ಪುಟ:Mysore-University-Encyclopaedia-Vol-2-Part-2.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಟಾಲಿಯನ್ ಭಾಷೆ - ಇಟಾಲಿಯನ್ ಸಂಗೀತ ೩೨೧

ಇಟಾಲಿಯನ್ ಭಾಷೆ:ಇಟಲಿ ದೇಶದ ಶಿಷ್ಟ ಭಾಷೆ ಸ್ವಿಟ್ಜರ್‍ಲೆಂಡ್ ಅಧಿಕೃತವಾಗಿ ಮನ್ನಣೆ ನೀಡಿರುವ ನಾಲ್ಕು ಭಾಷೆಗಳಲ್ಲಿ ಇದೂ ಒಂದು. ಅನೇಕ ಮಂದಿ ಇಟ್ಯಾಲಿಯನ್ನರು ಸ್ಥಳೀಯ ಉಪಭಾಷೆಗಳನ್ನು ಬಳಸುವುದರಿಂದಲೂ ಈ ಅಧಿಕೃತ ಭಾಷೆಯ ಮೇಲೆ ಸಂಪೂರ್ಣ ಪ್ರಭುತ್ವವನ್ನು ಹೊಂದಿಲ್ಲದೆ ಇರುವುದರಿಂದಲೂ ಇಟ್ಯಾಲಿಯನ್ ಭಾಷೆಯನ್ನು ಬಳಸುವವರ ಸಂಖ್ಯೆ ಎಷ್ಟೆಂಬುದನ್ನು ಅಂದಾಜುಮಾಡುವುದು ಕಷ್ಟ. ಅಲ್ಲದೆ, ಇಟಲಿಯಿಂದ ಉತ್ತರ ಮತ್ತು ದಕ್ಷಿಣ ಅಮೆರಿಕ ದೇಶಗಳಿಗೆ ವಲಸೆ ಹೋಗಿರುವ ವ್ಯಕ್ತಿಗಳು ಇಟ್ಯಾಲಿಯನ್ ಭಾಷೆಯನ್ನು ಬಳಸುತ್ತಿದ್ದಾರೆ. ಪೂರ್ವ ಮೆಡಿಟರೇನಿಯನ್ ವಲಯದಲ್ಲೂ ಈ ಮೊದಲು ಇಟಲಿಯ ವಸಾಹತುಗಳಾಗಿದ್ದ ಆಫ್ರಿಕ ದೇಶದ ಭಾಗಗಳಲ್ಲೂ ಸಂಪರ್ಕ ಮಾಧ್ಯಮವೆಂಬಂತೆ ಇಟ್ಯಾಲಿಯನ್ ಭಾಷೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಇತರ ರೊಮಾನ್ಸ್ ಭಾಷೆಗಳಂತೆ, ಇಟ್ಯಾಲಿಯನ್ ಭಾಷೆ ಪ್ರಾಚೀನ ರೋಮನ್ ಗಣರಾಜ್ಯ ಮತ್ತು ಮುಂದಿನ ಸಾಮ್ರಾಜ್ಯದಲ್ಲಿ ಬಳಕೆಯಲ್ಲಿದ್ದ ಲ್ಯಾಟಿನ್ ಭಾಷೆಯ ದಿನನಿತ್ಯದ ಆಡುಮಾತಿನಿಂದ ರೂಪುಗೊಂಡದ್ದು. ಆಧುನಿಕ ಸಾಹಿತ್ಯಕ ಇಟ್ಯಾಲಿಯನ್ ಭಾಷೆಗೆ ಮೂಲಾಧಾರವಾಗಿರುವ 14ನೆಯ ಶತಮಾನದ ಟಸ್ಕನ್ ಭಾಷೆಗೂ 4ನೆಯ ಶತಮಾನದ ಲ್ಯಾಟಿನ್ ಭಾಷೆಗೂ ಅತ್ಯಂತ ನಿಕಟವಾದ ಸಂಬಂಧವಿತ್ತು. ಮಧ್ಯಯುಗದ ಅನಂತರ ಈ ಭಾಷೆಯ ರಚನೆಯ ಸ್ವರೂಪದಲ್ಲಿ ಯಾವ ಹೆಚ್ಚಿನ ಬದಲಾವಣೆಯೂ ಆಗಿಲ್ಲ. ಶಿಷ್ಟ ಇಟ್ಯಾಲಿಯನ್ ಭಾಷೆಯಲ್ಲಿ ಏಳು ಸ್ವರಧ್ವನಿಮಾಗಳೂ 19 ವ್ಯಂಜನಗಳೂ ಇವೆ. ಕಾಗುಣಿತ ಅದರ ಧ್ವನಿಮಾರಚನೆಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ. ಲ್ಯಾಟಿನ್‍ನಲ್ಲಿರುವಂತೆಯೇ ಇಟ್ಯಾಲಿಯನ್ ಭಾಷೆಯಲ್ಲೂ ಎರಡು ಲಿಂಗಗಳು, ಎರಡು ವಚನಗಳು, ಮೂರು ವಿಭಕ್ತಿಗಳು (ಸರ್ವನಾಮಗಳಲ್ಲಿ ಮಾತ್ರ) ಮತ್ತು ಎಂಟು ಕಾಲಗಳು ಕಂಡುಬರುತ್ತವೆ. ಉದಾ : ಮೊಂಡೊ-ಪ್ರಪಂಚ, ಮೊಂಡಿ-ಪ್ರಪಂಚಗಳು (ಪುಲ್ಲಿಂಗ). ಪೋರ್ತ-ಬಾಗಿಲು, ಪೋರ್ತೆ-ಬಾಗಿಲುಗಳು (ಸ್ತ್ರೀಲಿಂಗ), ಎಗ್ಲಿ-ಅವನು, ಗ್ಲಿ-ಅವನಿಗೆ, ಲೊ-ಅವನನ್ನು, ವೆದೆರೆ-ನೋಡಲು, ವೆದೊ-ನಾನು ನೋಡುತ್ತೇನೆ. ವೆದವೂ-ನಾನು ನೋಡುತ್ತಿದ್ದೇ-ಇತ್ಯಾದಿ. ಇಟ್ಯಾಲಿಯನ್ ಭಾಷೆಯ ವಾಕ್ಯರಚನೆಯೂ ರುಮೇನಿಯನ್ ಅಥವಾ ಸ್ಪ್ಯಾನಿಷ್‍ನಂಥ ಸಂಪ್ರದಾಯನಿಷ್ಠ ರೋಮಾನ್ಸ್ ಭಾಷೆಗಳಲ್ಲಿರುವಂತೆಯೇ ಇದೆ. ಕ್ರಿಯಾಪದದ ಧಾತುರೂಪದೊಡನೆ ಒಂದು ಅಥವಾ ಎರಡು ಸರ್ವನಾಮ ಶಬ್ದಗಳನ್ನು (ಸಂಯುಕ್ತವಾಗಿ) ಬಳಸಬಹುದು. ಉದಾ:ಲೊ ವೆದೊ-ನಾನು ಅವನನ್ನು ನೋಡುತ್ತೇನೆ. ಮೇ ಲೊ ದ-ಅವನು ಅದನ್ನು ನನಗೆ ಕೊಡುತ್ತಾನೆ. ವಾಕ್ಯರಚನೆಯ ತಿರುಳು ಕ್ರಿಯಾಪದ. ಉದಾ:ವೆದೊ-ನಾನು ನೋಡುತ್ತೇನೆ. ಕರ್ತೃಪದ ಗೌಣ ಅಂಶವಾಗಿದ್ದು ಕಾರ್ಯನಿರತನಾಗುವ ವ್ಯಕ್ತಿತ್ವ ಅಸ್ತಿತ್ವವನ್ನು ವಿವರಿಸುತ್ತದೆ ಅಥವಾ ಒತ್ತಿ ಹೇಳುತ್ತದೆ. ಉದಾ:ಲೊ ವೆದೊ-ನಾನು ನೋಡುತ್ತೇನೆ.

ಪ್ರಾಚೀನ ಇಟ್ಯಾಲಿಯನ್ ಭಾಷೆಯಲ್ಲಿನ ಶಬ್ದಕೋಶ ಬಹುವಾಗಿ ಲ್ಯಾಟಿನ್ ಭಾಷೆಯಿಂದಲೇ ನೇರವಾಗಿ ನಿಷ್ಪನ್ನವಾಗಿದೆ. ಉದಾ:ಹೋಮೊ ಎಂಬುದರಿಂದ ಉಒಮೊ (ಮನುಷ್ಯ), ಆರಮ್ ಎಂಬುವುದರಿಂದ ಓರೋ(ಚಿನ್ನ). ಪ್ರಾವೆನ್ಸಾಲ್ ಅಥವಾ ಫ್ರೆಂಚ್ ಭಾಷೆಯಿಂದ ಅನೇಕ ಶಬ್ದಗಳನ್ನು ಸ್ವೀಕರಿಸಲಾಗಿದೆ. ಉದಾ: ಪ್ರಾವೆನ್ಸಾಲ್ ಭಾಷೆಯ ವೆಂಜಾರ್ ಎಂಬುದರಿಂದ ವೆಂಜಿಯೇರ್ (ಸೇಡು ತೀರಿಸಿಕೊಳ್ಳುವುದು); ಅಥವಾ ಪ್ರಾಚೀನ ಫ್ರೆಂಚ್ ಭಾಷೆಯ ವಿಯೇಜ್ ಎಂಬುದರಿಂದ ವಿಯಾಜ್ಜಿಯೋ (ಪ್ರಯಾಣ). ಹೊಸಹುಟ್ಟಿನ ಕಾಲದಲ್ಲಿ ಲ್ಯಾಟಿನ್ ಭಾಷೆಯಿಂದಲೇ ನೇರವಾಗಿ ಶಬ್ದಗಳನ್ನು ಸ್ವೀಕರಿಸುವ ಪ್ರವೃತ್ತಿ ಹೆಚ್ಚಾಯಿತು. ಉದಾ: ಎತಿಯಾಮ್ (ಕೂಡ) ಎಂಬುದರಿಂದ ಎಜ಼ಿಯಾಂದಿಯೋ (ಕೂಡ). ಈವನ್ (ಕೂಡ), ಮತ್ತು ದ್ಯೂಸ್-(ಇಂದ) ದೇವರು. ಬ್ಯಾರೋಕ್ ಅವಧಿಯಲ್ಲಿ ಸ್ಪ್ಯಾನಿಷ್ ಸ್ವೀಕರಣ ಕಾಣಬಂತು. ಉದಾ: ಅಟ್ರಿವಿಮಿಯೆಂಟೊ ಎಂಬುದರಿಂದ ಅಟ್ರೆವಿಮೆಂಟೋ(ಧೈರ್ಯ). ಆಧುನಿಕ ಯುರೋಪಿಯನ್ ಭಾಷೆಗಳಿಂದ ಇಟ್ಯಾಲಿಯನ್ ಭಾಷೆ ಶಬ್ದಗಳನ್ನು ಸ್ವೀಕರಿಸುತ್ತಿದೆ ಎಂಬುದಕ್ಕೆ ಈ ಕೆಳಕಂಡ ಉದಾಹರಣೆಗಳೇ ಸಾಕು. ಆಧುನಿಕ ಇಟ್ಯಾಲಿಯನ್ನಿನ ನೆಯ್‍ಲಾನ್ (ಇಂಗ್ಲಿಷ್ ನೈಲಾನ್). ಸಬ್‍ಕಾನ್ಸಿಯೋ-ಸಬ್‍ಕಾನ್ಷಸ್-(ಫ್ರೆಂಚಿನ ಸಬ್‍ಕಾನ್ಸಿಯೆಂಟ್) ಮತ್ತು ಬೋಲ್‍ಸೆವಿಕೋ (ರಷ್ಯನ್ ಭಾಷೆಯ ಬೋಲ್‍ಷೆವಿಕ್) (ಆರ್.ಎ.ಎಚ್.)

ಇಟಾಲಿಯನ್ ಸಂಗೀತ: ಇದು ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡುದು 13ನೆಯ ಶತಮಾನದ ಸುಮಾರಿನಲ್ಲಿ. ಅಲ್ಲಿಯವರೆಗೆ ಗ್ರೀಕ್ ಮತ್ತು ರೋಮನ್ ಸಂಗೀತಗಳ ಪ್ರಾಚೀನ ಛಾಯೆಯಲ್ಲಿಯೇ ಅಜ್ಞಾತವಾಸವನ್ನು ಅನುಭವಿಸುತ್ತಿತ್ತು. ಈ ಸಂಗೀತದ ಪ್ರಾಚೀನತೆಯ ಹಾಡುಗಳು ಫ್ಲಾರೆನ್ಸಿನ ಮ್ಯಾಗ್ಲಿಯಾ ಬೆಕಿಯಾನ ಪುಸ್ತಕಭಂಡಾರದ ಹಸ್ತಪ್ರತಿಯಲ್ಲಿ ದೊರೆಯುತ್ತವೆ. ಇವು 13-14ನೆಯ ಶತಮಾನದಲ್ಲಿ ಕ್ರೈಸ್ತ ಸನ್ಯಾಸಿಗಳು ಪಶ್ಚಾತ್ತಾಪಪೂರ್ವಕವಾಗಿ ಪ್ರಾಯಶ್ಚಿತ್ತ ರೂಪದಲ್ಲಿ ಹಾಡುತ್ತಿದ್ದ ಲಾಉಡಿಸ್ಪಿರಿಚ್ಯು ಅಲಿ ಎಂಬ ಸ್ತುತಿಗೀತೆಗಳು. ಇವುಗಳ ರಚನಕಾರರಲ್ಲಿ ಜಾಕೊಪೊ ಡ ಟೋಡಿ (ಸು.1230-1306) ಪ್ರಮುಖನಾದವ. ಈ ಬಗೆಯ ಹಾಡುಗಳು ಜರ್ಮನಿಗೂ ಹರಡಿ ಅನಂತರ ಯುರೋಪಿನಲ್ಲೆಲ್ಲ ಪಸರಿಸಿ ನಿಂತವು. ದೇವಭಾಷೆಯಲ್ಲಿ ಅಲ್ಲದೇ ದೇಶೀಭಾಷೆಯಲ್ಲಿ ಸಹ ಮತಧರ್ಮದ ಕರ್ಮಾಚರಣೆಯ ಹಾಡುಗಳನ್ನು ರೂಪಿಸುವ ದೇಶೀಪ್ರವೃತ್ತಿಗೆ ಯುರೋಪಿನಲ್ಲಿ ಇದೇ ನಾಂದಿಯಾಯಿತು. ಸುಮಾರು ಇದೇ ಸಮಯದಲ್ಲಿ ಕರ್ಣಾಟಕದಲ್ಲಿ ಶಿವಶರಣರೂ ಹರಿದಾಸರೂ ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರನೂ, ತಮಿಳುನಾಡಿನಲ್ಲಿ ಪ್ರಾಚೀನ ಆಳ್ವಾರರುಗಳೂ, ವಜ್ರಭಾಷೆಯಲ್ಲಿ ತುಲಸೀದಾಸರು ಸೂರದಾಸರೂ ಭಾರತೀಯ ಸಂಗೀತದಲ್ಲಿ ದೇಶಿಪದ್ಧತಿಯನ್ನು ಪ್ರಾರಂಭಿಸಿದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇಟಲಿಯ ಲೌಕಿಕ ಸಂಗಿತದ ಉಗಮ 14ನೆಯ ಶತಮಾನದಲ್ಲಿ ಮಾಡ್ರಿಗಾಲೆ ಎಂಬ ಪುಟ್ಟ ಪ್ರೇಮಭಾವಗೀತೆಯಲ್ಲಿ ಕಾಣಬರುತ್ತದೆ. ಸಂವಾದರೂಪದ ಈ ಹಾಡು ಅನೇಕ ಚರಣಗಳಲ್ಲಿ ಇರುತ್ತಿದ್ದು, ಏಕಧಾತುಕವಾದ ಮಟ್ಟಿನಲ್ಲಿ , ಬೇಟೆಯ ಶೈಲಿಯಲ್ಲಿ, ವಾದ್ಯಸಂಗೀತದ ಪಕ್ಕವಾದ್ಯದೊಡನೆ ಇಬ್ಬರು ಸಂಭಾಷಣೆಯಲ್ಲಿ ಹಾಡುತ್ತಿದ್ದ ಕಾಚ್ಚಿಯ, ಪ್ರತಿ ಚರಣವೂ ಪುನಃ ಪಲ್ಲವಿಯ ಹಾಡಿಕೆಯಿಂದ ಮುಗಿಯುತ್ತಿದ್ದ, ನೃತ್ಯ ಛಂದಸ್ಸುಗಳಲ್ಲಿ ಹಾಡಲಾಗುತ್ತಿದ್ದ ಬಲ್ಲಾಟ ಹಾಗೂ ಕಡೆಯಲ್ಲಿ ಪುನರುಕ್ತವಾಗುತ್ತಿದ್ದ ರಿಟೊರ್ನೆಲೂ ಎಂಬ ವಾದ್ಯಸಂಗೀತದ ಅಂಶ-ಇವನ್ನು ಒಳಗೊಳ್ಳುತ್ತಿತ್ತು. ಈ ಶತಮಾನದಲ್ಲಿ ನೃತ್ಯಗೀತೆಗಳೂ ಸ್ವಲ್ಪವಾಗಿ ಚರ್ಚ್ ಸಂಗೀತವೂ ಉಪಲಬ್ದವಿದೆ. ಫ್ಲಾರೆನ್ಸಿನ ಸ್ಕ್ವೇಸಿಯಾ ಲೂಪಿಯಂಥ ಪ್ರಸಿದ್ಧ ಸಂಗೀತಗಾರರು ಈ ಕಾಲದಲ್ಲಿ ಕಂಡುಬರುತ್ತಾರೆ. ಆದರೆ ಮುಖ್ಯ ವಾಗ್ಗೇಯಕಾರರೆಲ್ಲರೂ ಡ್ಯೂಫೆ ಮತ್ತು ಜೋಸ್ಕ್ವಿನ್ ಡೆಸ್ ಪ್ರೆಸ್‍ನಂತೆ, ಔತ್ತರೇಯ ಯುರೋಪಿಯನ್ನರೇ.

ಹದಿನಾರನೇಯ ಶತಮಾನ: 16ನೆಯ ಶತಮಾನದ ವೇಳೆಗೆ ಹಾಲೆಂಡ್, ಡೆನ್ಮಾರ್ಕ್‍ಗಳಿಂದ ಬಹುಮಂದಿ ವಾಗ್ಗೇಯಕಾರರು ಇಟಲಿಗೆ ಬಂದು ನೆಲಸಿದರು. ಆದರೆ ಈ ವೇಳೆಗೆ ಫ್ರೊಟೋಲ ಎಂಬ ಸರಳವಾದ ಅನೇಕ ಚರಣಗಳುಳ್ಳ, ಅನೇಕರು ವಾದ್ಯದೊಡನೆ ಕೂಡಿ ಹಾಡುವ, ಒಬ್ಬರು ಅಥವಾ ನಾಲ್ವರು ಗಾಯಕರಿರುವ ಪ್ರಬಂಧಜಾತಿಯನ್ನು ಇಟಾಲಿಯನ್ನರೇ ನಿರ್ಮಿಸಿಕೊಂಡಿದ್ದರು. ಇದು ಅತಿಯಾಗಿ ಪ್ರಚಾರವಾಗಿ ಹಳಸಲು ಪ್ರಾರಂಭವಾದುದರಿಂದ ಇದಕ್ಕೆ ಉತ್ತರವಾಗಿ ಮ್ಯಾಡ್ರಿಗಲ್‍ನ ಹೊಸ ರೂಪಾಂತರವೊಂದನ್ನು (14ನೆಯ ಶತಮಾನದ ಮ್ಯಾಡ್ರಿಗಾಲೆ ಅಲ್ಲ) ಸೃಷ್ಟಿಸಿಕೊಳ್ಳಲಾಯಿತು. ಇದರಲ್ಲಿ ಸಮಷ್ಟಿರೂಪವಿದ್ದು ನುಡಿಗಳನ್ನು ಬೇರ್ಪಡಿಸಿರಲಿಲ್ಲ. ಮೆನೆಂಜಿಯೋ, ಗುಸುವಾಲ್ಡೋ ಮತ್ತು ಮಾಂಟಿವರ್ಡಿಗಳು 1530ರ ಸುಮಾರಿನಲ್ಲಿ ಅತಿಸರಳವಾಗಿದ್ದ ಇದನ್ನು ಫ್ರೌಢ ಸುಂದರ ಪ್ರಬಂಧವನ್ನಾಗಿಸಿದರು. 16ನೆಯ ಶತಮಾನ ಇನ್ನೂ ಹಲವು ವಿಧಗಳಲ್ಲಿ ಹೊಸತನ್ನು ಮೂಡಿಸಿತು. ಸುಗಮಗೇಯ ರೀತಿಯಾಗಿದ್ದ ಬ್ಯಾಲೆಟ್ಟೊ ಮುಂತಾದ ಹಾಡುಗಳು ಹುಟ್ಟಿ ಗಸ್ಟೋಲ್ಡಿ ಮುಂತಾದ ವಾಗ್ಗೇಯಕಾರರಿಂದ ಪುಷ್ಪವಾಗಿ ಬೆಳೆದವು. ಕೌನ್ಸಿಲ್ ಆಫ್ ಟ್ರಿಂಟ್‍ನ (1562) ಸಲಹೆಯಂತೆ ಚರ್ಚ್ ಸಂಗೀತ ಸರಳವೂ ಸಾಮಾನ್ಯರಿಗೆ ಹೆಚ್ಚು ಸಾಧ್ಯವೂ ಆಯಿತು. ಈ ನಿಟ್ಟಿನಲ್ಲಿ ಪ್ಯಾಲೆಸ್ಟ್ರಿನ್ ಸಲ್ಲಿಸಿದ ಸೇವೆ ಸ್ಮರಣೀಯವಾದುದು. ಚಿಕ್ಕವರೂ ಧಾರ್ಮಿಕಗೋಷ್ಠಿಗಳಲ್ಲಿ ಹಾಡಬಹುದಾದ ಸರಳಧಾರ್ಮಿಕ ಗೋಷ್ಠಗಾನವನ್ನು ಈ ಕಾಲದಲ್ಲಿ ರಚಿಸಿ, ಇಂಥ ಪ್ರಥಮಗೋಷ್ಠಿಯನ್ನು ಎಮಿಲಿಯೊ ಡಿ ಕೆವೆಲಿಯರಿ ರೆಪ್ರಜೆಂಟೀಜ಼ಿಯೋನ್ ಡಿ ಅನಿಮ ಎ ಡಿಕಾರ್ಪೊ ಎಂಬ ರೂಪಕವನ್ನು ರಚಿಸಿ 1660ರಲ್ಲಿ ಹಾಡಿದ.

ಆಪೆರದ ಹುಟ್ಟು: ಪಾಶ್ಚಾತ್ಯ ಸಂಗೀತದಲ್ಲಿ ಇಂದು ಆಪೆರ ಎಂಬ ಪ್ರಸಿದ್ಧ ಗೇಯ ನಾಟಕ ಅಥವಾ ಗೇಯ ರೂಪಕದ ರೀತಿ ಇಟಲಿಯ ಫ್ಲಾರೆನ್ಸಿನಲ್ಲಿ, ಅಲ್ಲಿಯ ಬಾರ್ಡಿ ಮತ್ತು ಕಾರ್ಸಿ ಎಂಬ ಶ್ರೀಮಂತ ಪಾಳೆಯಗಾರರ ಆಶ್ರಯದಲ್ಲಿ ಹುಟ್ಟಿತು. ಈ ನಿಟ್ಟಿನಲ್ಲಿ ಮೊದಲು ಶ್ರಮಿಸಿದವರು ಗೆಲಿಲಿ, ಕಾಚ್ಚಿನಿ, ಕೆವಲಿಯರಿ ಮತ್ತು ಪೆರಿ. ಇದೇ ಆಶ್ರಯದಾತರಲ್ಲಿ ಕವಿಯಾಗಿದ್ದ ರಿನುಚ್ಚಿನಿಯ ಯೂರಿಡಿಸ್ ಎಂಬ ನಾಟಕಕ್ಕೆ ಸಂಗೀತವನ್ನು ಪೆರಿ ಮತ್ತು ಕಾಚ್ಚಿನಿ ಅಳವಡಿಸಿದರು. ಪ್ರಾಚೀನ ಗ್ರೀಕ್‍ನಾಟಕಗಳ ಸಂಗೀತಕ್ರಮವನ್ನು ಪುನರುಜ್ಜೀವನಗೊಳಿಸಲು ಆಪೆರ ಯತ್ನಿಸಿತು. ಇದು ಪ್ರಾರಂಭವಾದುದು ಒಬ್ಬರೇ ಹಾಡುವ ಅಥವಾ ಏಕಕಂಠಪ್ರಧಾನವಾದ,ನಿಷ್ಕೃಷ್ಪಪದೋಚ್ಚಾರಣೆಯ, ಮ್ಯಾಡ್ರಿಗಲ್‍ನ ಹೊಸರೂಪವೊಂದರಲ್ಲಿ. ಪಕ್ಕವಾದ್ಯ ಅತ್ಯಂತ ಸರಳವೂ ಸುಲಭವೂ ಆಗಿದ್ದರಿಂದ ಗಾಯಕ ಛಂದೋಲಯ ಕಾಲಗಳಲ್ಲಿ ರಸಾಭಿವ್ಯಕ್ತಿಗೆ ಅನುಸಾರವಾಗಿ ಸ್ವಂತಮನೋಧರ್ಮಕ್ಕೆ ಅನುಗುಣವಾಗಿ ಹಾಡಬಹುದಾಗಿತ್ತು. ಇದು ಸ್ವತಂತ್ರವೂ ಸಂಕೀರ್ಣವೂ ಬಹು ಜನಪ್ರಿಯವೂ ಆದ ಪ್ರಬಂಧ ಪ್ರಕಾರವಾದುದು ಮಾಂಟೆವರ್ಡಿಯ ಪ್ರತಿಭೆಯಿಂದ; 1607ರಲ್ಲಿ ಮಾಂಟುವದ ರಾಜಾಸ್ಠಾನದಲ್ಲಿ ಆತ ರಚಿಸಿದ ಫೆವೂಲಾ ಡಿ ಓರ್ಫಿಯೋ ಆಪೆರ ಚಳವಳಿಗೆ ನಾಂದಿಯಾಯಿತು. ಪ್ಯಾಲೆಸ್ಟ್ರಿನನಂತೆ ಆತ ಚರ್ಚ್‍ಸಂಗೀತವನ್ನೂ ಮ್ಯಾಡ್ರಿಗಲ್‍ಗಳನ್ನೂ ಗಮನಾರ್ಹವಾಗಿ ರಚಿಸಿದ್ದಾನೆ. (ವಿವರಗಳಿಗೆ-ನೋಡಿ-ಗೇಯರೂಪಕ)

ವಾದ್ಯಸಂಗೀತ, ಸಂಗೀತ ಲಿಪಿ: ವೆನಿಸ್ 16ನೆಯ ಶತಮಾನದಲ್ಲಿ ಆಪೆರಕ್ಕೆ ಪ್ರಸಿದ್ಧಿ ಪಡೆದಂತೆಯೇ ವಾದ್ಯಸಂಗೀತಕ್ಕೂ ಸಂಗೀತಲಿಪಿಗೂ ಕೇಂದ್ರವಾಯಿತು. ಬಹುಸ್ವರ ಶ್ರೇಣಿಯನ್ನು ಒಮ್ಮೆಗೇ ಹಾಡುವ, ವಾದನರಹಿತವಾದ, ಬೈಬಲ್‍ನಿಂದ ಉದ್ಧರಿಸಿಕೊಂಡ ಮಾತುಗಳಿಗೆ ಧಾತುರಚನೆ ಮಾಡಿದ ಮೋಟೆಟ್ ಎಂಬ ಪ್ರಬಂಧಜಾತಿಯ ಪ್ಲೆಮಿಷ್ ಪ್ರಭೇದಗಳನ್ನು ಆಂಡ್ರಿಯಾಗೇರಿಯಲ್ಲಿ ಮತ್ತು ಕ್ಲಾಡಿಯ ಮೇರುಲೋಗಳು ಸ್ವತಂತ್ರವಾದ ವಾದ್ಯಪ್ರಬಂಧಗಳನ್ನಾಗಿ ಪರಿವರ್ತಿಸಿದರು. ಇವನ್ನು ಜೋವಾನಿ ಗೇಬ್ರಿಯಲಿ ಆರ್ಗನ್ ವಾದ್ಯದಲ್ಲಿ ವಿಶೇಷವಾಗಿ ಸಂವರ್ಧಿಸಿದ. ನೃತ್ಯಗೀತೆಗಳನ್ನೂ ಲಘುಗೀತೆಗಳನ್ನೂ ಈ ಕಾಲದಲ್ಲಿ ವಾದ್ಯಗಳಿಗೆ ಅಳವಡಿಸಲಾಯಿತು. ಟಾಕಟಾ ಎಂಬ ಒಂದು ಹೊಸ ವಾದನ ತಂತ್ರವನ್ನು ಪಾಂಡಿತ್ಯ ಪ್ರದರ್ಶನ ಹಾಗೂ ವಾದ್ಯದ ಸಕಲ ಸಾಧ್ಯತೆಗಳ ಸಾಕ್ಷಾತ್ಕಾರಗಳಿಂದಲೇ