ಪುಟ:Mysore-University-Encyclopaedia-Vol-1-Part-1.pdf/೨೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರಭೇದಗಳು ಮತ್ತು ಬೆತ್ತದ ಗಿಡಗಳು ಬಾಗಿದ ಮೇಲ್ಮುಳ್ಳುಗಳನ್ನು ಪಡೆದಿದ್ದು ಉಷ್ಣವಲಯದ ಕಾಡುಗಳಲ್ಲಿ ಹೇರಳವಾಗಿ, ಶ್ರೀಮಂತವಾಗಿ ಬೆಳೆದಿರುತ್ತವೆ. ಮನೋರಂಜಿನಿ ಗಿಡದ ಹೂದಂಡೆಯ ಬಾಗಿದ ಮುಳ್ಳುಗಳೂ ಲಾಂಟಾನ ಗಿಡದ ಬರೀ ಮುಳ್ಳುಗಳೂ, ಎಲಚಿ ಪ್ರಭೇದದ ಎಲೆಯ ಕಿವಿಗಳೂ ಹಬ್ಬಿ ಬೆಳೆಯಲು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿವೆ. ವರ್ಗೀಕರಣ: ನೈಜವಾಗಿ ಹಬ್ಬಿ, ಅಡರಿಕೊಂಡು ಬೆಳೆಯುವ ರೀತಿಯ ಆಧಾರದ ಮೇಲೆ, ಇವುಗಳನ್ನು ಪ್ರಮುಖವಾಗಿ ಮೂರು ಪಂಗಡಗಳಾಗಿ ವರ್ಗೀಕರಣ ಮಾಡಬಹುದು: ೧. ಕುಡಿ ಸುರುಳಿಯ ಅಡರುಬಳ್ಳಿಗಳು (ಟೆಂಡ್ರಿಲ್ ಕ್ಲೈಂಬರ್ಸ್). ೨. ಬೇರು ಅಡರುಬಳ್ಳಿಗಳು (ರೂಟ್ ಕ್ಲೈಂಬರ್ಸ್) . ೩. ಉಯ್ಯಾಲೆ ಅಡರುಬಳ್ಳಿಗಳು (ಲಯಾನಾಗಳು). ೧. ಕುಡಿ ಸುರುಳಿಯ ಅಡರುಬಳ್ಳಿಗಳಲ್ಲಿ ಎರಡು ರೀತಿಯ ಸಸ್ಯಗಳಿವೆ. ಅವುಗಳಲ್ಲಿ ಒಂದು ಎಲೆಯ ಕುಡಿ ಸುರುಳಿಗಳ ಸಹಾಯದಿಂದಲೂ ಮತ್ತೊಂದು ಕಾಂಡದ ಕುಡಿ ಸುರುಳಿಯ (ಸ್ಟೆಮ್ ಟೆಂಡ್ರಿಲ್ಸ್) ಸಹಾಯದಿಂದಲೂ ಬೆಳೆಯುತ್ತವೆ. ಎಲೆಯ ಕುಡಿ ಸುರುಳಿ ಅಡರುಬಳ್ಳಿಗಳಲ್ಲಿ ಎಲೆಯ ಒಂದು ಭಾಗವೊ ಉಪಪತ್ರವೊ ಅಥವಾ ಇಡೀ ಎಲೆಯೊ ರೂಪಾಂತರಗೊಂಡು ಕುಡಿ ಸುರುಳಿಯಾಗುತ್ತದೆ. ಕುಡಿ ಸುರುಳಿಗಳು ಮೃದುವಾಗಿಯೂ, ಕೆಲವು ಸಾರಿ ಸುರುಳಿ ಸುತ್ತಿದ ತಂತಿಗಳಂತೆಯೂ ಚಾವಟಿ ಯಂತೆಯೂ ಇರುತ್ತವೆ. ಇವುಗಳ ಪ್ರಮುಖ ಕಾರ್ಯವೆಂದರೆ ಬಳ್ಳಿಗಳಿಗೆ ಹಬ್ಬುವ ಅಥವಾ ನೇರವಾಗಿ ಏರುವ ಅಂಗಗಳಾಗಿ ಕೆಲಸ ಮಾಡುವುದು. ಇವಕ್ಕೆ ಆಸರೆಯ ಸಂಪರ್ಕವಾದಾಗ, ಬಹು ಸೂಕ್ಷ್ಮಗ್ರಾಹಿಗಳಾಗಿ, ಒತ್ತಾಸೆಯಿತ್ತ ವಸ್ತುವನ್ನು ಸುತ್ತುಬಳಸಿ ಗಿಡ ಹಬ್ಬಿ ಬೆಳೆಯಲು, ಏರಲು ಅವಕಾಶ ಮಾಡಿಕೊಡುತ್ತವೆ. ಕರಡಿಕಣ್ಣಿನ ಗೆಡ್ಡೆ ಬಳ್ಳಿಯ (ಗ್ಲೋರಿಯೋಸ ಸುಪರ್ಬ) ಎಲೆಯ ತುದಿ ನೀಳವಾದ ಕುಡಿ ಸುರುಳಿಯಾಗಿ ಮಾರ್ಪಾಟು ಹೊಂದಿದ್ದು, ಗಿಡ ಅಡರಿ ಬೆಳೆಯಲು ನೆರವಾಗುತ್ತದೆ. ಬಟಾಣಿ ಗಿಡದಲ್ಲಿ ಮೇಲ್ತುದಿಯ ಎಲೆಗಳೂ ಸಿಹಿ ತೊಗರಿ ಗಿಡದಲ್ಲಿ ಇಡೀ ಎಲೆಯೂ ಕುಡಿ ಸುರುಳಿಗಳಾಗಿ ಮಾರ್ಪಾಟು ಹೊಂದಿವೆ. ಸೊಗದೆಬೇರಿನಲ್ಲಿ (ಸರ್ಸಪರಿಲ್ಲ) ಎಲೆಯ ಕಿವಿಗಳೂ ನರವೇಲಿಯದಲ್ಲಿ ಮೇಲ್ಭಾಗದ ಎಲೆಯೂ ಕುಡಿ ಸುರುಳಿಗಳಾಗಿರುತ್ತವೆ. ಕಾಡು ಸಾಸಿವೆ (ನಾಸ್ಟೂರ್ಸಿಯಮ್) ಮತ್ತು ಕ್ಲೆಮಾಟಿಸ್ ಗಿಡಗಳಲ್ಲಿ ಎಲೆಯ ತೊಟ್ಟು ಕುಡಿ ಸುರುಳಿಯಾಗಿರುತ್ತದೆ. ಮಿಂಚಿನ ಬಳ್ಳಿ (ಕಾರ್ಡಿಯೊಸ್ಪರ್ಮಮ್ ಹ್ಯಾಲಿಕಾಕ್ಯಾಬಮ್) ಮತ್ತು ಆಂಟಿಗೊನಾನ್ ಗಿಡಗಳಲ್ಲಿ ಹೂಗೊಂಚಲ ಹೂಗಳ ಪೈಕಿ ಕೆಲವು ಕುಡಿ ಸುರುಳಿಯ ರೂಪಾಂತರಗಳಾಗಿವೆ. ಕಾಂಡದ ಕುಡಿಸುರುಳಿಯ ಅಡರುಬಳ್ಳಿಗಳಲ್ಲಿ ಕಾಂಡ ಎಳವೆಯಲ್ಲಿ ಸಾಮಾನ್ಯವಾಗಿ ದುರ್ಬಲವಾಗಿರುತ್ತದೆ. ಕಾಂಡದಿಂದ ಹೊರಟು ಮಾರ್ಪಟ್ಟ ಕುಡಿಸುರುಳಿಗಳು ಬೆಳೆವಣಿಗೆಯ ಚಲನೆಯನ್ನು ಪ್ರದರ್ಶಿಸುತ್ತವೆ. ಆಸರೆ ದೊರೆತ ಕೂಡಲೇ ಆ ವಸ್ತುವನ್ನು ಸುತ್ತಿಕೊಂಡು ಬೆಳೆಯಲಾರಂಭಿಸುತ್ತವೆ. ಬೆಳವಣೆಗೆಯುಳ್ಳ ಕಾಂಡದ ತುದಿ ವೃತ್ತಾಕಾರಕ್ಕೆ ಚಲಿಸಿ, ಆಸರೆಯಿತ್ತ ವಸ್ತುವನ್ನೇ ಸುತ್ತಿಕೊಳ್ಳುತ್ತದೆ. ಈ ರೀತಿ ಸುತ್ತಿಕೊಳ್ಳುವ ಕ್ರಿಯೆಗೂ ಭೂಮ್ಯಾಕರ್ಷಣೆಗೂ ಸಂಬಂಧವುಂಟೆಂದು ತಿಳಿದುಬಂದಿದೆ. ಇದಕ್ಕನುಸಾರವಾಗಿ ಅಡರುಬಳ್ಳಿ ಪ್ರದಕ್ಷಿಣೆ ಹಾಕಿಯೊ ಅಪ್ರದಕ್ಷಿಣೆ ಹಾಕಿಯೊ ಹಬ್ಬಿ ಬೆಳೆಯುತ್ತದೆ. ಜುಮುಕಿ ಹೂಬಳ್ಳಿಯಲ್ಲಿ (ಪ್ಯಾಸ್ಸಿಫ್ಲೋರ) ಕೊಂಕುಳ ಮೊಗ್ಗು ಸುರುಳಿ ಸುತ್ತಿದ ಕುಡಿ ಸುರುಳಿಯಾಗಿ ಮಾರ್ಪಾಟು ಹೊಂದಿದೆ. ಬಳ್ಳಿಯಲ್ಲಿ ಕಾಂಡದ ತುದಿಯೊ ಕವಲು ರೆಂಬೆಗಳೂ ಕುಡಿ ಸುರುಳಿಗಳಾಗಿರುತ್ತವೆ. ವರ್ಜಿನಿಯಾ ಹಂಬು ಮತ್ತು ಜಪಾನೀ ಐವಿ ಗಿಡಗಳ ಕುಡಿಸುರುಳಿಗಳ ತುದಿಗಳಲ್ಲಿ ಅಂಟಿನ ತಟ್ಟೆಗಳಿದ್ದು, ಅವು ಆಸರೆಯೀಯುವ ಗೋಡೆಯನ್ನು ಬಿಗಿಯಾಗಿ ಅಪ್ಪಿ, ಬಳ್ಳಿಗಳು ಮೇಲೇರಿ ಬೆಳೆಯಲು ಸಹಕಾರಿಯಾಗುತ್ತವೆ. ೨. ಬೇರು ಅಡರುಬಳ್ಳಿಗಳು: ಈ ವರ್ಗದ ಗಿಡಗಳಲ್ಲಿ ಗೆಣ್ಣಿನ ಭಾಗದಿಂದ (ನೋಡ್) ಬಿಳಲು ಬೇರುಗಳು (ಅಡ್ವೆಂಟಿಷಸ್ ರೂಟ್ಸ್) ಬೆಳೆದುಕೊಂಡಿದ್ದು, ಅಡರುಬಳ್ಳಿಗಳು ಹಬ್ಬಿ ಬೆಳೆಯಲು ಸಹಕಾರಿಗಳಾಗಿವೆ. ಇಂಥ ಬೇರುಗಳ ತುದಿಯಲ್ಲೂ ಅಂಟುಬಟ್ಟಲುಗಳಿರುವು ದುಂಟು. ಅಂಟುದ್ರವ ಗಾಳಿಯ ಸಂಪರ್ಕ ಹೊಂದಿದ ಕೂಡಲೆ ಒಣಗಿ ಹೋಗುವುದರಿಂದ, ಬೇರುಗಳು ಆಸರೆಯನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತವೆ. ವೀಳೆಯದೆಲೆ, ಕಾಳುಮೆಣಸು ಮುಂತಾದ ಬಳ್ಳಿಗಳಲ್ಲಿ ಇಂಥ ಬೇರುಗಳನ್ನು ನೋಡಬಹುದು. ಪರಾವಲಂಬಿ ಸಸ್ಯವಾದ ಕಸ್ಕುಟ ಆಶ್ರಯ ಸಸ್ಯದ ಕಾಂಡವನ್ನು ಸುತ್ತಿಕೊಂಡು ಬೆಳೆಯುತ್ತದೆ. ಈ ಸುತ್ತುಬಳ್ಳಿ ವಿಶೇಷ ರೀತಿಯ ಹೀರುಬೇರು ಅಥವಾ ಶೋಷಣಾವಯವಗಳನ್ನು (ಸಕಿಂಗ್ ರೂಟ್ಸ್) ಆಶ್ರಯ ಸಸ್ಯದ ಕಾಂಡದೊಳಕ್ಕೆ ಕಳಿಸಿ ಆಹಾರವನ್ನು ಹೀರಿ ಬೆಳೆಯುತ್ತದೆ. ೩. ಉಯ್ಯಾಲೆ ಅಡರುಬಳ್ಳಿಗಳು: ಬಹುವಾರ್ಷಿಕಗಳಾದ ಈ ಲತೆಗಳು ದಂಡಕಾರಣ್ಯದಲ್ಲಿ ಬೆಳೆಯುತ್ತವೆ. ಅರಣ್ಯದಲ್ಲಿ ಎತ್ತರವಾಗಿ ಬೆಳೆದಿರುವ ಮರಗಳ ಕಾಂಡವನ್ನು ಸುತ್ತಿಕೊಂಡು, ಮರದ ತುದಿಯೇರಿ, ಅಲ್ಲಿ ಸೂರ್ಯರಶ್ಮಿಗೆ ಎಲೆಗಳನ್ನು ವಿಸ್ತಾರವಾಗಿ ಹರಡುತ್ತವೆ. ಕಾಂಡಗಳು ಗಡುಸಾಗಿ ಬಲಯುತವಾಗಿದ್ದು, ಮರದಿಂದ ಮರಕ್ಕೆ ಹೆಣೆದುಕೊಂಡಿದ್ದು ಜೋತುಬಿದ್ದು ಉಯ್ಯಾಲೆಯಂತಾಗಿರುತ್ತವೆ. ಪರಿಣಾಮವಾಗಿ ಇಂಥ ಅರಣ್ಯಗಳಲ್ಲಿ ನುಸುಳಿಹೋಗುವುದೇ ಕಷ್ಟವೆನಿಸುತ್ತದೆ. ಮಾಧವೀಲತೆ, ಹೆಪ್ಪರಿಕೆ ಬಳ್ಳಿ (ಬಾಹಿನಿಯ ವಹ್ಲೀ), ತುರಿಬೀಳಬಳ್ಳಿ (ಮುಕೂನ ಅಟ್ರೋಪರ್ಪೂರ), ಕೈವಲ್ಯ ಬಳ್ಳಿ (ಮ್ಯೂಕೂನ ಮಾನೊಸ್ಪರ್ಮ), ಗಣಪೆ ಬಳ್ಳಿ (ಎಂಟಾಡ ಪ್ಯೂಸಿತ) ಇವು ಅಂಥ ಸಸ್ಯಗಳಿಗೆ ಉದಾಹರಣೆಗಳು. ಉಪಯುಕ್ತ ಅಡರುಬಳ್ಳಿಗಳು: ಅಲಂಕಾರ, ನೆರಳು, ಫಲಪುಷ್ಪ, ಆಹಾರ ಮತ್ತು ಔಷಧಿಗಳಿಗಾಗಿ ಕೆಲವನ್ನು ಕೃಷಿ ಮಾಡಲಾಗಿದೆ. ಹಳದಿಹೂ (ಅಲ್ಲಮಂಡಾ ಕೆಥಾರ್ಟಿಕ), ಆಡು ಹೂಬಳ್ಳಿ (ಐಪೊಮಿಯ ಪಸ್ಕ್ರ್ಯಾಪ್ರ), ಕಾಮನಬಿಲ್ಲು ಬಳ್ಳಿ (ಥಂಬರ್ಜಿಯ ಮೈಸೊರೆನ್ಸಿಸ್) ಶಂಖ ಪುಷ್ಪಬಳ್ಳಿ (ಕ್ಲೈಟೋರಿಯ ಟರ್ನೆಶಿಯಾ), ರಂಗೂನ್ ಕೆಂಪು ಮೊಲ್ಲೆ (ಕ್ವಿಸ್ಕಾಲಿಸ್ ಇಂಡಿಕ), ಬೊಗೆನ್‍ವಿಲ್ಲಾ, ಜಾಜಿಮೊಲ್ಲೆ, ಮಲ್ಲಿಗೆ-ಇವೆಲ್ಲ ಅಲಂಕಾರದವು. ಕುಂಬಳಕಾಯಿ ಬಳ್ಳಿ, ಚಪ್ಪರ ಬದನೆ, ಬಸಳೆ ಬಳ್ಳಿ (ಬಸೆಲ್ಲ), ಬಟಾಣಿ (ಪೀ), ತೊಂಡೆಕಾಯಿ, ಹೀರೆ ಬಳ್ಳಿ, ಕಲ್ಲಂಗಡಿ ಬಳ್ಳಿ ಮುಂತಾದುವು ಹಣ್ಣು, ತರಕಾರಿಗಳಾಗಿ ಪ್ರಸಿದ್ಧ. ಶತಾವರಿ (ಆಸ್ಫ್ಯಾರಗಸ್), ಸೊಗದೆ ಬೇರು, ಆಡುಮುಟ್ಟದ ಬಳ್ಳಿ (ಟೈಲೊಫೋರ ಆಸ್ತೆಮ್ಯಾಟಿಕ), ಗುಲಗಂಜಿ ಬಳ್ಳಿ (ಅಬ್ರಸ್ ಪ್ರಿಕೆಟೋರಿಯಸ್), ಆಕಾಶಗರುಡ ಬಳ್ಳಿ (ಬೈರೋನಿಯ ಅಪಿಗಾಲ), ಉಗುರುಸುತ್ತು ಬಳ್ಳಿ (ಡೀಮಿಯ ಎಕ್ಸ್ಟೆನ್ಸ), ಅಮೃತ ಬಳ್ಳಿ (ಟೈನೊಸ್ಪೊರ ಕಾರ್ಡಿಫೋಲಿಯ) ಮುಂತಾದವಕ್ಕೆ ಔಷಧಿ ಮಹತ್ತ್ವವಿದೆ. (ಎಚ್.ಕೆ.ಎಂ.) ಅಡಲುಗಳು : ಬಳೆಯಾಕಾರದಲ್ಲಿದು ತಮ್ಮ ನಡುವಿನಲ್ಲಿ ಸರೋವರವನ್ನೊಳ ಗೊಂಡಿರುವ ಹವಳದ ದಿಬ್ಬಗಳು (ಅಟೋಲ್ಸ್) ಹಿಂದೂ, ಪೆಸಿಫಿಕ್ ಸಾಗರಗಳ ಉಷ್ಣವಲಯದ ಪ್ರದೇಶಗಳಲ್ಲಿ ಇಂಥ ಅಡಲುಗಳಿವೆ. ಉದಾ: ಭಾರತದ ಪಶ್ಚಿಮಕ್ಕೆ ಅರಬ್ಬೀಸಮುದ್ರದಲ್ಲಿರುವ ಲಕ್ಷದ್ವೀಪ, ಮಾಲ್ಡಿವ್ಸ್ ದ್ವೀಪಗಳು; ಹಿಂದೂ ಸಾಗರದ ಚಾಗೋಸ್