ಪುಟ:Mysore-University-Encyclopaedia-Vol-1-Part-3.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೭೨ ಆರೋಗ್ಯ ಸುರಕ್ಷಣಾ ಕಾಯಿದೆಗಳು

ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಕ್ರಮಗಳಿಂದ ನೊಂದವನಿಗೆ ಪರಿಹಾರ ಕೊಟ್ಟರೆ ಸಾಕೇ? ನೊಂದವನ ದೃಷ್ಟಿಯಿಂದ ತೆಗೆದುಕೊಂಡ ಕಾರ್ಯಕ್ರಮ ಅನುಚಿತ, ಅಸಂಬದ್ಧ ಎಂದಿದ್ದರೆ ಅವನು ನ್ಯಾಯಾಲಯದ ಮೊರೆ ಹೋಗಬಹುದೇ? ಹಾಗೆ ಹೋದರೆ ಅದುವರೆಗೆ ಕ್ರಮ ತೆಗೆದುಕೊಳ್ಳುವುದನ್ನು ಮುಂದೂಡಿ ನ್ಯಾಯಾಲಯದ ತೀರ್ಮಾನಕ್ಕೆ ಕಾದಿರಬಹುದೇ? ಇದು ಸಾರ್ವಜನಿಕ ಹಿತದೃಷ್ಟಿಯಿಂದ ಉಚಿತವೇ? ಒಂದು ಸಾಂಕ್ರಾಮಿಕ ಜಾಡ್ಯವಿದ್ದಾಗ ಆ ಮನೆಯ ಯಜಮಾನ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸದಿದ್ದರೆ, ಅದರಿಂದ ಆಗುವ ಅನಾಹುತ ಎಲ್ಲರಿಗೂ ತಿಳಿದ ವಿಷಯ. ಹೀಗಿದ್ದೂ ಯಜಮಾನ ವರದಿ ಮಾಡದಿದ್ದರೆ ಶಿಕ್ಷೆ ಕೇವಲ ಜುಲ್ಮಾನೆಯೇ ಅಥವಾ ಇನ್ನೂ ಕಠಿಣತರವಾದ ಕ್ರಮವೋ? ಇಷ್ಟೆಲ್ಲ ಶಿಕ್ಷೆಗೆ, ಅನಾನುಕೂಲತೆಗಳಿಗೆ, ಒಳಪಡಿಸಿದ ಅನಂತರ ಕಾರ್ಯಕ್ರಮ ಬೇಕಿರಲಿಲ್ಲವೆಂದು ಗೊತ್ತಾದಲ್ಲಿ ಅದಕ್ಕೆ ಯಾರು ಹೊಣೆ? ಈ ವಿಚಾರಗಳನ್ನೆಲ್ಲಾ ಬಹಳ ಯೋಚಿಸಿ ಹಿಂದು ಮುಂದು ತಿಳಿದು, ಸಾರ್ವಜನಿಕ ಹಿತದೃಷ್ಟಿಯಿಂದ ಏನೇನು ಕ್ರಮ ಅತ್ಯಗತ್ಯವೋ ಅದನ್ನೆಲ್ಲ ತೆಗೆದುಕೊಳ್ಳದೆ ಬೇರೆ ಮಾರ್ಗವೇ ಇಲ್ಲ.


ಆಹಾರ, ಔಷಧಿಗಳ ಕೀಳ್ಬೆರಕೆ : ಇಡೀ ಆರೋಗ್ಯಕ್ಷೇತ್ರದಲ್ಲೇ, ಆಹಾರ, ಔಷಧಗಳ ಕೀಳ್ಬೆರಕೆಗೆ ಅಥವಾ ಕಲಬೆರಕೆಗೆ (ಅಡಲ್ಟರೇಷನ್) ಸಂಬಂಧಿಸಿದ ಶಾಸನಗಳು ಅತಿ ಮುಖ್ಯ. ಪ್ರಾಚೀನ ಭಾರತದಲ್ಲಿ, ಕೀಳ್ಬೆರಕೆಯನ್ನು ತಪ್ಪಿಸಲು ರೂಪಿತವಾದ ಶಾಸನಗಳಿಲ್ಲದಿದ್ದರೂ, ರಾಜಮಹಾರಾಜರ ಆಡಳಿತದಲ್ಲಿ ಆಹಾರ ಕೀಳ್ಬೆರಕೆ ಮಾಡಿದರೆ ಅತ್ಯುಗ್ರದಂಡವನ್ನು ವಿಧಿಸಲಾಗುತ್ತಿತ್ತು. ತಪ್ಪಿತಸ್ಥನ ಕೈಗಳನ್ನೂ ಕತ್ತರಿಸಲು ಆಜ್ಞೆ ಹೊರಡುತ್ತಿತ್ತಂತೆ. ರೋಮ್, ಅಥೆನ್ಸಗಳಲ್ಲಿ ಹಿಂದೆ ಮಾದಕ ಪದಾರ್ಥಗಳಿಗೆ ಕೀಳ್ಬೆರಸುವುದನ್ನು ನಿಷೇಧಿಸುವ ಶಾಸನಗಳಿದ್ದುವು.

ಇಂಗ್ಲೆಂಡಿನಲ್ಲಿ ಮೂರನೆಯ ಹೆನ್ರಿ ರಾಜನಾಗಿದ್ದಾಗಿನಿಂದಲೂ ಕೆಲವು ಆಹಾರಗಳ ಕೀಳ್ಬೆರಕೆ ನಿಷೇಧಿಸಲಾಗಿತ್ತು. ಟೀ, ಕಾಫಿ, ಬಿಯರ್ ಮಾದಕಗಳ ಕೀಳ್ಬೆರಕೆ ನಿರ್ಬಂಧಿಸಲು ಪಾರ್ಲಿಮೆಂಟ್ ಆಗಾಗ್ಗೆ ಶಾಸನಗಳನ್ನು ಮಂಡಿಸುತ್ತಿತ್ತು. ಆಹಾರ ಕೀಳ್ಬೆರಕೆ ಶಾಸನ (೧೮೭೨) ಜಾರಿಗೆ ಬಂತು. ಇದರಿಂದ ಆಹಾರಪದಾರ್ಥಗಳನ್ನು ವಶಪಡಿಸಿಕೊಂಡು ಅವನ್ನು ತಜ್ಞರಿಂದ ಪರೀಕ್ಷೆ ಮಾಡಿಸಿ ಅವು ಕೀಳ್ಬೆರಕೆ ಎಂದು ರುಜುವಾತಾದಲ್ಲಿ ೫೦ ಪೌಂಡುಗಳ ದಂಡ ವಿಧಿಸಲು ಸಾಧ್ಯವಾಯಿತು. ಹಾಗೂ ಎರಡನೆಯ ಸಲ ಕೀಳ್ಬೆರಕೆ ಮಾಡಿ ಸಿಕ್ಕಿ ಬಿದ್ದಾಗ ೬ ತಿಂಗಳ ಕಾರಾಗೃಹವಾಸ, ಕಠಿಣ ಸಜ ವಿಧಿಸಲು ಅವಕಾಶವಿತ್ತು. ಈ ಶಾಸನದ ವ್ಯಾವಹಾರಿಕ ಲೋಪದೋಷಗಳನ್ನು ಸರಿಪಡಿಸಿ ಒಂದು ಸರ್ವವ್ಯಾಪಕ ಆಹಾರ ಮತ್ತು ಔಷಧಿಗಳ ಕೀಳ್ಬೆರಕೆ, ಪ್ರತಿಬಂಧಕ ಶಾಸನ (೧೯೫೫) ಜಾರಿಗೆ ಬಂತು.


ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಕಾಂಗ್ರೆಸ್ಸು ಔಷಧಿಗಳ ಕೀಳ್ಬೆರಕೆ ನಿಷೇಧ ಶಾಸನಗಳನ್ನು (೧೮೪೮) ಜಾರಿಗೆ ತಂದು, ೧೮೯೦ರಲ್ಲಿ ಆಹಾರ ಕೀಳ್ಬೆರಕೆ ವಿರುದ್ಧ ಶಾಸನವನ್ನು ಮಂಡಿಸಿತು. ೧೮೮೦ರಿಂದ ೧೯೦೬ರಲ್ಲಿ ೧೦೩ ಮಸೂದೆಗಳು ಕೇವಲ, ಅಂತರರಾಜ್ಯದ ಆಹಾರ, ಔಷಧಗಳ ಸಾಗಾಣಿಕೆಗೆ ಅನ್ವಯಿಸುವ ಕಾಯಿದೆಗಳೇ ಆಗಿದ್ದುವು. ಆದರೆ 1906ರಲ್ಲಿ ಅಧ್ಯಕ್ಷ ರೂಸ್ವೆಲ್ಟ್ ಶುದ್ಧ ಆಹಾರ, ಔಷಧಿಗಳ ಶಾಸನಕ್ಕೆ ಸಹಿ ಹಾಕಿ ಅದು ಅಂಗೀಕಾರ ಆಗುವವರೆಗೆ ಈ ಮಸೂದೆಗಳು ಯಾವುವೂ ಸ್ವೀಕೃತವಾಗಲಿಲ್ಲ. ಈ ಶಾಸನ ಅಂಗೀಕಾರವಾದ ಮೇಲೂ ಅದರಲ್ಲಿ ನಿಯಮಿತವಾದ ವಿಧಿಗಳನ್ನು ಜಾರಿಗೆ ತರಲು ಅನೇಕ ತೊಡಕುಗಳು ಕಂಡು ಬಂದುವು. ಕೀಳ್ಬೆರಕೆ ಎಂಬ ಪದದ ಅರ್ಥ ಸಾಕಷ್ಟು ವ್ಯಾಪಕವಾಗದಿರುವುದು ಒಂದು ಕಾರಣ. ವಿಧಿಸುತ್ತಿದ್ದ ಶಿಕ್ಷೆ ಅಂದರೆ ಮೊದಲ ಉಲ್ಲಂಘನೆಗೆ ೨೦ಪೌಂಡುಗಳ ದಂಡ, ಎರಡನೆಯದಕ್ಕೆ ೩೦೦ ಪೌಂಡುಗಳ ದಂಡ ಅಥವಾ ಒಂದು ವರ್ಷ ಸಜಾ, ವ್ಯಾಪಾರಿಗಳಲ್ಲಿ ಸಾಕಷ್ಟು ಭಯ ಹುಟ್ಟಿಸುವಂತಿರಲಿಲ್ಲವೆಂಬುದು ಎರಡನೆಯ ಕಾರಣ.


೧೯೩೭ರಲ್ಲಿ ಒಂದು ವಿಷಾದಕರ ಪ್ರಸಂಗ ಗಮನಕ್ಕೆ ಬಂತು. ಎಲಿಕ್ಸರ್ ಸಲ್ಫೊನಮೈಡ್ ಮದ್ದನ್ನು ಹಂಚಿಕೆ ಹಾಗೂ ಮಾರಾಟವನ್ನು ನಿಯಂತ್ರಿಸುವ ಕಾಯಿದೆ ಯಾವುದೂ ಇರಲಿಲ್ಲ. ೧೯೩೮ರಲ್ಲಿ ಸಂಯುಕ್ತ ರಾಷ್ಟ್ರ ಸರ್ಕಾರದ ಆಹಾರ, ಔಷಧ ಮತ್ತು ಕಾಂತಿವರ್ಧಕಗಳ ಶಾಸನ (ಫೆಡರಲ್ ಫುಡ್, ಡ್ರಗ್ ಅಂಡ್ ಕಾಸ್ಮೆಟಿಕ್ ಆ್ಯಕ್ಟ್, ೧೯೩೮) ಜಾರಿಗೆ ಬಂತು. ಇದರಿಂದ ಆರೋಗ್ಯಕ್ಕೆ ಧಕ್ಕೆ ಬರುವ ಆಹಾರ ಹಾಗೂ ಮದ್ದನ್ನು ಕೊಳಕು ಅಥವಾ ಸೋಂಕಿನಿಂದ ಕೂಡಿರುವ ಸೀಸೆ, ಪಾತ್ರೆ, ಪೆಟ್ಟಿಗೆ ಇತ್ಯಾದಿಗಳಲ್ಲಿ ಹಾಕಿ ಮಾರುವುದನ್ನು ನಿಷೇಧಿಸಲಾಯಿತು. ಈ ಆಜ್ಞೆಗಳನ್ನು ಉಲ್ಲಂಘಿಸಿದವರಿಗೆ ೧೦೦೦ ಪೌಂಡು ಅಥವಾ ಒಂದು ವರ್ಷ ಕಠಿಣ ಸಜಾ ವಿಧಿಸಲು ಅವಕಾಶ ಕಲ್ಪಿಸಿಕೊಡಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಮೋಸಕ್ಕೆ ಅಥವಾ ಎರಡನೆಯ ಸಲ ಕಾಯಿದೆ ವಿರುದ್ಧ ನಡೆದರೆ ೧೦,೦೦೦ ಪೌಂಡುಗಳ ದಂಡ ಇಲ್ಲದಿದ್ದಲ್ಲಿ ೩ ವರ್ಷ ಕಠಿಣ ಸಜೆಗೆ ಅವಕಾಶವಿತ್ತು. ಈ ಶಾಸನವನ್ನು ಜಾರಿಗೆ ತಂದದ್ದೇ ಅಲ್ಲದೆ ಕಟ್ಟುನಿಟ್ಟಾಗಿ ಆಚರಣೆಗೆ ತರಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು.


ಸಾರ್ವಜನಿಕ ಕ್ಷೇಮರಕ್ಷಣಾ ಕಾಯಿದೆಗಳು : ಸಾರ್ವಜನಿಕ ಆರೋಗ್ಯ ರಕ್ಷಣಾ ಕಾಯಿದೆಗಳು ಹಾಗೂ ನೊಂದ ಕೆಲಸಗಾರರಿಗೆ ಪರಿಹಾರ ನೀಡುವ ಕಾಯಿದೆಗಳ ಜೊತೆಗೇ ಸಾರ್ವಜನಿಕ ಕ್ಷೇಮರಕ್ಷಣಾ ಕಾಯಿದೆಗಳೂ ಜಾರಿಗೆ ಬಂದವೆಂದು ಹೇಳಬಹುದು. ಅಪ್ರೇರಿತ ಸ್ವಯಂಸೇವಕ ಮಂಡಳಿಗಳು ಹೆಚ್ಚು ಆಸಕ್ತಿವಹಿಸಿ ಜನಗಳಿಗೆ ತಿಳಿವಳಿಕೆ ಕೊಟ್ಟು ತಾವೇ ಚಟುವಟಿಕೆಗಳನ್ನು ವ್ಯವಸ್ಥೆ ಮಾಡಿದುವು. ೨೦ನೆಯ ಶತಮಾನದಲ್ಲಂತೂ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಇಂಜಿನಿಯರು ಅನೇಕ ವಿಧದ ರಕ್ಷಣೆಗಳನ್ನು ನಿರೂಪಿಸಿ ಆಚರಣೆಗೆ ತಂದಿದ್ದಾರೆ. ಹಾಗೂ ಕೆಲಸಗಾರ ಆದಷ್ಟು ಸುರಕ್ಷಿತವಾಗಿರಲು ಸೂತ್ರಗಳನ್ನು ವಿಧಿಸಿದ್ದಾರೆ. ಈ ಸೂತ್ರಗಳನ್ನು ಪಾಲಿಸಿದ್ದೇ ಆದರೆ ಕೆಲಸಗಾರ ಬಹುಮಟ್ಟಿಗೆ ಅಪಾಯವೇ ಇಲ್ಲದಂತಿರಬಹುದು. ಇದರಿಂದ ಮಾಲೀಕರೂ ತಮ್ಮ ನುರಿತ ಕೆಲಸಗಾರರಿಂದ ಪುರ್ಣ ಪ್ರಯೋಜನ ಪಡೆಯುವಂತಾಯಿತು. ಈ ಉದ್ದೇಶದಿಂದಲೇ ಕಾರ್ಖಾನೆಗಳಲ್ಲಿ ಆವಿಯ ಕುದಿಪಾತ್ರೆಗಳನ್ನು ಪರಿಶೀಲಿಸುವುದು ಮೊದಮೊದಲಲ್ಲಿ ರೂಢಿಗೆ ಬಂತು. ಅನಂತರ ಮನೆ ಕಟ್ಟುವ ಮುನ್ನ, ಗಿರಣಿಗಳನ್ನು ಸ್ಥಾಪಿಸುವ ಮೊದಲು ಪೌರಸಭೆಯ ಅಧಿಕಾರಿ ಬಂದು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ ಕಾರ್ಯ ಪ್ರಾರಂಭ ಮಾಡಲು ಅಪ್ಪಣೆ ದೊರೆಯುತ್ತಿತ್ತು. ಗಣಿಗಳಲ್ಲಿ ಕೆಲಸ ಮಾಡುವವರ ಸಂರಕ್ಷಣೆ, ರೈಲುದಾರಿಗಳನ್ನು ನಿರ್ಮಿಸುವ ಕೆಲಸಗಾರರ ಸಂರಕ್ಷಣೆ ಕಡ್ಡಾಯ ಮಾಡುವ ಕಾನೂನುಗಳು ೧೮೮೭ರಲ್ಲಿ ಜಾರಿಗೆ ಬಂದು ಕ್ರಮೇಣ ೧೮೯೩, ೧೯೦೩, ೧೯೧೦ ಮತ್ತು ೧೯೨೦ರಲ್ಲಿ ವಿಸ್ತಾರವಾಗಿ ತಿದ್ದುಪಡಿಗಳಾಗಿ ಸಂಯುಕ್ತ ರಾಷ್ಟ್ರ ಸರ್ಕಾರದ ಮೊದಲಿನ ಮಹತ್ತ್ವದ ಶಾಸನವಾದುವು. ೧೯೩೬ರ ವಾಲ್ಷಿ ಹೀಲಿ ಸಾರ್ವಜನಿಕ ಗುತ್ತಿಗೆದಾರರಿಗೆ ಅನ್ವಯಿಸುವ ಶಾಸನದ ಪ್ರಕಾರ, ಸರ್ಕಾರದ ಕೆಲಸವನ್ನೊಪ್ಪಿಕೊಂಡಿರುವ ಪ್ರತಿಯೊಬ್ಬ ಗುತ್ತಿಗೆದಾರನೂ ಆಯಾ ಸಂಸ್ಥಾನದಲ್ಲಿ ಜಾರಿಯಲ್ಲಿ ರುವ ಆರೋಗ್ಯ ರಕ್ಷಣಾ ಮತ್ತು ಕ್ಷೇಮ ರಕ್ಷಣಾ ಕಾಯಿದೆಗೆ ಒಳಪಟ್ಟು ಕೆಲಸ ಮಾಡಬೇಕು ಎಂದು ತೀರ್ಮಾನವಾಯಿತು. ಈ ಕಾನೂನುಗಳ ಮಹತ್ತ್ವವನ್ನು ಮಾಲೀಕರು ಅರಿತಿದ್ದಾರೆ; ಅದರಲ್ಲಿ ಅಡಕವಾಗಿರುವ ಸೂತ್ರಗಳ ಪಾಲನೆಯನ್ನು ಈ ಆಧುನಿಕ ಮಾಲೀಕರು ತಮ್ಮ ಕರ್ತವ್ಯವೆಂದು ಪರಿಗಣಿಸಿ ಕೆಲಸಗಾರರಿಗೆ ಪುರ್ಣ ರಕ್ಷಣೆ ಕೊಡುವುದರಲ್ಲಿ ಸಫಲರಾಗಿದ್ದಾರೆ. ಅಮೆರಿಕದ ಕೈಗಾರಿಕೋದ್ಯಮಗಳಲ್ಲಿ ಅಪಘಾತಗಳಿಗೆ ಎಡೆ ಇಲ್ಲದಂತೆ ಸೂತ್ರಗಳನ್ನು ನಿಯಮಿಸುವುದರಲ್ಲಿ ಅಮೆರಿಕ ಸ್ಟ್ಯಾಂಡರ್ಡ್ ಸಂಘ ಬಹಳ ಆಸಕ್ತಿ ವಹಿಸಿತು. ಅಪಘಾತವನ್ನು ತಡೆಗಟ್ಟಲು ಚಳವಳಿ ಎಲ್ಲೆಲ್ಲಿಯೂ ಕಂಡುಬಂತು. ಅಂತಾರಾಷ್ಟ್ರೀಯ ಕೈಗಾರಿಕಾ ಅಪಘಾತ ನಿರ್ಬಂಧ ಸಂಘ ಹಾಗೂ ನಿಯೋಜಿತ ಆಯೋಗ ಈ ಚಳವಳಿಯ ಮೇಲೆ ಪ್ರಭಾವ ಬೀರಿತು. ಅಮೆರಿಕ ಸಂಯುಕ್ತಸಂಸ್ಥಾನಗಳ ಕಾರ್ಮಿಕ ಇಲಾಖೆ ಹಾಗೂ ೧೯೫೩ರಿಂದ ಆರೋಗ್ಯ, ವಿದ್ಯಾ ಮತ್ತು ನೆಮ್ಮದಿ ಇಲಾಖೆ ಕೈಗಾರಿಕೋದ್ಯಮಗಳಿಗೊಳಪಟ್ಟ ಕೆಲವು ಕ್ಷೇಮರಕ್ಷಣೆಗೆ ಹೊಣೆಯಾಗಿವೆ. ಗಣಿಗಳಲ್ಲಿ ಅಪಘಾತವಾಗದಂತೆ ಆಗಾಗ್ಗೆ ಅಧಿಕೃತ ಪರಿಶೀಲನೆ ನಡೆಸಬೇಕು ಹಾಗೂ ಸುರಂಗದ ಮೇಲ್ಭಾಗ ಕುಸಿಯದಿರಲು, ಸ್ವಚ್ಛ ಗಾಳಿ, ಉಪಯೋಗ ಮಾಡುವ ಸಲಕರಣೆಗಳ ಸ್ಥಿತಿ, ಬೆಂಕಿಯಿಂದ ರಕ್ಷಣೆ ಮೊದಲಾದವು ಯಾವ ರೀತಿ ಇರಬೇಕೆಂಬುದನ್ನು ಕಾನೂನು ನಿರ್ದಿಷ್ಟ ರೀತಿಯಲ್ಲಿ ನಿಗದಿಮಾಡಿದೆ. ೧೯೨೦ಕ್ಕೆ ಮುಂಚೆ ನೊಂದ ಕೆಲಸಗಾರ ನ್ಯಾಯಾಲಯಕ್ಕೆ ಹೋಗಿ ತನಗೆ ಸಂಭವಿಸಿದ ಅಪಘಾತಕ್ಕೆ ಪರಿಹಾರವನ್ನು ಬೇಡಿಕೊಳ್ಳಬೇಕಾಗಿತ್ತು. ಅನಂತರ ಈ ಪರಿಹಾರವನ್ನು ಕೊಡಲು ಆಯಾ ಕೈಗಾರಿಕೆಗೆ ಸಂಬಂಧಪಟ್ಟ ಅಧಿಕೃತ ಮಂಡಳಿಗಳೇ ಕಾನೂನುರೀತ್ಯಾ ಅರ್ಹತೆ ಪಡೆದವು.

ಕೇವಲ ಕೈಗಾರಿಕೋದ್ಯಮಗಳಲ್ಲಿ ಒದಗಬಹುದಾದ ಅಪಘಾತಗಳನ್ನು ತಡೆಗಟ್ಟುವ ನಿಬಂಧನೆಗಳೇ ಅಲ್ಲದೆ ಇನ್ನೂ ಅನೇಕ ರೀತಿಯ ಸುರಕ್ಷಣಾ ಕಾನೂನುಗಳು ಜಾರಿಗೆ ಬಂದುವು. ಉದಾಹರಣೆಗೆ ಜನವಾಹನ ಸಂಚಾರಗಳನ್ನು ನಿಯಂತ್ರಿಸುವ, ಸಿನಿಮಾ ಮಂದಿರಗಳಿಗೆ ಅನ್ವಯಿಸುವ, ಶಾಲೆಗಳಿಗೆ ಅನ್ವಯಿಸುವ ಹೆದ್ದಾರಿ, ಪಕ್ಕದಾರಿ, ಸಾರ್ವಜನಿಕ ವಾಹನ, ಸ್ನಾನಮಾಡುವ ತೀರಪ್ರದೇಶ, ಬೆಂಕಿ ಅನಾಹುತ ಮುಂತಾದವುಗಳಿಗೆ ಅನ್ವಯಿಸುವ ಕಾಯಿದೆಗಳೂ ಬಂದುವು.

ಭಾರತದಲ್ಲಿಯೂ ಆರೋಗ್ಯ ಮತ್ತು ಸಮಾಜ ಕಲ್ಯಾಣ ಹಾಗೂ ಜನತೆಯ ಕ್ಷೇಮರಕ್ಷಣಾ ಶಾಸನಗಳು ಅನೇಕವಿವೆ. ಭಾರತದ ರಾಜ್ಯಾಂಗ ೧೯೩೫ರ ಭಾರತ ಸರ್ಕಾರ ಶಾಸನವನ್ನು ಅಂಗೀಕಾರ ಮಾಡಿದೆ. ಈ ಶಾಸನದಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿಗಳನ್ನು ಮತ್ತು ಶಾಸನಗಳ ವ್ಯಾಪ್ತಿಯನ್ನು ನಿರ್ದಿಷ್ಟವಾಗಿ ನಿರ್ದೇಶಿಸಿದೆ. ಅದೂ ಅಲ್ಲದೆ ಕೆಲವು ಸಮಾನ ಅಧಿಕಾರವುಳ್ಳ ವಿಷಯಗಳ ಪಟ್ಟಿಯನ್ನೂ ನಮೂದಿಸಲಾಗಿದೆ. ಅಂದರೆ ಯಾವುದಾದರೂ ಒಂದು ಶಾಸನ ಅಂಗೀಕಾರವಾದರೆ ಆ ಶಾಸನ ಕಡ್ಡಾಯವಾಗಿದ್ದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಆ ಶಾಸನವನ್ನು ಆಚರಣೆಗೆ ತರುತ್ತವೆ. ಕಡ್ಡಾಯವಲ್ಲದಿದ್ದರೆ, ರಾಜ್ಯಸರ್ಕಾರಗಳು ಆ ಶಾಸನವನ್ನು ಸ್ವೀಕಾರ ಮಾಡುವ ಅಥವಾ ಮಾಡದಿರುವ ಅಧಿಕಾರವನ್ನು ಹೊಂದಿವೆ. ಈ ಸಂದರ್ಭಗಳಲ್ಲಿ ರಾಜ್ಯ ಸರ್ಕಾರ, ಶಾಸನವನ್ನು ಆಚರಣೆಗೆ ತರಬಹುದು, ಅಥವಾ ತರದೆ ಇರಬಹುದು, ಉದಾಹರಣೆಗೆ ಆಹಾರದ ಕೀಳ್ಬೆರಕೆ ತಡೆಗಟ್ಟುವ ಶಾಸನ (೧೯೫೪) ಭಾರತದ ಎಲ್ಲ ಭಾಗಗಳಿಗೂ ಕಡ್ಡಾಯವಾಗಿ ಅನ್ವಯಿಸುವ ಶಾಸನ. ಆದರೆ ಭಾರತದ ಸಾಂಕ್ರಾಮಿಕ ಜಾಡ್ಯ ಹತೋಟಿ ಶಾಸನ (೧೮೫೭) ಕಡ್ಡಾಯ ಶಾಸನವಲ್ಲ. ಅದು ಕೇವಲ ಸ್ವೀಕಾರಾರ್ಹ ಶಾಸನವಷ್ಟೆ.