೆ ಬರೆಯುವ ಸಂಪಾದಕನಿಗೆ ಇರಬೇಕು. ಇಂಥ ವಿಪತ್ತಿನಿಂದ ಸಮಾಜ ಸುರಕ್ಷಿತವಾಗಿರಬೇಕು. ಸದುದ್ದೇಶ ಉಳ್ಳವರ ಮೂಲಕವಾಗಿ ಬಂದ ಬರೆಹದಿಂದ ದುಷ್ಟಜನ ಶಿಕ್ಷೆ, ಶಿಷ್ಟಜನ ಸಂರಕ್ಷಣೆ, ಇವೆರಡೂ ಆಗುತ್ತವೆ. ಮನೋವಿಜ್ಞಾನದಲ್ಲಿ ಕೊಂಚ ಪಳಗಿದವನಾಗಿ, ಉದಾರಿಯೂ ನಿರ್ಮಲನೂ ಆಗಿದ್ದರೆ ಲೇಖಕ ಬಳಸುವ ಮಾತು ಸಹಜವಾಗಿ ಸಾಧುವೂ ಸೂಟಿಯೂ ಆಗಿರುತ್ತದೆ; ಗಂಭೀರ ಮಾತ್ರವಲ್ಲ, ಪವಿತ್ರತೆಯ ಪ್ರಭೆಯಿಂದ ಬೆಳಗುತ್ತಿರುತ್ತದೆ. ಪತ್ರಿಕಾವಾಚಕನಿಗೆ ಆಸಕ್ತಿ ಇಲ್ಲದ ಸಮಾಚಾರವೇ ಇಲ್ಲ. ಆದಕಾರಣ ಈ ಆಸಕ್ತಿಗೆ ಒಳ್ಳೆ ಸಂಸ್ಕಾರ ಕೊಡುವ ಸಾರ್ಥಕ ಶಬ್ದಗಳನ್ನು ಲೇಖಕ ಬಳಸಬೇಕು; ಒಳ್ಳೆ ಸಂಯಮವನ್ನು ಕೊಡುವ ಸಾತ್ತ್ವಿಕ ಶೈಲಿಯನ್ನು ಆಶ್ರಯಿಸಬೇಕು. ಆಗ ಅಗ್ರವಾರ್ತೆಯ ಪೂರ್ಣ ಪ್ರಯೋಜನ ದೊರಕಿದಂತಾಗುತ್ತದೆ. (ಟಿ.ಟಿ.ಎಸ್.) ಅಗ್ರಶೀರ್ಷಿಕೆ : ವೃತ್ತಪತ್ರಿಕೆಗಳಲ್ಲಿ ಬಹು ಮುಖ್ಯವೆಂದು ಕಂಡುಬಂದ ಸುದ್ದಿಗಳಿಗೆ ಒಂದೊಂದಕ್ಕೂ ಒಂದೊಂದು ಶೀರ್ಷಿಕೆ ಇರುತ್ತದೆಯಾದರೂ ಎಲ್ಲ ಸುದ್ದಿಗಳನ್ನೂ ಮೀರಿಸಿದ ಬಿಸಿ ಬಿಸಿ ಸುದ್ದಿಗೆ ಸಾಮಾನ್ಯ ಶೀರ್ಷಿಕೆಗಿಂತ ಮುಖ್ಯವಾದ ದೊಡ್ಡಕ್ಷರದ ಶೀರ್ಷಿಕೆ ಅಗತ್ಯವಾಗುತ್ತದೆ. ಅದನ್ನು ಅಗ್ರಶೀರ್ಷಿಕೆ ಎನ್ನುತ್ತಾರೆ. ಸಾಮಾನ್ಯವಾಗಿ ಇದು ಪತ್ರಿಕೆಯ ಮೊದಲ ಪುಟದ ಮೊದಲ ಸಾಲಿನಲ್ಲಿ ಅತಿದೊಡ್ಡ ಅಕ್ಷರಗಳಲ್ಲಿರುತ್ತದೆ. ಅದರ ಕೆಳಗಡೆ ವಿಷಯಕ್ಕೆ ಸಂಬಂಧಪಟ್ಟ ಶೀರ್ಷಿಕೆ ಉಪಶೀರ್ಷಿಕೆ ವಿಷಯಸಾರಾಂಶ ಅನಂತರ ವಿಷಯದ ವಿವರಗಳು ಒಂದಕ್ಕಿಂತ ಒಂದು ಸಣ್ಣ ಅಕ್ಷರಗಳಲ್ಲಿ ಅಚ್ಚಾಗುತ್ತವೆ. ವಾಚಕರ ಗಮನವನ್ನು ಮೊಟ್ಟಮೊದಲಿಗೆ ತನ್ನ ಕಡೆ ಸೆಳೆಯುವ ಉದ್ದೇಶ ಅಗ್ರಶೀರ್ಷಿಕೆಯದು. ಅದರ ಗಾತ್ರವಷ್ಟೇ ದೊಡ್ಡದಾಗಿದ್ದರೆ ಸಾಲದು. ಅದರ ಒಕ್ಕಣೆ ಚಿಕ್ಕದಾಗಿ, ಕಣ್ಮನಗಳನ್ನು ಸೆಳೆವಂತಿದ್ದು ಗಂಭೀರವಾಗಿರಬೇಕಾದ್ದೂ ಅಷ್ಟೇ ಅಗತ್ಯ. (ಟಿ.ಟಿ.ಎಸ್.) ಅಗ್ರಹಾರ : ವಿಶೇಷವಾಗಿ ಬ್ರಾಹ್ಮಣರಿಗೆ ಜೀವನಾಧಾರವಾಗಿ ಬಿಟ್ಟು ಕೊಟ್ಟ ಗ್ರಾಮ. ಇದನ್ನು ಚತುರ್ವೇದಿ ಮಂಗಲ, ಶ್ರೋತ್ರೀಯ ಗ್ರಾಮ ಎಂದೂ ಶಾಸನಗಳಲ್ಲಿ ಕರೆಯಲಾಗಿದೆ. ವೇದವೇದಾಂಗಪಾರಂಗತರಾದ, ಷಟ್ಕರ್ಮನಿರತರಾದ ಬ್ರಾಹ್ಮಣೋತ್ತಮರಿಗೆ ಆಳರಸರು ನೆಲಹೊಲಗಳನ್ನು ಬ್ರಹ್ಮದೇಯ ಅಥವಾ ಬ್ರಹ್ಮದಾಯವಾಗಿ ದಾನಕೊಡುವ ಪದ್ಧತಿ ಕರ್ನಾಟಕವೂ ಸೇರಿದಂತೆ ಭಾರತದ ಎಲ್ಲೆಡೆಗಳಲ್ಲಿಯೂ ಹಿಂದಿನಿಂದಲೂ ವಾಡಿಕೆಯಲ್ಲಿತ್ತು. ನಾನಾ ಗೋತ್ರಗಳಿಗೆ, ಪ್ರವರಗಳಿಗೆ, ಶಾಖೆಗಳಿಗೆ ಸೇರಿದ ನಿರ್ದಿಷ್ಟ ಸಂಖ್ಯೆಯ ಬ್ರಾಹ್ಮಣರಿಗೆ, ಅವರು ಗೃಹಸ್ಥಾಶ್ರಮ ನೀತಿನಿಯಮಗಳನ್ನೂ ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ ಎಂಬ ಈ ಸ್ಮ್ನೃತಿಸಿದ್ಧವಾದ ಕಾರ್ಯಗಳನ್ನೂ ನೆರವೇರಿಸಿಕೊಂಡು ಹೋಗಲೆಂದು ಒಂದು ಗ್ರಾಮದ ನೆಲಹೊಲಗಳನ್ನೂ ಮನೆಯ ನಿವೇಶನಗಳನ್ನೂ ವೃತ್ತಿಗಳಾಗಿ ವಿಂಗಡಿಸಿ ಸಾಮೂಹಿಕವಾಗಿ ದಾನ ಕೊಟ್ಟಲ್ಲಿ ಅಗ್ರಹಾರವೊಂದರ ಸೃಷ್ಟಿಯಾಯಿ ತಂತೆ. ಕೆಲವು ಶಾಸನಗಳಲ್ಲಿ ಈ ಪಾರಿಭಾಷಿಕ ಪದವನ್ನು ಅಗ್ರಾಹಾರ ಎಂದೂ ಬರೆಯಲಾಗಿದೆ. ಅಗ್ರಹಾರದ ಮೂಲರೂಪ ‘ಅಗ್ರಾಹಾರ’ (ಅಗ್ರ+ಆಹಾರ) ಎಂದೇ ಇದ್ದಿರಬೇಕೆಂಬುದು ಕೆಲವು ವಿದ್ವಾಂಸರ ಅಬಿsಪ್ರಾಯ. ಕರ್ನಾಟಕದಲ್ಲಿ ಗೌತಮಸಗೋತ್ರದ ಶುಕ್ಲಯಜುರ್ವೇದದಲ್ಲಿ ಪಾರಂಗತನಾದ ಬದಿರಕುಲದ ಬ್ರಾಹ್ಮಣನೊಬ್ಬನಿಗೆ ಮಹಿಷ ವಿಷಯದ ಪೆಬ್ರ್ಬಟ ಗ್ರಾಮವನ್ನು ಬ್ರಹ್ಮದೇಯನ್ಯಾಯದ ರೀತ್ಯ ಅಗ್ರಹಾರವಾಗಿ ಕೊಡಲಾಯಿತೆಂದು 5ನೆಯ ಶತಮಾನದ ಉತ್ತರಾರ್ಧದ್ದೆನ್ನಬಹುದಾದ ಕದಂಬ ಕೃಷ್ಣವರ್ಮನ ಹೆಬ್ಬಟ ತಾಮ್ರಶಾಸನದಲ್ಲಿ ಹೇಳಲಾಗಿದೆ. 10-11ನೆಯ ಶತಮಾನಗಳ ಶಾಸನಗಳಿಂದ ತಿಳಿದುಬರುವಂತೆ ಸ್ಥಾನಕುಂದೂರ (ಇಂದಿನ ತಾಳಗುಂದ) ನಿಷಾವಿವಂತ ವೈದಿಕ ಬ್ರಾಹ್ಮಣರ ವಾಸಸ್ಥಾನವಾಗಿತ್ತು. ವಾತಾಪಿ (ಇಂದಿನ ಬಾದಾಮಿ) ಎರಡುನೂರು ಸದಸ್ಯರನ್ನೊಳಗೊಂಡ ಮಹಾಚಾತುರ್ವಿದ್ಯ ಸಮುದಾಯದ (ವೈದಿಕ ಬ್ರಾಹ್ಮಣರ ಸಂಘ) ನೇರ ಆಡಳಿತಕ್ಕೊಳಗಾಗಿದ್ದು, ಚತುರ್ದಶ ವಿದ್ಯಾಸ್ಥಾನ ಎಂದು ಅದು ಹೆಸರುವಾಸಿಯಾಗಿತ್ತು. ಅದರಂತೆಯೇ ಆರ್ಯಪುರ (ಇಂದಿನ ಐಹೊಳೆ) ಐದುನೂರು ಸದಸ್ಯರನ್ನೊಳಗೊಂಡ ಮಹಾಚಾತುರ್ವಿದ್ಯ ಸಮುದಾಯದ ಆಡಳಿತಕ್ಕೂಳ ಗಾಗಿತ್ತು. ಇವು ಅಗ್ರಹಾರಗಳೆಂದು ಶಾಸನಗಳಲ್ಲಿ ಸ್ಪಷ್ಟವಾಗಿ ಹೇಳಿಲ್ಲವಾದರೂ ಈ ಮೂರೂ ಪ್ರಸಿದ್ಧ ಕೇಂದ್ರಗಳೂ ಅಗ್ರಹಾರಗಳೇ ಆಗಿರಬೇಕು. ಕಾಲ ಕಳೆದಂತೆ ಇಂಥ ಪ್ರಾಚೀನ ಅಗ್ರಹಾರಗಳ ನಿಜವಾದ ಇತಿಹಾಸ ಮಾಸಿಹೋಗಿ, ಮಧ್ಯಯುಗದ ಶಾಸನಗಳಲ್ಲಿ ಇವನ್ನು ಅನಾದಿ ಅಗ್ರಹಾರ, ಜನಮೇಜಯ ದತ್ತಿಯ ಮಹಾಗ್ರಹಾರ, ಶ್ರೀ ರಾಮದತ್ತಿ ಮಹಾಗ್ರಹಾರ ಎಂದು ಮುಂತಾಗಿ ಕರೆಯಲಾಗಿದೆ. ಕರ್ನಾಟಕದ ಇತಿಹಾಸದ ಮಧ್ಯಯುಗದಲ್ಲಿ ಅನೇಕಾನೇಕ ಅಗ್ರಹಾರಗಳು ಅಸ್ತಿತ್ವಕ್ಕೆ ಬಂದವು. ಆ ಕಾಲದ ಹಲವು ಶಾಸನಗಳು ಅಗ್ರಹಾರಗಳ ದೀರ್ಘ ವರ್ಣನೆಗಳನ್ನು ನೀಡಿವೆ. ಶಿವಮೊಗ್ಗ ಜಿಲ್ಲೆಯ ಸರ್ವನಮಸ್ಯದನಾದಿ ಅಗ್ರಹಾರ ಕುಪ್ಪಟೂರನ್ನು ಶಾಸನ ವೊಂದರಲ್ಲಿ ವಿಪ್ರಸುರ ಚಿತ್ರನೀಕೇತನ ಮಾಳೆಯಿಂದೆ ಕಣ್ಗೊಳಿಪುದು ಕುಪ್ಪಟೂರ್ ಸಕಳವಿದ್ಯೆಗೆ ತಾನೆನೆ ಜನ್ಮ ಭೂತಳಂ ಎಂದು ಪ್ರಶಂಸಿಸಲಾಗಿದೆ. ಕಲ್ಯಾಣದ ಚಾಳುಕ್ಯ ಚಕ್ರವರ್ತಿ 6ನೆಯ ವಿಕ್ರಮಾದಿತ್ಯ ನಾನಾ ಗೋತ್ರಗಳಿಗೆ ಸೇರಿದ ಸಕಲಶಾಸ್ತ್ರವೇತ್ತರಾದ ಹಲವು ಬ್ರಾಹ್ಮಣರನ್ನು ದ್ರಾವಿಡ ದೇಶದಿಂದ ಬರಮಾಡಿಕೊಂಡು, ಕೋಗಳಿ-500ರ ನೀರಗುಂದ ಗ್ರಾಮವನ್ನು ಅಗ್ರಹಾರವೆಂದು ಘೋಷಿಸಿ (ಅಗ್ರಹಾರೀಕೃತ್ಯ) ಅವರಿಗೆ ದಾನ ಮಾಡಿದನೆಂಬ ವಿಷಯ ಅವನ 1087ರ ನೀಲಗುಂದ ತಾಮ್ರಶಾಸನದಿಂದ ತಿಳಿದುಬರುತ್ತದೆ. ಅಗ್ರಹಾರಗಳನ್ನು ನಿರ್ಮಿಸುವ ಪದ್ಧತಿ ಇತ್ತೀಚಿನವರೆಗೂ ರೂಡಿsಯಲ್ಲಿತ್ತು. ರಾಜಕೀಯ ರಂಗದಲ್ಲಿ ಅಸ್ತವ್ಯಸ್ತತೆ ಉಂಟಾದಾಗಲೆಲ್ಲ ಹಿಂದೆ ಸೃಷ್ಟಿಸಲಾದ ಅಗ್ರಹಾರಗಳು ದುರ್ಜನರ ಕೈಗೆ ಸಿಕ್ಕಿ ದುರುಪಯೋಗಕ್ಕೆ ತುತ್ತಾಗುತ್ತಿದ್ದವು ಎಂಬುದಕ್ಕೆ ಶಾಸನಗಳಲ್ಲಿ ಸೂಚನೆಗಳಿವೆ. 2ನೆಯ ಪುಲಕೇಶಿಯ ಆಳ್ವಿಕೆ ಕೊನೆಗೊಂಡು, ಕರ್ನಾಟಕ ಪಲ್ಲವರ ಆಕ್ರಮಣಕ್ಕೆ ಒಳಗಾದಾಗ ವಿನಷ್ಟವಾದ ಬ್ರಹ್ಮಾದೇಯಗಳನ್ನು ಪುಲಕೇಶಿಯ ಮಗನಾದ 1ನೆಯ ವಿಕ್ರಮಾದಿತ್ಯ ತಾನು ಪುನಃ ಅಗ್ರಹಾರಗಳನ್ನಾಗಿ ಸೃಷ್ಟಿಸಿದನಂತೆ. ವಿಜಯನಗರದ ಸಾಮ್ರಾಟರು ಸ್ವತಃ ಅನೇಕ ಹೊಸ ಅಗ್ರಹಾರಗಳನ್ನು ಸೃಷ್ಟಿಸಿದರಲ್ಲದೆ, ಪ್ರಾಯಶಃ ಮುಸಲ್ಮಾನರ ದಾಳಿಗಳಿಂದಾಗಿ ವಿನಷ್ಟವಾಗುತ್ತಿದ್ದ ಹಲವು ಅಗ್ರಹಾರಗಳನ್ನು ಪುನಃ ಸ್ಥಾಪಿಸಿದರೆಂದು ಅಂದಿನ ಶಾಸನಗಳಿಂದ ತಿಳಿದುಬರುತ್ತದೆ. ಅಗ್ರಹಾರ ಎಂಬುದು ಬ್ರಾಹ್ಮಣರ ವಾಸಕ್ಕಾಗಿ ಮೀಸಲಿರಿಸಿದ್ದ ಗ್ರಾಮವನ್ನು ಸೂಚಿಸುತ್ತವೆ ಯಾದರೆ, ಬ್ರಹ್ಮಪುರಿ ಎಂಬುದು ನಗರ ಪಟ್ಟಣಗಳಲ್ಲಿ ಬ್ರಾಹ್ಮಣರ ವಾಸಕ್ಕಾಗಿ ಮೀಸಲಿರಿಸಿದ್ದ ಕೇರಿಗಳನ್ನು ಸೂಚಿಸುತ್ತದೆ. ಅಲ್ಲದೆ ಶೈವಧರ್ಮಾವಲಂಬಿಗಳ, ಅದರಲ್ಲೂ ಮುಖ್ಯವಾಗಿ ವೀರಶೈವರ ವಾಸಕ್ಕೆಂದು ಸೃಷ್ಟಿಸಲಾದ ಅಗ್ರಹಾರಗಳನ್ನು ಶಿವಪುರಗಳೆಂದು ಶಾಸನಗಳಲ್ಲಿ ಹೆಸರಿಸಲಾಗಿದೆ.