ಪುಟ:Mysore-University-Encyclopaedia-Vol-1-Part-1.pdf/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನೇಕಾಂತವಾದ - ಅನೌ

ಅನೇಕಾಂತವಾದ - ಅನೌ

ಪ್ರಕೃತಿಯನ್ನು ಬಗೆಬಗೆಯಾಗಿ ಆರಾಧಿಸುತಿದ್ದ. ಮ೦ತ್ರತ೦ತ್ರಗಳಿ೦ದ ಪ್ರಕೃತಿಯನ್ನು ಒಲಿಸಿಕೊಳ್ಳಬಹುದೆ೦ದು ತಿಳಿದಿದ್ದ. ಅವನ ಮತಧರ್ಮಕ್ಕೂ ಮಾಟಮ೦ತ್ರಗಳಿಗು ಹೆಚ್ಚು ವ್ಯತ್ಯಾಸವಿರಲಿಲ್ಲ. ಅವನ ಸುತ್ತಮುತ್ತ ಅಪಾಯಕಾರವಾದ ದುಷ್ಟಶಕ್ತಿಗಳು (ಭೂತ ಪ್ರೇತಗಳು) ಇರಬಹುದೆ೦ಬ ಭಯದಲ್ಲಿ ಸಿಲುಕಿ, ರೋಗರುಜಿನಗಳು ಅವುಗಳಿ೦ದಲೇ ಸ೦ಭವಿಸುವುವೆ೦ದು ನ೦ಬಿದ್ದ. ಈ ನ೦ಬಿಕೆಯಿ೦ದಾಗಿ ಆ ದೇವತೆಗಳನ್ನು ವಿಧವಿಧವಾಗಿ ಆರಾಧಿಸುತಿದ್ದ. ಆದರೆ ಪ್ರಕೃತಿಯ ಶಕ್ತಿಗಳಿಗೆ ನಿರ್ದಿಷ್ಟವಾದ ನಾಮರೂಪಗಳನ್ನು ಕೊಟ್ಟು ಅರಿತುಕೊಳ್ಳುವಷ್ಟು ಬುದ್ದಿಶಕ್ತಿ ಅವನಲ್ಲಿ ಬೆಳೆದಿರಲಿಲ್ಲ. ಪ್ರಾಣಿ-ಪಶು, ಜಡ-ಚೆತನ, ಜೀವ೦ತ-ನಿರ್ಜೀವ ಇವುಗಳಿಗೆ ವ್ಯತ್ಯಾಸವನ್ನು ಅರಿಯದ ವಿಚಿತ್ರ ಭಾವನೆಗಳಿ೦ದ ವಿಚಿತ್ರದೇವತೆಗಳನ್ನು ಪಶು, ಪ್ರಾಣಿ, ವೃಕ್ಷ ಮು೦ತಾದ ರೂಪಗಳಲ್ಲಿ ಕ೦ಡು ಆರಾಧಿಸುತ್ತಿದ್ದ.

ತಮ್ಮ ಗು೦ಪಿನವರು ಬದುಕಿದರೆ ಸಾಕು ಎ೦ಬ ಒ೦ದು ವಿಧವಾದ ಸ್ವಾರ್ಥ ಅನಾಗರಿಕ ಜನರಲ್ಲಿ ಎದ್ದು ತೋರುತ್ತಿತ್ತು. ಇತರ ಗು೦ಪಿನವರನ್ನು ಅವರ ಆರಧ್ಯದೇವತೆಗಳನೂ ತಮ್ಮ ಶತ್ರುಗಳೆ೦ದು ತಿಳಿದಿದ್ದರು. ಪ್ರತಿ ಗು೦ಪಿಗೂ ಅವರದೇ ಆದ ಸ್ಥಳೀಯದೇವತೆಗಳಿದ್ದವು. ಸಮಾನ ದೇವತೆಗಳನ್ನು ಆರಾಧಿಸುವವರು ಸ್ನೇಹಭಾವದಿ೦ದ ಒಗ್ಗಟ್ಟಾಗಿರುತ್ತಿದ್ದರು. ದೇವತೆಗಳು ದೈನ೦ದಿನ ಅವಶ್ಯಕತೆಗಳನ್ನು ಪೂರೈಸಿಕೊಡುವರೆ೦ಬ ನ೦ಬಿಕೆ ಇತ್ತು. ಸಂಕಷ್ಟಗಳಿಗೆ ಸಿಕ್ಕಿದಾಗ ದೇವತೆಗಳನ್ನು ವಿಶೇಷರೀತಿಯಲ್ಲಿ ಆರಾಧಿಸುತ್ತಿದ್ದರು. ಪ್ರಾಚೀನ ಅನಾಗರಿಕರಲ್ಲಿ ನರಬಲಿ ನಿ೦ತು, ಪಶುಬಲಿ ದೇವತಾರಾಧನೆಯ ಅ೦ಗವಾಗಿದ್ದುವು. ಮಾನವನ ಪಶುತ್ವ ಕಡಿಮೆಯಾದ೦ತೆಲ್ಲ ನರಬಲಿ ನಿ೦ತು, ಪಶುಬಲಿ ಮಾತ್ರ ರೂಢಿಯಲ್ಲಿತ್ತು. ಇದನ್ನು ವೇದಗಳ ಕಾಲದಲ್ಲಿಯೂ ಕಾಣುತ್ತೇವೆ. ವೇದಕಾಲದ ಆರ್ಯರು ಯಜ್ನಯಾಗಾದಿಗಳಲ್ಲಿ ನೆದೆಸುತ್ತಿದ್ದ ಪ್ರಾಣಿಹಿಂಸೆಯನ್ನು ಕಂಡು ಬುದ್ಧ ವೈದಿಕಧರ್ಮವನ್ನು ಕಟುವಾಗಿ ಖಂಡಿಸಿದ.

ರಾಜ್ಯಗಳನ್ನು ಕಟ್ಟಿದ ಮೇಲೆ ಪ್ರಾಚೀನಮಾನವನ ಅನೇಕದೇವತಾವಾದ ಒಂದು ನಿರ್ದಿಷ್ಟರೂಪವನ್ನು ತಾಳಿತು. ಅವನ ಧಾರ್ಮಿಕ ಪ್ರವೃತ್ತಿ ಬೆಳೆಯುತ್ತ ಹೋದಂತೆ ದೇವತೆಗಳಲ್ಲಿ ಧಾರ್ಮಿಕ ಮತ್ತು ನೈತಿಕ ಗುಣಗಳನ್ನು ಕಂಡುಕೊಂಡು ಅವರಿಗೆ ಒಂದು ಗೌರವ ಸ್ಥಾನವನ್ನು ಕಲ್ಪಿಸಿದ. ರಾಜನಿಗಿರುವಂತೆ ದೇವತೆಗಳಿಗೂ ಸಾಮಾನ್ಯರಿಗಿಂತ ಮಿಗಿಲಾದ ಸ್ಥಾನಮಾನಗಳುಂಟೆಂದೂ ಅವರ ಲೋಕ ಭೂಲೋಕಕ್ಕಿಂತ ಉನ್ನತಸ್ಥಾನದಲ್ಲಿದೆಯೆಂದೂ ಭಾವಿಸಿದ. ರಾಜ್ಯಾಡಳಿತದಲ್ಲಿ ಅಧಿಕಾರದರ್ಜೆಯ ವಿಭಾಗಗಳಿರುವಂತೆ ದೇವತೆಗಳಲ್ಲೂ ಉಂಟೆಂಬ ಭಾವನೆ ಬೆಳೆಯಿತು. ಅವರಿಗೆ ನ್ಯಾಯಾಧೀಶರ ಸ್ಥಾನವನ್ನು ಕೊಡಾಲಾಯಿತು. ಜೀವನ ವಿಸ್ತರಿಸಿದಂತೆ ದೇವತೆಗಳ ಕಾರ್ಯವ್ಯಾಪ್ತಿಯೂ ವಿಸ್ತರಸಿತು. ಮಾನವನ ವ್ಯಕ್ತಿತ್ವವೂ ನಿರ್ದಿಷ್ಟವಾಯಿತು. ತನಗೂ ದೇವತೆಗಳಿಗೂ ನಿಕಟವಾದ ವೈಯಕ್ತಿಕ ಸಂಬಂಧವನ್ನು ನಾಗರಿಕಮಾನವ ಕಲ್ಪಿಸಿಕೊಂಡ. ದೇವತೆಗಳ ಬಗ್ಗೆ ಅವನಲ್ಲಿದ್ದ ಅಶ್ಲೀಲಭಾವನೆಗಳು ಹೋಗಿ ಸದ್ಭಾವನೆ ಬೆಳೆಯಿತು. ದೇವತೆಗಳು ಗುಪ್ತಸ್ಥಾನದಲ್ಲಿ ಅಡಗಿಕೊಂಡಿರುವರೆಂಬ ಅಭಿಪ್ರಾಯ ಹೋಗಿ ಅವರು ಮಾನವನ ಧಾರ್ಮಿಕಕಾರ್ಯಗಳನ್ನು ಪ್ರಚೋದಿಸುವ ಶಕ್ತಿಗಳೆಂಬ ಭಾವನೆ ಬೆಳೆಯಿತು. ದೇವತೆಗಳನ್ನು ಪ್ರಕೃತಿ ಸಂಬಂಧದಿಂದ ಬಿಡುಗಡೆ ಮಾಡಿ ಅವರಿಗೆ ಪ್ರತ್ಯೇಕವಾದ ವ್ಯಕ್ತಿತ್ವವನ್ನು ಕಲ್ಪಿಸಲಾಯಿತು. ಆರ್ಯರ ಇಂದ್ರನೂ ಪೃಥ್ವಿಯೂ ಗ್ರೀಕರ ಔರೇನಾಸ್, ಗಾಇಯಾ ಎಂಬ ದೇವತೆಗಳೂ, ಈಜಿಪ್ಟಿಯನ್ನರ ಕೆಬ್ ಮತ್ತು ನಟ್ ಎಂಬ ದೇವತೆಗಳೂ (ಪ್ರಕೃತಿಯ ಪ್ರತಿನಿಧಿಗಳಾಗಿದ್ದವರು) ಮರೆಯಾದರು. ಪರ್ಜನ್ಯದೇವತೆಯಾದ ವರುಣನಿಗೆ ಕ್ರಮೇಣ ನೈತಿಕಗುಣಗಳ್ಳನ್ನು ಆರೋಪಿಸಿ ಧರ್ಮದೇವತೆಯೆಂದು ಪ್ರಾರ್ಥಿಸತೊಡಗಿದರು. ಗ್ರೀಕರ ಅಪೋಲೋ ದೇವತೆಯನ್ನು ಹೀಗೆ ವಿವಿಧ ರೀತಿಯಲ್ಲಿ ಜೀವನದ ಮೇಲೆ ಪ್ರಭಾವವನ್ನು ಬೀರುವ ಮುಖ್ಯದೇವತೆಯರೆಂದು ಪರಿಗಣಿಸಲಾಯಿತು. ಈಜಿಪ್ಟಿಯನ್ನರೂ ಪ್ರಾಚೀನರೂ ರೋಮನ್ನರೂ ತಮ್ಮ ಪ್ರಕೃತಿದೇವತೆಗಳನ್ನು ಉಚ್ಚಸ್ಥಾನಕ್ಕೇರಿಸಿದರು.

ಪ್ರಾಚೀನಮಾನವ ದೇವತೆಗಳನ್ನು ಆರೋಗ್ಯ, ಆಹಾರ ಇಂಥ ಅಲ್ಪ ಲಾಭಗಳಿಗಾಗಿಯೇ ಪ್ರಾರ್ಥಿಸುತಿದ್ದ. ಅವನ ಮನದಲ್ಲಿ ಉಚ್ಚಭಾವನೆಗಳು ಮೂಡುವುದಕ್ಕೆ ಅವಕಾಶವಿರಲಿಲ್ಲ. ಶತ್ರುನಾಶಕ್ಕಾಗಿ ಮತ್ತು ತನ್ನ ದೈನಂದಿನ ಅವಶ್ಯಕತೆಗಳ ಪೂರೈಕೆಗಾಗಿ ಅವನು ಪ್ರಾರ್ಥಿಸುತ್ತಿದ್ದ. ಆದರೆ ಅನೇಕದೇವತಾವಾದ ಹೆಚ್ಚು ನಿರ್ದಿಷ್ಟವಾಗಿ ಧಾರ್ಮಿಕ ವ್ಯಕ್ತಿತ್ವವನ್ನು ಕಲ್ಪಿಸಿದ ಮೇಲೆ ಪ್ರಾರ್ಥನಾರೀತಿಯಲ್ಲೂ ಬದಲಾವಣೆಯಾಯಿತು. ಸುಸಂಸ್ಕೃತ ಮಾನವ ಪ್ರಾರ್ಥನೆಯಲ್ಲಿ ತನ್ನ ಧಾರ್ಮಿಕ ಪ್ರವೃತ್ತಿ ಬೆಳೆಯಲೆಂದು ದೇವರನ್ನು ಕೇಳಿಕೊಳ್ಳುತ್ತಾನೆ. ಜ್ನಾನವನ್ನು ಮಾಯೆಯಿಂದ ಬಿಡುಗಡೆಯನ್ನು ಬೇಡುತ್ತಾನೆ. ವೇದಗಳ ಕಾಲದ ಐಹಿಕ ಸುಖದ ಪ್ರಾಧಾನ್ಯ ಉಪನಿಷತ್ತುಗಳಲ್ಲಿ ಬರುವ ಪ್ರಾರ್ಥನೆಗಳಲ್ಲಿ ಕಾಣಬಹುದು: ಅಸತೋ ಮಾ ಸಧ್ಗಮಯ ತಮಸೋ ಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂ ಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ

ಮಾನವ ತನ್ನ ಆತ್ಮೋದ್ಧಾರವನ್ನು ಮಾತ್ರವಲ್ಲದೆ ಇಡೀ ಮಾನವಕುಲಕ್ಕೇ ಶಾಂತಿಯನ್ನೂ ಬೇಡುತ್ತಾನೆ. ಅನೇಕದೇವತಾವಾದದಲ್ಲಿ ದೇವಾಲಯಗಳಿಗೂ ಮೂರ್ತಿಪೂಜೆಗೂ ಪುರೋಹಿತವರ್ಗಕ್ಕೂ ಧ್ಯಾನಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ಕೊಡಲಾಗಿದೆ.

ಅನೇಕದೇವತಾವಾದ ಕ್ರಮೇಣ ಏಕದೇವತಾವಾದದ ಕಡೆಗೆ ಮಾನವನನ್ನು ಕೊಂಡೊಯ್ದಿತು. ಗುಂಪುಗಳು ಒಟ್ಟುಗೂಡಿಕೊಂಡು ರಾಜ್ಯಗಳು ಉದಯಿಸಿದವು. ಆಗ ಅನೇಕ ದೇವತೆಗಳನ್ನು ತಾರತಮ್ಯ ಭಾವನೆಯಿಂದ ವಿಂಗಡಿಸಲಾಯಿತು. ಪ್ರಬಲವಾದ ಗುಂಪುಗಳ ದೇವತೆಗಳನ್ನು ಪ್ರಾಧಾನ್ಯ ಪಡೆದು ಪರಾಜಿತರಾದವರ ದೇವತೆಗಳು ಅಧೀನ ಸ್ಥಾನಗಳಲ್ಲಿಡಲ್ಪಟ್ಟರು.

ಮಾನವರಲ್ಲಿ ಅಂತಸ್ತುಗಳಾದಂತೆ ದೇವತೆಗಳನ್ನು ಒಂದು ತಾರತಮ್ಯಕ್ರಮದಲ್ಲಿ ಇರಿಸಿದರು. ಕುಟುಂಬದಲ್ಲಿ ತಂದೆಗೂ ರಾಜ್ಯದಲ್ಲಿ ಪ್ರಭುವಿಗೂ ಇರುವ ಸ್ಥಾನವನನ್ನೇ ದೇವತೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ದೇವತೆಗೆ ಕೊಡಲಾಯಿತು. ರೋಮನ್ನರು ಜೂಪಟರ್ ಎಂಬ ದೇವತೆಗೆ ರಾಜ್ಯರಕ್ಷಣೆಯ ಭಾರವನ್ನು ವಹಿಸಿದರು. ಆರ್ಯರು ಇಂದ್ರನನ್ನು ಯಜ್ಞಯಾಗಾದಿಗಳ ಅಧಿದೇವತೆಯನ್ನಾಗಿ ಮಾಡಿದ್ದರು. (ಆದರೆ ಉಪನಿಷತ್ತುಗಳು ಪರಬ್ರಹ್ಮನ ಸ್ವರೂಪವನ್ನು ಕುರಿತು ತತ್ತ್ವ ಪ್ರತಿಪಾದನೆ ಮಾಡಿದವು). ಚಿಕ್ಕಪುಟ್ಟ ದೇವತೆಗಳನ್ನು ಕೈಬಿಡಲಾಯಿತು. ಈಜಿಪ್ಟಿನವರು ಅಮನ್ ರಾ ಎಂಬ ದೇವತೆಯನ್ನು ದೇವತೆಗಳ ಒಡೆಯನೆಂದು ಭಾವಿಸಿದರು. ಹೀಗೆಯೇ ಹೀಬ್ರೂಗಳಲ್ಲಿ ಜಹೋವನಿಗೆ , ಚೀನದಲ್ಲಿ ಟೇಯೋಗೆ ಅತ್ಯುನ್ನತವಾದ ಪದವಿಯನ್ನು ಕೊಡಲಾಯಿತು. ಇವರನ್ನು ಸರ್ವೇಶ್ವರನೆಂದು ಭಾವಿಸಿದರು. ಉಳಿದ ದೇವತೆಗಳನ್ನು ಅವರ ಸೇವಕರೆಂದು ತಿಳಿದರು. ಗ್ರೀಸಿನಲ್ಲಿ ಜ಼ೂಸ್ ಎಂಬ ದೇವತೆಯೇ ದೇವತೆಗಳಿಗೆ ಪ್ರಭುವಾದ. ಮಾನವನ ಆಧ್ಯಾತ್ಮಿಕ ನೈತಿಕ ಸಾಧನೆ ಮುಂದುವರಿದಂತೆ, ಮಾನವಕುಲಕ್ಕೆಲ್ಲ ಒಬ್ಬನೇ ತಂದೆ ಮತ್ತು ವಿಶ್ವಕ್ಕೆಲ್ಲ ಒಬ್ಬನೇ ಕರ್ತೃ ಮತ್ತು ಪಾಲಕ ಎಂಬ ಭಾವನೆ ಬೆಳೆಯಿತು.

ಹೀಗೆ ಅನೇಕದೇವತಾವಾದ ಮಾನವನ ಆಧ್ಯಾತ್ಮಿಕ ಬೆಳೆವಣಿಗೆಗೆ ಹೊಂದದೆ ಏಕದೇವತಾವಾದ ಎಲ್ಲ ಮುಖ್ಯವಾದ ಮತಧರ್ಮಗಳಲ್ಲೂ ಸ್ಪಷ್ಟವಾದ ರೂಪತಾಳಿತು. ಅನೇಕದೇವತಾವಾದ ಆಚರಣೆಯಲ್ಲಿದ್ದರೂ ಮಾನವ ಕ್ರಮೇಣ ವಿಶ್ವದ ಏಕತ್ವವನ್ನು ಅರಿಯುತ್ತಾ ಬಂದ. ಎಲ್ಲರಿಗೂ ಬೆಳಕನ್ನು ನೀಡುವವನು ಒಬ್ಬನೇ ಸೂರ್ಯ, ಪ್ರಕೃತಿಯಲ್ಲಿ ಒಂದೇ ಸ್ವಭಾವವಿದೆ. ಎಲ್ಲಾ ವಿವಿಧಶಕ್ತಿಗಳಿಗೂ ಅದರ ವಿವಿಧ ಅಂಗಗಳು ಎಂಬ ಅರಿವು ಉಂಟಾದದೂ ಏಕದೇವತಾವಾದ ಅಂದರೆ ವಿಶ್ವಕ್ಕೆಲ್ಲಾ ಒಬ್ಬನೇ ಒಡೆಯ ಎಂಬ ತತ್ತ್ವದ ಪ್ರತಿಪಾದನೆಗೆ ಮುಖ್ಯ ಕಾರಣವಾಯಿತು. (ನೋಡಿ-ಏಕದೇವತಾವಾದ) (ಎಸ್.ಎಸ್.ಆರ್.)

ಅನೇಕಾಂತವಾದ : ಜ್ಞೇಯವಸ್ತು ಅನೇಕಾಂತಸ್ವರೂಪಿಯಾಗಿದೆ. ಅಂದರೆ ಅದರ ಧರ್ಮಗಳು, ಗುಣಗಳು ಅನೇಕವಾಗಿವೆ. ಆ ಅನೇಕ ಧರ್ಮಗಳು ಒಂದೊಂದು ಸ್ವರೂಪದಲ್ಲಿ ಆ ವಸ್ತುವಿನಲ್ಲಿ ಇದ್ದೂ ಪರಸ್ಪರ ಒಂದರಿಂದ ಇನ್ನೊಂದು ಭಿನ್ನವಾಗಿವೆ. ವಸ್ತುವಿನ ಅನ್ಯಧರ್ಮಗಳ ಅಪೇಕ್ಷೆಯನ್ನು ಗಮನಿಸದೆ ಒಂದೇ ಧರ್ಮವನ್ನು ಗ್ರಹಣ ಮಾಡುವುದು ಏಕಾಂತ. ಅವುಗಳನ್ನು ಗೌಣ ಮತ್ತು ಮುಖ್ಯ ಭಾವಗಳಿಂದ ಪರಸ್ಪರ ಸಾಪೇಕ್ಷತೆಯಿಂದ ತಿಳಿಯುವುದೇ ಅನೇಕಾಂತ. ವಸ್ತುವಿನ ಯಥಾರ್ಥಜ್ಞಾನ ಅನೇಕಾಂತದಿಂದಲೇ ಆಗುತ್ತದೆ. ಅದೇ ಪ್ರಮಾಣ. ಅನೇಕಾಂತವಾದಕ್ಕೆ ಅಪೇಕ್ಷವಾದ, ವಿಭಜ್ಯವಾದ ಅಥವಾ ಪೃಥಕ್ಕರಣಮಾಡಿ ವಿಭಜನೆಮಾಡಿ, ಯಾವುದಾದರೊಂದು ತತ್ತ್ವವನ್ನು ವಿವೇಚಿಸುವವಾದ ಎಂದು ವಿವರಿಸುವುದು ಸಮರ್ಪಕವಾಗುವುದು. ಅಪೇಕ್ಷಾಭೇದದಿಂದ ವಸ್ತುಸ್ವರೂಪವನ್ನು ವಿವೇಚಿಸುವಾಗ ಸ್ಯಾತ್ ಶಬ್ದಾಂಕಿತ ಪ್ರಯೋಗ ಆಗಮಗಳಲ್ಲಿ ದೊರೆಯುತ್ತದೆ. ಸ್ಯಾತ್ ಶಬ್ದಕ್ಕೆ ಕಥಂಚಿತ್ - ಕೆಲವು ದೃಷ್ಟಿಯಿಂದ ಎಂದು ಅರ್ಥವಾಗುವುದು. ವಾದಶಬ್ದ ಕಥನವೆಂಬರ್ಥದಲ್ಲಿದೆ. ಇದರ ಭಾವವಿಷ್ಟೆ. ಪದಾರ್ಥ ಕೆಲವು ದೃಷ್ಟಿಯಿಂದ ಹೀಗಿದೆ; ಹಲವು ದೃಷ್ಟಿಯಿಂದ ಹಾಗಿದೆ. ಈ ರೀತಿ ವಸ್ತುವಿನ ಅನೇಕ ಧರ್ಮ, ಗುಣಗಳ ದೃಷ್ಟಿಯಲ್ಲಿ ಗೌಣವಾಗಿಟ್ಟು ಕೆಲವೊಂದು ವಿಶೇಷಗುಣಕ್ಕೆ ಪ್ರಾಮುಖ್ಯಕೊಟ್ಟು ಪ್ರತಿಪಾದನೆ ಮಾಡುವ ಅನೇಕಾಂತವೇ ಸ್ಯಾದ್ವಾದವೆನಿಸುತ್ತದೆ. ನಿತ್ಯಾನಿತ್ಯತ್ವ, ಸಾಮಾನ್ಯವಿಶೇಷತ್ವ, ವಾಚ್ಯಾವಾಚ್ಯತ್ವ, ಸತ್ ಅಸತ್ ಇತ್ಯಾದಿ ವಸ್ತುವಿನ ಗುಣಗಳು ಈ ಪದ್ಧತಿಯಲ್ಲಿ ಸ್ಪಷ್ಟವಾಗಿ ದೃಗ್ಗೋಚರವಾಗುತ್ತದೆ. ಇದೇ ಅನೇಕಾಂತ ದೃಷ್ಟಿ. ಇದರಲ್ಲಿ ಏಕಾಂತಕ್ಕೆ, ದುರಾಗ್ರಹಕ್ಕೆ ಆಸ್ಪದವಿಲ್ಲ. (ನೋಡಿ-ಸ್ಯಾದ್ವಾದ) (ಎ.ಎನ್.ಯು)

ಅನೌ : ರಷ್ಯದ ತುರ್ಕಿಸ್ತಾನದಲ್ಲಿ ಮರ್ವ್ ಓಯಸಿಸ್ಸಿನ ಬಳಿ ಇರುವ ಊರು. ಇಲ್ಲಿ ಪುರಾತನ ಸಂಸ್ಕ್ರತಿಗಳ ಅವಶೇಷಗಳಿವೆ. ಇಲ್ಲಿನ ಮೊಟ್ಟಮೊದಲಿನ ಸಂಸ್ಕ್ರತಿ ನವ ಶಿಲಾಯುಗಕ್ಕೆ ಸೇರಿದ್ದು. ಕಾಲಕ್ರಮೇಣ, ಇರಾನ್, ಮೆಸಪೊಟೋಮಿಯ ಸಂಸ್ಕ್ರತಿಗಳ ಪ್ರಭಾವ ಇಲ್ಲಿ ಹರಡಿ ತಾಮ್ರದ ಉಪಯೋಗವು ರೂಢಿಗೆ ಬಂದಿತು. ಭೌಗೋಳಿಕವಾಗಿ