ಪುಟ:Mysore-University-Encyclopaedia-Vol-1-Part-1.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮತೋಲಗಳಂಥ, ಅಡ್ರಿನಲ್ ಗ್ರಂಥಿಯ ರಗಟೆಯ ಮುಖ್ಯವಾದ ನಿಜಗೆಲಸಗಳು ಕೆಟ್ಟಿರುವುದರಿಂದ ಹೀಗಾಗುತ್ತದೆ. ಪೂರಾ ಬಲಿತಿರುವ ರೋಗವನ್ನು ಗುರುತಿಸುವುದು ಕಷ್ಟವಲ್ಲ. ಎಳೆಯದರಲ್ಲಿ ರೋಗವನ್ನು ಗುರುತಿಸಲು ಪ್ರಯೋಗಾಲಯದ ಪರೀಕ್ಷೆಗಳ ನೆರವು ಬೇಕು. ಮೈಚರ್ಮ ವಿಚಿತ್ರ ತೆರನ ಮಂಕುಹಳದಿ ಇಲ್ಲವೇ ಕಂದುಬಣ್ಣಕ್ಕೆ ತಿರುಗುವುದು ಮೊದಲ ಚಿಹ್ನೆಯಾಗಿರಬಹುದು. ಹಿಂದಿನ ಕಾಲದಲ್ಲಿ ಅಡಿಸನ್ನನ ರೋಗದವನ ಪಾಡು ಯಾರಿಗೂ ಬೇಡದಂತಿತ್ತು. ವಿಪರೀತ ಬೆವರಿಕೆ, ವಾಂತಿ, ಉಚ್ಚಾಟ, ಸೋಡಿಯಂ ಕಡಿಮೆಯಿರುವ ಆಹಾರ ಸೇವನೆ, ಹೀಗೆ ಮೈಯಿಂದ ಸೋಡಿಯಂ, ಕ್ಲೋರೈಡುಗಳನ್ನು ಕಳೆಯುವ ಯಾವ ಸ್ಥಿತಿಯಾದರೂ ಸರಿಯೇ, ರೋಗಿಯನ್ನು ಸುಸ್ತುಮಾಡಿ ಸಾಯಿಸುತ್ತಿತ್ತು. ಮೈದುಡಿತ, ಶಸ್ತ್ರಕ್ರಿಯೆಯ ಒತ್ತರ, ಅರಿವಳಿಕಗಳ (ಅನೀಸ್ತೆಟಿಕ್ಸ್) ಸೇವನೆ ಒಂದೊಂದು ರೋಗಿಗೆ ಗಂಡಾಂತರ ಆಗುತ್ತಿತ್ತು. ಅಡ್ರಿನಲ್ ರಗಟೆಯ ಕಚ್ಚಾ ಸಾರಕವನ್ನು ೧೯೩೦ರಲ್ಲಿ ತಯಾರಿಸಿ, ಜೀವಕುತ್ತಿನಲ್ಲಿ ಸಿಕ್ಕಿರುವ ರೋಗಗಳಿಗೆ ಕೊಟ್ಟಾಗ ಆಶಾಕಿರಣ ಮೂಡಿತು. ಈ ಸಾರಕ ಸುಲಭವಾಗಿ ದೊರೆಯದೆ, ದುಬಾರಿ ಬೆಲೆಯದಾಗಿ ಗುಣದಲ್ಲೂ ನೆಚ್ಚಿಕೊಳ್ಳುವ ಹಾಗಿರಲಿಲ್ಲ. ಅಡಿಗೆ ಉಪ್ಪನ್ನು ಹೇರಳವಾಗಿ ಕೊಟ್ಟರೆ ರೋಗಿ ತುಸು ಚೇತರಿಸಿಕೊಳ್ಳುವನೆಂದು ರಾಬರ್ಟ್ ಲೋಯೆಬ್ (೧೯೩೨) ಕಂಡುಕೊಂಡ. ಮೈಯಲ್ಲಿ ಪೊಟ್ಯಾಸಿಯಂ ಹೆಚ್ಚಾದರೂ ರೋಗ ಹೆಚ್ಚುವುದು (೧೯೩೭) ಗೊತ್ತಾಯಿತು. ಅದೇ ವರ್ಷ ತಯಾರಾದ, ಡಿಸಾಕ್ಸಿಕಾರ್ಟಿಕೊಸ್ಟಿರೋನ್ ಮದ್ದಿನಿಂದ ಮೈಯಲ್ಲಿನ ಖನಿಜದ ಜೀವವಸ್ತುಕರಣವನ್ನು ಅಂಕೆಗೊಳಿಸುವಂತಾಗಿ ಅನೇಕ ರೋಗಿಗಳಿಗೆ ಹೆಚ್ಚಿನ ಗುಣ ಕಂಡಿತು. ಆದರೂ ಪೂರ್ತಿ ವಾಸಿ ಮಾಡಲಿಲ್ಲ. ರಕ್ತದಲ್ಲಿನ ಖನಿಜಗಳನ್ನು ಅಂಕೆಗೊಳಿಸುವು ದೊಂದೇ ಅಲ್ಲದೆ, ಇನ್ನೂ ಏನೋ ಕೊರೆ ಇದೆ ಎನ್ನಿಸುತ್ತಿತ್ತು. ಕೊನೆಯದಾಗಿ ೧೯೪೮ರಲ್ಲಿ ತಯಾರಾದ ಕಾರ್ಟಿಸೋನನ್ನು ಡಿಸಾಕ್ಸಿಕಾರ್ಟಿ ಕೊಸ್ಟಿರೋನ್‍ನೊಂದಿಗೆ ಸೇರಿಸಿ ದಿನವೂ ರೋಗಿಗೆ ಕೊಟ್ಟಾಗ ರೋಗಿ ಎಂದಿನ ಲವಲವಿಕೆ, ಚಟುವಟಿಕೆಗಳನ್ನು ಮರಳಿ ಪಡೆವಂತಾದ. ಈ ರೋಗಿಗಳಲ್ಲಿ ಕೊರೆಯಾಗಿರುವ ಕಾರ್ಟಿಸೋನ್ ಮಾತ್ರ ಕೊಟ್ಟರೆ ಮೈಯಿಂದ ಉಪ್ಪು ಹೆಚ್ಚಾಗಿ ಹೊರಬೀಳುವುದರಿಂದ, ಜೊತೆಗೆ ಡಿಸಾಕ್ಸಿಕಾರ್ಟಿ ಸೋನನ್ನೂ ಕೊಡುತ್ತಿದ್ದರೆ, ರೋಗಿ ಆರೋಗ್ಯವಾಗಿರಬಹುದು. ಅಡ್ರಿನಲ್ ರಗಟೆಯ ಅಸಮರ್ಥತೆಯನ್ನು ಹೊರಗಿನಿಂದ ಗ್ಲುಕೋಕಾರ್ಟಿಕಾಯಿಡ್‍ಗಳನ್ನು ನಿರಂತರವಾಗಿ ಕೊಟ್ಟು ಅದರ ಕೊರತೆಯನ್ನು ನೀಗಿಸಿ ರೋಗ ಲಕ್ಷಣಗಳನ್ನು ದೂರ ಮಾಡಿಕೊಳ್ಳಬೇಕು. (ಪಿ.ಎಸ್.ಎಸ್.) ಅಡೆನೋಸೀನ್ ಟ್ರೈಫಾಸ್ಫೇಟ್ : ಇದೊಂದು ರಾಸಾಯನಿಕ ವಸ್ತು. (ಎ ಟಿ ಪಿ) ಇದನ್ನು ಮೊದಲು ೧೯೨೯ರಲ್ಲಿ ಜರ್ಮನಿಯಲ್ಲಿ ಲೋಮಾನ್, ಅಮೆರಿಕದಲ್ಲಿ ಫಿಸ್ಕ್ ಮತ್ತು ಸುಬ್ಬರಾವ್ ಇವರು ಮೊಲದ ಮಾಂಸಖಂಡದಿಂದ ಪ್ರತ್ಯೇಕಿಸಿದರು. ಅನಂತರ ಇದರ ರಚನೆ ವಿಶ್ಲೇಷಣಾ ಮಾರ್ಗದಿಂದ ನಿರ್ಧಾರವಾಯಿತು. ಅಲ್ಲದೆ ೧೯೪೮ರಲ್ಲಿ ರಾಸಾಯನಿಕ ಸಂಶ್ಲೇಷಣೆಯಿಂದಾಗಿ ಖಚಿತವಾಯಿತು. ಎಲ್ಲ ಜೀವಿಗಳ ಕಣದ್ರವ್ಯದಲ್ಲಿ ಒಂದು ಮಿ.ಲೀ. ಗೆ ೦.೫-೨.೫ ಮಿ.ಗ್ರಾಂ ಗಳಷ್ಟು ಇರುತ್ತದೆ. ಎ.ಟಿ.ಪಿ. ಮೂರು ವಿಧದ ರಾಸಾಯನಿಕ ಸಂಯುಕ್ತಗಳಿಂದಾಗಿದೆ: ಪ್ಯೂರೀನ್ ಗಳಲ್ಲೊಂದಾದ ಅಡೆನೀನ್, ೫-ಇಂಗಾಲ ಮಾನೋಸ್ಯಾಕರೈಡ್ ಆದ ಡಿ. ರೈಬೋಸ್ ಮತ್ತು ಫಾಸ್ಫೇಟು ಗುಂಪುಗಳು. ಅಡೆನೀನಿನ ಒಂಬತ್ತನೆಯ ಸಾರಜನಕದ ಪರಮಾಣು ಒಂದು ಗ್ಲೈಕೊಸೈಡಿಕ್ ಬಂಧದಿಂದ ಡಿ. ರೈಬೋಸಿನ ಒಂದನೆಯ ಇಂಗಾಲದ ಪರಮಾಣು ವಿನೊಡನೆ ಬಂಧಿತವಾದಾಗ ಅಡೆನೋಸೀನ್ ಲಭಿಸುತ್ತದೆ. ಇದೊಂದು ನ್ಯೂಕ್ಲಿಯೊಸೈಡ್. ಅಂದರೆ, ಒಂದು ಶರ್ಕರ ಒಂದು ಪ್ಯೂರಿನ್ ಅಥವಾ ಪಿರಿಮಿಡೀನ್ ಕ್ಷಾರ. ಅಡೆನೋಸೀನ್ ನಲ್ಲಿರುವ ಡಿ. ರೈಬೋಸಿನ ಐದನೆಯ ಇಂಗಾಲದ ಪರಮಾಣುವಿನ ಮೇಲಿನ ಹೈಡ್ರಾಕ್ಸಿಲ್ (ಔಊ) ಗುಂಪು ಒಂದು ಫಾಸ್ಫಾರಿಕ್ ಆಮ್ಲದೊಡನೆ ಸಂಯುಕ್ತವಾದರೆ ೫-ಅಡೆನೆಲಿಕ್ ಆಮ್ಲ ಅಥವಾ ಅಡೆನೋ ಸೀನ್-೫ ಮಾನೋಫಾಸ್ಫೇಟು ಲಭಿಸುತ್ತದೆ. ಇದು ಮಾನೊನ್ಯೂಕ್ಲಿಯೊಟೈಡ್. ಎ.ಎಂ.ಪಿ.ಯ ಫಾಸ್ಫಾರಿಕ್ ಭಾಗಕ್ಕೆ ಮತ್ತೆರಡು ಫಾಸ್ಫಾರಿಕ್ ಅವಶೇಷಗಳು ಸೇರಿಕೊಂಡರೆ ಎ.ಟಿ.ಪಿ. ಲಭಿಸುತ್ತದೆ. ಎ.ಟಿ.ಪಿ.ಯನ್ನು ೫º ಸೆ. ನಲ್ಲಿ ತೇವ ಸೋಕದಂತೆ ಇಟ್ಟಿದ್ದರೆ ಅದರಲ್ಲಿರುವ ಸೋಡಿಯಂ ಲವಣ ಕೆಡುವುದಿಲ್ಲ- ೧೫º ಸೆ.ನಲ್ಲಿರುವ ತಟಸ್ಥ ದ್ರಾವಣಗಳೂ ಸ್ಥಿರವಾಗಿರು ತ್ತವೆ. ಈ ದ್ರಾವಣಗಳನ್ನು ಏಳುನಿಮಿಷ ಕ್ಷಾರಗಳ ದುರ್ಬಲ ದ್ರಾವಣದೊಂದಿಗಾಗಲೀ ಹೈಡ್ರೋಕ್ಲೋರಿಕ್ ಆಮ್ಲದ ಸಮಾನ ದ್ರಾವಣದೊಂದಿಗಾಗಲೀ ಕುದಿಸಿದರೆ ಎ.ಟಿ.ಪಿ. ವಿಭಜನೆ ಹೊಂದಿ ಎ.ಎಂ.ಪಿ. ಮತ್ತು ನಿರವಯವ ಫಾಸ್ಫೇಟು ದೊರಕುತ್ತದೆ. ಎ.ಟಿ.ಪಿ. ಜಲದ್ರಾವಣ ವರ್ಣರಹಿತವಾಗಿದ್ದು ಅತಿನೇರಿಳೆ ರಶ್ಮಿಗಳನ್ನು (೨೬೦-೨೮೦ ಮಿ.ಮೈ.) ಚೆನ್ನಾಗಿ ಹೀರುತ್ತದೆ. ಎ.ಟಿ.ಪಿ. ಜೀವರಸಾಯನ ಶಾಸ್ತ್ರದಲ್ಲಿ ಬಹು ಮುಖ್ಯ ಸಂಯುಕ್ತ. ಶಕ್ತಿದಾಯಕ ಮತ್ತು ಶಕ್ತಿಗ್ರಾಹಕ ಜೀವರಾಸಾಯನಿಕ ಕ್ರಿಯೆಗಳಲ್ಲಿ ಇದೊಂದು ಸಾಮಾನ್ಯ ವರ್ತನಕಾರಿ. ಜೀವಿಗಳಲ್ಲಿ ಉಳಿದ ಶಕ್ತಿಭರಿತ ಸಂಯುಕ್ತಗಳಿಗಿಂತ ಇದು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದಕ್ಕೆ ಸಂಬಂಧಿಸಿದ ಗ್ವಾನೊಸೀನ್, ಸೈಟೋಸೀನ್, ಯೂರಿಡಿನ್, ಥೈಮಿಡಿನ್ ಟ್ರೈಫಾಸ್ಫೇಟುಗಳೂ ಅವುಗಳ ಡಿ ಆಕ್ಸಿ ರೈಬೋಸ್ ಉತ್ಪನ್ನಗಳೂ ಇದರ ಮಧ್ಯಸ್ಥಿಕೆಯಿಂದಲೇ ಉತ್ಪತ್ತಿಯಾಗುತ್ತವೆ. ಎ.ಟಿ.ಪಿ. ಶಕ್ತಿಭರಿತ ಸಂಯುಕ್ತವಾಗಿರಲು ಅದರಲ್ಲಿರುವ ಎರಡು ಉತ್ಪನ್ನಶಕ್ತಿ ಫಾಸ್ಪೇಟು ಬಂಧಗಳೇ ಕಾರಣ. ಇದರ ಅಣುವಿನ ತುದಿಯಲ್ಲಿರುವ ಎರಡು ಫಾಸ್ಫೇಟು ಗುಂಪುಗಳು ಜಲವಿಶ್ಲೇಷಣ ಹೊಂದಿದಾಗಿ ಎ.ಟಿ.ಪಿ.ಯು ಎ.ಡಿ.ಪಿ. ಅಥವಾ ಎ.ಎಂ.ಪಿ. ಆಗಿ ಅಧಿಕ ಪ್ರಮಾಣದಲ್ಲಿ ಉಪಯುಕ್ತಶಕ್ತಿ ಬಿಡುಗಡೆಯಾಗುತ್ತದೆ. ( =ಒಂದು ಮೋಲಿಗೆ -೮೦೦೦ ಕೆಲೊರಿಗಳು). ಉಪಯುಕ್ತಶಕ್ತಿ ಎಂದರೆ ರಾಸಾಯನಿಕ, ವಿದ್ಯುತ್ ಅಥವಾ ಚಲನಾತ್ಮಕ ಕ್ರಿಯೆಗಳಲ್ಲಿ ಉಪಯೋಗವಾಗುವ ಶಕ್ತಿ. ಎ.ಟಿ.ಪಿ.ಯ ಜಲವಿಶ್ಲೇಷಣದಿಂದ ಈ ಅಧಿಕ ಪ್ರಮಾಣದ ಉಪಯುಕ್ತಶಕ್ತಿ ಸಿಗಲು ಮೂರು ಮುಖ್ಯ ಕಾರಣಗಳಿವೆ. ಮೊದಲನೆಯದಾಗಿ ದೇಹದಲ್ಲಿ ಎ.ಟಿ.ಪಿ. ಚೆನ್ನಾಗಿ ಅಯಾನೀಕೃತವಾಗಿ (ಅಯೊನೈಸ್) ನಾಲ್ಕು ಋಣ ವಿದ್ಯುತ್ಕಣಗಳು ಹತ್ತಿರ ಹತ್ತಿರ ಇರುತ್ತವೆ. ಇವು ಒಂದನ್ನೊಂದು ವಿಕರ್ಷಿಸುವುದರಿಂದ ಅಲ್ಲಿಯ ಉಷ್ಣಚಲನ (ಥರ್ಮೊಡೈನಮಿಕ್) ಸನ್ನಿವೇಶ ಚಂಚಲವಾಗುತ್ತದೆ. ಎರಡನೆಯದಾಗಿ ಈ ಜಲವಿಶ್ಲೇಷಣೆಯ ಉತ್ಪನ್ನಗಳಾದ ಎ.ಡಿ.ಪಿ. ಮತ್ತು ನಿರವಯವ ಫಾಸ್ಫೇಟುಗಳೊಂದರಲ್ಲೂ ಋಣ ವಿದ್ಯುತ್ಕಣ ಕಡಿಮೆ ಇದ್ದು ಅವು ಒಂದರಿಂದೊಂದು ಸುಲಭವಾಗಿ ಬೇರ್ಪಡುತ್ತವೆ. ಕೊನೆಯದಾಗಿ ಇವು ಸುಲಭವಾಗಿ ಅಯಾನೀಕರಣ ಹೊಂದಿ ಸಂಸ್ಪಂದನದ (ರೆಸೊನೆಸ್ಸ್) ಮುಖಾಂತರ ಸ್ಥಿರವಾಗುತ್ತವೆ. ಇನ್ನಿತರ ಶಕ್ತಿಭರಿತ ಸಂಯುಕ್ತಗಳನ್ನು ಈ ಕೆಳಗೆ ಕೊಡಲಾಗಿದೆ. ಫಾಸ್ಫೊ ಇನಾಲ್ ಪೈರುವೇಟ್ ( = -೧೨೮೦೦); ಫಾಸ್ಫೋ ಕ್ರಿಯೆಟಿನ್ ( = -೧೦೫೦೦); ೧.೩ - ಡೈಫಾಸ್ಫೋಗ್ಲಿಸರೇಟ್ ( = -೧೧೮೦೦); ಅಸೆಟಲ್ ತೊ ಎಂಜೈ಼ಮ್ ಎ ( = -೯೦೦೦) ಮತ್ತು ಎ.ಟಿ.ಪಿ.ಗೆ ಬಹುವಾಗಿ ಸಂಬಂಧಿಸಿದ ಜಿ.ಟಿ.ಪಿ., ಯು.ಟಿ.ಪಿ., ಸಿ.ಟಿ.ಪಿ., ಎ.ಟಿ.ಪಿ.ಯು ಮೆಗ್ನೀಷಿಯಂ ಮತ್ತು ಕ್ಯಾಲ್ಷಿಯಂ ಅಯಾನುಗಳೊಂದಿಗೆ ಸ್ಥಿರವಾದ ಸಂಯೋಜನೆಗಳನ್ನು ರಚಿಸಿಕೊಳ್ಳುತ್ತದೆ. ಹೀಗಾಗಿ ಜೀವಕಣಗಳಲ್ಲಿ ಬಹು ಸ್ವಲ್ಪ ಬಿಡಿಯಾಗಿರುವ ಎ.ಟಿ.ಪಿ. ಇರುತ್ತದೆ. ಎ.ಡಿ.ಪಿ.ಯಿಂದ ಎ.ಟಿ.ಪಿ.ಯ ಉತ್ಪತ್ತಿ ಒಂದು ಶಕ್ತಿಗ್ರಾಹಕ ಕ್ರಿಯೆ. ಅಂದರೆ ಇದು ಶಕ್ತಿದಾಯಕ ಕ್ರಿಯೆಗಳೊಂದಿಗೆ ನಿಕಟ ಸಂಬಂಧ ಪಡೆದಿರಲೇಬೇಕು. ಶಕ್ತಿದಾಯಕ ಕ್ರಿಯೆಗಳಿಂದ ಬರುವ ಶಕ್ತಿಯನ್ನು ಹಿಡಿದಿಡುವುದಕ್ಕೆ ಇದೊಂದು ಮುಖ್ಯ ಮಾರ್ಗ. ಜೀವಿಗಳು ಮೂರು ಮುಖ್ಯ ಕ್ರಿಯೆಗಳಿಂದ ಶಕ್ತಿಯನ್ನು ಪಡೆಯುತ್ತವೆ. ಈ ಎಲ್ಲ ಕ್ರಿಯೆಗಳಲ್ಲೂ ಎ.ಟಿ.ಪಿ. ಸಂಯೋಜನೆ ಅತ್ಯಂತ ಮುಖ್ಯ ಹಂತ. ಮಾಂಸ ಖಂಡಗಳು ಕೆಲಸಮಾಡುವಾಗ ಗ್ಲೂಕೋಸು ನಿರ್ವಾಯು ಪಥದಲ್ಲಿ ವ್ಯಯವಾಗಿ ಲ್ಯಾಕ್ಟಿಕ್ ಆಮ್ಲವಾಗುತ್ತದೆ. ಆಗ ಬಿಡುಗಡೆಯಾದ ಶಕ್ತಿಯ ಸ್ವಲ್ಪ ಭಾಗ ಎ.ಡಿ.ಪಿ.ಯು ಎ.ಟಿ.ಪಿ.ಯಾಗುವ ಕ್ರಿಯೆಯಲ್ಲಿ ಉಪಯೋಗವಾಗುತ್ತದೆ. ಎ.ಟಿ.ಪಿ. ಮಾಂಸಖಂಡಗಳ ಸಂಕೋಚನೆಗೆ ಶಕ್ತಿ ಒದಗಿಸುತ್ತದೆ (ಇಲ್ಲಿ ಶಕ್ತಿಸಾಮಥ್ರ್ಯ ಶೇ.೨೮). ಇಂಗಾಲ ಸಂಯುಕ್ತಗಳ ಬಿಡಿಶಕ್ತಿಯ ಹೆಚ್ಚುಭಾಗ ಮೈಟೊಕಾಂಡ್ರಿಯಾಗಳಲ್ಲಿ ನಡೆಯುವ ಉತ್ಕರ್ಷಕ ಫಾಸ್ಫಾರೀಕರಣ (ಫಾಸ್ಫರೈಸೇಷನ್) ಕ್ರಿಯೆಯಲ್ಲಿ ಎ.ಡಿ.ಪಿ.ಯು ಎ.ಟಿ.ಪಿ.ಯಾಗುವುದರ ಮೂಲಕ ಹಿಡಿಯಲ್ಪಡುತ್ತದೆ. ಶೇ.೪೨ ಶಕ್ತಿಸಾಮಥ್ರ್ಯದ ಈ ಕ್ರಿಯೆಯಲ್ಲಿ ಇಂಗಾಲ ಸಂಯುಕ್ತಗಳು ಪೂರ್ಣವಾಗಿ ಉತ್ಕರ್ಷಣ ಹೊಂದಿ, ಇಂಗಾಲಾಮ್ಲ ಮತ್ತು ನೀರು ಉತ್ಪನ್ನವಾಗುತ್ತವೆ. ಜೀವಿಗಳೆಲ್ಲ ಮೂಲಭೂತವಾಗಿ ಶಕ್ತಿ ಪಡೆಯುವ ದ್ಯುತಿಸಂಶ್ಲೇಷಣೆ ಯಲ್ಲಿ ಸೂರ್ಯನ ಕಿರಣಗಳ ಶಕ್ತಿ ಸಸ್ಯಗಳ ಕ್ಲೋರೋಪ್ಲಾಸ್ಟುಗಳಲ್ಲಿ ಎ.ಡಿ.ಪಿ.ಯು ಎ.ಟಿ.ಪಿ.ಯಾಗುವುದರ ಮೂಲಕ ಹಿಡಿಯಲ್ಪಡುತ್ತದೆ. ಥಯೋಸಲ್ಫೇಟು, ಜಲಜನಕ ಸಲ್ಫೈಡು, ಗಂಧಕ, ಅಮೋನಿಯ, ನೈಟ್ರೇಟುಗಳು ಮತ್ತು ಜಲಜನಕ-ಇಂಥ ಪದಾರ್ಥಗಳ