ಪುಟ:Mysore-University-Encyclopaedia-Vol-2-Part-1.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲ್ಕಲಾಯ್ಡ್ ಗಳು

ಸ್ಕೊಪೋಲಮಿನನ್ನು ಮಾರ್ಫಿನಿನೊಡನೆ ಅಥವಾ ಪ್ರತ್ಯೇಕವಾಗಿ ಅರೆ ನಿದ್ರಾಸ್ಥಿತಿಯನ್ನುಂಟು ಮಾಡಲು ಮತ್ತು ಮೆದುಳಿನ ಉದ್ರೇಕ ಕಡಿಮೆಮಾಡುವ ಶಾಮಕವಾಗಿ ಉಪಯೋಗಿಸುತ್ತಾರೆ (ನೋಡಿ-ಆಟ್ರೊಪೀನ್)ಕೋಕ ಸಸ್ಯಗಳನ್ನು ಆಕರವಾಗುಳ್ಳ ಇದೇ ಗುಂಪಿನ ಆಲ್ಕಲಾಯ್ಡ್ ಗಳಲ್ಲಿ ಕೊಕೇನ್ ಮುಖ್ಯವಾದುದು.ದಂತವೈದ್ಯರ ಕುರ್ಚಿಯನ್ನೇರಿದವರಿಗೆಲ್ಲ ಪರಿಚಿತವಿರುವ ಈ ಸಂಯುಕ್ತವನ್ನು ಸ್ಥಳೀಯ ಇಂದ್ರಿಯ ನೋವಳಿಕವಾಗಿ (ಆನೆಸ್ಥೆಟಿಕ್) ಹಿಂದೆ ಹೆಚ್ಚು ಬಳಕೆಯಲ್ಲಿತ್ತು.ಹಲವು ಪ್ರತ್ಯೇಕ ಸಂದರ್ಭಗಳಲ್ಲಿ ಲಾಲಾಸ್ರವವನ್ನು ಕಡಿಮೆ ಮಾಡುವುದಕ್ಕಾಗಿಯೂ ಉತ್ತೇಜಕ, ವೇದನನಿವಾರಕ ಅಥವಾ ಶಮನಕಾರಿಯಾಗಿಯೂ ಬಳಕೆಯಲ್ಲಿತ್ತು.

ಕೂಕೇನ್ ನ ಗುಣಲಕ್ಷಣಗಳಿಗೆ ಕಾರಣಗಳನ್ನು ಶೋಧಿಸುವ ಯತ್ನದಲ್ಲಿ ಅದೇ ಗುಣಗಳನ್ನುಳ್ಳ ನೊವೋಕೇನ್, ಟುಟೋಕೇನ್ ಮುಂತಾದ ಹಲವು ಸಂಶ್ಲೇಷಿತ (ಸಿಂತೆಟಿಕ್) ಹಲವು ರಚನಾ ಸಂಬಂಧಿ ಸಂಯುಕ್ತಗಳನ್ನು ತಯಾರಿಸಲಾಗಿದೆ.ಇವನ್ನೂ ಕೊಕೇನಿನ ಬದಲಾಗಿ ಉಪಯೋಗಿಸಲಾಗುತ್ತಿದೆ.

ದಾಳಿಂಬೆಯ ತೊಗಟೆಯ ಕಷಾಯವನ್ನು ಹೊಟ್ಟೆಯಲ್ಲಿನ ಪರೋಪಜೀವಿ ಜಂತುಗಳನ್ನು ಉಚ್ಚಾಟಿಸಲು ಬಲುಹಿಂದಿನಿಂದಲೂ ಉಪಯೋಗಿಸಲಾಗುತ್ತಿದೆ.ಈ ಔಷಧೀಯ ಗುಣ್ಣಕ್ಕೆ ಆದರಲ್ಲಿರುವ ಪೆಲೆಟಿಯರಿನ್ ಎಂಬ ಆಲ್ಕಲಾಯ್ಡ್ ಕಾರಣವೆಂದು ತಿಳಿದುಬಂದಿದೆ.

ಕ್ವಿನೋಲಿನ್ ವೃತ್ತವುಳ್ಳ ಆಲ್ಕಲಾಯ್ಡ್ ಗಳಲ್ಲಿ ಸಿಂಕೋನ ಮರದ ತೊಗಟೆ ಬೇರುಗಳಿಂದ ತೆಗೆಯಲಾಗುವ ಆಲ್ಕಲಾಯ್ಡ್ ಗಳು ಪ್ರಮುಖವಾದವು.ಸಿಂಕೋನ ಮರದ ತೊಗಟೆಯನ್ನು ಜ್ವರಶಾಮಕವಾಗಿ ದಕ್ಷಿಣ ಅಮೆರಿಕದ ನಿವಾಸಿಗಳು ಬಲು ಹಿಂದಿನಿಂದಲೂ ಉಪಯೋಗಿಸುತ್ತಿದ್ದು ಆ ಮರಕ್ಕೆ ಜ್ವರದ ಮರವೆಂದೇ ಹೆಸರಿಟ್ಟಿದ್ದಾರೆ.ಮಲೇರಿಯದ ವಿರುದ್ದ ಅನೇಕ ವರ್ಷಗಳ ಕಾಲ ನಿರಂತರವಾಗಿ ಉಪಯೋಗಿಸಲ್ಪಟ್ಟ ಕ್ವಿನೈನ್ಗೆ ಸಿಂಕೋನ ಮರವೇ ಆಕಾರ.ಸಿಂಕೋನ ಮರದಲ್ಲಿ ಕ್ವಿನೈನ್ ಮಾತ್ರವಲ್ಲದೆ ಸಿಂಕೋನಿನ್,ಕ್ವಿನಿಡೀನ್,ಸಿಂಕೋನಿಡೀನ್ ಮುಂತಾದ ಹಲವಾರು ಆಲ್ಕಲಾಯ್ಡ್ ಗಳಿವೆ. ಮಲೇರಿಯ ಉಂಟುಮಾಡುವ ಪ್ಲಾಸ್ಮೋಡಿಯಂ ಸೂಕ್ಷ್ಮಕ್ರಿಮಿಗಳಿಗೆ ಕ್ವಿನೈನ್ ಯಾವ ಹಾನಿಯನ್ನೂ ಮಾಡದೇ ಹೋದರೂ ಕ್ರಿಮಿಗಳ ವಿರುದ್ಧ ದೇಹದ ಸಹಜಶಕ್ತಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಿ ಮಲೇರಿಯ ನಿವಾರಣೆಯಲ್ಲಿ ನೆರವು ನೀಡುತ್ತದೆ.ಕ್ವಿನೈನ್ ಮತ್ತು ಸಿಂಕೋನಿನ್ ಗಳೆರಡೂ ಉತ್ತಮ ಜ್ವರಶಾಮಕಗಳು ಮತ್ತು ಅಲ್ಪ ಪ್ರಮಾಣದಲ್ಲಿ ಸೇವಿಸಿದಾಗ ಬಲವರ್ಧಕಗಳು.ಹಲವು ಸಂದರ್ಭಗಳಲ್ಲಿ ಸಿಂಕೋನ ಆಲ್ಕಲಾಯ್ಡ್ ಗಳನ್ನು ಪೂತಿನಾಶಕಗಳಾಗಿಯೂ ಉಪಯೋಗಿಸುತ್ತಾರೆ.ಈಗ ಹಲವು ವರ್ಷಗಳಿಂದ ಕ್ವಿನಿಡೀನನ್ನು ಹಲವು ಹೃದ್ರೋಗಗಳ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತಿದೆ.

ಐಸೋಕ್ವಿನಿಲಿನ್ ವೃತ್ತವನ್ನೊಳಗೊಂಡಿರುವ ಆಲ್ಕಲಾಯ್ಡ್ ಗಳಲ್ಲಿ ಪಪಾವೆರೀನ್,ಬರ್ಬೆರಿನ್ ಮತ್ತು ಸ್ಯಾಂಗ್ವೆನೆರಿನ್ ಗುಂಪಿನ ಆಲ್ಕಲಾಯ್ಡ್ ಗಳು ಪ್ರಮುಖವಾದುವು.

ಪಪಾವೆರೀನ್ ಗುಂಪಿನ ಆಲ್ಕಲಾಯ್ಡ್ ಗಳಿಗೆ ಆಕಾರ ಗಸಗಸೆ ಜಾತಿಯ ಸಸ್ಯಗಳು.ಇವುಗಳಲ್ಲಿ ಪಪಾವೆರೀನ್ ಮತ್ತು ನಾರೋಟೇನ್ ಮುಖ್ಯವಾದುವು. ಗಸಗಸೆಯ ಗಿಡದ ಉತ್ಪನ್ನವಾದ ಆಫೀಮಿನಲ್ಲಿ ಈ ಬಗೆಯ ಆಲ್ಕಲಾಯ್ಡ್ ಗಳು ಅನೇಕ ಇವೆ.ಅಪೀಮಿನಲ್ಲಿ ಹತ್ತು ಶತಾಂಶ ದಷ್ಟಿರುವ ನಾರ್ಕೋಟಿನ್ ಮೈಮರೆಸಿ ಸುಪ್ತಾವಸ್ಥೆಯನ್ನು ತರಬಲ್ಲ ಸಂಯುಕ್ತ.ನಾರ್ಕೋಟಿನಿನಿಂದ ತಯಾರಿಸಲಾಗುವ ಕೊಟಾರ್ನಿನ್ ಸಂಯುಕ್ತಕ್ಕೆ ರಕ್ತಸ್ರಾವವನ್ನು ತಡೆಗಟ್ಟುವ ಮತ್ತು ಗರ್ಭಾಶಯವನ್ನು ಸಂಕುಚಿಸುವ ಗುಣವಿರುವುದರಿಂದ ಪ್ರಸವ ಕಾಲದಲ್ಲಿ ಇದನ್ನು ಉಪಯೋಗಿಸುತ್ತಾರೆ.ಈ ಸಂಯುಕ್ತಕ್ಕೆ ಕೇಂದ್ರ ನರಮಂಡವನ್ನು ತಾತ್ಕಾಲಿಕವಾಗಿ ನಿಸ್ಸತ್ತ್ವಗೊಳಿಸುವ ಶಕ್ತಿಯಿದೆ.ಪಪಾವರಿನ್ ಸಂಯುಕ್ತಕ್ಕೂ ಇಂದ್ರಿಯಸುಪ್ತಿಯನ್ನುಂಟುಮಾಡುವ ಶಕ್ತಿಯಿದ್ದರೂ ಮಾರ್ಫೀನ್ ನಷ್ಟು ತೀವ್ರವಾಗಿಲ್ಲ.ನರಗಳ ಮೂಲಕ ಸ್ನಾಯಗಳ ಮೇಲೆ ಪರಿಣಾಮ ಬೀರಬಲ್ಲದು.ಈ ದೃಷ್ಟಿಯಲ್ಲಿ ಇದು ಕೂಡೀನನ್ನು ಹೋಲುತ್ತದೆ.ಹೈಡ್ರಾಸ್ಟಿನ್ ಎಂಬ ಆಲ್ಕಲಾಯ್ಡ್,ರಚನೆಯಲ್ಲಿ ನಾರ್ಕೋಟೀನಿಗೆ ಸಂಬಂಧಿಸಿದ ಸಂಯುಕ್ತವಾದರೂ ಆಪೀಮಿನಲ್ಲಿರುವುದಿಲ್ಲ.ಹೈಡ್ರಾಸ್ಟಿಸ್ ಕೆನಡೆನ್ಸಿಸ್ ಎಂಬ ಸಸ್ಯದ ಬೇರಿನಲ್ಲಿರುವ ಈ ಸಂಯುಕ್ತದ ನಿಷ್ಪನ್ನವಾದ ಹೈಡ್ರಾಸ್ಟಿನಿನ್ ಗೆ ರಕ್ತನಾಳಗಳನ್ನು ಸಂಕುಚಿಸಿ ರಕ್ತದ ಒತ್ತಡವನ್ನು ಹೆಚ್ಚಿಸುವ ಶಕ್ತಿಯಿರುವುದರಿಂದ ಇದನ್ನು ಆಂಡಾಶಯ ಪರೀಕ್ಷೆ ಮತ್ತು ಪ್ರಸವವಿಜ್ನಾನದ ಇತರ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ.ಹೈಡ್ರಾಸ್ಟಿನ್ ಸಂಯುಕ್ತವನ್ನು ಹೃದಯೋದ್ವೇಗ ಶಮನಕಾರಿಯಾಗಿ, ಪೂತಿನಾಶಕವಾಗಿ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡಲು ಉಪಯೋಗಿಸುತ್ತಾರೆ.

ಬರ್ಬೆರಿನ್ ಗುಂಪಿನ ಆಲ್ಕಲಾಯ್ಡ್ ಗಳಲ್ಲಿ ಬರ್ಬೆರಿನ್ ಸಂಯುಕ್ತವೇ ಮುಖ್ಯವಾದುದು.ಬರ್ಬೆರಿನ್ ಸಸ್ಯಗಳ (ಭಾರತೀಯ ಹೆಸರುಗಳು-ದಾರು ಹಳದಿ, ದಾರು ಹರಿದ್ರ) ಮತ್ತು ಹೈಡ್ರಾಸ್ಪಿಸ್ ಕೆನಡೆನ್ಸಿಸ್ ಗಿಡದ ತೊಗಟೆಗಳಲ್ಲಿ ದೊರೆಯುವ ಈ ಆಲ್ಕಲಾಯ್ಡಿನ ಗುಣಳನ್ನು ಹೋಲುತ್ತವೆ;ಬರ್ಬೆರೀನ್ ಸಲ್ಫೇಟು ಭಾರತದಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಆಮಶಂಕೆ,ಭೇದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ.

ಸ್ಯಾಂಗ್ವೆನೆರಿನ್ ಗುಂಪಿನಲ್ಲಿ ಸ್ಯಾಂಗ್ವನೆರಿನ್,ಕೆಲಿಡೋನಿನ್,ಕೆಲೆರಿಥ್ರಿನ್ ಮತ್ತು ಹೋವೋಕೆಲಿಡೋನಿನ್ ಎಂಬ ನಾಲ್ಕು ಪರಸ್ಪರ ಸಂಬಂಧಿಸಿದ ಆಲ್ಕಲಾಯ್ಡ್ ಗಳಿವೆ.ಗಸಗಸ ಜಾತಿಯ ಕೆಲಿಡೋನಿಯಂ ಮೇಜಸ್ ಮತ್ತು ಸ್ಯಾಂಗಿನೇರಿಯ ಕೆನಡೆನ್ಸಿಸ್ ಎಂಬ ಸಸ್ಯಗಳ ಬೇರುಗಳಲ್ಲಿ ದೊರೆಯುವ ಈ ಆಲ್ಕಲಾಯ್ಡ್ ಗಳು ಚರ್ಮದ ಕ್ಯಾನ್ಸರಿನ ಚಿಕಿತ್ಸೆಯಲ್ಲಿ ಉಪಯೋಗಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿದೆ.ಬೇರುಗಳ ಕಷಾಯವನ್ನು ಚಿಕಿತ್ಸೆಯಲ್ಲಿ ಈಗಾಗಲೇ ಉಪಯೋಗಿಸಲಾಗುತ್ತಿದೆ.ಗಸಗಸೆ ಜಾತಿಯ ಗಿಡಗಳಲ್ಲಿ ದೊರೆಯುವ ಮತ್ತೊಂದು ಮುಖ್ಯವಾದ ಆಲ್ಕಲಾಯ್ಡ್ ಗಳ ಗುಂಪಿನಲ್ಲಿ ಮಾರ್ಫೀನ್,ಕೋಡೀನ್ ಮತ್ತು ಅದರ ಸಂಬಂಧಿಗಳು ಸೇರುತ್ತವೆ.ಇವುಗಳೂ ಐಸೋಕ್ವಿನೋಲಿನ್ ವೃತ್ತವನ್ನುಳ್ಳ ಆಲ್ಕಲಾಯ್ಡ್ ಗಳೇ. ಇವುಗಳ ರಚನೆಗಳು ಅಷ್ಟು ಸರಳವಾದುವಲ್ಲವಾದ್ದರಿಂದ ಬಲುಕಾಲ ಇವುಗಳು ರಚನಾ ನಿರ್ಣಯಗಳು ರಸಾಯನಶಾಸ್ತ್ರಜ್ನಾರಿಗೆ ಉತ್ತಮ ಸಮಸ್ಯೆಗಳಾಗಿ ಉಳಿದಿದ್ದುವು (ನೋಡಿ-ಅಫೀಮು);ಮಾರ್ಫ಼ೀನ್.

ಕೋಡೀನ್ ನಲ್ಲಿ ಇಂದ್ರಿಯಸುಪ್ತಿಯನ್ನುಂಟುಮಾಡುವ ಶಕ್ತಿ ತೀವ್ರವಾಗಿಲ್ಲ.ಆದರೆ ಉದ್ವೇಗಶಾಮಕ ಶಕ್ತಿ ಉಂಟು.ಆದ್ದರಿಂದ ಕೋಡೀನಿನ ಸೇವನೆ ಮಾರ್ಫೀನಿನ ಸೇವನೆಗಿಂತೆ ಹೆಚ್ಚು ಕ್ಷೇಮಕರ.ಸ್ನಾಯುಗಳ ಸೆಡೆತವನ್ನು ಕಡಿಮೆಮಾಡುವ ಶಕ್ತಿ ಇರುವುದರಿಂದ ಕೋಡೀನನ್ನು ಕೆಮ್ಮು,ನೆಗಡಿಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.ಉತ್ಪನ್ನ ಸಂಯುಕ್ತಗಳಾದ ಮಾರ್ಫೀನ್ ಎಥೈಲ್ ಈಥರ್ ಮತ್ತು ಡೈಹೈಡ್ರೋಕೋಡೀನ್ ಗಳನ್ನೂ