ಪುಟ:Mysore-University-Encyclopaedia-Vol-1-Part-1.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಣಬೆ ಕೃಷಿಯ ಪ್ರಯೋಜನಗಳು: 1 ಅಣಬೆ ಕೃಷಿಗೆ ಕಡಿಮೆ ಜಾಗಬೇಕಾಗಿದ್ದು, ಸಣ್ಣ ರೈತರು, ಭೂರಹಿತರು ಮತ್ತು ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಬಹುದಾಗಿದೆ. 2 ಅಣಬೆಗಳು ಗೋದಿ, ಬತ್ತದ ಹುಲ್ಲು ಇತ್ಯಾದಿ ಸಾವಯವ ವಸ್ತುಗಳ ಮೇಲೆ ಹುಲುಸಾಗಿ ಬೆಳೆಯುವುದರಿಂದ ಇಂತಹ ವಸ್ತುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಇವು ದನಕರುಗಳಿಗೆ ಅಷ್ಟೇನೂ ಪುಷ್ಟಿಕರ ಮೇವಲ್ಲ. 3 ಅಣಬೆಗಳಲ್ಲಿ ತರಕಾರಿಗಳಿಗಿಂತ ಉತ್ತಮ ಪೌಷ್ಟಿಕಾಂಶಗಳಿರುವುದರಿಂದ ಕುಟುಂಬದ ಸಲುವಾಗಿ ಸಣ್ಣ ಪ್ರಮಾಣದಲ್ಲಿ ಬೆಳೆದು, ತಮ್ಮ ಆಹಾರದಲ್ಲಿನ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಬಹುದು. 4 ಅಣಬೆ ಕೃಷಿಯನ್ನು ವೈಜ್ಞಾನಿಕವಾಗಿ ದೊಡ್ಡ ಪ್ರಮಾಣದಲ್ಲಿ ಕೈಗೊಂಡಲ್ಲಿ ಹೆಚ್ಚಿನ ವಿದೇಶಿ ವಿನಿಮಯಗಳಿಸಬಹುದಾಗಿದೆ. 5 ಅಣಬೆ ಉದ್ದಿಮೆಯಲ್ಲಿ ರಸಾಯನಿಕ ಉದ್ದಿಮೆಗಳಂತೆ ಪರಿಸರ ಮಾಲಿನ್ಯವಿರುವುದಿಲ್ಲ. 6 ಪಾಶ್ಚಿಮಾತ್ಯ ದೇಶಗಳಲ್ಲಿ ಔಷಧೀಯ ಅಣಬೆಗಳಿಗೆ ಬಹಳಷ್ಟು ಬೇಡಿಕೆಯಿರುವುದರಿಂದ, ಉತ್ತಮ ಸಂಶೋಧನೆಯಿಂದ ನಮ್ಮ ದೇಶದಲ್ಲಿರುವ ಇಂತಹ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ನಮ್ಮ ರಾಜ್ಯದ ಮಲೆನಾಡು ಮತ್ತು ಬಯಲುಸೀಮೆಗಳಲ್ಲಿ ಅನೇಕ ಜಾತಿಯ ಅಣಬೆಗಳ ಸ್ವಾಭಾವಿಕ ಸಂಪನ್ಮೂಲಗಳಿದ್ದು, ಅವುಗಳ ಬಗ್ಗೆ ಕೂಲಂಕಷ ಅಧ್ಯಯನ ನಡೆಯಬೇಕಾಗಿದೆ. ಇಂತಹ ಅಧ್ಯಯನಗಳನ್ನು ಕೈಗೆತ್ತಿಕೊಂಡು, ಅಣಬೆಗಳ ಶೋಧನೆ ಸ್ವಾಭಾವಿಕವಾಗಿ ಲಭ್ಯವಿರುವ ಖಾದ್ಯ ಅಣಬೆಗಳ ಕೃಷಿಗೈಯುವ ಸಾಧ್ಯತೆ ಹಾಗೂ ಕರ್ನಾಟಕ ರಾಜ್ಯ ಭೂಪಟದಲ್ಲಿ ಅಣಬೆಗಳ ನಿಕ್ಷೇಪಗಳನ್ನು ಗುರುತಿಸುವಂಥ ಸಂಶೋಧನೆ, ಕೃಷಿ ವಿಶ್ವವಿದ್ಯಾನಿಲಯಗಳ, ಸಂಶೋಧನಾ ಸಂಸ್ಥೆಗಳ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಖಾದ್ಯ ಅಣಬೆಗಳು : ತಿನ್ನಲು ಯೋಗ್ಯವಾದ ಅಣಬೆಗಳಿಗೆ ಖಾದ್ಯ ಅಣಬೆಗಳು ಅಥವಾ ಆಹಾರ ಅಣಬೆಗಳೆಂದು ಕರೆಯಲಾಗಿದೆ. ಈಗಾಗಲೇ ತಿಳಿಸಿರುವಂತೆ ಅಣಬೆಗಳು ಹೇರಳವಾಗಿ ಪ್ರೋಟೀನ್‍ಗಳು, ಜೀವಸತ್ವಗಳು ಹಾಗೂ ಲವಣಗಳನ್ನು ಹೊಂದಿರುವುದರಿಂದ ಅವು ಪುಷ್ಟಿದಾಯಕ ಆಹಾರಕವಾಗಿವೆ. ಇವುಗಳು ಇತರೆ ಅಣಬೆಗಳಿಗೇನೂ ಭಿನ್ನವಾಗಿರುವುದಿಲ್ಲ. ಕೆಲವೊಮ್ಮೆ ವಿಷ ಅಣಬೆಗಳಂತೆಯೇ ಇರುತ್ತವೆ. ಒಂದೇ ಜಾತಿಯ ಅಥವಾ ವರ್ಗಕ್ಕೆ ಸೇರಿದ ಅಣಬೆಗಳಲ್ಲಿಯೇ ಕೆಲವು ಪ್ರಭೇದಗಳು ಖಾದ್ಯ ಅಣಬೆಗಳಾಗಿದ್ದು ಮತ್ತೆ ಕೆಲವು ವಿಷ ಅಣಬೆಗಳಾಗಿರುತ್ತವೆ. ವಿಷ ಅಣಬೆಗಳು : ಮಾನವನ ಶರೀರಕ್ಕೆ ಹಾನಿಕಾರಕ ಅಥವಾ ಮಾರಕವಾದ ಅಣಬೆಗಳನ್ನು ವಿಷ ಅಣಬೆಗಳೆಂದು ಕರೆಯುತ್ತಾರೆ. ವಿಷ ಅಣಬೆಗಳಲ್ಲಿ ವಿವಿಧ ಬಗೆಯ ವಿಷಗಳಿದ್ದು ಅವು ಶರೀರದ ಅಂಗಾಂಗಗಳ ಮೇಲೆ ಪರಿಣಾಮ ಬೀರಬಲ್ಲವು. ಅಣಬೆಗಳ ವಿಷಕ್ಕೆ ಬಲಿಯಾದ ಅನೇಕ ರಾಜಮಹಾರಾಜರುಗಳ ಹೆಸರುಗಳು ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿವೆ. ಸೀಸರ್‍ನನ್ನು ತನ್ನ ಪತ್ನಿಯೇ ಅಮಾನಿಟ ಮಸ್ಕಾರಿಯಾ ಎಂಬ ವಿಷ ಅಣಬೆಯ ಭೋಜನದಿಂದ ಕೊಂದಿದ್ದಾಳೆಂದು ಹೇಳಲಾಗಿದೆ. ಆದ್ದರಿಂದಲೇ ಈ ಅಣಬೆಯ ಒಂದು ಪ್ರಭೇದಕ್ಕೆ ಅಮ್ಯಾನಿಟ ಸಿಸೇರಿಯಾ ಎಂದು ಕರೆಯಲಾಗಿದೆ. ಆದರೆ, ಈ ಅಣಬೆ ವಿಷ ಅಣಬೆಯಲ್ಲ. ಬಹುಶಃ ಈ ಎರಡು ಅಣಬೆಗಳು ಒಂದೇ ಗುಂಪಿನವಾದ್ದರಿಂದ ಅಮ್ಯಾನಿಟಾ ಮಸ್ಕೇರಿಯಾ ಬದಲಾಗಿ ಅಮ್ಯಾನಿಟ ಸಿಸೇರಿಯಾ ಎಂದು ಕರೆದಿರಬಹುದು. ಔಷಧೀಯ ಅಣಬೆಗಳು : ಅನೇಕ ಬಗೆಯ ಗಿಡಮೂಲಿಕೆಗಳಂತೆ ಶಿಲೀಂಧ್ರ ಜನಿತ ಔಷಧಿಗಳ ಬಳಕೆಯು ಮಾನವನಿಗೆ ತಿಳಿದಿತ್ತು. ದಿವ್ಯೌಷಧಿಗಳೆಂದು ಹೆಸರುವಾಸಿಯಾದ ಪೆನಿಸಿಲಿನ್ ಇತ್ಯಾದಿಗಳು ಜೀವನಿರೋಧಕಗಳು. ಶಿಲೀಂಧ್ರ ಮತ್ತು ಇತರೆ ಸೂಕ್ಷ್ಮ ಜೀವಿಗಳಿಂದ ಸ್ರವಿಸುವ ರಸಾಯನಿಕಗಳಾಗಿದ್ದು ಅದೇ ಗುಂಪಿನ ಜೀವಾಣುಗಳಿಗೆ ಮಾರಕವಾಗಿವೆ. ಇದೇ ರೀತಿ ಹಲವು ಜಾತಿಯ ಅಣಬೆಗಳು ಸಹ ಔಷಧೀಯ ಗುಣಗಳನ್ನು ಹೊಂದಿದ್ದು ಅವುಗಳನ್ನು ಔಷಧಿಯಲ್ಲಿ ಬಳಸಲಾಗುತ್ತಿದೆ. ಆಹಾರ ಅಣಬೆಗಳು ಮತ್ತು ವಿಷ ಅಣಬೆಗಳು ಎರಡರಲ್ಲೂ, ಔಷಧೀಯ ಗುಣಗಳಿದ್ದು ಅವುಗಳನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ ಅನೇಕ ರೀತಿಯ ಅಣಬೆಗಳಿಂದ ಸಿದ್ಧಪಡಿಸಿದ ಔಷಧಿಗಳನ್ನು ಗುಳಿಗೆ, ಕ್ಯಾಪ್ಸೂಲ್ ಮತ್ತು ಸಿರಪ್‍ಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. 1991 ರಲ್ಲಿ ಜಗತ್ತಿನ ಅಣಬೆ ಉತ್ಪತ್ತಿಯನ್ನು ಮೌಲ್ಯವನ್ನು 8.5 ಬಿಲಿಯನ್ ಡಾಲರುಗಳಷ್ಟು ಎಂದು ಅಂದಾಜು ಮಾಡಲಾಗಿದ್ದು, ಅದೇ ವರ್ಷ 1.2 ಬಿಲಿಯನ್ ಡಾಲರ್‍ಗಳಷ್ಟು ಔಷಧಿಯ ಅಣಬೆಗಳಿಂದಲೇ ಉತ್ಪತ್ತಿಯಾಗಿದೆಯೆಂದೂ ಸಹ ಅಂದಾಜು ಮಾಡಲಾಗಿದೆ. ಗ್ಯಾನೋಡರ್ಮ ಲುಸಿಡಮ್ ಎಂಬುದು ಪ್ರಮುಖ ಔಷಧಿಯ ಅಣಬೆಯಾಗಿದೆ. ವಿವಿಧ ಬಗೆಯ ಅಣಬೆಗಳು : ಪ್ರಕೃತಿಯಲ್ಲಿ ಕಾಣಸಿಗುವ ವಿವಿಧ ಬಗೆಯ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿಗಳಂತೆ, ಅಣಬೆಗಳ ಸುಂದರ ಲೋಕವೂ ಒಂದು. ಅನೇಕ ರೀತಿಯ ಅಣಬೆಗಳ ನಾನಾ ಬಗೆಯ ರೂಪು ರೇಖೆಗಳನ್ನು ತಳೆದು ಪ್ರಕೃತಿಯಲ್ಲಿ ವರ್ಣರಂಜಿತವಾಗಿ ರಾರಾಜಿಸುತ್ತವೆ. ಇಂತಹ ಅಣಬೆಗಳ ಸುಂದರ ಜಗತ್ತನ್ನು ನಾವು ಮಳೆಗಾಲದಲ್ಲಿ ಕಾಣಬಹುದು. 1. ಕಿವಿರು ಅಣಬೆಗಳು : ಈ ಅಣಬೆಗಳು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡುಬರುತ್ತವೆ. ಕೊಡೆಯಾಕಾರದಲ್ಲಿರುವುದರಿಂದ ಇವುಗಳನ್ನು ನಾಯಿಕೊಡೆಗಳೆಂದು ಕರೆಯುವುದುಂಟು. ಅಗ್ಯಾರಿಕೇಲ್ಸ್ ವರ್ಗಕ್ಕೆ ಸೇರಿದ ಈ ಅಣಬೆಗಳ ಬಾಹ್ಯರೂಪವನ್ನು ಕೊಡೆ, ಕಾಂಡ, ಕಿವಿರು ಮುಂತಾದ ಭಾಗಗಳಾಗಿ ವಿಂಗಡಿಸಬಹುದು. ಕೆಲವು ಜಾತಿಯ ಅಣಬೆಗಳ ತಳದಲ್ಲಿ ಬಟ್ಟಲಾಕಾರದ ರಚನೆಯಿದ್ದು ಅದನ್ನು ಕಪ್ ಎಂದು ಕರೆಯಲಾಗುತ್ತದೆ. ಇನ್ನು ಕೆಲವು ಅಣಬೆಗಳ ಕಾಂಡದ ಮೇಲೆ ಉಂಗುರಾಕಾರದ ಪೊರೆಯಿದ್ದು ಇದಕ್ಕೆ ಉಂಗುರ ಅಥವಾ ಅನ್ಯುಲಸ್ ಎಂದು ಹೆಸರು. ಇವುಗಳ ಬೀಜೋತ್ಪತ್ತಿಯ ಕಿವಿರುಗಳ ಪದರಿ ನೊಳಗಿರುವ ಬೆಸಿಡಿಯಂ ಮೇಲೆ ಆಗುತ್ತದೆ. ಅಗ್ಯಾರಿಕಸ್ ಬೈಸ್ಟೋರಸ್, ಅಗ್ಯಾರಿಕಸ್ ಬೈಟಾರ್ಕಿಸ್ ಎಂಬುವು ಪ್ರಮುಖ ಖಾದ್ಯ ಅಣಬೆಗಳಾಗಿವೆ. ಹಾಗೂ ಇದೇ ವರ್ಗದ ಅಮ್ಯಾನಿಟಾ ಜಾತಿಯ ಅಣಬೆಗಳು ಪ್ರಮುಖವಾಗಿ ವಿಷ ಅಣಬೆಗಳಾಗಿವೆ. 2. ಕೊಡೆಯಲ್ಲಿ ಕಿವಿರಿಲ್ಲದ ಅಣಬೆಗಳು : ಈ ರೀತಿಯ ಅಣಬೆಗಳ ಕೊಡೆಯ ತಳಭಾಗದಲ್ಲಿ ಜೇನುಗೂಡಿನಂತಹ ಕೊಳವೆ ರಂಧ್ರಗಳಿರುತ್ತವೆ. ಈ ರಂಧ್ರಗಳಲ್ಲಿ ಬೆಸಿಡಿಯೋಸ್ಪೋರ್ ಎಂಬ ಬೀಜಾಣುವು ಉತ್ಪತ್ತಿಯಾಗುತ್ತದೆ ಹಾಗೂ ಅಣಬೆಗಳು ಜಿಗುಟಾಗಿರುತ್ತವೆ. ಬೋಲಿಟಸ್ ಜಾತಿಯ ಅಣಬೆಗಳು ಇದಕ್ಕೆ ಉದಾಹರಣೆಗಳಾಗಿವೆ. 3. ಭೂ ಚೆಂಡುಗಳು : ಇವು ಚೆಂಡಿನಾಕಾರದ ಮೇಲ್ಮೈ ರಚನೆ ಹೊಂದಿದ್ದು, ಹಳದಿ, ಮಾಸಲು ಬಿಳಿ ಇತ್ಯಾದಿ ಬಣ್ಣಗಳಿಂದ ಕೂಡಿರುತ್ತವೆ. ಇವು ದಪ್ಪವಾದ ಹೊರಪದರ ಹೊಂದಿದ್ದು, ಬೀಜೋತ್ಪತ್ತಿ ಒಳಗಡೆಯೇ ನಡೆಯುತ್ತದೆ. ಕಾಡಿನಲ್ಲಿ ಪ್ರಾಣಿಗಳು ಇವುಗಳನ್ನು ತುಳಿದಾಗ ಮತ್ತು ಕೆಲವೊಮ್ಮೆ ಒತ್ತಡದಿಂದ ಬೀಜಗಳು ತಾವಾಗಿಯೇ ಹೊರಚಿಮ್ಮಿ ಬೀಜ ಪ್ರಸಾರವಾಗುತ್ತದೆ. ಭೂ ಚೆಂಡುಗಳು ಇತರೆ ಅಣಬೆಗಳಿಗಿಂತ ಭಿನ್ನವಾಗಿದ್ದು, ಶಿಲೀಂಧ್ರ ವರ್ಗೀಕರಣದಲ್ಲಿ ಗ್ಯಾಸ್ಟ್ರೊಮೈಸೆಟ್ಸ್ ವರ್ಗಕ್ಕೆ ಸೇರಿವೆ. ಇವುಗಳಲ್ಲಿಯೂ ಸಹ ಸಾಮಾನ್ಯ ಅಣಬೆಗಳಂತೆ ಬೇರೆ ಬೇರೆ ಜಾತಿಗಳಿದ್ದು, ಅವುಗಳಲ್ಲಿ ಕ್ಯಾಲ್ವೇಸಿಯಾ ಜೈಗಾಂಸಿಯಾ ಎನ್ನುವುದು ಜಗತ್ತಿನಲ್ಲಿ ಅತಿದೊಡ್ಡ ಭೂಚೆಂಡು (ಅಣಬೆ) ಎಂದು ವರದಿಯಾಗಿದೆ. (ಗಿನ್ನಿಸ್ ದಾಖಲೆ 1991). 4. ಭೂ ನಕ್ಷತ್ರಗಳು : ಈ ಶಿಲೀಂಧ್ರಗಳೂ ಗ್ಯಾಸ್ಟ್ರೋ ಮೈಸಿಟೀಸ್ ಗುಂಪಿಗೆ ಸೇರಿವೆ. ಇವು ಭೂಮಿಯ ಮೇಲೆ ನಕ್ಷತ್ರಾಕಾರವಾಗಿ ಅರಳುವುದರಿಂದ ಈ ಹೆಸರು ಬಂದಿದೆ. ಇವುಗಳ ಹೊರಪದರ ಬಿಚ್ಚಿ ನಕ್ಷತ್ರಗಳಂತೆ ಅರಳುತ್ತದೆ ಮತ್ತು ಒಳಗಿನ ಪೊರೆ ಮುಚ್ಚಿದ್ದು ಒಂದು ಅಥವಾ ಹೆಚ್ಚು ರಂಧ್ರಗಳಿರುತ್ತವೆ. ಈ ರಂಧ್ರಗಳು ಬೀಜಾಣುಗಳು ಹೊರಬರಲು ಸಹಾಯ ಮಾಡುತ್ತವೆ. 5. ಹಕ್ಕಿಗೂಡಿನ ಅಣಬೆ : ಇವು ಸಹ ಗ್ಯಾಸ್ಟ್ರೋ ಮೈಸಿಟೀಸ್ ವರ್ಗಕ್ಕೆ ಸೇರಿವೆ. ಇವುಗಳ ಬಟ್ಟಲಾಕಾರದ ಆವರಣದಲ್ಲಿ ಮೊಟ್ಟೆಗಳಂತಹ ಪೆರಿಡಿಯೋಲ್‍ಗಳಿರುತ್ತವೆ. ಈ ಪೆರಿಡಿಯೋಲ್‍ಗಳು ಹಕ್ಕಿಗಳು ಗೂಡಿನಲ್ಲಿಟ್ಟ ಮೊಟ್ಟೆಗಳಂತೆ ಕಾಣುತ್ತವೆ. ಆದ್ದರಿಂದ ಇವುಗಳಿಗೆ ಹಕ್ಕಿಗೂಡಿನ ಅಣಬೆ ಎಂದು ಕರೆಯಲಾಗಿದೆ. 6. ಬಟ್ಟಲು ಅಣಬೆ : ಇವು ಡಿಸ್ಕೋಮೈಸಿಟೀಸ್ ವರ್ಗಕ್ಕೆ ಸೇರಿವೆ. ಬಟ್ಟು ಅಣಬೆಗಳು ಬೋಗುಣಿಯಾಕಾರದಲ್ಲಿದ್ದು, ಜಿಗುಟಾಗಿರುತ್ತವೆ ಮತ್ತು ವಿವಿಧ ಬಣ್ಣಗಳನ್ನು ಹೊಂದಿರುತ್ತವೆ. 7. ಸ್ಟಿಂಕ್ ಹಾರ್ನ್ ಶಿಲೀಂಧ್ರಗಳು : ಈ ಗುಂಪಿನ ಅಣಬೆಗಳು ಸಾಮಾನ್ಯವಾಗಿ ಕೆಟ್ಟ ವಾಸನೆಯಿಂದ ಕೂಡಿದ್ದು, ಈ ಹೆಸರು ಬಂದಿದೆ. ಇವು ಕೊಳೆತ ಸಾವಯವ ವಸ್ತುಗಳ ಮೇಲೆ ಬೆಲೆಯುತ್ತವೆ. ಈ ಗುಂಪಿನ ಕೆಲವು ಅಣಬೆಗಳ ಅಂಗ ರಚನೆಗಳು ಎಲೆ ಅಥವಾ ಪುಷ್ಪ ದಳಗಳ ಹೋಲಿಕೆಯನ್ನು ಹೊಂದಿದ್ದು, ಬಗೆ ಬಗೆಯ ಬಣ್ಣಗಳಿಂದ ಕೂಡಿರುತ್ತವೆ. ಆದ್ದರಿಂದ ಇವುಗಳನ್ನು ಶಿಲೀಂಧ್ರ ಪುಷ್ಪಗಳೆಂದು ಕರೆಯುವುದುಂಟು. ಈ ಗುಂಪಿನ ಒಂದು ಅಣಬೆಗೆ ಬಲೆಯಾಕಾರದ ಮುಸುಕಿದ್ದು ಇದನ್ನು ಕನ್ಯಾಸ್ತ್ರೀ ಎಂದು ಕರೆಯಲಾಗುತ್ತದೆ. 8. ಮಾರೆಲ್‍ಗಳು : ಈ ಅಣಬೆಗಳು ಅಸ್ಕೊಮೈಸಿಟೀಸ್ ವರ್ಗದಲ್ಲಿ ಡಿಸ್ಕೊಮೈಸಿಟೀಸ್ ಗುಂಪಿಗೆ ಸೇರಿವೆ. ಇವುಗಳ ಮೇಲ್ಮೈ ಸ್ಪಂಜುಗಳಂತಿದ್ದು ಗದೆಯಾಕಾರದ ಸುಕ್ಕುಗಟ್ಟಿದ ತಲೆಯನ್ನು ಹೊಂದಿವೆ. ಈ ಗುಂಪಿನಲ್ಲಿ ಮಾರ್ಬೆಲ ಎಸ್ಕುಲೆಂಟ ಎಂಬ ಅಣಬೆ ತುಂಬಾ ರುಚಿಕರವಾದ ಖಾದ್ಯ ಅಣಬೆಯಾಗಿದ್ದು, ಬ್ರಿಟನ್ ದೇಶದ ಅತ್ಯಂತ ಬೆಲೆಬಾಳುವ ಮತ್ತು ಹೆಸರುವಾಸಿಯಾದ ಅಣಬೆಯಾಗಿದೆ. ಭಾರತದ ಹಿಮಾಚಲಪ್ರದೇಶದಲ್ಲಿ ಇದು ದೊರೆಯುತ್ತದೆ. ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ಇದನ್ನು ಶೋಧನೆ ಮಾಡಬೇಕಾಗಿದೆ. ಅಣಬೆಯ ರಚನೆ : ಸಾಮಾನ್ಯ ಅಣಬೆ ಸಂಪೂರ್ಣವಾಗಿ ಬಲಿತಾಗ, ಅದನ್ನು 4 ಭಾಗಗಳಾಗಿ ವಿಂಗಡಿಸಬಹುದು. ಕೊಡೆ ಅಥವಾ ತಲೆ, ಕಾಂಡ, ಕಾಂಡದ ಸುತ್ತಲೂ ಕಾಣುವ ಉಂಗುರ, ಬಟ್ಟಲು ಇವುಗಳು. ಈ ಭಾಗಗಳಲ್ಲಿ ಕೆಲವು ಅಂಗಗಳು ಕೆಲವು ಅಣಬೆಯಲ್ಲಿ ಇರುವುದಿಲ್ಲ. ಕೆಲವು ಅಣಬೆಗಳಲ್ಲಿ ಪೂರ್ಣವಾಗಿರುತ್ತವೆ. ಇದ್ದಾಗ ಅವು ವಿವಿಧ ಆಕಾರದಲ್ಲಿ ಇರಬಹುದು. ಎಲ್ಲಾ ರೀತಿಯ ಅಣಬೆಯಲ್ಲೂ ಇವು ಒಂದೇ ರೀತಿಯಾಗಿರುವುದಿಲ್ಲ. ಉದಾಹರಣೆಗೆ, ತಲೆಯು (ಕೊಡೆ) ಮೇಲಕ್ಕೆ ಬಾಗಿರಬಹುದು, ಕೆಲವಲ್ಲಿ ಕಾಂಡವಿಲ್ಲದೇ ಇರಬಹುದು, ಕೆಲವು ಅಣಬೆಗಳಲ್ಲಿ ತಳದಲ್ಲಿಯ ಬಟ್ಟಲು