ಪುಟ:Mysore-University-Encyclopaedia-Vol-2-Part-1.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆವಿಗೆ-ಆವೃತಬೀಜ ಸಸ್ಯಗಳು

ಆವಿಗೆ: ಒಂದು ವಸ್ತುವಿಗೆ ಅಧಿಕೋಷ್ಣವನ್ನು ಪೂರೈಸುವುದರ ಮೂಲಕ ಅದರಲ್ಲಿರುವ ತೇವವನ್ನು ನಿವಾರಿಸುವ ಸಾಧನ (ಕಿಲ್ನ್). ಇಂಗ್ಲಿಷಿನಲ್ಲಿ ಕಿಲ್ನ್, ಫರ್ನೆಸ್, ಸ್ಟವ್ ಮತ್ತು ಓವನ್ ಇವನ್ನು ಪರ್ಯಾಯ ಪದಗಳಾಗಿ ಬಳಸುವುದಿದೆ. ಆದರೆ ತಾಂತ್ರಿಕ ಬಳಕೆಯಲ್ಲಿ ಒಂದು ಸಂಪ್ರದಾಯ ಉಂಟು-ವಸ್ತುವನ್ನು ಅದರ ದ್ರವಬಿಂದುವಿನವರೆಗೆ (ಮೆಲ್ಟಿಂಗ್ ಪಾಯಿಂಟ್) ಕಾಯಿಸುವ ಸಾಧನ ಕಿಲ್ನ್ (ಆವಿಗೆ); ಅದಕ್ಕಿಂತ ಅಧಿಕ ಮಟ್ಟದವರೆಗೆ ಕಾಯಿಸುವ ಸಾಧನ ಫರ್ನೇಸ್ (ನೋಡಿ - ಕುಲುಮೆ); ಅನಿಲವನ್ನಾಗಲೀ ನೀರನ್ನಾಗಲೀ ಕಾಯಿಸಲು ಉಪಯೋಗಿಸುವ ನಿತ್ಯಬಳಕೆಯ ಸಾಧನ ಸ್ಟವ್; ಬಟ್ಟೆ ಒಣಗಿಸಲು ಚಳಿ ಕಾಯಿಸಲು ಉಯಿಸಲು ಉಪಯೋಗಿಸುವ ಸಾಧನ ಓವನ್ (ಆಗ್ಗಿಷ್ಟಿಕೆ). ಆದ್ದರಿಂದ ಇಟ್ಟಿಗೆಯನ್ನು ಸುಡುವ ಸಾಧನ ಆವಿಗೆ; ಕಬ್ಬಿಣದ ಅದಿರಿನಿಂದ ಕಬ್ಬಿಣ ಲೋಹದ್ರವ ಪಡೆಯಲ್ಲು ಉಪಯೋಗಿಸುವ ಸಾಧನ ಕುಲುಮೆ; ಅಕ್ಕಸಾಲಿಗರು ಬಳಸುವ ಮೂಸೆ ತಾತ್ತ್ವಿಕವಾಗಿ ಕುಲುಮೆಯೇ.

ಇಟ್ಟಿಗೆ ಸುಡುವ ಆವಿಗೆಗಳು: ಊರ ಇಟ್ಟಿಗೆ (ನೋಡಿ-ಇಟ್ಟಿಗೆ) ತಯಾರಿಸುವಾಗ ಹಸಿ ಇಟ್ಟಿಗೆಗಳ ದೊಡ್ಡ ದೊಡ್ಡ ಗೂಡುಗಳನ್ನು ಬಯಲಿನಲ್ಲಿ ಕಟ್ಟುತ್ತಾರೆ. ಅವುಗಳ ಒಳಗೆ ಒಂದು ಕ್ರಮದಲ್ಲಿ ಮರದ ಕುಂಟೆಗಳನ್ನು ಅಳವಡಿಸಿ ಗೂಡು ಪೂರ್ಣವಾದ ಮೇಲೆ ತಳಭಾಗದ ಕಂಡಿಗಳಲ್ಲಿ ಜೋಡಿಸಿರುವ ಸೌದೆಗೆ ಬೆಂಕಿಯಿಕ್ಕುತ್ತಾರೆ. ಇಂಥ ಗೂಡು ಒಂದು ಸ್ವಯಂಪೂರ್ಣ ವ್ಯವಸ್ಥೆ. ಅದರಲ್ಲಿರುವ ಕುಂಟೆಗಳು ಉರಿದ ಉಷ್ಣವನ್ನು ಸಮವಾಗಿ ಎಲ್ಲ ಇಟ್ಟಿಗೆಗಳಿಗೂ ಒದಗಿಸಿ ಅವನ್ನು ಬೇಯಿಸುತ್ತವೆ. ಬೆಂಕಿ ನಂದಿ ಕಾವು ತಗ್ಗಿದಾಗ ಗೂಡು ಉಪಯೋಗಕ್ಕೆ ಸಿದ್ಧ. ಅದನ್ನು ಒಡೆದು ಬೆಂದು ಇಟ್ಟಿಗೆಗಳನ್ನು ಹೊರತೆಯುತ್ತಾರೆ. ಇಂಥ ಊರ ಇಟ್ಟಿಗೆ ಹಸಿ ಇಟ್ಟಿಗೆಗಿಂತ ಗಡಸು (ಹಾರ್ಡ್) ; ಆದರೆ ಬಲು ಪೆಡಸು (ಬ್ರಿಟಲ್). ಇಂದಿಗೂ ಹಳ್ಳಿಗಳಲ್ಲಿ ಇಂಥ ಆವಿಗೆಗಳನ್ನು ನೋಡಬಹುದು. ಆದರೆ ಈ ಕ್ರಮದಲ್ಲಿ ಶಕ್ತಿಯ ಅಪವ್ಯಯ ಅಧಿಕ. ಆದ್ದರಿಂದ ಸುಧಾರಿಸಿದ ಆವಿಗೆಗಳನ್ನು ಶಾಶ್ವತಕಟ್ಟಡಗಳಲ್ಲಿ ನಿರ್ಮಿಸಿದ್ದಾರೆ. ಇವು ಸತತ ಕ್ರಿಯಾಶೀಲ ಆವಿಗೆಗಳು. ಹಸಿ ಇಟ್ಟಿಗೆಗಳ ಸಂಗ್ರಹ, ಅವನ್ನು ಸುಡುವ ಆವಿಗೆ ಕೊಠಡಿಗಳು, ಸುಟ್ಟು ಇಟ್ಟಿಗೆಗಳನ್ನು ಹೊರತೆಗೆದು ಒಟ್ಟಲು ಸ್ಥಳ-ಇಷ್ಟು ಒಂದು ಕವಾಯಿತಿಯಲ್ಲಿ ನಡೆದಂತೆ ಅನೂಚಾನವಾಗಿ ಮುಂದುವರಿಯುತ್ತವೆ. ಇದರಿಂದ ಪ್ರತಿಸಲವೂ ಗೂಡು ಕಟ್ಟುವ ಅಥಾವ ಶಕ್ತಿ ಅಪವ್ಯಯವಾಗುವ ಅಥವಾ ಮಳೆ, ಗಾಳಿ, ಮಂಜುಗಳಿಗೆ ಹೆದರಬೇಕಾದ ಪ್ರಸಂಗವಿಲ್ಲ.

ಇತರ ಉಪಯೋಗಗಳು: ಪಿಂಗಾಣಿ ಪಾತ್ರೆ ತಯಾರಿಕೆಯಲ್ಲಿ (ನೋಡಿ-ಆಧುನಿಕ-ಮೃತ್ಕಲಾತಂತ್ರ) ಹಸಿ ಮರವನ್ನು ಒಣಗಿಸಿ ಹದಗೊಳಿಸಲು, ಏಲಕ್ಕಿಯನ್ನು ಹದವಾಗಿ ಕಾಯಿಸಿ ಮಾರುಕಟ್ಟೆಗೆ ಸಿದ್ಧಗೊಳಿಸಲು, ಚಿಪ್ಪುಗಳನ್ನು ಸುಟ್ಟು ತಯಾರಿಸಲು ಆವಿಗೆಗಳ ಉಪಯೋಗವಿದೆ. ಅಪಕರ್ಷಕ ವಾತಾವರಣದಲ್ಲಿ ಕಬ್ಬಿಣದ ಅದಿರುಗಳನ್ನು ಕಾಂತಸ್ಥಿತಿಗೆ ಅಪಕರ್ಷಿಸಲು ಉಪಯೋಗಿಸುವ ಒಲೆ.

ಉಷ್ಣದ ಪೂರೈಕೆ: ಮರದ ಕುಂಟೆಗಳು, ಮರದಪುಡಿ, ಇದ್ದಿಲು ಮುಂತಾದುವನ್ನು ಸುಟ್ಟು ಉಷ್ಣವನ್ನು ಪೂರೈಸುವ ಕ್ರಮ ಇಂದಿಗೂ ನಮ್ಮ ದೇಶದಲ್ಲಿ ಬಳಕೆಯಲ್ಲಿದೆ. ಆದರೆ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಮತ್ತು ಮುಂದುವರಿದ ರಾಷ್ಟ್ರಗಳಲ್ಲಿ ಎಣ್ಣೆ, ಇಂಧನಾನಿಲ, ವಿದ್ಯುಚ್ಛಕ್ತಿ ಇವುಗಳ ಸಹಾಯದಿಂದ ಬೇಕಾದ ಉಷ್ಣಶಕ್ತಿ ಪಡೆಯುತ್ತಾರೆ. (ಜಿ.ಟಿ.ಜಿ.)

      ಆವಿಯಂತ್ರ: ನೋಡಿ-ಉಗಿಯಂತ್ರ
      ಆವಿಯಾಗುವಿಕೆ: ನೋಡಿ-ಬಾಷ್ಟೀಕರಣ
      ಆವಿ ವಿಸರ್ಜನೆ: ನೋಡಿ-ಬಾಷ್ಟ ವಿಸರ್ಜನೆ
      ಆವಿಸ್ಪಂದನ ರೇಚಕ: ನೋಡಿ-ರೇಚಕಗಳು

ಆವೃತಬೀಜ ಸಸ್ಯಗಳು: ಬೀಜಗಳು ಕೋಶಾವೃತವಾಗಿರುವ (ಅಂದರೆ ಕಾಯಿಯೊಳಗೆ ಇರುವಂಥ) ನಾಳಯುಕ್ತ ಸಸ್ಯಗಳು (ಆಯಾಂಜಿಯೋಸ್ಪರ್ಮ್ಸ್): ಕೋಶರಹಿತ ಬೀಜಗಳಿರುವಂಥವು ನಗ್ನಬೀಜ ಸಸ್ಯಗಳು (ನೋಡಿ-ನಗ್ನಬೀಜ-ಸಸ್ಯಗಳು). ಇವೆರಡೂ ವರ್ಗಗಳ ಒಟ್ಟು ಹೆಸರು ಬೀಜೋತ್ಪನ್ನ ಸಸ್ಯಗಳು (ಸ್ಪರ್ಮಟೊಫೈಟ್). ಇವು ಉಚ್ಚವರ್ಗದ ಸಸ್ಯಗಳು. ಸಸ್ಯಸಮೂಹದಲ್ಲಿ ಆವೃತಬೀಜಸಸ್ಯಗಳೇ ಅತ್ಯಧಿಕ ಸಂಖ್ಯೆಯವು. ಇವುಗಳ ಸಂಖ್ಯೆ 350 ಕುಟುಂಬದಲ್ಲಿ ವ್ಯಾಪಿಸಿರುವ 2,50,000 ಪ್ರಭೇದಗಳು ಅಥಾವ ಉಚ್ಚವರ್ಗದ ಸಸ್ಯಗಳ 5/7ರಷ್ಟು ಇರಬಹುದೆಂದು ಅಂದಾಜು ಮಾಡಿದ್ದಾರೆ. ಇನ್ನೂ ಅನೇಕ ಹೊಸ ಪ್ರಭೇದಗಳು ನೈಸರ್ಗಿಕವಾಗಿಯೂ ಕೃತಕವಾಗಿಯೂ ಉತ್ಪನ್ನವಾಗುತ್ತಿವೆ, ಆವೃತಬೀಜ ಸಸ್ಯಗಳ ಬೀಜಗಳು ಹಣ್ಣಿನ ಒಳಗೆ ಮುಚ್ಚಿರುತ್ತವೆ. ಸಸ್ಯಗಳಲ್ಲಿ ಇವು ಮಾತ್ರ ಹೂಬಿಡುವುವು. ಬಾಹ್ಯರಚನೆ ಮತ್ತು ಬೀಜೋತ್ಪನ್ನ ವಿಧಾನಗಳಲ್ಲಿ ಆವೃತಬೀಜ ಸಸ್ಯಗಳಗೂ ನಗ್ನಬೀಜಸಸ್ಯಗಳಿಗೂ ಬಹಳ ವ್ಯತ್ಯಾಸವುಂಟು. ಆಯಾಂಜಿಯೋಸ್ಪರ್ಮ ಎಂಬ ಗ್ರೀಕ್ ಪದದಾ ಅರ್ಥ ಹೀಗಿದೆ: ಆಯಾಂಜಿಯಾನ್ ಅಂದರೆ ಕೋಶ, ಸ್ಪರ್ಮ ಅಂದರೆ ಬೀಜ. ಈ ಪದವನ್ನು ಪ್ರಥಮವಾಗಿ ಪಾಲ್ ಹರ್ ಮಾನ್ ಸಸ್ಯಗಳ ವರ್ಗೀಕರಣದಲ್ಲಿ ಬಳಸಿದ (1690). ಆತನೇ ನಗ್ನಬೀಜ ಸಸ್ಯಗಳನ್ನುನ್ ಮೊದಲು ಬಾರಿಗೆ ಗುರುತಿಸಿ ಅವನ್ನು ಆವೃತಬೀಜಸಸ್ಯಗಳಿಂದ ಬೇರ್ಪಡಿಸಿ ವಿವರಿಸಿದ. ಆ ಹೆಸರುಗಳೇ ಇಂದಿಗೂ ಉಳಿದುಕೊಂಡಿವೆ.

ಭೂಭಾಗದ ಅತ್ಯಧಿಕ ಸ್ಥಳವನ್ನು ಆವೃತಬೀಜ ಸಸ್ಯಸಮೂಹ ಆವರಿಸಿದೆ. ಪ್ರಾಣಿಜೀವನಕ್ಕೆ ಇವು ಮುಖ್ಯ ಆಧಾರ ಸಸ್ಯಗಳು. ಮಾನವಕುಲಕ್ಕೆ ಅಗತ್ಯವಾದ ಸಸ್ಯಾಹಾರಿ, ಬಟ್ಟೆ ಮತ್ತು ಆಸರೆ ಈ ಪಂಗಡದಿಂದಲೇ ಹೆಚ್ಚಾಗಿ ಒದಗುವುದು. ಪ್ರಪಂಚದ ಜೀವರಾಶಿಗಳ ಉಳಿವಿಗೆ ಅಗತ್ಯವಾದ ಆಕ್ಸಿಜನ್ ಉತ್ಪಾದನೆಗೂ ಜಲಾನಯದ ಭೂಮಿಗಳ ರಕ್ಷಣೆಗೂ ಇದೇ ಮೂಲ. ಇವುಗಳಿಲ್ಲದಿದ್ದಲ್ಲಿ ಬಹುಶಃ ಎಲ್ಲೆಲ್ಲೂ ಮರಳುಭೂಮಿ ಹರಡಿ ಗಾಳಿಯಲ್ಲಿ ಹೆಚ್ಚಾಗಿ ಆಕ್ಸಿಜನ್ ಇಲ್ಲದೆ ಪ್ರಾಣಿಜೀವನ ಸಾಧ್ಯವಿಲ್ಲವಾಗುತ್ತಿತ್ತು. ಬತ್ತ, ಗೋದಿ, ಬಾರ್ಲಿ, ಜೋಳ, ಮುಸುಕಿನ ಜೋಳ, ದ್ವಿದಳ ಧಾನ್ಯಗಳು, ನೆಲಗಡಲೆ ಮುಂತಾದ ಎಲ್ಲ ಆಹಾರ ಧಾನ್ಯಗಳೂ ವಿವಿಧ ತರಕಾರಿ ಮುತ್ತು ಅನೇಕ ಹಣ್ಣುಗಳೂ ಈ ಸಸ್ಯಗಳಿಂದ ಒದಗುತ್ತವೆ. ಬಟ್ಟೆಗೆ ಮತ್ತು ಹುರಿ ತರಾರಿಕೆಗೆ ಅಗತ್ಯವಾದ ನಾರು, ಹತ್ತಿ, ಅಗಸೆ, ಗೋಣಿ, ಕತ್ತಾಳೆ ಇತ್ಯಾದಿಗಳೂ ವಿವಿಧ ಔಷಧಿಗಳೂ ಟೀ, ಕಾಫಿ, ಕೋಕೋ ಮೊದಲಾದ ಪಾನೀಯಗಳೂ, ಹೊಗೆಸೊಪ್ಪು, ರಬ್ಬರ್, ಕಾಗದ, ಸಕ್ಕರೆ, ಬಣ್ಣ ಮುಂತಾದ ವಾಣಿಜ್ಯ ವಸ್ತುಗಳೂ ಇವುಗಳಿಂದಲೇ ನಮಗೆ ಒದಗುವುವು.

ಆವೃತಬೀಜ ಸಸ್ಯಗಳ ಆಕಾರ ಮತ್ತು ಜೀವನರೀತಿಯಲ್ಲಿ ಹೆಚ್ಚು ವೈವಿಧ್ಯವುಂಟು; ವಿವಿಧ ಪರಿಸ್ಥಿತಿಗೆ ಹೊಂದಿಕೊಳ್ಳುವಯತ್ನವೂ ಸಸ್ಯಾಭಿವೃದ್ಧಿಗೆ ಅನುಕೂಲವಾಗುವಂತೆ ಹೂ, ಹಣ್ಣು ಮತ್ತು ಬೀಜಗಳ ರಚನೆಯಲ್ಲಿ ಮಾರ್ಪಾಟಾಗಿರುವುದೂ ಇದಕ್ಕೆ ಮುಖ್ಯ ಕಾರಣ. ಗಾಳಿ ನೀರು ಮತ್ತು ಪ್ರಾಣಿಗಳಿಂದ ಬೀಜಪ್ರಸಾರ ಮಾಡುತ್ತ ಇವು ಎಲ್ಲ ಕಡೆಗೂ ಹರಡಿಕೊಂಡಿವೆ. ಸಿಹಿನೀರಿನ ಸರೋವರ ಮತ್ತು ನದಿಗಳಲ್ಲೂ ಹಲವು ಕುಟುಂಬಗಳು ಬೆಳೆಯುತ್ತವೆ. ಉದಾಹರಣೆಗೆ, ನಾಯಡೇಸಿ ಮತ್ತು ಪೊಟಾವೋಗ ಟೋನೇಸಿ ಕುಟುಂಬದ ಜಾತಿಗಳನ್ನು ಗಮನಿಸಬಹುದು. ಉಲ್ಫಿಯಾ ಮತ್ತು ಲಮ್ನ ಗಿಡಗಳು ಸಣ್ಣ ತೇಲುವ ತಟ್ಟೆಯಾಕಾರ ಹೊಂದಿದ್ದು ಅವುಗಳಲ್ಲಿ ಹಲವು 3 ಮಿಮೀ ಅಗಲ ಮಾತ್ರ ಇವೆ. ಇದಕ್ಕೆ ವ್ಯತಿರಿಕ್ತವಾಗಿ ಯೂಕಲಿಪ್ಟಸ್ (ನೀಲಗಿರಿ) ಮತ್ತು ಗೋರಿಯಾ ಮುಂತಾದ ಮರಗಳು 90ಮೀ ಎತ್ತರ ಬೆಳೆಯಬಹುದು. ಕೆಲವು ಜಾತಿಗಳು ಅಲ್ಪಾಯುಗಳಾಗಿವೆಯಾದರೆ ಇನ್ನೂ ಕೆಲವು ಹಲವು ಶತಮಾನಕಾಲ ಬದುಕಬಲ್ಲ ದೀರ್ಘಾಯು ಜಾತಿಗಳು. ಜಾಸ್ಟೇರಾ ಎಂಬುದು ಆಳವಲ್ಲದ ಸಮುದ್ರತೀರದ ಉಪ್ಪು ನೀರಿನಲ್ಲಿ ಬೆಳೆಯುತ್ತದೆ. ದಟ್ಟಡವಿಗಳೂ ಗೊಂಡಾರಣ್ಯಗಳೂ ಇವುಗಳಿಂದಲೇ ಉಂಟಾಗುತ್ತವೆ. ಅಲ್ಲಿ ಹೆಚ್ಚು ಮಳೆಯಿಂದಾಗಿ ಅವು ಸೊಂಪಾಗಿ ಬೆಳೆಯುತ್ತವೆ. ಹಿಮಾವೃತ ಬೆಟ್ಟದ ತುದಿಗಳಲ್ಲೂ ಧ್ರುವಪ್ರದೇಶಗಳಲ್ಲೂ ಬೆಳೆಯುವ ಹಲವು ವರ್ಣರಂಜಿತ ಹೂಗಿಡಗಳು ಈ ಪಂಗಡದವೇ. ಹಾಗು ಹಲವು ವರ್ಷಗಳಿಗೊಮ್ಮೆ 2.5 ಸೆಂಮೀ ಕ್ಕಿಂತ ಕಡಿಮೆ ಮಳೆಯಾಗುವ ಮರಳುಕಾಡಿನಲ್ಲೂ ಅನೇಕ ಜಾತಿಯ ಪ್ರಭೇದಗಳು ಬೆಳೆಯುತ್ತವೆ. ಇವುಗಳಿಗೆ ಕಳ್ಳಿಗಳೂ ಮತ್ತು ಐಜೋಏಸಿ ಕುಟುಂಬ ಸಸ್ಯಗಳೂ ಉತ್ತಮ ಉದಾಹರಣೆಗಳು.

ಇವೆಲ್ಲ ಬಹುತೇಕ ಸ್ವಾವಲಂಬಿ ಸ್ವಾವಲಂಬಿ ಸಸ್ಯಗಳು. ಆದರೆ ಹಲವು ಅಪ್ಪುಗಿಡಗಳಾಗಿ ಅಥಾವ ಪರಾವಲಂಬಿಗಳಾಗಿ ಪರಿವರ್ತನೆ ಹೊಂದಿವೆ. ಅಪ್ಪುಗಿಡಗಳು ನೀರು, ಆಹಾರ ಹೀರಲು ಅನುಕೂಲವಾಗುವಂಥ ಬೇರನ್ನೂ ಆಹಾರ ಉತ್ಪನ್ನಮಾಡಲು ಬೇಕಾದ ಹರಿತ್ತನ್ನೂ ಸಾಕಷ್ಟು ಹೊಂದಿರುತ್ತವೆ. ಭೂಮಿ ಅಥವಾ ನೀರಿನಲ್ಲಿ ಸ್ವಾವಲಂಬಿಯಾಗಿ ಬೆಳೆಯದ ಬೇರೆ ಮರಗಳ ಆಶ್ರಯ ಪಡೆದು ಅವುಗಳ ಕಾಂಡ ಅಥವಾ ಕೊಂಬೆಗಳ ಮೇಲೆ ಬೆಳೆಯುತೇವೆ. ಆಶ್ರಯ ಯಾಚಿಸುತ್ತವೆಯೇ ಹೊರತು ಆ ಮರಗಳಿಗೆ ಹಾನಿಮಾಡುವುದಿಲ್ಲ. ವಿವಿಧ ಆರ್ಕಿಡ್ ಗಿಡಗಳ ಇದಕ್ಕೆ ಉದಾಹರಣೆ. ಆದರೆ ವಿಸ್ಕಂ, ಕಸ್ ಕ್ಯೂಟ ಮುಂತಾದುವುಹಗಳಲ್ಲಿ ಹರಿತ್ತು ಇರುವುದಿಲ್ಲ. ಆಶ್ರಯಜೀವಿಗಳ ಅಂಗಾಂಶದೊಳಕ್ಕೆ ತಮ್ಮ ಬೇರನ್ನು ಬಿಟ್ಟು ಅದರ ಆಹಾರ ಹೀರುತ್ತವೆ. ಪೋಷಕಸಸ್ಯಗಳಿಗೆ ಮಾರಕವೆನಿಸಿರುವ ಇವು ಪರಾವಲಂಬಿಗಳು. ಹಲವು ಪೂತಿಜನ್ಯಸಸ್ಯಗಳು ಕೊಳೆತ ಪದಾರ್ಥಗಳಿಂದ ಆಹಾರ ಪಡೆದು ಬೆಳೆಯುತ್ತವೆ. ಆದರೆ ಎಲ್ಲಕ್ಕಿಂತಲೂ ಆಶ್ಚರ್ಯಕರ ವೈವಿಧ್ಯ ಕೀಟಾಹಾರಿಗಳಲ್ಲಿ ಕಂಡುಬಂದಿದೆ. ಕೀಟಗಳನ್ನು