ಪುಟ:Mysore-University-Encyclopaedia-Vol-4-Part-1.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಕರ್ನಾಟಕದ ಧರ್ಮಗಳು"

ಪ್ರಖ್ಯಾತನಾದ ಇಮ್ಮಡಿ ಪುಲಕೇಶಿಯ ಬಳಿ ಪರ್ಷಿಯ ದೇಶದ ರಾಯಭಾರಿಗಳು ಬಂದು ಉಡುಗೊರೆಗಳನ್ನು ಅರ್ಪಿಸುತ್ತಿದ್ದ ಹಾಗೆ ಈ ಚಿತ್ರ ತೋರಿಸುತ್ತದೆ. ಆ ಕಾಲಕ್ಕೆ ಈ ಪ್ರದೇಶ ಚಾಳುಕ್ಯರ ಅಧೀನದಲ್ಲಿತ್ತು. ರಾಷ್ಟ್ರಕೂಟ ಕೃಷ್ಣರಾಜ ಈ ಗುಹೆಯ ನಿರ್ಮಾತೃವೆಂದು ಹೇಳುವವರೂ ಇದ್ದಾರೆ.

ಅಜಂತ ದೇವಾಲಯಗಳ ಭಿತ್ತಿಗಳ ಮೇಲೆ ಮಹಾಯಾನ ಭೌದ್ಧಪಂತಕ್ಕೆ ಸೇರಿದ ದೇವತೆಗಳ ಚಿತ್ರಣ ಬಹುವಾಗಿ ಮೂಡಿಬಂದಿವೆ. ಇವುಗಳಲ್ಲಿ ಪದ್ಮಪಾಣಿ ಅವಲೋಕಿತೇಶ್ವರ ಬೋಧಿಸತ್ತ್ವನ ಚಿತ್ರಣ ತುಂಬ ಪ್ರಸಿದ್ಧವಾಗಿದೆ.ಈ ಸಂಪ್ರದಾಯವನ್ನು ಒಳಗೊಂಡ ಪದ್ಧತಿ ಮುಂದೆ ದಕ್ಷಿಣದೇಶ, ಅದರಲ್ಲೂ ಕರ್ನಾಟಕದಲ್ಲಿ, ವಿಶೇಷವಾಗಿ ಪ್ರಚಲಿತವಾಯಿತು. ಬಾದಾಮಿಯ ಭಿತ್ತಿಚಿತ್ರಗಳು ಈ ಪದ್ಧತಿಗೆ ಸೇರಿರುವುದು.

ಈ ಪದ್ಧತಿಯಲ್ಲಿ ಪ್ರಕೃತಿ ಚಿತ್ರಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. 7ನೆಯ ಶತಮಾನದವರೆಗೂ ಬೆಳೆದುಬಂದ ಈ ಸಂಪ್ರದಾಯ ಕಾರಣಂತರದಿಂದ ಮರೆಯಾದ ಅನಂತರ ಚಿತ್ರಕಲೆ 16, 17ನೆಯ ಶತಮಾನಗಳವರೆಗೆ ಏಳಿಗೆಗೆ ಬರಲಿಲ್ಲ. ವಿಜಯನಗರ ಕಾಲದಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯಗಳಲ್ಲಿಯೂ ಆನೆಗೊಂದಿಯಲ್ಲಿರುವ ಉಚ್ಚಪ್ಪ ಮಠದಲ್ಲಿಯೂ ಕಂಚಿಯ ವರದರಾಜ ಸ್ವಾಮಿ ದೇವಾಲಯದಲ್ಲಿಯೂ ಲೇಪಾಕ್ಷಿಯ ವೀರಭದ್ರಸ್ವಾಮಿ ಗುಡಿಯಲ್ಲಿಯೂ ಕಂಡುಬರುವ ಚಿತ್ರಗಳು ವಿಜಯನಗರದ ಕಾಲದಲ್ಲಿ ಕನ್ನಡಿಗ ಕಲೆಗಾರರು ಬಿಡಿಸಿದ ಚಿತ್ರಗಳು. ಈ ಸಂಪ್ರದಾಯಕ್ಕೆ ಸೇರಿದ ಚಿತ್ರಗಳೆಂದರೆ ತಂಜಾವೂರಿನಲ್ಲಿ ನಾಯಕರ ಆಳ್ವಿಕೆಯಲ್ಲಿ ಬೃಹದೀಶ್ವರ ದೇವಾಲಯದಲ್ಲಿ ಮೂಡಿಸಿರುವ ಚಿತ್ರಗಳು.

17ನೆಯ ಶತಮಾನದ ಅಂತ್ಯಭಾಗದಿಂದ ಕರ್ನಾಟಕದಲ್ಲಿ ಚಿತ್ರಕಲೆಯ ಅವನತಿ ಮೊದಲಾಯಿತು. ಕನ್ನಡನಾಡಿನ ಪುಣ್ಯವಿಶೇಷದಿಂದ ಭಾರತದಲ್ಲಿ ಚಿತ್ರಕಲೆಯ ಪನರುಜ್ಜೀವನಕಾರ್ಯಕ್ಕೆ ಕನ್ನಡ ಕಲಾವಿದರು ಅಜಂತ ಗುಹೆಗಳಲ್ಲಿ ಬಿಡಿಸಿದ ಕಲಾಕೃತಿಗಳೇ ಸ್ಫೂರ್ತಿಯನ್ನಿತ್ತುವು. 1906ರಲ್ಲಿ ಲೇಡಿ ಹೆರ್ರಿಂಗ್ಯಾಮ್ ಎಂಬಾಕೆ ಭಾರತಕ್ಕೆ ಬಂದು ಅವನೀಂದ್ರನಾಥ ಠಾಕೂರರ ಆದೇಶದಂತೆ ಅಜಂತ ಭಿತ್ತಿಚಿತ್ರಗಳ ರೇಖಾಪ್ರತಿಕೃತಿಗಳನ್ನು ಮಾಡುತ್ತಿದ್ದಾಗ ಈ ಕೆಲಸದಲ್ಲಿ ನೆರವಾದ ಕಲಾವಿದರಲ್ಲಿ ಕೆ.ವೆಂಕಟಪ್ಪನವರು ಪ್ರಮುಖರು. ಅವನೀಂದ್ರ ಠಾಕೂರರಿಂದ ಆರಂಭವಾದ ನವ್ಯಸಂಪ್ರದಾಯದಲ್ಲಿ ಪ್ರಾಚೀನಸತ್ತ್ವ ತುಂಬಲು ಈ ಪ್ರತಿಕೃತಿಗಳು ನೆರವಾದುವು. ಹಳೆಯ ಕನ್ನಡ ಶೈಲಿಗೆ ಹೊಸ ಸಂವಿಧಾನದ ಉಡುಗೆಯನ್ನು ತೊಡಿಸಿ ಕಲಾರಾಧನೆ ಮಾಡಿದವರು ವೆಂಕಟಪ್ಪನವರು. ಬಂಗಾಳಿ ಪದ್ಧತಿಯ ಸ್ಫೂರ್ತಿ ಪಡೆದು ಕರ್ಣಾಟಕದಲ್ಲಿ ಚಿತ್ರಕಲೆ ಈ ಕಾಲದಲ್ಲಿ ಮತ್ತೆ ತಲೆಯೆತ್ತಿತು.

ಈ ಸಂಪ್ರದಾಯವಲ್ಲದೆ ಪಾಶ್ಚಾತ್ಯ ದೇಶಗಳ ಪ್ರಗತಿಯ ಪ್ರಕಾರಗಳನ್ನು ಅಧ್ಯಯನ ಮಾಡಿ ಬೊಂಬಾಯಿಯ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್,ಬೆಂಗಳೂರಿನ ಕೆನ್ ಸ್ಕೂಲ್ ಮುಂತಾದೆಡೆ ತಾಂತ್ರಿಕ ಶಿಕ್ಷಣ ಪಡೆದ ಕಲೆಗಾರರು ಸ್ವತಂತ್ರ ಮನೋವೃತ್ತಿಯಿಂದ ಕಲಾಸೇವೆ ಮಾಡುತ್ತಿದ್ದಾರೆ. ಇವರಲ್ಲಿ ಹಲವರು ನಾಡಿನ ಗೌರವ ಪಡೆದಿದ್ದಾರೆ. ಈ ಬಗ್ಗೆ ಕೆಲವಾರು ವರ್ಷಗಳಿಂದ ಬೆಂಗಳೂರಿನಲ್ಲಿರುವ ಚಿತ್ರಕಲಾವಿದರು ಚಿತ್ರಕಲಾಪರಿಷತ್ ಎಂಬ ಸಂಸ್ಥೆಯನ್ನು ರೂಪಿಸಿಕೊಂಡು ಆ ಸಂಸ್ಥೆಯ ವತಿಯಿಂದ ಕಲಾಶಾಲೆಯೊಂದನ್ನು ನಡೆಸುತ್ತಿದ್ದಾರೆ. ಕರ್ನಾಟಕದ ಕಲೆಗಾರರ ಆಶೋತ್ತರಗಳನ್ನು ಈಡೇರಿಸಿ ಅವರ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲು ಈ ಸಂಸ್ಥೆ ಶ್ರಮಿಸುತ್ತಿದೆ.

ಕರ್ನಾಟಕದ ಧರ್ಮಗಳು: ಕರ್ನಾಟಕದ ಧರ್ಮಗಳು ಬಹುಮಟ್ಟಿಗೆ ಭಾರತದ ಎಲ್ಲಾ ಧರ್ಮಗಳನ್ನೂ ಒಳಗೊಂಡಿದೆ. ಭಾರತದ ಧರ್ಮ ಒಂದು ಧಾರ್ಮಿಕ ಮಹಾಸಾಗರ. ಈ ಸಗರಕ್ಕೆ ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳಿಂದ ಬೇರೆ ಬೇರೆ ಕಾಲಗಳಲ್ಲಿ ಧಾರ್ಮಿಕ ವಿವೇಚನೆಯನ್ನು ಚೇತನಗೊಳಿಸಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳು ವೈದಿಕ, ಶೈವ, ವೈಷ್ಣವ, ತಾಂತ್ರಿಕ, ಶಾಕ್ತೇಯ, ಭೌದ್ಧ, ಜೈನ ಮತ್ತು ಸಿಖ್ ಧರ್ಮಗಳು. ಹೊರಗಿನಿಂದ ಬಂದವು-ಕ್ರೈಸ್ತ, ಇಸ್ಲಾಮ್ ಮತ್ತು ಜರತುಷ್ಟ್ರ ಧರ್ಮಗಳು. ಭಾರತ ಅನಾಧಿಕಾಲದಿಂದ