ಪುಟ:Mysore-University-Encyclopaedia-Vol-4-Part-1.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕದ ವಾಸ್ತುಶಿಲ್ಪ ಹೋನೋಜ ಅರಳಗುಪ್ಪೆಯ ಕೇಶವ ದೇವಾಲಯದಲ್ಲಿ ೨೭ ಶಿಲ್ಪಗಳ ಕೆಳಗೆ ತನ್ನ ಹೆಸರನ್ನು ಹಾಕಿಕೊಂಡಿದ್ದಾನೆ.ಅವುಗಳಲ್ಲಿ ಹನ್ನೆರಡವುಗಳ ಕೆಳಗೆ ಹೋ ಮಾತ್ರ ಇದೆ.

ಹೊಯ್ಸಳರ ಕಾಲದ ಇನ್ನೂ ಅನೇಕ ವಿಖ್ಯಾತ ಶಿಲ್ಪಗಳ ವಿಷಯವನ್ನಿಲ್ಲಿ ಸಂಕ್ಷಿಪ್ತವಾಗಿ ಪರಿಶೀಲಿಸಬಹುದು.ಮಲ್ಲಿತಮ್ಮ ತರೀಕೆರೆ ತಾಲ್ಲೂಕು ಅಮೃತಾಪುರದ ಅಮೃತೇಶ್ವರ ದೇವಾಲಯದ ಸೊಗಸಾದ ಭುವನೇಶ್ವರಿಗಳನ್ನು ೧೧೯೬ರಲ್ಲಿ ರಚಿಸಿದ.ನುಗ್ಗೆಹಳ್ಳಿಯ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ೧೨೪೯ರಲ್ಲಿಯೂ ಮಂಡ್ಯ ಜಿಲ್ಲೆಯ ಗೋವಿಂದನ ಹಳ್ಳಿಯ ಪಂಚಲಿಂಗ ದೇವಾಲಯದಲ್ಲಿಯೂ ಹಾರನ ಹಳ್ಳಿಯ ಕೇಶವ ದೇವಾಲಯದಲ್ಲಿ ೧೨೩೪ ರಲ್ಲಿಯೂ ಸೋಮನಾಥಪುರದ ಕೇಶವ ದೇವಾಲಯದಲ್ಲಿ ೧೨೬೮ರಲ್ಲಿಯೂ ಈತ ನಿರ್ಮಿಸಿದ ಅನೇಕ ಅಮೋಘ ಶಿಲ್ಪಗಳಿವೆ. ಸೋಮನಾಥಪುರದ ಕೇಶವ ದೇವಾಲಯ ಒಂದರಲ್ಲಿಯೇ ೪೦ ವಿಗ್ರಹಗಳ ಕೆಳಗೆ ಇವನ ಹೆಸರಿದೆ.

ಚೋಳರ ವಾಸ್ತುಶಿಲ್ಪ:ಚೋಳರ ವಾಸ್ತುಶಿಲ್ಪ ಕರ್ನಾಟಕದಲ್ಲಿ ವಿರಳವೆಂದು ಹೇಳಬಹುದು.ಕೋಲಾರ ಜಿಲ್ಲೆಯ ನಂದಿಯ ಭೋಗನಂದೀಶ್ವರ ದೇವಾಲಯದಲ್ಲಿ ಸ್ವಲ್ಪ ಮಟ್ಟಿಗೆ ಚೋಳ ಶೈಲಿಯ ಕಟ್ಟಡ ಕಾಣಬಹುದು.ಈ ದೇವಸ್ತಾನ ಬಾಣ ವಂಶಕ್ಕೆ ಸೇರಿದ ರತ್ನಾವಳಿಯಿಂದ ಪ್ರಾರಂಭಿಸಲ್ಪಟ್ಟಿತು.ಆದರೆ ಈ ದೇವಾಲಯದ ಬಸವ ಮಂಟಪ ರಾಜೇಂದ್ರ ಚೋಳನ ಕಾಲದಲ್ಲಿ ಸ್ತಾಪಿತವಾಯಿತು.ಬೆಂಗಳೂರಿನ ಸಮೀಪದಲ್ಲಿರುವ ಬೇಗೂರಿನ ಸುಮಾರು ೧೧ನೆಯ ಶತಮಾನದ ದೇವಾಲಯಗಳಲ್ಲಿ ಚೋಳರ ಶಿಲ್ಪದ ಹೋಲಿಕೆಯನ್ನುಳ್ಳ ಅನೇಕ ಸುಂದರ ವಿಗ್ರಹಗಳಿವೆ.ಮಾಲಿಂಗಿಯ ಜನಾರ್ಧನ ದೇವಾಲಯ ರಾಜರಾಜನ ಕಾಲದಲ್ಲಿ ರಚಿತವಾಯಿತು.ನೆಲಮಂಗಲ ತಾಲ್ಲೂಕು ಬಿನ್ನಮಂಗಲದ ಮುಕ್ತಿನಾಥ ದೇವಾಲಯ ಒಂದನೆಯ ಕುಲೋತ್ತುಂಗನ ಕಾಲದಲ್ಲಿ ಕಟ್ಟಲ್ಪಟ್ಟಿತು.

ವಿಜಯನಗರ ಕಾಲ:ಹಂಪಿಯಲ್ಲಿರುವ ಮಹಾನವಮಿ ದಿಬ್ಬ ಹಿಂದೆ ಸಿಂಹಾಸನ ಜಗತಿಯಾಗಿತ್ತೆಂದೂ ಒರಿಸ್ಸದ ರಾಜನನ್ನು ಗೆದ್ದ ಜ್ನಾಪಕಾರ್ಥವಾಗಿ ಅದನ್ನು ಕೃಷ್ಣದೇವರಾಯ ಕಟ್ಟಿಸಿದನೆಂದೂ ಪೇಸ್ ಎಂಬ ವಿದೇಶಿ ಹೇಳಿದ್ದಾನೆ.ಈ ಜಗತಿಯ ಕೆಳಭಾಗ ಸುಂದರ ಶಿಲ್ಪಕೃತಿಗಳಿಂದ ಅಲಂಕರಿಸಲ್ಪಟ್ಟಿದೆ.ಸಿಂಹಾಸನದ ಜಗತಿಯಂತೆಯೇ ಕೃಷ್ಣದೇವರಾಯ ಹಜಾರ ರಾಮಸ್ವಾಮಿ ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದ.ಇದರ ಕಂಬಗಳಲ್ಲಿ ಸುಂದರ ವಿಗ್ರಹಗಳಿವೆ.

ಕೃಷ್ಣದೇವರಾಯ ಉದಯಗಿರಿಯಿಂದ ತಂದ ಕೃಷ್ಣ ವಿಗ್ರಹಕ್ಕಾಗಿ ಕೃಷ್ಣಸ್ವಾಮಿ ದೇವಾಲಯವನ್ನು ೧೫೧೩ರಲ್ಲಿ ಕಟ್ಟಿಸಿದ.ಆತ ಸುಪ್ರಸಿದ್ಧ ವಿಠಲಸ್ವಾಮಿ ದೇವಾಲಯವನ್ನು ಪ್ರಾರಂಭಿಸಿದನೆಂದು ಶಾಸನವೊಂದು ತಿಳಿಸುತ್ತದೆ.ಈ ಕೆಲಸ ಆಚ್ಯುತರಾಯ ಮತ್ತು ಸದಾಶಿವರಾಯರ ಕಾಲದಲ್ಲಿ ಮುಂದುವರಿದರೂ ಅಪೂರ್ಣವಾಗಿಯೇ ಉಳಿಯಿತು.ಮಹಮ್ಮದೀಯರು ವಿಜಯನಗರವನ್ನು ಮುತ್ತಿದಾಗ ಇದರ ಸೊಗಸಾದ ಶಿಲ್ಪ ಮತ್ತು ಕಂಬಗಳನ್ನು ಒಡೆದುಹಾಕಿದರು.ಇದರ ಬಳಿ ಇರುವ ಕಲ್ಲಿನ ರಥವೇನೋ ಹಾಗೆಯೇ ಉಳಿದುಬಂದಿದೆ.

ಈ ಕಾಲದ ಪಂಪಾವತಿ ದೇವಾಲಯದ ಕೆಲವು ಭಾಗಗಳು ವಿಜಯನಗರ ಸ್ಥಾಪನೆಗಿಂತ ಮುಂಚೆಯೇ ಇದ್ದುವೆಂದು ಲಾಂಗ್ ಹರ್ಸ್ಟ್ ತಿಳಿಸುತ್ತಾನೆ.ಈ ದೇವಾಲಯದ ರಂಗಮಂಟಪವನ್ನು ಕೃಷ್ಣದೇವರಾಯ ಕಿರೀಟಧಾರಣೆಯ ಜ್ನಾಪಕಾರ್ಥವಾಗಿ ೧೫೦೯-೧೦ರಲ್ಲಿ ಕಟ್ಟಿಸಿದನೆಂದು ಶಾಸನ ತಿಳಿಸುತ್ತದೆ.ಈಗಲೂ ಈ ದೇವಾಲಯ ಹಾಳುಹಂಪಿಯಲ್ಲಿ ಕರ್ಣಾಟಕದ ಹಿರಿಮೆಯನ್ನು ಎತ್ತಿ ತೋರಿಸುವಂತೆ ಕಾಣುತ್ತದೆ.

ಶ್ರೀರಂಗಂ,ಲೇಪಾಕ್ಷಿ,ತಾಡಪತ್ರಿ ಮೊದಲಾದ ಸ್ಥಳಗಳಲ್ಲಿ ವಿಜಯನಗರದ ಕಟ್ಟಡಗಳು ಉಳಿದುಬಂದಿವೆ.ಶ್ರೀರಂಗದ ಕುದುರೆ ಮಂಟಪ ಪ್ರಖ್ಯಾತವಾದುದು.

ಹಿಂದೂ-ಮುಸ್ಲಿಂ ವಾಸ್ತು ಶಿಲ್ಪ:ಹಿಂದೂ-ಮುಸ್ಲಿಂ ರೀತಿಯ ಕಟ್ಟಡಗಳು ಕರ್ಣಾಟಾಕದ ಗುಲ್ಬರ್ಗ,ಬಿದರೆ,ಬಿಜಾಪುರ ಮೊದಲಾದ ಪ್ರದೇಶಗಳಲ್ಲಿ ರೂಢಿಗೆ ಬಂದವು.ಬಹಮನೀ ರಾಜಧಾನಿಯಾದ ಬಿದರೆಯಲ್ಲಿ ಮಹಮೂದ್ ಗವಾನ್ ೩ನೆಯ ಮಹಮ್ಮದ್ ಷಾನ ಮಂತ್ರಿಯಾಗಿದ್ದಾಗ ಕಟ್ಟಿಸಿದ ಮದ್ರಸ ಅಥವಾ ಕಾಲೇಜಿನ ಕಟ್ಟಡ ಬಹಳ ಪ್ರಮುಖವಾದುದು.ಅದರ ಎತ್ತರವಾದ ಗುಮ್ಮಟಗಳು,ಉಪನ್ಯಾಸಕ್ಕೆ ಉಪಯೋಗಿಸುತ್ತಿದ್ದ ಕೋಣೆಗಳು,ಪ್ರಾರ್ಥನಾಮಂದಿರ,ಅಧ್ಯಾಪಕರ ಕೋಣೆಗಳು,೩೦೦೦ ಗ್ರಂಥಗಳನ್ನು ಹೊಂದಿದ್ದ ಗ್ರಂಥಾಲಯ ಈಗಲೂ ಉಳಿದುಬಂದಿದೆ.

ಬಿದರೆಯಲ್ಲಿರುವ ರಂಗೀನ್ ಮಹಲ್ ಮತ್ತೊಂದು ಉತ್ತಮ ಕಟ್ಟಡ.ಇದರಲ್ಲಿ ಉಪಯೋಗಿಸಿರು ವ ಅನೇಕ ಬಣ್ಣದ ಹೆಂಚುಗಳು,ಮರದ ಕತ್ತನೆ ಕೆಲಸ ಮತ್ತು ಕಪ್ಪೆಚಿಪ್ಪಿನ ಅಲಂಕಾರ ಇದಕ್ಕೆ ಈ ಹೆಸರನ್ನು ತಂದಿದೆ.ಇದನ್ನು ಅಲಿಬರೀದ್(೧೫೪೨-೮೦)ಕಟ್ಟಿಸಿದ.

ಭಾರತದಲ್ಲೇ ಅತ್ಯಂತ ಆಕರ್ಷಣೀಯವಾದ ಕಟ್ಟಡವೆಂದರೆ ಗುಲ್ಬರ್ಗ ಕೋಟೆಯಲ್ಲಿರುವ ಮಸೀದಿ.ಇದನ್ನು ಫಿರೋಜ್ ಷಾ ಬಹಮನಿಯಕಾಲದಲ್ಲಿ ೧೩೬೭ರಲ್ಲಿ ಕಟ್ಟಲಾಯಿತು.ಸ್ಪೇನ್ ದೇಶದ ಕಾರ್ಡೋವಾದಲ್ಲಿರುವ ದೊಡ್ಡ ಮಸೀದಿಯೇ ಇದಕ್ಕೆ ಮಾದರಿ,ಇದರ ಅಗಲ ಮತ್ತು ಉದ್ದ ೨೧೬*೧೭೬ ಅಡಿಗಳು.ವಿಚಿತ್ರವೆಂದರೆ ಮೇಲ್ಛಾವಣಿಯಿಂದ ಮುಚ್ಚಲ್ಪಟ್ಟಿದೆ.ಇದನ್ನು ಕಟ್ಟಿದ ಶಿಲ್ಪಿ ರಫೀ ಉತ್ತರ ಪರ್ಷಿಯದ ಕಾಜ್ವಿನ್ ಎಂಬ ಪಟ್ಟಣದಿಂದ ಬಂದವ.