ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-2-Part-1.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆವನಿ - ಆವರಣಶಾಸ್ತ್ರ ಆವನಿ: ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಮುಳುಬಾಗಿಲನಿಂದ ಸು. 16 ಕಿಮೀ ದಕ್ಷಿಣಕ್ಕಿರುವ ಒಂದು ಪುಣ್ಯಕ್ಷೇತ್ರ, ಈ ಗ್ರಾಮದ ಪರಿಸರದಲ್ಲಿಯೂ ಸಮೀಪದ ಬೆಟ್ಟದ ಮೇಲೂ ಇರುವ ಅನೇಕ ದೇವಾಲಯಗಳು ಮತ್ತು ಶಿಲಾಶಾಸನಗಳು ಇದರ ಪ್ರಾಚೀನ ಪ್ರಾಮುಖ್ಯವನ್ನು ಸಾರುತ್ತವೆ. ಊರಿನ ಪೂರ್ವದ ಹೆಸರು ಅಹವನೀಯ, ಆವಣ್ಯ, ಆವಣೆ ಇತ್ಯಾದಿಯಾಗಿದ್ದಿತೆಂದು ಶಾಸನಗಳಿಂದ ತಿಳಿದುಬರುತ್ತದೆ. ಸ್ಥಳೀಯ ನಂಬಿಕೆಗಳ ಪ್ರಕಾರ ಈ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶ ಪುರಾಣಪ್ರಸಿದ್ಧವಾದ ಅವಂತಿಕಾ ಕ್ಷೇತ್ರ ವಾಲ್ಮೀಕಿ ಋಷಿಯ ಆಶ್ರಮವಿದ್ದುದು ಇಲ್ಲಿಯ ಬೆಟ್ಟದಲ್ಲಿಯೇ ; ರಾಮ ಲಂಕೆಯನ್ನು ಗೆದ್ದು ಅಯೋಧ್ಯೆಗೆ ಹಿಂತಿರುಗುವ ಹಾದಿಯಲ್ಲಿ ಇಲ್ಲಿಗೆ ಬಂದಿದ್ದನಂತೆ ; ಸೀತಾದೇವಿ ಗಂಡನಿಂದ ಕಾಡಿಗೆ ಕಳುಹಿಸಲ್ಪಟ್ಟಾಗ ಇಲ್ಲಿ ಬಂದು ತಂಗಿ ಲವಕುಶರಿಗೆ ಜನ್ಮವಿತ್ತಳೆಂದೂ ಲವಕುಶರು ರಾಮನ ಯಜ್ಞಾಶ್ವವನ್ನು ಕಟ್ಟಿ ರಾಮನೊಡನೆ ಇಲ್ಲಿಯೇ ಯುದ್ಧಮಾಡಿದರೆಂದೂ ಐತಿಹ್ಯ. ಈ ಘಟನೆಗಳಿಗೆ ಸಂಬಂಧಪಟ್ಟಂತೆ, ಈ ಸುತ್ತಿನ ಅನೇಕ ತಾಣಗಳು ವಾಲ್ಮೀಕಿಯ ಕುಟೀರ, ಲವಕುಶರ ತೊಟ್ಟಿಲು, ಸೀತೆಯ ಅಡುಗೆಪಾತ್ರೆ, ಅವಳು ಬಟ್ಟೆಯೊಗೆಯುತ್ತಿದ್ದ ಕೊಳ, ಲವಕುಶರು ಯಜ್ಞಾಶ್ವವನ್ನು ಕಟ್ಟಿದ ಬಂದ, ರಾಮಲಕ್ಷ್ಮಣರು ಕುಳಿತಿದ್ದ ಬಂಡ ಇತ್ಯಾದಿಯಾಗಿ ಪ್ರಸಿದ್ಧವಾಗಿವೆ. ಆವನಿಯಲ್ಲಿರುವ ರಾಮೇಶ್ವರ ದೇವಾಲಯಗಳ ಒಂದು ಭಾಗದ ನೋಟ ಅತ್ಯಂತ ಪ್ರಾಚೀನ ದೇವಾಲಯಗಳು ಬೆಟ್ಟದ ನೈಋತ್ಯದಲ್ಲಿ ಒಂದು ದೊಡ್ಡ ಪ್ರಾಂಗಣದ ಮಧ್ಯೆ ಇವೆ. ಇವೆಲ್ಲವೂ ಶೈವ ದೇವಾಲಯಗಳು. ಮಧ್ಯದಲ್ಲಿ ಪಾರ್ವತಿ ದೇವಾಲಯವೂ ಅದರ ಸುತ್ತಲೂ ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಶ್ವರ, ಸುಗ್ರೀವೇಶ್ವರ ಅಂಜನೇಶ್ವರ ಮುಂತಾದ ಗುಡಿಗಳಿವೆ. ಇವುಗಳಲ್ಲಿ ಲಕ್ಷ್ಮಣೇಶ್ವರ ಗುಡಿ ಅತ್ಯಂತ ಸುಂದರ ಕಟ್ಟಡ, ಗರ್ಭಗೃಹ, ಅಂತರಾಳ ಮತ್ತು ನವರಂಗವಿರುವ ಈ ಗುಡಿಯ ಹೊರಮೈಯ ಸುತ್ತಲೂ ಬುಡದಲ್ಲಿ ಆನೆ, ಸಿಂಹ, ಯಾಳಿ, ಮಕರ, ಕುದುರೆಲಾಳದಾಕೃತಿಯ ಕಮಾನುಗಳು- ಇವುಗಳಿಂದ ಅಲಂಕೃತವಾದ ಆರು ಪಟ್ಟಕೆಗಳಿವೆ. ಮೇಲೆ ಅಲ್ಲಲ್ಲಿ ಯಕ್ಷ, ಶಿವ, ದುರ್ಗಿ, ಗಣೇಶ, ಭೈರವ, ಭೈರವಿ, ವಿಷ್ಣು ಮುಂತಾದ ಶಿಲ್ಪಗಳಿರುವ, ಸಮಾನಾಂತರಗಳಲ್ಲಿ ಅರ್ಧಕಂಭಗಳಿಂದ (ನಿಲ್ಲ್ಯಾಸ್ಟರ್) ಛೇದಿಸಲು ಎತ್ತರವಾದ ಭಿತ್ತಿಯಿದೆ, ಇದರಲ್ಲಿ ಮಧ್ಯೆ ಮಧ್ಯೆ ಮಹಿಷಾಸುರಮರ್ದಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಿಸಿವೆ. ಒಳಭಾಗದ ನವರಂಗದಲ್ಲಿ, ಮಧ್ಯೆ ಉಮಾಮಹೇಶ್ವರ ಮತ್ತು ಸುತ್ತಲೂ ಅಷ್ಟದಿಕ್ಷಾಲಕರ ಕೆತ್ತನೆಯಿರುವ ಒಂದು ಮೋಹಕ ಭುವನೇಶ್ವರಿಯಿದೆ. ರಚನಾರೀತಿಯಲ್ಲಿ, ಲಕ್ಷ್ಮಣೇಶ್ವರ ದೇವಾಲಯ ಕಂಚಿಯ ದೇವಾಲಯಗಳ ಸಂಪ್ರದಾಯದಿಂದ ಬೆಳೆದು ಬಂದ ನೊಳಂಬ ವಾಸ್ತುಶಿಲ್ಪ ಶೈಲಿಯ ಒಂದು ಉತ್ತಮ ಪ್ರತೀಕವಾಗಿದೆ. ವಾಸ್ತುಶೈಲಿಯಿಂದ ಮತ್ತು ಸ್ಥಳೀಯ ಶಾಸನಗಳ ಸಾಂದರ್ಭಿಕ ಮಾಹಿತಿಗಳಿಂದ ಈ ದೇವಾಲಯ 10ನೆಯ ಶತಮಾನದಲ್ಲಿ ಕಟ್ಟಲಾಗಿತ್ತೆಂದು ಹೇಳಬಹುದು. ಆದರೆ ದೇವಾಲಯದ ಮೇಲ್ಬಾಗದಲ್ಲಿರುವ ಗೋಪುರ ಮುಂತಾದ ಇಟ್ಟಿಗೆಯ ಸೇರ್ಪಡೆಗಳು ಸುಮಾರು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆದವುಗಳು. ಶತ್ರುಸ್ನೇಶ್ವರ, ಅಂಜನೇಶ್ವರ ಮತ್ತು ಭರತೇಶ್ವರ ದೇವಾಲಯಗಳೂ ಸುಮಾರು ಲಕ್ಷ್ಮಣೇಶ್ವರದ ಮಾದರಿಯವೇ. ಇವುಗಳ ರಚನೆಯ ಕಾಲದಲ್ಲೂ ಇವುಗಳಲ್ಲಿ ಬಹಳಷ್ಟು ಅಂತರವಿರಲಾರದೆಂಬುದು ಈ ಕೆಲವು ದೇವಾಲಯಗಳಲ್ಲಿ ಕಂಡುಬಂದಿರುವ ನೊಳಂಬ ಮತ್ತು ಗಂಗರ ಶಾಸನಗಳಿಂದ ತಿಳಿದುಬರುತ್ತದೆ. ಇದೇ ಕಾಲದ ರಾಮೇಶ್ವರ ದೇವಾಲಯ ದ್ರಾವಿಡಶೈಲಿಯ ಮೂಲ ಶಿಖರವನ್ನು ಇನ್ನೂ ಉಳಿಸಿಕೊಂಡಿದೆ. ಈ ದೇವಾಲಯದಲ್ಲಿ ಮೂಲಗರ್ಭಗುಡಿ ಮತ್ತು ನವರಂಗದ ಕೆಲವು ಭಾಗಗಳು ರಚನಾರೀತಿಯಲ್ಲಿ ಇತರ ೬೫ ಸಮಕಾಲೀನ ದೇವಾಲಯಗಳಂತೆಯೇ ಇದ್ದರೂ ಮುಂದೆ 12-13ನೆಯ ಶತಮಾನದ ಕೆಲವು ಸೇರ್ಪಡೆಗಳಿಂದಾಗಿ ಕಟ್ಟಡದ ಅಂದಕ್ಕೆ ಸ್ವಲ್ಪ ಕುಂದು ಬಂದಿದೆ. ಮಧ್ಯದಲ್ಲಿರುವ ಪಾರ್ವತಿ ದೇವಾಲಯ ಗರ್ಭಗೃಹ, ನವರಂಗ ಮತ್ತು ಮುಖಮಂಟಪಗಳನ್ನೊಳ ಗೊಂಡಿರುವ ಸಂವಾದ, ಕಟ್ಟಡ. ಇಲ್ಲಿ ವಾಸ್ತುರಚನೆಯಲ್ಲಾಗಲೀ ಶಿಲ್ಪಗಳಲ್ಲಾಗಲೀ ಈ ಹಿಂದಿನ ದೇವಾಲಯಗಳಲ್ಲಿರುವ ಪ್ರಬುದ್ಧತೆ ಕಂಡುಬರುವುದಿಲ್ಲ. 13ನೆಯ ಶತಮಾನದಲ್ಲಿ ಕೋಲಾರ ಪ್ರದೇಶದಲ್ಲಿ ಆಳುತ್ತಿದ್ದ ತಮಿಳು ಗಂಗ ಅರಸು ಇಳವಂಜಿ ವಾಸುದೇವರಾಯ ಇದನ್ನು ಕಟ್ಟಿಸಿರಬಹುದೆಂದು ಊಹಿಸಲು ಆಧಾರಗಳಿವೆ. ದೇವಾಲಯದ ಒಳಗೆ ಇಳವಂಜಿ ವಾಸುದೇವರಾಯ ಮತ್ತು ಅವನ ತಮ್ಮನದೆಂದು ಹೇಳಲಾಗುವ ಎರಡು ಭಕ್ತ ವಿಗ್ರಹಗಳಿವೆ. ಈ ದೇವಾಲಯಗಳ ಗುಂಪಿನಲ್ಲೇ ಇರುವ ಕಾಮಾಕ್ಷಿ ಮತ್ತು ಇತರ ಗುಡಿಗಳು ಅನಂತರದ ಕಟ್ಟಡಗಳು. ಬೆಟ್ಟ ಹತ್ತುವಲ್ಲಿ ಸಿಗುವ ಒಂದು ಗುಹೆಯನ್ನು ವಾಲ್ಮೀಕಿಯ ಗುಹೆಯೆಂದು ಕರೆಯುತ್ತಾರೆ. ಇದರ ಸಮೀಪದಲ್ಲಿ ಚೋಳ ಸಂಪ್ರದಾಯದ ಒಂದು ಸಣ್ಣ ದೇವಾಲಯವಿದೆ. ಇಲ್ಲಿಂದ ಅನತಿ ದೂರದಲ್ಲಿರುವ ಏಕಾಂತರಾಮಯ್ಯನ ದೇವಾಲಯ ಸಹ ಚೋಳ ಸಂಪ್ರದಾಯದ ಕಟ್ಟಡ. ಆದರೆ ಇದರ ನವರಂಗಭಾಗ ಹೊಯ್ಸಳ ಮುಮ್ಮಡಿ ಬಲ್ಲಾಳನ ಕಾಲಕ್ಕೆ ಸೇರಿದುದು. ಬೆಟ್ಟದ ಮೇಲುಗಡೆ ಇರುವ ಸೀತಾಪಾರ್ವತಿ ಗುಡಿ ಹೊರನೋಟಕ್ಕೆ ಈಚಿನ ಬಹುಸಾಮಾನ್ಯ ಕಟ್ಟಡದಂತೆ ಕಂಡರೂ ಒಳಭಾಗ ಪುರಾತನವಾದುದು. ಇದು ನೊಳಂಬ ಅರಸರ ಕಾಲದ (9-10ನೆಯ ಶತಮಾನ) ಗುಹಾದೇವಾಲಯವೆಂದು ಕಾಣುತ್ತದೆ. ಆವನಿ ಗ್ರಾಮದಲ್ಲೂ ಬೆಟ್ಟದ ಮೇಲೂ 9-10ನೆಯ ಶತಮಾನದಿಂದ ಹಿಡಿದು ಇತ್ತೀಚಿನವರೆಗಿನ ಗಂಗ, ನೊಳಂಬ, ಚೋಳ, ಹೊಯ್ಸಳ, ತಮಿಳುಗಂಗ, ವಿಜಯನಗರ ಮತ್ತು ಪಾಳೆಯಗಾರರ ಆಳ್ವಿಕೆಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದಿವೆ. (ಎಸ್.ಎಫ್.) ಆವರಣಶಾಸ್ತ್ರ: ಜೀವಿಗಳು ಮತ್ತು ಅವುಗಳ ಆವರಣ (ಆರ್ಗ್ಯಾನಿಸ್ಟ್ ದೇರ್ ಎನ್‌ವೈರನ್‌ಮೆಂಟ್) ಇವುಗಳ ಸಂಬಂಧಗಳನ್ನು ಅಭ್ಯಸಿಸುವ ಶಾಸ್ತ್ರ (ಇಕಾಲಜಿ). ಸಂಕುಚಿತಾರ್ಥದಲ್ಲಿ ಜೀವಿಗಳ ಅಂತರ ಸಂಬಂಧಗಳನ್ನು ಕುರಿತೂ ಈ ಪದದ ಬಳಕೆ ಇದೆ. ಜೀವವಿಜ್ಞಾನದ ಒಂದು ಅಂಗ. ಆವರಣಶಾಸ್ತ್ರದ ಎರಡು ಪ್ರಮುಖಭಾಗಗಳು ಪ್ರಾಣಿ ಆವರಣಶಾಸ್ತ್ರ (ಆ್ಯನಿಮಲ್ ಇಕಾಲಜಿ) ಮತ್ತು ಸಸ್ಯಾವರಣಶಾಸ್ತ್ರ (ಪ್ಲಾಂಟ್ ಇಕಾಲಜಿ). ಮಾನವಾವರಣ ಶಾಸ್ತ್ರವನ್ನು (ಹೂಮನ್‌ ಇಕಾಲಜಿ) ಪ್ರಾಣಿ ಆವರಣಶಾಸ್ತ್ರದಿಂದ ಪ್ರತ್ಯೇಕವಾಗಿ ಅಭ್ಯಸಿಸುವುದೂ ಇದೆ. ಮೇಲೆ ಹೇಳಿದ ಎರಡು ಪ್ರಮುಖ ಭಾಗಗಳಲ್ಲಿ ಒಂದೊಂದನ್ನೂ ಎರಡು ಉಪಭಾಗಗಳಾಗಿ ವಿಭಾಗಿಸಿದೆ; ಸ್ವಂತಾವರಣಶಾಸ್ತ್ರ (ಆಟಿಕಾಲಜಿ)-ಒಂದೊಂದು ಜೀವಿ ಮತ್ತು ಅದರ ಆವರಣ ಇವನ್ನು ಕುರಿತ ಅಭ್ಯಾಸ ಸಮುದಾಯಾವರಣಶಾಸ್ತ್ರ (ಸೈನಿಕಾಲಜಿ)-ನಿರ್ದಿಷ್ಟ ಪ್ರದೇಶದಲ್ಲಿರುವ ಜೀವಿಸಮುದಾಯ ಮತ್ತು ಅವುಗಳ ಆವರಣ ಇವನ್ನು ಕುರಿತ ಅಭ್ಯಾಸ, ಇವುಗಳ ಪೈಕಿ ಸಮುದಾಯಪರಾಕಾಷ್ಯದ ದೃಷ್ಟಿಯೇ ಉತ್ತಮವಾದದ್ದು. ಮೂಲ ಚೈತನ್ಯ (ಅಥವಾ ಪ್ರಾಣ) ಎಲ್ಲ ವಿಧದ ಜೀವಿಗಳಿಗೂ (ಪ್ರಾಣಿಗಳು, ಸಸ್ಯಗಳು) ಒಂದೇ. ಆದರೆ ಅದು ಅಭಿವ್ಯಕ್ತವಾಗುವ ಬಗೆ ಬೇರೆ ಬೇರೆ. ಇಲ್ಲಿ ಆವರಣದ ಪ್ರಭಾವ ಸಾಕಷ್ಟು ಇದೆ. ಜೀವ ವಿಕಾಸ ನೆಲ, ನೀರು, ಗಾಳಿ ಈ ಮೂರು ಪ್ರದೇಶಗಳಲ್ಲಿಯೂ ಆಗಿರುವುದು ಇಲ್ಲೆಲ್ಲ ಆಯಾ ಆವರಣಕ್ಕೆ ಹೊಂದಿ ಜೀವಿಗಳ ವಿವಿಧ ಅವಯವಗಳು ರೂಪುಗೊಂಡಿರುವುದನ್ನು ನೋಡಬಹುದು. ಇಂಥ ಸಂಬಂಧದ ಅಭ್ಯಾಸ ಆವರಣಶಾಸ್ತ್ರ ಆವರಣ: ಒಂದು ಜೀವಿಯ ಅಥವಾ ಜೀವಿಸಮುದಾಯದ ಮೇಲೆ ಪ್ರಭಾವಕಾರಿ ಯಾಗುವ ಸಕಲ ಬಾಹ್ಯ ಬಲಗಳ ಅಥವಾ ನಿಯಮಗಳ ಮೊತ್ತ. ಆದರೂ ಈ ಪದದ ಹಿಂದಿರುವ ಭಾವನೆ ಬಲು ಸಂಕೀರ್ಣವಾದದ್ದು. ಆದ್ದರಿಂದ ಆವರಣ ಎಂದರೆ ಇಂತಿಷ್ಟು ಬಲಗಳು ಅಥವಾ ಇಂತಿಷ್ಟು ಪ್ರಭಾವಗಳ ಸಮುದಾಯ ಎಂದು ವಿಶ್ಲೇಷಿಸುವುದು ಬಲು ಕಷ್ಟವೂ ಹೌದು, ದೋಷಪೂರಿತವೂ ಹೌದು. ಆದರೂ ಶಾಸ್ತ್ರದ ಪರಿಭಾಷೆಯಲ್ಲಿ ಒಂದು ಜೀವಿ ಒಂದು ನಿರ್ದಿಷ್ಟ ಸ್ಥಳದ ನಿವಾಸಿ. ಇಲ್ಲಿ ನಿವಾಸಿ ಪದದ ವ್ಯಾಪ್ತಿ ಆ ಜೀವಿ ಬದುಕಿರುವ ಆವರಣಬಲಗಳಿಗೆ ನಿಯಮಗಳಿಗೆ ಅನ್ವಯಿಸುತ್ತದೆ. ಅನುಕೂಲತೆಗಾಗಿ, ಅಭ್ಯಾಸದ ಸೌಕರ್ಯಕ್ಕಾಗಿ ಈ ಬಲನಿಯಮಗಳನ್ನು ಭೌತ (ಫಿಸಿಕಲ್-ಹವೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ), ರಾಸಾಯನಿಕ (ಕೆಮಿಕಲ್) ಮತ್ತು ಜೈವಿಕ (ಬಯಲಾಜಿಕಲ್) ಎಂದು ಮೂರು ಭಾಗಗಳಾಗಿ ವಿಭಾಗಿಸಬಹುದು. ಸರಿಯಾದ ಆಹಾರವನ್ನು ಯೋಗ್ಯಕಾಲದಲ್ಲಿ ಪಡೆದು ಬದುಕುವುದು ಜೀವಿಯ ಧರ್ಮ. ಜೀವಿಗೆ ಆವರಣದಿಂದ ಆಹಾರ ಲಭ್ಯವಾಗುತ್ತದೆ. ಆದರೆ ಆವರಣದ ಮೇಲೆ ಪ್ರಭಾವ ಬೀರಲಾಗದ ಜೀವಿ ಆವರಣಕ್ಕೆ ಅನುಗುಣವಾಗಿ ಹೊಂದಿಕೊಂಡರೆ ಮಾತ್ರ ಬದುಕಬಲ್ಲದು. ಈ ನಿರಂತರ ಹೊಂದಾಣಿಕೆ ಅತ್ಯಾಶ್ಚರ್ಯಕರವಾಗಿ ಜೀವಿಗಳ ವಿಕಾಸದ ಮೇಲೆ ಪರಿಣಾಮ ಬೀರಿದೆ. ಕಾಲಾಂತರದಲ್ಲಿ ಜೀವಿಸಮುದಾಯಗಳಿಂದ ಆವರಣದ ಮೇಲೆಯೂ ಪ್ರಭಾವ ಉಂಟಾಗಿದೆ.