ಪುಟ:Mysore-University-Encyclopaedia-Vol-1-Part-3.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಥಿಕ ಬೆಳವಣಿಗೆ ೯೦೫

ಕಾಲದಲ್ಲಿ ವಿದೇಶಿ ಸರಕಾರಗಳ ಸ್ವೇಚ್ಛಾವರ್ತನೆ, ಲಾಭದ ಮತ್ತು ಬಂಡವಾಳದ ವರ್ಗಾವಣೆ ವಿಷಯದ ನೀತಿ ಹಾಗೂ ರಾಷ್ಟ್ರೀಕರಣ ಹೆದರಿಕೆ, ಇವುಗಳಿಂದ ಖಾಸಗೀ ಬಂಡವಾಳದ ಚಲನವಲನ ಕುಂಠಿತವಾಯಿತು. ಅದರಿಂದ ಎರಡು ಸರ್ಕಾರಗಳ ಮಧ್ಯದ ಸಾಲಕ್ಕೆ ಮಹತ್ವ ಬಂತು. ಮೊಟ್ಟಮೊದಲು ಈ ಪದ್ಧತಿಯನ್ನು ಅಮೆರಿಕ ಆಮದುರಫ್ತು ಬ್ಯಾಂಕ್ ಎಂಬ ಸಂಸ್ಥೆ ಆಚರಣೆಗೆ ತಂದಿತು. ಇದಲ್ಲದೆ ಇನ್ನೂ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಹುಟ್ಟಿಕೊಂಡವು. ಆದರೆ ಅವುಗಳ ಉಪಯುಕ್ತತೆ ಸೀಮಿತವಾಗಿದೆ.

ಆರ್ಥಿಕ ಬೆಳವಣಿಗೆ ಮೇಲೆ ಜನಸಂಖ್ಯೆಯ ಬೆಳವಣಿಗೆಯ ಪರಿಣಾಮ ಮೊದಲಿನಿಂದಲೂ ಚರ್ಚಿಸಲ್ಪಟ್ಟ ವಿಷಯ. ಆಂಗ್ಲ ಲೇಖಕ ಮಾಲ್ಥಸ್ ೧೯ನೆಯ ಶತಮಾನದಲ್ಲಿ ಮಂಡಿಸಿದ ಸೂತ್ರದಿಂದ ವಾದ ವಿವಾದ ಹುಟ್ಟುಕೊಂಡಿದೆ. ಅವರ ಬೆಂಬಲಿಗರು ಜನಸಂಖ್ಯೆ ಹೆಚ್ಚಲು ಮುಖ್ಯ ಕಾರಣ ಜೀವನಮಟ್ಟ ಬೆಳೆದಂತೆ ಮದುವೆಯ ವಯಸ್ಸು ಕಡಿಮೆಯಾಗುವುದೇ ಕಾರಣ ಎಂದಿದ್ದಾರೆ. ಆದರೆ ಇದು ಸರಿಯಾದ ಕಾರಣವಲ್ಲ. ಈಗ ನಮಗೆ ತಿಳಿದುಬಂದಿರುವಂತೆ, ಮರಣಪ್ರಮಾಣದ ಇಳಿತವೇ ಇದಕ್ಕೆ ಕಾರಣ ಎಂದು ಹೇಳಬಹುದು. ಮರಣಪ್ರಮಾಣ ಕಡಿಮೆಯಾಗಲು ಜೀವನಮಟ್ಟ್ದಲ್ಲಿ ಸುಧಾರಣೆ, ಸಾಮಾಜಿಕ ಹಾಗೂ ಖಾಸಗೀ ವೈದ್ಯಕೀಯ ಸೌಕರ್ಯ ಸಾರ್ವಜನಿಕ ಆರೋಗ್ಯಕಾರ್ಯಕ್ರಮಗಳಿಂದ ಸಾಧ್ಯವಾಗಿರುವ ಸೋಂಕು ರೋಗಗಳ ನಿರ್ಮೂಲನ ಮುಂತಾದವು ಕಾರಣಗಳು. ಹಿಂದುಳಿದ ಪರಿಸ್ಥಿತಿಯಲ್ಲಿದ್ದಾಗ ಜನನ ಮರಣ ಪ್ರಮಾಣ ೧೦೦೦ಕ್ಕೆ ೧೦ರಷ್ಟು ಇಳಿಯಬಲ್ಲದು. ಆಗ ಜನನ ಪ್ರಮಾಣ ಮೊದಲಿನಂತೆಯೇ ಉಳಿದುಕೊಂಡರೆ ಜನಸಂಖ್ಯೆಯ ಬೆಳವಣಿಗೆ ಹೆಚ್ಚುವುದು. ಮೊದಲಿನ ಪ್ರಮಾಣ ೧೦೦೦ಕ್ಕೆ ೪೦ರಂತೆ ಇದ್ದರೆ ವರ್ಷಕ್ಕೆ ಶೇಕಡ ೪ ರಷ್ಟು ಹೆಚ್ಚಾಗುವುದು. ಇದರಿಂದ ೨೫ ವರ್ಷಗಳಲ್ಲಿ ಜನಸಂಖ್ಯೆ ಎರಡು ಪಟ್ಟು ಹೆಚ್ಚಾಗಬಹುದು.

ಆದರೆ ಯಾವುದೇ ದೇಶದಲ್ಲಿ ಜನನ ಪ್ರಮಾಣ ಹೆಚ್ಚಿದ್ದು ಮರಣ ಪ್ರಮಾಣ ಕಡಿಮೆಯಾಗುತ್ತ ಹೋದಂತೆ ಆರ್ಥಿಕ ಬೆಳವಣಿಗೆಯ ಪರಿಣಾಮ ಉಂಟಾಗಲಾರದು. ಮೊದಲನೆಯದಾಗಿ ಮಕ್ಕಳ ವಿಷಯದಲ್ಲಿ ವೆಚ್ಚ ಹೆಚ್ಚಾಗುವುದು. ಅಭಿವೃದ್ಧಿ ಪಡೆದ ರಾಷ್ಟ್ರಗಳಲ್ಲಿ ಮಕ್ಕಳ ಪ್ರಮಾಣ ಒಟ್ಟು ಜನಸಂಖ್ಯೆಯಲ್ಲಿ ಶೇ.೧೫ ಅಥವಾ ೨೦ ರಷ್ಟು ಇದ್ದರೆ ಅನಭಿವೃದ್ಧಿ ರಾಷ್ಟ್ರಗಳಲ್ಲಿ ಅವರ ಪ್ರಮಾಣ ೪೦ ರಷ್ಟು ಇರುವುದು. ಇಂಥ ಅಸಮಾನ ಬೆಳವಣಿಗೆಯ ಪರಿಣಾಮವಾಗಿ ರಾಷ್ಟ್ರೀಯ ಆದಾಯದಲ್ಲಾದ ಹೆಚ್ಚಳ ಬಂಡವಾಳವಿನಿಯೋಗಕ್ಕೆ ಸಿಗದೆ ಮಕ್ಕಳ ಪೋಷಣೆಗೆ ಉಪಯೋಗಿಸಲ್ಪಡುವುದು. ಜನಸಂಖ್ಯೆ ಹೆಚ್ಚದಿದ್ದರೆ ಇದೇ ಬಂಡವಾಳವನ್ನು ತಲಾ ಆದಾಯದಲ್ಲಿ ಹೆಚ್ಚಳ ಸಾಧಿಸಲು ಉಪಯೋಗಿಸಬಹುದು. ಬಂಡವಾಳಕ್ಕೆ ಆದಾಯದ ಪ್ರಮಾಣ ೪.೧ ಇದ್ದು ಆಗ ದೇಶದ ಜನಸಂಖ್ಯೆ ಶೇ.೧ರಷ್ಟು ಹೆಚ್ಚಾದರೆ ರಾಷ್ಟ್ರೀಯ ಆದಾಯದ ಶೇ.೪ ರಷ್ಟು ಬಂಡವಾಳವನ್ನು ಶೇ.೨ ರಷ್ಟು ಹೆಚ್ಚಾದರೆ ಶೇ.೮ ರಷ್ಟನ್ನು ಜನರ ಜೀವನ ಮಟ್ಟ ಕಾಯ್ದುಕೊಳ್ಳಲು ಉಪಯೋಗಿಸಬೇಕಾಗುತ್ತದೆ. ಅದರಿಂದ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಬಂಡವಾಳ ವಿನಿಯೋಗ ಕೇವಲ ೫%ಕ್ಕಿಂತ ಕಡಿಮೆಯಿರುವಾಗ ಜನಸಂಖ್ಯೆ ಶೇ.೨ ಅಥವಾ ಶೇ.೩ ಪ್ರಮಾಣದಲ್ಲಿ ಬೆಳೆಯುವುದರಿಂದ ಜೀವನಮಟ್ಟದಲ್ಲಿ ಕಡಿತವನ್ನು ತಡೆಯುವುದು ಸಾಧ್ಯವಿಲ್ಲ.

ಆದರೆ ಸದ್ಯ ದೊರೆಯುವ ಎಲ್ಲ ಪ್ರಮಾಣಗಳ ಪ್ರಕಾರ ಮರಣ ಪ್ರಮಾಣದಲ್ಲಿ ಕಡಿತವಾಗುತ್ತಿದ್ದಂತೆ ಜನನ ಪ್ರಮಾಣ ಕಡಿಮೆಯಾಗುತ್ತ ಹೋಗುವುದನ್ನು ಕಾಣಬಹುದು. ಇದನ್ನು ಖಂಡಿತವಾಗಿ ಹೇಳುವುದು ಕಠಿಣವಾದರೂ ಯುರೋಪ್ ದೇಶಗಳ ಅನುಭವದಂತೆ ಜನನ ಪ್ರಮಾಣ ೩೫-೧೫ಕ್ಕೆ ಇಳಿದಿದೆ. ಇದಕ್ಕೆ ಅನೇಕ ಕಾರಣಗಳನ್ನು ಕೊಡಬಹುದು. ಆರ್ಥಿಕ ಬೆಳವಣಿಗೆ ಮುಂದುವರಿದಂತೆ ಜನರ ಜೀವನಮಟ್ಟ ಸುಧಾರಿಸಿ ತಮ್ಮ ಜೀವನಮಟ್ಟವನ್ನು ಕಾಯ್ದುಕೊಳ್ಳುವ ಹಾಗೂ ಮಕ್ಕಳ ಭವಿಷ್ಯದ ಚಿಂತೆ, ಸ್ತ್ರೀಯರಲ್ಲಿಯ ಸ್ವಾತಂತ್ರ್ಯಪ್ರಿಯತೆ ಹಾಗೂ ಮಕ್ಕಳನ್ನು ಪಡೆಯುವುದರಲ್ಲಿ ಅನಾಸಕ್ತಿ ಮುಂತಾದ ಕಾರಣಗಳಿಂದ ಮರಣ ಪ್ರಮಾಣ ಕಡಿಮೆಯಾಗುತ್ತದೆ. ಯಾವ ಸಮಾಜದಲ್ಲಿ ಹುಟ್ಟಿದ ಮಕ್ಕಳು ೧೦೦ಕ್ಕೆ ೬೦ರಷ್ಟು ಬದುಕಲಾರರೋ ಅಂಥ ಸಮಾಜದಲ್ಲಿ ಬೆಳೆಯಬಹುದಾದ ಮಕ್ಕಳನ್ನು ಪಡೆಯಲು ಹೆಣ್ಣಿನ ಸಾಮರ್ಥ್ಯದ ಸೀಮೆಯಾದ ಎಂಟು ಮಕ್ಕಳನ್ನು ಪಡೆಯುವುದು ಅವಶ್ಯಕವೆನಿಸುವುದು ಮತ್ತು ಸರಾಸರಿ ಜೀವನ ಪ್ರಮಾಣ ೬೮ ವರ್ಷಕ್ಕೆ ಮುಟ್ಟಿದೊಡನೆ ಜನಸಂಖ್ಯೆಯ ಜನನ ಮರಣ ಪ್ರಮಾಣಗಳು ೧೦೦೦ಕ್ಕೆ ೧೫ರಷ್ಟು ಆಗಿ ಜನಸಂಖ್ಯೆಯಲ್ಲಿ ಸ್ಥಿರತೆಯುಂಟಾಗುವುದು. ಇವೆಲ್ಲ ಕಾರಣಗಳಿಂದ ಆರ್ಥಿಕ ಬೆಳವಣಿಗೆಯಲ್ಲಿ ಜನಸಂಖ್ಯೆಯ ಶೇ.೩ ಅಥವಾ ೪ ರಷ್ಟು ಹೆಚ್ಚಳ ತಾತ್ಕಾಲಿಕವಾದದ್ದು ಎಂದು ಕಂಡುಬರುವುದು. ಆದರೆ ಈ ತಾತ್ಕಾಲಿಕತೆ ದೇಶಗಳಿಗನುಸಾರವಾಗಿ ೨ ಅಥವಾ ೩ ಪೀಳಿಗೆಗಳವರೆಗೆ ಇರುವ ಸಂಭವವಿದೆ.

ಜನಸಂಖ್ಯೆಯ ಪ್ರಮಾಣಕ್ಕೂ ದೇಶದ ಸಂಪನ್ಮೂಲಕ್ಕೂ ನಿಕಟ ಸಂಬಂಧವಿದೆ. ಯಾವ ಜನಸಂಖ್ಯೆ ಆ ದೇಶದಲ್ಲಿ ಸಾಧ್ಯವಿದ್ದಷ್ಟೆಲ್ಲ ತಲಾ ಉತ್ಪಾದನೆಯನ್ನು ಹೆಚ್ಚು ಮಾಡಬಲ್ಲುದೋ ಅದು ಯೋಗ್ಯ ಜನಸಂಖ್ಯೆ. ದೊಡ್ಡ ಉದ್ದಿಮೆಗಳ ಸ್ಥಾಪನೆಗೂ ತಜ್ಞತೆಯ ಬೆಳವಣಿಗೆಗೂ ದೊಡ್ಡ ಜನಸಂಖ್ಯೆ ಅವಶ್ಯಕ. ಕೇವಲ ಆಹಾರ ಸಾಮಗ್ರಿಗಳ ಕೊರತೆಯಿಂದಾಗಿ ಜನಸಂಖ್ಯೆ ಹೆಚ್ಚಾಗಿದೆ ಎಂದು ಬಗೆಯುವುದು ಸರಿಯಲ್ಲ. ಉದ್ದಿಮೆಗಳನ್ನು ಹೆಚ್ಚಿಸಬಹುದಾದ ಖನಿಜ ಮುಂತಾದ ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟಿದ್ದ ದೇಶ ರಫ್ತು ಮೌಲ್ಯವನ್ನು ಹೆಚ್ಚಿಸಿ ಸಮೃದ್ಧಿಯನ್ನು ಪಡೆಯಬಹುದು. ಉದ್ಯೋಗಗಳ ದೃಷ್ಟಿಯಿಂದ ನೋಡಿದರೆ ದೇಶ ಆರ್ಥಿಕ ಬೆಳವಣಿಗೆ ಹೊಂದುತ್ತಿದ್ದಂತೆ ಕೃಷಿಯಲ್ಲಿ ನಿರತರಾದ ಜನರ ಪ್ರಮಾಣ ಹೆಚ್ಚುತ್ತ ಸಾಗುವುದು. ಅತಿ ಬಡದೇಶಗಳಲ್ಲಿ ಶೇ.೭೦ ರಷ್ಟು ಜನ ಕೃಷಿಯಲ್ಲಿ ನಿರತರಾಗಿದ್ದರೆ ಅತಿ ಶ್ರೀಮಂತ ರಾಷ್ಟ್ರದಲ್ಲಿ ಶೇ.೧೨-೧೫ ಜನರು ಎಲ್ಲರಿಗೆ ಬೇಕಾದ ಆಹಾರವನ್ನು ಒದಗಿಸಬಲ್ಲರು. ಆದ್ದರಿಂದ ಉದ್ದಿಮೆಗಳಲ್ಲಿ ನಿರತರಾದ ಜನರ ಪ್ರಮಾಣ ಹೆಚ್ಚಾಗುವುದು. ಆರ್ಥಿಕ ಬೆಳವಣಿಗೆ ಮುಂದುವರಿದಂತೆ ಉದ್ದಿಮೆಗಳಿಗೆ ಬೇಕಾಗುವ ವಿವಿಧ ಸೇವೆಗಳನ್ನು ಒದಗಿಸುವ ಸ್ವತಂತ್ರ ಕೆಲಸಗಾರರ ಪ್ರಮಾಣ ಹೆಚ್ಚಾಗಿ ಸಮಾಜದಲ್ಲಿ ಕೇವಲ ನೌಕರಿಯಿಂದ ವೇತನಗಳಿಸುವವರ ಸಂಖ್ಯೆ ಕಡಿಮೆಯಾಗುವುದು. ಇದು ಕಾರ್ಲ್ ಮಾರ್ಕ್ಸ್ ಊಹಿಸಿದ ತೀರ ವಿರುದ್ಧವಾದ ಪರಿಸ್ಥಿತಿ ಎಂಬುದನ್ನು ಗಮನಿಸಬಹುದು.

ಆರ್ಥಿಕ ಬೆಳವಣಿಗೆಯನ್ನು ಉಪಕ್ರಮಿಸುವುದರಲ್ಲಿ ಸರ್ಕಾರ ಮಹತ್ವದ ಪಾತ್ರವನ್ನು ವಹಿಸಬಲ್ಲದೆಂಬುದು ನಿಜವಾದರೂ ಈ ವಿಷಯ ಕೆಲವು ರಾಜಕೀಯ ಪಕ್ಷಪಾತ ದೃಷ್ಟಿಯಿಂದ ಸರಿಯಾಗಿ ಗುರುತಿಸಲ್ಪಡದಿರಬಹುದು. ಆದರೆ ಹಿಂದಿನ ಕಾಲದಲ್ಲಿ ಹಾಗೂ ಇತ್ತೀಚೆಗೆ ಸರ್ಕಾರದ ಪಾತ್ರ ತುಂಬ ಪರಿಣಾಮಕಾರಿಯಾಗಿದೆ ಎಂಬುದನ್ನು ಕಂಡುಕೊಳ್ಳಬಹುದು.

ಆರ್ಥಿಕ ಬೆಳವಣಿಗೆಯ ಕಾರ್ಯ ತೀರ ವ್ಯಾಪಕವಿರುವುದರಿಂದ ಸರ್ಕಾರದ ಪಾತ್ರಕ್ಕೆ ಹೆಚ್ಚು ಮಹತ್ವ ಬಂದಿರುವುದು. ಸಾಮಾಜಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಜನರ ಮನೋವೃತ್ತಿಗಳನ್ನು ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ಪರಿವರ್ತಿಸುವಲ್ಲಿ ಆದಾಯದ ಹೆಚ್ಚಳವನ್ನು ಸರಿಯಾಗಿ ವಿತರಣೆ ಮಾಡಿ ಸಾಮಾಜಿಕ ನ್ಯಾಯ ನೀಡುವಲ್ಲಿ ವ್ಯಾಪಾರೀಚಕ್ರದ ಪರಿಣಾಮಗಳನ್ನು ತಡೆಯುವುದರಲ್ಲಿ, ಸರ್ಕಾರ ದೊಡ್ಡ ಪಾತ್ರವಹಿಸಬಲ್ಲದು. ಸರ್ಕಾರ ಕೈಗೊಳ್ಳಬಹುದಾದ ಹಾಗೂ ಕೆಲವು ದೇಶಗಳಲ್ಲಿ ಕೈಗೊಂಡ, ವ್ಯಾಪಕವಾದ ಉತ್ಪಾದನಾ ಕಾರ್ಯಕ್ರಮದ ವಿಚಾರ ಯೋಜನಾಬದ್ಧ ಆರ್ಥಿಕ ವ್ಯವಸ್ಥೆಯ ಚರ್ಚೆಯಾಗಿ ಪರಿಣಮಿಸುವುದು.

ಆರ್ಥಿಕ ಬೆಳವಣಿಗೆ ಯಾವ ಉದ್ದೇಶ ಸಾಧನೆಗೂ ತಳಪಾಯವಾಗಬಲ್ಲುದು. ಉದ್ದೇಶಗಳು ಎರಡು ಬಗೆಯಾಗಿರುತ್ತವೆ. ಒಂದು ಸಮಾಜ ಕಲ್ಯಾಣ, ಎರಡು ಯುದ್ಧಸಿದ್ಧತೆ. ಎರಡನೆಯದರ ಉದ್ದೇಶವೂ ಎರಡು ಬಗೆ: ಆತ್ಮರಕ್ಷಣೆ ಮತ್ತು ಆಕ್ರಮಣ. ಈಗಿನ ಕಾಲದಲ್ಲಿ ಯಾವುದೇ ದೇಶವೂ ನೆರೆಯ ದೇಶದಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದೆ ಎಂದು ಪ್ರಕಟವಾಗಿ ಒಪ್ಪಿಕೊಳ್ಳಲಾರದು. ಆದರೆ ಆರ್ಥಿಕ ಬೆಳವಣಿಗೆ ಸೈನಿಕ ಶಕ್ತಿಯ ಹೆಚ್ಚಳಕ್ಕೆ ಅವಕಾಶ ಕೊಡಬಲ್ಲದೆಂದು ನಿರ್ವಿವಾದ. ತಲಾ ಉತ್ಪಾದನೆ ಹೆಚ್ಚಾದಂತೆ ದೇಶದ ಸಾಮಾನ್ಯ ಆರ್ಥಿಕ ವ್ಯವಸ್ಥೆಗೆ ತೊಡಕುಂಟಾಗದಂತೆಯೇ ಸೈನಿಕಶಕ್ತಿಯ ಬೆಳವಣಿಗೆಗೆ ಸಾಕಷ್ಟು ಸಾಮಗ್ರಿಗಳನ್ನು ತೊಡಗಿಸುವ ಸಾಮರ್ಥ್ಯ ತಾನಾಗಿಯೇ ಉಂಟಾಗುವುದು. ಈ ಶಕ್ತಿಯನ್ನು ಪಾತಕ ಕೆಲಸಗಳಿಗೆ ಬಳಸುವುದು ಉಚಿತವಾಗಲಾರದು. ಆದರೆ ಪ್ರಪಂಚದ ಎಲ್ಲ ರಾಷ್ಟ್ರಗಳೂ ತಮ್ಮ ಆರ್ಥಿಕ ಬೆಳವಣಿಗೆಯ ಉದ್ದೇಶ ಕೇವಲ ಜನಸಾಮಾನ್ಯರ ಹಿತಸಾಧನೆಯೆಂದು ಘಂಟಾಘೋಷವಾಗಿ ಸಾರುತ್ತಿರುವುವು.

ಇನ್ನು ಆರ್ಥಿಕ ಬೆಳವಣಿಗೆ ಸಾಮಾನ್ಯವಾದ ಉದ್ದೇಶವೆಂದು ಭಾವಿಸಲಾದ ಸಾರ್ವಜನಿಕ ಕಲ್ಯಾಣವನ್ನು ಎಷ್ಟರಮಟ್ಟಿಗೆ ಕೊಡಬಲ್ಲದು ಎಂಬ ವಿಷಯದಲ್ಲೂ ಒಮ್ಮತ ಸಾಧ್ಯವಿಲ್ಲ. ಅದು ಸಮಾಜದಲ್ಲಿಯ ದುರ್ಲಭ ಸರಕು-ಸೇವೆಗಳ ಹೆಚ್ಚಳವನ್ನು ಸಾಧಿಸುವುದೇನೋ ನಿಜ. ಆದರೆ ಅವು ಮನುಷ್ಯರಿಗೆ ನೀಡಬಹುದಾದ ಸಂತೃಪ್ತಿಯನ್ನೂ ಅವುಗಳಲ್ಲಿ ಆಗಬಹುದಾದ ಬದಲಾವಣೆಗಳನ್ನೂ ತುಲನಾತ್ಮಕವಾಗಿ ಅಳೆದು ನೋಡುವುದು ಅಸಾಧ್ಯ. ಆದರೆ ಹೆಚ್ಚಾಗುತ್ತಿರುವ ರಾಷ್ಟ್ರೀಯ ಆದಾಯದ ವಿತರಣೆ ಸರಿಯಾಗಿ ಯಾರೊಬ್ಬರಿಗೂ ಮೊದಲಿಗಿಂತ ಕಡಿಮೆ ಆದಾಯ ಇರದಂತೆ ಆಗುವಂತಿದ್ದರೆ ಆರ್ಥಿಕ ಬೆಳವಣಿಗೆ ಸಮಾಜ ಕಲ್ಯಾಣವನ್ನು ಸಾಧಿಸಿದೆ ಎಂಬುದಕ್ಕೆ ಯಾವ ಅಭ್ಯಂತರವೂ ಇಲ್ಲ. ಇದನ್ನು ಅಳೆದು ತೋರಿಸುವುದು ಅಸಾಧ್ಯವಾದ ಮಾತು. ಆರ್ಥಿಕ ಬೆಳವಣಿಗೆ ಸಮಾಜ ಕಲ್ಯಾಣ ಎರಡೂ ಒಂದೇ ಎಂದು ಬಗೆಯಲಾರೆವಾದರೂ ರಾಷ್ಟ್ರೀಯ ಆದಾಯದ ಅಂಕಿ ಸಂಖ್ಯೆಗಳು ಆರ್ಥಿಕ ಬೆಳವಣಿಗೆಯ ಪ್ರಾರಂಭಕಾಲದಲ್ಲಿ ಉಪಯುಕ್ತವಾದ ಪ್ರಗತಿಯ ಸೂಚಕಗಳಾಗಿವೆ. ಅಲ್ಲದೆ ಯಾವುದೇ ದೇಶದ ಜನಸಂಖ್ಯೆಯ ಹೆಚ್ಚು ಭಾಗ ಜನರು ಉಪವಾಸ ಸಾಯುವ ಅಥವಾ ಕೇವಲ ಅಸ್ತಿತ್ವ ಮಟ್ಟದಲ್ಲಿರುವಾಗ ರಾಷ್ಟ್ರೀಯ ಆದಾಯದ ಹೆಚ್ಚಳದಿಂದ ಇಂಥ ಜನರ ಪರಿಸ್ಥಿತಿ ಸುಧಾರಿಸಹತ್ತಿದರೆ, ತಲಾ ಆದಾಯದಲ್ಲಿಯ ಹೆಚ್ಚಳ ಆವಶ್ಯವಾಗಿಯೂ ಸಮಾಜ ಕಲ್ಯಾಣ ವೃದ್ಧಿಯ ಸೂಚಕವಾಗಬಲ್ಲದು.

ಆರ್ಥಿಕ ಬೆಳವಣಿಗೆಯಿಂದ ಜನರು ತಮ್ಮ ಭೌತಿಕ ವಾತಾವರಣಕ್ಕೆ ಹೆಚ್ಚು ದಕ್ಷತೆಯಿಂದ ಹೊಂದಿಕೊಳ್ಳುವುದನ್ನು ಕಾಣಬಹುದು. ಅರ್ಥರ್ ಲೇವಿಸ್ ಎಂಬ ಲೇಖಕ ಹೇಳುವಂತೆ ಆರ್ಥಿಕ ಬೆಳವಣಿಗೆ ಪರಿಸ್ಥಿತಿಯ ಮೇಲಿನ ಮನುಷ್ಯನ ಪ್ರಭುತ್ವವನ್ನು ಹೆಚ್ಚಿಸುವುದು. ಈ