ಪುಟ:Mysore-University-Encyclopaedia-Vol-2-Part-1.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲೇಖ್ಯ. ಕೂಲಂಕಷವಾಗಿ ವಿಶ್ಲೇಷಣೆ ಮಾಡಿದ್ದಾನೆ. ಚಿತ್ರಕಲೆಯಲ್ಲಿ ಆಲೇಖ್ಯದ ಸ್ಥಾನವನ್ನು ಸ್ಪಷ್ಟಪಡಿಸಿದ ಕೀರ್ತಿ ಕ್ರಿಸ್ತಾಬ್ದ 14ನೆಯ ಶತಮಾನದ ಬೆನ್ನಿನೋ ಚೆನ್ನನಿ ಎಂಬ ಬರೆಹಗಾರನದು. ಅವನ ಪ್ರಕಾರ ಆಲೇಖ್ಯ ಪ್ರತಿಭಾಶಾಲಿಯಾದ ಕಲಾವಿದನಿಗೆ ಸಹಜಪ್ರವೃತ್ತಿ, ವಿದ್ಯಾರ್ಥಿಗೆ ಅನಿವಾರ್ಯವಾದ ಅಭ್ಯಾಸ. 1430ರಲ್ಲಿ ಚಿತ್ರಕಲೆಯ ಮೇಲೆ ಗ್ರಂಥವೊಂದನ್ನು ಬರೆದ ಆಲ್ಬರ್ಟಿ ಆಲೇಖ್ಯವನ್ನು ಚಿತ್ರದ ರಚನಾವ್ಯವಸ್ಥೆಗೆ ಸಮನಾದುದೆಂದು ಬಣ್ಣಿಸಿದ. ಚಿತ್ರಕ್ಕಾಗಲೀ ಶಿಲ್ಪಕ್ಕಾಗಲೀ ಇದೇ ಆಧಾರವೆಂದು ಅವನು ಒಪ್ಪಲಿಲ್ಲ. ಆದರೆ 1455ರಲ್ಲಿ ಲೋರೆನ್ಸೊ ಘಿಬೆರ್ಟಿ ಎಂಬ ವಿದ್ವಾಂಸ ಚಿತ್ರದ ಅಥವಾ ಶಿಲ್ಪದ ಹಿನ್ನೆಲೆಯಲ್ಲಿ ಅಗತ್ಯವಾಗಿ ಇರಬೇಕಾದ ತರ್ಕ, ಭಾವನಾವ್ಯವಸ್ಥೆ ಸಂಕಲ್ಪಗಳು ಆಲೇಖ್ಯದ ರೂಪವನ್ನು ತಳೆಯುವುದೆಂದು ವಾದಿಸಿದ. ಲಿಯೋನಾರ್ಡೋ ಡ ವಿಂಚಿ ತಾನು ನಿಸರ್ಗದಲ್ಲಿ ಅಧ್ಯಯನ ಮಾಡಿದ ವಸ್ತುಗಳನ್ನು ಪ್ರಸಂಗಗಳನ್ನು ಆಲೇಖ್ಯದಲ್ಲಿ ಮೂಡಿಸಿಡುತ್ತಿದ್ದ. ತನ್ನ ನಿರ್ಣಯಗಳನ್ನು ನಿರೂಪಿಸಲು ಆಲೇಖ್ಯವೊಂದು ಸಾಧನ (ಇನ್‍ಸ್ಟ್ರುಮೆಂಟ್). ಅಷ್ಟಲ್ಲದೆ, ಪ್ರಕೃತಿಯಲ್ಲಿನ ಪದಾರ್ಥಗಳನ್ನು ಚಿತ್ತವು ಅಂತರ್ದೃಷ್ಟಿಯಿಂದ ಗ್ರಹಿಸುವಾಗ ಸ್ಥೂಲ ಆಕಾರದ ಹಿನ್ನೆಲೆಯಲ್ಲಿರುವ ರೇಖಾಮಯ ರಚನೆಯನ್ನು ಕಲ್ಪಿಸಿಕೊಳ್ಳುವುದೆಂದೂ ಇದೇ ಲೇಖ್ಯದ ಮೂಲವೆಂದೂ ಅವನ ವಾದವಾಗಿತ್ತು. ವೆನಿಸ್‍ನಲ್ಲಿ ಪವೋಲೋ ಪಿನೋ (1548) ಎಂಬುವವ ಚಿತ್ರಕ್ಕೆ ಆಲೇಖ್ಯ, ಕಲ್ಪನೆ, ಬಣ್ಣ ಎಂಬ ಮೂರು ಅಂಗಗಳನ್ನೂ ಹೇಳಿ ಆಲೇಖ್ಯ ಎಂಬುದನ್ನು ನಿರ್ಣಯ, ಮೇಲ್ಮೈ ನಿರೂಪಣೆ, ಸಂವಿಧಾನ, ನಿರ್ದಿಷ್ಟ ದೃಶ್ಯವ್ಯವಸ್ಥೆ ಎಂಬ ನಾಲ್ಕು ವಿಭಾಗಗಳಲ್ಲಿ ವಿವರಿಸಿದ. ನಿರ್ಣಯವೆಂಬುದು ಕಲೆಗಾರನ ಚಿತ್ತಭಿತ್ತಿಯಲ್ಲಿ ಮೂಡಿಬಂದ ಕಲ್ಪಿತಬಿಂಬ. ಲುಡೋವಿಕೊ ಡೋಲ್ಸೆ ಎಂಬುವವ ಆಲೇಖ್ಯವನ್ನು ದೃಶ್ಯವಸ್ತುಗಳಿಗೆ ಆಕೃತಿಯನ್ನು ಒದಗಿಸುವ ರೇಖೆಗಳ ವಿನ್ಯಾಸ ಎಂದು ನಿರ್ದೇಶಿಸಿದ.

ಭೌತವಾಗಿ ನಾಮರೂಪಗಳ ವಿಶ್ವ ಸ್ಪಷ್ಟವಾಗುವ ಮುನ್ನ ಭಗವಂತನ ಕಲ್ಪನಾ ವ್ಯಾಪಾರಕ್ಕೂ ಆಲೇಖ್ಯಕ್ಕೂ ಸಾಮ್ಯವನ್ನು ನಿರೂಪಿಸಿದ ಸಾಹಸ ಆಂತಾನ್ ಫ್ರಾನ್ಸಿಸ್ಕೊ ದೋನಿಯದು (1549). ಆ ಯುಗದ ಅತ್ಯಂತ ಪ್ರತಿಭಾಶಾಲಿ ವಿಮರ್ಶಕ ಹಾಗೂ ಇತಿಹಾಸಕಾರನಾದ ಜಾರ್ಜಿಯೋ ವಸಾರಿ ಆಲೇಖ್ಯ ಬಾಹ್ಯವಸ್ತುವಿನ ಕಲ್ಪಿತಬಿಂಬವೆಂದೂ ಅದರ ಉಗಮಸ್ಥಾನ ಕಲೆಗಾರನ ಬುದ್ಧಿಶಕ್ತಿಯೆಂದೂ ಆದರೆ ಅದರ ಅಭಿವ್ಯಕ್ತಿ ಬುದ್ಧಿಶಕ್ತಿಗೆ ಅಧೀನವಲ್ಲವೆಂದೂ ಈ ಕಲ್ಪಿತಬಿಂಬ ಆಲೇಖ್ಯದ ನೆರವಿನಿಂದ ಮೂರ್ತಸ್ವರೂಪ ತಳೆಯುವುವೆಂದೂ ಹೇಳಿದ. ಫೆಡರಿಗೋ ಜಕಾರಿ ಎಂಬ ನವ್ಯ ಪ್ಲೇಟೋ ಸಿದ್ಧಾಂತ ಪ್ರತಿಪಾದಕ ಆಲೇಖ್ಯದ ಸ್ಫೂರ್ತಿ ಭಗವಂತನಿಂದಲೇ ಮನುಷ್ಯನ ಮನಸ್ಸಿನಲ್ಲಿ ಅವತರಿಸಿದ ಭಾವನೆ ಎಂಬ ವಾದವನ್ನು ಮಂಡಿಸಿದ. ಆಲೇಖ್ಯ ಚಿತ್ರಕಲೆಯ ತಂದೆ ಎಂಬ ಕಲ್ಪನೆ ಪ್ಯಾಸ್ಸರಿಯಿಂದ (1772) ಊರ್ಜಿತವಾಯಿತು. ಗ್ರಂಥ ಬರೆಯುವ ಮುನ್ನ ಗ್ರಂಥಕರ್ತೃ ವಿಷಯಗಳ ಮೇಲೆ ಟಿಪ್ಪಣಿಗಳನ್ನು ಸಿದ್ಧಮಾಡಿಕೊಂಡಂತೆ ಆಲೇಖ್ಯವೂ ಚಿತ್ರ ಸಿದ್ಧವಾಗಲು ನೆರವಾಗುತ್ತದೆ ಎಂದು ವೆನಿಸ್ ನಗರದ ಮಾರ್ಕೋ ಬೋಷಿನಿಯ ವಾದ.

ಈ ಸಿದ್ಧಾಂತಗಳು ಏನೇ ಇರಲಿ, ಫ್ಲಾರೆಂಟೈನ್ ಕಲೆಗಾರರು ಆಲೇಖ್ಯವನ್ನು ಅತಿ ಮುಖ್ಯವಾಗಿ ಬಗೆದು ಜಗದ್ವಿಖ್ಯಾತವಾದ ಆಲೇಖ್ಯಗಳನ್ನು ಸಿದ್ಧಮಾಡಿದರು. ಲೊರೆನ್ಜೊ, ಗಿಲ್ಬೆರ್ಟಿ, ಏಂಜಲಿಕೊ, ಜನೋಬಿ, ಸ್ಟ್ರೋಜ್ಜಿ, ಬೆನೊಜೊ, ಗೊಜ್ಜೋಲಿ, ಪವೋಲೊ, ಡೊನಟೆಲ್ಲೊ, ಫಿಲಿಪ್ಪೊ ಲಿಪ್ಟಿ, ಆಂಟೋನಿಯೊ, ಪೋಲ್ಲ್ಯುಓಲೊ, ವೆರೋಕ್ಬಿಯೊ, ಡಾಮಿನಿಕೊ, ಫಿರ್ಲಾಂಡಜೋ, ಫ್ರಾನ್ಸಿಸ್ಕೊ ಡಿ ಜಾರ್ಜಿಯೋ - ಮೊದಲಾದ ಕಲಾವಿದರ ಆಲೇಖ್ಯಗಳು ಪಾಶ್ಚಾತ್ಯಕಲೆಯ ಇತಿಹಾಸದಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದಿವೆ. ಸಾಂಸ್ಕತಿಕ ಪುನರುಜ್ಜೀವನದ ಯುಗದಲ್ಲಿ ಮೈದಳೆದ ಜಾಕೊಪೊ ಬೆಲ್ಲಿನಿಯ ಆಲೇಖ್ಯ ಸಂಗ್ರಹ ಸ್ವಾರಸ್ಯವಾಗಿದೆ. 16ನೆಯ ಶತಮಾನದ ಇಟಲಿಯಲ್ಲಿ ಆಲೇಖ್ಯ ಇನ್ನೂ ಹಿರಿಮೆಯ ಸ್ಥಾನವನ್ನು ಪಡೆಯಿತು. ವಿಶ್ವವಿಖ್ಯಾತ ಕಲೆಗಾರನಾದ ಲಿಯೋನಾರ್ಡೋ ಡ ವಿಂಚಿ ಮತ್ತು ಮೈಕೆಲ್ ಏಂಜಿಲೊಗಳ ಮತ್ತು ಇವರ ಅನುಯಾಯಿಗಳ ಆಲೇಖ್ಯಗಳು ವಿಪುಲವಾಗಿವೆ. ರ್ಯಾಫೆಲ್, ಪೆರುಜ್ಜಿ, ಬ್ರಮಾನ್ಟೆ, ಟೆಂಟಿರೊಟ್ಟೆ, ವೆರೊನೀಸ್ ಮೊದಲಾದವರು ಈ ಜಾಡನ್ನೇ ಹಿಡಿದು ಆಲೇಖ್ಯದ ವೈಶಿಷ್ಟ್ಯದಿಂದಾಗಿ ಕಲಾಕ್ರಾಂತಿಯನ್ನೇ ಉಂಟುಮಾಡಿದರು.

ಆಧುನಿಕ ಯುಗದಲ್ಲಿ ಆಲೇಖ್ಯದಂತೆಯೇ ಸರಳವಾದ ಚಿತ್ರಗಳನ್ನು ಬಿಡಿಸುವ ಪದ್ಧತಿ ಪ್ರವೃತ್ತವಾಗಿದೆ. ಹೋಮರ್ (1793), ಇಂಗ್ರೆಸ್, ಪೋಹ್ರ್ಪಾ ಮರ್ ಮೊದಲಾದವರು ತಮ್ಮ ಚಿತ್ರಗಳನ್ನು ಹೀಗೆಯೇ ರಚಿಸಿದ್ದಾರೆ. ಆಲೇಖ್ಯ ಬರಿಯ ರೇಖಾಮಯವಾಗಿರಬೇಕೆಂದು ಪ್ರಚಲಿತವಾದ ಮತ; ಅಷ್ಟಲ್ಲದೆ ಅದು ಧ್ವನಿಯಂತೆ ಅದರ ವಸ್ತುವನ್ನು ಸೂಚಿಸಬೇಕು. ಲೇಖ್ಯದಲ್ಲೇ ಕಲಾಕ್ರಿಯೆ ಸಂಪನ್ನವಾಗಿರದೆ ಅದು ಚಿತ್ರದಲ್ಲಿ ವ್ಯಕ್ತವಾಗುತ್ತದೆ. ಹೀಗೆ ಇದಕ್ಕೆ ಕಾವ್ಯದ ಲಕ್ಷಣಗಳನ್ನು ಹೇಳುವ ಆಧುನಿಕ ವಿಮರ್ಶಕರಿದ್ದಾರೆ. ಆದರೆ ಕೂರ್ಬೆ, ಮಿಲೆ ಮೊದಲಾದವರ ಆಲೇಖ್ಯಗಳು ಅಷ್ಟು ಉನ್ನತಮಟ್ಟದಲ್ಲವೆಂದು ತಜ್ಞರ ಅಭಿಮತ.


ಭಾರತ ದೇಶದಲ್ಲಿ ಆಲೇಖ್ಯವೆಂಬುದು ತುಂಬ ಪ್ರಾಚೀನವಾದ ಕ್ರಿಯೆ. ಇದರ ಉಲ್ಲೇಖ ವಿಷ್ಣುಧರ್ಮೋತ್ತರದಲ್ಲಿ ಬರುತ್ತದೆ. ಆಲೇಖ್ಯವಿನೋದ ಎಂಬ ಶಬ್ದ ಹಲವು ಪ್ರಾಚೀನ ಸಂಸ್ಕøತ ಕಾವ್ಯಗಳಲ್ಲಿ ಕಾಣಬರುತ್ತದೆ. ಚಿತ್ರಕಲೆಯ ಅಂಗವಾಗಿ ಆಲೇಖ್ಯವನ್ನು ಸಿದ್ಧಮಾಡಿಕೊಳ್ಳುತ್ತಿದ್ದ ಪದ್ಧತಿ 4-5ನೆಯ ಶತಮಾನಗಳಲ್ಲೇ ಸ್ಪಷ್ಟವಾಗುತ್ತದೆ. ಗುಪ್ತಶೈಲಿಯ ಶಿಲ್ಪದಲ್ಲಿ ಕೂಡ ಆಲೇಖ್ಯ ಅಗತ್ಯವಾದ ಸನ್ನಾಹ. ಆದರೆ ಆಲೇಖ್ಯ ವಿಶಿಷ್ಟವಾದ ಕಲೆಯಾಗಿ ಮೈದಳೆದದ್ದು ಕ್ರಿಸ್ತಾಬ್ದ 16ನೆಯ ಶತಮಾನದ ಆದಿಭಾಗದಲ್ಲಿ; ಪರ್ಷಿಯ ದೇಶದಿಂದ ಮೊಗಲ ಅರಸರ ಆಸ್ಥಾನಕ್ಕೆ ಬಂದ ಕಲಾವಿದರು ಈ ಕಲೆಯನ್ನು ತಮ್ಮೊಂದಿಗೆ ತಂದರು. ಪರ್ಷಿಯ ದೇಶಕ್ಕೆ ಅದು ಬಂದುದು ಚೀನ ದೇಶದಿಂದ ಎಂದು ಹೇಳುತ್ತಾರೆ. ಆ ಕಾಲಕ್ಕೆ ಮುಂಚೆ ಆಲೇಖ್ಯವಿರಲಿಲ್ಲವೆಂದಲ್ಲ. ಭಿತ್ತಿಚಿತ್ರಗಳಲ್ಲಿ, ಗುಹಾಚಿತ್ರಗಳಲ್ಲಿ, ನಿದರ್ಶನಕ್ಕೆ ಅಜಂತ, ಬಾಗ್, ಸಿತ್ತನವಾಸಲ್ ಕಲಾಶೈಲಿಗಳಲ್ಲಿ ರೇಖಾಚಿತ್ರಗಳನ್ನೂ ಆಲೇಖ್ಯಗಳನ್ನೂ ಕಾಣುತ್ತೇವೆ. ಆದರೆ ಸ್ವತಂತ್ರ್ಯವಾದ ಸಂವಿಧಾನದಂತೆ ಬೆಳೆದದ್ದು ಮೊಗಲ್ ಅರಸರ ಆಶ್ರಯದಲ್ಲಿಯೇ. ಆಲೇಖ್ಯಗಳನ್ನು ಸ್ವಸಂಪೂರ್ಣವಾಗಿಯೇ ಉಳಿಸಿಕೊಂಡು ಬರುವ ಪದ್ಧತಿಗೆ ಇರಾನೀ ಕಲಂ ಎಂದು ಹೆಸರು. ಈ ಆಲೇಖ್ಯಕಾರರಿಗೆ ಆದರ್ಶಪ್ರಾಯರಾದವರು ಬಿಹಾಜಾದ್, ಆಖಾ ರಿಜಾ ಮತ್ತು ರಿಜಾ ಇ ಅಬ್ಬಾಸಿ ಎಂಬ ಪರ್ಷಿಯ ಕಲೆಗಾರರು. ಈ ಪದ್ಧತಿಯಲ್ಲಿ ಬಿಳಿ ಹಾಳೆಗಳ ಮೇಲೆ ಕರಿ ಶಾಯಿಯಿಂದ ಲೆಕ್ಕಣಿಕೆಯ ಮುಳ್ಳನ್ನು ಉಪಯೋಗಿಸಿ ಬರೆಯುತ್ತಿದ್ದರು. ಕೆಲವೊಮ್ಮೆ ಕುಂಚಾಗ್ರದಿಂದ ಕೆಂಪು, ಹಸಿರು, ನೀಲಿ, ಸುವರ್ಣ ಈ ಬಣ್ಣಗಳನ್ನು ಮೂಡಿಸುತ್ತಿದ್ದರು. ಮೊಗಲ್ ಚಕ್ರವರ್ತಿಗಳಲ್ಲಿ ಜಹಾಂಗೀರನಿಗೆ (1605-

7) ಆಲೇಖ್ಯಗಳ ಮೇಲೆ ತುಂಬ ಪ್ರೀತಿಯಿತ್ತು. ಇವನ ಮತ್ತು ಷಹಜಹಾನನ ಕಾಲದಲ್ಲಿ (1628-58) ಆಲೇಖ್ಯ ತುಂಬ ಪ್ರಚಲಿತವಾದ ಕಲೆಯಾಗಿತ್ತು. ಜಹಾಂಗೀರ್ ತನ್ನ ತಾರುಣ್ಯದಲ್ಲಿ ಕಾಂದಹಾರದಿಂದ ಆಖಾ ರಿಜಾ ಎಂಬ ಪರ್ಷಿಯನ್ ಕಲೆಗಾರನನ್ನು ಭಾರತಕ್ಕೆ ಕರೆಸಿಕೊಂಡು ಅವನನ್ನು ತನ್ನ ಮಿತ್ರನಾಗಿಸಿಕೊಂಡಿದ್ದ. ಮೊಗಲ್ ಆಸ್ಥಾನಕ್ಕೆ ಧರ್ಮಪ್ರಚಾರದ ದೃಷ್ಟಿಯಿಂದ ಬಂದ ಚೆಸ್ಯೊಟ್ ಜನರು ತಮ್ಮೊಂದಿಗೆ ಆಲೇಖ್ಯ ಸಂವಿಧಾನಗಳನ್ನು ತಂದರು. ನಾದಿರ್-ಅಸ್-ಸಮಾನ್, ಮನ್ಸೂರ್ ಮೊದಲಾದವರು ಈ ಪ್ರಭಾವದಿಂದ ಕಾಣಿಸಿಕೊಂಡ ಆಲೇಖ್ಯಕಾರರು. ಮೊಗಲ ರಾಜವಂಶದ ಅವನತಿಯಾದ ಅನಂತರ ಈ ಕಲೆಗೂ ಗ್ಲಾನಿಯೊದಗಿತು. ದಕ್ಷಿಣದಲ್ಲಿ ಎರಡನೆಯ ಇಬ್ರಾಹಿಂ (1580- 1626) ಮತ್ತು ಬಿಜಾಪುರದ ದೊರೆ ಮಹಮ್ಮದ್ ಆದಿಲ್ ಷಾ (1626-56) ಇವರೂ ಆಲೇಖ್ಯವನ್ನು ಪ್ರೋತ್ಸಾಹಿಸಿದ ಅರಸರಲ್ಲಿ ಪ್ರಮುಖರು. ತಿರುವಾಂಕೂರು ಸಂಸ್ಥಾನದಲ್ಲಿ ಈ ಕಲೆ ದೇವದೇವತೆಗಳ ಚಿತ್ರಣಕ್ಕೆಂದು ಮೀಸಲಾಗಿದ್ದಂತೆ ತೋರಿಬರುತ್ತದೆ. ಅಲ್ಲಿನ ಹಲವಾರು ದೇವಾಲಯಗಳಲ್ಲಿ ಉತ್ತಮ ಆಲೇಖ್ಯಗಳಿವೆ. ಲೇಪಾಕ್ಷಿಯ ವೀರಭದ್ರಾಲಯದಲ್ಲೂ ಆಲೇಖ್ಯಗಳೆನ್ನಬಹುದಾದ ಚಿತ್ರಗಳಿವೆ. ಶ್ರೀರಂಗಪಟ್ಟಣದ ದರಿಯಾ ದೌಲತ್ ಅರಮನೆಯ ಭಿತ್ತಿಗಳಲ್ಲಿ ಆಲೇಖ್ಯದ ಪ್ರಭಾವವನ್ನು ಕಾಣಬಹುದು. ಪಾಶ್ಚಾತ್ಯ ಕಲಾವಿದರು ಆ ಕಾಲದಲ್ಲಿ ಮಾಡಿದ ಆಲೇಖ್ಯಗಳನ್ನು ಅಲ್ಲಿಯೇ ಇಟ್ಟಿದ್ದಾರೆ. ನಾಗಾರ್ಜುನ ಕೊಂಡ ಮುಂತಾದೆಡೆ ಕಲ್ಲುಗಳ ಮೇಲೆ ಮೂಡಿಸಿದ ಆಲೇಖ್ಯಗಳಿವೆ. ಈ ಪ್ರಾಚೀನ ಪದ್ಧತಿ ಬಹುಕಾಲ ಉಳಿದುಬಂದಿತು.


ಚೀನ ಮತ್ತು ಜಪಾನ್ ದೇಶಗಳಲ್ಲಿ ಆಲೇಖ್ಯಗಳನ್ನು ಕುಂಚಾಗ್ರದಿಂದಲೇ ಬಿಡಿಸುತ್ತಿದ್ದುದ ರಿಂದ ಆಲೇಖ್ಯಕ್ಕೂ ಚಿತ್ರಕ್ಕೂ ಅಷ್ಟಾಗಿ ವ್ಯತ್ಯಾಸ ಕಾಣಬರಲಿಲ್ಲ. ರೇಖಾಮಯವಾದ ಚಿತ್ರವನ್ನು ಫಿಎಃ-ಹುವಾ ಎಂದು ಚೀನೀ ಜನರು ಕರೆದು ಬಹುಮಟ್ಟಿಗೆ ಇದನ್ನು ಅಕ್ಷರವಿನ್ಯಾಸಕ್ಕೆ ಬಳಸುತ್ತಿದ್ದರು. ಇದಲ್ಲದೆ ಅರಮನೆ, ದೇಗುಲ, ಗೋಪುರ, ಸೇತುವೆ ಇವುಗಳನ್ನು ನೈಜವಾಗಿ ಅತ್ಯಂತ ಕೂಲಂಕಷವಾಗಿ ಯಾವ ವಿವರವನ್ನೂ ಬಿಡದೆ ರೇಖೆಗಳಲ್ಲಿಯೇ ಚಿತ್ರಿಸುವ ಪ್ರತಿಭೆ ಈ ಜನಕ್ಕಿತ್ತು. ಚೀನೀ ಕಲೆಯ ವಿಶೇಷವೆಂದರೆ ಸಂಪನ್ನವಾದ ಚಿತ್ರ ಬಿಡಿಸುವ ಮುನ್ನ ಇವರು ಆಲೇಖ್ಯಗಳನ್ನು ಸಿದ್ಧಪಡಿಸಿಕೊಳ್ಳುತ್ತಿರಲಿಲ್ಲ. ಕಾಗದವನ್ನೂ ರೇಷ್ಮೆ ವಸ್ತ್ರವನ್ನೂ ಹದ ಮಾಡಿಕೊಂಡು ಒಡನೆಯೇ ವರ್ಣಸಂಯೋಜನೆಗೆ ಆರಂಭಿಸುತ್ತಿದ್ದರು. ಆಲೇಖ್ಯ ಅಲ್ಲಲ್ಲಿ ಬಳಕೆಯಲ್ಲಿದ್ದಾಗಲೂ ಅದಕ್ಕೆಂದೇ ವಿಶಿಷ್ಟವಾದ ಯಾವ ಸಾಮಗ್ರಿಯನ್ನೂ ಚೀನೀ ಜನ ಸೃಷ್ಟಿ ಮಾಡಲಿಲ್ಲ. ಆದರೆ ಜಪಾನಿಯರು ಆಲೇಖ್ಯಕ್ಕೆಂದೇ ಮೊಹಿತು ಎಂಬ ಕುಂಚವಿಶೇಷವನ್ನು ಬಳಸುತ್ತಿದ್ದರು. ಈ ಕುಂಚದಿಂದ ಕರಿಶಾಯಿಯಲ್ಲಿ (ಸುಮಿ) ಮೇಲ್ಮೈರೇಖೆಗಳನ್ನು ಮೊದಲು ಮೂಡಿಸಿ, ಅನಂತರ ಅವುಗಳ ಒಳಗೆ ಬಣ್ಣಗಳನ್ನು ತುಂಬುತ್ತಿದ್ದರು. ವಸ್ತುಗಳನ್ನು ಹಲವಾರು ಭಂಗಿಗಳಲ್ಲಿ ರೇಖೆಗಳಿಂದ ಚಿತ್ರಿಸಿಕೊಳ್ಳುವುದೂ ಈ ದೇಶದಲ್ಲಿ ತುಂಬ ಬಳಕೆಯಲ್ಲಿತ್ತು. ಹಳೆಯ ಪ್ರಸಿದ್ಧ ಚಿತ್ರಗಳನ್ನು ಅಭ್ಯಸಿಸುವಾಗ ಅಥವಾ ತಮ್ಮ ಪ್ರಯೋಜನಕ್ಕೆಂದು ಅವುಗಳ ಪ್ರತಿಕೃತಿಗಳನ್ನು ಮಾಡಿಕೊಳ್ಳುವಾಗ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರು. ಚೀನೀಯರಂತಲ್ಲದೆ ಜಪಾನೀ ಜನ ಚಿತ್ರದ ಪೂರ್ವದಲ್ಲಿ ಆಲೇಖ್ಯವನ್ನು ಸಿದ್ಧಗೊಳಿಸುತ್ತಿದ್ದರು. ಇಂಥ ಆಲೇಖ್ಯಗಳಿಗೆ ಷಿತ-ಎ ಎಂದು ಕರೆಯುತ್ತಾರೆ. ಸಂಪನ್ನವಾದ ಚಿತ್ರ ಮುಗಿದ ಮೇಲೂ ಪ್ರಮುಖವಾದ ವಿವರಗಳನ್ನೂ ಮೇಲ್ಮೈ ರೇಖೆಗಳನ್ನೂ ಮತ್ತೊಮ್ಮೆ ತಿದ್ದುವುದೂ ಬಳಕೆಯಲ್ಲಿತ್ತು. ಈ ಆಲೇಖ್ಯವಿಶೇಷಕ್ಕೆ ಕಾಕಿಯೋಕೋಶಿ ಎಂದು ಹೆಸರಿತ್ತು. ಬಣ್ಣಗಳಿಂದ ಮೊದಲು ಹಾಕಿದ ರೇಖೆಗಳು ಮರೆಯಾಗಬಾರದೆಂಬ ನಿಯಮ ಜಪಾನೀ ಕಲೆಯಲ್ಲಿತ್ತು. ಚೀನದಿಂದ 13ನೆಯ ಶತಮಾನದಲ್ಲಿ ಜಪಾನ್ ದೇಶಕ್ಕೆ ಬಂದ ಆಲೇಖ್ಯಸಂಪ್ರದಾಯವೊಂದು ಸುಮಿ- ಎ ಎನಿಸಿಕೊಳ್ಳುತ್ತದೆ. ಇದು ಕರಿಶಾಯಿಯಿಂದ ಬಿಳಿ ಕಾಗದದ ಮೇಲೆ ಮೇಲ್ಮೈಯಿಲ್ಲದೆ ತುಂಬಿಸುವ ಸ್ಥೂಲ ವಿವರಗಳದ್ದಾಗಿದೆ. 19ನೆಯ ಶತಮಾನದ ಅಂತ್ಯಭಾಗದಲ್ಲಿ ಜಪಾನೀಯರು ಇದ್ದಿಲು ತುಂಡು, ಪೆನ್ಸಿಲ್, ಗ್ರ್ಯಾಫೈಟ್ ಕೋಂಟೆ ಪೆನ್ಸಿಲ್ ಮುಂತಾದುವನ್ನು ಆಲೇಖ್ಯ ಸಾಮಗ್ರಿಗಳನ್ನಾಗಿ ಸ್ವೀಕರಿಸಿದರು.