ಪುಟ:Mysore-University-Encyclopaedia-Vol-1-Part-1.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಗಗಳಲ್ಲೂ ಆಗುವುವು ಅಣಬೇನೆಗಳು (ಮೈಕೋಸಸ್) ಎಂದೂ ಹೆಸರಾಗಿವೆ. ಬಹುಮಟ್ಟಿಗೆ ಈ ಅಣಬೇನೆಗಳೆಲ್ಲ ನಿರಪಾಯಕರವಾದುವು. ಆದರೂ ಕೆಲವು ಮಾರಕ. ಏಕಾಣುಜೀವಿಗಳಿಂದಾದ ರೋಗಗಳಲ್ಲಿ ಬಳಸುವ ಎಂದಿನ ಸಾಮಾನ್ಯ ಜೀವಿರೋಧಕಗಳು (ಆ್ಯಂಟಿಬಯಾಟಿಕ್ಸ್) ಅಣಬೆಗಳ ಎದುರಾಗಿ ಚಿಕಿತ್ಸೆಗೆ ಬಾರದಿದ್ದರೂ ಅಣಬೆಗಂತಿಗಳಲ್ಲಿ (ಮೈಸಿಟೋಮಾಸ್) ಕೆಲವಕ್ಕೆ ಸಲ್ಫ ಮತ್ತು ಸಲ್ಫೋನು ಮದ್ದುಗಳಿಂದ ಚಿಕಿತ್ಸೆ ಆಗುತ್ತಿದೆ. ಮೈಯೊಳಗಿನ ಕೆಲವು ಅಣಬೇನೆಗಳು ಆಂಟೆರಿಸಿನ್ ಬಿ ಇಂದ ವಾಸಿಯಾಗಿವೆ. ಜಗ್ಗದಿರುವ ಚರ್ಮಜೀವಿಸಸಿಗಳಲ್ಲಿ ಕೆಲವಂತೂ ಜೀವಿರೋಧಕವಾದ ಗ್ರಿಸಿಯೊಫಲ್ವಿನ್‍ನಿಂದ ಗುಣವಾಗಿವೆ. ಮೇಲ್ಮೇಲಿನ ಸೋಂಕುಗಳು : ಚರ್ಮದ ತೀರ ಹೊರಗಣ ಕೊಂಬಿನಂಥ ಪದರದ ಪ್ರೋಟೀನಾದ ಕೊಂಪೊರೆಗದಿಂದ (ಕೆರ್ಯಾಟಿನ್) ಪುಷ್ಟಿಗೊಳ್ಳುವ ಅಣಬೆಗಳ ಒಂದು ಗುಂಪಾದ ಚರ್ಮಜೀವಿಸಸಿಗಳ ಸುಮಾರು 20 ಜಾತಿಗಳಲ್ಲಿ ಯಾವುದರಿಂದಲಾದರೂ ಚರ್ಮಜೀವಿಸಸಿಬೇನೆ ಹತ್ತಬಹುದು. ಹುಳುಕಡ್ಡಿ (ಗಜಕರ್ಣ) ಒಂದು ಸಾಮಾನ್ಯ ಚರ್ಮಜೀವಿಸಸಿ. ಸಾಮಾನ್ಯವಾಗಿ ಇನ್ನೊಬ್ಬರಿಂದಲೋ ಬೆಕ್ಕು, ನಾಯಿ, ಕುದುರೆ, ದನಗಳಿಂದಲೋ ಬರುವ ಅಂಟುರೋಗವಿದು. ಮಕ್ಕಳಲ್ಲಿ ಏಳುವ ಸಾಂಕ್ರಾಮಿಕ ರೂಪದ ನೆತ್ತಿಯ ಮೇಲಿನ ಹುಳುಕಡ್ಡಿಗೆ ಒಂದು ಬಗೆಯ ಮಿಣಿಬೀಜಕಣ (ಮೈಕ್ರೊಸ್ಟೊರಾನ್) ಕಾರಣ. ಹುಳುಕಡ್ಡಿಯ ವಿಪರೀತ ರೂಪವಾದ ಹುಟ್ಟಿ ಸಿಪ್ಪು (ಫೇವಸ್) ದೊಡ್ಡವರಲ್ಲೂ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ. ಇದರ ಚಿಕಿತ್ಸೆ ಆಗದಿದ್ದರೆ ಸಾಯುವ ತನಕ ಇರಬಹುದು. ಅಂಗಸಾಧಕನ ಪಾದ (ಅಥ್ಲೆಟ್ಸ್ ಫುಟ್) ಕೂದಲ ಜೀವಿಸಸಿ, ಮೇಲ್ಚರ್ಮಜೀವಿಸಸಿಗಳ ಜಾತಿಗಳಿಂದಾಗುವ ಸೊಂಕು. ಎಳೆತನ ದಾಟಿದವರಲ್ಲಿ ಕಾಣುವುದಿದು. ಎಳೆಯ ಹುಡುಗರಲ್ಲಿ ಅನೇಕ ವೇಳೆ ಕಾಣುವ ತೊಡೆಸಿಬ್ಬಿಗೂ ಅದೇ ರೋಗಾಣುವಿನ ಇನ್ನೊಂದು ಬಗೆ ಕಾರಣ. ಚರ್ಮದ ಮೇಲ್ಮೇಲಿನ ಸೊಂಕಿಗೆ ಕಾರಣವಾದ ಒಂದು ಬಗೆಯ ಸಿಬ್ಬು ಹಲಬಣ್ಣದ ಹೊದರೊಟ್ಟಿಗೆ (ಪಿಟರಿಯಾಸಿಸ್ ವರ್ಸಿಕಲರ್) ಕಾರಣವಾದ ಜೀವಾಣು ಮೈ ಚರ್ಮದ ಬಣ್ಣ ಕೆಡಿಸುತ್ತದೆ. ಬಿಳಿಚ ಕಾಂತಿಕದಿಂದ (ಕ್ಯಾಂಡಿಡ ಆಲ್ಬಿಕಾನ್ಸ್) ಆಗುವ ಕಾಂತಿಕಬೇನೆಗಳಾದ (ಕ್ಯಾಂಡಿಡಿಯಾಸಿಸ್) ಮಣಿಮಾಲಣಬೇನೆ (ಮೊನಿಲಿಯಾಸಿಸ್), ಹುಗುಳು (ತ್ರಷ್) ಇವು ಲೋಳೆಯ ಪೊರೆಗಳ ಚರ್ಮದ ಮಡಿಕೆಗಳಲ್ಲಿ ಕಾಣಿಸಿಕೊಳ್ಳುವ ಸೊಂಕುಗಳು. ಬಸಿರಿನಲ್ಲಿ ಯೋನಿಯ ಕಾಂತಿಕಬೇನೆಯಾಗೂ ಹಸುಗೂಸುಗಳಲ್ಲಿ ಬಾಯಿಯ ಹುಗುಳಾಗೂ ಇದು ತಲೆದೋರುವುದು. ಇದು ಮೈಗೆಲ್ಲ ಹತ್ತುವುದು ಅಪರೂಪ. ಪುಪ್ಪುಸ ರೋಗಿಗಳ ಉಗುಳಲ್ಲೂ ಎಲ್ಲರ ಕರುಳುಗಳಲ್ಲೂ ಈ ಅಣಬೆಗಳು ಸಾಮಾನ್ಯವಾಗಿ ಇದ್ದೇ ಇರುವುವು. ಬೇರೆ ಬೇರೆ ರೋಗಗಳಲ್ಲಿ ಬಹಳ ಕಾಲ ಹೆಚ್ಚುಹೆಚ್ಚಾಗಿ ರೋಗಿಗಳಿಗೆ ಚಿಕಿತ್ಸೆಗಾಗಿ ಜೀವಿರೋಧಕಗಳನ್ನು ಕೊಡುತ್ತಲೇ ಇದ್ದರೆ, ಕರುಳು ಮತ್ತಿತರ ಅಂಗಗಳಲ್ಲಿ ಕಾಂತಿಕಬೇನೆಯಾಗಲು ಇದು ಬಲು ಸಾಮಾನ್ಯ ಕಾರಣ. ದನಗಳಲ್ಲೂ ಮಾನವನಲ್ಲೂ ಕಾಣಬರುವ ಕಿರಣ ಬೇನೆಗೆ (ಆಕ್ಟಿನೊಮೈಕೋಸಿಸ್), ಕಾರಣ ಕಿರಣಬೆವರ್ಗದ ಜೀವಾಣುಗಳು. ಈ ರೋಗ ಚರ್ಮ, ದವಡೆಯ ಚರ್ಮದಡಿಯ ಕಣಜಾಲಗಳು, ದವಡೆಲುಬುಗಳಲ್ಲೂ (ಗಲ್ಲಕಟ್ಟು, ಲಂಪಿ ಜಾ), ಪುಪ್ಪುಸಗಳು ಕರುಳವಾಳ, ಈಗಲಿಗಳಂಥ ಒಳಾಂಗಗಳಲ್ಲೂ ಕಾಣುತ್ತದೆ. ಗಟ್ಟಿಯಾಗಿ ಊದಿಕೊಂಡು ಈ ಅಣಬೆಯ ಕಿರಿಯ ತಂಡಗಳಿರುವ, ಕೀವು ಸುರಿಸುವ, ಬಟವೆ ನಾಳಿಗಳು (ಸೈನಸ್ ಟ್ರಾಕ್ಟ್‍ಸ್) ಆಗುವುದು ಇದರ ವಿಶೇಷ ಲಕ್ಷಣ. ಆರೋಗ್ಯವಂತರಲ್ಲಿ ಮೆಂಡಿಕೆಗಳಲ್ಲೂ ಹಲ್ಲುಗಳ ಮೇಲೂ ಈ ಅಣಬೆ ಇರುವುದರಿಂದ ಹಲ್ಲು ಪಾಲನೆ ಕೆಟ್ಟಿದ್ದರೆ, ಕಿತ್ತಾಗ ಕೆಲವೇಳೆ ಸೊಂಕು ಕಾಣಿಸಿ ಕೊಳ್ಳಬಹುದು. ಮೈಗೂಡುವ ಅಣಬೇನೆಗಳು : ಯಾವ ರೋಗವನ್ನೂ ತೋರದೆಯೇ ಮೈಮೇಲಿರುವ ಅಣಬೆಗಳಿಂದ ಕೆಲವು ಸಂದರ್ಭಗಳಲ್ಲಿ ಮೇಲ್ಮೇಲಿನ ಸೊಂಕುಗಳಾಗುವುವು. ಇದರೆದುರಾಗಿ, ಇನ್ನೂ ಕಟ್ಟುನಿಟ್ಟಾದ ಮೈಗೂಡಿದ ಅಣಬೇನೆಗಳಿಗೆ ಕಾರಣವಾಗುವ ಬಹುಪಾಲು ಅಣಬೆಗಳು ಮಾನವನ ಒಳಗಾಗಲಿ ಮೈಮೇಲಾಗಲಿ ಇರದೆ, ಮಣ್ಣಿನಲ್ಲೂ ಕೊಳೆವೆ ಜೀವಿಕ ಕಸ, ಕೊಳಕಿನಲ್ಲೂ ಬಿಡಿಯಾಗಿ ಉಳಕಲಜೀವಿ ಸಿಸಿಗಳಾಗಿ (ಸ್ಯಾಪ್ರೊಫೈಟ್ಸ್) ಬೆಳೆದು ಬದುಕುಳಿದಿರುತ್ತವೆ. ಇದರಿಂದಾಗಿ, ಅನೇಕ ವೇಳೆ ಇವು ಮಾನವನಿಗೂ ಹತ್ತುವುದು ಹೆಚ್ಚಲ್ಲ. ಸೊಂಕು ಹತ್ತುವ ಸಂದರ್ಭಗಳು ಪೂರ್ತಿ ಗೊತ್ತಿಲ್ಲದಿದ್ದರೂ ಗಾಳಿಯಲ್ಲಿ ತೇಲಿಬರುವ ಬೀಜಕಣಗಳನ್ನು (ಸ್ಪೋರ್ಸ್) ಉಸಿರಲ್ಲಿ ಎಳೆತ, ಬಾಯಿ ಸೇವನೆ, ಇಲ್ಲವೇ ಗಾಯಗಳಾದಾಗ ಚರ್ಮದಲ್ಲಿ ಅಣಬೆಯ ಒಳಸೇರಿಕೆ, ಇವು ಅಂಥ ಹಲವಾರು ಸಂದರ್ಭಗಳು. ಪುಪ್ಪುಸದ ಅಣಬೇನೆಗಳಲ್ಲಿ ಸೊಂಕಿಗೆ ಹೆಚ್ಚಾಗಿ ಒಡ್ಡಿದಷ್ಟೂ ರೋಗವೂ ಉಗ್ರವಾಗಿರುವುದು. ಈ ಸೊಂಕನ್ನು ತಡೆವುದರಲ್ಲೂ ಈಡಾಗುವುದರಲ್ಲೂ ಒಬ್ಬೊಬ್ಬನೂ ಒಂದೊಂದು ತೆರ. ತುಸು ಬೇನೆ ಬಿದ್ದು ಚೇತರಿಸಿಕೊಂಡ ಮೇಲೆ ಮತ್ತೆ ಸೊಂಕು ಹತ್ತುವುದು ಅಪರೂಪ. ಕಾಯ್ಬೀಜಾಣಣಬೇನೆ (ಕಾಕ್ಸಿಡಿಯಾಯ್ಡೊಮೈಕೋಸಿಸ್) ಎರಡು ತೆರನಾಗಿ ಕಾಣಿಸಿಕೊಳ್ಳಬಹುದು. ಕಣಿವೆ ಜ್ವರವೆಂಬ ಕೂರಾದರೂ ಮೆಲುಪಿನ ಪುಪ್ಪುಸದ ಸೊಂಕಾಗಬಹುದು. ಇಲ್ಲವೇ ಕಾಯ್ಬೀಜಾಣುವಿನ ಹರಳಗಂತಿ (ಗ್ರಾನ್ಯುಲೋಮ) ಎಂಬ ಎಲ್ಲೆಲ್ಲೂ ಹರಡಿ ಹೆಚ್ಚಿಕೊಳ್ಳುವ ಹರಳಗಂತಿಯಂಥ ರೋಗವಾಗಿರಬಹುದು. ಕೆರಳಿಕ ಕೇಂದ್ರದ ಸುತ್ತಲೂ ಮುಖ್ಯವಾಗಿ ಹರಳಂಥ ಕಣಜಾಲವಿರುವ ಬೆಳೆತಗಳೇ ಹರಳಗಂತಿಗಳು. ಪುಪ್ಪುಸದ ಸೊಂಕು ಇದರ ಮೂಲ. ಬೇನೆಯ ಮೊದಲಲ್ಲಿ ಇದು ಪುಪ್ಪುಸದ ಕ್ಷಯವನ್ನು ಹೋಲುತ್ತದೆ. ಸಾಮಾನ್ಯವಾಗಿ ರೋಗಿಯ ರೋಗತಡೆವ ಬಲದಿಂದ ಕೊನೆಗೆ ರೋಗ ನೀಗುತ್ತದೆ. ಆದರೆ ಕರುಳುಗಳ ಹೊರತು ಯಾವ ಅಂಗಗಳಿಗಾದರೂ ಇದು ತಟ್ಟಬಹುದು. ಅಮೆರಿಕಗಳ ನಡುಪ್ರದೇಶಗಳಲ್ಲಿ ಈ ರೋಗ ಸಾಮಾನ್ಯ. ಈ ಅಣಬೆ ಮಣ್ಣಿನಲ್ಲಿ ಇರುತ್ತದೆ. ನಾಯಿ, ಇಲಿ, ದನ, ಮನುಷ್ಯರಲ್ಲೂ ರೋಗಕ್ಕೆ ಇದೇ ಕಾರಣ. ಜಾಲಮಾಟಕಣದ (ಹಿಸ್ಟೊಪ್ಲಾಸ್ಮ) ಒಂದು ಬಗೆಯಿಂದಾಗುವ ಜಾಲಮಾಟಕಣತೆ (ಹಿಸ್ಟೊಪ್ಲಾಸ್ಮೋಸಿಸ್) ಕೂಡ ಪುಪ್ಪುಸದ ಕೂರಾದ ರೋಗವಾದರೂ ತಂತಾನಾಗಿ ಇಳಿದುಹೋಗುವುದು. ಆದರೆ ಕೆಲವೇಳೆ ತೊರಳೆ (ಗುಲ್ಮ), ಈಲಿ, ಹಾಲುರಸಗಂಟುಗಳು ಮತ್ತಿತರ ಅಂಗಗಳಿಗೆ ಸೊಂಕುಹತ್ತಿಸಿ ಸಾಯಿಸಲೂಬಹುದು. ಪುಪ್ಪುಸದಲ್ಲಿ ವಾಸಿಯಾದ ಅಂಗಾಯಗಳಲ್ಲಿ (ಲೀಷನ್ಸ್) ಸುಣ್ಣ ಸೇರಿಕೊಂಡಾಗ, ಕ್ಷಯವೆಂದು ತಪ್ಪು ತಿಳಿಯಬಹುದು. ಕೆಲವು ನಾಡುಗಳಲ್ಲಿ ಇದು ಜಗ್ಗದೆ ನೆಲೆಸಿರುವುದು. ಹಲವೇಳೆ ಬೆಕ್ಕು, ನಾಯಿ, ಮತ್ತಿತರ ಪ್ರಾಣಿಗಳಿಗೂ ಹತ್ತಬಹುದು. ಮಣ್ಣು, ಗೊಬ್ಬರ, ಕಚಡ ಗುಂಡಿಗಳಲ್ಲೂ ಕೋಳಿಗಳ, ಬಾವಲಿಗಳ ಇಕ್ಕೆಗಳಲ್ಲೂ ಈ ಅಣಬೆ ಜೀವಾಣು ಇರಬಹುದು. ಉತ್ತರ ಅಮೆರಿಕದ ನನೆಯಣಬೇನೆ (ಬ್ಲಾಸ್ಟೊಮೈಕೋಸಿಸ್) ಚರ್ಮ, ಪುಪ್ಪುಸಗಳು, ಮತ್ತಿತರ ಅಂಗಗಳಿಗೆ ಹತ್ತುತ್ತದೆ. ದಕ್ಷಿಣ ಅಮೆರಿಕದ ಬಗೆಯದು ಚರ್ಮ, ಲೋಳೆಪೊರೆಗಳ ಹಾಲುರಸ ಗಂಟುಗಳು, ಕರುಳುಗಳಿಗೆ ಹತ್ತುವ ಹರಳಗಂತಿಯ ರೋಗ. ಬಹಳ ಮಂದಿ ಇದರಿಂದ ಸಾಯುವರು. ಇದರ ಅಣಬೆಯ ಬೀಜಕಣಗಳು ಹೊಟೆಗೆ ಸೇರುವುದರಿಂದ ರೋಗ ಏಳುತ್ತದೆ. ಸಾಮಾನ್ಯವಾಗಿ ಕೆಮ್ಮಿನಿಂದ ಆರಂಭವಾಗುವ ಹುದುಗುಮಣಿಯಣಬೇನೆ (ಟೊರುಲೋಸಿಸ್; ಮೋಟುಕಾಯ್ಜೀವಿಬೇನೆ; ಕ್ರಿಪ್ಟೊಕಾಕೋಸಿಸ್) ರೋಗ ಮೋಟು ಕಾಯ್ಜೀವಿ ಬಗೆಯೊಂದರಿಂದ ಬಂದು, ಸಾಮಾನ್ಯವಾಗಿ ಮಿದುಳು, ಬೆನ್ನು ಹುರಿಗಳ ಪದರಗಳ ಉರಿತವಾಗುತ್ತದೆ. ಅಲ್ಲದೆ ಚರ್ಮ, ಮೂಳೆಗಳು, ಒಳಾಂಗಗಳಿಗೂ ಬೇನೆ ತಪ್ಪಿದ್ದಲ್ಲ. ಪ್ರಪಂಚದಲ್ಲಿ ಎಲ್ಲೆಲ್ಲೂ ಹರಡಿರುವ ರೋಗವಿದು. ಉಳಿದ ರೋಗಾಣುಗಳಂತೆ, ಮೈಯಲ್ಲಿ ಯಾವ ಪ್ರತಿಕ್ರಿಯೆಯನ್ನೂ ಏಳಿಸದು. ಮಣ್ಣಿನಲ್ಲೂ ಪಾರಿವಾಳದ ಹಿಕ್ಕೆಯಲ್ಲೂ ಇವು ಕಂಡುಬಂದಿವೆ. ಸೊಂಕಿನ ಇನ್ನಾವ ಮೂಲವೂ ತಿಳಿದಿಲ್ಲ. ಮೈಗೆ ಹತ್ತುವ ಉಳಿದೆಲ್ಲ ಬೇನೆಗಳಂತೆ ಇದು ಅಂಟುವ ರೋಗವಲ್ಲ. ಬೇರೂರಿ ನಿಧಾನವಾಗಿ ಹರಡುವ ಹರಳಗಂತಿಯಂಥ ರೋಗ ಬಣ್ಣನನೆಯಣ ಬೇನೆ (ಕ್ರೋಮೊಬ್ಲಾಸ್ಟೊಮೈಕೊಸಿಸ್). ಸಾಮಾನ್ಯವಾಗಿ ಕಾಲುಗಳ ಚರ್ಮ, ಚರ್ಮದಡಿಯ ಕಣಜಾಲಗಳಲ್ಲಿ ಕಾಣುತ್ತದೆ. ಬರಿಗಾಲಲ್ಲಿ ಅಡ್ಡಾಡುವಾಗ ಕಲ್ಲು ಮುಳ್ಳು ತಗುಲಿ ಈ ಅಣಬೇನೆ ಹತ್ತಬಹುದು. ಅಣಬೆಗಂತಿಗಳು : ಸೋಂಕು ಹತ್ತಿರುವ ಮುಳ್ಳು, ಸಿಬರುಗಳು ಚುಚ್ಚಿದಾಗ ಬೀಜ ಕಣಗಳು ಒಳಹೊಕ್ಕು ನೆಡುವುದರಿಂದಾಗುವ ಒಂದೇ ತೆರನಾಗಿ ತೋರುವ ಕಿರಣಬೇನೆವರ್ಗ ಮತ್ತು ಅಣಬೆಗಳ ಸುಮಾರು 15 ಜಾತಿಗಳಿಂದ ಏಳುವ ರೋಗ ತಂಡಗಳಿವು. ಸಾಮಾನ್ಯವಾಗಿ ಮೈಗೆ ಮುಳ್ಳು ತಗಲುವೆಡೆಗಳಲ್ಲೆಲ್ಲ ಇದರ ಸೊಂಕೇಳುವುದು. ಪಾದಗಳಲ್ಲಿ ಏಳುವುದು ತೀರ ಸಾಮಾನ್ಯ. ಊದಿಕೊಂಡು ಗಂಟುಗಂಟಾಗಿ ಮೂಳೆಯೂ ಸೇರಿದಂತೆ ಕಣಜಾಲಗಳು ಹಾಳಾಗಿ, ಹುಣ್ಣಿನಿಂದ ಕೀವು ಸುರಿಸುವ ನಾಳಿಗಳು, ಈ ಅಣಬೆಯ ದಟ್ಟ ತಂಡಗಳಾದ ರವೆಗಾಳುಗಳು ಕೀವಿನಲ್ಲಿರುವುದೂ ಇದರ ಲಕ್ಷಣಗಳು. ಆಯಾ ಜಾತಿಗೆ ತಕ್ಕಂತೆ ಈ ರವೆಗಾಳುಗಳ ಗಾತ್ರ, ಆಕಾರ, ಮೆತುವು, ಘನತ್ವ, ಬಣ್ಣಗಳು ಇರುತ್ತವೆ. ಸೊಂಕು ಅಕ್ಕಪಕ್ಕದ ಕಣಜಾಲಗಳಿಗೆ ಹರಡಿಕೊಂಡು ಬೇರೂರಿದ ಊನಯಿಸುವ ರೋಗ ತಲೆದೋರುತ್ತದೆ. ಸಹರಾ ಮರುಭೂಮಿಯ ಕೆಳಗಣ ಆಫ್ರಿಕದಲ್ಲಿ ಇದೊಂದು ವೈದ್ಯರ, ಆರೋಗ್ಯಪಾಲಕರ ಮುಖ್ಯ ಸಮಸ್ಯೆ. ಪ್ರಪಂಚದ ಬೇರೆಡೆಗಳಲ್ಲೂ ಉಂಟು. ನಮ್ಮಲ್ಲಿ ಇದಕ್ಕೆ ಮಧುರಾ ಪಾದವೆಂದು ಹೆಸರಿದೆ. (ಮದುರಣಬೇನೆ : ಮಧುರ ಮೈಕೋಸಿಸ್). ಕೆಲವು ಬಗೆಯ ಕಿರಣಣಬೆ ವರ್ಗದವಿಂದ ಏಳುವ ಅಣಬೆಗಂತಿಗಳು ಸಲ್ಫ ಮತ್ತು ಸಲ್ಫೋನ್ ಮದ್ದುಗಳಿಗೆ ಮಣಿಯುತ್ತವೆ. ಆದರೆ ಮೂಳೆ ಮತ್ತಿತರ ಭಾಗಗಳೆಲ್ಲ ತಿಂದುಹೋಗಿ ಹಾಳಾಗುವ ತನಕ ರೋಗಿ ಆಸ್ಪತ್ರೆಗೆ ಕಾಲಿಡದ್ದರಿಂದ, ಆ ಅಂಗಭಾಗವನ್ನು ಕತ್ತರಿಸಿ ಹಾಕುವುದೊಂದೇ ಗುಣಕಾರಕ ಚಿಕಿತ್ಸೆ. ಕಡಲ್ಕಳೆಯಣಬೆ ಬೇನೆಗಳು: ಸಿಹಿಮೂತ್ರದ ರೋಗಿಗಳಿಗೆ ಕಡಲ್ಕಳೆಯಣಬೆ ಬೇನೆಗಳು (ಫೈಕೊಮೈಕೋಸಸ್) ಹತ್ತಿ, ಮೊಗದ ಎಲುಗಳಿಗಳ (ಸೈನಸಸ್) ಮೂಲಕ ಮಿದುಳಿಗೂ ಹರಡಬಹುದು. ಕೆಲವು ಬಗೆಯ ಮೂಗಿನ ಹಲಗಾಲಿಗಳಿಗೂ (ಪಾಲಿಪ್ಸ್) ಕಾರಣವಾಗ ಬಹುದು. (ಡಿ.ಪಿ.ಜೆ.)