ಪುಟ:Mysore-University-Encyclopaedia-Vol-1-Part-1.pdf/೨೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಉತ್ಕರ್ಷಣದಿಂದ ಕೆಲವು ಜೀವಿಗಳು ಶಕ್ತಿ ಪಡೆಯುತ್ತವೆ. ಇಲ್ಲಿಯೂ ಎ.ಡಿ.ಪಿ. ತಯಾರಾಗುತ್ತದೆ. ಎಲೆಕ್ಟ್ರಾನುಗಳು ಶಕ್ತಿ ಉನ್ನತಮಟ್ಟದಿಂದ ಕೆಳಮಟ್ಟಕ್ಕೆ ಇಳಿಯುವುದ ರಿಂದಲೇ ಶರ್ಕರ ವ್ಯಯಪಥವನ್ನು ಬಿಟ್ಟು ಉಳಿದ ಸಂದರ್ಭಗಳಲ್ಲಿ ಎ.ಡಿ.ಪಿ.ಯಿಂದ ಎ.ಟಿ.ಪಿ. ಉಂಟಾಗುವುದು. ಈ ಎಲ್ಲ ರೀತಿಗಳಲ್ಲಿ ಉತ್ಪತ್ತಿಯಾದ ಎ.ಟಿ.ಪಿ. ಅಷ್ಟೂ ಜೀವಿಗಳಲ್ಲಿ ಶೇಖರಣೆ ಯಾಗುವುದಿಲ್ಲ. ಶಕ್ತಿ ಪ್ರಕೃತಿಯಲ್ಲಿ ಜಿಡ್ಡು ಮತ್ತು ಕಾರ್ಬೊಹೈಡ್ರೇಟುಗಳ ರೂಪದಲ್ಲಿ ಶೇಖರವಾಗುತ್ತದೆ. ಎ.ಟಿ.ಪಿ. ಅನೇಕ ಜೀವರಾಸಾಯನಿಕ ವಿಶ್ಲೇಷಣೆ ಮತ್ತು ಸಂಶ್ಲೇಷಣೆಗಳಿಗೆ ಅತ್ಯಗತ್ಯವಾದುದು. ಉದಾಹರಣೆಗೆ, ಇದಿಲ್ಲದಿದ್ದರೆ ಪ್ರೋಟೀನು ಸಂಶ್ಲೇಷಣೆ ಆಗುವುದಿಲ್ಲ. ಅಮೈನೋ ಆಮ್ಲಗಳು ಕ್ರಿಯಾಶೀಲವಾಗಲು ಮತ್ತು ಪೆಪ್ಟೈಡು ಬಂಧಗಳ ರಚನೆಯಲ್ಲಿ ಬೇಕಾಗುವ ಜಿ.ಟಿ.ಪಿ. ಪುನರುತ್ಪತ್ತಿಯಾಗಲು ಇದು ಅವಶ್ಯ. ನ್ಯೂಕ್ಲಿಯಕ್ ಆಮ್ಲಗಳ ಜೈವಿಕ ಸಂಶ್ಲೇಷಣೆಗೂ ಇತರ ನ್ಯೂಕ್ಲಿಯೊಸೈಡ್ ಟ್ರೈಫಾಸ್ಫೇಟುಗಳ ಉತ್ಪಾದನೆಗೂ ಇದು ಬೇಕಾಗುತ್ತದೆ. ಮೇದಸ್ಸು ಮತ್ತು ಮೇದಸ್ಸಿನ ಆಮ್ಲಗಳು ಟರ್ಪೀನುಗಳು, ಸಿಟ್ರಾಲ್‍ಗಳು ಮತ್ತು ಫಾಸ್ಫೊಲಿಪಿಡ್ಡುಗಳ ಉತ್ಪಾದನೆಯ ಬೇರೆ ಬೇರೆ ಹಂತಗಳಲ್ಲಿ ಎ.ಟಿ.ಪಿ. ಆವಶ್ಯಕ. ಎ.ಟಿ.ಪಿ. ಒಂದು ವಿಧದಲ್ಲಿ ರಾಸಾಯನಿಕ ಶಕ್ತಿಯ ಬಳಕೆರೂಪ. ಶಕ್ತಿ ಬೇಕಾಗುವ ಜೀವರಾಸಾಯನಿಕ ಸಂಶ್ಲೇಷಣಾ ಕ್ರಿಯೆಗಳೆಲ್ಲದಕ್ಕೂ ಅತ್ಯಾವಶ್ಯಕ. ಗ್ಲೂಕೋಸ್ ವ್ಯಯಪಥ ಕೊನೆಯ ಹಂತಗಳಲ್ಲಿ ಎರಡಕ್ಕೆ ಎ.ಟಿ.ಪಿ. ಸಂಶ್ಲೇಷಣೆ ನಡೆದರೂ ಶರೀರಶಾಸ್ತ್ರ ದೃಷ್ಟಿಯಿಂದ ಹೇಳುವುದಾದರೆ ಶಕ್ತಿಗ್ರಾಹಕ ಕ್ರಿಯೆಗಳಾದ ಮಾಂಸಖಂಡಗಳ ಸಂಕೋಚನೆ, ಫ್ಲಾಜೆಲ್ಲಾ ಮತ್ತು ಸೀಲಿಮಗಳ ಚಲನೆ, ಶ್ರಮಪೂರ್ವಕ ಚಾಲನೆ (ಆ್ಯಕ್ಟಿವ್ ಟ್ರಾನ್ಸ್‍ಪೋರ್ಟ್) ಮತ್ತು ನರಗಳಲ್ಲಿ ನಡೆಯುವ ವಿದ್ಯುತ್‍ಕ್ರಿಯೆಗಳಲ್ಲಿ ಹೆಚ್ಚಿನ ಕ್ರಿಯೆ-ಇವೆಲ್ಲಕ್ಕೂ ಇದು ಬೇಕಾಗುತ್ತದೆ. ಒಟ್ಟಿನಲ್ಲಿ ಎ.ಟಿ.ಪಿ. ಜೀವಪ್ರಪಂಚದ ಎಲ್ಲೆಡೆಯಲ್ಲೂ ಶಕ್ತಿ ವಿನಿಮಯಕ್ಕಾಗಿ ಚಲಾವಣೆಯಲ್ಲಿರುವ ನಾಣ್ಯ ಎನ್ನಬಹುದು. (ಎಂ.ಆರ್.ಆರ್.) ಅಡ್ಜುಟೆಂಟ್ ಹಕ್ಕಿ : ಆಫ್ರಿಕ ಮತ್ತು ಏಷ್ಯ ಖಂಡಗಳ ಕೊಕ್ಕರೆಗಳಲ್ಲಿ ಅತ್ಯಂತ ದೊಡ್ಡದೂ ೨-೨.೩ಮೀ ವಿಕಾರವೂ ಆಗಿರುವ ಪಕ್ಷಿ. ತಲೆ ನುಣ್ಣಗಿದೆ. ಕೊಕ್ಕು ತುಂಬ ದೊಡ್ಡದು; ಕತ್ತಿನ ಕೆಳಭಾಗದಲ್ಲಿ ಒಂದು ಚೀಲ ನೇತಾಡುತ್ತದೆ. ಮಿಲಿಟರಿ ಅಧಿಕಾರಿಗಳಂತೆ ಇದು ಗಂಭೀರವಾಗಿ ನಡೆಯುವುದರಿಂದ ಇದಕ್ಕೆ ಈ ಹೆಸರು ಬಂತು. ಕೊಕ್ಕು ಗಟ್ಟಿಯಾಗಿ ಬೋಳಾಗಿದೆ. ತಲೆಯನ್ನು ಎಳೆಗೂದಲು ಆವರಿಸಿದೆ. ಗರಿಗಳು ಬಿರುಸಾಗಿವೆ; ನಾಜೂಕಾಗಿಲ್ಲ. ಕಾಲುಗಳು ಉದ್ದ, ಬಲವುಳ್ಳವು; ಅವುಗಳ ಮೇಲೆ ಯಾವ ಹೊದ್ದಿಕೆಯೂ ಇಲ್ಲ. ರೆಕ್ಕೆ ಹರವಾಗಿದೆ. ಮನುಷ್ಯರ ವಾಸಸ್ಥಾನಗಳಿಗೆ ಈ ಹಕ್ಕಿ ಹೊಂದಿಕೊಂಡಿದೆ ಮತ್ತು ಹೊಲಸನ್ನು ನಿರ್ಮೂಲ ಮಾಡುವುದರಲ್ಲಿ ಒಳ್ಳೆಯ ಪಾತ್ರವಹಿಸುತ್ತದೆ. ಹಾವುಗಳನ್ನು ತಿನ್ನುತ್ತದಾದರೂ ಹೆಚ್ಚಾಗಿ ಹೆಣಗಳೇ ಇದರ ಆಹಾರ. ಅಲುಗಾಡದೆ ಬೆನ್ನಿಗೆ ಕೊರಳನ್ನು ಚಾಚಿಕೊಂಡು ದೀರ್ಘಕಾಲ ನಿಲ್ಲಬಲ್ಲದು. ಓಡಾಟಗಳೆಲ್ಲ ಹಗಲಿನಲ್ಲೇ. ಉತ್ತರ ಭಾಗದಲ್ಲಿರುವುವು ಪಯಣಿಗ ಹಕ್ಕಿಗಳು. ಭಾರತಕ್ಕೆ ಬೇಸಗೆಯಲ್ಲಿ ಬರುತ್ತವೆ; ಬೇಸಗೆ ಮುಗಿವ ಹೊತ್ತಿಗೆ ಬಂಗಾಲದಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳುತ್ತವೆ. ಇವನ್ನು ಕೊಲ್ಲಬಾರದೆಂದು ಭಾರತ ಸರ್ಕಾರ ಕಾಯಿದೆ ಮಾಡಿದೆ. ಸಾಮಾನ್ಯವಾಗಿ ಇವು ದೊಡ್ಡ ದೊಡ್ಡ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಾರಾಟ ಅಷ್ಟು ಹಗುರವಲ್ಲ, ರೆಕ್ಕೆಗಳ ಬಡಿತ ಹೆಚ್ಚು; ಆದರೂ ವೇಗವಾಗೂ ತುಂಬ ಎತ್ತರಕ್ಕೂ ಹಾರಬಲ್ಲವು. ಆಫ್ರಿಕದ ಜಾತಿಯ ಹಕ್ಕಿಯ ತಲೆ ಮಾಂಸದಂತೆ ಕೆಂಪಾಗಿದೆ; ಬೆನ್ನಿನ ತುಪ್ಪಳದ ಬಣ್ಣ ಲೋಹದ ಕಪ್ಪು ಹಸಿರು, ಕೊರಳು ಮತ್ತು ಕೆಳಭಾಗ ಬಿಳಿ. (ಎಂ.ವಿ.ಎ.) ಅಡ್ಡಗಟ್ಟು : ಅಧಿಕ ನೀರಿನಾಳವನ್ನು ಪಡೆಯಲು ಹರಿಯುವ ನದಿಗಡ್ಡಲಾಗಿ ನಿರ್ಮಿಸುವ ಕೃತಕ ತಡೆಗೆ ಇಂಜಿನಿಯರಿಂಗ್‍ನಲ್ಲಿ ಈ ಹೆಸರಿದೆ (ಬ್ಯಾರಾಜ್). ಸಾಮಾನ್ಯವಾಗಿ ನೀರಿನ ಮಟ್ಟಕ್ಕಿಂತ ಎತ್ತರವಾಗಿರುವ ಈ ತಡೆಗಳಲ್ಲಿ ಹಲವು ಅಂಕಣಗಳಿರುತ್ತವೆ (ಸ್ಪ್ಯಾನ್). ಒಂದೊಂದು ಅಂಕಣವನ್ನೂ ದೊಡ್ಡ ದೊಡ್ಡ ಉಕ್ಕಿನ ಬಾಗಿಲುಗಳಿಂದ ಮುಚ್ಚಿ ಅಗತ್ಯಬಿದ್ದಾಗ ತೆರೆಯಲನುಕೂಲವಾಗುವಂತೆ ಮಾಡಿರುತ್ತಾರೆ. ಅಡ್ಡಗಟ್ಟಿನ ಮೇಲುಭಾಗದಲ್ಲಿ ಸಂಚಾರಕ್ಕನುಕೂಲವಾಗುವಂಥ ಸೇತುವೆ ಇರುತ್ತದೆ. ನದಿಯಲ್ಲಿ ಮಹಾಪ್ರವಾಹವುಂಟಾದರೂ ನೀರಿನ ಮಟ್ಟವನ್ನು ಅಂಕಣಬಾಗಿಲುಗಳ ಸಹಾಯದಿಂದ ನಿಯಂತ್ರಿಸಿ ನೀರು ಮೇಲೆ ಹರಿಯದಂತೆ ಮಾಡಬಹುದು. ಅಡ್ಡಗಟ್ಟುಗಳಿಂದ ನೀರಾವರಿ ವ್ಯವಸಾಯಕ್ಕೆ ಹೆಚ್ಚಿನ ಉಪಯೋಗವಾಗಿದೆ. ಉತ್ತರಭಾರತದ ಸಿಂಧು ಪ್ರಾಂತದಲ್ಲಿ ಸುಕ್ಕೂರಿಗೆ ಸು. ೫ಕಿಮೀ ದೂರದಲ್ಲಿ ನಿರ್ಮಿಸ ಲಾದ (೧೯೨೭) ಇಂಥ ಒಂದು ಅಡ್ಡಗಟ್ಟು ಹಿಂದೆ ಭಾರತಕ್ಕೆ ಸೇರಿದ್ದು ಈಗ ಪಾಕಿಸ್ತಾನಕ್ಕೆ ಸೇರಿದೆ. ಇದು ಅತ್ಯಂತ ವ್ಯಾಪಕವಾದ ನೀರಾವರಿ ಯೋಜನೆಗಳಲ್ಲೊಂದಾಗಿದೆ. ಇದರಿಂದ ಏಳು ದೊಡ್ಡ ನೀರಾವರಿ ನಾಲೆಗಳು ಹೊರಟು ೫೩ ಲಕ್ಷ ಎಕರೆಗಳಿಗೆ ನೀರನ್ನೊದಗಿಸಲಾಗಿದೆ. ಅಡ್ಡಗಟ್ಟಿನಲ್ಲಿ ೧೮'ಮೀ ಅಗಲದ ೩೬ ಅಂಕಣಗಳಿದ್ದು ಇವುಗಳ ನಡುವಣ ಕಲ್ಲುಗಾರೆಯ ಕಂಬಗಳು ೨'ಮೀ ಅಗಲವಾಗಿವೆ. ಒಂದೊಂದು ಅಂಕಣವನ್ನು ೪೬ ಟನ್‍ತೂಕದ ೬೩ ೧/೪ ಅಗಲ, ೧೮ ೧/೨ ಎತ್ತರದ ಉಕ್ಕಿನ ಬಾಗಿಲಿನಿಂದ ಮುಚ್ಚಲಾಗಿದೆ. ಒಂದೊಂದು ಬಾಗಿಲನ್ನೂ ಭದ್ರವಾದ ಕಾಂಕ್ರೀಟಿನ ಭಾರದಿಂದ ಸರಿತೂಗಿಸಿದ್ದಾರೆ. ಅಡ್ಡಗಟ್ಟಿನ ಮೇಲುಗಡೆ ತಳದಿಂದ ೩೯' ಎತ್ತರದಲ್ಲಿ ಒಂದು ಮತ್ತು ೬೨ ೧/೨ ಎತ್ತರದಲ್ಲಿ ಒಂದು-ಹೀಗೆ ಎರಡು ಸಂಚಾರಾನುಕೂಲವಾದ ಸೇತುವೆಗಳಿವೆ. ಅಡ್ಡಗಟ್ಟಿನ ಒಟ್ಟು ಉದ್ದ ಒಂದೂವರೆ ಕಿಮೀ ಗಿಂತ ಸ್ವಲ್ಪ ಹೆಚ್ಚಾಗಿದೆ. ಅದು ನದಿ ನೀರಿನ ಮಟ್ಟವನ್ನು ಎಂಥ ಮಹಾಪ್ರವಾಹದಲ್ಲಾದರೂ ಸಂಪೂರ್ಣವಾಗಿ ನಿಯಂತ್ರಣ ಮಾಡಬಲ್ಲುದು. (ಎಚ್.ಸಿ.ಕೆ.) ಅಡ್ಡಗೂಡಣೆ : ವೈದ್ಯದಲ್ಲಿ, ಎರಡು ರಕ್ತನಾಳಗಳ (ಧಮನಿಗಳು, ಸಿರಗಳು), ಜಠರ ಕರುಳುಗಳ ಇಲ್ಲವೇ ನರಗಳ ನಡುವೆ ಆಗಿರುವ ಸಂಬಂಧ ಕಲ್ಪನೆ. ಕರುಳಲ್ಲೋ ಜಠರದಲ್ಲೋ, ವಿಷಮಗಂತಿ ಹುಣ್ಣಿಗಾಗಿ ಆ ಭಾಗವನ್ನು ಪೂರ್ತಿ ತೆಗೆದು ಹಾಕಿದಾಗ ಆಹಾರ ಮುಂದೆ ಸಾಗಿಸುವಂತೆ, ಶಸ್ತ್ರಕ್ರಿಯೆಯಿಂದ ಸಹಜವಾಗಿ ದೂರವಿರುವ ಕರುಳುಗಳಂಥ ಪೊಳ್ಳುಗಳನ್ನೋ, ಅಂಗಗಳನ್ನೋ ಕೂಡಿಸುವ ದಾರಿ ಮಾಡುವುದುಂಟು. ಅದೇ ಅಡ್ಡಗೂಡಣೆ (ಅನಾಸ್ಟಮೋಸಿಸ್). ಧಮನಿಗಳು ಕವಲೊಡೆದು ಕಿರಿಯ ಶಾಖೆಗಳಾಗುತ್ತ ಹೋದಂತೆಲ್ಲ ಪಕ್ಕದವೊಂದಿಗೆ ಕೂಡಿಕೊಳ್ಳುತ್ತವೆ. ಆದರೆ ಪುಪ್ಪುಸ, ತೊರಳೆ, ಮೂತ್ರಪಿಂಡ, ಕಣ್ಣಿನ ಕಣ್ಜಾಲ (ರೆಟಿನ), ಮಿದುಳು, ಗುಂಡಿಗೆಗಳ ಧಮನಿಗಳು ಹೀಗೆ ಒಂದರೊಡನೊಂದು ಕೂಡದಿರುವುದರಿಂದ ಎಲ್ಲಾದರೂ ಒಂದು ಕವಲಿಗೆ ಆತಂಕವಾದರೂ ರಕ್ತ ಮುಂದೆ ಹರಿಯದೆ ಆ ಭಾಗವೇ ಸಾಯುತ್ತದೆ. ಸಿರಗಳಲ್ಲಿ ಹೀಗಾಗದು. ಇವು ಒಂದಕ್ಕೊಂದು ಬಹಳ ಕಡೆಗಳಲ್ಲಿ ಕೂಡುತ್ತವೆ. ಈಲಿಯೊಳಕ್ಕೆ ರಕ್ತ ಸಾಗಿಸುವ ದೊಡ್ಡ ಸಿರ ಮಾತ್ರ ಇದಕ್ಕೆ ಹೊರತು. ಕಿರೀಕಿರಿಯ ಧಮನಿಗಳಿಗೂ ಸಿರಗಳಿಗೂ ನಡುವೆ ಲೋಮನಾಳಗಳು ಮೈಯಲ್ಲಿ ಎಲ್ಲೆಲ್ಲೂ ಅಡ್ಡಗೂಡಿಸುತ್ತವೆ. ಒಂದು ಅಂಗದ ನರ ಕೆಟ್ಟಿದ್ದರೆ, ಪಕ್ಕದಲ್ಲಿರುವ ಬೇರೊಂದು ನರವನ್ನು ಇದಕ್ಕೆ ಅಡ್ಡಗೂಡಿಸಿದರೆ ಅದಕ್ಕೆ ತಗಲಿರುವ ಸ್ನಾಯುಗಳು ಮತ್ತೆ ಚಲಿಸುವಂತಾಗುತ್ತವೆ. (ಡಿ.ಎಸ್.ಎಸ್) ಅಡ್ಡಗೋಡೆ : ಗೃಹ, ಸೌಧ, ಕಚೇರಿಗಳು, ಕಾರ್ಯಾಲಯಗಳು ಇವುಗಳಲ್ಲಿ ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಯನ್ನು ಬೇರ್ಪಡಿಸಲು ಕಟ್ಟುವ ಗೋಡೆ. ಅಡ್ಡಗೋಡೆಗಳನ್ನು ಕಟ್ಟಡದ ಅಂಗಳದಿಂದ ಊಟದ ಕೊಠಡಿ, ಶಯನಗೃಹದಿಂದ ಶೌಚಾಗೃಹ, ಅಡಿಗೆಯ ಕೊಠಡಿಯಿಂದ ಉಗ್ರಾಣದ ಕೊಠಡಿ, ಇಂತಹವುಗಳ ನಡುವೆ ಕಟ್ಟುತ್ತಾರೆ. ದೊಡ್ಡ ಸೌಧಗಳಲ್ಲಿ ಇಂಥ ಗೋಡೆಗಳನ್ನು ಅಗತ್ಯವಾದ ಸ್ಥಳಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಕಟ್ಟುತ್ತಾರೆ. ಇದರ ಎತ್ತರ ಸಾಮಾನ್ಯವಾಗಿ ನೆಲದಿಂದ ಮೇಲ್ಛಾವಣಿಯವರೆಗೂ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಎತ್ತರವನ್ನು ೧೨೦ - ೨೦೦ ಸೆಂಮೀಗಳಿಗೆ ನಿಲ್ಲಿಸಿರುತ್ತಾರೆ. ಇಂಥ ಗೋಡೆಯನ್ನು ಮೋಟು ಗೋಡೆ ಎನ್ನಬಹುದು. ಈ ಗೋಡೆಗಳು ಮೇಲ್ಛಾವಣಿಯ ಭಾರ ಅಥವಾ ಅಕ್ಕಪಕ್ಕದ ಭಾರಗಳನ್ನು ತಡೆಯಲಾರವು. ಆದ್ದರಿಂದ ತಳಪಾಯವಿಲ್ಲದೆ ನೆಲದ ಮಟ್ಟದಿಂದ ಕೂಡ ಇವನ್ನು ಕಟ್ಟಬಹುದು. ಅಡ್ಡಗೋಡೆಯ ದಪ್ಪ ೧/೨ ಇಟ್ಟಿಗೆ, ಅಂದರೆ ೪ ೧/೨” ಅಥವಾ ೧೦ ಸೆಂಮೀಗಳು; ಪ್ರಬಲಿತ ಕಾಂಕ್ರೀಟ್‍ನಲ್ಲಿ ಕಟ್ಟಿದರೆ ದಪ್ಪವನ್ನು ೬.೫ ಸೆಂಮೀಗೆ ಇಳಿಸಬಹುದು. ಅಡ್ಡಗೋಡೆಗಳಲ್ಲಿ ಬಾಗಿಲುಗಳನ್ನೂ ಇರಿಸಬಹುದು. ಇಟ್ಟಿಗೆಯಿಂದ ಕಟ್ಟುವ ಅಡ್ಡಗೋಡೆಗಳಿಗೆ ಸಿಮೆಂಟು ಗಾರೆ ಚೆನ್ನಾಗಿ ತುಳಿದು ಹದ ಮಾಡಿದ ಮಣ್ಣಿನ ಗಾರೆ ಮುಂತಾದವುಗಳನ್ನು ಉಪಯೋಗಿಸಬೇಕು. ಗೋಡೆ ಭದ್ರವಾಗಿರಲು ಪ್ರತಿ ೯೦ ಸೆಂಮೀ ಎತ್ತರದಲ್ಲಿ ೬ ಮಿಮೀ ದುಂಡು ಕಂಬಿಯನ್ನು ಇಟ್ಟು ೭.೫ ಸೆಂಮೀ ದಪ್ಪದ ಕಾಂಕ್ರೀಟ್ ಹಾಕುತ್ತಾರೆ. ಅನಂತರ ಗೋಡೆಯ ಎರಡೂ ಪಕ್ಕಗಳಲ್ಲಿ ಸಿಮೆಂಟ್ ಅಥವಾ ಸುಣ್ಣದ ಗಾರೆಗಳಿಂದ ಗಿಲಾವು ಮಾಡುತ್ತಾರೆ. ಕಾಂಕ್ರೀಟ್‍ನಲ್ಲಿ ಅಡ್ಡಗೋಡೆ ಕಟ್ಟಿದಾಗ ೩ ನೂಲು ದಪ್ಪದ ಕಂಬಿಯನ್ನು ಎತ್ತರದಲ್ಲೂ ೧ ನೂಲು ದಪ್ಪದ ಕಂಬಿಯನ್ನು ಅಡ್ಡದಲ್ಲೂ ಪ್ರತಿ ಕಂಬಿಗಳೂ ೧೫ ಸೆಂ.ಮೀ. ದೂರ ಇರುವಂತೆ ಎಳೆದು ನೆಲದ ಮೇಲೆ ನಿಲ್ಲಿಸಿ ಕಾಂಕ್ರೀಟ್ ಹಾಕುತ್ತಾರೆ. ಅನಂತರ ಸಿಮೆಂಟ್ ಗಿಲಾವು ಮಾಡಿ ೨೧ ದಿನಗಳ ಕಾಲ ಗೋಡೆಯನ್ನು ಒದ್ದೆಯಾಗಿ ಇಟ್ಟಿರುತ್ತಾರೆ. ಮರದ ಹಲಗೆಗಳು ಮತ್ತು ಗಾಜುಗಳನ್ನು ಉಪಯೋಗಿಸಿ ಅಡ್ಡಗೋಡೆಗಳನ್ನು ತಯಾರಿಸಬಹುದು. ಮರದ ಹಲಗೆಯ ಮೇಲೆ ಅಂದ ಚೆಂದದ ಕೆತ್ತನೆಯ ಕೆಲಗಳನ್ನು ಮಾಡಿಸಿರುತ್ತಾರೆ. ಇಂಥ ಅಡ್ಡಗೋಡೆಗಳು ಬೇಕಾದಾಗ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸಲು ಯೋಗ್ಯವಾದುವುಗಳು. (ಜಿ.ಟಿ.ಜಿ.) ಅಡ್ಡತಡೆ : ಶತ್ರುವಿನ ಮುನ್ನಡೆಯನ್ನು, ಮುಖ್ಯವಾಗಿ ಆತನ ವಾಹನಗಳ ಮುನ್ನಡೆಯನ್ನು ತಡೆಯುವುದಕ್ಕಾಗಿ ಬೀದಿ ಅಥವಾ ಹಾದಿಗೆ ಅಡ್ಡಲಾಗಿ ಮಣ್ಣು, ಇಟ್ಟಿಗೆ, ಕಲ್ಲು, ಮರದ ದಿಮ್ಮಿ ಇವುಗಳಲ್ಲಿ ಯಾವುದಾದರೊಂದನ್ನು ಅಥವಾ ಹಲವನ್ನು ಬಳಸಿ ಮಾಡಿದ ಅಡ್ಡಗೋಡೆ (ಬ್ಯಾರಿಕೇಡ್); ಅವಸರವಸರವಾಗಿ ಮಾಡಿದ ಆಳ್ವೇರಿ. (ಎ.ಎನ್.ಎಸ್.ಎಂ., ಎಂ.ಜಿ.ಎಸ್.) ಅಡ್ಡತಳಿಯೆಬ್ಬಿಕೆ : ಅಪೇಕ್ಷಿತ ಗುಣ, ಲಕ್ಷಣಗಳನ್ನು ಪಡೆಯಲು ಜೀವಿಗಳನ್ನು ಕೃತಕ ವೀರ್ಯಪೂರಣ ಅಥವಾ ಪರಕೀಯ ಪರಾಗಸ್ಪರ್ಶದ ಮೂಲಕ ಫಲೀಕರಿಸಿ ಉತ್ಪಾದಿಸುವ ಸಂಕರ/ಮಿಶ್ರ ತಳಿ ವಿಧಾನ (ಕ್ರಾಸ್‍ಬ್ರೀಡ್). ಸಿಂಧಿ ಹಸುವಿನ ಮೇಲೆ