ಪುಟ:Mysore-University-Encyclopaedia-Vol-2-Part-2.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇಸ್ರೇಲ್

ಅಂಚಿನಿಂದ ಮಧ್ಯ ಭಾಗದವರೆಗೆ ಇರುವ ಬೆಟ್ಟಗಳ ಪ್ರದೇಶ, ಪೂರ್ವಕ್ಕಿರುವ ಜೋರ್ಡಾನ್ ನದಿಯ ಸೀಳು ಕಣಿವೆ ಪ್ರದೇಶ ಮತ್ತು ದಕ್ಷಿಣದಲ್ಲಿ ನೆಗೆವ್. ಇದು ಶುಷ್ಕ ಪ್ರದೇಶ. ಇದರ ವಾಯವ್ಯ ಭಾಗದಲ್ಲಿ ಮರಳುಕಲ್ಲು ಭೂಮಿಯಿದೆ. ಉತ್ತರದ ಗ್ಯಾಲಿಲೀ ಬೆಟ್ಟಗಳೇ ಇಸ್ರೇಲಿನಲ್ಲಿ ಅತ್ಯುನ್ನತ ಪ್ರದೇಶ. ಶಿಖರಗಳ ಪೈಕಿ ಅತ್ಯಂತ ಎತ್ತರವಾದುದ್ದು ಮೆರಾನ್ (1208 ಮೀ). ಜೋರ್ಡಾನ್ ಕಣಿವೆ ಉತ್ತರ ಭಾಗ ಸಮುದ್ರಮಟ್ಟಕ್ಕಿಂತ 1210 ಮೀ ಎತ್ತರ. ಆದರೆ ಗ್ಯಾಲಿಲೀ ಕಣಿವೆಯು ಸಮುದ್ರದ ಬಳಿ 304 ತಗ್ಗಾಗಿದೆ. ಮೃತ್ಯ ಸಮುದ್ರದ ಮಟ್ಟ ಮೆಡಿಟರೇನಿಯನ್ ಸಮುದ್ರಮಟ್ಟಕ್ಕಿಂತ 399 ಮೀ ತಗ್ಗಾಗಿದೆ. ಅಕಾಬ ಖಾರಿಯವರೆಗೂ ಸೀಳು ಕಣಿವೆ ಹಬ್ಬಿದೆ. ಜೋರ್ಡಾನ್ ನದಿ ಇಸ್ರೇಲ್ ನ ಅತ್ಯಂತ ಪ್ರಮುಖ ನದಿಯಾಗಿದ್ದು ಸು. 200 ಕಿಮೀ ಉದ್ದವಾಗಿದೆ. ಇದರ ಪ್ರಮುಖ ಉಪನದಿ ಯಾರ್ಮುಕ್ ಇತರ ನದಿ ಕಣಿವೆಗಳು ಮಳೆ ಹೊರತು ಉಳಿದ ಕಾಲದಲ್ಲಿ ಶುಷ್ಕವಾಗಿರುತ್ತವೆ. ಗ್ಯಾಲಿಲೀ ಸಮುದ್ರದ ನೀರು ತಿಳಿಯಾಗಿದ್ದು, ಮೃತ್ಯು ಸಮುದ್ರದ ನೀರು ಸಾಗರದ ನೀರಿಗಿಂತಲೂ ಉಪ್ಪಾಗಿರುತ್ತದೆ. ಇದಕ್ಕೆ ಅಲ್ಲಿನ ನೀರು ಹೆಚ್ಚು ಆವಿಯಾಗಿರುವುದು ಕಾರಣ. ಆದ್ದರಿಂದ ಆ ಸಮುದ್ರದ ನೀರಿನ ಲವಣ ಸಾಂದ್ರೀಕರಣ ಸಾಗರದ ಸರಾಸರಿಗಿಂತ ಎಂಟು ಪಟ್ಟು ಹೆಚ್ಚು.

ಇಸ್ರೇಲ್ ನ ಉತ್ತರಭಾಗದಲ್ಲಿ ಮೆಡಿಟರೇನಿಯನ್ ಮತ್ತು ದಕ್ಷಿಣದಲ್ಲಿ ಮರುಭೂಮಿವಾಯುಗುಣ ಕಂಡುಬರುತ್ತದೆ. ಬೇಸಿಗೆಯಲ್ಲಿ ನಿರಭ್ರ ಆಕಾಶವಿದ್ದು ಮಳೆ ರಹಿತವಾಗಿರುತ್ತದೆ. ಚಳಿಗಾಲದಲ್ಲಿ ಉತ್ತರ ಭಾಗಕ್ಕೆ ಸಾಧಾರಣ ಸರಾಸರಿ 70 ಸೆಂಮೀ ಮಳೆಯಾಗುತ್ತದೆ. ಅಕ್ಟೋಬರ್ ನಿಂದ ಮಾರ್ಚಿಯವರೆಗೆ ಮಳೆಗಾಲ. ಮಳೆಯು ದಕ್ಷಿಣದ ಕಡೆಗೆ ತೀವ್ರವಾಗಿ ಕಡಿಮೆಯಾಗುತ್ತದೆ. ಬಿರ್ ಶಿಬಾ ಮತ್ತು ಗಜಾದಿಂದಾಚೆಗೆ ಮರುಭೂಮಿ ಪರಿಸ್ಥಿತಿ ವಿಶೇಷವಾಗಿ ಕಂಡುಬರುತ್ತದೆ.

ಜುಲೈನಲ್ಲಿ ಸರಾಸರಿ ಉಷ್ಣಾಂಶ 20°ಸೆ. ಚಳಿಗಾಲ ತಂಪಾಗಿದ್ದು ತೀರ ಪ್ರದೇಶದಲ್ಲಿ 14°ಸೆ. ಮತ್ತು ಪರ್ವತಗಳಲ್ಲಿ 9°ಸೆ. ಇರುತ್ತದೆ. ಮೃತ್ಯು ಸಮುದ್ರ ಪ್ರದೇಶ ನೈಋತ್ಯ ಏಷ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶಭರಿತ (49°ಸೆ.) ಪ್ರದೇಶವಾಗಿದೆ. ಖಮ್ ಸಿನ್ ಉಷ್ಣಭರಿತ, ಶುಷ್ಕ್ಲ ಹಾಗೂ ಧೂಳಿನಿಂದ ಕೂಡಿದ ಮಾರುತ ವಸಂತ ಮತ್ತು ಶರತ್ ಕಾಲದಲ್ಲಿ ಮರುಭೂಮಿಯಿಂದ ಪೂರ್ವದ ಕಡೆಗೆ ಬೀಸುತ್ತದೆ.

ಇಲ್ಲಿನ ಸ್ವಾಭಾವಿಕ ಸಸ್ಯವರ್ಗಗಳೆಲ್ಲ ಅದೃಶ್ಯವಾಗಿವೆ. ಗ್ಯಾಲಿಲೀ ಷರಾನ್ ಗಳಲ್ಲಿ ಅಲ್ಲಲ್ಲಿ ಒಂಟೊಂಟಿಯಾಗಿ ಓಕ್ ಮರಗಳಿವೆ. ಇತ್ತೀಚಿಗೆ ಎತ್ತರದ ಭಾಗಗಳಲ್ಲಿ ಮಣ್ಣು ಮತ್ತು ಅಂತರ್ಜಲವನ್ನು ಸಂರಕ್ಷಿಸುವುದಕ್ಕಗಿ ಹೊಸದಾಗಿ ಪೈನ್ ಮರಗಳ ಅರಣ್ಯವನ್ನು ಬೆಳೆಸಲಾಗಿದೆ. ಪ್ರಾಣಿ ಸಂರಕ್ಷಣೆ ಮತ್ತು ಸಂರಕ್ಷಣಾ ಕಾನೂನುಗಳಿಂದ ಪ್ರಾಣಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಸು. 100 ಜಾತಿಯ ಪ್ರಾಣಿಗಳು, 400 ರೀತಿಯ ಪಕ್ಷಿಗಳು ಕಂಡುಬರುತ್ತವೆ. ಮುಖ್ಯ ಪ್ರಾಣಿಗಳೆಂದರೆ ತೋಳ, ಮುಂಗುಸಿ, ನರಿ, ನೀರುನಾಯಿ, ಕತ್ತೆಕಿರುಬ ಮತ್ತು ಮುಳ್ಳುಹಂದಿ.