ಪುಟ:Mysore-University-Encyclopaedia-Vol-2-Part-4.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಉಳುಮೆಯ ಸಾಧನಗಳು

೭೬೮

ನೇಗಿಲು:ಇದು ದೇಶಾದ್ಯಂತ ಬಳಕೆಯಲ್ಲಿರುವ ಅತಿಮುಖ್ಯ ಸಾಗುವಳಿ ಸಾಧನ. ದೇಶೀ ನೇಗಿಲುಗಳು ಎಲ್ಲ ಭಾಗಗಳಲ್ಲೂ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತವೆ. ಭೂಲಕ್ಷಣ ಮತ್ತು ಆ ಭಾಗದಲ್ಲಿ ದೊರೆಯುವ ಎತ್ತುಗಳ ಸಾಮರ್ಥ್ಯಗಳಿಗೆ ತಕ್ಕಂತೆ ನೇಗಿಲುಗಳ ಗಾತ್ರ ವ್ಯತ್ಯಾಸವಾಗುತ್ತದೆ. ಎರೆ ಭೂಮಿ ಬಹಳ ಜಿಗುಟಾದ್ದರಿಂದ ಆ ಪ್ರದೇಶಗಳಲ್ಲಿ ನೇಗಿಲುಗಳು ದೊಡ್ಡದಾಗಿರುತ್ತವೆ.

ನೇಗಿಲನ್ನು ಮನುಷ್ಯ ಯಾವಾಗ ಕಂಡುಹಿಡಿದ ಎನ್ನುವ ವಿಷಯದಲ್ಲಿ ದಾಖಲೆ ಸಿಕ್ಕುವುದು ಕಷ್ಟ. ಪ್ರಪಂಚದ ಎಲ್ಲ ಭಾಗಗಳಲ್ಲೂ 18ನೆಯ ಶತಮಾನದ ಮಧ್ಯಭಾಗದವರೆಗೂ ಮರದ ನೇಗಿಲೇ ಬಳಕೆಯಲ್ಲಿತ್ತು. ಕಬ್ಬಿಣ್ಣದ ಗುಳ ಸೇರಿಸಿದ ನೇಗಿಲುಗಳ ಉಪಯೋಗ ಯುರೋಪಿನ ಕೆಲಭಾಗಗಳಲ್ಲಿ ಆಮೇಲೆ ಬಳಕೆಗೆ ಬಂತು. 18ನೆಯ ಶತಮಾನದ ಉತ್ತರಾರ್ಧದಲ್ಲಿ ಮೊದಲ ಬಾರಿಗೆ ಕಬ್ಬಿಣದ ನೇಗಿಲುಗಳು ಇಂಗ್ಲೆಂಡಿನಲ್ಲಿ ತಯಾರಾದವು. ಭಾರತದಲ್ಲಿ ಇವುಗಳ ಬಳಕೆ ಸುಮಾರು 1920ರ ಸಮಯದಲ್ಲಿ ಆಯಿತಾದರೂ ರೈತರಿಗೆ ಇವು ಅಷ್ಟು ಪ್ರಿಯವಾಗಿಲ್ಲ. ಕಾರಣ ಅದರ ಹೆಚ್ಚಿನ ಬೆಲೆ. ಹಳ್ಳಿಯಲ್ಲೇ ತಯಾರಾದ ನಾಡು ನೇಗಿಲೇ ಅವರಿಗೆ ಕೊಳ್ಳಲು ಸುಲಭ.

ಮರದ ನೇಗಿಲು:ನೇಗಿಲ ಬುಡ ಅಥವಾ ದಿಂಡು ಮಾಡುವುದಕ್ಕೆ ಬಾಗಿದ ಜಾಲಿಮರದ ತುಂಡನ್ನು ಉಪಯೋಗಿಸುವುದು ಸಾಮಾನ್ಯ ತುಂಡಿನ ಎರಡು ಬಾಹುಗಳ ಮಧ್ಯ ಕೋನ 135° ಇರುತ್ತದೆ. ಈ ಬುಡಕ್ಕೆ ಒಂದು ಮಟ್ಟಗೋಲು ಅಥವಾ ಮೇಳಿ ಸೇರಿಸುತ್ತಾರೆ. ಮುಂದಕ್ಕೆ ಸಾಗಲು ಅನುಕೂಲವಾಗುವಂತೆ ಚಾಲಕದಂಡ ಅಥವಾ ಈಸು (ಷ್ಯಾಫ್ಟ್ ಪೋಲ್) ಸೇರಿಸಲ್ಪಟ್ಟಿರುತ್ತದೆ. ಬುಡದ ಕೆಳಬಾಹುವನ್ನು ಬೆಣೆಯಾಕಾರಕ್ಕೆ ಕೆತ್ತಿ ಅದರ ಕೊನೆಗೆ ಚಪ್ಪಟೆಯಾದ ಕಬ್ಬಿಣದ ಪಟ್ಟಿ ಅಥವಾ ಗುಳವನ್ನು ಬಂಧಿಸಿರುತ್ತಾರೆ.ಇದೇ ನೆಲವನ್ನು ಚುಚ್ಚಿ ಸಡಿಲಪಡಿಸುವ ಸಾಧನ. ಕೆಸರುಗದ್ದೆಗಳಲ್ಲಿ ಹಗುರವಾದ ನೇಗಿಲನ್ನು ಬಳಸುತ್ತಾರೆ. ಹೊಲ ಮತ್ತು ತೋಟದ ಉಳುಮೆಗೆ ಸ್ವಲ್ಪ ಭಾರವಾದ ನೇಗಿಲು ಹೆಚ್ಚು ಪ್ರಯೋಜನಕಾರಿ.

ಭೂಮಿಯನ್ನು ನೇಗಿಲಿನಿಂದ ಉತ್ತಾಗ, ಗುಳ ಮಣ್ಣಿನಲ್ಲಿ ಮುಂದೆ ಸಾಗಿದಂತೆ ನೇಗಿಲ ಸಾಲು ಏರ್ಪಡುತ್ತದೆ. ಭೂಮಿ ಸೀಳು ಬಿಟ್ಟು ಸೀಳಿನ ಎರಡು ಕಡೆಯೂ ಮಣ್ಣು ಒತ್ತಾಗುತ್ತದೆ. ಎರಡು ಸಾಲುಗಳ ಮಧ್ಯೆ ಎರುವ ನೆಲ ಉಳುಮೆಯಾದಾಗ ಹಾಗೆ ಉಳಿಯುತ್ತದೆ. ನಾಲ್ಕಾರು ಬಾರಿ ಉತ್ತಾಗಲೇ ಭೂಮಿ ಎಲ್ಲೆಡೆ ಸಡಿಲವಾಗುವುದು ಸಾಧ್ಯ. ಉಳುಮೆಯಿಂದ 10-12 ಸೆಂ.ಮೀ. ಅಂಗುಲ ಆಳದ ಮಣ್ಣು ಸಡಿಲವಾಗುತ್ತದೆ. ಸಾಲಿನ ಆಳ ಮತ್ತು ಅಗಲ ಸಾಮಾನ್ಯವಾಗಿ ಒಂದು ನೇಗಿಲಿಗೆ ಒಂದೇ ರೀತಿ ಇರುತ್ತದೆ. ನೇಗಿಲ ಬುಡವನ್ನು ಸ್ವಲ್ಪ ಹಿಂದಕ್ಕೆ ಸರಿಸಿ, ನೊಗ ಮತ್ತು ದಿಂಡುಗಳನ್ನು ಸೇರಿಸುವ ಈಸುಮರದ ಉದ್ದವನ್ನು ಹೆಚ್ಚಿಸಿದಾಗ ಸಾಲಿನ ಆಳ ಸ್ವಲ್ಪಮಟ್ಟಿಗೆ ಹೆಚ್ಚಾಗುತ್ತದೆ.ಈಸುಮರವನ್ನು ಕಿರಿದು ಮಾಡಿದಾಗ ಸಾಲಿನ ಆಳ ಕಡಿಮೆಯಾಗುತ್ತದೆ.

ಭಾರತದ ಬಹುಮಂದಿ ರೈತರ ಹತ್ತಿರ ಇರುವ ಏಕೈಕ ಸಾಧನ ನೇಗಿಲು. ಉತ್ತ ಭೂಮಿಯನ್ನು ಹಸನು ಮಾಡುವುದು, ಎರಚಿದ ಗೊಬ್ಬರವನ್ನು ಭೂಮಿಯಲ್ಲಿ ಸೇರಿಸುವುದು,ಮಧ್ಯಂತರ ಸಾಗುವಳಿ, ಪೈರು ಒತ್ತಾಗಿದ್ದಾಗ ವಿರಳ ಮಾಡುವುದಕ್ಕೆ, ಕಳೆಕೀಳುವಿಕೆ ಮತ್ತಿತರ ಅನೇಕ ಕಾರ್ಯಗಳಿಗೆ ನೇಗಿಲನ್ನು ಬಳಸುವುದು ಸಾಮಾನ್ಯ. ನೇಗಿಲನ್ನು ವಿವಿಧ ರೀತಿಯ ಮಣ್ಣುಗಳ ಸಾಗುವಳಿಗೆ ಉಪಯೋಗಿಸಬಹುದು. ತೇವ ಸಾಕಷ್ಟಿರಬಹುದು, ಅಷ್ಟೆ ಮಳೆ ಬಂದು ಭೂಮಿಯಲ್ಲಿ ತೇವ ಆರುವುದಕ್ಕೆ ಮುಂಚೆ ಉಳುಮೆ ಮಾಡಿ ಮುಗಿಸುವುದು ಮಳೆ ಅನಿಶ್ಚಿತವಿರುವ ಪ್ರದೇಶಗಳಲ್ಲಿ ಅತಿಮುಖ್ಯ. ದೇಶೀ ನೇಗಿಲನ್ನು ಹಳ್ಳಿಯಲ್ಲೇ ಒದಗುವ ಸಾಧನಗಳಿಂದ ತಯಾರು ಮಾಡಬಹುದು. ವೆಚ್ಚ ತೀರ ಕಡಿಮೆ. ಕೆಟ್ಟು ಕೊತರೆ ಹಳ್ಳಿಯ ಬಡಗಿ ತತ್ ಕ್ಷಣ ಸರಿ ಮಾಡಬಲ್ಲ. ಅದನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಏನೂ ಕಷ್ಟದ ಕೆಲಸವಲ್ಲ. ಭಾರತದ ರೈತರಿಗಂತೂ ಇದು ಬಹಳ ಸುಲಭ ಸಾಧನೆ.

ಕಬ್ಬಿಣದ ನೇಗಿಲು:ಪಾಸ್ಚಾತ್ಯ ದೇಶಗಳಲ್ಲಿ ಕಬ್ಬಿಣದ ನೇಗಿಲು ಬಳಕೆಗೆ ಬಂದಿದ್ದು ಸು.18ನೆಯ ಶತಮಾನದ ಮಧ್ಯಭಾಗದಲ್ಲಿ. ಇದು ಸಮಕೋನ ತ್ರಿಕೋನಾಕೃತಿಯ ನಿಲವನ್ನು ಹೊಂದಿದೆ. ತಳ ಮತ್ತು ಪಕ್ಕಗಳ ಮಧ್ಯ ಸಮ ಕೋನಾಂತರವಿರುತ್ತದೆ. ಅವು ಮಣ್ಣನ್ನು ತ್ರಿಕೋನಾಕಾರದಲ್ಲಿ ಛೇಧಿಸುತ್ತವೆ. ಹೀಗೆ ಕತ್ತರಿಸಿದ ಮಣ್ಣು,ನೇಗಿಲ ಬೆಣೆಗೆ ಪಕ್ಕದಲ್ಲಿ ಸಜ್ಜಿಸಿರುವ, ಬಾಗಿ ತಿರುಚಿದ ಕಬ್ಬಿಣದ ಉಂಗುರದ ಕ್ರಿಯೆಯಿಂದ, ಅದಕ್ಕೆ ಎದುರಾಗಿ ಪಕ್ಕದಲ್ಲಿ ಬೀಳುತ್ತದೆ.

ಮರದ ನೇಗಿಲಿಗೂ ಕಬ್ಬಿಣದ ನೇಗಿಲಿಗೂ ಇರುವ ವ್ಯತ್ಯಾಸ ಹೀಗಿದೆ. ಕಬ್ಬಿಣದ ನೇಗಿಲನ್ನು ಬಳಸಿದಾಗ ಸಡಿಲವಾದ ಮಣ್ಣು ಒಂದೇ ಪಕ್ಕಕ್ಕೆ ಬೀಳುತ್ತದೆ. ಬಿಡಿಸಿದ ಮಣ್ಣಿನ ಭಾಗ ಆಯಾಕಾರದ್ದಾಗಿರುತ್ತದೆ. ಮರದ ನೇಗಿಲಿನಿಂದ ಬಿಡಿಸಿದ ಮಣ್ಣಿನ ಹೆಂಟೆ ತ್ರಿಕೋನಾಕಾರದ್ದು ಮತ್ತು ಅದು ಸಾಲಿನ ಎರಡು ಕಡೆಯೂ ಬೀಳುತ್ತದೆ. ಎರಡು ಸಾಲಿನ ಮಧ್ಯದ ಭಾಗ ಉಳುಮೆಯಾಗಿರುವುದಿಲ್ಲ. ಕಬ್ಬಿಣದ ನೇಗಿಲಿನಿಂದ ಆಯಾಕಾರದ ಮಣ್ಣಿನ ಹೆಂಟೆಗಳು ಬಿಡುಗಡೆಯಾಗಿ ಸಾಲಿನ ಮಧ್ಯೆ ಉಳುಮೆಯಾಗದ ಜಾಗ ಏನೂ ಉಳಿಯುವುದಿಲ್ಲ. ನೇಗಿಲಿನ ಮುಖ್ಯ ಭಾಗಗಳು, ಗುಳ ಮತ್ತು ಮಗುಚು ಹಲಗೆಗಳ ರಚನೆಯಲ್ಲಿ ಕೆಲಸಕ್ಕೆ ಅಗತ್ಯವಾದಂತೆ ವ್ಯತ್ಯಾಸ ಮಾಡಿಕೊಳ್ಳುವ ಸೌಲಭ್ಯವೂ ಉಂಟು.

ಅಲಗು ಕುಂಟೆ:ನೇಗಿಲಿಗೆ ಬದಲು ಮೊದಲ ಉಳುಮೆಗೆ, ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಇದನ್ನು (ಬ್ಲೇಡ್ ಹ್ಯಾರೊ) ಉಪಯೋಗಿಸುತ್ತಾರೆ. 15ಸೆಂ.ಮೀ. ಅಂಗುಲ ಗಾತ್ರದ ಮರದ ತುಂಡು ಇದರ ಮುಕ್ಯ ಅಂಗ. ಇದಕ್ಕೆ ಮುಟ್ಟುಗೋಲು,ಈಸುಮರ ಮತ್ತು ಅಲಗುಗಳನ್ನು ಸಜ್ಜಿಸಿರುತ್ತಾರೆ. ಅಲಗು 1ಮೀ. ಅಡಿ ಉದ್ದ, 7.5 ಸೆಂ.ಮೀ. ಅಂಗುಲ ಅಗಲ, 1.5.ಸೆಂ.ಮೀ. ಅಂಗುಲ ದಪ್ಪ ಇರುತ್ತದೆ. ಅಗತ್ಯಕ್ಕೆ ಅನುಕೂಲವಾಗುವಂತೆ ಈ ಕುಂಟೆಯ ಅಂಗಗಳನ್ನು ವ್ಯತ್ಯಾಸ ಮಾಡಬಹುದು. ನೇಗಿಲ ಗುಳ ಕತ್ತರಿಸಿದಂತೆ ಕುಂಟೆಯಿಂದ ಸಾಲು ಉಳಿಮೆಯಾಗುವುದಿಲ್ಲ.ಅದಕ್ಕೆ ಬದಲು, ಅಲಗು 3-4 ಅಂಗುಲ ಆಳದಲ್ಲಿ ಭೂಮಿಯಲ್ಲಿ ಹರಿದು ಮಣ್ಣು ಪೈರಿನ ಕೂಳೆಗಳಿದ್ದಲ್ಲಿ ಅವು ಹಾಗೆಯೇ ಮೇಲ್ಪದರದಲ್ಲೇ ಹೊದಿಕೆಯಂತೆ ಉಳಿಯುತ್ತವೆ.

ಜಂತು ಕುಂಟೆ:ಈ ಸಜ್ಜಿಗೆ ಅನೇಕ ಹಲ್ಲುಗಳಿರುತ್ತದೆ. ಇವು ಹೆಂಟೆಯೊಳಗೆ ಇಳಿದು ಅವನ್ನು ಪುಡಿಮಾಡುತ್ತವೆ. ಈ ಹಲ್ಲುಗಳನ್ನು 18-22ರಿಂದ ಸೆಂ.ಮೀ. ಅಂತರದಲ್ಲಿ ಸಜ್ಜಿಸಿರುತ್ತಾರೆ. ಇವುಗಳ ಉದ್ದ 22-30ಸೆಂ.ಮೀ.ಕಬ್ಬಿಣದ ನೇಗಿಲಿನಿಂದ ಉತ್ತು ದೊಡ್ಡ ಹೆಂಟೆ ಇದ್ದಾಗ ಮಾತ್ರ ಕುಂಟೆಯನ್ನು ಬಳಸುತ್ತಾರೆ.

ಹಲುಬೆ:ಇದಕ್ಕೂ ಅನೇಕ ಹಲ್ಲುಗಳಿರುತ್ತವೆ. ಕುಂಟೆ ಹೊಡೆದಾಗ ಮೇಲೆ ಉಳಿದಿರಬಹುದಾದ ಸಣ್ಣ ಹೆಂಟೆಗಳನ್ನು ಹುಡಿ ಮಾಡಿ, ಭೂಮಿಯನ್ನು ಬಿತ್ತನೆಗೆ ಹದಮಾಡಲು ಇದರಿಂದ ಅನುಕೂಲ. ಹಲ್ಲುಗಳ ಮಧ್ಯದ ಅಂತರ 5-7.5 ಸೆಂ.ಮೀ. ಇದ್ದು 10 ಸೆಂ.ಮೀ.ಗಿಂತ ಹೆಚ್ಚಿರುವುದಿಲ್ಲ. ಹಲುಬೆಯಲ್ಲಿ ಅನೇಕ ವಿಧ.ತುದಿಯಲ್ಲಿ ಹಲ್ಲುಗಳು, ಮೊಳೆ, ಬಾಚಿ, ಇಲ್ಲವೇ ಬಿಲ್ಲೆಗಳು ಇರಬಹುದು. ಸಾಲುಬೆಳೆಗಳಮಧ್ಯದಲ್ಲಿ ಕೃಷಿ ಮಾಡಲು ಸೂಕ್ತರೀತಿಯಲ್ಲಿ ಸಜ್ಜಿಸಿರುವ ಹಲುಬೆಗಳು ಬಳಕೆಯಲ್ಲಿವೆ.

ಈ ಎಲ್ಲ ಸಲಕರಣೆಗಳ ಕೆಲಸಕ್ಕೂ ಎತ್ತೇ ಆಧಾರ. ಅನೇಕ ಕಡೆ ಬರಡು ಹಸುಗಳು ಕೋಣಗಳು ಮತ್ತು ಕತ್ತೆಗಳನ್ನು ಬಳಸುತ್ತಾರೆ. ಪಶ್ಚಿಮ ರಾಷ್ಟ್ರಗಳಲ್ಲಿ ಕುದುರೆಗಳ ಬಳಕೆ ಹೆಚ್ಚು. ಅರೇಬಿಯದಂಥ ಮರುಭೂಮಿ ಪ್ರದೇಶ್ದಲ್ಲಿ ಒಂಟೆಗಳ ಬಳಕೆ ಇದೆ. ಈಗೀಗ ಬೇಸಾಯದ ಕೆಲಸಕ್ಕೆ ಯಂತ್ರಗಳನ್ನು ಉಪಯೋಗಿಸುತ್ತಿದಾರೆ. ಎತ್ತುಗಳ ಬದಲು ಟ್ರ್ಯಾಕ್ಟರ್ ಬಳಕೆ ಹೆಚ್ಚು. ಹಾಗೆಯೇ ಬತ್ತದ ಗದ್ದೆಗಳನ್ನು ಉಳುವುದಕ್ಕೆ ಯಾಂತ್ರಿಕ ನೇಗಿಲು ರೂಢಿಗೆ ಬಂದಿದೆ.