ಪುಟ:Mysore-University-Encyclopaedia-Vol-4-Part-1.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಜಾನಪದ

ಕುಣಿಯುವ ಮತ್ತೊಬ್ಬ್ ಸೇರಿಕೊಳ್ಳುತ್ತಾನೆ. ತಮಟೆಯ ಗತ್ತಿನಲ್ಲಿ ಈ ನೃತ್ಯ ದೊಡ್ಡ ಅದ್ಭುತವಾಗಿ ತೋರಿಬರುತ್ತದೆ.

ಕರಗ (ನೋಡಿ) ಕುಣಿತ ಬೆಂಗಳುರು, ಕೋಲಾರ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿದೆ. ನೆತ್ತಿಯಲ್ಲಿ ಅಲಂಕೃತ ಕರಗವನ್ನು ಧರಿಸಿ ಕೈಬಿಟ್ಟು ನಾನಾ ಭಂಗಿಗಳಲ್ಲಿ ಕುಣಿಯುವ ಚಾತುರ್ಯದಂತೆಯೇ ಕುಣಿತವೂ ಆಕರ್ಷಕವಾಗಿರುತ್ತದೆ.ಕೋಲಾಟವೊಂದನ್ನು ಉಳಿದು ದಕ್ಷಿಣ ಕರ್ನಾಟದ ಎಲ್ಲ ಜನಪದ ನೃತ್ಯಗಳಿಗೂ ಧಾರ್ಮಿಕ ಹಿನ್ನೆಲೆಯನ್ನು ಆರೋಪಿಸಬೇಕಾಗುತ್ತದೆ.ಯಾವುದೊ ಧರ್ಮದ,ದೈವದ ಹೆಸರಿನಲ್ಲಿ ಈ ನೃತ್ಯಗಳು ನಡೆಯುತ್ತವೆ. ಅಲ್ಲದೆ ಇವು ಕೆಲವು ವಿಶಿಷ್ತವಾದ ಸಂದರ್ಭಗಳಲ್ಲಿ ಮಾತ್ರ ಕಾಣಬರುತ್ತವೆ.ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ ಸಿನೆಮಾ ಹಾಗೂ ಕಂಪನಿ ನಾಟಕಗಳಿಂದಾಗಿ ಇತ್ತೀಚೆಗೆ ಸಂಪೂರ್ಣವಾಗಿ ಮರೆಯಾಗುತ್ತಿದ್ದರೂ ಅಲ್ಲಲ್ಲಿ ಇಂದಿಗೂ ಉಸಿರಾಡುತ್ತಿದೆ.ಯಕ್ಷಗಾನ ಬಯಲಾಟ,ಸೂತ್ರದ ಗೊಂಬೆಯಾಟ, ತೊಗಲುಗೊಂಬೆಯಾಟಗಳು ಸಮಗ್ರ ದಕ್ಷಿಣ ಕರ್ನಾಟಕದ ಪ್ರಸಿದ್ಧ ಮೇಳಗಳಾಗಿದ್ದವು. ಮೂಡಲಪಾಯ ಎಂದು ಪ್ರಸಿದ್ಧವಾದ ಯಕ್ಷಗಾನ ಸಂಪ್ರದಾಯ ಹಾಡುಗಾರಿಕೆ, ಮಾತುಗಾರಿಕೆ,ವೇಷಭೂಷಣ,ಕುಣಿತ ಎಲ್ಲದರಲ್ಲಿಯೂ ಬಹುಮಟ್ಟಿಗೆ ದಕ್ಷಿಣ ಕನ್ನಡದ ಎರಡು ಪ್ರಸಿದ್ಧ ಸಂಪ್ರದಾಯಗಳಾದ ತೆಂಕತಿಟ್ಟು ಬಡಗುತಿಟ್ಟುಗಳಿಂದ ಭಿನ್ನವಾಗಿ ಹಳ್ಳಿಹಳ್ಳಿಯಲ್ಲಿಯೂ ಜನಪ್ರಿಯವಾಗಿತ್ತು. ಸೂತ್ರದ ಗೊಂಬೆಯಾಟದಲ್ಲಿ ತಿಪಟೂರು ಸಮೀಪದ ಹೀಚನೂರು,ಬೆಳ್ಳೂರು ಮಾಗಡಿ ಹಾಗೂ ನಂಜನಗೂಡು ಸುತ್ತಿನ ಮೇಳಗಳೂ ಕರ್ನಾಟಕದ ಬಯಲು ಸೀಮೆಯಲ್ಲೆಲ್ಲ ಕಾಣಬರುತ್ತದೆ.ಮಲೆನಾಡಿನ ಭಾಗಗಳಲ್ಲಿ ಘಟ್ಟದ ಕೆಳಗಿನ ಯಕ್ಷಗಾನ ಸಂಪ್ರದಾಯಗಳ ಪ್ರಭಾವವಿರುವುದನ್ನು ಕಾಣಬಹುದು.ದಕ್ಷಿಣ ಕರ್ನಾಟಕ ಜಾನಪದದ ಎಲ್ಲ ಬಗೆಗಳಲ್ಲೂ ತನ್ನ ಪ್ರಾಮುಖ್ಯವನ್ನು ಕಾಪಾಡಿಕೊಂಡು ಬಂದಿದೆ.ಜನಪದ ಕಥೆ,ಗಾದೆ,ಒಗಟುಗಳಲ್ಲಿ ಈ ಪ್ರದೇಶಕ್ಕೆ ಗಣ್ಯವಾದ ಸ್ಥಾನ ಲಭ್ಯವಾಗುವುದೆಂಬುದಕ್ಕೆ ಉತ್ತಮ ನಿದರ್ಶನವಾಗಿ ಒಳ್ಳೆಯ ಸಂಕಲನಗಳು ಪ್ರಕಟವಾಗಿವೆ.ನಂಬಿಕೆಗಳು, ಆಚಾರ,ವೈದ್ಯ,ಅಡುಗೆ,ಕ್ರೀಡೆಗಳು,ಸಂಪ್ರದಾಯಗಳು ಮುಂತಾದವುಗಳ ಬಗ್ಗೆಯೂ ಸಾಕಷ್ತು ಅಭ್ಯಾಸ ನಡೆಯುತ್ತಿದ್ದು ಆ ಕ್ಷೇತ್ರದಲ್ಲಿಯೂ ಅದ್ವಿತೀಯವಾದ ಸಾಧನೆ ಕಂಡುಬರುತ್ತಿದೆ. ಸಮಗ್ರ ಕರ್ನಾಟಕದ ಸಂಸ್ಕೃತಿಗೆ ಈ ಪ್ರದೇಶದ ಕಾಣಿಕೆ ಅಲ್ಪವಾದುದೇನಲ್ಲ ಎಂಬುದು ಇದರಿಂದ ಶ್ರುತ ಪಡುತ್ತದೆ.(ಜೆ.ಎಸ್.ಪಿ)ಉತ್ತರ ಕರ್ನಾಟಕದ ಜಾನಪದ: ಪಂಪ,ಪೊನ್ನ,ದುರ್ಗಸಿಂಹ ,ನಯಸೇನ,ಹರಿಹರ,ರಾಘವಾಂಕ,ಕುಮಾರವ್ಯಾಸ ಮುಂತಾದವರ ಗ್ರಂಥಗಳಲ್ಲಿ ಗಾದೆಗಳ ಹಾಗೂ ಜನಪದ ಕಥೆಗಳ ಅನೇಕ ಉಲ್ಲೇಖ ಶ್ರೀಧರಾಚಾರ್ಯನ ಜಾತಕತಿಲಕದಲ್ಲಿದೆ(೧೦೪೯).ಗಲಗಲಿ ಅಮ್ಮನವರ ಮದುವೆಯ ಹಾಡುಗಳೂ ಹೆಳವನಕಟ್ಟೆ ಗಿರಿಯಮ್ಮನವರ(೧೮ನೆಯ ಶತಕ)ದಶಾವತಾರದ ಹಾಡುಗಳೂ ಹರಪನಹಳ್ಳಿಯ ಭೀಮಯ್ಯನ ಹಾಗೂ ಸಾವಂತ್ರಾದೇವಿಯ ಹಾಡುಗಳೂ ಜಾನಪದ ಸರಣಿಯನ್ನು ಹೊಂದಿವೆ.ಅಬ್ಬೆ ದುಬಾಯ್ (೧೮೧೬) ಉತ್ತರ ಕರ್ನಾಟಕದ ನಾಲ್ಕು ಜನಪದ ಕಥೆಗಳನ್ನೂ ಗಾದೆಗಳನ್ನೂ ನಂಬಿಕೆಗಳನ್ನೂ ತನ್ನ ಗ್ರಂಥದಲ್ಲಿ ತಂದಿದ್ದಾನಲ್ಲದೆ ೧೮೭೧ರ ಮೊದಲೇ ಕೆಲವು ಕ್ರೈಸ್ತಪಾದ್ರಿಗಳು ಈ ತೆರನಾದ ಸಂಗ್ರಹ ಮಾಡಿದ್ದರು.ಕಿಟ್ಟೆಲ್,ಪ್ಲೀಟ್,ಬಿ.ಎಸ್.ರೈಸರೂ ಲಾವಣಿ ಕಥೆಗಳನ್ನೂ ಸಂಗ್ರಹಿಸಿ ಪ್ರಕಟಿಸಿದ್ದರು. ಹಲಸಂಗಿಯ ಮಧುರಚೆನ್ನ,ಕಾಪಸೆ ರೇವಪ್ಪ,ಸಿಂಪಿ ಲಿಂಗಣ್ಣ-ಇವರು ಕೂಡಿ ಪ್ರಕಟಿಸಿದ ಗರತಿಯ ಹಾಡು (೧೯೩೧) ಹೆಣ್ಣಿನ ವಿವಿಧ ಜೀವನದ ಧ್ವನಿಪೂರ್ಣವಾದ ಸುಂದರ ತ್ರಿಪದಿಗಳ ಸಂಕಲನ.ಇಲ್ಲಿನ ಭಾವಲಾಲತ್ಯ ಹಾಗೂ ಆಡುಮಾತಿನ ಸೊಗಸುಗಳು ವಿಸ್ಮಯಕಾರಿಯಾಗಿವೆ. ಕಾಪಸೆಯವರ ಮಲ್ಲಿಗೆದಂಡೆಯಲ್ಲಿ(೧೯೩೫) ಸಂಪ್ರದಾಯದ ಹಾಡುಗಳೂ ಬರದ ಹಾಡು ಎತ್ತಿನ ಹಾಡಿನಂಥ ಭಾವಪೂರ್ಣ ಹಾಡುಗಳೂ ಎಳ್ಳಮಾವಾಸ್ಯೆಯ ಹಾಡಿನಂಥ ಕಥೆಯ ಹಾಡೂ ಹಾಸ್ಯದ ಹಾಡುಗಳೂ ಇದ್ದು ಇದೊಂದು ಪ್ರಾತಿನಿಧಿಕ ಸಂಗ್ರಹವಾಗಿದೆ. ಸಿಂಪಿ ಲಿಂಗಣ್ಣ ಮತ್ತು ಧೂಲಾ ಸಾಹೇಬರ ಜೀವನ ಸಂಗೀತವೆಂಬ ಸಂಕಲನದಲ್ಲಿ ಅತ್ಯುತ್ತಮವಾದ ಶೃಂಗಾರ ಲಾವಣಿಗಳಿವೆ.ಶಿವೇಶ್ವರ ದೊಡ್ಡಮನಿಯವರ ನವಿಲೂರು ಮನೆಯಿಂದ (೧೯೫೨) ಗ್ರಂಥದಲ್ಲಿ ಬೇರೆಡೆ ಕಾಣದ ಕೂಲಿ,ಅಂಜಿಕೆ ಮುಂತಾದ ಪ್ರಗತಿಶೀಲ ಜನಪದ ಹಾಡುಗಳಿವೆ.ಗದ್ದಗೀಮಠದ ಸಂಗ್ರಹದಲ್ಲಿನ ಶಿವಶರಣರ ಚರಿತ್ರೆಗಳೂ ಮಹಾಭಾರತದ ಹಾಡುಗಳೂ ಹಿರಿಯ ಹಾಡೂಗಬ್ಬಗಳೂ ಲೋಕಗೀತೆಗಳೂ ಸಂಪ್ರದಾಯದ ಹಾಗೂ ಕೋಲು ಪದಗಳೂ ಚೆನ್ನಾಗಿವೆ.ಎಂ.ಜೀವನ ಅವರ ಜನಪದ ಗೀತೆಗಳೂ, ಈಶ್ವರಚಂದ್ರ ಚಿಂತಾಮಣಿಯವರ ಗರತಿಯರ ಮನೆಯಿಂದ(೧೯೫೫),ಹಾರೇಶ ಮೇಟಿಯವರ ಹಂತಿಯ ಪದಗಳು(೧೯೬೦), ಕೀರ್ತನಾಥ ಕುರ್ತಕೋಟೆಯವರ ಸಂಗ್ಯಾ-ಬಾಳ್ಯಾ (೧೯೬೬),ಮತ್ತಿಘಟ್ಟ ಕೃಷ್ಣಮೂರ್ತಿಯವರ ಏಳುಕೊಳ್ಳದ ಎಲ್ಲಮ್ಮ ಎಂಬ ಸಂಗ್ರಹಗಳ ಅನಂತರ ಚಂದ್ರಶೇಖರ ಕಂಬಾರರ ಬಣ್ಣೀಸಿ ಹಾಡವ್ವ ನನ ಬಳಗ (೧೯೬೮),ವಿರೂಪಾಕ್ಷಗೌಡ ಮತ್ತು ಮುದೇನೂರು ಸಂಗಣ್ಣ ಅವರ ಹಳ್ಳಿಯ ಪದಗಳು(೧೯೬೮) ಮತ್ತು ಜ್ಯೋತಿ ಹೊಸೂರರ ಬೆರಸಿ ಇಟ್ಟೇನ ಬೆಲ್ಲ ನೆನಗಡಲಿ(೧೯೬೯) ಮೊದಲಾದ ಕೃತಿಗಳು ಪ್ರಕಟವಾಗಿ ಈ ಸಾಹಿತ್ಯದ ಹಿರಿಮೆಯನ್ನು ಎತ್ತಿಹಿಡಿದಿವೆ. ಲಾವಣಿಗಳು: ಹಾಡುವ ಧಾಟಿಗಳ ಗತ್ತಿನ ಕುಣಿತ-ಮಣಿತ ಪ್ರಾಸಗಳ ವೈಖರಿ,ನಾಟಕೀಯ ಸಂಭಾಷಣೆಗಳ ಹದಿರು, ಹಾಡುಗಾರರ ವಿಶಿಷ್ಟವಾದ ಆಡುಮಾತಿನ ಮೋಡಿ ಸೇರಿ ಇಲ್ಲಿಯ (ವಿಶೇಷವಾಗಿ ಹಿಂದಿನ) ಲಾವಣಿಗಳ ಸೊಗಸು ಅತಿಶಯವಾಗಿದೆ.ಇವು ಗಂಡುಗಾಡಿಯ ಪದಗಳು.ಇಲ್ಲಿನ ಶೃಂಗಾರಲಾವಣಿಗಳಲ್ಲಿ ಹರಿದೇಸಿ (ತುರಾಯಿ),ನಾಗೇಸಿ(ಕಲ್ಗಿ) ಎಂಬ ರೀತಿಗಳಿವೆ.ಪೌರಾಣಿಕ ಲಾವಣಿಗಳಲ್ಲಿ ಮಹಾಲಿಂಗಪುರದ ಕುಬಣ್ಣನವರ ವತ್ಸಲಾಹರಣ ಕಥೆಗಾರಿಕೆಯಲ್ಲಿ ಮಿಗಿಲಾದುದು. "ಜೀವನ ಸಂಗೀತ"ದಲ್ಲಿನ ಸಂಗಣ್ಣನ ಗೋಕುಲಾಷ್ಟಮಿ ಪೌರಾಣಿಕ ವಸ್ತುವಿನ ಶೃಂಗಾರಲಾಣಿ. ಬಾಗೇವಾಡಿಯ ಗೋಪಾಳಪ್ಪ,ಮುರಗೋದದ ಕುಬ್ಬಣ್ಣ,ತೇರದಾಳದ ಪ್ರಭುದೇವ ಮೊದಲಾದ ಕವಿಗಳ ಅಂಕಿತಗಳಿಂದ ಕೂಡಿದ ಪೌರಾಣಿಕ ಲಾವಣಿಗಳು ತುಂಬ ಇವೆಯೆಂದು ಬೆಟಗೇರಿ ಕೃಷ್ಣಶರ್ಮರು ಹೇಳುತ್ತಾರೆ.ಆದರೆ ಅವು ಅಚ್ಚಾದಂತಿಲ್ಲ. ಚಾರಿತ್ರಿಕ ಲಾವಣಿಗಳು ಈಚೆಗೆ ಹೆಚ್ಚು ಬೆಳಕಿಗೆ ಬಂದಿವೆ.ಕಿತ್ತೂರು ಚೆನ್ನಮ್ಮ ಮತ್ತು ಹಲಗಲಿ ಹತಾರ ಕದನ-ಶ್ರೇಷ್ಠ ಲಾವಣಿಗಳು.ನರಗುಂದ ಬಾಬಾ ಸಾಹೇಬ,ಸಂಗೊಳ್ಳಿ ರಾಯಣ್ಣ ಮತ್ತು ಕುಮಾರರಾಮರನ್ನು ಕುರಿತ ಲಾವಣಿಗಳಲ್ಲದೆ ಇತ್ತೀಚಿನ ರಜಾಕಾರರ ಒಂದು ಲಾವಣಿಯೂ ಉಂಟು.ವಾಸ್ತವಿಕ ಲಾವಣಿಗಳಲ್ಲಿ ಒಬ್ಬ ಒಡ್ಡರವನಿಂದ ಎಲ್.ಆರ್.ಹೆಗಡೆಯವರು ಸಂಗ್ರಹಿಸಿದ ಲಾವಣಿಯೊಂದು ನಡೆದ ಘಟನೆಯನ್ನು ವರ್ಣಿಸುತ್ತದೆ. ಹೆಣ್ಣನ್ನು ಮೋಹಿಸಿದವನೊಬ್ಬ ಅವಳು ಮಡಿದಮೇಲೆ,ಹುಗಿದ ಸ್ಥಳದಿಂದ ಅವಳ ಹೆಣವನ್ನೆಬ್ಬಿಸಿ ಅದರೊಡನೆ ಭೋಗಿಸಿದ ಕಥೆಯನ್ನು ಅದು ಹೇಳುತ್ತದೆ.ಸಂಗ್ಯಾ-ಬಾಳ್ಯಾ ಕಥೆಯ ಹೊಂಗಲ ಸಂಗ್ಯಾ ಲಾವಣಿ ಹಾಗೂ ಇತ್ತೀಚಿನ ಪಂಚವಾರ್ಷಿಕ ಯೋಜನೆಗಳ, ಕುಟುಂಬ ಯೋಜನೆಯ ಮತ್ತು ಭೂದಾನ ಚಳವಳಿಯ ಲಾವಣಿಗಳನ್ನು ನೋಡಿದರೆ ಲಾವಣಿ ರಚನೆ ಇನ್ನೂ ಬಳಕೆಯಲ್ಲಿರುವುದು ಕಂಡುಬರುತ್ತದೆ.