ಪುಟ:Mysore-University-Encyclopaedia-Vol-1-Part-1.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂತರಿಕ್ಷ ಸಂಶೋಧನೆ

೧೯೬೮ ಅಕ್ಟೋಬರ್ ನಲ್ಲಿ ಸೊಯೂಸ್-೨ ಮತ್ತು ಸೊಯೂಸ್-೩ ನೌಕೆಗಳನ್ನೊಳಗೊಂಡ ಪ್ರಯೋಗವೊಂದನ್ನು ನಡೆಸಿದರು. ಒಂದು ನೌಕೆಯಲ್ಲಿದ್ದ ಜಿ.ಟಿ. ಬೆರೆಗೊವಾಯ್ ಇನ್ನೊಂದು ನೌಕೆಯನ್ನು ಹುಡುಕುವುದು, ಹತ್ತಿರ ಬರುವುದು- ಮುಂತಾದ ಪ್ರಯೋಗಗಳನ್ನು ನಡೆಸಿದ.

೧೯೬೯ ಜನವರಿ ೧೪ರಂದು ಸೊಯೂಸ್-೪ ಎಂಬ ನೌಕೆಯಲ್ಲಿ ವ್ಲಾಡಿಮಿರ್ ಎ.ಷಟಲೋವ್ ಎಂಬಾತನನ್ನು ಭೂಪ್ರದಕ್ಷಿಣೆಗೆ ಕಳುಹಿಸಿದರು, ಮಾರನೆಯ ದಿನ, ಸೊಯೂಸ್-೫ ಎಂಬ ನೌಕೆಯಲ್ಲಿ ಬೋರಿಸ್ ವಿ. ವಾಲ್ಯನೊವ್, ಅಲೆಕ್ಸಿಸ್, ಎಲಸ್ಯೆಯೇವ್ ಮತ್ತು ಎವ್‍ಗೆನಿ ಕೈನೋವ್ ಎಂಬ ಮೂವರನ್ನು ಹಾರಿಸಿದರು. ಹಾರಾಟದಲ್ಲಿದ್ದಾಗ ನೌಕೆಗಳು ಒಂದನ್ನೊಂದನ್ನು ತೀರ ಹತ್ತಿರ ಸಮೀಪಿಸುವಂತೆ ಮಾದಲಾಯಿತು. ಮಾರನೆಯ ದಿನ ನೌಕೆಗಳು ತಾವಾಗಿಯೇ ೩೩೦ಅಡಿಗಳಷ್ಟು ಹತ್ತಿರ ಬಂದುವು. ಆಗ ಷಟಲೋವ್ ತಾನೆ ತನ್ನ ನೌಕೆಯನ್ನು ನಡೆಸಿ ಸೊಯೂಸ್-೫ ಅನ್ನು ಸೇರುವಂತೆ ಮಾಡಿದ. ಆಗ ಅದರಲ್ಲಿದ್ದ ಕೈನೋವ್ ಮತ್ತು ಎಲಸ್ಯೆಯೇವ್ ಆಂತರಿಕ್ಷ ಉಡುಪುಗಳನ್ನು ಧರಿಸಿ ನೌಕೆಯಿಂದ ಹೊರಗೆ ಬಂದು ಎರಡು ನೌಕೆಗಳನ್ನೂ ಯಾಂತ್ರಿಕವಾಗಿ ಸೇರಿಸಿದುದಲ್ಲದೆ ಎರಡಕ್ಕೂ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿದರು. ಇವರಿಬ್ಬರೂ ಸುಮಾರು ಒಂದು ಗಂಟೆಯಕಾಲ ನೌಕೆಯಿಂದ ಹೊರಗೆ ಇದ್ದು ಅನಂತರ ಸೊಯೂಸ್-೪ರಲ್ಲಿ ಹೋಗಿ ಸೇರಿಕೊಂಡರು. ಅನಂತರ ಎರಡು ನೌಕೆಗಳು ಬೇರೆಬೇರೆಯಾಗಿ ತಮ್ಮ ತಮ್ಮ ಪಥಗಳಲ್ಲಿ ಹೋದುವು. ಮುಂದಿನ ಎರಡು ದಿನಗಳಲ್ಲಿ ಸೊಯೂಸ್-೪ ಮತ್ತು ಸೊಯೂಸ್-೫ ಭೂಮಿಗೆ ಮರಳಿದವು.

ಅಂತರಿಕ್ಷ ನಿಲ್ದಾಣಗಳು: ಸಲ್ಯೂತ್- ೧೯೭೧ರಲ್ಲಿ ಸೋವಿಯತ್ ರಷ್ಯ ತನ್ನ ಸಲ್ಯೂತ್ ಅಂತರಿಕ್ಷ ನಿಲ್ದಾಣ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮದಡಿ ಏಳು ಅಂತರಿಷ ನಿಲ್ದಾಣಗಳನ್ನು ಅಂದರೆ ಕನಿಷ್ಠ ಪಕ್ಷ ಮೂವರು ಗಗನಯಾತ್ರಿಗಳು ತಿಂಗಳುಗಟ್ಟಲೆ ವಾಸಿಸುತ್ತಾ ಪ್ರಯೋಗಗಳನ್ನು ನಿರ್ವಹಿಸಲು ಮತ್ತು ಖಗೋಲ ಮತ್ತು ಭೂ ವೀಕ್ಷಣೆ ನಡೆಸಲು ಸೌಲಭ್ಯಗಳನ್ನುಳ್ಳ ದೊಡ್ಡ ಅಂತರಿಕ್ಷ ನೌಕೆಗಳನ್ನು ಉಡಾಯಿಸಲಾಯಿತು. ಈ ನಿಟ್ಟಿನಲ್ಲಿ ಸಲ್ಯೂತ್-೧ನ್ನು ಯಶಸ್ವಿಯಾಗಿ ಸಂದರ್ಶಿಸಿದ ಮೊದಲ ಮೂರು ಗಗನಯಾತ್ರಿಗಳು ಭೂಮಿಗೆ ಮರಳುವಾಗ ಅಪಘಾತಕ್ಕೀಡಾಗಿ ಮಡಿದರೂ ಅನಂತರ ಉಡಾಯಿಸಲಾದ ಸಲ್ಯೂತ್ ನೌಕೆಗಳಿಗೆ ಅನೇಕ ದೇಶಗಳ ಗಗನಯಾತ್ರಿಗಳು ಭೇಟಿ ನೀಡಿದರು. ಅವರ ಪೈಕಿ ೧೯೮೪ರ ಏಪ್ರಿಲ್ ನಲ್ಲಿ ಒಂದು ವಾರ ಕಾಲ ಸಲ್ಯೂತ್-೭ರಲ್ಲಿ ವಾಸಿಸಿದ ಭಾರತದ ರಾಕೇಶ್ ಶರ್ಮಾ ಸಹ ಒಬ್ಬರು. ಸಲ್ಯೂತ್ ಕಾರ್ಯಕ್ರಮದ ನಡುವೆ ಗಗನಯಾತ್ರಿಗಳು ತಿಂಗಳುಗಟ್ಟಲೇ ಆ ಸರಣಿಯ ಅಂತರಿಕ್ಷ ನೌಕೆಗಳಲ್ಲಿ ವಾಸಿಸುವುದು ಸಾಮಾನ್ಯವಾಯಿತು. ಅದೇ ರೀತಿ ಅಂತರಿಕ್ಷ ನಿಲ್ದಾಣಗಳಿಗೆ ಅಗತ್ಯ ವಸ್ತುಗಳನ್ನು 'ಪ್ರೋಗ್ರೆಸ್' ರೋಬಾಟ್ ನೌಕೆಗಳಲ್ಲಿ ಆಗಿಂದಾಗ್ಗೆ ಕಳುಹಿಸುವುದೂ ಪ್ರಾರಂಭವಾಯಿತು. ಮಿಯರ್ ೧೯೮೬ರಲ್ಲಿ ಸೋವಿಯತ್ ರಷ್ಯ ಮಿಯರ್(ಶಾಂತಿ) ಎಂಬ ಅಂತರಿಕ್ಷ ನಿಲ್ದಾಣದ ಪ್ರಮುಖ ತುಂಡನ್ನು ೩೫೦ ಎತ್ತರದ ಭೂ ಕಕ್ಷೆಗೆ ಉಡಾಯಿಸಿತು. ನಂತರ ಉಡಾಯಿಸಲಾದ ಅನೇಕ ಕೋಶಗಳನ್ನು ಅದಕ್ಕೆ ಜೋಡಿಸುವ ಮೂಲಕ ೧೯೯೦ರ ದಶಕದ ಮಧ್ಯಭಾಗದ ಹೊತ್ತಿಗೆ ಅದನ್ನು ಬೃಹತ್ ಅಂತರಿಕ್ಷ ನಿಲ್ದಾಣವಾಗಿ ಪರಿವರ್ತಿಸಲಾಯಿತು. ೨೦೦೦ ಇಸವಿಯಲ್ಲಿ ಹಳೆಯದಾಗಿದ್ದ ಆ ಅಂತರಿಕ್ಷನಿಲ್ದಾಣವನ್ನು ಬೇಕೆಂದೇ ವಾತಾವರಣವನ್ನು ಪ್ರವೇಶಿಸುವಂತೆ ಮಾಡಲಾಗಿ ಅದು ಉರಿದು ಬೂದಿಯಾಯಿತು. ದೀರ್ಘ ಕಾಲದ ಅಂತರಿಕ್ಷ ಯಾನವು ಮಾನವ ದೇಹದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮಿಯರ್ ಮತ್ತು ಸಲ್ಯೂತ್ ಅಂತರಿಕ್ಷನಿಲ್ದಾಣಗಳು ಬಹು ಮುಖ್ಯವಾದ ಪಾತ್ರ ವಹಿಸಿದವು.

೧೯೭೪ರಲ್ಲಿ ಸ್ಕೈಲ್ಯಾಬ್ ಎಂಬ ಅಂತರಿಕ್ಷನಿಲ್ದಾಣವನ್ನು ಉಡಾಯಿಸುವ ಮೂಲಕ ಅಮೆರಿಕ ತಾನೂ ಸಹ ಅಂತರಿಕ್ಷನಿಲ್ದಾಣಗಳ ಕ್ಷೇತ್ರಕ್ಕೆ ಲಗ್ಗೆಯಿಟ್ಟಿತು. ಮಾನವ ದೇಹದ ಮೇಲೆ ದೀರ್ಘಕಾಲದ ಅಂತರಿಕ್ಷ ಯಾನದ ಪರಿಣಾಮ, ಪದಾರ್ಥಶಾಸ್ತ್ರ, ಭೂ ವೀಕ್ಷಣೆ ಮತ್ತು ಖಗೋಲ ವೀಕ್ಷಣೆ, ಅದರಲ್ಲೂ ಸೌರವೀಕ್ಷಣೆ ಈ ಕ್ಷೇತ್ರಗಳಲ್ಲಿ ಉಪಯುಕ್ತವಾದ ಪ್ರಯೋಗಗಳನ್ನು ಸ್ಕೈಲ್ಯಾಬ್ ನಲ್ಲಿ ವಾಸಿಸಿದ ಒಟ್ಟು ಒಂಬತ್ತು ಗಗನ ಯಾತ್ರಿಗಳು ನಿರ್ವಹಿಸಿದರು. ೧೯೭೯ರಲ್ಲಿ ಸ್ಕೈಲ್ಯಾಬ್ ಭೂ ವಾತಾವರಣವನ್ನು ಪ್ರವೇಶಿಸಿ ಉರಿದು ಬೂದಿಯಾದಾಗ ಅದು ಜನಭರಿತ ಪ್ರದೇಶಗಳ ಮೇಲೆ ಬಿದ್ದು ಹಾನಿ ಮಾಡಬಹುದೆಂಬ ಭೀತಿ ಉಂಟಾಗಿತ್ತು. ಇಂದು ಅಮೆರಿಕ, ರಷ್ಯ ಹಾಗೂ ಇತರ ಹದಿನಾಲ್ಕು ರಾಷ್ಟಗಳು ಒಟ್ಟಾಗಿ ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣ ಎಂಬ ಬೃಹತ್ ಅಂತರಿಕ್ಷ ನಿಲ್ದಾಣವನ್ನು ೩೫೦ ಕಿಮೀ ಎತ್ತರದ ಕಕ್ಷೆಯಲ್ಲಿ ನಿರ್ಮಿಸುತ್ತಿವೆ. ೨೦೦೫ರ ಆದಿಯಲ್ಲಿ ಒಬ್ಬ ಅಮೆರಿಕದ ಗಗನಯಾತ್ರಿ ಹಾಗೂ ಒಬ್ಬ ರಷ್ಯದ ಗಗನಯಾತ್ರಿ ಇನ್ನೂ ನಿರ್ಮಾಣದ ಹಂತದಲ್ಲಿರುವ ಆ ನಿಲ್ದಾಣದಲ್ಲಿ ವಾಸಿಸುತ್ತಿದ್ದರು. ಅದೇ ರೀತಿ ೨೦೦೫ ಪ್ರಾರಂಭದ ಹೊತ್ತಿಗೆ ಅಂತರಿಕ್ಷದಲ್ಲಿ ಮಾನವ ಸತತವಾಗಿ ವಾಸಿಸಿದ್ದ ಅವಧಿಯ ದಾಖಲೆ ೪೩೭ ದಿನಗಳು. ಆ ದಾಖಲೆಯನ್ನು ನಿರ್ಮಿಸಿದ ವ್ಯಕ್ತಿ ರಷ್ಯದ ವಲ್ಯೇರಿ ಪ್ಯೋಲ್ಯಾಕೋವ್ ಎಂಬ ಗಗನಯಾತ್ರಿ. ಅವರು ವಾಸಿಸಿದ್ದು ರಷ್ಯದ ಮಿಯರ್ ಅಂತರಿಕ್ಷ ನಿಲ್ದಾಣದಲ್ಲಿ.

೨. ಅಮೆರಿಕದ ಮಾನವಸಹಿತ ಅಂತರಿಕ್ಷ ನೌಕೆಗಳು: i. ಮರ್ಕ್ಯುರಿ ಯೋಜನೆ: ಈ ಯೋಜನೆಯ ಚಟುವಟಿಕೆಗಳನ್ನು ೧೯೫೮ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭಿಸಿದರು. ಇದರ ಮೊದಲು ಅಂದರೆ ೧೯೬೧ ಮೇ ತಿಂಗಳ ೫ರಂದು ಅಲೆನ್ ಬಿ. ಷಪರ್ಡ್ ಎಂಬುವನನ್ನು ಮರ್ಕ್ಯುರಿಕೋಶದಲ್ಲಿ ಕುಳ್ಳರಿಸಿ ಅದನ್ನು ರೆಡ್ ಸ್ಟೋನ್ ವಾಹಕ ರಾಕೆತ್ತನ್ನುಪಯೋಗಿಸಿ ೧೨೫ಕಿಮೀ ಎತ್ತರಕ್ಕೆ ಉಡಾಯಿಸಿದರು. ಅರೆವೃತ್ತಾಕಾರಪಥದಲ್ಲಿ ಗಂಟೆಗೆ ಸುಮಾರು ೮೦೦೦ಕಿಮೀ.ಗಳ ವೇಗದಲ್ಲಿ ಸಾಗಿದ ಈ ಅಂತರಿಕ್ಷನೌಕೆ ೧೫ ನಿಮಿಷಗಳಿಗಿಂತ ಸ್ವಲ್ಪ ಹೆಚ್ಚಿನ ಕಾಲ ಪ್ರಯಾಣ ಸಾಗಿಸಿತ್ತು. ಉಡಾವಣಾಕೇಂದ್ರದಿಂದ ೫೦೦ಕಿಮೀ. ದೂರದಲ್ಲಿ ಕೋಶ ಹಿಂತಿರುಗಿಬಂದು ಆತ ಸುರಕ್ಷಿತವಾಗಿ ಧರೆಗಿಳಿದ. ಈ ಪ್ರಯೋಗದಿಂದ ತೂಕರಹಿತಸ್ಥಿತಿ ಮಾನವನ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದರ ಬಗ್ಗೆ ಮಾಹಿತಿ ದೊರೆಯಿತು. ೧೯೬೨ ಫೆಬ್ರವರಿ ೨ರಂದು ಜಾನ್ ಗ್ಲೆನ್ ಎಂಬಾತನನ್ನು ಫ್ರೆಂಡ್ ಷಿಪ್-೭ ಎಂಬ ನೌಕೆಯಲ್ಲಿ ಕುಳ್ಳರಿಸಿ ಹಾರಿಸಿದರು. ಈತ ಭೂಮಿಯನ್ನು ೩ ಸಾರಿ ಸುತ್ತಿ ಸುರಕ್ಷಿತವಾಗಿ ಮರಳಿದ. ಅನಂತರ ಸ್ಕಾಟ್ ಕಾರ್ಪೆಂಟರ್ , ವಾಲ್ಟರ್ ಎಂ ಷಿರ್ರಾ ಮತ್ತು ಗೊರ್ಡಾನ್ ಕೂಪರ್ ಎಂಬುವವರನ್ನು ಹಾರಿಸಿದರು. ಮರ್ಕ್ಯುರಿ ಯೋಜನೆಯಲ್ಲಿ ಬಹಳಕಾಲ ಅಂದರೆ ೨೪ಗಂಟೆ ೨೦ ನಿಮಿಷಗಳು ಅಂತರಿಕ್ಷದಲ್ಲಿದ್ದವನೆಂದರೆ ಕೂಪರ್. ಮನುಷ್ಯ ಅಂತರಿಕ್ಷಯಾನದ ವಿವಿಧ ರೀತಿಯ ತೊಂದರೆಗಳನ್ನು ಅಪಾಯವಿಲ್ಲದೆ ಸಹಿಸಬಲ್ಲ ಎಂಬುದು ಈ ಯೋಜನೆಯ ಹಾರಾಟಗಳಿಂದ ಖಚಿತವಾಯಿತು.

ii. ಜೆಮಿನಿ ಯೋಜನೆ: ಈ ಯೋಜನೆಯಲ್ಲಿ ಹಾರಿದ ಪ್ರತಿ ನೌಕೆಯಲ್ಲೂ ಇಬ್ಬರು ಯಾನಿಗಳಿರುತ್ತಿದ್ದರು. ಮರ್ಕ್ಯುರಿ ನೌಕೆಗಳ ಭಾರ ಸುಮಾರು ೧೪೦೦ ಕಿಲೋಗ್ರಾಂಗಳಾದರೆ ಜೆಮಿನಿ ನೌಕೆಗಳ ಭಾರ ಸು.೩೫೦೦ ಕಿಲೋಗ್ರಾಂಗಳು. ಈ ಯೋಜನೆಯಲ್ಲಿ ಹಾರಿಸಲಾದ ನೌಕೆಗಳ ಒಟ್ಟು ಸಂಖ್ಯೆ ೧೨. ಜೆಮಿನಿ ಯೋಜನೆಯ ಉದ್ದೇಶಗಳೆಂದರೆ- ಅಂತರಿಕ್ಷದಲ್ಲಿ ಎರಡು ವಾರಗಳಷ್ಟು ಕಾಲ ಒಂದೇ ಸಮನೆ ಪ್ರಯಾಣ ಮಾಡುವ ಮಾನವ ಯಾವ ರೀತಿ ಅಲ್ಲಿನ ಪರಿಸ್ಥಿತಿಗಳನ್ನು ಸಹಿಸಿಕೊಳ್ಳಬಲ್ಲನೆಂಬುದನ್ನು ಅಧ್ಯಯನ ಮಾಡುವುದು, ಭೂ ಕಕ್ಷೆಯಲ್ಲಿರುವ ಅಂತರಿಕ್ಷ ನೌಕೆ ಒಂದನ್ನೊಂದು ಸಮೀಪಿಸಿ ಒಂದರೊಡನೊಂದು ಕೂಡುವ ತಂತ್ರದ ಅಧ್ಯಯನ, ಅಂತರಿಕ್ಷದಲ್ಲಿದ್ದು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸುವುದು ಮತ್ತು ಭೂವಾತಾವರಣದೊಳಕ್ಕೆ ಪುನಃ ಪ್ರವೇಶ ಹಾಗೂ ಮೊದಲೇ ಅರಿಸಿದ ಪ್ರದೇಶದಲ್ಲಿ ಬಂದಿಳಿಯುವ ವಿಚಾರ-ಇವುಗಳನ್ನು ಅಧ್ಯಯನ ಮಾಡುವುದು.

ಮರ್ಕ್ಯುರಿ ಕೋಶವನ್ನೇ ಹೋಲುತ್ತಿದ್ದು, ಗಾತ್ರದಲ್ಲಿ ಸುಮಾರು ೨ ೧/೨ ಯಷ್ಟಿತ್ತು, ತೂಕದಲ್ಲೂ ಗಮನಾರ್ಹವಾಗಿ ಹೆಚ್ಚಾಗಿದ್ದ ಜೆಮಿನಿ ಎಂಬ ಅಂತರಿಕ್ಷಕೋಶವನ್ನು ಈ ಕಾರ್ಯಕ್ರಮದಲ್ಲಿ ಬಳಸಲಾಯಿತು. ಈ ಶೀರ್ಷಿಕೆಯಲ್ಲಿ ವರ್ಜಿಲ್ ಗ್ರಿಸಮ್ ಮತ್ತು ಜಾನ್ ಡಬ್ಲ್ಯು ಯಂಗ್ ೧೯೬೫ ಮಾರ್ಚ್ ೨೨ರಂದು ಮೊದಲ ಯಾತ್ರೆಯನ್ನು ಕೈಗೊಂಡರು. ಇವರು ಭೂಮಿಯನ್ನು ಮೂರುಸಾರಿ ಸುತ್ತಿ ೪ಗಂಟೆ ೫೩ ನಿಮಿಷಗಳ ಕಾಲ ಅಂತರಿಕ್ಷದಲ್ಲಿದ್ದು ಮರಳಿದರು. ಅನಂತರ ೧೯೬೫ ಜೂನ್ ೩ರಂದು ಜೇಮ್ಸ್ ಎ. ಮೆಕ್‍ಡಿವಿಟ್ ಮತ್ತು ಎಡ್ವರ್ಡ್ ಎಚ್.ವೈಟ್ ಎಂಬುವರು ಸು. ೪ ದಿನಗಳ ಕಾಲ ಜೆಮಿನಿ-೪ರಲ್ಲಿ ಪ್ರಯಾಣ ಮಾಡಿದರು. ಗಂಟೆಗೆ ೨೮೦೦೦ ಕಿಮೀ.ಗಳ ಈ ಹಾರಾಟದಲ್ಲಿ ವೈಟ್ ನೌಕೆಯ ಹೊರಗೆ ಬಂದು ಅಂತರಿಕ್ಷದಲ್ಲಿ ಸುಮಾರು ೨೦ ನಿಮಿಷಗಳ ಕಾಲ ತೇಲಿದ. ಈತನಿಗೂ ನೌಕೆಗೂ ಸಂಪರ್ಕ ತಂತಿಗಳನ್ನೊಳಗೊಂಡ ೨೫ ಅಡಿ ಉದ್ದದ ಹಗ್ಗ ಕಟ್ಟಲ್ಪಟ್ಟಿತು. ಈ ಹಗ್ಗದ ಮೂಲಕ ಆತನಿಗೆ ಬೇಕಾದ ಆಮ್ಲಜನಕ ಸರಬರಾಜು ನಡೆಯಿತು.

೧೯೬೫ ಆಗಸ್ಟ್ ೨೧ರಂದು ಗೋರ್ಡನ್ ಕೂಪರ್ ಮತ್ತು ಚಾರ್ಲ್ಸ್ ಕೊನ್ರಾಡ್ ಎಂಬುವರು ಜೆಮಿನಿ-೫ರಲ್ಲಿ ಹಾರಿ ಎಂಟು ದಿನಗಳವರೆಗೂ ಅಂತರಿಕ್ಷದಲ್ಲಿದ್ದರು. ೧೯೬೫ ಡಿಸೆಂಬರ್ ೪ರಂದು ಫ್ರ್ಯಾಂಕ್ ಬೋರ್‍‍ಮನ್ ಮತ್ತು ಜೇಮ್ಸ್ ಲೊವೆಲ್ ಎಂಬುವರು