ಪುಟ:Mysore-University-Encyclopaedia-Vol-4-Part-1.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾತಕ ಜನಪದ ಸಂಗೀತ ವ್ಯರ್ಥ ಹಮ್ಮು ನೀ ಮಾಡಿ ಕೆಡಬೇಡ ಬಾರೊ ರಣಾಗ್ರದೊಳಗೆ!! ಸಮಸಾಟಿಯಾಗಿ ಎರಡು ಕೂಡಿತು ದಂಡು ಬೈಲಿನಾಗೆ ಜಮಾಯಿಸಿ ಜಗಳ ಹತ್ತಿತು ನೋಡೊ ಕರ್ನ ಪಾರ್ಥರೀಗೆ ನೇಮದಿ ಕಾದಿರುವಳು ಪರಿಯಪಟ್ಟಣದ ಮಾರಿ ಹೀಗೆ ವೀರರಾಜಭೂಪಾಲನ ಅಗಲದೆ ಬೆನ್ ಮ್ಯಾಗೆ ತಮಾಂ ದಂಡು ಉರುಳು ಹೋಯಿತು ಮೂರು ಪಟಾಲಂ ದಳವಾಯ್ ಕಡೆಗೆ!! ಹಲಗಲಿ ಬಂಟರ ಹತಾರದ ಕದನದ ಲಾವಣೆಯಿಂದ ಆರಿಸಿದ್ದು ಈ ಮುಂದಿನದು: ಹೊತ್ತು ಬಂದಿತು ಮತ್ತ ನೋಡಿರಿ ಕತ್ತಿಹಿಡಿಯುವ ಜನಕ ಸಿಟ್ಟಿನ ಮಂದಿ ಹಲಗಲಿ ಬಂಟರು ಮುಟ್ಟಲಿಲ್ಲೊ ದಡಕ!! ಎಲಾಯಿತಿಯಿಂದ ಹುಕುಮ ಕಳಿಸಿತು ಕುಂಪಣಿ ಸರಕಾರ ಎಲ್ಲ ಜನರಿಗೆ ಜೋರಮಾಡಿ ಕಸಿದುಕೊಳ್ಳಿರಿ ಹತಾರ! ಕಾರಸಾಹೇಬ ಬೆಂಕಿ ಚೂರಾದ ಲೂಟ್ ಮಾಡಂತನೋ ಉರಾ ಸಿಟ್ಟಲೆ ಹೊಡೆದರು ಸಿಡಿಲ ಸಿಡಿದ್ದಾಂಗ ಗುಂಡು ಸುರಿದಾದ ಭರಪೂರಾ! ರಾಮನ ಕಡಿದ ವಿಪರೀತಾ ಕಾಲುವೆ ಹರಿತೊ ರಕ್ತಾ ಸಾವಿರ ಆಳಿಗೆ ಒಬ್ಬ ಕೂಗತಾನೊ ಕಡಿ ಕಡಿರಿ ಅಂತ ಮತ್ತಾ ಊರು ಊರೆ ಇಲ್ಲದಾಯ್ತು ಊರಾಗಾಯ್ತು ಅಂತ ಲೂಟಾ ಮನಿಮನಿ ಹೊಕ್ಕು ದಂಡು ಹುಡಿಕಿತು,ದನಕರ ಸಹಿತ ಲೂಟಾ ಕೂಸುಕುನ್ನಿ ಹೋದಾವ ಸತ್ತು,ಬೆಂಕಿ ಹಚ್ಯಾರೊ ಕೂತ ಬೂದಿ ಮಾಡ್ಡಾರೊ ಹಲಗಲಿ ಸುಟ್ಟು ಗುರುತುಳಿಯಲಿಲ್ಲ ಎಳ್ಳಷ್ಟು ಹಾಳಾಗಿ ಹೋಯಿತೋ!ಅತ್ತು ವರ್ಣಿಸಿ ಹೇಳಲಿನಾನೆಷ್ಟು. ಲಾವಣಿಪದಗಳಲ್ಲಿ ದೇವತಾಸ್ತುತಿ,ದೇಶಪ್ರೇಮ,ಜನತೆಯ ಡೊಂಕನ್ನು ತಿದ್ದುವ ನೀತಿ, ಶೃಂಗಾರ,ವೀರ-ಇವೆಲ್ಲ ಉಂಟು. ಅಂಬಾ ನಿನ್ನ ನಂಬಿದೆನು ಸಂಭ್ರಮದಿ ಸಲಹುವೆ ಕುಂಭಿಣಿಯೊಳೆಡಬಿಡದೆ ಅಂಬಾ ತಾಯಿ!ಹಂಬಲಿಸಿ ಅಸುರರ ಕಂದರನ ಕೈಹಿಡಿದು ಸಲಹುವೆ ಶಾಂಭವಿ ಸತಿ ಮಾಯಿ!ಅರುಣ ಕಿರಣವುಳ್ಳ ಧರಣಿ ಚಾಮುಂಡಿ ನಿನ್ನ ಚರಣ ಶೃಂಗಾರವ ಪೇಳುವೆನು-ಇದು ಸ್ತುತಿ. ಇದು ಬಹು ಗಮ್ಮತ್ತಿನ ಶ್ರೀರಂಗಪಟ್ಟಣದ ಲಾವಣಿ: ಬೇಷಕ್ ತಮಾಷಾ ಟೈಗರ್ ನಿಶಾನಾ ಟೀಪುಸುಲ್ತಾನನ ಬಿರುದಾಯ್ತು ಮಸಲತ್ ಮಾಡಿದ ಮೀರ್ ಸಾದಕನಿಗೆ ದೇಶದ್ರೋಹಿ ಎಂದ್ದೆಸರಾಯ್ತು!!ಪ!! ಚಾಲ್ ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ್ ರಣಾಗ್ರಕ್ಕೊರಟನು ರೋಷದಲಿ ಪರಂಗಿ ಸೋಲ್ ಜರ್ ಮಧ್ಯದಿ ತುರಂಗಬಿಟ್ಟನು ತತ್ವದಲಿ! ಪರಂಪರ ವಿರೋಧಿ ಫೌಜನು ಕುರಿಗಳಂದದಿ ಖಡ್ಗದಲಿ ಸರಾಸರಿ ಇಲ್ ಬರೆಯಲು ಸಾಗದು ತರಿದನು ಎಷ್ಟೋ ಶಿಬಿರದಲಿ ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ ಪರಂಗಿ ಫೌಜಿನ ತರಂಗ ನುಗ್ಗಿತು ಶ್ರೀರಂಗಧಾಮನ ಪಟ್ನದಲಿ. ಲಾವಣಿಗಳಲ್ಲಿ ಪಲ್ಲವಿ,ಚಾಲ್ ಉಡಾನ್,ಚಿಕ್ಕ ಉಡಾನ್,ಶ್ಲೋಕಗಳು ಅಡಕವಾಗಿರುತ್ತವೆ.ಆದಿ ಝಂಪ,ಚಾಪು ತಾಳಗಳನ್ನು ಸರಾಗವಾಗಿ ಉಪಯೋಗಿಸಲಾಗುತ್ತದೆ.ಜನಸಾಮಾನ್ಯರಲ್ಲಿ ಬಳಕೆಯಾದ ರಾಗಗಳನ್ನೇ ಇಲ್ಲಿ ಕಾಣಬಹುದು. ಉದಾ:ಯಮನ್,ಪೀಲು ಸಿಂಧುಭೈರವಿ,ಶಂಕರಭರಣ,ಮಧ್ಯಮಾವತಿ,ಮೋಹನ, ಇತ್ಯದಿ.ಹಾಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಬಹುದು.ಶ್ಲೋಕಕ್ಕೆ ತಾಳವಿಲ್ಲ.ಮಿಕ್ಕ ಚಾಲ್ ಉಡಾನ್ ಗಳಿಗೆ ತಾಳದ ಗತಿ ಉಂಟು.ಸರ್ಜಪ್ಪನಾಯಕನ ಲಾವಣಿಯೂ ಪ್ರಸಿದ್ಧವಿದೆ.ಐದುನೂರು ಪಾಳೆಯಗಾರರ ಕುರಿತು ಲಾವಣಿಗಳಿವೆ. ಕೋಲಾಟದ ಪದ:ಕೋಲು ಹಾಕಲು ಕನಿಷ್ಠ ಆರು ಜನ ಬೇಕು.ಹನ್ನೆರಡಿದ್ದರೆ ದೊಡ್ಡ ಗುಂಪು.ಕಾಲಿಗೆ ಗೆಜ್ಜೆಕಟ್ಟಿಕೊಂಡು,ಭಾಗವಹಿಸುವ ಎಲ್ಲ ಮಂದಿ ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು ಕೋಲಿನ ತಾಳಕ್ಕೆ ಸರಿಯಾಗಿ ಹಾಡುತ್ತ ಕುಣಿಯುತ್ತಾರೆ.ಮೊದಲು ಪ್ರಾರಂಭಕ್ಕೆ,ಮತ್ತೆ ಮುಕ್ತಾಯುಕ್ಕೆ ಸರಿಯಾಗಿ ಕಲಿಸಿದವನ ಸಂಕೇತ ಉಂಟು.ಬಗೆಬಗೆಯ ನಡಿಗೆ,ತಿರುಗುವಿಕೆ,ದನಿಯ ಏರು ಇಳಿತ ಮಂದಗತಿ,ತೀವ್ರ ಗತಿಗಳ ವಿನ್ಯಾಸ ಉಂಟು. ಚಿಕ್ಕ ಕೋಲಾಟ,ಜಡೆಕೋಲಾಟಗಳ ಮಾದರಿಗಳು ಬೇರೆ ಬೇರೆ.ಒಬ್ಬ ಸೊಲ್ಲು ಹೇಳಿಕೊಟ್ಟಂತೆ ಮಿಕ್ಕವರ ಹಾಡುವರು.ಸಪ್ತತಾಳಗಳೂ ಜನಪ್ರಿಯವಾದ ನವರಾಗಗಳೂ ಬಳಕೆಯಲ್ಲುಂಟು. ಕೋಲು ರನ್ನದಾ ಕೋಲನ್ನ-ಏಕೋಲು ಕೋಲು ಕೋಲನ್ನ ಅಥವಾ ತಾನು ತಾನಂದನೋ ತಂದನೋ ತಾನಾನು ತಂದನಾನೋ-ಎಂದು ತಾಳದ ಗತಿಗೆ ಹಾಡಿಕೊಳ್ಳುತ್ತಿರುವಂತೆ ಕೋಲಾಟ ಮೊದಲಾಗುತ್ತದೆ.ಉದಾ-ಮಾತಾಡ್ ಮಲ್ಲಿಗೆ-ಶಾವಂತಿಗೆ ಇರುವಂತಿಗೆ. ತ್ರಿಪದಿಗಳನ್ನೂ ಕೋಲಿಗೆ ಸರಿಪಡಿಸಿಕೊಳ್ಳುತ್ತಾರೆ. ಮೂಡಲ್ ಕುಣಿಗಲುಕೆರೆ ನೋಡೋಕ್ ಒಂದೈಭೋಗ ಮೂಡೀ ಬರ್ತಾನೆ ಚಂದಿರಾಮಾ-ತಾನಂದನೋ ಮೂಡೀ ಬರ್ತಾನೆ ಚಂದಿರಾಮಾ ಬಾಳೇಯ ಹಣ್ಣಂತೆ ಬಾಗಿದ್ ಕುಣಿಗಲ್ ಕೆರೆ ಭಾವ ತಂದನೆ ಬಣ್ಣದ್ ಸೀರೆ!! ಬಂಡಿಯ ಪದ:ಗಾಡಿಯನ್ನು ಹೊಡೆಯುತ್ತ ಎತ್ತಿಗೆ ಕಟ್ಟಿದ ಗೆಜ್ಜೆಗಳ ಹಾಗೂ ಬಂಡಯ ಚಕ್ರದ ದನಿಯನ್ನು ಮೀರಿ ಎತ್ತರದ ದನಿಯಲ್ಲಿ ಒಬ್ಬನೇ 'ಬೇಲೂರ ಹೆಣ್ಣೆ ಬೇಗನೆ ರಾಗಿ ಮಾಡೆ!ಕೂರಿಗೆ ನಿಂತಾವೆ ಹೊಲದಾಗೆ ಎಲೆ ಹೆಣ್ಣೆ ಜಾಣ ನಿಂತವ್ನೆ ಬಿಸುಲಾಗೆ'-ಎಂದು ಹಾಡಿ ಕೇಕೆ ಹಾಕಿದಾಗ ಮುಗಿಲು ಮಾರ್ದುನಿಸುವುದು.ಬಂಡಿಪದ ಹಾಡಲು,ಹಾಗೇ ಕಪಿಲೆ ನೀರೆತ್ತುವಾಗ ಹಾಡಲು ಎಂಟು ಎದೆ ಬೇಕಾದೀತು.ಬ್ರಹ್ಮಾಂಡಕ್ಕೆ ದನಿಮುಟ್ಟುವಂತೆ ಹಾಡಿ ಕೇಕೆ ಹಾಕುವುದು ಬಂಡಿ ಪದ ಹಾಡುವವರ ಗತ್ತು. ಕಿನ್ನರಿ ಪದ:ಕಿನ್ನರಿವಾದ್ಯ ಹಿಡಿದು,ಮಧ್ಯಮ ಶೃತಿಯಲ್ಲಿ ತಂತಿಮೀಟುತ್ತ ದನಿಗೂಡಿಸಿ ಬಹಳ ಇಂಪಾಗಿ ಹಾಡುವ ಪದಗಳಿವು. ಚೆಲುವಯ್ಯ ಚೆಲುವೋ-ತಾನಿತಂದನ್ನಾ!ಚಿನ್ಮಾಯಾರೂಪೇ ಕೋಲೆನ್ನ ಕೋಲೇ ಬೆಟ್ಟದ ಮ್ಯಾಗಳ ಜಲ್ಲೇಬಿದಿರು-ಬೇಲಿ ಮ್ಯಾಗಳ್ ಸೋರೆ ಬುರುಡೆ ಲೋಲುಕಿನ್ನುರಿ ನುಡಿಸೋನ್ ಯಾರಯ್ಯ- ಎಂದು ಹಾಡು ಮೊದಲುಗುತ್ತದೆ. ಕಂಸಾಳೆ ಪದ:ಕೈಯಲ್ಲಿ ಕಂಚಿನ ಬಟ್ಟಲು;ಅದಕ್ಕೊಂದು ಮುಚ್ಚಳ ಹಿಡಿದುಕೊಂಡು ತಾಳ ಬಾರಿಸಿಕೊಂಡು ಬೆಟ್ಟದ ಮಾದೇಶ್ವರನ ಮೇಲೆ ಪದಗಳನ್ನು ಹೇಳುವವರು ಉದ್ದಕ್ಕೂ ಸಾಹಿತ್ಯ ಜೋಡಿಸಿಕೊಂಡು ಒಂದೇ ರಾಗದಲ್ಲಿ ಹಾಡುತ್ತಾರೆ.ಕನಿಷ್ಠವೆಂದರೆ ಮೇಳದಲ್ಲಿ ಮೂರು ಮಂದಿ ಗಂಡಸರಿರುವರು.ಒಬ್ಬಾತ ತ್ರಿಶೂಲಕ್ಕೆ ಹೂವಿನ ಅಲಂಕಾರ ಮಾಡಿ ಹಿಡಿದುಕೊಂಡುರುತ್ತಾನೆ;ಮತ್ತಿಬ್ಬರು ಹಾಡುತ್ತಾರೆ. ಕೊಡಗರ ಬೊಳ್ ಕಾಟ:ಕೊಡಗಿನಲ್ಲಿ ಗಂಡಸರು ಮಂಗಲದ ಸಮಯದಲ್ಲಿ ಹಾಗೂ ಹುತ್ತಿರಿ ಹಬ್ಬದ ಸಮಯದಲ್ಲಿ ಹತ್ತಾರು ಜನ ಸೇರಿಕೊಂಡು ಕುಣಿಯುವರು;ಕರಿನಿಲುವಂಗಿ, ಜರತಾರಿ ನಡುಕಟ್ಟು,ತಲೆಗೆ ಬಿಳಿಜರತಾರ ರುಮಾಲು,ಸೊಂಟದಲ್ಲಿ ಕತ್ತಿ,ಒಂದು ಕೈಯಲ್ಲಿ ಚವರಿ-ಹೀಗೆ ತಮ್ಮ ಪಂಗಡದ ವಿಶೇಷ ಅಲಂಕಾರಗಳಲ್ಲಿರುವ ಅವರನ್ನು ಆಗ ನೋಡಲು ಸೊಗಸೆನಿಸುತ್ತದೆ.ದುಡಿಯ ದನಿಗೆ ಸರಿಯಾಗಿ ವೃತ್ತಾಕಾರದಲ್ಲಿ ನಿಂತು ಹಿಂದಕ್ಕೂ ಮುಂದಕ್ಕೂ ಅಕ್ಕಪಕ್ಕಗಳಿಗೂ ಬಳುಕಾಡುವರು.ಇದೇ ಇವರ ನೃತ್ಯ. ಕೊಡಗಿನ ಭಾಷೆಯ ಬಾಳೋ ಬಾಳೋ ಎಂಬ ಪಾಟು ಹಾಡುವರು.ದೂರಕ್ಕೆ ಆ ದನಿ ದುಂಬಿ ಗುನುಗುಟ್ಟುವಂತೆ,ಪುಂಗಿ ಬಾರಿಸಿದಂತೆ ಕೇಳುವುದು.ಪುನ್ನಾಗವರಾಳಿ,ನಾದನಾಮಕ್ರಿಯ ಮಿಶ್ರವಾಗಿರುವುದಲ್ಲದೆ ತಾಳಗತಿಯಲ್ಲಿ ತಧಿತ್ತಯ್ಯಾ,ತಧಿತ್ತಯ್ಯಾ,ತಧಿತ್ತಯ್ಯಾ ತಧಿತ್ತಾವ ಎಂಬಂತೆ ಹಾಡು ಮುಂದುವರಿಯುವುದು.ಈ ಕುಣಿತ,ಹಾಡುಗಾರಿಕೆ,ದುಡಿಯ ಬಳಕೆ ಗಂಟೆಗಟ್ಟಲೆ ನಡೆಯುವುದು. ಬಾಳೋ ಬಾಳೋ ನಂಗಡಾ,ಬಾಳೋ ಬಳೋ ಮಾದೇವ ಪಾಡಿ ನೋಡಿ ಕಂಡಲ್ಲಿ ಪೊರ್ಮಾಲೆ ಕೊಡದೇಶ ಆದಿಮೂಲಾ ಲೇ ಲೇ ಲೋ!!-ಇದು ಒಂದು ಹಾಡಿನ ಪಲ್ಲವಿ. ಗೀಗೀಪದ:ಏಕನಾದದ ಶೃತಿಗೆ ಕಥನಕವನವನ್ನೋ ಸಂತರ,ವೀರರ ಕಥೆಯ ಹಾಡ್ನ್ನೋ ಇಬ್ಬರು ಕೂಡಿ ಹಾಡುವರು.ಪ್ರತಿ ಚರಣ ಮುಗಿದೊಡನೆ ಗೀಗೀ ಗೀಗೀ ಎಂದು ತಾಳಕ್ಕೆ ಸರಿಯಾಗಿ ಶೃತಿಗೂಡಿಸುವರು.ತೆಲುಗಿನಲ್ಲಿ ತಂದ ನಾನು ತಂದಾನುತಾನಾ ಎನ್ನುವರು.ಇಡೀ ರಾತ್ರಿ ಮಲೆನಾಡಿನ ಅಡಕೆತೋಟದ ಪ್ರದೇಶಗಳಲ್ಲಿ ಮನೋರಂಜನೆಯಾಗಿ ಈ ಪದ ಹಾಡುವುದು ನಾಡಿಕೆ.ಮರಾಠಯಲ್ಲೂ ಇಂಥ ಪದಗಳಿವೆ. ಗೊಂದಲು:ಮಲೆನಾಡಿನಲ್ಲಿ ಹಾಗೂ ಉತ್ತರ ಕರ್ನಾಟಕದ ಕರೆನಾಡಿನಲ್ಲಿ ಭವಾನಿ ದೇವಿಯ ಭಕ್ತರು ಗೊಂದಲದ ಪದ ಹಾಡಿಸುವ ವಾಡಿಕೆಯಿದೆ.ಅಂಬಾ ಭವಾನಿ ಪೂಜೆ ನಡೆದಾಗ ಇಡೀ ರಾತ್ರಿ ಗೊಂದಲ ನಡೆಸುವರು.ಗೊಂದಲದವರ ಪಕ್ಕವಾದ್ಯ ಚೌಡಿಕೆಯಂತಿರುತ್ತದೆ.ತಾಮ್ರದ ಕೊಳಗಕ್ಕೆ ನರದ ತಂತಿ ಕಟ್ಟಿ ಅದನ್ನು ಥೊಯ್ ಥೊಯ್ ಎಂದು ಮೀಟುತ್ತ ದೇವಿಯ ಸ್ತುತಿರೂಪವಾದ ಪದಗಳನ್ನು ಅವರು ಹಾಡುತ್ತಾರೆ. ಗೊಂದಲ ಹಾಕುವವರ ಗಂಡಸರು.ಕಂಬಳಿ ಹೊದ್ದು ಕವಡೆ ಹಾರ ಹಾಕಿಕೊಂಡು, ಮುಖಕ್ಕೆ ಭಂಡಾರ ಕುಂಕುಮ ಹಚ್ಚಿಕೊಂಡು,ತಲೆಗೆ ಕರಡಿ ಚರ್ಮದ ಟೊಪ್ಪಿಗೆ ಹಾಕಿಕೊಂಡು ಸೆದ್ದರಾಗುವ ಗೊಂದಲದವರ ವೇಷ ವಿಚಿತ್ರವಾಗಿರುತ್ತದೆ.ಗೊಂದಲ