ಪುಟ:Mysore-University-Encyclopaedia-Vol-1-Part-1.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತರಿಕ್ಷ ಸಂಶೋಧನೆ ಅಮೇರಿಕದ ನೌಕೆಗಳು: ಮ್ಯಾರಿನರ್,ಫೋಟೋಸ್ ಮತ್ತು ವೇಗಾ, ವಾಯೇಜರ್,ಗ್ಯಾಲಲೆಯೊ,ಪಾತ್ ಪ್ಲೈಂಡರ್,ಪಯನೀರ್,ಮಾರ್ಸ್ ಆಡಿಸ್ಸಿ, ಮೆಜೆಲಾನ್,ನಿಯರ್,ಕೆಸ್ಯೀನಿ,ಜಿಯೊಟ್ಟೊ,ಹೊಯ್ ಗನ್ಸ್, ಸೋಹೋ, ಭಾಗ VI ಅಂತರಾಷ್ಟ್ರೀಯ ಅಂತರಿಕ್ಷ ಸಂಶೋಧನೆಯನ್ನು ಕೈಗೊಳ್ಳುವ ಸಲುವಾಗಿ ಮಾನವ ಅನೇಕ ಯೋಜನೆಗಳನ್ನು ರೂಪಿಸಿಕೊಂಡ.ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಪಂಚದ ವಿವಿಧ ರಾಷ್ಟ್ರಗಳು ಒಂದುಗೂಡಿ ತಮ್ಮ ಸಹಕಾರವನ್ನು ಕೊಟ್ಟುವು.ಇಂಥ ಯೋಜನೆಗಳಲ್ಲೊಂದಾದ ಅಂತರಾಷ್ಟ್ರೀಯ ಭೂಭೌತವರ್ಷ(ಇಂಟರ್ ನ್ಯಾಷನಲ್ ಜಿಯೋಫಿಸಿಕಲ್ ಇಯರ್-ಐಜಿವೈ-೧೯೫೭-೫೮) ಸಂಶೋಧನ ರಾಕೆಟ್ಟುಗಳನ್ನು(ಸೌಂಡಿಂಗ್ ರಾಕೆಟ್ಟು) ಉಪಯೋಗಿಸಿಯೇ ನಡೆಯುತ್ತಿತ್ತು.ಈ ಮಧ್ಯೆ ಅಮೆರಿಕ,ಇಂಗ್ಲೆಂಡ್ ಮತ್ತು ರಷ್ಯ ದೇಶಗಳಲ್ಲಿ ಯುದ್ಧೋಪಕರಣವಾದ ಕ್ಷಿಪಣಿಯ (ಮಿಸೈಲ್) ಕಾರ್ಯ ಪ್ರಗತಿ ನಡೆಯುತ್ತಲೇ ಇತ್ತು. ೧೯೫೪ರಲ್ಲಿ ಸೇರಿದ ಐಜಿವೈ ಆಯೋಜನಾ ಸಮತಿ ಕೃತಕ ಉಪಗ್ರಹಗಳನ್ನು ಹಾರಿಸುವುದು ಉಚಿತವೆಂದು ಸೂಚಿಸಿತು. ಇದನ್ನು ಅನುಮೋದಿಸಿ ಅಮೆರಿಕ (ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಇಲ್ಲಿಂದ ಮುಂದೆ ಅಮೆರಿಕ ಎನ್ನಲಾಗಿದೆ) ಮತ್ತು ರಷ್ಯ ದೇಶಗಳು ಉಪಗ್ರಹಗಳನ್ನು ಹಾರಿಸುವುದಾಗಿಇ ಪ್ರಕಟಪಡಿಸಿದುವು.ಅಂತೆಯೇ ೧೯೫೭ರ ಅಕ್ಟೋಬರ್ ೪ರಂದು ರಷ್ಯ ಭೂಮಿಯ ಮೊದಲ ಕೃತಕ ಉಪಗ್ರಹವನ್ನು ಹಾರಿಸಿತು. ಅಂದಿನಿಂದ ಅಂತರಿಕ್ಷ ಸಂಶೋಧನೆ ಅನವರತವಾಗಿ ನಡೆಯುತ್ತಿದೆ.ಅಂತರಿಕ್ಷ ನೌಕೆಗಳ(ಇದು ಅಂತಗ್ರಹಯಾನ ಮಾಡುವ ನೌಕೆ ಅಥವಾ ಕೃತಕ ಭೂ ಉಪಗ್ರಹವಾಗಬಹುದು ) ನೆರವಿನಿಂದ ಮುಖ್ಯವಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಯುತ್ತಿದೆ: 1. ಭೂಮಿಯ ವಾತಾವರಣ ಮತ್ತು ಬಾಹ್ಯವರಣದ ಗುಣವಿಶೇಷಗಳು. 2. ಅಂತರಗ್ರಹಪ್ರದೇಶದ ಗುಣವಿಶೇಷಗಳು. 3. ಚಂದ್ರನ ಅಧ್ಯಯನ ಆಕಾರ,ಮೇಲ್ಮೈಲಕ್ಷಣ,ರಚನೆ, ಕಾಂತಕ್ಷೇತ್ರ,ವಾಯುಪದರ,ರಶ್ಮಿಪದರ-ಮುಂತಾದುವು. 4. ಸೌರವ್ಯೂಹದ ಗ್ರಹ,ಉಪಗ್ರಹ,ಕ್ಷುದ್ರಗ್ರಹ(ಆಸ್ಟರಾಯ್ಡ್),ಧೂಮಕೇತುಗಳು ಮತ್ತು ಸೂರ್ಯನ ಅಧ್ಯಯನ. 5. ವಿಶ್ವಕಿರಣಗಳು ಮತ್ತು ಉಲ್ಕೆಗಳು. 6. ಖಗೋಳನಿಯತಾಂಕಗಳ ಪುನರ್ ವಿಮರ್ಶೆ. 7. ಅಂತರಿಕ್ಷಯಾನದ ವಿಧಾನಗಳು: ಮುಖ್ಯವಾಗಿ ಅಂತರಿಕ್ಷಯಾನದ ವಿಧಾನಗಳು: ಮುಖ್ಯವಾಗಿ ಅಂತರಿಕ್ಷನೌಕೆಗಳನ್ನು ಹಾರಿಸುವ ಬಗೆ.

ಇಷ್ಟೇ ಅಲ್ಲದೆಈ ಸಂಶೋಧನೆಗಳಿಗೆ ಬೇಕಾದ ರಾಕೆಟ್ ಮತ್ತು ಅದರ ನೋದಕಗಳು(ಪ್ರೊಪೆಲೆಂಟ್ಸ್) ಎಲೆಕ್ಟ್ರಾನಿಕ್ಸ್, ಲೋಹವಿಜ್ಞಾನ, ಭೌತವಿಜ್ಞಾನ, ರಸಾಯನವಿಜ್ಞಾನ,ಗಣಿತವಿಜ್ಞಾನ ಮತ್ತು ಇನ್ನೂ ಅನೇಕಾನೇಕ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯಾಗಿದೆ.

ಅಂತತರಿಕ್ಷದಲ್ಲಿ ಸಂಚರಿಸುವ ವಸ್ತುವಿನ ಚಲನೆಯನ್ನು 6 ಭಾಗಗಳಾಗಿ ವಿಂಗಡಿಸಬಹುದು.ಅವು ಹೀಗಿವೆ: 1. ನೇರಗಮನ (ಸರ್ಜ್)-ಅದರ ವೇಗದಿಕ್ಪರಿಮಾಣದ (ವೆಲಾಸಿಟಿ ವೆಕ್ಟರ್) ಕಡೆಯಿರುವ ಚಲನೆ. 2. ಅಧೋಗಮನ (ಹೀವ್)- ವೇಗದಿಕ್ಪರಿಮಾಣಕ್ಕೆ ಲಂಬನೇರದಲ್ಲಿ, ಸಾಮಾನ್ಯವಾಗಿ ಗುರುತ್ವಾಕರ್ಷಣೆಯ ಕಡೆ ಇರುವ ಚಲನೆ. 3. ಪಾರ್ಶ್ವಗಮನ (ಸರ್ವ್)-ನೇರ ಮತ್ತು ಅಧೋಗಮನಗಡಕ್ಳೆಕೂ ಲಂನೇರದಲ್ಲಿರುವ ಚಲನೆ. 4. ಹೊರಳುವಿಕೆ (ರೋಲ್)-ವೇಗದಿಕ್ಪರಿಮಾಣದ ಮೇಲೆ ಸುತ್ತುವಿಕೆ. 5. ಪಿಚ್-ಪಾರ್ಶ್ವಗಮನ ಅಕ್ಷದ ಮೇಲೆ ಸುತ್ತುವಿಕೆ. 6. ಯಾ-ಆಧೋಗಮನದ ಅಕ್ಷದ ಮೇಲೆ ಸುತ್ತುವಿಕೆ.

ಚಲಿಸುತ್ತಿರುವ ವಸ್ತುವನ್ನು ನಿಯಂತ್ರಿಸಲು ಈ ಆರು ರೀತಿಯ ಚಲನೆಗಳೂ ನಿಖರವಾಗಿ ತಿಳಿದಿರಬೇಕು.

ಭೂಮಿಯನ್ನು ಸುತ್ತುತ್ತಿರುವ ಉಪಗ್ರಹವೊಂದು ಕೆಪ್ಲರನ ಗ್ರಹಚಲನನಿಯಮಗಳಿಗನುಗುಣವಾಗಿ ದೀರ್ಘವೃತ್ತಾಕಾರದ ಪಥದಲ್ಲಿ ಪರಿಭ್ರಮಿಸುತ್ತದೆ. ಆದರೆ ಭೂಮಿ ಶುದ್ಧ ಗೋಳಾಕಾರದಲ್ಲಿಲ್ಲವಾದ್ದರಿಂದ ಪಥ ಶುದ್ಧ ದೀರ್ಘವೃತ್ತಾಕಾರದಲ್ಲಿರುವುದಿಲ್ಲ. ಭೂಮಿ ಭೂಮಧ್ಯರೇಖೆಯಲ್ಲಿ ಧ್ರುವ ಪ್ರದೇಶಗಳಿಗಿಂತ ಸುಮಾರು 31ಕಿಮಿಗಳಷ್ಟು ದಪ್ಪಗಿದೆ. ಇದರಿಂದಾಗಿ ಉಪಗ್ರಹ ಭೂಮಧ್ಯ ರೇಖೆಯ ಮೇಲೆ ಬಂದಾಗ ಹೆಚ್ಚಾಗಿ ಎಳೆಯಲ್ಪಟ್ಟು ವೇಗವೂ ಅಧಿಕವಾಗುತ್ತದೆ.

ಧ್ರುವ ಪ್ರದೇಶಗಳ ಮೇಲೆ ಬಂದಾಗ ಇದರ ಮೇಲಿನ ಆಕರ್ಷಣೆ ಕಡಿಮೆಯಾಗಿ ಇನ್ನೂ ಎತ್ತರಕ್ಕೇರಿದಾಗ ವೇಗ ಕಡಿಮೆಯಾಗುತ್ತದೆ.ಇದೂ ಅಲ್ಲದೆ ಉಪಗ್ರಹ ಪಥದ ಸಮತಲ ಭೂಮಧ್ಯ ರೇಖೆಗೆ ಒಂದು ಕೋನದಲ್ಲಿದ್ದರೆ ಅದರ ದೀರ್ಘಾಕ್ಷ (ಮೇಜರ್ ಆಕ್ಸಿಸ್) ಪಥದ ಸಮತಲದಲ್ಲಿಯೇ ನಿಧಾನವಾಗಿ ತಿರುಗುತ್ತದೆ ಮತ್ತು ಪಥ ಸಮತಲವೇ ಭೂಮಿಯ ಅಕ್ಷದ ಮೇಲೆ ಸುತ್ತುತೊಡಗುತ್ತದೆ.

ಇಷ್ಟೇ ಅಲ್ಲದೆ ಭೂಮಿಯ ಮೇಲ್ಲ್ಮೈ ಸಮವಾಗಿರದೆ ವಿಚಿತ್ರ ರೀತಿಯಲ್ಲಿ ಏರಿಳಿತಗಳನ್ನು ಹೊಂದಿದೆ. ಅದರ ಸಾಂದ್ರತೆಯಲ್ಲಿಯೂ ವ್ಯತ್ಯಾಸಗಳಿವೆ.ಆದ್ದರಿಂದ ಪ್ರತಿ ದಿಕ್ಕಿನಲ್ಲಿಯೂ ಭೂಮಿಯ ಗುರುತ್ವಾಕರ್ಷಣೆ ಒಂದೇ ಆಗಿಲ್ಲ. ಇದರಿಂದಾಗಿಯೂ ಉಪಗ್ರಹದ ಪಥದಲ್ಲಿ ಸೂಕ್ಷ್ಮಕ್ಷೋಭೆಗಳು(ಪರ್ಟರ್ಬೇಷನ್ಸ್) ಆಗುತ್ತವೆ.

ಇವುಗಳ ಜೊತೆಗೆ ಆ ಎತ್ತರಗಳಲ್ಲಿ,ಸ್ವಲ್ಪವಾದರೂ ಇರುವ ಅನಿಲಕಣಗಳು ಮತ್ತು ಸೂಕ್ಷ್ಮ ಉಲ್ಕೆಗಳ ಘರ್ಷಣೆಯಿಂದ ಉಪಗ್ರಹದ ವೇಗ ಕ್ರಮೇಣ ತಗ್ಗುವುದು ಇದರಿಂದಾಗಿ ಅದರ ಎತ್ತರವೂ ಕಡಿಮೆಯಾಗುತ್ತ ಬಂದು ಕೊನೆಗೆ ಉಪಗ್ರಹ ಭೂಮಿಯ ಸಾಂದ್ರವಾಯುಮಂಡಲವನ್ನು ಪ್ರವೇಶಿಸಿ ಸುಟ್ಟು ಹೋಗುತ್ತದೆ.ಆದ್ದರಿಂದ ಉಪಗ್ರಹದ ಸರಿಯಾದ ಪಥವನ್ನು ಲೆಕ್ಕ ಹಾಕಬೇಕಾದರೆ ಮೇಲೆ ಹೇಳಿದ ಎಲ್ಲ ಅಂಶಗಳನ್ನೂ ಗಮನಿಸಲೇಬೇಕು.

ಅಂತರಿಕ್ಷ ನೌಕೆಯ ಗತಿವೀಕ್ಷಣೆಯ (ಟ್ರ್ಯಾಕಿಂಗ್) ಹಲವಾರು ವಿಧಾನಗಳಲ್ಲಿ ಮಾಡುತ್ತಾರೆ. ಮುಖ್ಯವಾದವು ದೃಗ್ವಿಧಾನ(ಆಪ್ಟಿಕಲ್);ಡಾಪ್ಲರ್ ವಿಧಾನ ;ವ್ಯತಿಕರಣ ಮತ್ತು ಲೇಸರ್ ದೃಗ್ವಿಧಾನದ ರೀತಿ ಹೀಗಿದೆ: ದೂರದರ್ಷಕವನ್ನು ಅಳವಡಿಸಿರುವ ಒಂದು ಬಿಂಬಗ್ರಾಹಿ ಅಂತರಿಕ್ಷನೌಕೆಯ ಛಾಯಾಚಿತ್ರಗಳನ್ನು ಅತಿವೇಗವಾಗಿ ಒಡ್ಡುತ್ತದೆ. ಬಿಂಬಗ್ರಾಹಿಯನ್ನು ಜಿಂಬಾಲ್ಗಳ ಮೇಲೆ ಅಳವಡಿಸಿರುವುದರಿಂದ ಅದನ್ನು ಯಾವ ದಿಕ್ಕಿಗೆ ಬೇಕಾದರೂ ತಿರುಗಿಸಬಹುದು.ಸಾಮಾನ್ಯವಾಗಿ ಅದನ್ನು ಅಂತರಿಕ್ಷ ನೌಕೆಯ ಕಡೆಯೇ ಇರುವಂತೆ ತಿರುಗಿಸುತ್ತಾರೆ.ಛಾಯಾಚಿತ್ರದ ಮೇಲೆ ಬಿಂಬಗ್ರಾಹಿಯ ದಿಶೆ ಮತ್ತು ವೇಳೆ ಸೂಚಿಸಲ್ಪಟ್ಟಿರುತ್ತವೆ. ಈ ರೀತಿ ಗೊತ್ತಾದ ದೂರದಲ್ಲಿರುವ ಎರಡು ಕೇಂದ್ರಗಳಿಂದ ಚಿತ್ರಗಳನ್ನು ಒಡ್ಡುತ್ತಾರೆ .ಇವುಗಳ ನೆರವಿನಿಂದ ನೌಕೆಯ ಎತ್ತರ, ದಿಶೆ ಮತ್ತು ವೇಗಗಳನ್ನು ಗಣಿಸಬಹುದು.

ನೌಕೆ ಪಥದಲ್ಲಿರುವಾಗ ಗೊತ್ತುಗುರಿಯಿಲ್ಲದೆ ಹೊರಳಲು ಅವಕಾಶವುಂಟು.ಇದನ್ನು ತಪ್ಪಿಸಲು ಕೆಲವು ವೇಳೆ ಅದನ್ನು ಪಥದಲ್ಲಿ ನೂಕುವಾಗ ಅದು ತನ್ನ ಅಕ್ಷದ ಮೇಲೆ ಸುತ್ತುವಂತೆ ಮಾಡುತ್ತಾರೆ.ಇದರಿಂದಾಗಿ ಅದು ಇತರ ದಿಕ್ಕುಗಳತ್ತ ಹೊರಳುವುದಿಲ್ಲ. ಜೊತೆಗೆ ಬೇರೆ ಒಂದು ಅನುಕೂಲವೂ ಇದೆ.ಬಾಹ್ಯಾಕಾಶದಲ್ಲಿ ವಾತಾವರಣವಿಲ್ಲವಾದ್ದರಿಂದ ಸೂರ್ಯನ ಕಡೆಗೆ ತಿರುಗಿರುವ ನೌಕೆಯ ಭಾಗ ಗಹಳವಾಗಿ ಕಾದು ಮತ್ತೊಂದು ಭಾಗ ಅತಿ ತಣ್ಣಗೆ ಇರುತ್ತದೆ.ಈಗ ಅದು ಮೆಲ್ಲಗೆ ಸುತ್ತುತ್ತಿದ್ದರೆ ಪ್ರತಿ ಭಾಗವೂ ಸ್ವಲ್ಪ ಹೊತ್ತು ಸೂರ್ಯನ ಕಡೆಗೆ ಬರುವುದರಿಂದ ಉಷ್ಣದ ಘಾತ ಅಷ್ಟಾಗಿರುವುದಿಲ್ಲ.

ಅಂತರಿಕ್ಷ ನೌಕೆಗಳನ್ನು ರಾಕೆಟ್ಟುಗಳು ಸಹಾಯದಿಂದ ಉಡಾಯಿಸುತ್ತಾರೆ.ಮೊದಲು ರಾಕೆಟ್ ಯಾವ ಪಥದಲ್ಲಿ ಹೋಗಬೇಕೆಂಬುದನ್ನು ಗಣಿಸಿ ನಿರ್ಧರಿಸುತ್ತಾರೆ. ಅಂದರೆ, ಅದು ಹಾರುವಾಗ ಯಾವ ಯಾವ ಹೊತ್ತುಗಳಲ್ಲಿ ಎಷ್ಟೆಷ್ಟು ಎತ್ತರದಲ್ಲಿರಬೇಕು ಮತ್ತು ಎಷ್ಟೆಷ್ಟು ವಾಲಿರಬೇಕು ಎಂಬುದನ್ನು ಮೊದಲೇ ನಿಗದಿಸಿ ಈ ಪಥಯೋಜನೆಯನ್ನು ರಾಕೆಟ್ ನ ಮೆದುಳಾದ ಗಣಕದಲ್ಲಿ ಅಳವಡಿಸಿರುತ್ತಾರೆ . ಇದರ ಆದೇಶದಂತೆ ರಾಕೆಟ್ ಇಚ್ಛಿತ ದಿಶೆಗೆ ತಿರುಗುತ್ತಿರುತ್ತದೆ.ಇದಕ್ಕೆ ಜಡನಿಯಂತ್ರಣ ವ್ಯವಸ್ಥೆ (ಇನರ್ಷಿಯಲ್ ಗೈಡೆನ್ಸ್ ಸಿಸ್ಟಮ್) ಎಂದು ಹೆಸರು.

ಭಾಗ II ಮಾನವರಹಿತ ಉಪಗ್ರಹಗಳು: ಈ ತನಕ ಹಾರಿಸಿರುವ ಮಾನವರಹಿತ ಉಪಗ್ರಹಗಳನ್ನು ತಕ್ಕಂತೆ 7 ಭಾಗಗಳಾಗಿ ವಿಂಗಡಿಸಬಹುದು: 1. ವೈಜ್ಙಾನಿಕ ಉಪಗ್ರಹಗಳನ್ನು , 2. ಹವಾಮಾನ ಉಪಗ್ರಹಗಳು, 3. ಸಂಪರ್ಕ ಸಾಧನೋಪಗ್ರಹ ,4.ದೂರಸಂವೇದೀ ಉಪಗ್ರಹಗಳು,5.ಯಾನ ನಿರ್ವಹಣಾ ಉಪಗ್ರಹಗಳು 6.ಸೇನಾ ಉಪಗ್ರಹಗಳು,ಜೀವವೈಜ್ಙಾನಿಕ ಉಪಗ್ರಹಗಳು.