ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-1-Part-1.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗ್ರಹಾರಗಳಲ್ಲಿ ಬ್ರಾಹ್ಮಣೇತರರೂ ಮುಖ್ಯವಾಗಿ ಪಾರಂಪರ್ಯ ಕಸಬುದಾರರೂ ತಮ್ಮ ತಮ್ಮ ಕೇರಿಗಳಲ್ಲಿ ವಾಸಿಸುತ್ತಿದ್ದರಾದರೂ ಅಲ್ಲಿಯ ನೆಲಹೊಲಗಳ ಮೇಲಿನ ಸರ್ವಸ್ವಾಮ್ಯವೂ ಬ್ರಾಹ್ಮಣರದೇ ಆಗಿತ್ತು. ಅಗ್ರಹಾರದ ಆಡಳಿತಸೂತ್ರ ಅಲ್ಲಿಯ ಬ್ರಾಹ್ಮಣ ಗೃಹಪತಿಗಳನ್ನೊಳಗೊಂಡ ಮಹಾಜನರ ಕೈಯಲ್ಲಿತ್ತು. ಕರ್ನಾಟಕದ ಅಗ್ರಹಾರಗಳ ಮಹಾಜನರ ಗುಣಗಾನಗಳು ಅನೇಕ ಶಾಸನಗಳಲ್ಲಿ ಕಾಣಸಿಗುತ್ತವೆ. ಉದಾಹರಣೆಗೆ ಸವಸಿಯ (ಧಾರವಾಡ ಜಿಲ್ಲೆಯ ಸಂಶಿ) 400 ಮಹಾಜನರನ್ನು 1148ರ ಒಂದು ಶಾಸನದಲ್ಲಿ ಯಮನಿಯಮಸ್ವಾಧ್ಯಾಯ ಧ್ಯಾನಧಾರಣ ಮೋನಾನುಷಾವಿನ ಪರಾಯಣರು ಋಗ್ಯಜುಸ್ಸಾಮಾಥರ್ವವೇದಪಾರಗರು ಅಶೇಷವೈಶೇಷಿಕ ನೈಯಾಯಿಕ ಲೋಕಾಯತ ಸಾಂಖ್ಯ ಬೌದ್ಧ ಮೀಮಾಂಸಾದ್ಯನೇಕ ತರ್ಕಶಾಸ್ತ್ರಪರಿಣತರು ಮನ್ವಾದ್ಯಷ್ಟಾದಶ ಧರ್ಮಕುಶಳರು ಅಗ್ನಿಷ್ಟೋಮಾದಿ ಸಪ್ತಸೋಮ ಸಂಸ್ಥಾವಭೃಥಾವಗಾಹನ ಪವಿತ್ರೀಕೃತಗಾತ್ರರು ಸರ್ವಾತಿಥ್ಯಾಭ್ಯಾಗತವಿಶೇಷಾಷ್ಟ ವಿದ್ವಜ್ಜನಪೂಜಿತರು ಸ್ವಧರ್ಮ ಪ್ರತಿಪಾಲಕರು ವಿಚಾರಸಂಪನ್ನರು ಶಾಪಾನುಗ್ರಹ ಸಮರ್ಥರು ಶ್ರೀಮನ್ಮಹಾವಡ್ಡಗ್ರಾಮ ಅಗ್ರಹಾರಂ ಸವಸಿಯ ಅಶೇಷ ಮಹಾಜನಂ ನಾಲ್ನೂರ್ವರು ಎಂದು ವರ್ಣಿಸಲಾಗಿದೆ. ಕುಪ್ಪಟೂರಿನ ಮಹಾಜನರು ಋಗ್ಯಜುಸ್ಸಾಮಾಥರ್ವಣ ವೇದಾರ್ಥ ತತ್ತ್ವಜ್ಞರೂ ನಾಟಕ ಇತಿಹಾಸ ಮೀಮಾಂಸಾ ವಾತ್ಸ್ಯಾಯನ ಭರತ ಗಣಿತ ಇತ್ಯಾದಿ ಶಾಸ್ತ್ರಗಳಲ್ಲಿ ಪ್ರವೀಣರೂ ಆಗಿದ್ದರು. ಮಹಾಜನರು ಮಾಡಬೇಕಾಗಿದ್ದ ಷಟ್ಕರ್ಮಗಳಲ್ಲಿ ಅಧ್ಯಯನ ಮತ್ತು ಅಧ್ಯಾಪನಗಳೂ ಮುಖ್ಯವಾಗಿದ್ದುದರಿಂದ ಅಗ್ರಹಾರಗಳನ್ನು ಸ್ಥಾಪಿಸುವುದರ ಮೂಲಕ ವಿದ್ಯಾಕೇಂದ್ರಗಳನ್ನೇ ಸ್ಥಾಪಿಸಿದಂತಾಗಿ, ವಿದ್ಯಾಪ್ರಸಾರಕಾರ್ಯ ಸತತ ಹಾಗೂ ಸುಗಮವಾಗಿ ನಡೆಯುತ್ತಿತ್ತು. ಮಹಾಜನರ ಸಂಸ್ಥೆ ಸಾಕಷ್ಟು ಸ್ಥಿರವಾಗಿ ಸ್ಥಾಪಿತವಾಗಿತ್ತು. ಆದರೆ 10ನೆಯ ಶತಮಾನದ ಉತ್ತರ ಮೇರೂರಿನ ಶಾಸನ ಇತ್ಯಾದಿಗಳಿಂದ ತಿಳಿದುಬರುವ ರೀತಿಯ ಚುನಾವಣೆಗಳು ಮತ್ತು ಸಮಿತಿಗಳನ್ನೊಳಗೊಂಡಿದ್ದ ತಮಿಳುನಾಡಿನ ಸಭಾ ರೀತಿಯ ಆಡಳಿತ ವ್ಯವಸ್ಥೆಯನ್ನು ಕರ್ನಾಟಕದ ಮಹಾಜನರೂ ರಚಿಸಿಕೊಳ್ಳುತ್ತಿದ್ದುದು ಬೆಳಕಿಗೆ ಬಂದಿಲ್ಲ. ಅವರೇ ಸಾಮೂಹಿಕವಾಗಿ ಗ್ರಾಮಾಡಳಿತವನ್ನು ನಿರ್ವಹಿಸುತ್ತಿದ್ದರೆಂದು ಕಾಣುತ್ತದೆ. ಇನ್ನೂರು, ಐನೂರು ಎಂದು ಮುಂತಾದ ಈ ಮಹಾಜನರ ಸಂಖ್ಯೆಗಳೂ ಇದನ್ನೇ ಸೂಚಿಸುತ್ತವೆ. ಇಷ್ಟು ಸಂಖ್ಯೆಯಲ್ಲಿ ಸದಸ್ಯರನ್ನು ಆರಿಸುವುದಾಗಲಿ ಚುನಾಯಿಸುವುದಾಗಲೀ ವ್ಯಾವಹಾರ್ಯವೆನಿಸಿರಲಾರದು. ಇವು ಬಹುಶಃವಯಸ್ಕ ಬ್ರಾಹ್ಮಣರ, ಇಲ್ಲವೇ ಬ್ರಾಹ್ಮಣ ಗೃಹಸ್ಥರ ಸಂಖ್ಯೆಯನ್ನು ಸೂಚಿಸುವಂತಿವೆ. ಈ ಮಹಾಜನರು ಒಂದು ದೇವಸ್ಥಾನದಲ್ಲೋ ಮಂಟಪದಲ್ಲೋ ಸಭೆ ಸೇರಿ, ಗ್ರಾಮಾಡಳಿತಕ್ಕೆ ಸಂಬಂದಿsಸಿದ ವಿಷಯಗಳನ್ನು ಚರ್ಚಿಸುತ್ತಿದ್ದರು. ಸಾಮಾನ್ಯವಾಗಿ, ಎಲ್ಲ ಮುಖ್ಯಗ್ರಾಮಕಾರ್ಯಗಳೂ ನಡೆಯುತ್ತಿದ್ದುದು ಅವರ ಸನ್ನಿದಿsಯಲ್ಲೇ. ಕೆರೆ ಕಾಲುವೆಗಳನ್ನು ನಿರ್ಮಾಣ ಮಾಡುವುದರ ಮೂಲಕ ವ್ಯವಸಾಯವನ್ನು ಅಬಿsವೃದ್ಧಿಗೊಳಿಸುವುದು, ಮಠ ದೇವಸ್ಥಾನಗಳ ಆಡಳಿತವನ್ನು ನಿರ್ವಹಿಸುವುದು, ದಾನಿಗಳು ಭೂಮಿಯನ್ನೋ ಹಣವನ್ನೋ ದಾನ ಮಾಡಿದರೆ ಅದನ್ನು ರಕ್ಷಿಸಿ ಧರ್ಮಕಾರ್ಯಗಳಿಗಾಗಿ ವಿನಿಯೋಗಿಸುವುದು-ಇವು ಈ ಅಗ್ರಹಾರದ ಮಹಾಜನಗಳ ಕರ್ತವ್ಯಗಳಾಗಿದ್ದುವು. ಊರಿನಲ್ಲಿ ಯಾವುದಾದರೂ ವಿವಾದ ತಲೆದೋರಿದಾಗ ಅದು ಮಹಾಜನರ ಸಮಕ್ಷಮದಲ್ಲಿ ಇತ್ಯರ್ಥವಾಗುತ್ತಿತ್ತು. ಕೆಲವು ಅಗ್ರಹಾರಗಳಲ್ಲಿ ಸುಶಿಕ್ಷಿತ ರಕ್ಷಣಾಪಡೆಗಳಿದ್ದುದೂ ಕೋಟೆಕಂದಕಗಳಿದ್ದುದೂ ಹಲವು ಬಾರಿ ಮಹಾಜನರು ಶಾಸ್ತ್ರಗಳಲ್ಲಿ ಮಾತ್ರವಲ್ಲದೆ ಶಸ್ತ್ರಗಳಲ್ಲಿಯೂ ಪರಿಣತ ರಾಗಿದ್ದರೆಂಬುದೂ ಶಾಸನಗಳಿಂದ ತಿಳಿಯುತ್ತದೆ. ಕೆಲವು ಸಂದರ್ಭಗಳಲ್ಲಿ ಮಹಾಜನರೇ ಶೌರ್ಯಪ್ರದರ್ಶನ ಮಾಡಿದ ಉದಾಹರಣೆಗಳೂ ಇವೆ. ಅಗ್ರಹಾರಗಳು ಉನ್ನತ ವಿದ್ಯಾಕೇಂದ್ರಗಳಾಗಿದ್ದುವಷ್ಟೇ ಅಲ್ಲದೆ, ಸ್ವಯಂ ಆಡಳಿತ ಪದ್ಧತಿಯ ಮಾದರಿಗಳೂ ಆಗಿದ್ದುವು. ಪ್ರಾಚೀನ ಸಂಪ್ರದಾಯ ಮತ್ತು ವಿದ್ವತ್‍ಧಾರೆ ಅವಿಚ್ಫಿನ್ನವಾಗಿ ಹರಿದು ಬರಲು ಈ ಅಗ್ರಹಾರಗಳು ಬಹು ಸಹಾಯಕವಾಗಿದ್ದುವು. (*) ಅಗ್ರಹಾರ ಬಾಚಹಳ್ಳಿ : ಮಂಡ್ಯಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕಸಬೆಯಿಂದ ಈಶಾನ್ಯಕ್ಕೆ ಸು.5ಕಿಮೀ ದೂರದಲ್ಲಿರುವ ಗ್ರಾಮ. 13ನೆಯ ಶತಮಾನದಲ್ಲಿ ಹೊಯ್ಸಳ ಸೋಮೇಶ್ವರ ವಿಜಯಮಹೋತ್ಸವವನ್ನು ಆಚರಿಸುವಾಗ ಈ ಗ್ರಾಮ ಸ್ಥಾಪಿತವಾದಂತೆ ತೋರುತ್ತದೆ. ಇಲ್ಲಿ ಹುಣಸೇಶ್ವರ ದೇವಾಲಯವಿದೆ. ದೇವಾಲಯದ ಆಗ್ನೇಯಕ್ಕೆ ಇರುವ ಮೂರು ಗರುಡಗಂಬಗಳು ಕುತೂಹಲಕಾರಿಯಾದವು. ಅವುಗಳ ಎತ್ತರ 12'. ಪತ್ರಿಯೊಂದು ಕಂಬದ ಮೇಲೂ ಮಟ್ಟಸ ಚಪ್ಪಡಿಗಳಿವೆ. ಅವುಗಳ ಮೇಲೆ ಸು.2' ಎತ್ತರದ ಆನೆಯ ಶಿಲ್ಪಗಳಿವೆ. ಮಧ್ಯದ ಕಂಬದ ಆನೆಯ ಮೇಲೆ ಒಬ್ಬ ಪುರುಷ ಮತ್ತು ಅವನ ಹಿಂದೆ ಒಬ್ಬ ಸ್ತ್ರೀ, ಉಳಿದೆರಡು ಕಂಬಗಳ ಮೇಲೆ ಒಬ್ಬರ ಹಿಂದೆ ಒಬ್ಬರಂತೆ ಮೂವರು ಪುರುಷರು ಕುಳಿತಿರುವಂತೆ, ಅಲ್ಲದೆ ಪ್ರತಿಯೊಂದರಲ್ಲೂ ಮುಂದುಗಡೆ ಇರುವ ಗಂಡಾನೆಯ ಗಂಡಸ್ಥಳದ ಮೇಲೆ ಕುಳಿತಿರುವ ಗರುಡನೊಡನೆ ಹೋರಾಡುತ್ತಿರುವಂತೆ ತೋರಿಸಲಾಗಿದೆ. ಈ ಕಂಬಗಳ ಕೆಳಭಾಗದಲ್ಲಿ ಕಂಡರಿಸಲಾಗಿರುವ ಶಾಸನಗಳು ಮೇಲಿನ ಶಿಲ್ಪಗಳಿಗೆ ಮತ್ತು ಹೊಯ್ಸಳರ ಕಾಲದಲ್ಲಿ ಪ್ರಚಲಿತವಾಗಿದ್ದ ಗರುಡ ಸಂಪ್ರದಾಯದ ಬಗ್ಗೆ ವಿವರಗಳನ್ನು ಒದಗಿಸುತ್ತವೆ. ಗರುಡರು ತಮ್ಮ ಅರಸ ಮೃತರಾದರೆ ತಾವು ಸಾಯುವೆವು ಎಂದು ಪ್ರತಿe್ಞೆ ಕೈಗೊಳ್ಳುತ್ತಿದ್ದರು. 2ನೆಯ ಬಲ್ಲಾಳನೊಡನೆ ಸಿವನೆಯ ನಾಯಕ ಎಂಬುವನು ತನ್ನ ಐವರು ಲೆಂಕರೊಂದಿಗೆ ಭಾಷೆಯನ್ನು ಪೂರೈಸಿದ, 2ನೆಯ ನರಸಿಂಹನೊಡನೆ ಲಖ್ಖೆಯ ನಾಯಕ ಎಂಬುವನು ತನ್ನ ಹೆಂಡತಿ ಗಂಗಾದೇವಿ ಮತ್ತು ಮೂವರು ಲೆಂಕರೊಂದಿಗೆಯೂ ಸೋಮೇಶ್ವರನೊಡನೆ (1253) ಕಂನೆಯ ನಾಯಕ ಎಂಬುವನು ತನ್ನ ಮೂವರು ಹೆಂಡಿರು, ಹತ್ತು ಜನ ಲೆಂಕಿತಿಯರು ಮತ್ತು 21ಜನ ಲೆಂಕರ ಜೊತೆಯಲ್ಲಿ ಗರುಡನನ್ನು ಅಪ್ಪಿ ಭಾಷೆಯನ್ನು ಪೂರೈಸಿದರು; 3ನೆಯ ನರಸಿಂಹನೊಡನೆ (1292) ಸಿಂಗಯನಾಯಕ ತನ್ನ ಮೂವರು ಹೆಂಡಿರು, ಅಷ್ಟು ಜನ ಲೆಂಕಿತಿಯರು ಮತ್ತು ಇಪ್ಪತ್ತು ಲೆಂಕರೊಡನೆ ಭಾಷೆಯನ್ನು ಪೂರೈಸಿದ ಎಂದು ಈ ಶಾಸನಗಳು ತಿಳಿಸುತ್ತವೆ. ಈ ವ್ಯಕ್ತಿಗಳು ವಂಶಪಾರಂಪರ್ಯವಾಗಿ ಅರಸರ ಸೇವೆಯಲ್ಲಿರುತ್ತಿದ್ದಂತೆ ತೋರುತ್ತದೆ. ಸ್ವಾಮಿನಿಷೆವಿಯಲ್ಲಿ ಗರುಡರು ವಿಷ್ಣುವಿನ ಗರುಡನಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂಬ ಮನೋಭಾವವನ್ನು ಗರುಡನೊಂದಿಗೆ ಹೋರಾಡುತ್ತಿರುವ ಹುಣಸೇಶ್ವರ ದೇವಾಲಯದ ಗರುಡಗಂಬದ ಶಿಲ್ಪರಚನೆಗಳು ಸೂಚಿಸುತ್ತವೆ. (ಕೆ.) ಅಗ್ರಹಾರ ಬೆಳಗುಲಿ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಚನ್ನರಾಯಪಟ್ಟಣದಿಂದ ಈಶಾನ್ಯಕ್ಕೆ 27ಕಿಮೀ ದೂರದಲ್ಲಿದೆ. ಈ ಗ್ರಾಮದ ಪ್ರಾಚೀನ ಹೆಸರು ಬೆಳ್ಗುಲಿ ಅಥವಾ ಪನಜಾಡಿಯ ಬೆಳ್ಗುಲಿ. 1210ರಲ್ಲಿ 2ನೆಯ ಬಲ್ಲಾಳನ ಅದಿsಕಾರಿ ಕೇಶಿರಾಜ ಈ ಗ್ರಾಮವನ್ನು ಅಗ್ರಹಾರವನ್ನಾಗಿ ಮಾಡಿ ಕೇಶವಪುರ ಎಂಬ ಹೆಸರಿಟ್ಟು ಅಲ್ಲಿ ಕೇಶವಸಮುದ್ರ ಮತ್ತು ಲಕ್ಷ್ಮೀಸಮುದ್ರವೆಂಬ ಕೆರೆಗಳನ್ನು ಕಟ್ಟಿಸಿ ಕೇಶವ ಮತ್ತು ಈಶ್ವರ ದೇವರನ್ನು ಪ್ರತಿಷಾವಿಪಿಸಿದ. ಗ್ರಾಮದ ಈಶಾನ್ಯ ದಿಕ್ಕಿನಲ್ಲಿ ಕೇಶವಸಮುದ್ರವಿದೆ. ಈ ಕೆರೆಯ ಬಳಿ ಬೆಟ್ಟೇಶ್ವರ ಅಥವಾ ಕೇಶವೇಶ್ವರ ದೇವಾಲಯ ಇದೆ. ಈ ದೇವಾಲಯದ ದ್ವಾರ ದಕ್ಷಿಣ ಮುಖವಾಗಿದೆ. ದೇವಾಲಯ ಪೂರ್ವದಿಂದ ಪಶ್ಚಿಮಕ್ಕೆ ವಿಶಾಲ ಜಗತಿಯ ಮೇಲೆ ಹರಡಿಕೊಂಡಿದೆ. ಇದರಲ್ಲಿ ಒಂದು ನವರಂಗ, ದಕ್ಷಿಣದ ಮುಖಮಂಟಪಯುತ ಪ್ರವೇಶ್ರದ್ವಾರ, ಪಶ್ಚಿಮದ ಕಡೆ ಶಿವಲಿಂಗವಿರುವ ಅಂತರಾಳಯುತ ಗರ್ಭಗೃಹ ಮತ್ತು ಉತ್ತರದ ಕಡೆ ಕೇಶವ ವಿಗ್ರಹವಿರುವ ಗರ್ಭಗುಡಿ ಇವೆ. ಪೂರ್ವದಲ್ಲಿ ಹಲವು ಕಂಬಗಳ ಮೇಲೆ ಎತ್ತಿದ, ಸುತ್ತಲೂ ಕP್ಷÁಸನವಿರುವ, ತೆರೆದ ಮಹಾಮಂಟಪವಿದೆ. ಹೊರಮೈ ಕೇವಲ ಅರೆಗಂಬಗಳಿಂದ ಅಲಂಕೃತವಾಗಿದೆ. ಈಗಿರುವ ಗೋಪುರಗಳು ಇತ್ತೀಚಿನವು. ಒಳಗಿನ ಕಂಬಗಳನ್ನು ತಿರುಗಣಿಯಿಂದ ಮಾಡಲಾಗಿದೆ. ಒಳಗಿರುವ ಬೃಹತ್ ನಂದಿ, ಷಣ್ಮುಖ, ಭೈರವ, ದುರ್ಗ, ಸರಸ್ವತಿ, ವಿನಾಯಕ ವಿಗ್ರಹಗಳು ಉತ್ತಮ ಶಿಲ್ಪಗಳು. ಈಗ ಶಿಥಿಲವಾಗಿರುವ ಸೋಮೇಶ್ವರ (1154) ಮತ್ತು ಅಮೃತೇಶ್ವರ (1134) ದೇವಾಲಯಗಳೂ ಇಲ್ಲಿವೆ. (ಕೆ.) ಅಗ್ರಿಕೋಲ : ಪ್ರ.ಶ.ಪೂ. ಸು. 37-ಪ್ರ.ಶ. 93. ಸಮರ್ಥ ರೋಮನ್ ಸೇನಾಪತಿ, ದಕ್ಷ ಆಡಳಿತಗಾರ. ಕಾರ್ಯರಂಗ ಹೆಚ್ಚಾಗಿ ಬ್ರಿಟನ್. ಪ್ರ.ಶ. 77ರಲ್ಲಿ ಕಾನ್ಸಲ್ ಪದವಿಗೇರಿ, ಮುಂದೆ ಬ್ರಿಟನ್ನಿನ ಪ್ರಾಂತಾಧಿಪತಿಯಾದ. ವೇಲ್ಸ್, ಸ್ಕಾಟ್ಲೆಂಡ್ ಮುಂತಾದ ಕಡೆಗಳಲ್ಲಿ ದಂಗೆಯೇಳುತ್ತಿದ್ದವರನ್ನು ಅಡಗಿಸಿ ಬ್ರಿಟನ್ನಿನ ಬಹುಭಾಗವನ್ನು ಹತೋಟಿಗೆ ತಂದ. ಉದಾರಹೃದಯಿಯಾದ ಈತ, ತನ್ನ ಪ್ರಾಂತ್ಯದ ಜನರೆಲ್ಲ ಶಾಂತಿ ನೆಮ್ಮದಿಗಳಿಂದ ಬದುಕುವಂತಾಗಬೇಕೆಂಬ ಧ್ಯೇಯದಿಂದ ರೋಮನ್ ಸಂಸ್ಕøತಿಯನ್ನು ಅವರಲ್ಲಿ ಹರಡಲು ಯತ್ನಿಸಿದ. ಇವನ ಆಡಳಿತದಲ್ಲಿ ಸೌಮ್ಯತೆ ಜನಾನುರಾಗಗಳಿದ್ದುವು. ಇವನ ಅಳಿಯ ಟಾಸಿಟಸ್ ಎಂಬ ಪ್ರಸಿದ್ಧ ರೋಮನ್ ಚರಿತ್ರಕಾರ ಇವನ ಜೀವನಚರಿತ್ರೆಯನ್ನು ಬರೆದಿದ್ದಾನೆ. ಇದರಲ್ಲಿ ಆ ಕಾಲದ ರೋಮನರು ಹೊಂದಿದ್ದ ಸದ್ಗುಣಗಳಿಗೆ ತನ್ನ ಮಾವ ಮಾದರಿಯಾಗಿದ್ದ ಎಂದು ಬರೆದಿದ್ದಾನೆ. (ಎ.ಎಂ.)