ಪುಟ:Mysore-University-Encyclopaedia-Vol-2-Part-2.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಟಲಿಯ ಇತಿಹಾಸ. ಮುಸ್ಸೋಲಿನಿಯ ತತ್ತ್ವಗಳ ನಡುವೆ ಪರಸ್ಪರ ಸಹಾನುಭೂತಿಯ ಬಂಧನವೊಂದಿದ್ದಿತು ಎಂಬುದನ್ನರಿಯುವುದು ಅತಿಮುಖ್ಯ. ಮೊದಲಿನ ಎರಡೂ ಅನಂತರದ ಫ್ಯಾಸಿಸ್ಟ್ ಚಳವಳಿ ಯಲ್ಲಿ ಒಂದಾದುವು. ಬಡತನ, ಶಕ್ತಿಯುತ ರಾಷ್ಟ್ರಗಳ ಮೇಲೆ ಅನಿವಾರ್ಯ ಅವಲಂಬನ, ಶಕ್ತಿಯುತ ಹಾಗೂ ಸಂಪದ್ಯುಕ್ತ ರಾಷ್ಟ್ರಗಳಿಂದ ಶೋಷಣೆ-ಇವುಗಳಿಗೆ ಒಳಗಾಗಿದ್ದ ಇಟಲಿಯೂ ಶ್ರಮಜೀವಿ ರಾಷ್ಟ್ರವಾಗಿತ್ತು.

ಗಿಯೊಲಿಟಿ 1911ರಲ್ಲಿ, ಟ್ರಿಪೊಲಿ ಹಾಗೂ ಸಿರೆನೈಕಗಳನ್ನು ವಶಮಾಡಿಕೊಳ್ಳಲು ತುರ್ಕಿಯ ವಿರುದ್ಧವಾಗಿ ಯುದ್ಧಕ್ಕೆ ಹೋದ. ಈ ಎರಡರ ಜೊತೆಗೆ ಡೊಡೆಕನೀಸ್ ದ್ವೀಪ ಆಕ್ರಮಿಸಿದ. ಆ ಕಾರ್ಯದಲ್ಲಿ ಆತನಿಗೆ ಸರ್ಕಾರದ ಬೆಂಬಲವಿತ್ತು. ಮುಸ್ಸೋಲಿನಿಯೂ ಸೇರಿ ಅನೇಕ ಸಮಾಜವಾದಿಗಳು ಈ ಯುದ್ಧವನ್ನು ಸಾಮ್ರಾಜ್ಯಶಾಹಿಯೆಂದು ತಿರಸ್ಕರಿಸಿದರೂ ಫ್ರಾನ್ಸ್ ಹಾಗೂ ಬ್ರಿಟನ್‍ಗಳೊಡನೆ ಉತ್ತರ ಆಫ್ರಿಕದಲ್ಲಿ ತನ್ನ ಶಕ್ತಿ ಸ್ಥಾಪಿಸಲು ಸಾಧ್ಯವಾಗಿದ್ದುದ ರಿಂದ ಹಾಗೂ ತಮ್ಮ ತಾಯ್ನಾಡಿನ ತೀರಕ್ಕೆ ಎದುರಾಗಿದ್ದ ಕರಾವಳಿ ಪ್ರದೇಶ ವಿದೇಶೀಯರಿಗೆ ಹೋಗದಂತೆ ತಡೆಗಟ್ಟಿದ್ದರಿಂದ ಜನರಲ್ಲಿ ಸಾಮಾನ್ಯವಾಗಿ ತೃಪ್ತಿಯಿತ್ತು. ಈ ಯುದ್ಧದಲ್ಲಿ ಇಟಲಿಯ ಸೈನಿಕರ ಸಾಧನೆಯೇನೂ ಗಮನಾರ್ಹವಾದದ್ದಲ್ಲ. ಏಕೆಂದರೆ ತುರ್ಕಿಯವರು ತಾಯ್ನಾಡಿನ ಸಮೀಪದಲ್ಲಿದ್ದ ಬಾಲ್ಕನ್ ರಾಜ್ಯಗಳವರೊಡನೆ ಯುದ್ಧಮಾಡುವುದರಲ್ಲಿ ನಿರತರಾಗಿದ್ದರು. ಆದಾಗ್ಯೂ ಕೊನೆಗೆ ಇಟಲಿಯವರು ವಿಜಯಶಾಲಿಗಳಾದರು.

ಈ ವಿಜಯ ಬಹಳ ಅಲ್ಪ ಆರ್ಥಿಕ ಫಲ ನೀಡಿತು. ಅದು ರಾಷ್ಟ್ರೀಯತಾವಾದಿಗಳ ದಾಹವನ್ನಡಗಿಸಲಿಲ್ಲ. ರಾಷ್ಟ್ರೀಯತಾವಾದಿಗಳು ನಿಜವಾಗಿ ಆಸಕ್ತಿಹೊಂದಿದ್ದದ್ದು ಇಟಾಲಿಯಾ ಇರ್ರೆಡೆಂಟದಲ್ಲಿ. ಇದು ಮಾತೃಭೂಮಿಯ ಭಾಗವಾಗಿ ಇನ್ನೂ ವಿದೇಶೀಯರ ಆಳ್ವಿಕೆಯಲ್ಲೇ ಇತ್ತು. ಇಟಲಿಯ ಜನರೇ ಹೆಚ್ಚಾಗಿದ್ದ ಟ್ರೆಂಟಿನೋ ಕಣಿವೆ, ಟ್ರಿಯಸ್ಟೆ ನಗರ ಹಾಗೂ ಫ್ರಿಯುಲಿ, ಇಷ್ಟ್ರಿಯ ಹಾಗೂ ಡಾಲ್ಮೇಷಿಯನ್ ನಗರಗಳ ಕೆಲವು ಭಾಗಗಳನ್ನು ವಶಪಡಿಸಿ ಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು. ಈ ಎಲ್ಲ ಪ್ರಾಂತ್ಯಗಳೂ ಆಸ್ಟ್ರಿಯನ್ನರ ಆಳ್ವಿಕೆಯಲ್ಲೇ ಇದ್ದು, ಅಲ್ಲಿನ ಸರ್ಕಾರ ಇಟಲಿಯ ಜನರ ಮೇಲೆ ಅದರಲ್ಲೂ ವಿಶೇಷವಾಗಿ ಟ್ರಿಯಸ್ಟೆಯ ಜನರ ಮೇಲೆ, ಪಕ್ಷಪಾತ ತೋರಿಸುತ್ತಿತ್ತು. 1908ರಲ್ಲಿ ಇಟಲಿಯ ಒಪ್ಪಿಗೆಯಿಲ್ಲದೆ ಆಸ್ಟ್ರಿಯ, ಬಾಸ್ನಿಯ ಹಾಗೂ ಹರ್ಸೆಗೋವಿನಗಳನ್ನು ವಶಮಾಡಿಕೊಂಡಿತ್ತು. ಯುರೋಪಿನಲ್ಲಿ ಈ ವೇಳೆಗಾಗಲೇ ಎರಡು ಪಂಗಡಗಳಾಗಿದ್ದು, ಇಟಲಿ ಅನೇಕ ತೊಂದರೆಗಳಿದ್ದಾಗ್ಯೂ ತನ್ನ ಬದ್ಧದ್ವೇಷಿಯಾದ ವಿಯನ್ನದ ಕಡೆ ತಿರುಗದೆ ಬರ್ಲಿನಿನ ಬೆಂಬಲದಿಂದ ಫ್ರಾನ್ಸಿನತ್ತ ತಿರುಗಿತು. ಗಿಯೊಲಿಟಿ 1912ರಲ್ಲಿ ಜರ್ಮನಿ ಹಾಗೂ ಆಸ್ಟ್ರಿಯಗಳೊಡನೆ ತ್ರಿವಳಿ ಮಿತ್ರತ್ವವನ್ನು ಸಾಕಷ್ಟು ವಿರೋಧಗಳ ನಡುವೆ ಬೆಳೆಸಿದ. ಗಿಯೊಲಿಟಿ ಕೆಲವು ಕಾಲ ಜರ್ಮನಿಯವರತ್ತ ಮತ್ತೆ ಕೆಲವು ಕಾಲ ಫ್ರಾನ್ಸ್‍ನವರತ್ತ ತಿರುಗುತ್ತ ಶಾಂತಿ ಕಾಪಾಡಲು ಪ್ರಯತ್ನಿಸಿದ. ಆದರೆ ಜರ್ಮನಿಯವರು ಮೋಸ ಹೋಗಲಿಲ್ಲ.

ಒಂದನೆಯ ಮಹಾಯುದ್ಧ ಹಾಗೂ ಅದರ ಪರಿಣಾಮ: 1914 ಆಗಸ್ಟ್‍ನಲ್ಲಿ ಒಂದನೆಯ ಮಹಾಯುದ್ಧ ಆರಂಭವಾದಾಗ, ಕೇಂದ್ರೀಯ ಶಕ್ತಿಗಳು ಗೆಲ್ಲುವುವೆಂದೂ ಇಟಲಿ ಸಾಧಿಸಿದ್ದ ಐಕ್ಯವನ್ನು ವಿಜಯೀ ರಾಷ್ಟ್ರವಾದ ಆಸ್ಟ್ರಿಯ ನಾಶಗೊಳಿಸುವುದೆಂದೂ ಇಟ್ಯಾಲಿಯನ್ನರ ಮನಸ್ಸಿನಲ್ಲಿ ಭಯವಿತ್ತು. ತ್ರಿವಳಿ ಸಂಬಂಧದ ಒಪ್ಪಂದದ ಪ್ರಕಾರ ಜರ್ಮನಿ, ಆಸ್ಟ್ರಿಯನ್ನರ ಮೇಲೆ ಧಾಳಿಯಾದರೆ ಮಾತ್ರ ಇಟಲಿ ಅವುಗಳಿಗೆ ನೆರವು ನೀಡಬೇಕಾಗಿತ್ತು. ಇಟಲಿ ಆ ರಾಷ್ಟ್ರಗಳ ಮೇಲೆ ಧಾಳಿ ಮಾಡಲಾಗದೆಂದು ಸಾಮಾನ್ಯವಾದ ಸಹಜಾಭಿಪ್ರಾಯವಾಗಿತ್ತು. ಮತ್ತೊಂದು ಕಡೆ, ಟ್ರಿಪೋಲಿ ಯುದ್ಧದ ಬಗ್ಗೆ ಫ್ರಾನ್ಸ್, ಬ್ರಿಟನ್‍ಗಳೆರಡೂ ಆಕ್ಷೇಪಣೆಯ ದೃಷ್ಟಿ ಹೊಂದಿದ್ದುವು. ಇಟಲಿ ಒಂದು ಪಕ್ಷ ಮಿಲಿಟರಿ ಹಾಗೂ ಆರ್ಥಿಕ ನೆರವು ನೀಡುವ ಸಾಮಥ್ರ್ಯಹೊಂದಿದ್ದರೂ ಅದು ಯಾವುದೇ ರೀತಿಯ ನೆರವು ನೀಡುವ ಉತ್ಸಾಹವನ್ನೂ ವ್ಯಕ್ತಪಡಿಸಲಿಲ್ಲ. ಗಿಯೊಲಿಟಿಯ ಅನಂತರದ ಸಾಲಾಂಡ್ರನ ಹೊಸ ಸರ್ಕಾರ ಪವಿತ್ರ ಅಹಂಭಾವದ ತತ್ತ್ವವನ್ನು ಮುಂದುವರಿಸಿತ್ತು ಹಾಗೂ ತನ್ನ ಸೈನಿಕ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದರತ್ತ ಗಮನ ಹರಿಸಿತ್ತು.

ಡಿ. ಅನುಂಜಿನೋ, ಮುಸ್ಸೋಲಿನಿ ಹಾಗೂ ಇತರರ ಚಳವಳಿ ಹಾಗೂ ಪ್ರದರ್ಶನಗಳ ಫಲವಾಗಿ, ಇಟಲಿ 1915 ಮೇ 24ರಂದು ಮಿತ್ರರಾಷ್ಟ್ರಗಳ ಪರವಾಗಿ ಯುದ್ಧಕ್ಕಿಳಿಯಿತು. ಈ ವೇಳೆಗೆ ಮುಸ್ಸೋಲಿನಿ ಮಿಲಾನಿನಿಂದ ಸಮಾಜವಾದಿಗಳಿಂದ ಬೇರಾಗಿದ್ದ ಇಲ್ಪೊ ಪೊಲೊ ಡಿ ಇಟಾಲಿಯ ಎಂಬ ಪತ್ರಿಕೆಯೊಂದನ್ನು ಹೊರಡಿಸುತ್ತಿದ್ದ. ಡಿ. ಅನುಂಜಿನೊ ಜೊತೆಯಲ್ಲಿ ಫ್ಯಾಸಿಡೆ ಅಜಿಯೊನ್ರೆ ವಲ್ಯೊಷನೇರಿಯಾ ಚಳವಳಿಯನ್ನು ದೇಶದಲ್ಲೆಲ್ಲಾ ವ್ಯವಸ್ಥೆ ಮಾಡಿದ್ದ. ಕ್ರಾಂತಿಕಾರಿ ಸಮಾಜವಾದಿಗಳೂ ಸಿಂಡಿಕಲಿಸ್ಟರೂ ಯುದ್ಧದ ಪರವಾಗಿದ್ದರೆ, ಗಿಯಾಲಿಟಿ ಹಾಗೂ ಪಾರ್ಲಿಮೆಂಟರಿ ಸಮಾಜವಾದಿಗಳು ಶಾಂತಿಯ ಪರವಾಗಿದ್ದರು. ಯುದ್ಧವನ್ನು ಬಯುಸುತ್ತಿದ್ದ ಪಕ್ಷ ಗೆದ್ದಿತು. ಏಕೆಂದರೆ 1900ರಲ್ಲಿ ಸಿಂಹಾಸನಾರೋಹಣ ಮಾಡಿದ್ದ ದೊರೆ 3ನೆಯ ವಿಕ್ಟರ್ ಇಮಾನ್ಯುಯಲ್ ಹಾಗೂ ಶಾಸನಸಭಾ ಅಧ್ಯಕ್ಷ ಸಲಾಂಡ್ರ, ಇಬ್ಬರೂ ಯುದ್ಧ ಬಯಸಿದ್ದರು.

ಆಸ್ಟ್ರಿಯದ ವಿಶಾಲ ಪ್ರದೇಶದ ಮೇಲೆ ಇಟಲಿ 1917ರ ವರೆಗೆ ಧಾಳಿಯಲ್ಲಿ ನಿರತವಾಗಿದ್ದಿ ತಾದರೂ ಅದಕ್ಕೆ ಜಯ ದೊರೆಯಲಿಲ್ಲ. ಇಟಲಿಯವರ ಈ ಪ್ರಯತ್ನ ಬಹು ದುಬಾರಿಯದಾ ಗಿತ್ತು. ಅಲ್ಲದೆ ಅವರ ಬಳಿ ಅರಿಲರಿ ಹಾಗೂ ಷೆಲ್‍ಗಳ ಕೊರತೆಯಿತ್ತು. (ಈ ಕೊರತೆಯನ್ನು

ಫ್ರಾನ್ಸ್ ಹಾಗೂ ಬ್ರಿಟನ್‍ಗಳ ನೆರವಿನಿಂದ ಭಾಗಶಃ ನಿವಾರಿಸಲಾಗಿತ್ತು) ಗಾಯಾಳುಗಳ ಸಂಖ್ಯೆ ಏರುತ್ತಲಿತ್ತು. 1917ರ ಬೇಸಗೆಯ ಘಟನೆಗಳ ಅನಂತರ ಸೈನಿಕರ ಧೈರ್ಯಸ್ಥೈರ್ಯಗಳು ಕುಗ್ಗಿದ್ದವು. 1917 ಅಕ್ಟೋಬರ್‍ನಲ್ಲಿ, ಏಳು ಜರ್ಮನ್ ಡಿವಿಷನ್‍ಗಳಿಂದ ಕೂಡಿದ್ದ ಆಸ್ಟ್ರಿಯದ ಸೈನ್ಯ ಕ್ಯಾಪೊರೆಟ್ಟೊದ ಸುತ್ತ ಐಸೊಂಜೊವನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು. ಇಟಲಿಯವರನ್ನು ಪಿಯಾವೆ ನದಿಯವರೆಗೆ ಹಿಂದಕ್ಕಟ್ಟಲಾಯಿತು. ಈ ಸ್ಥಳದಲ್ಲಿದ್ದಾಗ ಐದು ಬ್ರಿಟಿಷ್ ಹಾಗೂ ಆರು ಫ್ರೆಂಚ್ ಡಿವಿಷನ್‍ಗಳ ಸಮಯೋಚಿತವಾದ ನೆರವು ದೊರೆಯಿತು. ಹೀಗಾಗಿ ಆಸ್ಟ್ರಿಯದವರು ಮುಂದೆ ನುಗ್ಗಲಾರದೆ ಹೋದರು. ಮುಂದೆ ಜನರಲ್ ಡಿಯಾಜ್, ಇÁನೊ ಹಾಗೂ ಟ್ರಿಯೆಸ್ಟೆಯವರೆಗೂ ಸೈನ್ಯ ನುಗ್ಗಿಸಿದ. 1918ರ ನವೆಂಬರ್ 4ರಂದು ಆಸ್ಟ್ರಿಯನ್ನರು ಯುದ್ಧವಿಶ್ರಾಂತಿಗೆ ಸಹಿ ಹಾಕಿದರು.


ಫ್ರಾನ್ಸ್ ಹಾಗೂ ಬ್ರಿಟನ್‍ಗಳಂತೆ ತಾವೂ ಶೌರ್ಯದಿಂದ ಕಾದಿದ್ದುದಾಗಿ ಇಟ್ಯಾಲಿಯನ್ನರು ಭಾವಿಸಿದ್ದರು. ಆದರೆ ತಮ್ಮನ್ನು ಪ್ಯಾರಿಸ್ ಶಾಂತಿಸಮ್ಮೇಳನದಲ್ಲಿ ಕಡೆಗಣಿಸಿದರೆಂದು ನಿರಾಶೆ ಹೊಂದಿದ್ದರು. ಅವರ ಪ್ರತಿನಿಧಿಗಳಾಗಿದ್ದ ಪ್ರಧಾನಿ ಆರ್ಲ್ಯಾಂಡೊ ಹಾಗೂ ವಿದೇಶಮಂತ್ರಿ ಸೊನ್ನಿನೊ ಬಹು ಪೇಚಿನ ಸ್ಥಿತಿಯಲ್ಲಿ ಸಿಲುಕಿದ್ದರು. ಅವರು ಡಿ ಅನುಂಜಿನೂ ಹಾಗೂ ಮುಸ್ಸೋಲಿನಿಯಂಥ ರಾಷ್ಟ್ರೀಯತಾವಾದಿಗಳನ್ನೂ ಸಿಂಡಿಕಲಿಸ್ಟ್‍ಗಳನ್ನೂ ಮೆಚ್ಚಿಸಬೇಕಾಗಿತ್ತು. ಸಮಾಜವಾದಿಗಳ ನಂಬಿಕೆಯನ್ನೂ ಗಳಿಸಬೇಕಾಗಿತ್ತು. ಅವರು ಜರ್ಮನಿಯ ದಕ್ಷಿಣ ಟಿರೋಲ್ ಸೇರಿದಂತೆ ಟ್ರೆಂಟಿನೋ ಹಾಗೂ ಟ್ರಿಯೆಸ್ಟೆಗಳನ್ನು ಪಡೆದರಾದರೂ ಲಂಡನ್ನಿನ ಕರಾರಿನಲ್ಲಿ ಕೊಡಲೊಪ್ಪಲಾಗಿದ್ದ ಕಡಲತೀರವನ್ನಾಗಲೀ ಜರ್ಮನಿಯ ವಸಾಹತುಗಳನ್ನಾಗಲೀ ತುರ್ಕಿ ಸಾಮ್ರಾಜ್ಯದ ಗಮನಾರ್ಹ ಭಾಗವನ್ನಾಗಲೀ ಪಡೆಯಲಿಲ್ಲ. ಲಂಡನ್ನಿನ ಕರಾರಿನಲ್ಲಿ ವಿವರಿಸಲಾಗದಿದ್ದು ರಾಷ್ಟ್ರೀಯತಾವಾದದ ತತ್ತ್ವಕ್ಕನುಗುಣವಾಗದ ಇಸ್ಟ್ರಿಯದ ಪೂರ್ವತೀರದ ಫಿಯುಮ್ ಬಂದರಿನ ಬಗ್ಗೆ ಭಾರೀ ಚಳವಳಿ ಇಟಲಿಯಲ್ಲಿ ಅರಂಭವಾಯಿತು. ಏಡ್ರಿಯಾಟಿಕ್‍ನ ತೀರದ ಎದುರಿಗೆ, ಕೌಲಿಗೆ ಅನುಗುಣವಾಗಿ ಯುಗೋಸ್ಲಾವಿಯದ ರಾಜ್ಯ ರಚನೆಯಾಯಿತು. ಇಟಲಿಯವರು ಫಿಯುಮ್ ಬಗ್ಗೆ ಒತ್ತಾಯ ಮಾಡಲಾರಂಭಿಸಿದರು. ಏಕೆಂದರೆ ಯುಗೋಸ್ಲಾವಿಯದವರು ಟ್ರಿಯೆಸ್ಟೆಯನ್ನು ನಾಶಪಡಿಸಲು ಫಿಯುಮ್ ಉಪಯೋಗಿಸಬಹುದೆಂಬ ಭಯವಿತ್ತು. ವರ್ಸೇಲ್ಸ್ ಒಪ್ಪಂದದಿಂದಲೂ ಈ ಸಮಸ್ಯೆ ಬಗೆಹರಿಯಲಿಲ್ಲ. 1919ರಲ್ಲಿ ಧೈರ್ಯವಂತನಾದ ಅನುಂಜಿನೊ ಕೆಲವು ಅನುಯಾಯಿಗ ಳೊಡನೆ, ತನ್ನ ಸರ್ಕಾರದ ಇಚ್ಛೆಯ ವಿರುದ್ಧ, ಫಿಯುಮ್ಮನ್ನು ವಶಪಡಿಸಿಕೊಂಡ. ಇಟಲಿ ಹಾಗೂ ಯುಗೋಸ್ಲಾವಿಯಗಳ ನಡುವಣ ಸಮಸ್ಯೆಗಳು 1920 ನವೆಂಬರಿನ ರಾಪಲೊ ಕರಾರಿನಿಂದ ಅಂತ್ಯಗೊಂಡುವು. ಇಟಲಿ ಟ್ರಿಯೆಸ್ಟೆಯ ಹಿನ್ನೆಲೆಪ್ರದೇಶವನ್ನೂ ಸಂಪೂರ್ಣ ಇಸ್ಟ್ರಿಯನ್ ಪರ್ಯಾಯದ್ವೀಪವನ್ನೂ ಪಡೆಯಿತು. ಫಿಯುಮ್ ಸ್ವತಂತ್ರ ನಗರವಾಯಿತು. ಮೂರು ವರ್ಷಗಳ ಅನಂತರ ಅದು ಇಟಲಿಗೆ ಸೇರಿತು. ಚೆರ್ಸೊದ್ವೀಪ ಹಾಗೂ ಜಾರಾ ಬಂದರನ್ನು ಪಡೆದರೂ ಡಾಲ್ಮೇಷಿಯದ ಬಗ್ಗೆ ಬೇಡಿಕೆಯನ್ನು ಇಟಲಿ ಬಿಟ್ಟಿತು.

ಫ್ಯಾಸಿಸ್ಟ್ ನಿರಂಕುಶಾಧಿಕಾರ: ವರ್ಸೇಲ್ಸ್‍ನಲ್ಲಿ ಸಂಭವಿಸಿದ ಪರಾಭವದಿಂದಾಗಿ, ಆರ್ಲ್ಯಾಂಡೂ ಪದಚ್ಯುತನಾದ. 1920 ಜೂನ್ ವೇಳೆಗೆ ಗಿಯೊಲಿಟಿ ಮತ್ತೆ ಅಧಿಕಾರಕ್ಕೆ ಬಂದ. ನಿರಸನ ಮತ್ತು ಅವ್ಯವಸ್ಥೆ ಎಲ್ಲೆಲ್ಲೂ ಹಬ್ಬಿದ್ದವು. ಪ್ರಜೆಗಳೆಲ್ಲ ತಮ್ಮ ದೃಷ್ಟಿಯನ್ನು ಸರ್ಕಾರದ ಕಡೆಗಲ್ಲದೆ ಮತ್ತೆಲ್ಲಿಯೋ ಬೀರಿದ್ದರು. ಅಂದರೆ ಒಂದು ಕಡೆ, ಆ ರಾಷ್ಟ್ರೀಯ ಭಾವನೆಗಳನ್ನು ಪ್ರತಿಪಾದಿಸುತ್ತಿದ್ದ ಸಿಂಡಿಕಲಿಸ್ಟರತ್ತ ಬಂಡಾಯಗಾರರತ್ತ ಮತ್ತು ಕಮ್ಯೂನಿಸ್ಟರತ್ತ ದೃಷ್ಟಿ ಬೀರಿದ್ದರೆ, ಮತ್ತೊಂದು ಕಡೆ ರಾಷ್ಟ್ರಸರ್ಕಾರವನ್ನು ವಶಪಡಿಸಿಕೊಂಡು ಹೊಸ ರಾಷ್ಟ್ರೀಯತಾವಾದದ ಭಾವನೆಗಳನ್ನು ಸ್ಥಾಪಿಸಬೇಕೆಂದಿದ್ದ ರಾಷ್ಟ್ರೀಯ ಸೆನೇಟಿನವರತ್ತಲೂ ಉಗ್ರ ರಾಷ್ಟ್ರೀಯವಾದಿಗಳತ್ತಲೂ ದೃಷ್ಟಿ ಬೀರಿದ್ದರು. ಈ ಎರಡನೆಯ ಗುಂಪಿನವರಲ್ಲಿ ಪ್ರಮುಖರಾಗಿದ್ದವರು ಡಿ ಅನುಂಜಿನೊ ಮತ್ತು ರಾಷ್ಟ್ರೀಯ ಸೆನೇಟಿನ ನಾಯಕ ರಸ್ಸೊನಿ. ಆದರೆ ಕ್ರಮೇಣ ತನ್ನದೇ ಆದ ಪಕ್ಷವನ್ನು ಸ್ಥಾಪಿಸಿದ್ಧ ಮುಸ್ಸೋಲಿನಿ 1919 ಮಾರ್ಚ್‍ನಲ್ಲಿ ಅಧಿಕಾರ ಗಳಿಸಿಕೊಂಡ. ಇವನ ಪಕ್ಷಕ್ಕೆ ಕಮ್ಯೂನಿಸ್ಟ್ ಹಾಗೂ ಅವರ ಸೋದರ ಪಂಗಡಗಳಷ್ಟು ಸಂಖ್ಯಾಬಲವಿರಲಿಲ್ಲ (ನೋಡಿ-ಮುಸ್ಸೋಲಿನಿ, ಬೆನಿಟೊ).

ಮುಸ್ಸೋಲಿನಿ 1922ರ ಜನವರಿಯಲ್ಲಿ, ರಸ್ಸೊನಿ ಮತ್ತು ಅವನ ರಾಷ್ಟ್ರೀಯ ಸೆನೇಟಿನವರುಗಳನ್ನು ತನ್ನ ಫ್ಯಾಸಿಸ್ಟ್ ಪಂಗಡದವರೊಡನೆ ಸೇರಿಸಿಕೊಂಡಾಗ, ಆತ ಕಮ್ಯೂನಿಸ್ಟ್ ವಿರೋಧಿ ಹಾಗೂ ಪಾರ್ಲಿಮೆಂಟ್ ವಿರೋಧಿ ಚಳವಳಿಯ ಮೇಲೆ ಸಂಪೂರ್ಣವಾಗಿ ಹತೋಟಿ ಹೊಂದಿದ್ದ. ಏಕೆಂದರೆ ಯುಗೋಸ್ಲಾವಿಯದೊಡನೆ ರಾಪಲ್ಲೊ ಒಪ್ಪಂದದ ಮುಕ್ತಾಯದ ಅನಂತರ ಡಿ ಅನುಂಜಿನೊವನ್ನು ಗಿಯೊಲಿಟಿ ಫಿಯುಮ್‍ನಿಂದ ಹೊರಹಾಕಿದ್ದರಿಂದ, ಅನುಂಜಿನೊ ಗೌರವ ಕಡಿಮೆಯಾಗಿತ್ತು. ಮುಸ್ಸೋಲಿನಿಯ ತಂಡ ತಮ್ಮ ಲಾಠಿ ಹಾಗೂ ವ್ಯವಸ್ಥಿತ ಸಂಸ್ಥೆಗಳಿಂದಾಗಿ, ಪೊಲೀಸರ ಮಧ್ಯಪ್ರವೇಶವಿಲ್ಲದೆ ಎಡಪಂಗಡಗಳನ್ನು ಸೋಲಿಸಿದುವು. 1922 ಅಕ್ಟೋಬರಿನಲ್ಲಿ ರೋಮ್‍ನಗರದ ಸುತ್ತಲೂ ಬೀಡುಬಿಟ್ಟಾಗ ಅಲ್ಲಿನ ದೊರೆ ವಿಕ್ಟರ್ ಇಮಾನ್ಯುಯಲ್ ಈ ಫ್ಯಾಸಿಸ್ಟ್ ನಾಯಕನಿಗೆ ತನ್ನ ಸರ್ಕಾರದ ವ್ಯವಸ್ಥೆಯನ್ನು ಒಪ್ಪಿಸಲು ಸಮ್ಮತಿಸಿದ್ದ. ಆಗಿನ ಡೆಪ್ಯುಟಿಗಳ ಸಭೆಯಲ್ಲಿ ಆತನಿಗೆ 35 ಮಂದಿ ಫ್ಯಾಸಿಸ್ಟರ ಹಾಗೂ 10 ಮಂದಿ ರಾಷ್ಟ್ರೀಯತಾವಾದಿಗಳ ಬೆಂಬಲ ಮಾತ್ರ ದೊರಕಿತು.