ಪುಟ:Mysore-University-Encyclopaedia-Vol-1-Part-3.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಥಿಕ ಸಂಖ್ಯಾಶಾಸ್ತ್ರ

                                                                                    ೯೧೧

ಚಿಂತಿಸಿದ್ದು ಸ್ವಾಭಾವಿಕವೆನ್ನಬಹುದು. ಆದರೆ ನೆರೆರಾಷ್ಟ್ರದವರು ಭಿಕ್ಷುಕರಾದರೂ ಪರವಾಗಿಲ್ಲ ನಮ್ಮ ರಾಷ್ಟ್ರದ ಜನರು ಸಂಪದ್ಯುಕ್ತರಾದರೆ ಸರಿ ಎಂಬ ಧೋರಣೆ ಸಾಧುವೆಂದು ಹೇಳಲಾಗುವುದಿಲ್ಲ. ಈ ರೀತಿಯ ಆರ್ಥಿಕ ರಾಷ್ಟ್ರೀಯತೆ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳನ್ನು ಹೊಂದಿಕೆಯ ಪಥದಲ್ಲಿ ಕೊಂಡೊಯ್ಯಲಿಲ್ಲವೆಂದು ಹೇಳಬಹುದು.

ಹೀಗೆ ಎರಡು ಮಹಾಯುದ್ಧಗಳ ಮಧ್ಯಕಾಲದಲ್ಲಿ ಅನೇಕ ಶಕ್ತಿಗಳಿಂದ ಪ್ರೇರಿತವಾಗಿ ಆರ್ಥಿಕರಾಷ್ಟ್ರೀಯತೆ ವಿವಿದ ಸ್ವರೂಪಗಳನ್ನು ತಾಳಿತು. ೧೯ನೆಯ ಶತಮಾನದಲ್ಲಿ ರಚಿತವಾದ ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ಶಿಥಿಲವಾಗಲು ಈ ರಾಷ್ಟ್ರೀಯತೆಯೇ ಕಾರಣ ಎಂದು ಕೆಲವರ ಅಭಿಪ್ರಾಯ. ಆದರೆ, ಎಚ್.ಡಬ್ಲ್ಯು. ಆರನ್ಟ್ ಹೇಳಿರುವಂತೆ ಅಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಅಂತಾರಾಷ್ಟ್ರೀಯ ಹಿತಾಸಕ್ತಿಗಳೂಡನೆ ಹೊಂದಿಸುವುದು ಎಷ್ಟರ ಮಟ್ಟಿಗೆ ಸಾಧ್ಯವಿತ್ತು ಎಂಬುದು ಚರ್ಚಾಸ್ಪದ ವಿಷಯ. ಹಿರಿಯ ಬಂಡವಾಳಶಾಹಿ ರಾಷ್ಟ್ರಗಳ ಆರ್ಥಿಕತೆಗಳಲ್ಲಿ ಆಂತರಿಕ ಅಸ್ತಿಮಿತತೆ ಮತ್ತು ಪ್ರಪಂಚ ಹಣಕಾಸುವ್ಯವಸ್ಥೆಯ ಲೋಪದೋಷಗಳ ಪರಿಣಾಮವಾಗಿ ಅಂತಾರಾಷ್ಟ್ರೀಯ ಆರ್ಥಿಕ ಹಿನ್ನೆಲೆ ತೀವ್ರವಾಗಿಬದಲಾಯಿಸಿತ್ತು. ಹಿಂದಿನ ಸ್ವರ್ಣಪ್ರಮಿತಿ ಕುಸಿದುದರಿಂದ ವಿವಿಧ ರಾಷ್ಟ್ರಗಳ ಆರ್ಥಿಕತೆಗಳನ್ನು ಒಂದು ವ್ಯೂಹದಲ್ಲಿ ಇಡಬಲ್ಲ ಮುಖ್ಯ ಯಂತ್ರವಿಲ್ಲದಂತಾಯಿತು. ಜೊತೆಗೆ ಆ ರಾಷ್ತ್ರಗಳು ಘೋರ ಮುಗ್ಗಟ್ಟಿನ ತೆಕ್ಕೆಯಲ್ಲಿ ಸಿಕ್ಕಿಬಿದ್ದಿದ್ದವು. ಹೀಗೆ ಕದಡಿದ ಈ ಆರ್ಥಿಕ ಪರಿಸ್ಥಿತಿಯಲ್ಲದೆ ರಾಜಕೀಯ ಅಭದ್ರತೆಯೂ ಉಂಟಾದ್ದರಿಂದ ಪ್ರಪಂಚದ ವಾತಾವರಣ ತೊಡಕಿನ ಸಮಸ್ಯೆಗಳಿಂದ ತುಂಬಿತ್ತು ಇಂತ ಸಂದರ್ಬದಲ್ಲಿ ವಿವಿದ ರಾಷ್ಟ್ರಗಳು ತಮ್ಮ ತಮ್ಮ ವಿಶೇಷ ಆಕಾಂಕ್ಷೆಗಳನ್ನೂ ಅವಸರದ ಸಮಸ್ಯೆಗಳನ್ನೂ ಪ್ರಧಾನವಾಗಿಟ್ಟುಕೊಂಡು ಕೈಗೊಂಡಕ್ರಮಗಳು ಮೇಲೆ ಹೇಳಿದ ವಿವಿದ ಸ್ವರೂಪದ ರಾಷ್ಟ್ರೀಯತಾ ಕ್ರಮಗಳಾದವು. ಆದರೆ ಒಟ್ಟಿನಲ್ಲಿ ಅಂಥ ರಾಷ್ಟ್ರೀಯತೆ ಧೀರ್ಘಕಾಲಾವಧಿಯ ದೃಷ್ಟಿಯಿಂದ ಯಾವ ಹಿರಿಯ ಪ್ರಪಂಚ ಸಮಸ್ಯೆಯನ್ನೂ ಬಗೆಹರಿಸಲಿಲ್ಲವೆಂಬುದು ಅನುಭವವೇದ್ಯವಾಗಿದೆ.

ಆರ್ಥಿಕ ರಾಷ್ಟ್ರೀಯತೆಗೆ ಹಲವಾರು ಪ್ರೇರಕ ಶಕ್ತಿಗಳಿರುವುದನ್ನೂ ಅದು ವಿವಿದ ಸ್ವರೂಪ ತಾಳಿರುವುದನ್ನೂ ಇವುಗಳಿಗನುಗುಣವಾಗಿ ವಿವಿದ ಪರಿಣಾಮಗಳು ಉಂಟಾಗಿರುವುದನ್ನೂ ವಿವರಿಸಲಾಯಿತು.ವಿವಿದ ರಾಷ್ಟ್ರಗಳ ಹಿತಾಸಕ್ತಿಗಳು ಭಿನ್ನಭಿನ್ನವಾಗಿರುವ ಮತ್ತು ಅವು ಅಂತಾರಾಷ್ಟ್ರೀಯ ಹಿತಾಸಕ್ತಿಗಳೂಡನೆ ಸಮ್ಮಿಳಿತಗೊಳಿಸಲು ಸಾಧ್ಯವಾಗದ ಪರಿಸ್ಥಿತಿಯಿರುವವರೆಗೆ ಒಂದಲ್ಲ ಒಂದು ರೀತಿಯ ಆರ್ಥಿಕ ರಾಷ್ಟ್ರೀಯತೆ ತಲೆದೋರುವುದು ಅನಿವಾರ್ಯ. ಇಂದಿನ ಪ್ರಪಂಚದಲ್ಲಿ ಅಂತಾರಾಷ್ಟ್ರೀಯ ಸಹಕಾರಯಂತ್ರವಾದ ವಿಶ್ವಸಂಸ್ಥೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯತೆ ರೂಪುಗೊಳ್ಳುತ್ತಿದೆ. ಅದರ ಸದಸ್ಯರಾಷ್ಟಗಳು ಉದಾತ್ತ ಆರ್ಥಿಕನೀತಿಗಳ ಧ್ಯೇಯವನ್ನು ಒಪ್ಪಿಕೊಂಡಿವೆ. ಆದರೂ ಆರ್ಥಿಕ ಸ್ವಸಂಪೂರ್ಣತೆಯ ಹಂಬಲ, ತೀವ್ರ ಆರ್ಥಿಕಾಭಿವೃದ್ಧಿಯ ಆಕಾಂಕ್ಷೆ, ಕಮ್ಯೂನಿಸಂ ಧ್ಯೇಯ, ವಸಾಹತುಶಾಹಿ ವಿರೋಧ ಇತ್ಯಾದಿ ಪ್ರೇರಕಶಕ್ತಿಗಳು, ವಿವಿದ ರೀತಿಯ ಆರ್ಥಿಕರಾಷ್ಟ್ರೀಯತೆಗೆ ಪೋಷಕವಾಗಿ ನಿಂತಿವೆ. ಅಂತಾರಾಷ್ಟ್ರೀಯ ವೈಮನಸ್ಯವನ್ನು ಬೆಳೆಸದೆ, ಈ ಆರ್ಥಿಕ ರಾಷ್ಟ್ರೀಯತೆ ಕೇವಲ ಅಭಿವೃದ್ಧಿಗೆ ಪೋಷಕವಾಗಿರುವುದಾದರೆ, ಅದು ಅಪೇಕ್ಷಣೀಯ ಶಕ್ತಿಯಾಗುತ್ತದೆ. ಮಿತಿಮೀರಿದರೆ ರಾಷ್ಟ್ರಗಳೊಳಗೆ ವೈಮನಸ್ಯ, ಕಲಹ, ದುಷ್ಪರಿಣಾಮಗಳು ಉಂಟಾಗಿ ಆರ್ಥಿಕರಾಷ್ಟ್ರೀಯತೆ ಸಾರ್ವತ್ರಿಕವಾಗಿ ಅನಿಷ್ಟಕರವಾಗಬಹುದು. (ಎ.ಸಿ.ಎಸ್.)

ಆರ್ಥಿಕ ಸಂಖ್ಯಾಶಾಸ್ತ್ರ: ಅರ್ಥವಿಜ್ಞಾನವೇ ಮೊದಲಾದ ಸಮಾಜಶಾಸ್ತ್ರಗಳ ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಹೊಸದಾದ ಫಲಕಗಳನ್ನು ತರ್ಕದ ರೀತಿಯಲ್ಲಿ ಸಿದ್ಧಗೊಳಿಸಲು ಸಂಖ್ಯಾಶಾಸ್ತ್ರದ ನೆರವಿನಿಂದ ಮಾಡುವ ಅಭ್ಯಾಸ (ಎಕನಾಮಿಕ್ ಸ್ಟ್ಯಾಟಿಸ್ಸ್ಟಿಕ್ಸ್). ಸಂಖ್ಯಾಶಾಸ್ತ್ರದ ಸಿದ್ಧಾಂತಗಳನ್ನೂ ಶೋದನಾ ಕ್ರಮಗಳನ್ನೂ ಪ್ರಯೋಗಮಾಡಿ ಇತರ ಶಾಸ್ತ್ರಗಳ ಬೆಳೆವಣಿಗೆಯನ್ನು ತೀವ್ರಗೊಳಿಸಬಹುದು. ಅಂಥ ಪ್ರಯೋಗಗಳು ಅರ್ಥವಿಜ್ಞಾನಕ್ಕೆ ಯಾವ ರೀತಿ ಅನ್ವಯಿಸುವುವು ಮತ್ತು ಯಾವ ಫಲವನ್ನು ದೊರಕಿಸಿಕೊಡಬಹುದು ಎಂಬುದನ್ನು ಇಲ್ಲಿ ಪರಿಶೀಲಿಸಲಾಗಿದೆ.

ರಾಜ್ಯಾಡಳಿತದಲ್ಲಿ ಅನುಷಂಗಿಕವಾಗಿ ಆರ್ಥಿಕ ಮತ್ತು ಸಾಮಾಜಿಕ, ಔದ್ಯೋಗಿಕ ಮತ್ತು ವಾಣಿಜ್ಯ ಮುಂತಾದ ಕ್ಷೇತ್ರಗಳಿಗೆ ಸಂಬಂಧಪಟ್ಟ ಅಂಕಿಅಂಶಗಳು ಹೇರಳವಾಗಿ ಶೇಖರಣೆಯಾಗುತ್ತವೆ. ಕೃಷಿ ಮತ್ತು ಹೈನುಗಳಿಂದ ಉತ್ಪತ್ತಿ, ಖನಿಜ ಪದಾರ್ಥಗಳ ಎತ್ತುವಳಿ, ಕಾರ್ಖಾನೆಗಳ ಹುಟ್ಟುವಳಿ, ವ್ಯಾಪಾರ ಮತ್ತು ಸಂಚಾರ ಸಾರಿಗೆಗಳ ಮಾಹಿತಿ, ತೆರಿಗೆಗಳು ಮತ್ತು ಸುಂಕಗಳ ವಸೂಲಿ, ಹೊರನಾಡುಗಳೊಡನೆ ನಡೆಸುವ ವ್ಯಾಪಾರದ ಮೊಬಲಗು, ನಿರುದ್ಯೋಗಿಗಳ ಸಂಖ್ಯೆ ಮುಂತಾದ ಅನೇಕ ತರಹದ ಸಂಖ್ಯಾತ್ಮಕ ವಿವರಗಳು ಆಡಳಿತದ ಉಪಫಲವಾಗಿ (ಬೈಪ್ರಾಡಕ್ಟ್) ದೊರೆಯುತ್ತವೆ. ಹಲಕೆಲವು ವಿಶಿಷ್ಟ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ನಡೆಸುವ ತಪಾಸಣೆಗಳಿಂದಲೂ (ಇನ್ ಕ್ವೈರಿ) ಅಂಕಿಸಂಖ್ಯೆಗಳು ದೊರೆಯುತ್ತವೆ. ಜನಗಣತಿ, ಜಾನುವಾರು ಗಣತಿ, ಔದ್ಯೋಗಿಕ ಹುಟ್ಟುವಳಿಯ ಗಣತಿ ಮೊದಲಾದವು ಈ ವರ್ಗಕ್ಕೆ ಸೇರಿದವು.

ಭಾರತದ ಕೇಂದ್ರ ಸರ್ಕಾರದ ಕೇಂದ್ರೀಯ ಸಾಂಖ್ಯಕೀಯ ಸಂಸ್ಥೆ, ಆರ್ಥಿಕ ಮತ್ತು ಇತರ ಅಂಕಿ ಅಂಶಗಳನ್ನು ಶೇಕರಿಸಿ, ಅವುಗಳನ್ನು ವರ್ಗೀಕರಿಸಿ ಭಾರತದ ಸಾಂಖ್ಯಕೀಯ ಗೋಷ್ವಾರೆ (ಸ್ಟ್ಯಾಟಿಸ್ಟಿಕಲ್ ಅಬ್ ಸ್ಟ್ರಾಕ್ಟ್ ಆಫ್ ಇಂಡಿಯ) ಎಂಬಾಭಿಧಾನದ ಪ್ರಕಟನೆಯನ್ನು ವಷಂಪ್ರತಿ ಮಾಡುತ್ತಲಿದೆ. ಈ ಪ್ರಕಟಣೆಯ ಮೂಲಕ ದೇಶದ ಆರ್ಥಿಕ ಯೋಜನೆಗೆ ಬೇಕಾದ ಮೂಲಸಾಮಾಗ್ರಿಗಳು ಕಾಲಕಾಲಕ್ಕೆ ದೊರೆಯುವಂತಾಗುತ್ತದೆ.ಅರ್ಥಶಾಸ್ತ್ರಜ್ಞರಿಗೂ ಇತರ ಸಂಶೋಧಕರಿಗೂ ಇವು ಬಹಳ ಉಪಯೋಗವಾಗುವುದು. ಆರ್ಥಿಕಕ್ಷೇತ್ರಕ್ಕೆ ಸಂಬಂಧಿಸಿದ ಗೋಷ್ವಾರೆಗಳು ಹೊರಬೀಳುತ್ತವೆ ಮತ್ತು ಅವುಗಳನ್ನು ಹೇಗೆ ಬಳಸಬಹುದು ಎಂಬುದನ್ನು ಕುರಿತು ಸಂಕ್ಷಿಪ್ತವಾಗಿ ಇಲ್ಲಿ ವಿಮರ್ಶಿಸಲಾಗಿದೆ.

೧. ದೇಶದ ವಿಸ್ತೀರ್ಣ ಮತ್ತು ಜನಸಂಖ್ಯೆ: ಇದು ಎಲ್ಲ ವಿಧವಾದ ಯೋಜನೆಗಳಿಗೂ ತಳಹದಿಯಂಥ ಅಂಶ. ಗ್ರಾಮಾಂತರಗಳಲ್ಲೂ ಪಟ್ಟಣವಾಸಗಳಲ್ಲೂ ಯಾವ ಪ್ರಮಾಣದ ಜನತೆ ಹೆಚ್ಹಿದೆ, ಜನನಿಬಿಡವಾದ ಪ್ರದೇಶಗಳಾವುವು, ದೇಶದ ಜನಸಂಖ್ಯೆ ಯಾವ ಪ್ರಮಾಣದಲ್ಲಿ ಹೆಚ್ಚುತ್ತಲಿದೆ. ಯಾವ ರಾಜ್ಯಗಳಲ್ಲಿ ಜನವೃದ್ಧಿಯ ಪ್ರಮಾಣ ಆಂತರಿಕವಾಗಿ ಏರುತ್ತಿದೆ ಇವೇ ಮುಂತಾದ ವಿಷಯಗಳನ್ನು ಈ ಅಂಕಿ ಸಂಖ್ಯೆಗಳಿಂದ ತಿಳಿಯಬಹುದಾಗಿದೆ. ಬಾರತದ ವಿಸ್ತೀರ್ಣ ೩೨.೭೬ ಲಕ್ಷ ಚದರ ಕಿಲೋಮೀಟರುಗಳು (೧೨.೬ ಲಕ್ಷ ಮೈಲಿಗಳು) ಇರುವುದು, ಮತ್ತು ಮೇ ೧೧, ೨೦೦೦ರಲ್ಲಿ ಭಾರತದ ಜನಸಂಖ್ಯೆ ೧ ಬಿಲಿಯನ್ ತಲುಪಿತು. ವಿಸ್ತೀರ್ಣದಲ್ಲಿ ಎಲ್ಲಕ್ಕಿಂತ ದೊಡ್ಡ ರಾಜ್ಯವೆಂದರೆ ರಾಜಾಸ್ತಾನ (೩೪೨,೨೩೬ ಚ ಕಿ.ಮೀ) ಅನಂತರ ಮಧ್ಯಪ್ರದೇಶ ೩೦೮,೧೪೪ ಚದರ ಕಿಲೋಮೀಟರುಗಳು). ಎಲ್ಲಕ್ಕಿಂತ ಕಡಿಮೆ ವಿಸ್ತೀರ್ಣದ ಎರಡು ರಾಜ್ಯಗಳೆಂದರೆ, ಕೇರಳ (೮೩೬ ಚದರ ಕಿಲೋಮೀಟರುಗಳು), ಮತ್ತು ಪಶಿಮ ಬಂಗಾಲ (೮೮,೭೫೨ ಚದರ ಕಿಲೋಮೀಟರುಗಳು), ಕರ್ನಾಟಕ ರಾಜ್ಯದ ವಿಸ್ತೀರ್ಣ೧೯೭,೭೯೧ ಚದರ ಕಿಲೋಮೀಟರುಗಳು.

ಜನಸಂಖ್ಯೆಯಲ್ಲಿ ಎಲ್ಲಕ್ಕಿಂತ ದೊಡ್ಡ ರಾಜ್ಯ ಉತ್ತರಪ್ರದೇಶ (೧೬೬,೧೯೮೦೦) ಎರಡನೆಯದು ಮಹಾರಾಷ್ಟ್ರ (೯೬,೮೭೯೦೦ ಲಕ್ಷ), ಮೂರನೆಯದು ಬಿಹಾರ (೮೨,೯೯೯೦೦೦), ಮತ್ತು ನಾಲ್ಕನೆಯದು ಪಶಿಮ ಬಂಗಾಲ (೮೦,೭೬೦೦೦ಲಕ್ಷ).

೨. ಜನವೃದ್ಧಿಯ ದರ : ಹಿಂದಿನ ಜನಗಣತಿಯ ಅಂಕಿಸಂಖ್ಯೆಗಳ ಆಧಾರದ ಮೇಲೆ ಯಾವ ದರದಲ್ಲಿ ಜನವೃದ್ಧಿ ಆಗುತ್ತಲಿದೆ ಎಂದು ತಿಳಿಯುವುದು ಮತ್ತೊಂದು ಮುಖ್ಯ ವಿಷಯ. ರಾಷ್ಟ್ರದ ಜನಬಲ ಹೇಗೆ ಉಳಿಯುತ್ತಿದೆ, ವಾಂಛನೀಯ ದರಕ್ಕಿಂತ ಹೆಚ್ಚೇ ಕಡಿಮೆಯೇ, ಇದಕ್ಕನುಸಾರವಾಗಿ ಆರ್ಥಿಕ ಯೋಜನೆಗಳಲ್ಲಿ ಏನೇನು ಮಾರ್ಪಾಡುಗಳನ್ನು ಮಾಡಬೇಕು ಎನ್ನುವುದನ್ನೆಲ್ಲ ವಿಮರ್ಶಿಸಬೇಕಾಗುವುದು.

೧೯೪೧-೫೧ರ ದಶಕದಲ್ಲಿ ಭಾರತದ ಜನಸಂಖ್ಯೆ ೩೧.೯ ಕೋಟಿಯಿಂದ ೩೬.೧ ಕೋಟಿಹೆಚ್ಚಿತು. ಅಂದರೆ ಶೇ.೧೩.೩ ವೃದ್ದಿಹೊಂದಿತು. ಮುಂದಿನ ದಶಕದಲ್ಲಿ ೩೬.೧ ಕೋಟಿಯಿಂದ ೪೩.೮ ಕೋಟಿಗೆ ಹೆಚ್ಚಿತು ಮತ್ತು ಹೆಚ್ಚಿಗೆಯ ದರ ದಶಕದಲ್ಲಿ ಶೇ.೨೧.೫ ಏರಿತು. ಹೆಚ್ಚಿನ ದರದಲ್ಲಿ ಜನಸಂಖ್ಯೆ ಬೆಳೆದಿರುವ ರಾಜ್ಯಗಳೆಂದರೆ ಅಸ್ಸಾಂ ಶೇ.೩೪.೫, ಪಶ್ಚಿಮ ಬಂಗಾಲ ಶೇ.೩೨.೮, ಗುಜರಾತ್ ಶೇ.೨೬.೯ ಮತ್ತು ರಾಜಸ್ಥಾನ ಶೇ. ೨೬.೨. ಕರ್ನಾಟಕ ರಾಜ್ಯದ ಜನಸಂಖ್ಯೆ ಶೇ.೨೧.೬. ಬೆಳೆದಿದೆ.

ಬಹುಶಃ ಇದೇ ದರದಲ್ಲಿ ಮುಂದೆಯೂ ದೇಶದ ಜನಸಂಖ್ಯೆ ಹೆಚ್ಚುತ್ತಲಿದೆ ಎನ್ನಬಹುದು. ೨೦೧೧ರಲ್ಲಿ ೧,೧೯೩,೪೫೮,೦೦೦ರಷ್ಟು ಆಗುವುದೆಂದು ಅಂದಾಜು ಮಾಡಿದ್ದಾರೆ. ಇಷ್ಟು ಜನಕ್ಕೂ ಆಹಾರ ಪದಾರ್ಥಗಳನ್ನೂ ಸುಖದ ಬಾಳುವೆಗೆ ಬೇಕಾದ ಇತರ ಸಾಮಾಗ್ರಿಗಳನ್ನೂ ಸೌಲಭ್ಯಗಳನ್ನೂ ಒದಗಿಸಲು ನಾಡಿನಲ್ಲಿ ಯೋಜನೆಗಳನ್ನು ಅಳವಡಿಸಬೇಕಾಗುವುದು. ಅಲ್ಲದೆ ಜನಸಂಖ್ಯೆಯನ್ನು ಹತೋಟಿಗೆ ತರಲು ಮಿತ ಸಂತಾನ, ಕುಟುಂಬ ಯೋಜನಾಕ್ರಮ ಮೊದಲಾದವುಗಳಿಂದ ಜನಸಂಖ್ಯಾ ನಿಯಂತ್ರಣ ಮಾಡಬೇಕಾಗುವುದು.

೩. ಪುರುಷ-ಸ್ತ್ರೀ ನಿಷ್ಪತ್ತಿ : ಜನಸಂಖ್ಯೆಯ ವೃದ್ಧಿ ತರುಣಸ್ತ್ರೀಯರ ಸಂಖ್ಯೆಯನ್ನು ಅವಲಂಬಿಸಿರುವುದರಿಂದ ಜನತೆಯಲ್ಲಿ ಪುರುಷ-ಸ್ತ್ರೀಯರ ಪ್ರಮಾಣವನ್ನು ಪರಿಶೀಲಿಸಬೇಕಾಗುವುದು. ೧೯೬೧ರ ಜನಗಣತಿಯ ಅಂಕಿಅಂಶಗಳ ಮೇರೆಗೆ ಭಾರತ ದೇಶದಲ್ಲಿ ೧೦೦೦ ಪುರುಷರಿಗೆ ೯೪೧ ಸ್ತ್ರೀಯರು ಇದ್ದರು ೨೦೦೧ರಲ್ಲಿ ೧೦೦೦ ಪುರುಷರಿಗೆ ೯೩೩ ಸ್ತ್ರೀಯರಿದ್ದರು. ಒಟ್ಟಿನಲ್ಲಿ ಹೇಳುವುದಾದರೆ, ೧೦೦೦ ಗಂಡಸರಿದ್ದರೆ ೯೪೩ ಹೆಂಗಸರಿರುವರು. ಈ ಪ್ರಮಾಣಕ್ಕೆ ಪುರುಷ-ಸ್ತ್ರೀಯರ ನಿಷ್ಪತ್ತಿ ಎಂದು ಹೆಸರು. ಕರ್ನಾಟಕ ರಾಜ್ಯದಲ್ಲಿ ಈಗ ಪುರುಷ-ಸ್ತ್ರೀಯರ ಪ್ರಮಾಣ ೧೦೦೦ಕ್ಕೆ ೯೬೪ ಇರುವುದು ಅಭಿವೃದ್ಧಿಹೊಂದಿದ ಪಾಶ್ಚಾತ್ಯ ದೇಶಗಳಲ್ಲಿ ಪುರುಷ-ಸ್ತ್ರೀಯರ ಪ್ರಮಾಣ ೧೦೦೦ಕ್ಕಿಂತ ಹೆಚ್ಚಿರುವುದು. ಆದರೆ ಭಾರತದಲ್ಲೂ ಮತ್ತು ಇತರ ಕೆಲವು ಅಭಿವೃದ್ಧಿಹೊಂದುತ್ತಿರುವ ರಾಜ್ಯಗಳಲ್ಲೂ ಇದು ಕಡಿಮೆಯಾಗಿರುವುದು. ಭಾರತ ದೇಶದಲ್ಲಿ ೧೯೪೧ರಲ್ಲಿ ನಡೆದ ಜನಗಣತಿಯ ಪ್ರಕಾರ ಈ ಪುರುಷ-ಸ್ತ್ರೀ ಪ್ರಮಾಣ ೯೪೫ ಆಗಿದ್ದು ೧೯೫೧ ರಲ್ಲಿ ೯೪೬ ಆಯಿತು. ೧೯೬೧ರಲ್ಲಿ ಮತ್ತೆ ಸ್ವಲ್ಪ ಇಳಿಮುಖವಾಗಿ ೯೪೧ಕ್ಕೆ ಬದಲಾಯಿಸಿತು. ೨೦೦೧ರಲ್ಲಿ ೯೩೩ ಆಗಿದೆ ಈ ವಿಧದ ಬದಲಾವಣೆಗೆ ಖಚಿತವಾದ ಕಾರಣಗಳಾವುದೂ ತಿಳಿದುಬಂದಿಲ್ಲ.