ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-1-Part-1.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಟಾರ್ಕ್‍ಟಿಕ ಆವರಿಸಿರುವ ಜಲರಾಶಿಯನ್ನು ದಕ್ಷಿಣ ಸಾಗರವೆಂದೇ ಗುರುತಿಸಲಾಗಿದೆ. ಇದು ಪ್ರತ್ಯೇಕ ಜಲರಾಶಿಯಲ್ಲ. ಹಿಂದೂ ಮಹಾಸಾಗರ, ಪೆಸಿಫಕ್ ಸಾಗರ ಹಾಗೂ ಅಂಟ್ಲಾಂಟಿಕ್ ಸಾಗರ ಒಂದುಗೂಡಿರುವ ಭಾಗ. ಸಾಗರದಲ್ಲಿ ಪಶ್ಚಿಮಾಭಿಮುಖವಾಗಿ ಬೀಸುವ ಗಾಳಿ, ಪ್ರದಕ್ಷಿಣಾ ಪಥವನ್ನೂ, ಖಂಡದ ಮೇಲೆ ಪುರ್ವಾಭಿಮುಖವಾಗಿ ಬೀಸುವ ಗಾಳಿ ಅಪ್ರದಕ್ಷಿಣಾ ಪಥವನ್ನೂ ಅನುಸರಿಸುವುದಿಂದ ಇವುಗಳ ಸಂಗಮ ಭಾಗ ದಕ್ಷಿಣ ಸಾಗರದಲ್ಲಿ ಪ್ರಕ್ಷುಬ್ಧ ಅಲೆಗಳನ್ನು ಎಬ್ಬಿಸುತ್ತದೆ.

    ಅಂಟಾರ್ಕ್‍ಟಿಕ ಖಂಡವನ್ನು ‍‍‍ಐದನೆಯ ವಿಶಾಲ ಖಂಡವೆಂದು ಕರೆಯಲಾಗಿದೆ.ಈ ಖಂಡದ ಒಟ್ಟು ವಿಸ್ತೀರ್ಣ ಭಾರತ ಮತ್ತು ಚೀನ ಎರಡೂ ದೇಶಗಳನ್ನು ಸೇರಿಸಿದರೆ ದೊರೆಯವ ವಿಸ್ತೀರ್ಣಕ್ಕಿಂತ ದೊಡ್ಡದು-14,245,000 ಚ.ಕಿಮೀ; ಅಮೆರಿಕ ಸಂಯುಕ್ತ ಸಂಸ್ಥಾನದ ವಿಸ್ತೀರ್ಣದ ಒಂದುವರೆಯಷ್ಟು. ಇದು ಭೂಗೋಳದ ಅತ್ಯಂತ ಎತ್ತರದ ಖಂಡ. ಸಾಗರ ಮಟ್ಟದಿಂದ ಸರಾಸರಿ ಎತ್ತರ 2,300 ಮೀ. ಪ್ರಸ್ಥಭೂಮಿ, ಪರ್ವತಸಾಲು,ಕಣಿವೆ ಕಂದರ, ಹಿಮನದಿಗಳಿದ್ದರೂ ಖಂಡದ ಶೇ.95 ಭಾಗ ಹಿಮಾವೃತ ಶೀತಲ ಖಂಡ, ಹಿಮದ ಮರುಭೂಮಿ ಶ್ವೇತಖಂಡ, ರೆಫ಼್ರಿಜಿರೇಟರ್ ಖಂಡ ಎಂಬ ವಿಶೇಷಣಗಳು ಈ ಖಂಡಕ್ಕುಂಟು. ಅತ್ಯಂತ ಸಮೀಪದ ನೆಲ ಭಾಗವೆಂದರೆ ಲ್ಯಾಟಿನ್ ಅಮೆರಿಕದ ದಕ್ಷಿಣದ ಕೊನೆಯ ತುದಿಯ ಕೇಪ್‍ಹಾರನ್. ಇದು 990 ಕಿಮೀ ದೂರದಲ್ಲಿದೆ. ವಿನ್ಸನ್ ಮ್ಯಾಸಿಫ಼್ ಎಂಬ ಭಾಗವೇ ಖಂಡದ ಅತಿ ಎತ್ತರದ ಭಾಗ 5140 ಮೀ). ಇದು ಪೆಸಿಫ಼ಿಕ್ ಸಾಗರದ ಕಡೆಗಿರುವ ಪಶ್ಚಿಮ ಅಂಟಾರ್ಕ್‍ಟಿಕದಲ್ಲಿ ನೆಲೆಯಾಗಿದೆ. ಅಂಟಾರ್ಕ್‍ಟಿಕ್ ಖಂಡವನ್ನು ಟ್ರಾನ್ಸ್ ಅಂಟಾರ್ಕ್‍ಟಿಕ ಪರ್ವತ ಸಾಲು ಎರಡು ಪ್ರಮುಖ ಭೌಗೋಳಿಕ ಭಾಗಗಳಾಗಿ ವಿಭಜಿಸುತ್ತದೆ. ಈ ಪರ್ವತ ಸಾಲಿನಲ್ಲಿ ಜಲಜಶಿಲೆಗಳು ಹೆಚ್ಚು ಮೈದಳೆದಿವೆ. ಸರೀಸೃಪಗಳ ಪಳೆಯಳಿಕೆಗಳು ಮತ್ತು ಸಸ್ಯ ಪಳೆಯುಳಿಕೆಗಳು ಇಲ್ಲಿ ಕಂಡುಬಂದಿವೆ. ಇದರ ಒಟ್ಟು ಉದ್ದ 3,000 ಕಿಮೀ. ಖಂಡದ ಎರಡು ಭಾಗಗಳ ಪೈಕಿ ಪೂರ್ವ ಭಾಗ ವಿಸ್ತೀರ್ಣದಲ್ಲಿ ದೊಡ್ಡದು. ಪಶ್ಚಿಮ ಭಾಗಕ್ಕೆ ಹೋಲಿಸಿದಂತೆ ಇಲ್ಲಿಯ ಶಿಲೆಗಳು ಹಿರಿ ಪ್ರಾಯದವು. ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಕಂಡುಬರುವ ನೈಸ್-ಗ್ರಾನೈ ಶಿಲೆಗಳೇ ಇಲ್ಲೂ ದೊಡ್ಡ ಪ್ರಮಾಣದಲ್ಲಿ ಮೈದಳೆದಿವೆ. ಇವು 570 ದಶಲಕ್ಷ ವರ್ಷಗಳಿಗೂ ಹಿಂದಿನವು. ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವಿನ ಪ್ರಸ್ಥಭೂಮಿಯ ಎತ್ತರ 4,000 ಮೀ. ಭೌಗೋಳಿಕ ಧ್ರುವ ಮತ್ತು ಕಾಂತಧ್ರುವ ಎರಡು ಪ್ರಸ್ಥಭೂಮಿಯಲ್ಲೇ ಇವೆ. ಪಶ್ಚಿಮ ಅಂಟಾರ್ಕ್‍ಟಿಕ ಭಾಗ ಬಹುತೇಕ ಸಾಗರಮಟ್ಟದಿಂದ ಕೆಳಗೇ ಇದೆ. ಹಲವು ದ್ವೀಪಗಳ ಸಮೂಹವಿದು. ಮೌಂಟ್ ಎರಬಸ ಇಲ್ಲಿನ ಜೀವಂತ ಜ್ವಾಲಾಮುಖಿ.

ಅಂಟಾರ್ಕ್‍ಟಿಕ ಖಂಡಕ್ಕೆ ಹಿಮದ ಖಂಡ ಎಂಬ ಹೆಸರೂ ಇದೆ. ಸು. 40 ದಶಲಕ್ಷ ವರ್ಷಗಳ ಹಿಂದೆ ಅನಂತರ ಹಿಮಯುಗದಲ್ಲಿ (20 ಲಕ್ಷ ವರ್ಷಗಳ ಹಿಂದೆ) ಹಿಮದ ಸ್ತರಗಳು ನಿರಂತರವಾಗಿ ಖಂಡದ ಮೇಲೆ ಬೆಳೆಯುತ್ತ ಹೋದವು. ಹಿಮಯುಗದ ಕೊನೆಯ ಹಂತ ತಲಪಿದಾಗಲೂ (10,000 ವರ್ಷಗಳ ಹಿಂದೆ) ಹಿಮ ಕರಗಲಿಲ್ಲ. ಇಂತ ಶಾಶ್ವತ ಹಿಮರಾಶಿಯನ್ನು ಹಿಮದ ಟೋಪಿ ಎನ್ನಲಾಗಿದೆ. ಅಂಟಾರ್ಕ್‍ಟಿಕ ಖಂಡದಲ್ಲಿ 30 ದಶಲಕ್ಷ ಘನ ಕಿಮೀ ಹಿಮ ಸಂಚಯಿಸಿದೆ. ಇದೆಲ್ಲ ಕರಗಿದರೆ ಜಾಗತಿಕ ಸಾಗರದ ಮಟ್ಟ 50 ರಿಂದ 65-ಮೀ ಎರುತ್ತದೆಂದು ಅಂದಾಜು. ಹಿಮದ ಭಾರಕ್ಕೆ ಧ್ರುವಪ್ರದೇಶ 540 ಮೀ ಆಳಕ್ಕೆ ಕುಸಿದಿದೆ. ಜಗತ್ತಿನ ಶೇ.90 ಭಾಗ ಸಿಹಿನೀರು ಹಿಮದ ಗಡ್ಡೆಯ ರೂಪದಲ್ಲಿ ಈ ಖಂಡದ ಮೇಲೆ ಕೂತಿದೆ. ಪುರ್ವ ಅಂಟಾರ್ಕ್‍ಟಿಕದಲ್ಲಿ ಒಂದೆಡೆ ಹಿಮದ ಗರಿಷ್ಠ ಮಂದ 4.8 ಕಿಮೀ. ಹಿಮದ ಹಾಳೆ ಖಂಡದಿಂದ ಮೆಲ್ಲನೆ ಸಾಗರದತ್ತ ಸರಿಯುತ್ತದೆ. ಅದರಲ್ಲೂ ಪೂರ್ವ ಅಂಟಾರ್ಕ್‍ಟಿಕದ 4000 ಮೀ ಎತ್ತರದಿಂದ ಕಡಿದಾದ ಭಾಗದಲ್ಲಿ ಇಳಿಯುವ ಹಿಮದ ಹಾಳೆಗಳು ದೊಡ್ಡ ದೊಡ್ಡ ಹಿಮನದಿಗಳಿಗೆ ಎಡೆಮಾಡಿಕೊಟ್ಟಿವೆ. ಟ್ರಾನ್ಸ್ ಅಂಟಾರ್ಕ್‍ಟಿಕ ಪರ್ವತ ಸಾಲು. ರಾಸ್ ಸಮುದ್ರ ಮತ್ತು ವೆಡೆಲ್ ಸಮುದ್ರದತ್ತ ಹಿಮನದಿಗಳು ಹಾಯುವುದನ್ನು ಅಡ್ಡಗಟ್ಟೆಯಂತೆ ತಡೆದು ನಿಲ್ಲಿಸಿದೆ. ಲ್ಯಾಂಬರ್ಟ್ ಎಂಬುದು ಇಲ್ಲಿನ ಪ್ರಮುಖವಾದ ಹಿಮನದಿ. ಸರಿಯುವ ಹಿಮದ ಹಗಡ್ಡೆಗಳು ಹಿಮದ ಖಂಡಾಂತರ ಪ್ರದೇಶಕ್ಕೂ ತೇಲುವ ಬರ್ಫ಼ದ ಹೆಬ್ಬಂಡೆಗಳಿಗೂ ಕಾರಣವಾಗಿವೆ. ರಾಸ್ ಸಮುದ್ರಕ್ಕೆ ಚಾಚಿಕೊಂಡಿರುವಂತೆ ಇರುವ ಹಿಮದ ಚಾಚು ಸುಮಾರು ಫ಼್ರಾನ್ಸ್ ದೇಶದಷ್ಟು ದೊಡ್ಡದು. ಈ ಭಾಗದಿಂದ 1983ರಲ್ಲಿ ಕಳಚಿ ಸಮುದ್ರದ ಪಾಲಾದ ಹಿಮದ ಹೆಬ್ಬಂಡೆ 1760 ಕಿಮೀ ಉದ್ದವಿತ್ತು. 1976ರಲ್ಲಿ ಲಾಸನ್ ಹಿಮಚಾಚಿನಿಂದ ಕಿತ್ತುವಬಂದ ಹಿಮಬಂಡೆ 3,600 ಚ.ಕಿಮೀ ವಿಸ್ತೀರ್ಣವಿತ್ತು. ಅಂಟಾರ್ಕ್‍ಟಿಕ ಖಂಡದ ನಿಜವಾದ ವಿಸ್ತೀರ್ಣ ಅಳೆಯುವುದೇ ದುಸ್ತರವೆನ್ನುವಷ್ಟು ಹಿಮದ ರಾಶಿ ಬೆಳೆಯುತ್ತದೆ. ಪ್ರತಿವರ್ಷ ಮಾರ್ಚ್ ತಿಂಗಳ ಹೊತ್ತಿಗೆ ಸುಮಾರು 2.6 ದಶಲಕ್ಷ ಚ.ಕಿಮೀ.ಗಳಷ್ಟು ಬೆಳೆಯುವ ಹಿಮರಾಶಿ ಸೆಪ್ಟೆಂಬರ್ ಹೊತ್ತಿಗೆ 18.8 ದಶಲಕ್ಷ ಚ.ಕಿಮೀಗಳಷ್ಟು ಹಿಗ್ಗುತ್ತದೆ. ಈ ಖಂಡದ ಮೇಲೆ ಬೇರೆ ಬೇರೆ ದಿಕ್ಕಿನಿಂದ ಬೀಸುವ ಬಿರುಗಾಳಿ ಹಾಗೂ ಸಾಗರದ ಪ್ರವಾಹ ತೇಲುವ ಹಿಮದ ಬಂಡೆಗಳು ಸಾಗುವ ದಿಕ್ಕನ್ನು ನಿಯಂತ್ರಿಸುತ್ತವೆ.

ವಾಯುಗುಣ: ಖಂಡವು ವಾಯುಗುಣದ ವೈಪರೀತ್ಯಕ್ಕೆ ಹೆಸರುವಾಸಿಯಾಗಿದೆ. ದಕ್ಷಿಣ ಧ್ರುವದ ಬಳಿ 78-28 ದ.ಅ) ರಷ್ಯ ಸ್ಥಾಪಿಸಿರುವ ವೋಸ್ಟಾಕ್ (3,505 ಮೀ ಎತ್ತರ) ಎಂಬ ಕೇಂದ್ರದ ಬಳಿ 1983ರಲ್ಲಿ -89 ಡಿಗ್ರಿ ಸೆ. ಉಷ್ಣತೆಯನ್ನು ದಾಖಲಾಗಿಸಿದೆ. ಭೂಮಿಯ ಯಾವುದೇ ಭಾಗದಲ್ಲೂ ಉಷ್ಣತೆ ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ಇದುವರೆಗೂ ದಾಖಲಾಗಿಲ್ಲ. ಬೇಸಿಗೆಯಲ್ಲೂ -20 ಡಿಗ್ರಿ ಸೆ. ಉಷ್ಣತೆಯನ್ನು ಅನೇಕ ಭಾಗಗಳು ಅನುಭವಿಸುತ್ತವೆ. ಸಾಗರ ಭಾಗದಲ್ಲಿ ಅತ್ಯಂತ ಕಡಿಮೆ ಉಷ್ಣತೆ -60 ಸೆ. ದಾಖಲಾಗಿದೆ. ಚಳಿಗಾಲದಲ್ಲಿ ಸಾಗರತೀರದಲ್ಲಿ -20 ರಿಂದ -30 ಡಿಗ್ರಿ ಸೆ. ಉಷ್ಣತೆ ಇರುತ್ತದೆ. ಒಳನಾಡಿನಲ್ಲಿ ಇದೇ ಕಾಲದಲ್ಲಿ -40 ರಿಂದ -70 ಡಿಗ್ರಿ ಸೆ. ಉಷ್ಣತೆ ದಾಖಲಾಗಿದೆ. ಬೇಸಿಗೆಯಲ್ಲಿ ತೀರ ಪ್ರದೇಶದಲ್ಲಿ ಉಷ್ಣತೆ 0 ಡಿಗ್ರಿ ಸೆ.ಗೆ ಇಳಿದರೆ, ಒಳನಾಡಿನಲ್ಲಿ -20 ರಿಂದ -35 ಡಿಗ್ರಿ ಸೆ.ಗೆ ಇಳಿಯುವುದುಂಟು. ಗಂಟೆಗೆ 100 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತದೆ. ವಾಯುಮಂಡಲದಲ್ಲಿ ಆದ್ರತೆ ಕಡಿಮೆ. ಪ್ರಸ್ಥಭೂಮಿಯಲ್ಲಿ ಗರಿಷ್ಟವೆಂದರೆ ವಾರ್ಷಿಕ 50 ಮಿ.ಮೀ ಮಳೆ ಬೀಳುತ್ತದೆ. ಅಂಟಾರ್ಕ್‍ಟಿಕ ಹಿಮದ ಮರುಭೂಮಿ. ಹಿಮವೃಷ್ಟಿ ಸರ್ವೇ ಸಾಮಾನ್ಯ. ಸಮುದ್ರದ ಅಂಚಿನಿಂದ ಧ್ರುವದತ್ತ ಹೋದರೆ ಒತ್ತಡ ಹೆಚ್ಚುತ್ತದೆ, ಆದರೆ ಉಷ್ಣತೆ ಕಡಿಮೆಯಾಗುತ್ತದೆ.

ಸಸ್ಯ ಮತ್ತು ಪ್ರಾಣಿಗಳು: ಖಂಡದಲ್ಲಿ ಸಂಪೂರ್ಣವಾಗಿ ಪ್ರತಿಕುಲ ಹವಾಮಾನವಿದೆ. ಜೂನ್ 22ರಂದು ಭೂಮಿಯ ಉತ್ತರ ಮೇರು ಅತ್ಯಧಿಕವಾಗಿ ಸೂರ್ಯನೆಡೆಗೆ ವಾಲುವುದರಿಂದ ಆಗ ಅಂಟಾರ್ಕ್‍ಟಿಕದಲ್ಲಿ ದಿನದ 24 ಗಂಟೆಯೂ ಕತ್ತಲು. ಡಿಸೆಂಬರ್ 22ರಂದು ದಕ್ಷಿಣದ ಮೇರು ಅತ್ಯಧಿಕವಾಗಿ ಸೂರ್ಯನೆಡೆಗೆ ವಾಲುವುದರಿಂದ ದಿನದ 24 ಗಂಟೆಯೂ ಬೆಳೆಕು, ವರ್ಷದಲ್ಲಿ ಆರು ತಿಂಗಳು ರಾತ್ರಿ, ಆರು ತಿಂಗಳು ಹಗಲು ಇರುವುದರಿಂದ ಈ ಖಂಡ ಜೈವಿಕ ವೈವಿಧ್ಯವನ್ನು ಪೋಷಿಸಿಲ್ಲ. ಅಲ್ಲಿರುವ ಸೀಮಿತ ಜೀವಿಗಳೂ ಈ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಂಡು ಬಾಳುವೆ ಮಾಡುತ್ತವೆ. ಪ್ರಧಾನ ಜೀವಿಗಳೆಂದರೆ ಪೆಂಗ್ವಿನ್. ಇವುಗಳಲ್ಲಿ 15 ಪ್ರಭೇದಗಳಿದ್ದರೂ ಮೂರು ಪ್ರಭೇದಗಳು ಮಾತ್ರ ಈ ಖಂಡಕ್ಕೆ ಸೀಮಿತ. ಉಳಿದವು ದಕ್ಷಿಣ ಅಮೆರಿಕದ ದಕ್ಷಿಣ ತುದಿಯವರೆಗೆ. ಸಮಭಾಜಕ ವೃತ್ತದ ಗ್ಯಾಲಪೊಗೋಸ್ ದ್ವೀಪದವರೆಗೆ ಹಂಚಿಕೆಯಾಗಿದೆ. ಅದಿಲೆ, ಎಂಪರೆರ್ ಮತ್ತು ಚಿನ್ ಸ್ಕ್ರಾಪ್ ಇವು ಪೆಂಗ್ವಿನ್ ಪ್ರಭೇದಗಳು. ಬಹುತೇಕ ಪೆಂಗ್ವಿನ್‍ಗಳು ಕಲ್ಲು ಪೊಟರೆಗಳಲ್ಲಿ ಗೂಡುಮಾಡಿ ಸಂತಾನಾಭಿವೃದ್ಧಿ ಮಾಡುತ್ತವೆ. ಇಂಥ ಗೂಡುಗಳನ್ನು ರೂಕರಿ ಇನ್ನಲಾಗುವುದು. ಅಡಿಲೆ ಪೆಂಗ್ವಿನ್‍ಗಳು 30 ರಿಂದ 68 ಸೆಂ.ಮೀ ಎತ್ತರ, ಮೂರರಿಂದ ಆರು ಕಿ.ಗ್ರಾಂ. ತೂಕ. ವಸಂತ ಕಾಲದಲ್ಲಿ 3-4 ದಿನಗಳ ಅಂತರದಲ್ಲಿ ಎರಡು ಮೊಟ್ಟೆಗಳನ್ನಿಡುತ್ತವೆ. ಎಂಪರರ್ ಪೆಂಗ್ವಿನ್‍ಗಳು ಒಂದು ಮೀಟರ್ ಎತ್ತರದವರೆಗೂ ಬೆಳೆಯುತ್ತವೆ. ತೂಕ 27 ರಿಂದ 41 ಕಿ.ಗ್ರಾಂ. ಇವು ವರ್ಷಕ್ಕೊಂದು ಮೊಟ್ಟೆ ಇಡುತ್ತವೆ.

ಉತ್ತರ ಅಟ್ಲಾಂಟಿಕ್ ದ್ವೀಪವನ್ನು ತೊರೆದು ಸ್ಕುವಾ ಎಂಬ ಹಕ್ಕಿಗಳು ಅಂಟಾರ್ಕ್‍ಟಿಕದವರೆಗೂ ಪ್ರಯಾಣ ಮಾಡುತ್ತವೆ. ಪೆಂಗ್ವಿನ್ ಮೊಟ್ಟೆಗಳನ್ನು ಇವು ಅಪಹರಿಸುತ್ತವೆ, ನೀರುಕೋಳಿ, ಟರ್ನ್ ಇವೂ ಕೂಡ ದೂರದಿಂದ ಈ ಖಂಡಕ್ಕೆ ವಲಸೆ ಬರುತ್ತವೆ. ಖಂಡದ ಸಮೀಪದ ದ್ವೀಪಗಳಲ್ಲಿ ಹಾಗೂ ತೀರ ಪ್ರದೇಶಗಳಲ್ಲಿ ಸೀಲ್ ಸಂತತಿ ಹೆಚ್ಚು.ಅವುಗಳ ತುಪ್ಪಳದಿಂದಾಗಿ ಬೇಟೆಗೆ ಸಿಕ್ಕಿ ವಿನಾಶದಂಚಿಗೆ ತಲುಪಿದ್ದವು. ಈಗ ಅವುಗಳ ಸಂತತಿಯನ್ನು ರಕ್ಷಿಸಲಾಗಿದೆ. ಖಂಡದ ಅಂಚಿನಲ್ಲಿ ಆರು ಬಗೆಯ ಸೀಲ್ ಗಳನ್ನು ಗುರುತಿಸಲಾಗಿದೆ. ವೆಡೆಲ್ ಹಾಗೂ ರಾಸ್ ಸಮುದ್ರಗಳಲ್ಲಿ