ಪುಟ:Mysore-University-Encyclopaedia-Vol-1-Part-2.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಂದರಿನ ಅಲೆತಡೆ ಈ ಮಾದರಿಯಲ್ಲಿದೆ. ಅಲೆತಡೆಗಳನ್ನು ಕಾಂಕ್ರೀಟಿನ ದಿಮ್ಮಿಗಳಿಂದ ವರಸೆಯಾಗಿ ಕಟ್ಟಿದ್ದಾರೆ. ಉಬ್ಬರವಿಳಿತದ ತಗ್ಗಿನ ನೀರಿನ ಮಟ್ಟದ ಮೇಲುಗಡೆ ಹೊರಗೋಡೆ ಯನ್ನು ಕಗ್ಗಲ್ಲುಗಾರೆಯಿಂದ ಕಟ್ಟಿದ್ದಾರೆ. ಈ ದಿಮ್ಮಿಗಳನ್ನು ಸಂಚರಿಸುವ ಕ್ರೇನುಗಳಿಂದ ಕೆಳಕ್ಕೆ ಇಳಿಸಲಾಯಿತು.ಇಂಗ್ಲೆಂಡಿನಲ್ಲಿ ಟೈನ್ ನದಿಯ ಮುಖದಲ್ಲಿರುವ ಎರಡು ಅಲೆತಡೆ ಗಳನ್ನು ಮೊದಲು ಸಂಕೀರ್ಣ ನಮೂನೆಯಲ್ಲಿ ಕಟ್ಟಿದರು. ಆದರೆ ಕೆಲವು ಕಾಲದ ಮೇಲೆ ಒಂದು ಕಂಬ ಅದರ ತಳಪಾಯ ಕೊರೆದು ಹೋದದ್ದರಿಂದ ಬಿರುಕು ಬಿಟ್ಟಿತು. ಅದನ್ನು ಆಮೇಲೆ ಡೋವರ್ ಬಂದರಿನ ಅಲೆತಡೆಯ ಮಾದರಿಯಲ್ಲಿ ಕಟ್ಟಿದರು. ಅಮೆರಿಕದ ಮಹಾಸರೋವರಗಳಲ್ಲಿ ಲಂಬವಾದ ಮುಖಗಳುಳ್ಳ ಅಲೆತಡೆಗಳನ್ನು ಇಳಿಸಿದ ಕೇಸಾನು ಗಳಿಂದ ಈ ನಮೂನೆಯ ಅಲೆತಡೆಗಳನ್ನು ಫ್ರಾನ್ಸಿನಲ್ಲಿ ಕಟ್ಟಿದ್ದಾರೆ. ಕಾಂಕ್ರೀಟಿನ ಕೇಸಾನುಗ ಳಿಂದಲೂ ಅಲೆತಡೆಗಳನ್ನು ಕಟ್ಟಬಹುದು.ಅಲೆತಡೆಗಳ ಸಂವಿಧಾನವನ್ನು ಮಾಡುವಾಗ ಒಂದೊಂದು ಕಟ್ಟಡದ ಮೇಲೂ ಬೀಳುವ ಅಲೆಗಳ ವೈಲಕ್ಷಣ್ಯ , ಅಲೆಗಳ ಒತ್ತಡಗಳನ್ನು ಪರಿಶೀಲಿಸಿ ಅಲೆತಡೆಯ ನಮೂನೆ ಮತ್ತು ಅದರ ಅಡ್ಡಕೊಯ್ತದ ರೂಪ (ಕ್ರಾಸ್ ಸೆಕ್ಷನ್) ಇವನ್ನು ನಿರ್ಧರಿಸಬೇಕು. (ಎಚ್.ಸಿ.ಕೆ. ಎಂ.ಜಿ.ಎಸ್)

ಅಲೆನ್ ಫ್ಲೇಗರ್ ಆ್ಯಡಂ ಗೊಟ್ಲಾಬ್:1770-1850. ಡೆನ್ಮಾರ್ಕಿನ ಕವಿ, ನಾಟಕಕಾರ. ಡೆನ್ಮಾರ್ಕಿನ ರೊಮ್ಯಾಂಟಿಕ್ ಪಂಥದ ಸಾರಸರ್ವಸ್ವವನ್ನು ಅವನ ನಡುಬೇಸಗೆ ಇರುಳಿನ ರೂಪಕವೆಂಬ ನಾಟಕೀಯ ಕವನದಲ್ಲಿ ಗುರುತಿಸಬಹುದು. ಪುರಾತನ ನಾರ್ಸ್ ಕಥಾನಕ ರೂಢಿಗಳನ್ನನುಸರಿಸಿ ಬರೆದ ಇವನ ಕವನ ಸಂಕಲನ ದೀರ್ಘ ಭವ್ಯಕಾವ್ಯಗಳಲ್ಲಿ ಹಾಗೂ ಗದ್ಯಕಥೆಗಳಲ್ಲಿ ಇವನ ಕಾವ್ಯಪ್ರಜ್ಞೆ, ಪ್ರಯೋಗಶೀಲ ಮನೋಧರ್ಮ ವ್ಯಕ್ತವಾಗಿವೆ. ಡೆನ್ಮಾರ್ಕಿನಲ್ಲಿ ಮೊಟ್ಟಮೊದಲು ಐತಿಹಾಸಿಕ ದುರಂತನಾಟಕವನ್ನು ರಚಿಸಿ ಪ್ರಸಿದ್ಧನಾದ ಇವನ ರಚನೆಗಳಲ್ಲಿನ ವಸ್ತುವೈವಿಧ್ಯವನ್ನು ತಂತ್ರಪರಿಣತಿಯನ್ನು ವಿಮರ್ಶಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. 1830ರಲ್ಲಿ ಈತ ತನ್ನ ಆತ್ಮಚರಿತ್ರೆಯನ್ನು ರಚಿಸಿದ. (ಎಚ್.ಕೆ.ಅರ್)

ಅಲೆನ್ಬಿ ಎಡ್‌ಮಂಡ್‌ ಹೆನ್ರಿ ಹೈನ್‌ಮನ್‌:1861-1936. ಪ್ರಸಿದ್ಧ ಬ್ರಿಟಿಷ್ ಯೋಧ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟನ್ನಿಗೂ ದಕ್ಷಿಣ ಆಫ್ರಿಕ, ಈಜಿಪ್ಟ್, ತುರ್ಕಿಸ್ಥಾನ ಮೊದಲಾದ ರಾಜ್ಯಗಳಿಗೂ ನಡೆದ ಯುದ್ಧಗಳಲ್ಲಿ ಬ್ರಿಟಿಷ್ ಅಶ್ವಪಡೆಯ ಮುಖಂಡನಾಗಿ ಪ್ಯಾಲೆಸ್ಟೈನಿನಲ್ಲಿ ಯುದ್ಧಮಾಡಿದ. ಮೆಡಿಟರೇನಿಯನ್ ಸಮುದ್ರದ ಮೇಲಿನ ಬ್ರಿಟನ್ನಿನ ಹತೋಟಿಯನ್ನೂ ಜೆರುಸಲೆಮ್ಮಿನ ರಕ್ಷಣಾಕಾರ್ಯವನ್ನೂ ಯಶಸ್ವಿಗೊಳಿಸಿ ಡಮಾಸ್ಕಸ್ ಮತ್ತು ಅಲೆಪ್ಪೊಗಳನ್ನು ಸ್ವಾಧೀನಪಡಿಸಿಕೊಂಡು, ತುರ್ಕಿ ಸೈನ್ಯವನ್ನು ಚದರಿಸಿ ಮಹತ್ಕಾರ್ಯ ಸಾಧಿಸಿದ್ದುದರಿಂದ ವೈಕೌಂಟ್ ಪದವಿಯನ್ನು ಗಳಿಸಿದ. 1919ರಿಂದ 1925ರವರೆಗೆ ಈಜಿಪ್ಟಿನ ಹೈಕಮಿಷನರಾಗಿ ಪಕ್ಷಪಾತವಿಲ್ಲದೆ ಸಹಾನುಭೂತಿಯಿಂದ ಕಾರ್ಯಭಾರಮಾಡಿ ಬ್ರಿಟಿಷ್ ಸೈನಿಕ ಇತಿಹಾಸದಲ್ಲಿ ಗಣ್ಯಸ್ಥಾನ ಪಡೆದಿದ್ದಾನೆ. (ಸಿ.ವಿ.ಅರ್)

ಅಲೆಪ್ಪಿ:ಭಾರತದ ಕೇರಳ ರಾಜ್ಯದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಜಿಲ್ಲೆ ಮತ್ತು ವ್ಯಾಪಾರ ಕೇಂದ್ರ. ಅಲಪುಲೈ, ಔಲಪುಲೈ ಎಂದೂ ಕರೆಯುತ್ತಾರೆ. 1958ರಲ್ಲಿ ಕ್ವಿಲಾನಿನ ಆರು ತಾಲ್ಲೂಕುಗಳ ಜೊತೆ ಕೊಟ್ಟಾಯಮ್‌ನ ಒಂದು ತಾಲ್ಲೂಕನ್ನು ಸೇರಿಸಿ ಈ ಜಿಲ್ಲೆಯನ್ನು ನಿರ್ಮಿಸಲಾಯಿತು. ವಿಸ್ತೀರ್ಣ ಸುಮಾರು 1841 ಚ.ಕಿಮೀ ಅಲೆಪ್ಪಿ ಪಟ್ಟಣ ಕೇರಳ ರಾಜ್ಯದ ಒಂದು ಸುರಕ್ಷಿತವಾದ ಪ್ರಮುಖ ರೇವುಪಟ್ಟಣಗಳಲ್ಲೊಂದು. ಕೊಚ್ಚಿನ್ ಪಟ್ಟಣದಿಂದ 40 ಕಿಮೀ ದೂರದಲ್ಲಿದೆ. ವಿಸ್ತೀರ್ಣ 32.4 ಚ.ಕಿಮೀ ಮತ್ತು ಜನಸಂಖ್ಯೆ 567850 (2001). 18ನೆಯ ಶತಮಾನದಿಂದಲೂ ಪ್ರಸಿದ್ಧಿ ಪಡೆದಿದೆ; ಇಂಗ್ಲಿಷರು 18ನೆಯ ಶತಮಾನದ ಕೊನೆಯವರೆಗೂ ಈ ರೇವಿನ ಮೂಲಕ ವ್ಯಾಪಾರ ನಡೆಸುತ್ತಿದ್ದರು. ರೈಲು ಅಥವಾ ಒಳ್ಳೆಯ ರಸ್ತೆ ಮಾರ್ಗಗಳಿಲ್ಲ. ಒಳನಾಡಿನ ಹೆಚ್ಚು ಸಂಚಾರಸೌಕರ್ಯ ಮತ್ತು ಸರಕುಗಳ ಸಾಗಾಣಿಕೆ ಕಾಲುವೆಗಳ ಮೂಲಕವೇ. ಜಿಲ್ಲೆಯ ಮುಖ್ಯ ಬೆಳೆ ತೆಂಗು. ಜನರ ಮುಖ್ಯ ಕಸುಬು ತೆಂಗಿನ ಎಣ್ಣೆ ತೆಗೆಯುವುದು. ತೆಂಗಿನ ನಾರು ಬಿಡಿಸುವುದು. ಚಾಪೆ ನೇಯುವುದು ಇತ್ಯಾದಿ; ರೇವುಪಟ್ಟಣದಿಂದ ಮುಖ್ಯವಾಗಿ ತೆಂಗು, ಜಮಖಾನಗಳು, ಏಲಕ್ಕಿ, ಮೆಣಸು ರಫ್ತಾಗುವುವು. ಇಲ್ಲಿ ಸನಾತನಧರ್ಮದ ಕಾಲೇಜಿದೆ; ಇದು ತಿರುವಾಂಕೂರು ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಸೇರಿದೆ. (ಎಸ್.ಎನ್.೧)

ಅಲೆಮಾರಿಜನ ಜೀವನ:ಒಂದು ಕಡೆ ಬಹುಕಾಲ ನೆಲೆಯಾಗಿ ನಿಲ್ಲದೆ, ಜೀವನೋಪಾಯಕ್ಕಾಗಿ ಸ್ಥಳದಿಂದ ಸ್ಥಳಕ್ಕೆ ಅಲೆಯುವ ಜನಕ್ಕೆ ಅಲೆಮಾರಿಗಳೆನ್ನುತ್ತಾರೆ (ನೋಮ್ಯಾಡ್ಸ್).

ಪ್ರಾಚೀನ ಮಾನವನ ಇತಿಹಾಸವನ್ನು ಪರೀಶೀಲಿಸಿದಾಗ, ಆತ ತನ್ನ ಜೀವನೋಪಾಯಕ್ಕಾಗಿ ಬೇಟೆಯಾಡುವುದು, ಮೀನು ಹಿಡಿಯುವುದು, ವ್ಯವಸಾಯ, ಪಶುಪಾಲನೆ-ಮುಂತಾದುವನ್ನು ಅವಲಂಬಿಸಿಕೊಂಡಿದ್ದದು ಕಂಡುಬರುತ್ತದೆ. ವ್ಯವಸಾಯ ಮತ್ತು ಪಶುಪಾಲನೆಗೆ ನೀರು ಅತ್ಯಗತ್ಯ. ಮೀನು ಹಿಡಿಯುವುದಕ್ಕೂ ಬೇಟೆಗೂ ತಕ್ಕ ಸನ್ನಿವೇಶ ಸದಾಕಾಲವೂ ಒಂದೇ ಸ್ಥಳದಲ್ಲಿ ದೊರೆಯದಿದ್ದಾಗ, ಜಲದ ಅಭಾವ ತಲೆದೋರಿದಾಗ ಅವನ್ನರಸಿಕೊಂಡು ಮನುಷ್ಯ ಅಲೆದಾಡುವುದು ಸ್ವಾಭಾವಿಕ. ಈ ದೃಷ್ಟಿಯಿಂದ ಆದಿಮಾನವ ಅಲೆಮಾರಿಯಾಗಿ ತನ್ನ ಜೀವನವನ್ನು ಪ್ರಾರಂಭಿಸಿದನೆನ್ನಬಹುದು.

ಹಳೆ ಮತ್ತು ನವ ಶಿಲಾಯುಗದ ಜನ ಚೂಪಾದ ಕಲ್ಲಿನ ಆಯುಧಗಳಿಂದ ಮೃಗಗಳನ್ನು ಬೇಟೆಯಾಡಿ, ಗೆಡ್ಡೆಗೆಣಸುಗಳನ್ನು ಅಗೆದು ತಿಂದು ಜೀವನ ನಡೆಸುತ್ತಿದ್ದರಾದ ಕಾರಣ ಅಲೆಮಾರಿತನ ಅವರಿಗೆ ಸ್ವಾಭಾವಿಕವಾಗಿತ್ತು. ಬರಬರುತ್ತ ನಾಗರಿಕತೆ ಹಾಗೂ ಸಂಸ್ಕೃತಿ ಹುಟ್ಟಿ ಬೆಳೆದಂತೆ ಅವರಲ್ಲಿ ಕೆಲವು ಜನ ಸ್ಥಿರ ವಸತಿಗಳನ್ನು ಕಲ್ಪಿಸಿಕೊಂಡು ವಾಸಿಸತೊಡಗಿದರೂ ಮತ್ತೆ ಕೆಲವರು ಅಲೆಮಾರಿ ಜೀವನವನ್ನೇ ಮುಂದುವರೆಸಿದರು.

ನಾಗರಿಕ ಮಾನವ ಹಳ್ಳಿ, ಊರು, ಪಟ್ಟಣಗಳನ್ನು ನಿರ್ಮಿಸಿಕೊಂಡು ನೆಲೆನಿಲ್ಲಲು ಪ್ರಾರಂಭಿಸಿದಂತೆ ಸುತ್ತಲಿನ ಅರಣ್ಯಗಳು ಹಾಳಾದುವಲ್ಲದೆ ಅವನ್ನೇ ಆಶ್ರಯಿಸಿದ್ದ ಪ್ರಾಣಿಗಳೂ ಇಲ್ಲವಾದುವು; ಅಥವಾ ಕಾಡಿನೊಂದಿಗೆ ಹಿಂದೆ ಹಿಂದೆ ಸರಿದು ದೂರದ ಅರಣ್ಯಗಳನ್ನು ಸೇರಿದುವು. ನಾಗರಿಕ ಜೀವನದ ಬಗ್ಗೆ ಅವರಿಗಿದ್ದ ಸಹಜ ಭಯ ಮತ್ತು ತಮ್ಮ ಜೀವನಕ್ರಮ ದಲ್ಲಿ ಅವರಿಗಿದ್ದ ಆಸ್ಥೆ-ಈ ಕಾರಣಗಳಿಂದಾಗಿ ಅವರು ಹಾಗೆ ಮಾಡಿರಬಹುದು. ಪ್ರಪಂಚದ ಎಲ್ಲ ಭಾಗಗಳಲ್ಲೂ ಅಲೆಮಾರಿ ಜೀವನ ನಡೆಸುವ ಜನಾಂಗಗಳು ಇವತ್ತಿಗೂ ಕಂಡು ಬರಲು ಇದೇ ಕಾರಣವಿರಬೇಕು. ಇದಕ್ಕೆ ಉತ್ತರ ಅಮೆರಿಕದ ಎಸ್ಕಿಮೊಗಳು, ಆಸ್ಟ್ರೇಲಿಯದ ಮೂಲನಿವಾಸಿಗಳು, ಆಫ್ರಿಕದ ಬುಷ್ ಜನ, ಅಂಡಮಾನಿನ ನಿವಾಸಿಗಳು-ಮುಂತಾದವರು ಇದಕ್ಕೆ ಉತ್ತಮ ನಿದರ್ಶನ. ನಿಂತ ಕಡೆ ನಿಲ್ಲದೆ ಸದಾಕಾಲ ಅಲೆಯುವುದರಲ್ಲಿ ಅಗ್ರಗಣ್ಯರೆಂದರೆ ಜಿಪ್ಸಿಗಳು. ಇವರು ಪ್ರಪಂಚದ ಎಲ್ಲ ಭಾಗಗಳಲ್ಲೂ ಕಂಡುಬರುವರು.

ಅಲೆಮಾರಿಜೀವನದ ದೃಷ್ಟಾಂತವಾಗಿ ಬೇಟೆಯಾಡುವ, ಗೆಡ್ಡೆಗೆಣಸು ಕೂಡಿಡುವ, ಪಶುಪಾಲನೆಯಿಂದ ಜೀವಿಸುವ ಜನರನ್ನು ನೋಡಬಹುದು. ಅಲೆಮಾರಿಜೀವನದ ಜೀವಾಳವೆಂದರೆ ಪಶುಪಾಲನಾವೃತ್ತಿ. ದ್ರಾವಿಡರು ಭಾರತಕ್ಕೆ ವಲಸೆಬಂದವರೆಂದು ಹೇಳುತ್ತಾರೆ. ಅವರಿಗಿಂತ ಹಿಂದಿನವರಾದ ಕೋಲರೂ ಅಲೆಮಾರಿಗಳೇ. ಅನಂತರ ಮಧ್ಯ ಏಷ್ಯದಿಂದ ಆರ್ಯರು ವಲಸೆ ಬಂದರು. ಅವರ ಮುಖ್ಯ ವೃತ್ತಿ ಪಶುಪಾಲನೆಯಾಗಿತ್ತು. ದನಗಳ ಮೇವು ನೀರಿಗಾಗಿ ಅವರು ದೇಶದಿಂದ ದೇಶಕ್ಕೆ ಅಲೆಯುತ್ತ ಬಂದರು.

ಆಂಧ್ರಪ್ರದೇಶದ ಇರ್ಕುಳ ಮತ್ತು ಎನ್ನಡಿಗಳು ಹಕ್ಕಿಗಳನ್ನು ಬೇಟೆಯಾಡಿ ಜೀವನ ನಡೆಸುತ್ತಾರೆ. ಬಿರ್ಹರ್, ಕ್ಹರಿಯಾ, ಚೆಂಚು, ಮಲಪನ್ತರಂ, ಕಾಡಾರರು, ಪಾಳಿಯನ್, ಪನಿಯನ್, ಕುರುಂಬ ಮುಂತಾದವರು ಗೆಡ್ಡೆಗೆಣಸನ್ನು ಅಗೆದು ಶೇಖರಿಸಲು ಸುತ್ತಮುತ್ತಲ ಕಾಡುಮೇಡುಗಳಲ್ಲಿ ಅಲೆಯುತ್ತಾರೆ. ನೀಲಗಿರಿಯ ತೋಡರು, ಉತ್ತರಭಾರತದ ಗಾಡ್ಡಿಗಳು ಪಶುಪಾಲನೆಯಿಂದ ಜೀವನ ನಡೆಸುತ್ತಾರೆ. ಗಾಡ್ಡಿಗಳು ತಮ್ಮ ಕುರಿಮಂದೆಯೊಡನೆ ಹಿಮಾಲಯದ ದಟ್ಟ ಪ್ರದೇಶಗಳಲ್ಲಿ ಹವಾಮಾನಕ್ಕನುಗುಣವಾಗಿ ಸಂಚರಿಸುತ್ತಾರೆ. ತೋಡರು ತಮ್ಮ ಎಮ್ಮೆ ಹಿಂಡಿನೊಡನೆ ಮೇವಿಗಾಗಿ ನೀಲಗಿರಿಯ ದಟ್ಟ ಮೈದಾನದಲ್ಲೆಲ್ಲ ಸಂಚರಿಸುತ್ತಾರೆ. ಗೊತ್ತಾದ ನೆಲೆಯಿಲ್ಲದೆ, ಚಿರಕಾಲ ಅಲೆಮಾರಿಯಾಗಿ ಅಥವಾ ಒಂದು ಸ್ಥಳಕ್ಕೆ ಎರಡನೆಯ ಸಲ ಹಿಂತಿರುಗಿ ಬರದೆ ಅಲೆಯುವ ಜನಾಂಗ ಯಾವುದೂ ಇಲ್ಲ.

ಕರ್ನಾಟಕ ರಾಜ್ಯದಲ್ಲಿ ಅಲೆಮಾರಿ ಜೀವನ ನಡೆಸುವ ಕೆಲವು ಜನಾಂಗಗಳಿವೆ. ಅನೇಕ ದಶಕಗಳ ಹಿಂದೆ ಲಂಬಾಣಿ, ಮಣ್ಣು ಒಡ್ಡರು, ಕೊರಚ, ಕೊರಮ, ಬುಡಬುಡಿಕೆ, ಮೊಂಡರು, ಡೊಂಬರು, ಹಾವಾಡಿಗರು, ಶಿಳ್ಳೆಕ್ಯಾತ, ಹಂದಿಜೋಗಿ, ಸೋಲಿಗರು, ಇರುಳಿಗರು, ಯರವರು, ಮುಂತಾದವರೆಲ್ಲ ಅಲೆಮಾರಿ ಜೀವನವನ್ನೇ ಅವಲಂಬಿಸಿದ್ದರು. ಇತ್ತೀಚೆಗೆ ಈ ಜನಾಂಗಗಳಲ್ಲಿ ಅನೇಕರು ಸ್ಥಿರಜೀವನ ನಡೆಸಲು ಸರ್ಕಾರ ವಸತಿ ಮತ್ತು ಸಣ್ಣಪುಟ್ಟ ಕೈಗಾರಿಕೆ ವಗೈರೆ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಆದರೂ ಈ ಜನಾಂಗದವರೆಲ್ಲ ಅಲೆಯುವುದನ್ನು ಸಂಪುರ್ಣ ಬಿಟ್ಟಿಲ್ಲ. ಜೀವನೋಪಾಯಕ್ಕಾಗಿ ಅಲೆಯುವ ಈ ಜನ ಏನಾದರೊಂದು ಕಸುಬನ್ನು ಅವಲಂಬಿಸಿಯೇ ಇರುತ್ತಾರೆ