ಪುಟ:Mysore-University-Encyclopaedia-Vol-1-Part-1.pdf/೪೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅರಣ್ಯ ಮತ್ತು ಅರಣ್ಯಶಾಸ್ತ್ರ

ಭಾರತಸರ್ಕಾರ ಮೊದಲಿನಿಂದಲೂ ಇದ್ದ ಕಾಯಿದೆಗಳನ್ನು ಕ್ರೋಡೀಕರಿಸಿ 1927ರಲ್ಲಿ ಹೊಸ ಕಾಯಿದೆ ಪ್ರಕಟಿಸಿತು. ಕರ್ನಾಟಕ 1900ರಲ್ಲಿ ಪ್ರಕಟಿಸಿದ ಕಾಯಿದೆ 1901ರ ಜನವರಿ ಒಂದನೆಯ ತಾರೀಕಿನಿಂದ ಜಾರಿಗೆ ಬಂದಿತು. ಇಂಥ ಕಾಯಿದೆಗಳಿಗೆ ಕಾಲಕಾಲಕ್ಕೆ ತಿದ್ದುಪಡಿಗಳೂ ಬಂದಿವೆ. (ಎಸ್.ವಿ)

ವನಮಹೋತ್ಸವ:ಭಾರತ ದೇಶದ ಜನತೆಗೆ ಅರಣ್ಯಗಳ ಅವಶ್ಯಕತೆ, ಉಪಯೋಗ ಇವುಗಳ ವಿಷಯ ಹೆಚ್ಚಿನ ಅರಿವು ಮೂಡುವಂತೆ ಮಾಡಲು ದೇಶದ ಅರಣ್ಯ ಸಂಪತ್ತನ್ನು ಕ್ರಮಬದ್ದವಾಗಿ ವರ್ಧಿಸಲು ವನಮಹೋತ್ಸವ ಎಂಬ ರಾಷ್ಟ್ರೀಯ ಸಪ್ತಾಹವನ್ನು 1950ರಿಂದ ಆಚರಿಸಲಾಗುತ್ತಿದೆ.

ಭಾರತದಲ್ಲಿ ಅರಣ್ಯ ಸಂಶೋಧನ ಸಂಸ್ಥೆಗಳು: ಡೆಹರಾಡೂನಿನಲ್ಲಿರುವ ಫಾರೆಸ್ಟ್ ರಿಸರ್ಚ್ ಇನ್ ಸ್ಟಿಟ್ಯೂಟ್ ಪ್ರಧಾನವಾದದ್ದು. ಇದು 1878ರಲ್ಲಿ ಅರಣ್ಯ ಶಾಖೆ ಎಂಬ ಹೆಸರಿನಿಂದ ರೂಪ ತಳೆಯಿತು. ಅರಣ್ಯಶಾಸ್ತ್ರದ ಅಭ್ಯಾಸ, ಅರಣ್ಯಾಧಿಕಾರಿಗಳು ತರಪೇತು ಮುಖ್ಯೋದ್ದೇಶಗಳು. 1906ರಲ್ಲಿ ಶಾಲೆ ವಿಸ್ತರಿಸಿ ಅಧ್ಯಯನದ ವ್ಯಾಪ್ತಿ ಬೆಳೆಯಿತು. ಸು.1300 ಎಕರೆ ಪ್ರದೇಶದಲ್ಲಿ ಸಂಸ್ಥೆಯ ಆಡಳಿತ ಕಛೇರಿ, ಸಂಶೋಧನಾಲಯಗಳು, ವಸ್ತು ಸಂಗ್ರಹಾಲಯಗಳು ಮುಂತಾದುವುಗಳನ್ನು ರಚಿಸಲಾಗಿದೆ (1920). ಆಧುನಿಕ ವೈಜ್ಞಾನಿಕ ತಳಹದಿಯ ಮೇಲೆ ನಿಂತ ಅರಣ್ಯಶಸ್ತ್ರದ ವಿಶಿಷ್ಟ ವಿಭಾಗಗಳಲ್ಲೂ ಸಂಶೋಧನೆ ನಡೆಸುತ್ತಿರುವ, ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ದೇಶದ ಪ್ರಗತಿಯ ಒಂದು ಭವ್ಯ ಸಂಕೇತ.

ಭಾರತದಲ್ಲಿ ಇತರ ಅರಣ್ಯ ಸಂಶೋಧನ ಪ್ರಯೋಗಾಲಯ : ಇದು 2 ಜನೆವರಿ 1936ರಲ್ಲಿ ಅಸ್ತಿತ್ವಕ್ಕೆ ಬಂದಿತು. ಮುಂದೆ ಇದೊಂದು ಬೃದತ್ ಅರಣ್ಯ ಸಂಶೋಧನ ಪ್ರಯೋಗಾಲಯವಾಗಿ ಮಾರ್ಪಾಟು ಹೊಂದಿತು. ಇದನ್ನು ಜರ್ಮನಿಯ ಮ್ಯೂನಿಕ್ ಅರಣ್ಯ ಸಂಶೋಧನ ಪ್ರಯೋಗಾಲದ ಮಾದರಿಯಲ್ಲಿ ಸ್ಥಾಪಿಸಲಾಗಿದೆ. 1940ರಿಂದೀಚೆಗೆ ಅರಣ್ಯಾಧಿಕಾರಿಗಳ ಶಿಕ್ಷಣವೂ ಈ ಸಂಸ್ಥೆಯಲ್ಲಿ ನಡೆಯುತ್ತಿದೆ.ಬಿದಿರನ್ನು ರೇಯಾನ್ ಪಲ್ಫ ಆಗಿ ಉಪಯೋಗಿಸಲು ಮೊದಲು ಭಾರತಕ್ಕೆ ತೋರಿಸಿಕೊಟ್ಟ ಹಿರಿಮೆ ಈ ಸಂಸ್ಥೆಯದು.ಅರಗಿನ ಕೀಟ ಸಾಕಲು ವಿವಿಧ ವೃಕ್ಷಗಳ ಬಳಕೆಯನ್ನು (ಎಲಚಿ, ಜಾಲರಿ ಮುಂತಾದವು) ಜನಸಾಮಾನ್ಯರಿಗೆ ಪರಿಚಯ ಮಾಡಿಸಿ ಅರಗಿನ ತಯಾರಿಕೆ ಹೆಚ್ಚು ಮಾಡಿರುವ ಹಿರಿಮೆ ಈ ಸಂಸ್ಥೆಗೇ ಸಲ್ಲುತ್ತದೆ. ಈ ಸಂಸ್ಥ ಮಾಡಿರುವ ಮತ್ತೊಂದು ಕೆಲಸವೆಂದರೆ ಔಷಧಿ ಸಸ್ಯಗಳ ಕನ್ನಡದ ಹೆಸರುಗಳನ್ನೆಲ್ಲ ಕಲೆ ಹಾಕಿ ಅವುಗಳ ಲ್ಯಾಟಿನ್ ಹೆಸರನ್ನು ಗುರುತಿಸಿ ನಿರ್ಧರಿಸಿ ಅಯುರ್ವೇದೀಯ ವೈದ್ಯರಿಗೆ ಸಹಾಯ ಮಾಡಿರುವುದು. ಸುಗಂಧದ ಎಣ್ಣೆಗಳ ತಯಾರಿಕೆ, ಕಾಗದದ ತಯಾರಿಕೆ, ಗಂಧದ ಎಣ್ಣೆ ಕೈಗಾರಿಕೆ, ಫ್ಲೈವುಡ್ ಕೈಗಾರಿಕೆ ಮುಂತಾದುವಕ್ಕೆಲ್ಲ ಈ ಸಂಸ್ಥೆ ಗಮನಾರ್ಹಸೇವೆ ಸಲ್ಲಿಸಿದೆ. ಗಂಧದ ಮರಕ್ಕೆ ಪಿಡುಗಾಗಿರುವ ಸ್ಟೈಕ್ ಕಾಯಿಲೆಯ ವಿಷಯವಾಗಿ ಇಲ್ಲಿ 1938ನೇ ಇಸವಿಯಿಂದಲೂ ಸಂಶೋಧನೆಗಳು ನಡೆಯುತ್ತಿವೆ. ಇವನ್ನು ಕುರಿತು ಈಚೆಗೆ ಎಫ್.ಎ.ಓ. ಸರ್ಕಾರದೊಂದಿಗೆ ಕೆಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಈ ಕಾಯಿಲೆಯ ಬಗ್ಗೆ ಇನ್ನೂ ಸಾಕಷ್ಟು ವಿವರ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. 26-10-1956ರಲ್ಲಿ ಈ ಸಂಸ್ಥಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಯಿತು.

ಪ್ರಾಚೀನ ಭಾರತದಲ್ಲಿ ಅರಣ್ಯಶಾಸ್ತ್ರ: ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಅರಣ್ಯ,ವೃಕ್ಷ, ಮತ್ತು ಮೂಲಿಕೆಗಳ ಉಲ್ಲೇಖಗಳು ಅನೇಕ ಕಡೆ ಇವೆ.ವೇದಗಳಲ್ಲಿ ಅರಣ್ಯವೃಕ್ಷಗಳ ಬಗ್ಗೆ ಪ್ರಸ್ತಾಪವಿದೆ. ಪಾಣಿನಿಯ (ಪ್ರ.ಶ.ಪೂ. 5ನೆಯ ಶತಮಾನ)ಸೂತ್ರಗಳಲ್ಲಂತೂ ವಿವಿಧ ಅರಣ್ಯ ವೃಕ್ಷಗಳು, ಅರಣ್ಯಗಳ ವರ್ಗೀಕರಣ, ಪ್ರಾಮುಖ್ಯ ಇವುಗಳ ಬಗ್ಗೆ ಮಾಹಿತಿ ಇದೆ. ಪಾಣಿನಿ, ಪ್ರಾಕೃತಿಕ ಅರಣ್ಯಗಳಾದ ಪುರಾಗವನ, ಮಿಸ್ರಕವನ ಮತ್ತು ಉದ್ಯಾನಗಳಾದ ಅಮರವನ, ಖದಿರವನ, ಇಕ್ಷುವನ ಇವುಗಳ ಬಗ್ಗೆ ವಿವರ ನೀಡಿದ್ದಾನೆ. ಅರಣ್ಯಶಾಸ್ತ್ರದ ಬಗ್ಗೆ ಪಣಿನಿಗಿಂತ ಹಿಂದೆಯೂ ಭಾರತೀಯರಿಗೆ ಸ್ಪಷ್ಟ ಜ್ಞಾನವಿತ್ತು ಎಂದು ಅನೇಕ ವಿದ್ವಾಂಸರು ವಾದಿಸುತ್ತಾರೆ (ಮುಜುಂದಾರ್, 1946). ನಮ್ಮ ಮಾಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಂತೂ ವೃಕ್ಷಗಳ ಮತ್ತು ಅರಣ್ಯಗಳ ವರ್ಣನೆ ಹೇರಳವಾಗಿ ಬರುತ್ತದೆ. ಈ ವರ್ಣನೆಗಳಲ್ಲಿ ಪ್ರಾಚೀನ ಬೌದ್ಧ ಮತ್ತು ಜೈನಸಾಹಿತ್ಯಗಳೇನೂ ಕಡಿಮೆ ಇಲ್ಲ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಅಂದಿನ ಅರಣ್ಯಶಾಸ್ತ್ರದ ಬಗ್ಗೆ ಕೆಲವು ರೂಪರೇಖೆಗಳನ್ನು, ವಿವರಗಳನ್ನು ಕೊಟ್ಟಿದ್ದಾನೆ, ಆಗಿನ ಕಾಲದಲ್ಲಿ ಅರಣ್ಯಗಳಿಗೆ ಎಷ್ಟು ಪ್ರಾಮುಖ್ಯ ಕೊಡಲಾಗುತ್ತಿತ್ತು, ಅರಣ್ಯಗಳನ್ನು ಮತ್ತು ಅರಣ್ಯೋತ್ಪನ್ನಗಳನ್ನು ಹಾಳು ಮಾಡುವವರಿಗೆ ಯಾವ ಶಿಕ್ಷೆ ಕೊಡಲಾಗುತ್ತಿತ್ತು ಎಂಬ ಬಗ್ಗೆ ಆತ ವಿವರಿಸಿದ್ದಾನೆ. ಆತನೇ ಹೇಳಿಕೊಂಡಿರಿವಂತೆ ಅಂದು ಅರಣ್ಯಗಳ ರಕ್ಷಣೆಗೆಂದೇ ಒಬ್ಬ ರಕ್ಷಣಾಧಿಕಾರಿ ಇರುತ್ತಿದ್ದ. ಅವನನ್ನು ಕುಪ್ಯಾದ್ಯಕ್ಷ ಎಂದು ಕರೆಯಲಾಗಿತ್ತತ್ತು. ಈತ ಅಂದಿನ ಅರಣ್ಯ ಇಲಾಖೆಯ ಮುಖ್ಯಸ್ಥನಾಗಿದ್ದ. ಇವನ ಕೆಲಸಅರಣ್ಯಗಳಿಂದ ಬರಿವ ಆದಾಯ ಮತ್ತು ಅರಣ್ಯಗಳ ರಕ್ಷಣೆಗೆ ಗಮನಕೊಡುವುದೂ ಸಾರ್ವಜನಿಕರಿಗೆ ಅರಣ್ಯಗಳ ಬಗ್ಗೆ ತಿಳಿವಳಿಕೆ ನೀಡುವುದೂ ಆಗಿತ್ತು. ಕುಪ್ಯಾದ್ಯಕ್ಷನಿಗೆ ಸಹಾಯಕವಾಗಿರಲು ಅನೇಕ ಕೆಳದರ್ಜೆಯ ಅರಣ್ಯ ಸಂರಕ್ಷಕರಿದ್ದರು. ಹಡಗುಗಳು, ಮನೆಗಳು, ರಥಗಳು, ವ್ಯವಸಾಯದ ಉಪಕರಣಗಳು ಮುಂತಾದುವಕ್ಕೆಲ್ಲ ಯಾವ ಯಾವ ಮರಗಳು ಒಳ್ಳಯ ಬಾಳಿಕೆ ಬರುವಂಥವುಗಳು ಎಂಬುದರ ಬಗ್ಗೆ ಕೌಟಿಲ್ಯನ ಕಾಲದಲ್ಲೇ ಜನರಿಗೆ ಸ್ಪಷ್ಟ ಪರಿಜ್ಞಾನವಿತ್ತು.

ಶುಕ್ರನೀತಿಸಾರದಲ್ಲೂ ಅರಣ್ಯಶಾಸ್ತ್ರದ ಪ್ರಸ್ತಾಪ ಬರುತ್ತದೆ. ಅರಣ್ಯಗಳ ಮೇಲ್ವಿಚಾರಣೆಗೆ ವನಸ್ಪತಿಶಾಸ್ತ್ರ ಕೋವಿದಾನ ಒಬ್ಬ ಮುಖ್ಯಾಧಿಕಾರಿ ಇರುತ್ತಿದ್ದ. ಆತ ಅರಣ್ಯಗಳ ಮೇಲ್ವಿಚಾರಣೆ ನೋಡಿಕೊಳ್ಳತ್ತಿದ್ದ. ಆತನ ಕಾಲದಲ್ಲಿ ಪ್ರತಿ ಆರು ಯೋಜನ ಸುತ್ತಳತೆಯುಳ್ಳ ಎಲ್ಲ ಅರಣ್ಯಗಳೂ ಒಂದೊಂದು ರಾಜಮಾರ್ಗವನ್ನು ಹೊಂದಿರಬೇಕು ಎಂಬ ನಿಯಮವಿತ್ತು. ಸುಮಂತ್ರ (ಅರ್ಥಸಚಿವ) ರಾಜನಿಗೆ ರಾಜ್ಯದ ಅರಣ್ಯಗಳ ಬಗ್ಗೆ, ರಾಜಮಾರ್ಗಗಳು, ವ್ಯವಸಾಯ ಯೋಗ್ಯ ಭೂಮಿ ಇವುಗಳ ವಿಷಯವಾಗಿ ವಿವರಗಳನ್ನು ಒದಗಿಸಬೇಕಾಗಿತ್ತು. ಉಪಯುಕ್ತ ಮರಗಳನ್ನೇ ಅರಣ್ಯಗಳಲ್ಲಿ ಹೆಚ್ಚಾಗಿ ರಕ್ಷಿಸಲು, ಬೆಳೆಸಲು ಪ್ರೋತ್ಸಾಹಿಸಲಾಗುತ್ತಿತ್ತು. ಶುಕ್ರಾಚಾರ್ಯರು ಈ ಕೆಲಸಕ್ಕೆ ಸಸ್ಯಜ್ಞಾನದಲ್ಲಿ ಚೆನ್ನಾಗಿ ಪರಿಜ್ಞಾನ, ಪರೊಶ್ರಮಗಳಿರುವ ವ್ಯಕ್ತಿಗಳು ಬೇಕು ಎಂಬ ಬಗ್ಗೆ ಅಂದೇ ಹೇಳಿರುವುದು ಮೆಚ್ಚಬೇಕಾದ ವಿಷಯ. (ಎಸ್.ಎನ್.ಆರ್.)

ಅರಣ್ಯ ನೀತಿ ಮತ್ತು ಸಹಾಭಾಗಿತ್ವ ಅರಣ್ಯಾಭಿವೃದ್ಧಿ: ಕರ್ನಾಟಕವೂ ಸೇರಿದಂತೆ ಭಾರತದಲ್ಲಿನ ಅರಣ್ಯ ನಿರ್ವಹಣೆಗೆ ಒಂದೂವರೆ ಶತಮಾನಕ್ಕೂ ಹೆಚ್ಚಿನ ಕಾಲಾವಧಿಯ ಇತಿಹಾಸವಿದೆ. ಬ್ರಿಟಿಷ್ ಸರಕಾರ 'ವೈಜ್ಞಾನಿಕ ಮತ್ತು ವ್ಯವಸ್ಥತ' ಎಂದು ಕರೆದ ಅರಣ್ಯ ನಿರ್ವಹಣೆ ಪ್ರಾರಂಭವಾದುದು 1850ರ ನಂತರ. ಪ್ರಾರಂಭದಿಂದಲೂ,ಭೂಮಿಯ ವೈಜ್ಞಾನಿಕ ಹಾಗೂ ಲಾಭದಾಯಕ ಬಳಕೆಗೆ ಅರಣ್ಯಗಳ ಬಹುದೊಡ್ಡ ಅಡಚಣೆಯೆಂಬ ನಿಲುವು ತಳೆದಿದ್ದೆ ಬ್ರಿಟಿಷ್ ಸರಕಾರ ಅರಣ್ಯಗಳನ್ನು ನೆಲಸಮ ಮಾಡಿ ಆಜಾಗವನ್ನು ಕೃಷಿಗಾಗಿ ಬಳಸುವ ನೀತಿಯನ್ನು ಆಚರಣೆಗೆ ತಂದಿತು. 1894ರಲ್ಲಿ ಪೋಷಿತವಾದ ಮೊಟ್ಟಮೊದಲ ಅರಣ್ಯನೀತಿ 'ಮಾಸಲು ಅರಣ್ಯ'ಗಳ (ರಿಸವ್ಡ್ ಫಾರೆಸ್ಟ್) ಅಸ್ತಿತ್ವಕ್ಕೆ ದಾರಿಮಾಡಿಕೊಟ್ಟು,ಸ‍್ಥಳೀಯ ಸಮುದಾಯದ ಹಕ್ಕುಗಳನ್ನು ನಿಯಂತ್ರಿಸಿ, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ, ಬಳಸುವವರ ಅನುಭೋಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿತು. ಸಾಮಾನ್ಯವಾಗಿ ಸಮುದಾಯದ ನಿರ್ವಹಣೆಗೆ ಒಳಪಟ್ಟಿರುತ್ತಿದ್ದ ಅರಣ್ಯಗಳನ್ನು ಬ್ರಿಟಿಷ್ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದ್ದರಿಂದ ಅಂಥ ಪ್ರದೇಶಗಳಿಂದ ದೊರೆಯುತ್ತಿದ್ದ ಉತ್ಪನ್ನಗಳಿಂದ ಸ್ಥಳೀಯರು ವಂಚಿತರಾರು. ಅರಣ್ಯ ಇಲಾಖೆಯೇ ನಿರ್ವಹಿಸುತ್ತಿದ್ದ ಉತ್ಪನ್ನಗಳಿಂದ ಸ್ಥಳೀಯರು ವಂಚಿತರಾದರು. ಅರಣ್ಯಗಳನ್ನು ಬ್ರಿಟಿಷ್ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದಿದ್ದರಿಂದ ಅಂಥ ಪ್ರದೇಶಗಳಿಂದ ದೊರೆಯುತ್ತಿದ್ದ ಉತ್ಪನ್ನಗಳಿಂದ ಸ್ಥಳಿಯರು ವಂಚಿತರಾದರು. ಅರಣ್ಯ ಇಲಾಖೆಯೇ ನಿರ್ವಹಿಸುತ್ತಿದ್ದ 'ಸಂರಕ್ಷಿತ ಅರಣ್ಯ'ದಿಂದ (ಪ್ರೊಟೆಕ್ಟಡ್ ಫಾರೆಸ್ಟ್) ಹಣ್ಣು,ಹಂಪಲು, ಎಲೆ-ಹುಲ್ಲುಗಳನ್ನು ಸಂಗ್ರಹಿಸುವ ಹಕ್ಕನ್ನು ಸ್ಥಳೀಯರಿಗೆ ನೀಡಲಾಗಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೂ ಇದೇ ನೀತಿ ಮುಂದುವರೆದು 1952ರಲ್ಲಿ ನೂತನ ಅರಣ್ಯನೀತಿ ಜಾರಿಗೆ ಬಂದಿತು.

1952ರ ಅರಣ್ಯ ನೀತಿ,ಜೀವಿ ಪರಿಸ್ಥಿತಿ ಸಮತೋಲನ ಹಾಗೂ ಉತ್ತಮ ಭೂಬಳಕೆಯ ದೃಷ್ಟಿಯಿಂದ ದೇಶದ ಒಟ್ಟು ಭೂಭಾಗದ ಸರಾಸರಿ 33ರಷ್ಟು ಭಾಗ ಅರಣ್ಯಗಳಿಂದ ಆಚ್ಛಾದಿತವಾಗಿರಬೇಕೆಂದು ಸೂಚಿಸಿತು. ರಕ್ಷಣೆ, ಸಂವಹನ ಹಾಗೂ ದೇಶದ ಜೀವಾಳವೆನಿಸುವ ಕೆಲವು ಕೈಗಾರಿಕೆಗಳನ್ನು 'ರಾಷ್ಟ್ರೀಯ ಹಿತ'ವೆಂದು ಪರಿಗಣೆಸಿ, ಅವುಗಳಿಗೆ ತೊಂದರೆಯಾಗುವಂತಹ ಯಾವುದೇ ಬಳಕೆಯನ್ನು ಅರಣ್ಯಗಳಿಗೆ ಸಮೀಪವಾಗಿ ಬದುಕುವ ಸಮುದಾಯಗಳು ಮಾಡಕೂಡದೆಂದು ಈ ಅರಣ್ಯನೀತಿ ವಿಧಿಸಿದೆ. ರಾಷ್ಟ್ರೀಯ ಉದ್ದೇಶಗಳಿಗೆ ಅಗತ್ಯವಾದ ಬೆಲೆಬಾಳುವ ಮರುಮುಟ್ಟುಗಳನ್ನು ಉತ್ಪಾದಿಸುವುದೇ ಅರಣ್ಯಗಳ ಪರಮಗುರಿಯಾಯಿತು. 1952ರ ಈ ಅರಣ್ಯನೀತಿಗೆ ಅನುಗುಣವಾಗಿ, ಮೊದಲನೆಯ ಪಂಚ ವಾರ್ಷಿಕ ಯೋಜನೆಯಿಂದಲೇ ಕಡಿಮೆ ಮೌಲ್ಯದ ಮಿಶ್ರ ಅರಣ್ಯಗಳನ್ನು ಕಡಿದು ಹಾಕಿ, ಅದೇ ಜಾಗದಲ್ಲಿ ಹೆಚ್ಚಿನ ಆರ್ಥಿಕ ಮೌಲ್ಯದ ಮಿಶ್ರ ಪ್ರಭೇದಗಳಾದ ನೀಲಗಿರಿ, ತೇಗ ಮುಂತಾದವುಗಳ ನೆಡುತೋಪಗಳನ್ನು ಬೆಳೆಸಲು ಪ್ರಯತ್ನ ಪ್ರಾರಂಭವಾಯಿತು. ಅರಣ್ಯ ವಿಜ್ಞಾನವನ್ನು ಕೈಗಾರಿಕೆಗಳಿಗೆ ಬೇಕಾದ ಮರುಮುಟ್ಟುಗಳನ್ನು ಉತ್ಪಾದಿಸುವುದರೊಂದಿಗೆ ಸಮೀಕರಿಸಲಾಯಿತು. 1976ರವರೆಗೂ ಈ ನೀತಿಯನ್ನೇ ಅನುಸರಿಸಿದ್ದರಿಂದ ನೈಸರ್ಗಿಕ ಅರಣ್ಯಗಳು ದೊಡ್ಡ ಪ್ರಮಾಣದಲ್ಲಿ ಹೇಳ ಹೆಸರಿಲ್ಲದಂತೆ ನಿರ್ನಾಮವಾದವು. ಅವುಗಳ ಜಾಗದಲ್ಲಿ ನೆಡುತೋಪುಗಳು ತಲೆಯೆತ್ತಿದವು. ಅರಣ್ಯ ಸಂಪನ್ಮೂಲ ತ್ವರಿತ ಗತಿಯಲ್ಲಿ ಕ್ಷೀಣೆಸಿತು. ಅರಣ್ಯಾಧಾರಿತ ಸ್ಥಳೀಯ ಜನ ತಮ್ಮ ನೆಲ ಮತ್ತು ಜೀವನೋಪಾಯವನ್ನು ಕಳೆದುಕೊಂದರು.

1976ರಲ್ಲಿ ರಾಷ್ಟ್ರೀಯ ಕೃಷಿ ಆಯೋಗ ನಾವು ಅನುಸರಿಸಿಕೊಂಡು ಬಂದಿದ್ದು ಅರಣ್ಯನೀತಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿತು. 70ರ ದಶಕದ ಮಧ್ಯಭಾಗದ ವೇಳೆಗೆ ಅರಣ್ಯಸಮೀಪದ ಜನಸಮುದಾಯಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ