ಪುಟ:Mysore-University-Encyclopaedia-Vol-1-Part-1.pdf/೨೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇರುವುದಿಲ್ಲ, ಕೆಲವು ಅಣಬೆಗಳಲ್ಲಿ ಕೊಡೆ ಗಂಟೆಯಾಕಾರವಿರಬಹುದು. ಈ ರೀತಿಯ ವಿಶಿಷ್ಟ ಲಕ್ಷಣಗಳು ಅಣಬೆಗಳನ್ನು ಯಾವ ಗುಂಪಿಗೆ ಸೇರಿರುತ್ತವೆಂದು ಗುರುತಿಸಲು ಸಹಾಯಕವಾಗಿವೆ. 1. ಕೊಡೆ : ಇದು ಕೊಡೆಯಾಕಾರದ, ಹೊರಹೊಮ್ಮಿದ ಅಣಬೆಯ ಭಾಗ ಇದು ದಪ್ಪವಾಗಿ, ರಸಭರಿತವಾಗಿ ಅಥವಾ ದಪ್ಪಪೊರೆಯಂತೆ ಅಥವಾ ಜಿಗುಟಾಗಿರಬಹುದು. ಇದರ ಆಕಾರಗಳು ಬೇರೆ ಬೇರೆ ಅಣಬೆಗಳಲ್ಲಿ ಬೇರೆ ಬೇರೆಯಾಗಿರುತ್ತವೆ. ಗಾತ್ರ ಮತ್ತು ಬಣ್ಣಗಳು ಸಹ ವ್ಯತ್ಯಾಸವನ್ನು ಹೊಂದಿರುತ್ತವೆ. ಇದರ ಮೇಲ್ಮೈ ಪದರ, ಮೆತ್ತೆಯಾಗಿರ ಬಹುದು ಅಥವಾ ಒರಟಾಗಿಯೂ ಇರಬಹುದು ಮತ್ತು ಕೆಲವು ಅಣಬೆಗಳಲ್ಲಿ ಹುರುಕಾದಂತೆ ಇರುತ್ತದೆ. ಇದರ ತಳಭಾಗದಲ್ಲಿ ನೆರಿಗೆಯಾಕಾರದ ಕಿವಿರುಗಳಿದ್ದು ಅವುಗಳೊಳಗೆ ಬೀಜಾಣುಗಳು ಉತ್ಪತ್ತಿಯಾಗುತ್ತವೆ. 2. ಕಿವಿರುಗಳು : ತಲೆಯ ಕೆಳಭಾಗದಲ್ಲಿರುವ ನೆರಿಗೆಯಂತಹ ಜೋಡಣೆಗೆ ಕಿವಿರುಗಳೆಂದು ಕರೆಯುತ್ತಾರೆ. ಅವು ಕಾಂಡದಿಂದ ಪ್ರಾರಂಭವಾಗಿ ಕೊಡೆಯ ತುದಿಯವರೆಗೂ ನೇರವಾಗಿ ಬೆಳೆದಿರುತ್ತವೆ. ಈ ಕಿವಿರುಗಳ ಒಳಭಾಗದ ಮೇಲ್ಮೈಯಲ್ಲಿ ಬೀಜಾಣುಗಳು ಉತ್ಪತ್ತಿಯಾಗುತ್ತವೆ. ಇದರಿಂದ ಅವುಗಳ ಬಣ್ಣವು ಸಹ ಬೀಜಾಣುಗಳ ಬಣ್ಣಕ್ಕೆ ಸರಿಯಾಗಿ ಬದಲಾಗುತ್ತವೆ. ಉದಾ: ಅಗ್ಯಾರಿಕಸ್ ಬೈಸ್ಪೋರಸ್ ಅಣಬೆ ಚಿಕ್ಕದಿದ್ದಾಗ, ಕಿವಿರಿನ ಬಣ್ಣ ನಸುಗೆಂಪು ಬಣ್ಣವಾಗಿದ್ದು ಅದು ಬಲಿತಂತೆ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಕಿವಿರುಗಳು ವಿವಿಧ ಜಾತಿಯ ಅಣಬೆಗಳಲ್ಲಿ ಬೇರೆ ಬೇರೆ ವಿಧವಾಗಿ ಕಾಂಡಕ್ಕೆ ಅಂಟಿಕೊಂಡಿರುತ್ತವೆ. ಮತ್ತು ಕಿವಿರಿನ ಕೆಳಭಾಗದ ಆಕಾರದಲ್ಲಿಯೂ ಸಹ ಒಂದು ಗುಂಪಿನ ಅಣಬೆಗೂ ಇನ್ನೊಂದು ಗುಂಪಿನ ಅಣಬೆಗೂ ವ್ಯತ್ಯಾಸವನ್ನು ಕಾಣಬಹುದು. ಈ ವ್ಯತ್ಯಾಸಗಳು ಅಣಬೆಗಳ ವರ್ಗಗಳನ್ನು ಗುರುತಿಸುವಲ್ಲಿ ಸಹಾಯವಾಗುತ್ತವೆ. ಉದಾಹರಣೆಗೆ ಕಿವಿರುಗಳು ಅಣಬೆಯ ಕಾಂಡಕ್ಕೆ ಮುಟ್ಟದೇ ಇದ್ದಲ್ಲಿ ಅದನ್ನು ಫ್ರೀ ಕಿವಿರುಗಳೆಂದು, ಅವುಗಳು ನೇರವಾಗಿ ಕಾಂಡಕ್ಕೆ ಸೇರಿಕೊಂಡಿದ್ದಲ್ಲಿ ಅವುಗಳಿಗೆ ಅಡ್ನೇಟ್ ಎಂದೂ, ಹಾಗೂ ಪಾಶ್ರ್ವವಾಗಿ ಸೇರಿಕೊಂಡಿದ್ದರೆ (ಒಂದು ಬದಿ ಮಾತ್ರ) ಅಂತಹವನ್ನು ಅಡ್ನೆಕ್ಸೆಡ್ ಕರೆಯಲಾಗುತ್ತದೆ. ಕಿವಿರುಗಳು ಕಾಂಡದುದ್ದಕ್ಕೂ (ಚಿಪ್ಪಣಬೆಯಲ್ಲಿದ್ದಂತೆ) ಬೆಳೆದಿದ್ದಾಗ ಅವುಗಳನ್ನು ಡಿಕರೆಂಟ್ ಎಂದೂ, ಅವು ಕಾಂಡದ ಬದಿಯಲ್ಲಿ ಕತ್ತರಿಸಿದಂತಿದ್ದಲ್ಲಿ ಸಿನುಯೇಟ ಎಂತಲೂ ಕರೆಯಲಾಗುತ್ತದೆ. ಕಿವಿರುಗಳು ಕೆಲವು ಅಣಬೆಗಳಲ್ಲಿ ಗರಗಸದ ಹಲ್ಲುಗಳಂತಿದ್ದರೆ ಅವುಗಳನ್ನು ಸೆರೇಟ್ ಎಂದು ಕರೆಯಲಾಗುತ್ತದೆ. 3. ಮುಸುಕು ಅಥವಾ ವೇಲ್ : ಫಲೋತ್ಪಾದಕ ಎಳೆ ಅಣಬೆಗಳಲ್ಲಿ ಕಿವಿರುಗಳು ಹೊರಪೊರೆಯ ಅಂಗಾಂಶವೊಂದರಿಂದ ಸಂಪೂರ್ಣವಾಗಿ ಆವರಿಸಲ್ಪಟ್ಟಿರುತ್ತವೆ. ಇದನ್ನು ವೇಲ್ ಅಥವಾ ಮುಸುಕು ಎಂದು ಕರೆಯುತ್ತೇವೆ. ಈ ಮುಸುಕು ಕ್ರಮೇಣವಾಗಿ ಅಣಬೆ ಬಲಿತ ನಂತರ ಹರಿದು ಹೋಗಿರುತ್ತದೆ. ಇದರಲ್ಲಿ ಸ್ವಲ್ಪಭಾಗ ಅಣಬೆಯ ಕೊಡೆಯಲ್ಲಿ ಅಂಟಿಕೊಂಡಿದ್ದು ಉಳಿದ ಭಾಗವು ಕಾಂಡದ ಮೇಲೆ ಉಂಗುರವಾಗಿ ಮಾರ್ಪಾಡಾಗುತ್ತದೆ. ಈ ಉಂಗುರವು ತುಂಬಾ ಸೂಕ್ಷ್ಮವಾಗಿರುತ್ತದೆ. 4. ಕಾಂಡ : ಇದು ಕೊಡೆಗೆ ಆಧಾರವನ್ನು ಕೊಡುತ್ತದೆ. ಇದು ಕೆಲವು ಅಣಬೆಗಳಲ್ಲಿ ಇರುವುದಿಲ್ಲ (ಉದಾ: ಚಿಪ್ಪಣಬೆ) ಹಾಗೂ ತಲೆಗೆ ಬೇರೆ ಬೇರೆ ಕೋನದಲ್ಲಿ ಸೇರಿಕೊಂಡಿರುತ್ತದೆ. ಸಾಮಾನ್ಯವಾಗಿ ಇದು ಕೊಡೆಯ ಮಧ್ಯೆಯಿರುತ್ತದೆ. ಅಣಬೆಯನ್ನು ಛತ್ರಿಯಂತೆ ಹಿಡಿದಿರುತ್ತದೆ. ಹೀಗೆ ಅಣಬೆಯ ಕಾಂಡಭಾಗವು ಕೊಡೆ ತಲೆಯ ಮಧ್ಯ ಭಾಗದಲ್ಲಿದ್ದರೆ ಅದಕ್ಕೆ ಕೇಂದ್ರಿತ ಎಂದೂ ಹಾಗೂ ಕಾಂಡವು ತಲೆಯ ಮಧ್ಯದಿಂದ ದೂರವಿದ್ದರೆ ಅದಕ್ಕೆ ವಿಕೇಂದ್ರೀಯ ಎಂದು ಕರೆಯಲಾಗುತ್ತದೆ. ಕಾಂಡವು ಗಟ್ಟಿಯಿರಬಹುದು ಅಥವಾ ಟೊಳ್ಳಾಗಿರಬಹುದು. ಕೆಲವು ಜಾತಿಯ ಅಣಬೆಗಳಲ್ಲಿ ಬೇರೆ ಬೇರೆ ಆಕಾರವನ್ನು ಸಹ ಹೊಂದಿರುತ್ತವೆ. ಈ ಎಲ್ಲಾ ರಚನೆಗಳೂ ಅಣಬೆಯನ್ನು ಯಾವ ಜಾತಿಯದೆಂದು ಗುರುತಿಸಲು ಸಹಾಯಕವಾಗುತ್ತದೆ. ಕೆಲವು ಅಣಬೆಗಳ ಕಾಂಡವು ಭೂಮಿಯ ಒಳಗೆ ಹೋದಂತೆಲ್ಲಾ ಬೇರಿನಂತಾಗುತ್ತದೆ. (ಉದಾ: ಬೇರಣಬೆ ಅಥವಾ ಹುತ್ತದ ಅಣಬೆ) ಇನ್ನು ಕೆಲವು ಅಣಬೆಗಳಲ್ಲಿ ಕಾಂಡದ ತಳವು ಊದಿಕೊಂಡಿರುತ್ತದೆ ಇದನ್ನು ಬಲ್ಬಸ್ ಎಂದು ಕರೆಯುತ್ತಾರೆ. 5. ಬಟ್ಟಲು : ಎಳೆಯ ಅಣಬೆಯು ವಿವಿಧ ಅಂಗಗಳಾಗಿ ಬೇರ್ಪಡುವುದಕ್ಕಿಂತ ಮೊದಲು ಹೊರಭಾಗವು ಸರ್ವೇ ಸಾಧಾರಣ ಪೊರೆಯಿಂದ ಆವರಿಸಿಕೊಂಡು ಮೊಟ್ಟೆಯಾಕಾರವಾಗಿರುತ್ತದೆ. ಕ್ರಮೇಣ ಅಣಬೆಯು ಬಲಿತು ವಿಕಾಸ ಹೊಂದುತ್ತ, ಹೊರಗಿನ ಪೊರೆಯು ಸಮಾನಾಂತರವಾಗಿ ಹರಿದು ತಳ ಭಾಗವು ಬಟ್ಟಲಾಗುತ್ತದೆ. ಮೇಲ್ಭಾಗವು ಕೊಡೆಯೊಂದಿಗೆ ಸೇರಿ ಕೊಡೆಯ ಮೇಲ್ಮೈಯಲ್ಲಿ ಪೊರೆಯಾಗಿ ಮಾರ್ಪಾಡು ಹೊಂದುತ್ತದೆ. ಅಣಬೆಯಲ್ಲಿ ಈ ಉಂಗುರ ಮತ್ತು ಬಟ್ಟಲುಗಳ ಅನುಪಸ್ಥಿತಿ ಮತ್ತು ಉಪಸ್ಥಿತಿಗಳ ಆಧಾರದ ಮೇಲೆ ಅಣಬೆಗಳನ್ನು ವಿವಿಧ ಪಂಗಡಗಳಲ್ಲಿ ವಿಗಂಡಿಸಲಾಗಿದೆ. ಉದಾ: ಉಂಗುರ ಮತ್ತು ಬಟ್ಟಲುಗಳಿರುವ ಅಣಬೆಗಳು ಅಮ್ಯಾನಿಟ ಗುಂಪಿಗೆ ಸೇರಿವೆ. (2) ಉಂಗುರವಿದ್ದು, ಬಟ್ಟಲು ಇಲ್ಲದಿದ್ದರೆ ಅದು ಅಗ್ಯಾರಿಕಸ್ ಅಣಬೆಯ ಗುಂಪಿಗೆ ಸೇರುತ್ತದೆ. (3) ಉಂಗುರವಿಲ್ಲದೆ ಬರೀ ಬಟ್ಟಲು ಇದ್ದಲ್ಲಿ ಅದು ಭತ್ತದ ಹುಲ್ಲಿನ ಅಣಬೆ ಗುಂಪಿಗೆ ಸೇರಿರುತ್ತದೆ. ಉಂಗುರ ಮತ್ತು ಬಟ್ಟಲು ಎರಡೂ ಇಲ್ಲದಿದ್ದರೆ ಅವು ಪ್ರೆಯ್ರೀರಿಂಗ್ ಅಣಬೆಗಳ ಗುಂಪಿಗೆ ಸೇರುತ್ತದೆ. ಹೀಗೆ ಅಣಬೆಯ ರಚನಾಂಗಗಳಾದ ತಲೆ (ಕೊಡೆ), ಕಾಂಡ, ಕಿವಿರು, ಉಂಗುರ, ಬಟ್ಟಲುಗಳ ಉಪಸ್ಥಿತಿ ಮತ್ತು ಅನುಪಸ್ಥಿತಿ ಹಾಗೂ ಇವುಗಳ ಆಕಾರ, ಬಣ್ಣ ಇತ್ಯಾದಿಗಳು ಅಣಬೆಗಳ ವರ್ಗೀಕರಣಕ್ಕೆ ಸಹಾಯಕವಲ್ಲದೆ, ಅವು ವಿಷ ಅಣಬೆಗಳ ಗುಂಪಿನವೇ ಅಥವಾ ಖಾದ್ಯ ಗುಂಪಿನವೇ ಎಂದು ತಿಳಿಯಲು ಸಹ ಕೆಲವೊಮ್ಮೆ ಅನುಕೂಲವಾಗುತ್ತದೆ. ಪ್ರಮುಖ ಖಾದ್ಯ ಅಣಬೆಗಳು: 1. ಅಗ್ಯಾರಿಕಸ್ ಬೈಸ್ಪೋರಸ್ : ಜನಪ್ರಿಯ ಖಾದ್ಯ ಅಣಬೆ. ಇದನ್ನು ಸಮಶೀತೋಷ್ಣವಲಯದ ಅಣಬೆ, ಯುರೋಪಿನ ಅಣಬೆ ಹಾಗೂ ಗುಂಡಿ ಅಣಬೆ ಎಂದು ಕರೆಯುವುದುಂಟು. 2. ಅಗ್ಯಾರಿಕಸ್ ಕಾಂಪೆಸ್ಟ್ರೀಸ್ : ಜನಪ್ರಿಯ ಅಣಬೆ. ಹೊಲಗಳಲ್ಲಿ, ಹುಲ್ಲು ಬಯಲಿನಲ್ಲಿ ಕಂಡುಬರುತ್ತದೆ. ಕೊಡೆಯ ಮೇಲ್ಭಾಗ ಸ್ವಲ್ಪ ಉರುಕಾಗಿರಬಹುದು. ಬಿಳಿ ಅಥವಾ ಸ್ವಲ್ಪ ಕಂದು ಬಣ್ಣವನ್ನು ಹೊಂದಿರುತ್ತದೆ. 3. ಮಾರ್ಚೆಲ್ಲಾ ಕೊನಿಕಾ : ಇದು ಕಾಡಿನಲ್ಲಿ ಬೆಳೆಯುತ್ತದೆ. ಇದರ ತಲೆ ಶಂಕುವಿನಾಕೃತಿಯಲ್ಲಿದ್ದು ಅದರ ಸುತ್ತಲೂ ಸಾಲಾಗಿ ಗುಂಡಿಗಳಿರುತ್ತವೆ ಅವುಗಳ ಉದ್ದ ಅಗಲಕ್ಕಿಂತ ಹೆಚ್ಚಾಗಿರುತ್ತದೆ. ಇದು ಎಳೆಯದಾಗಿದ್ದಾಗ ಹಳದಿಯಾಗಿದ್ದು ಬಲಿತಂತೆ ನಸುಕಪ್ಪಾಗುತ್ತದೆ. 4. ಮಾರ್ಚೆಲ್ಲಾ ಡೆಲಿಸಿಯೋಸಾ : ಇದರ ತಲೆ ಕೊಳವೆಯಾಕಾರವಾಗಿದ್ದು ತುದಿಯು ಮೊಂಡಾವಾಗಿರುತ್ತದೆ. ಇದು ಕಾಡಿನಲ್ಲಿ ಮರಗಳ ಬೇರುಗಳ ಹತ್ತಿರ ಕಾಣಿಸಿಕೊಳ್ಳುತ್ತದೆ. ಇದರ ಕೊಡೆಯ ಮೇಲಿನ ಗುಂಡಿಗಳು ಉದ್ದವಾಗಿರುತ್ತವೆ. 5. ಫ್ಲುರೋಟಸ್ ಫ್ಲಾಬೆಲೇಟಸ್ : ಇದು ಚಿಪ್ಪಣಬೆಯಾಗಿದ್ದು ಒಣಗಿದ ಮರಗಳ ಮಳೆಯಲ್ಲಿ ನೆನೆದಾಗ ಮರಗಳ ಮೇಲೆ ಮತ್ತು ನೆಲದಲ್ಲಿ ಬೆಳೆಯುತ್ತದೆ. ಇದರ ಫಲೋಷ್ಪಾದಕ ಸ್ಪಂಜಿನಂತಿದ್ದು ಅದರ ತಲೆ ಫ್ಯಾನಿನ ರೆಕ್ಕೆಯಾಕಾರದಲ್ಲಿರುತ್ತದೆ. ಮೊದಲು ಸ್ವಲ್ಪ ಗುಲಾಬಿ ಬಣ್ಣದಲ್ಲಿದ್ದು ಬಲಿತ ನಂತರ ಬಿಳಿಬಣ್ಣಕ್ಕೆ ತಿರುಗುತ್ತದೆ. 6. ಫ್ಲುರೋಟಸ್ ಆಯಸ್ಟ್ರೇಟಸ್ : ಇದು ಒಣಗಿದ ಮರ ಮಳೆಯಲ್ಲಿ ನೆನೆದಾಗ ಅದರ ಬಿರುಕುಗಳಲ್ಲಿ ಗೊಂಚಲು ಗೊಂಚಲಾಗಿ ಬೆಳೆಯುತ್ತದೆ. ಇದು ಬೂದಿ ಅಥವಾ ಬಿಳಿಬಣ್ಣದ್ದಾಗಿದ್ದು, ಒಣಗಿದಾಗ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರ ಕಾಂಡ ಚಿಕ್ಕದಾಗಿದ್ದು ಮೇಲ್ಮೈ ಮೃದುವಾಗಿರುತ್ತದೆ. 7. ಫ್ಲುರೋಟಸ್ ಸಜೋರ್ಕಾಜು : ಇದು ಕೊಳೆಯುತ್ತಿರುವ ಮರದಲ್ಲಿ ಒಂಟಿಯಾಗಿ ಅಥವಾ ಗುಂಪಾಗಿ ಬೆಳೆಯುತ್ತದೆ. ಇದರ ಬಣ್ಣ ಬಿಳಿ ಅಥವಾ ಮುಸುಕಾಗಿದ್ದು ತಲೆಯ ಅಂಚು ಅಸಮಾನವಾಗಿರುತ್ತದೆ, ಮೇಲ್ಮೈ ಮೃದುವಾಗಿರುತ್ತದೆ. 8. ರಸುಲ್ಲಾ ಎಮಿಟಿಕಾ : ಇದು ಒಂಟಿಯಾಗಿ ಅಥವಾ ಅಲ್ಲಲ್ಲಿ, ಕಾಡುಗಳಲ್ಲಿ ಕೊಳೆಯುತ್ತಿರುವ ಮರಗಳ ದಿಮ್ಮಿಗಳಲ್ಲಿ, ಇನ್ನೂ ಅನೇಕ ಜಾಗಗಳಲ್ಲಿ ಬೆಳೆಯುತ್ತದೆ. ಇದರ ಮೇಲ್ಮೈ ಮೃದುವಾಗಿದ್ದು, ಗುಲಾಬಿ ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿ ತಲೆಯ ಪೊರೆ ಸುಲಭವಾಗಿ ತೆಗೆಯಬಹುದಾಗಿದೆ. 9. ವಲ್ವೇರಿಯಲ್ಲಾ ವಲ್ವೇಸಿಯಾ : ಇದನ್ನು ಬತ್ತದ ಹುಲ್ಲಿನ ಅಣಬೆ ಎಂದು ಕರೆಯಲಾಗುತ್ತದೆ. ಇದು ಉಷ್ಣವಲಯದ ಅಣಬೆಯಾಗಿದೆ. ಇದರ ತಳದಲ್ಲಿ ಎದ್ದುಕಾಣುವ ಬಟ್ಟಲಿದೆ. ಆದ್ದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ಇದರ ಇತರ ಪ್ರಭೇದಗಳೆಂದರೆ, ವಲ್ವೇರಿಯಲ್ಲಾ, ಡಿಪ್ಲೇಸಿಯಾ, ವಲ್ವೇರಿಯಲ್ಲಾ ಎಸ್ಕುಲೆಂಟಾ ಇತ್ಯಾದಿಗಳು. 10. ಲೆಂಟಿನಸ್ ಇಡೋಡಸ್ : ಇದನ್ನು ಜಪಾನಿನ ಶಿಟಾಕೆ ಅಣಬೆಯೆಂದು ಕರೆಯಲಾಗುತ್ತದೆ. ಇದು ಮರಗಳ ದಿಮ್ಮಿಗಳ ಮೇಲೆ ಬೆಳೆಯುತ್ತದೆ. ಇತರ ಫಲೋತ್ಪಾದಕ ಅಂಗ ಕಂದು ಬಣ್ಣದ್ದಾಗಿರುತ್ತದೆ. ಈ ಅಣಬೆಯು ಆಹಾರ ಅಣಬೆಯಲ್ಲದೆ, ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಮೇಲೆ ಹೆಸರಿಸಿದ ಅಣಬೆಗಳಲ್ಲದೆ, ಅನೇಕ ತಿನ್ನುವ ಅಣಬೆಗಳಾದ ಬೇರಣಬೆ, ತುಪ್ಪದ ಅಣಬೆ, ಅರಿಕ್ಯಲೇರಿಯಾ, ಇತ್ಯಾದಿ ಜಾತಿಗಳನ್ನು ಸ್ವಾಭಾವಿಕವಾಗಿ ಕಾಣಬಹುದಾಗಿದೆ. 11. ಹಾಲಣಬೆ : ಇದು ಅನೇಕ ರೀತಿಯ ಸಾವಯವ ವಸ್ತುಗಳ ಮೇಲೆ ಬೆಳೆಯಬಲ್ಲದು. ಇದು ಇತ್ತೀಚೆಗೆ ಜನಪ್ರಿಯ ವಾಣಿಜ್ಯ ಅಣಬೆಯಾಗಿದೆ. (*) ಅಣಬೆ ಸೋಂಕುಗಳು : ಮಾನವನಲ್ಲೂ ಪ್ರಾಣಿಗಳಲ್ಲೂ ಐವತ್ತಕ್ಕೂ ಮೀರಿದ ಬಗೆಗಳ ಅಣಬೆ (ಬೂಜು, ಬೂಷ್ಟು, ಶಿಲೀಂಧ್ರ) ಗಳಿಂದ ಸೊಂಕುರೋಗಗಳು ಕಾಣಿಸಿ ಕೊಳ್ಳುತ್ತವೆ. ಚರ್ಮ, ಕೂದಲು ಉಗುರುಗಳ ಮೇಲ್ಮೇಲಿನ ಸೊಂಕುಗಳು ಚರ್ಮಜೀವಿಸಸಿ ಬೇನೆಗಳು (ಡರ್ಮಟೋಫೈಟೋಸಸ್) ಎಂದೂ ಇನ್ನೂ ಆಳದ ಕಣಜಾಲಗಳಲ್ಲೂ