ಪುಟ:Mysore-University-Encyclopaedia-Vol-1-Part-2.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸನ್‍ಸಾಲ್- ಅಸಮತೆ, ಆರ್ಥಿಕ

ಉದ್ಭವಿಸಿದ್ದು ಎಂಬುದರಿಂದ ಈ ವಾದವನ್ನು ಆರಂಭವಾದವೆಂದೂ ಕರೆಯುವುದುಂಟು. ವೈಶೇಷಿಕದಾರ್ಶನಿಕರೂ ಅಸತ್ಕಾರ್ಯವಾದಿಗಳು. ಉದಾಹರಣೆಗಾಗಿ, ದಾರ ಮತ್ತು ಬಟ್ಟೆ ಈ ಎರಡು ವಸ್ತುಗಳನ್ನು ತೆಗೆದುಕೊಳ್ಳೋಣ. ದಾರ ಬಟ್ಟೆಗೆ ಕಾರಣ. ಬಟ್ಟೆ ದಾರದಿಂದ ಹುಟ್ಟಿದ ಕಾರ್ಯ. ಏಕೆಂದರೆ ದಾರವಿಲ್ಲದೆ ಬಟ್ಟೆ ಇಲ್ಲ, ಬಟ್ಟೆ ಇದ್ದ ಕಡೆಗಳಲ್ಲೆಲ್ಲ ದಾರವಿದೆ. ದಾರ ಬಟ್ಟೆಗೆ ಕಾರಣ ಎಂಬ ವಿಚಾರದಲ್ಲಿ ಸತ್ಕಾರ್ಯವಾದಿಗಳು ಬಟ್ಟೆ ದಾರದಿಂದ ಭಿನ್ನವಲ್ಲ, ಅದು ದಾರದ ಒಂದು ಪರಿಣಾಮ ಎನ್ನುತ್ತಾರೆ. ಕಾರಣವಾದ ದಾರದಲ್ಲಿ ಬಟ್ಟೆಯಾಗುವ ಪರಿಣಾಮಶಕ್ತಿ ಇಲ್ಲದಿದ್ದರೆ, ಆ ಶಕ್ತಿ ಕಾರಣಕ್ಕೆ ಆಂತರಿಕವಾಗಿಲ್ಲದಿದ್ದರೆ, ಅದು ಬಟ್ಟೆಯಾಗಲಾರದು. ಕಾರ್ಯ ಕಾರಣಕ್ಕೆ ಬಾಹಿರವಾಗಿದ್ದ ಪಕ್ಷದಲ್ಲಿ ಈ ಕಾರ್ಯಕ್ಕೆ ಇದೇ ಕಾರಣವಿರಬೇಕೆಂಬ ಅಗತ್ಯವಿರುವುದಿಲ್ಲ; ಹಾಗಿದ್ದರೆ ಯಾವುದರಿಂದ ಯಾವುದಾದರೂ ಆಗಬಹುದು. ಮರಳಿನಿಂದ ದಾರವೂ ಗಾಳಿಯಿಂದ ಗಡಿಗೆಯೂ ಆಗಬಹುದು. ಇದು ಸಾಧ್ಯವಿಲ್ಲವೆಂಬುದು ಅನುಭವಸಿದ್ಧ. ಆದ್ದರಿಂದ ಕಾರ್ಯ ಕಾರಣಕ್ಕೆ ಬಾಹಿರ ಮತ್ತು ಭಿನ್ನ ಎಂಬುದು ಅನುಭವಕ್ಕೆ ವಿರೋಧವಾಗಿದೆ. ಇದಕ್ಕೆ ಪ್ರತಿಯಾಗಿ ಅಸತ್ಕಾರ್ಯವಾದಿಗಳು ಕಾರ್ಯ ಕಾರಣದಿಂದ ಬೇರೆಯಲ್ಲ ಎಂಬುದೂ ಅನುಭವಸಿದ್ಧವೆಂದು ವಾದಿಸುತ್ತಾರೆ. ಕಾರ್ಯವೂ ಕಾರಣದಲ್ಲಿ ಇದ್ದುದೇ ಆದ ಪಕ್ಷದಲ್ಲಿ, ಕಾರ್ಯ ಕಾರಣದಲ್ಲಿ ಅಡಗಿದ್ದ ಪಕ್ಷದಲ್ಲಿ ಕಾರ್ಯದಲ್ಲಿರುವ ಗುಣ ಮತ್ತು ಕ್ರಿಯೆಗಳು ಕಾರಣದಲ್ಲೂ ಇದ್ದಿರಬೇಕು. ಬಟ್ಟೆಯನ್ನು ಉಡುತ್ತೇವೆ, ಗಡಿಗೆಯಲ್ಲಿ ನೀರು ತುಂಬಿರುತ್ತೇವೆ. ಬಟ್ಟೆಗೆ ಕಾರಣವಾದ ದಾರವನ್ನು ಉಡಲಾಗುವುದೋ? ಗಡಿಗೆಗೆ ಕಾರಣವಾದ ಮಣ್ಣಿನಿಂದ ನೀರು ತುಂಬಿ ತರಲು ಸಾಧ್ಯವೋ? ಆದ್ದರಿಂದ ಕಾರ್ಯ ಕಾರಣದಿಂದ ಬೇರೆಯಾಗಿದ್ದರೇನೆ ಅದು ನಮ್ಮ ಜೀವನದ ಎಲ್ಲ ವ್ಯವಹಾರಗಳಿಗೂ ಸಂಗತವಾಗಿರುವುದು. ಮಾಧ್ವದಾರ್ಶನಿಕರು ಈ ಎರಡು ವಾದಗಳಲ್ಲೂ ಸ್ವಲ್ಪಮಟ್ಟಿಗೆ ಸತ್ಯವಿದೆ, ಸ್ವಲ್ಪಮಟ್ಟಿಗೆ ಮಿಥ್ಯಾಂಶವಿದೆ ಎಂದು ತೋರಿಸುತ್ತಾರೆ. ದಾರದಿಂದ ಬಟ್ಟೆ ಏರ್ಪಟ್ಟಾಗ ದಾರಕ್ಕೂ ಬಟ್ಟೆಗೂ ಭೇದವಿಲ್ಲ. ದಾರ ಬಟ್ಟೆಗೆ ಆಂತರಿಕ, ಬಟ್ಟೆ ದಾರಕ್ಕೆ ಆಂತರಿಕ. ಆದರೆ ಬಟ್ಟೆಯಾಗುವುದಕ್ಕೆ ಮುಂಚೆ ಅಥವಾ ಬಟ್ಟೆಯಿಂದ ಎಲ್ಲ ದಾರದ ಎಳೆಗಳನ್ನೂ ಎಳೆದು ಹಾಕಿದಾಗ ಆ ಅವಸ್ಥೆಯಲ್ಲಿ ದಾರವೇ ಬೇರೆ ಬಟ್ಟೆಯೇ ಬೇರೆ, ಇದು ಭೇದಾಭೇದಿಗಳ ವಾದ. (ಜಿ.ಎಚ್.)

ಅಸನ್‍ಸಾಲ್: ಪಶ್ಚಿಮಬಂಗಾಲದ ಬರ್ದವಾನ್ ಜಿಲ್ಲೆಯ, ದಾಮೋದರ್ ನದೀಕಣಿವೆಯಲ್ಲಿರುವ ಒಂದು ನಗರ. ರಾಣಿಗಂಜ್ ಕಲ್ಲಿದ್ದಲು ಗಣಿಗಳ ಹತ್ತಿರ, ಪೂರ್ವರೈಲ್ವೆಯಲ್ಲಿ, ಕೋಲ್ಕತದಿಂದ ೨೧೨ ಕಿಮೀ ದೂರದಲ್ಲಿದೆ. ವಿಸ್ತೀರ್ಣ೧೦.೪ ಚ.ಕಿಮೀ. ಜನಸಂಖ್ಯೆ ೪,೭೫,೪೩೯(೨೦೦೧). ಗ್ರಾಂಡ್ ಟ್ರಂಕ್ ರಸ್ತೆ ನಗರದ ಪೂರ್ವದಿಂದ ಪಶ್ಚಿಮಕ್ಕೆ ಹಾದುಹೋಗುತ್ತದೆ. ಇದೊಂದು ಕೈಗಾರಿಕನಗರ, ಕಲ್ಲಿದ್ದಲ್ಲಿನ ಮಾರಾಟ ಕೇಂದ್ರ ಮುಖ್ಯರೈಲ್ವಯ್ ನಿಲ್ದಾಣ. ಇಲ್ಲಿ ಇದು ರೈಲ್ವೆ ಕಾಲೋನಿ ಮತ್ತು ಕಾರ್ಯಗಾರಗಳಿವೆ. ಉಪನಗರವಾದ ಜಿಕೆ ನಗರದಲ್ಲಿ ದೊಡ್ಡ ಅಲ್ಯೂಮಿನಿಯಂ ಕಾರ್ಖಾನೆ ಇದೆ. ದೊಡ್ಡ ದೊಡ್ಡ ಕಬ್ಬಿಣದ ಕುಲುಮೆಗಳಿವೆ. ರಾಸಾಯನಿಕ ಹಾಗೂ ತಾಂತ್ರಿಕ ವಸ್ತುಗಳನ್ನು ಉತ್ಪಾದಿಸುತ್ತಾರೆ. (ಕೆ.ಎನ್.ಸಿ.)

ಅಸಫ್ ಝಾ I : ೧೬೭೦-೧೭೪೮. ಔರಂಗಜೇಬನ ಪ್ರಮುಖ ದಳಪತಿಯಾಗಿದ್ದ ತುರಾನವಂಶದ ಫಯಾಸುದ್ದೀನ್‍ನ ಮಗ, ದಖನ್ನಿನ ನಿಜಾಮವಂಶದ ಮೂಲಪುರುಷ. ತಂದೆಯಂತೆ ಇವನೂ ಯುದ್ಧಕಲೆಯಲ್ಲಿ ಪರಿಣಿತನಾಗಿ ಔರಂಗಜೇಬಿನಿಂದ ಗೌರವಿಸಲ್ಪಟ್ಟ. ಹೀಗೆ ಪ್ರಭಾವವನ್ನು ಹೆಚ್ಚಿಸಿಕೊಂಡು ೧೭೧೩ರಲ್ಲಿ ಔರಂಗಜೇಬಿನ ವಂಶಿಕನಾದ ಫರುಖ್‍ಶಿಯಾರ್‍‍ನಿಗೆ ಸಹಾಯಮಾಡಿ ಅವನ ವಿಜಯಕ್ಕೆ ಮುಖ್ಯ ಕಾರಣನೆನಸಿದ. ಇದರಿಂದ ಇವನಿಗೆ ಔರಂಗಾಬಾದ್ ಸೇರಿದಂತೆ ದಕ್ಷಿಣಾಪಥದ ಆರು ಪ್ರಾಂತ್ಯಗಳು ಬಳುವಳಿಯಾಗಿ ಬಂದುವು. ನಿಜಾಮ್-ಉಲ್-ಮುಲ್ಕ್ ಎಂಬ ಬಿರುದೂ ದೊರಕಿತು. ಆದರೆ ಮಾರನೆಯ ವರ್ಷವೇ ಈ ಸುಬಾಗಳು ಇವನ ಕೈಬಿಟ್ಟುಹೋದುವು. ಕೋಪಗೊಂಡ ನಿಜಾಮ ಮುರಾದಾಬಾದನ್ನು ಸೇರಿದ. ಆದರೆ ದಿಲ್ಲಿಯ ಸಾಮ್ರಾಟನ ಅಪ್ಪಣೆಯ ಮೇರೆಗೆ ಅಲ್ಲಿಂದಲೂ ಇವನನ್ನು ಕರೆತರಲಾಯಿತು. ಕೊನೆಗೆ ೧೭೧೯ರಲ್ಲಿ ಈತ ಮಾಳ್ವದೇಶದ ಅಧಿಕಾರಿಯಾಗಿ ನೇಮಕಗೊಂಡ. ನಿಜಾಮ ದಖನ್ನಿನ ಗಣ್ಯಾಧಿಕಾರಿಯಾಗಬೇಕೆಂಬ ಆಶಯದಿಂದ, ಸಾಮ್ರಾಟನ ಅಪ್ಪಣೆಯನ್ನೂ ಲೆಕ್ಕಿಸದೆ ನರ್ಮದಾನದಿಯನ್ನು ದಾಟಿ ಅಸೀರ್ಫರ್ ಮತ್ತು ಬುರ್ಹಾನ್‍ಪುರಗಳನ್ನು ಆಕ್ರಮಿಸಿಕೊಂಡ. ಹೀಗೆಯೇ ಬಿಟ್ಟರೆ ತೊಂದರೆಯುಂಟಾಗಬಹುದೆಂದು ಸಾಮ್ರಾಟ ಇವನನ್ನು ೧೭೨೨ರಲ್ಲಿ ತನ್ನ ವಜ಼ೀರನನ್ನಾಗಿ ನೇಮಿಸಿದ. ಪರಿಸ್ಥಿತಿಗಳು ಸರಿಬಾರದ್ದರಿಂದ ನಿಜಾಮ ಗುಜರಾತಿನ ಸರ್ವಾಧಿಕಾರಿಯಾದ(೧೭೨೪). ಹೈದರಾಬಾದಿಗೆ ಬಂದು ಮುಬಾರಿಸ್‍ಖಾನನನ್ನು ಸೋಲಿಸಿ ದಖನ್ ಪ್ರದೇಶವನ್ನು ತನ್ನ ವಶಮಾಡಿಕೊಂಡ. ಇದೇ ನಿಜಾಮರ ವಂಶಕ್ಕೆ ತಳಹದಿಯಾಯಿತು. ಮರಾಠರು ಸುಲ್ತಾನನ ಮೇಲೆ ಯುದ್ಧಮಾಡಲು ಹವಣಿಸಿದಾಗ, ಸುಲ್ತಾನನಿಗೆ ನಿಜಾಮನ ಆವಶ್ಯಕತೆ ತಲೆದೋರಿತು. ಕೂಡಲೇ ಅವನನ್ನು ದೆಹಲಿಗೆ ಬರಮಾಡಿ ಬಿರುದು ಬಾವಲಿಗಳನ್ನು ಕೊಟ್ಟು, ಮರಾಠರ ಮೇಲೆ ಯುದ್ಧಮಾಡಲು ಪ್ರೋತ್ಸಾಹಿಸಿದ. ಭೂಪಾಲಿನಲ್ಲಿ ನಡೆದ ಯುದ್ಧದಲ್ಲಿ ನಿಜಾಮ ಸೋತ(೧೭೩೦). ಗೋಲ್ಕೊಂಡದಿಂದ ಆರ್ಕಾಟಿಗೆ ಹೋಗಿ ಅನ್ವರುದ್ದೀನ್‍ಖಾನನನ್ನು ಅಲ್ಲಿಯ ಸರ್ವಾಧಿಕಾರಿಯನ್ನಾಗಿ ನಿಯಮಿಸಿದ(೧೭೪೩). ಮುರಾರಿರಾಯನಿಂದ ತಿರುಚಿನಾಪಳ್ಳಿಯನ್ನು ವಶಪಡಿಸಿಕೊಂಡ. ಇವೆಲ್ಲವನ್ನೂ ಗಮನಿಸಿದ ಬ್ರಿಟಿಷ್ ಮತ್ತು ಫ್ರೆಂಚ್ ವ್ಯಾಪಾರಿಗಳು ಇವನೇ ದಕ್ಷಿಣ ಭಾರತದ ಅತಿ ಪ್ರಬಲರಾಜನೆಂದು ಪರಿಗಣಿಸಿ ಕಾಣಿಕೆಗಳನ್ನು ಕಳುಹಿಸಿದರು. ಕಡಪ, ಕರ್ನೂಲು, ರಾಜಮಹೇಂದ್ರಿಗಳೂ ಇವನ ಆಳ್ವಿಕೆಗೆ ಸೇರಿದವು. ಇದರಿಂದ ಇವನ ಪ್ರಭಾವ ಹೆಚ್ಚಿತು. (ಎಚ್.ಜಿ.ಬಿ.)

ಅಸಫ್ ಝಾ II :ಅಸಫ್ ಝಾ I ನ ಮರಣಾನಂತರ ರಾಜನಾದ ಅವನ ಮಗ ಸಲಾಬತ್‍ಖಾನನ ತಮ್ಮ. ನಿಜಾಮ್ ಎಂದು ಹೆಸರು. ಸಲಾಬತ್‍ಖಾನ್ ಇವನನ್ನು ೧೭೫೯ರಲ್ಲಿ ರಾಜ್ಯದ ಮುಖ್ಯಾಧಿಕಾರಿಯನ್ನಾಗಿ ನಿಯಮಿಸಿದ. ಮುಂದಿನ ವರ್ಷವೇ ಮರಾಠೆಯ ಸದಾಶಿವರಾಯನೊಡನೆ ನಡೆದ ಯುದ್ಧದಲ್ಲಿ ಉದ್ಗೀರ್ ಎಂಬಲ್ಲಿ ನಿಜಾಮ್ ಸೋತ. ಅವಮಾನಿತನಾಗಿ ಮತ್ತೆ ೧೭೬೨ರಲ್ಲಿ ಮರಾಠರ ಮೇಲೆ ಕಾದಿ, ಸೋತು ಪುಣೆಯ ಸಮೀಪದ ಉರುಳಿ ಎಂಬಲ್ಲಿ ಓಡಿಹೋದ. ಬಿದರೆ ರಾಜ್ಯಕ್ಕೆ ಬಂದು ೧೭೬೨ರಲ್ಲಿ ಸಹೋದರ ಸಲಾಬತ್‍ಖಾನನನ್ನು ಸೆರೆಯಲ್ಲಿಟ್ಟು ತಾನೆ ರಾಜನಾದ. ಮೊಗಲ್ ಸಾಮ್ರಾಟ ಷಾ ಆಲಮ್ ಇವನಿಗೆ ನಿಜಾಮ್-ಉಲ್-ಮುಲ್ಕ್ ಎರಡನೆಯ ಅಸಫ್ ಝಾ ಎಂಬ ಬಿರುದನ್ನು ದಯಪಾಲಿಸಿದ. ಸ್ವಲ್ಪ ಕಾಲದವರೆಗೆ ಮರಾಠರ ಸ್ನೇಹಿತನಾಗೂ ಆನಂತರ ಹೈದರನ ಪಕ್ಷವನ್ನು ವಹಿಸಿಯೂ ತನ್ನ ರಾಜ್ಯವಿಸ್ತರಣೆಗೆ ಹೊಂಚು ಹಾಕುತ್ತಿದ್ದ. ೧೭೯೫ರಲ್ಲಿ ಇವನಿಗೂ ಮರಾಠರಿಗೂ ಖರ್ಡ ಎಂಬಲ್ಲಿ ಆದ ಯುದ್ಧದಲ್ಲಿ ಈತ ಸೋತು ಮೂರು ವರ್ಷಗಳಲ್ಲಿ ಐದುಕೋಟಿ ರೂಪಾಯಿಗಳನ್ನು ಕೊಡುವುದಾಗಿಯೂ ದೌಲತಾಬಾದ್ ಕೋಟೆಯನ್ನು ಬಿಟ್ಟುಕೊಡುವುದಾಗಿಯೂ ಒಪ್ಪಂದವನ್ನು ಮಾಡಿಕೊಂಡನಾದರೂ ಅದನ್ನು ಪಾಲಿಸಲಿಲ್ಲ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಇಂಗ್ಲಿಷರು ಮತ್ತು ಮರಾಠರೊಡನೆ ಟಿಪ್ಪುಸುಲ್ತಾನನ ಮೇಲೆ ೧೭೯೯ರಲ್ಲಿ ದಂಡೆತ್ತಿಹೋದ. ಟಿಪ್ಪುವಿನ ಮರಣಾನಂತರ ಕಾರ್ನ್‍ವಾಲೀಸ್ ಈಶಾನ್ಯದ ಕೆಲವು ಭಾಗಗಳನ್ನು ನಿಜಾಮನಿಗೆ ಬಳುವಳಿಯಾಗಿ ಕೊಟ್ಟ. ೧೮೦೦ರಲ್ಲಿ ಬ್ರಿಟಿಷರಿಗೆ ಕೋಡಬೇಕಾದ ವಾರ್ಷಿಕ ಕಾಣಿಕೆಯನ್ನು ಕೊಡಲಿಲ್ಲವೆಂಬ ಕಾರಣದಿಂದ ರಾಜ್ಯದ ಕೆಲವು ಭಾಗಗಳು ಬ್ರಿಟಿಷರ ರಾಜ್ಯಕ್ಕೆ ಸೇರಿಹೋದವು. ಯುದ್ಧಗಳಿಂದ ಬೇಸತ್ತು ವ್ರುದ್ಧನಾಗಿದ್ದ ನಿಜಾಮ್ ೧೮೦೨ರಲ್ಲಿ ಮರಣ ಹೊಂದಿದ. (ಎಚ್.ಜಿ.ಬಿ.)

ಅಸಮತೆ, ಆರ್ಥಿಕ: ಬಡವ ಬಲ್ಲಿದ ಎಂಬ ವ್ಯಾವಹಾರಿಕ ಭೇದದ ಹಿಂದಿರುವ ಶಾಸ್ತ್ರೀಯ ಅಭಿಪ್ರಾಯ(ಇನ್‍ಈಕ್ವಾಲಿಟಿ). ಇವೆರಡು ಹಂತಗಳ ನಡುವೆ ಈಚೆಗೆ ಮಧ್ಯವರ್ಗವೆಂಬ ಮೂರನೆಯ ಹಂತವನ್ನು ನಿರ್ಮಿಸಲಾಗಿದೆ. ಇರುವ ಆಸ್ತಿ, ಗಳಿಸಿದ ಸಂಪಾದನೆ, ಬರುವ ಸಂಬಳ ಆದಾಯಗಳ ಮೇಲೆ ಈ ಬಗೆಯ ವರ್ಗೀಕರಣ ಮಾಡಲಾಗಿದೆ. ಆರ್ಥಿಕ ಅಸಮತೆಯ ಮೂಲಭೂತ ಕಾರಣಗಳ ಮತ್ತು ಅವುಗಳ ನಿವಾರಣೆಯ ಬಗ್ಗೆ ಶಾಸ್ತ್ರೀಯ ಅಧ್ಯಯನ ನಡೆದಿದೆ. ಇದರ ಪ್ರಕಾರ ಸರ್ಕಾರದ ನೀತಿ ಧೋರಣೆಗಳೇ ಅಸಮತೆಗೆ ಕಾರಣ. ಆದ್ದರಿಂದ ಅವುಗಳನ್ನು ಸಮರ್ಪಕವಾಗಿ೯ ಮಾರ್ಪಡಿಸುವುದರಿಂದ ಅಸಮತೆಯನ್ನು ನಿವಾರಿಸಬಹುದೆಂದು ಒಂದು ಪಕ್ಷದವರ ವಾದ. ದೇಶದಲ್ಲಿ ಖಾಸಗಿ ಉದ್ಯಮಗಳು ಬೆಳೆಯುವಂತೆ ಸರ್ಕಾರ ಪರಿಸ್ಥಿತಿ ನಿರ್ಮಿಸಿದರೆ ಈ ಉದ್ಯಮಗಳನ್ನು ನಿಯಂತ್ರಿಸುವ ಉದ್ದಿಮೆಗಾರರು ಅತಿ ಶ್ರೀಮಂತರಾಗುತ್ತಾರೆ; ಕಾರ್ಮಿಕರು ಮುಣ್ತಾದವರು ಬಡವರಾಗುತ್ತಾರೆ;ಪ್ ಹೀಗೆ ಅಸಮತೆ ತೀವ್ರವಾಗುತ್ತದೆ. ಆದ್ದರಿಂದ ಖಾಸಗಿ ಉದ್ಯಮಗಳೇ ಇರಬಾರದೆಂದು ಕೆಲವರು ವಾದಿಸಿದರೆ ಇತರರು ಅವು ಇರಲಿ, ಆದರೆ ಅವುಗಳ ಒಡೆಯರು ಅತಿ ಶ್ರೀಮಂತರಾಗದಂತೆ ಸಾಕಷ್ಟು ಅಧಿಕ ಪ್ರಮಾಣದ ತೆರಿಗೆ ವಿಧಿಸಬೇಕು, ಕಾರ್ಮಿಕರಿಗೆ ಒಡೆಯರು ಲಾಭದ ಒಂದಂಶವನ್ನು ಬೋನಸ್ ಆಗಿ ಹ್ಂಚಬೇಕು. ಈ ಕ್ರಮದಿಂದ ಅಸಮತೆ ನಿವಾರಿಸಬೇಕು ಎಂದು ತರ್ಕಿಸುತ್ತಾರೆ.

ಬಂಡವಾಳಶಾಹಿ ರಾಷ್ಟ್ರದಲ್ಲಿ ಮಧ್ಯಮ ಮತ್ತು ಕೆಳವರ್ಗದ ಜನರ, ಕೂಲಿ ಜನರ, ಕೆಲಸಗಾರರ ಶೋಷಣೆ ನಡೆಯುತ್ತಿದೆ ಎಂದು ಇನ್ನೊಂದು ವಾದವಿದೆ. ಶ್ರೀಮಂತ ವರ್ಗ ವ್ಯವಸಾಯ ಮತ್ತು ವ್ಯಾಪಾರೋದ್ಯಮಗಳನ್ನುತನ್ನದನ್ನಾಗಿ ಮಾಡಿಕೊಂಡಿರುವುದೇ ಅಧಿಕಪ್ರಮಾಣದಲ್ಲಿ ಜನತೆಯ ಬಡತನಕ್ಕೆ ಕಾರಣವೆನ್ನುವವರೂ ಇದ್ದಾರೆ. ಮಾರ್ಕ್ಸ್, ಏಂಜೆಲ್ಸ್, ಲೆನಿನ್ ಮೊದಲಾದವರ ಸಮತಾವಾದ ಬಂಡವಾಳಶಾಹಿ ರಾಷ್ಟ್ರಗಳ ವಿರುದ್ಧವಾದುದೇ ಆಗಿದೆ. ಆರ್ಥಿಕ ಸಮತೆ ಏರ್ಪಡಬೇಕಾದರೆ ಸರ್ಕಾರ ಜನತಾಮೂಲವಾಗಬೇಕು; ಉದ್ಯಮಗಳು ದುಡಿಯುವ ಜನರ ಕೈಯಲ್ಲಿರಬೇಕು; ಸಾರ್ವಜನಿಕ ಸಂಪತ್ತು ಸರಿಯಾಗಿ ಹಂಚಿಕೆ ಆಗಬೇಕು; ವ್ಯಕ್ತಿಯಾಗಲಿ ಯಾವ ಒಂದು ಪಂಗಡವಾಗಲಿ ಅತಿ ಶ್ರೀಮಂತವಾಗಲು ಅವಕಾಶವಿರಬಾರದು-ಇದು ಮತವಾದಿಗಳ ಮತ್ತು ಕಮ್ಯೂನಿಸ್ಟ್ ವಾದ.

ವಾದ ಏನೇ ಇರಲಿ, ಅಸಮತೆ ಇರಬಾರದೆಂದು ಎಲ್ಲ ರಾಷ್ಟ್ರಗಳೂ ಘೋಷಿಸುತ್ತಿವೆ; ಇದರ ನಿರ್ಮೂಲನಕ್ಕಾಗಿ ಕಾಯಿದೆ ಸಿದ್ಧಪಡಿಸುತ್ತಿವೆ; ತೆರಿಗೆಗಳನ್ನು ವಿಧಿಸುತ್ತಿವೆ; ಬಡಜನತೆಗೆ ಸೌಕರ್ಯಗಳನ್ನು ಒದಗಿಸುತ್ತಿವೆ.