ಪುಟ:Mysore-University-Encyclopaedia-Vol-1-Part-1.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಂತರಾಳ - ಅಂತರಿಕ್ಷ ಮತ್ತು ಅಂತರಿಕ್ಷ ದೇವತೆಗಳು

ಪ್ರಾಣಿಗಳ, ಮಕ್ಕಳ, ಭಾಷೆ ಬಾರದವರ ಮತ್ತು ಹುಚ್ಚರ ಮನೋವ್ಯಾಪಾರಗಳನ್ನು ಅಧ್ಯಯನ ಮಾಡುವುದರಲ್ಲಿ ಅಂತರವಲೋಕನ ಸಹಕಾರಿಯಲ್ಲ. ಮನೋವಿಜ್ಞನದ ಅಧ್ಯಯನವಸ್ತು ಜಟಿಲ ಹಾಗೂ ಕ್ರಿಯಾತ್ಮಕವಾಗಿರುವುದರಿಂದ, ಯಾವುದಾದರೂ ಏಕೈಕ ವಿಧಾನದಿಂದ ಅದನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ. ಆದುದರಿಂದ ಇಂದು ಅನೇಕ ವಿಧಾನಗಳನ್ನು ಮನೋವೈಜ್ಞಾನಿಕ ಸಂಶೋಧನೆಗಳಲ್ಲಿ ಬಳಸಲಾಗುತ್ತಿದೆ. ಯಾವ ಸಂಶೋಧಕನಾದರೂ ವ್ಯಕ್ತಿ ವರ್ತನೆಯ ಉತ್ತಮ ಅರಿವನ್ನು ಪಡೆಯಬೇಕಾದರೆ, ಪರಸ್ಪರ ಪೂರಕ ವಿಧಾನಗಳನ್ನು ಉಪಯೋಗಿಸುವುದು ಅತ್ಯಾವಶ್ಯಕ.(ಡಿ.)

 ಅಂತರಾಳ  ಪುಟದ ಸೇರ್ಪಡೆ ಆಗಿದೆ
 ಅಂತರಿಕ್ಷ ಕಾಯಿದೆ:  ಪುಟದ ಸೇರ್ಪಡೆ ಆಗಿದೆ

ಅಂತರಿಕ್ಷ ಮತ್ತು ಅಂತರಿಕ್ಷ ದೇವತೆಗಳು: ಅಂತರಿಕ್ಷವೇ ಒಂದು ದೇವತೆ ಎಂಬ ಭಾವನೆ ಬಹಳ ಪ್ರಾಚೀನಕಾಲದ್ದು. ಪ್ರಾಚ್ಯ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ವಿಕಾಸಗೊಂಡಿರುವ ಧರ್ಮಗಳ ಹಿನ್ನೆಲೆಯಲ್ಲಿ ಅಂತರಿಕ್ಷ ದೇವತೆಯ ಪ್ರಭಾವವನ್ನು ಕಾಣಬಹುದು. ಆದುದರಿಂದ ಅನಾದಿಕಾಲದ ಪ್ರಕೃತಿ ಧರ್ಮದಷ್ಟೇ ಇದೂ ಪ್ರಾಚೀನವಾದುದು. ಈ ಅಂತರಿಕ್ಷದೇವತೆಯ ಸ್ವರೂಪವನ್ನು ಬೇರೆ ಬೇರೆ ದೇಶದ ಬೇರೆ ಬೇರೆ ಜನಾಂಗದವರು ಬೇರೆ ಬೇರೆ ರೂಪದಲ್ಲಿ ಗುರುತಿಸಿದ್ದಾರೆ. ಅಮೆರಿಕದ ಮಾಯ ಜನಾಂಗ, ಇಂಕ ಜನಾಂಗ, ಟ್ರೆಸ್ಸಿಲ್ ಮತ್ತು ಆಂಡಿಸ್ ಪ್ರದೇಶದ ಜನ ಹಾಗೂ ಹಾಗೂ ಎಸ್ಕಿಮೋ ಜನರ ಪ್ರಾಚೀನ ಪುರಾಣಗಳಲ್ಲಿ ಈ ದೇವತೆಯನ್ನು ಹೆಸರಿಸಲಾಗುತ್ತದೆ. ಅಂಡಮಾನಿನ ಪುಲಗ ಹಾಗೂ ಪ್ರಾಚೀನ ಭಾರತದ ವರುಣ ಅಂತರಿಕ್ಷ ದೇವತೆಯ ರೂಪವೆಂದು ತಿಳಿದುಬಂದಿದೆ. ಮಲೇಷ್ಯ ಪಾಲಿನೇಷ್ಯ, ಆಸ್ಟ್ರೇಲಿಯ ಮೊದಲಾದ ದೇಶಗಳಲ್ಲೂ ಈ ದೇವತೆಯ ಲಕ್ಷಣಗಳು ವಿವಿಧ ರೂಪಾಂತರಗಳಲ್ಲಿ ಕಂಡುಬರುತ್ತವೆ; ನೂರಾರು ಬೇರೆ ಬೇರೆ ಹೆಸರುಗಳಿಂದ ಈ ದೇವತೆಯನ್ನು ಕರೆದಿದ್ದಾರಾದರೂ ಈ ದೇವತೆಯ ಸ್ವರೂಪವನ್ನು ನಾವು ಎಲ್ಲ ಕಡೆಯೂ ಖಚಿತವಾಗಿ ಗುರುತಿಸಬಹುದು. ಒಂದೇ ಅಂತರಿಕ್ಷ ದೇವತೆಯ ಬೇರೆ ಬೇರೆ ಸ್ವರೂಪವನ್ನು ಆಫ್ರಿಕದ ಆದಿವಾಸಿಗಳು ವರ್ಣಿಸಿರುತ್ತಾರೆ.

ಅಂತರಿಕ್ಷದೇವತೆ ಆಳದ ಜಾಗವಿಲ್ಲ. ಇದರ ರಾಜ್ಯ ವಿಶ್ವದಷ್ಟು ವಿಸ್ತಾರ. ಆದಿಮಾನವ ಸೃಷ್ಟಿಯ ವಿಷಯವಾಗಿ ಹೆಚ್ಚು ಕಡಿಮೆ ಒಂದೇ ಭಾವನೆಯನ್ನು ಹೊಂದಿದ್ದುದರಿಂದ ಈ ದೇವತೆಯ ವಿಷಯದಲ್ಲಿ ಏಕರೂಪತೆಯನ್ನು ಕಾಣುತ್ತೇವೆ ಇದು ದ್ರವರೂಪವಾಗಿಯೂ ಪಾರದರ್ಶಕವಾಗಿಯೂ ಇವೆಯೆಂದೂ ಇದರ ಕೆಳಗೆ ನಮ್ಮ ಭೂಮಿ ಇರುವುದೆಂದೂ ಅವರು ಭಾವಿಸಿದ್ದರು. ಆಕಾಶದ ಜಲಗಳಿಗೂ ಭೂಮಿಯ ಸಮುದ್ರಗಳಿಗೂ ಇರುವ ಸಂಬಂಧ. ದೊಡ್ಡ ನದಿಗಳು ಆಕಾಶದ ಮೂಲವನ್ನೇ ಹೊಂದಿವೆ ಎಂಬ ಕಥಾನಗಕಗಳು, ಮೇಘಗಳಿಂದ ವರ್ಷಿಸುವ ಜಲರಾಶಿಗಳು-ಮೊದಲಾದುವನ್ನು ಗಮನಿಸಿದರೆ ಆಕಾಶ ದೇವತೆಯ ಹಾಗೂ ಮಳೆ ದೇವತೆಯ ಕೆಲಸ ಸ್ಪಷ್ಟವಾಗುತ್ತದೆ. ಪ್ರಕೃತಿಯ ಮಹತ್ಕಾರ್ಯಗಳನ್ನೆಲ್ಲ ಆಕಾಶ ದೇವತೆಗೆ ಹೇಳಿರುವುದರ ಅರ್ಥ ಸ್ಪಷ್ಟವಾಗುವುದು. ಅಂತರಿಕ್ಷಕ್ಕೂ ಅಂತರಿಕ್ಷ ದೇವತೆಗೂ ನಿಕಟ ಸಂಬಂಧವಿದೆ. ಆಕಾಶದ್ರವ್ಯ, ಮಳೆ ಮೋಡ, ಗುಡುಗು, ಮಿಂಚು, ಬಿರುಗಾಳಿ, ಮೊದಲಾದುವುಗಳಿಗೂ ಆಕಾಶದೇವತೆಗೂ ಸಂಬಂಧವಿರುವುದು ಸ್ಪಷ್ಟವಾಗುವುದು.

ಹಿಂದೂಗಳ, ಗ್ರೀಕರ, ರೋಮನ್ನರ ಮತ್ತು ಟ್ಯೂಟನ್ ಜನರ ಪುರಾತನರು ಆಕಾಶದೇವತೆಗೆ ಕೊಟ್ಟಿರುವ ದ್ಯೌ:,ಜ್ಯೂಸ್, ಜೋವಿಸ್, ಟಿಯು ಎಂಬ ಹೆಸರುಗಳಲ್ಲಿ ಸಾಮ್ಯವಿದೆ. ಒಂದು ಕಾಲದಲ್ಲಿ ಈ ದೇವತೆ ವರುಣನಾಗಿ ತುಂಬ ಉದಾತ್ತನಾಗಿ ಕಾಣಿಸುತ್ತಾನೆ. ಇವನು ಸರ್ವವ್ಯಾಪಿ. ಇವನ ಪ್ರಭುತ್ವಕ್ಕೆ ಎಲ್ಲವೂ ಒಳಪಟ್ಟಿವೆ. ಇವನು ಸರ್ವದೃಕ್, ಇವನ ಕಣ್ಣಿಂದ ಯಾವುದೂ ತಪ್ಪಿಸಿಕೊಳ್ಳುವಂತಿಲ್ಲ. ಈ ಮೂರು ಸ್ಥಾನಗಳಲ್ಲಿಯೂ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಂಡು ಬೇರೆ ಬೇರೆ ವ್ಯಾಪಾರಗಳನ್ನು ಸರ್ವಾತ್ಮಕನಾದ ಒಬ್ಬನೇ ದೇವರು ನಡೆಸುವನೆಂದು ವೇದಗಳಲ್ಲಿ ಹೇಳಿರುವುದು ಅತ್ಯಾಶ್ಚರ್ಯಕರವಾಗಿದೆ. ಪೃಥ್ವೀಸ್ಥಾನದಲ್ಲಿ ಅಗ್ನಿಯ ರೂಪದಲ್ಲಿ ಇದ್ದು, ಅಂತರಿಕ್ಷದಲ್ಲಿ ವಿದ್ಯುದ್ರೂಪದಿಂದಲೂ ದ್ಯುಲೋಕದಲ್ಲಿ ಸೂರ್ಯನಾಗಿಯೂ ಶೋಭಿಸುವನೆಂದು ಹೇಳಿದ್ದಾರೆ. ಈ ಬೇರೆ ಬೇರೆ ಸ್ಥಾನಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಒಬ್ಬನೇ ಆದ ವಿಶ್ವಾತ್ಮನು ಹೇಗೆ ಅಭಿವ್ಯಕ್ತನಾಗಿರುವನೆಂಬುದನ್ನು ವಿಶ್ವದಲ್ಲೇ ಅತಿ ಪ್ರಾಚೀನವಾದ ವೇದಗಳು ಉದ್ದಕ್ಕೂ ಘೋಷಿಸುತ್ತವೆ. ಯಾಸ್ಕರು ಏಕ ಆತ್ಮಾ ಬಹುಧಾ ಸ್ಯೂಯತೇ ಎಂದು ಈ ಅಂಶವನ್ನು ಪ್ರತಿಪಾದಿಸಿದ್ದಾರೆ. ಹೀಗೆ ದೇವತಾ ವೈವಿಧ್ಯ ಉಪಪನ್ನವಾಗುತ್ತದೆ. ಪೃಥ್ವೀ ಸ್ಥಾನದಲ್ಲಿ ಅಗ್ನಿ, ಪೃಥ್ವಿ, ಸೋಮ, ನದೀ, ಬೃಹಸ್ಪತೀ ದೇವರುಗಳಿರುವಂತೆ, ದ್ಯುಸ್ಥಾನದಲ್ಲಿ ವರುಣ, ಮಿತ್ರ, ಸೂರ್ಯ, ಸವಿತೃ, ಪೂಷನ್, ಅಶ್ವಿನ್, ವಿಣು ಮೊದಲಾದ ದೇವತೆಗಳಿರುವಂತೆ ಅಂತರಿಕ್ಷ ಸ್ಥಾನದಲ್ಲಿ ಇಂದ್ರ, ವಾಯು, ಅಪಾಂನಪಾತ್, ರುದ್ರ, ಮರುತ್, ವಾತ, ಪರ್ಜನ್ಯ ಮತ್ತು ಅಬ್ದೇವತೆಗಳು ಇದ್ದಾರೆ.

ಇದರ ದೇಶಗಳಲ್ಲಿ ಹೇಗೋ ಹಾಗೆ ಅಂತರಿಕ್ಷದೇವತೆಗೂ ಮಳೆ, ಗುಡುಗು ಸಿಡಿಲು ಮೊದಲಾದವುಗಳಿಗೂ ಇಲ್ಲಿಯೂ ಸಂಬಂಧವಿದೆ. ಈ ದೇವತೆಗಳಲ್ಲಿ ಇಂದ್ರ ಮತ್ತು ವಾಯುವಿಗೆ ಮುಖ್ಯವಾದ ಸ್ಥಾನವಿದೆ. ಬೇರೆ ಬೇರೆ ಪ್ರಕೃತಿಯ ವ್ಯಾಪಾರಗಳನ್ನು ಈ ದೇವತೆಗಳು ಪ್ರತಿಬಿಂಬಿಸದರೂ ಆ ಪ್ರಕೃತಿಯ ಸ್ವರೂಪಕ್ಕಿಂತ ಮೀರಿದ ಹಾಗೂ ಸರ್ವವ್ಯಾಪಕವಾದ ಲಕ್ಷಣಗಳನ್ನು ಈ ದೇವತೆಗಳಿಗೆ ಹೇಳಿರುವುದು ಗಮನಾರ್ಹವಾದ ಅಂಶವಾಗಿದೆ. ಈ ದೇವತೆಗಳಿಗೆ ಸರ್ವಶಕ್ತಿತ್ವವನ್ನೂ ಹೇಳಿದ್ದಾರೆ. ಸರ್ವಜ್ಞತ್ವವನ್ನೂ ಹೇಳಿದ್ದಾರೆ. ಜಗತ್ಕಾರಣವಾದ ಪರತತ್ವವೇ ಹೀಗೆ ಬೇರೆ ಬೇರೆ ರೂಪಗಳಲ್ಲಿ ನಮ್ಮನ್ನು ಕೈ ಹಿಡಿದು ನಡೆಸುತ್ತದೆ ಎಂದು ವರ್ಣಿಸಿದ್ದಾರೆ. ಈ ದೃಷ್ಟಿಯಿಂದ ನೋಡಿದರೆ ನಮ್ಮ ದೇಶದವರ ದೇವತಾ ಕಲ್ಪನೆ ಇತರ ದೇಶದವರ ಕಲ್ಪನೆಗಿಂತ ಬೇರೆಯಾಗಿ ಕಂಡುಬರುತ್ತದೆ.

ಅಂತರಿಕ್ಷದೇವತೆಗಳೆಲ್ಲ ಓಜಸ್ಸುಳ್ಳವನೂ ಬಲಿಷ್ಠನೂ ಆದವನು ಇಂದ್ರ. ಇವನು ಹಿರಣ್ಯವರ್ಣ, ಹಿರಣ್ಯಬಾಹು, ಹಿರಣ್ಯಪಾಣಿ. ಇವನ ಆಯುಧ ಬಲಿಷ್ಠವಾದ ವಜ್ರ. ಈ ವಜ್ರಾಯುಧ ಸಹಸ್ರಧಾರೆಯಿಂದ ಕೂಡಿದುದು. ಇದನ್ನು ಇವನು ಧರಿಸುವುದರಿಂದಲೇ ಇವನಿಗೆ ವಜ್ರಭೃತ್, ವರ್ಜಿವತ್, ವಜ್ರದಕ್ಷಿಣ, ವಜ್ರಬಾಹು ಎಂಬ ಹೆಸರುಗಳು ಬಂದಿವೆ. ಪುರುಷಾಕಾರವನ್ನು ಈತ ಹೊಂದಿದ್ದಾನೆ. ಸ್ವರ್ಣಮಯವಾದ ರಥದಲ್ಲಿ ಇವನು ಮನೋವೇಗವನ್ನು ಮೀರಿ ಸಂಚರಿಸುತ್ತಾನೆ. ಆಕಾಶದಲ್ಲಿ ದ್ಯುಲೋಕವನ್ನು ಇವನು ಸ್ಥಾಪಿಸಿದ. ಮಹತ್ತರವಾದ ಅಂತರಿಕ್ಷವನ್ನೂ ದ್ಯಾವಾಪೃಥುವಿಗಳನ್ನೂ ತನ್ನ ತೇಜಸ್ಸಿನಿಂದ ತುಂಬಿದ್ದಾನೆ.