ಪುಟ:Mysore-University-Encyclopaedia-Vol-4-Part-1.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಮೆಣಸು ಮುಂತಾದವು ಇತರ ಬೆಳೆಗಳು. ಚಿಕ್ಕೋಡಿ,ಹುಕ್ಕೇರಿಗಳಲ್ಲಿ ಜೋಳ ಬೆಳೆಯ ಪ್ರದೇಶ ಒಟ್ಟು ಸಾಗುವಳಿ ನೆಲದ ಶೇ.28 ರಷ್ಠು. ಚಿಕ್ಕೋಡಿಯಲ್ಲಿ ಎರಡನೆಯ ಸ್ಥಾನ ಹೊಗೆಸೊಪ್ಪಿಗೆ (ಶೇ.16.9). ಹುಕ್ಕೇರಿಯಲ್ಲಿ ಎಣ್ಣೆಬೀಜದ್ದು ಎರಡನೆಯ ಸ್ಥಾನ (ಶೇ.23.9) ಸಜ್ಜೆ, ತೊಗರಿ, ಹಣ್ಣು, ತರಕಾರಿ ಇತರ ಬೆಳೆಗಳು. ಉತ್ತರ ಮೈದಾನದ ನಡುಪಟ್ಟಿಯ ಪ್ರದೇಶದಲ್ಲಿ ಒಟ್ಟಿನಲ್ಲಿ ಸಾಗುವಳಿಗೆ ಒದಗಿ ಬರದ ನೆಲ ಶೇ.10 ಕ್ಕಿಂತ ಕಡಿಮೆ. ಗದಗಿನ ಪಶ್ಚಿಮದಲ್ಲಿರವ ಡಂಬಳ ಬೆಟ್ಟ ಮುಂತಾದ ಕೆಲವು ಪ್ರದೇಶಗಳಲ್ಲಿ ಮಾತ್ರ ಸಾಗುವಳಿ ಭೂಮಿ ಕಡಿಮೆ. ಮುಂಗಾರು(ಖರೀಫ್) ಮತ್ತು ಹಿಂಗಾರು (ರಾಬಿ) ಬೆಳೆಗಳೆರಡೂ ಬೆಳೆಯುವುದಾದರೂ ವರ್ಷಕ್ಕೆ ಎರಡು ಬೆಳೆ ತೆಗೆಯುವ ನೆಲ ಕಡಿಮೆ, ಉತ್ತರ ಗೋಕಾಕ, ಉತ್ತರ ಮುಧೋಳ, ಆಗ್ನೇಯ ಮತ್ತು ಉತ್ತರ ಜಮಖಂಡಿ, ರಾಯಬಾಗ್, ಉತ್ತರ ಅಥಣಿ, ಉತ್ತರ ಬಿಜಾಪುರ, ಬಾಗೇವಾಡಿಯ ನಡುಭಾಗ, ಮುದ್ದೇಬಿಹಾಳ, ಪಶ್ಚಿಮ ಸಿಂದಗಿ, ಇಂಡಿ ಬಹುಭಾಗ-ಇಲ್ಲೆಲ್ಲ ಬಾವಿಯ ನೀರಾವರಿ ವ್ಯವಸ್ಥೆಯುಂಟು. ಇಲ್ಲಿ ಬೇಸಾಯ ಬಹುತೇಕ ಜೀವನಾಧಾರಕ್ಕಾಗಿ, ಜೋಳ, ಸಜ್ಜೆ, ಗೋದಿ, ಹತ್ತಿ, ಎಣ್ಣೆಬೀಜ, ತೊಗರಿ, ಮೆಣಸಿನಕಾಯಿ, ಬಾಳೆ, ಗೆಣಸು ಮತ್ತು ಈರುಳ್ಳಿ ಇವು ಇಲ್ಲಿಯ ಬೆಳೆಗಳು. ಮುಧೋಳ, ಬಾದಾಮಿ, ಗೋಕಾಕ, ರಾಮದುರ್ಗ, ಬಾಗಲಕೋಟೆ, ಹುನಗುಂದ ಈ ಪ್ರದೇಶಗಳಲ್ಲಿ ಸಾಗುವಳಿಯಲ್ಲಿರುವ ಭೂಮಿಯಲ್ಲಿ ಶೇ.25 ರಿಂದ ಶೇ.40ರ ವರೆಗೆ ಜೋಳದ ಬೆಳೆಗೆ ಮೀಸಲಾಗಿದೆ. ಸಜ್ಜೆ, ಗೋದಿ, ಹತ್ತಿ, ಎಣ್ಣೆಬೀಜ, ತೊಗರಿ, ಹಣ್ಣು ಮತ್ತು ತರಕಾರಿಗಳೂ ಬೆಳೆಯುತ್ತವೆ. ದಾವಣಗೆರೆ ಮತ್ತು ಹರಪನಹಳ್ಳಿಗಳಲ್ಲೂ ಜೋಳವೇ ಪ್ರಥಮ ಬೆಳೆ. ಹಡಗಲಿ, ಕೊಡ್ಲಿಗಿಗಳಲ್ಲಿ ಎಣ್ಣೆ ಬೀಜ ಪ್ರಧಾನ. ದಾವಣಗೆರೆಯಲ್ಲಿ ರಾಗಿಯೂ ಹರಪನಹಳ್ಳಿಯಲ್ಲಿ ಎಣ್ಣೆ ಬೀಜವೂ ಉಳಿದೆರಡು ಪ್ರದೇಶಗಳಲ್ಲಿ ಜೋಳವೂ ಎರಡನೆಯ ಸ್ಥಾನ ಗಳಿಸುತ್ತವೆ. ತೊಗರಿ, ಹತ್ತಿ, ಬತ್ತ, ಸಜ್ಜೆ, ಸಂಬಾರ, ಹಣ್ಣು ಮತ್ತು ತರಕಾರಿಗಳನ್ನೂ ಬೆಳೆಯುತ್ತಾರೆ. ಗದಗ ನರಗುಂದ, ನವಲಗುಂದಗಳಲ್ಲಿಯ ಬೆಳೆಗಳು ಹತ್ತಿ, ಜೋಳ, ಗೋದಿ, ದ್ವಿದಳ ಧಾನ್ಯ, ಎಣ್ಣೆಬೀಜ, ಹಣ್ಣು, ತರಕಾರಿ. ಉತ್ತರ ಮೈದಾನದ ಪೂರ್ವ ಪ್ರದೇಶದಲ್ಲಿ ಬೇಸಾಯಕ್ಕೊಳಪಡದ ಭೂಮಿಯ ಪ್ರಮಾಣ ಹೆಚ್ಚು (ಶೇ.20 ರಿಂದ 59 ರ ವರೆಗೆ). ಈಶಾನ್ಯ ಭಾಗದ ಚಿಂಚೋಳಿ ಯಾದಗಿರಿಗಳು ಜೋಳ, ಸಜ್ಜೆ, ಬತ್ತ, ಗೋದಿ, ಹತ್ತಿ, ಎಣ್ಣೆಬೀಜ, ದ್ವಿದಳದಾನ್ಯ, ಸಂಬಾರ ಬೆಳೆಗಳನ್ನು ಬೆಳೆಯುತ್ತವೆ. ಶಾಂತಪುರ, ಭಾಲ್ಕಿ, ಹುಮನಾಬಾದ್, ಆಳಂದು, ಗುಲ್ಬರ್ಗ, ಚಿತ್ತಾಪುರ, ಸೆರಂಗಳಲ್ಲೂ ಮೊದಲ ಸ್ಥಾನ ಜೋಳಕ್ಕೆ, ದ್ವಿದಳದಾನ್ಯ, ಎಣ್ಣೆಬೀಜ ಆನಂತರದ ಮುಖ್ಯ ಬೆಳೆಗಳು.ಇತರ ಬೆಳೆಗಳೂ ಉಂಟು. ಆದರೆ ಹತ್ತಿಯಲ್ಲ. ತುಂಗಭದ್ರ ಪ್ರದೇಶದ ಹೊಸಪೇಟೆ, ಬಳ್ಳಾರಿ, ಸಿಂಧನೂರು, ಸಿರಗುಪ್ಪ, ಮಾನ್ವಿ, ರಾಯಚೂರುಗಳಲ್ಲಿ ಸಾಗುವಳಿ ಭೂಮಿಯ ಅರ್ಧ ಭಾಗದಲ್ಲಿ ಹತ್ತಿ ಬೆಳೆಯುತ್ತಾರೆ. ಉಳಿದ ಬೆಳೆಗಳನ್ನೆಲ್ಲ ಬೇರೆಯೆಡೆಗಳಂತೆಯೇ ಬೆಳೆಯುತ್ತಾರೆ. ಉತ್ತರ ಮೈದಾನದ ಕೆಲವು ದೊಡ್ಡ ಪಟ್ಟಣಗಳ ವಿನಾ ಉಳಿದೆಲ್ಲ ಪ್ರದೇಶಗಳಲ್ಲೂ ವ್ಯವಸಾಯವಲಂಬಿ ಜನರದೇ ಹೆಚ್ಚು ಸಂಖ್ಯೆ. ಎಲ್ಲ ಕಡೆಗಳಲ್ಲೂ ಶೇ.57ಕ್ಕಿಂತ ಹೆಚ್ಚು (ಇಡೀ ರಾಜ್ಯದ ಪ್ರಮಾಣ ಶೇ.76.4). ಉತ್ತರ ದಕ್ಷಿಣ ಮೈದಾನಗಳೆರಡರಲ್ಲೂ ಭೂಮಿ ಒಡೆತನವುಳ್ಳ ರೈತರ ಪ್ರಮಾಣವೇ ಅಧಿಕ. ಉತ್ತರ ಮೈದಾನದಲ್ಲಿ ಸಾಮನ್ಯವಾಗಿ ಎಲ್ಲ ಹಳ್ಳಿಗಳೂ ಆಹಾರ ವಿಚಾರದಲ್ಲಿ ಕೊರತೆಯ ಪ್ರದೇಶಗಳು.ಜೋಳದ ಬೆಳೆ ಚೆನ್ನಾಗಿ ಆದ ವರ್ಷಗಳಲ್ಲಿ ಪರಿಸ್ಥಿತಿ ಉತ್ತಮ.ಹತ್ತಿ ಮತ್ತು ಕಡಲೆಕಾಯಿಯಿಂದ ಬರುವ ಹಣದಿಂದ ಆಹಾರ ಪೂರೈಕೆಯಾಗುತ್ತದೆ. ದಕ್ಷಿಣ ಮೈದಾನ ಮುಖ್ಯವಾಗಿ ಕೆರೆಗಳ ಸೀಮೆ. ಇದು ಹಳೆಯ ಮೈಸೂರು ರಾಜ್ಯ ಪ್ರದೇಶ.ವಿದ್ಯುದುತ್ಪಾದನೆ, ಕೈಗಾರಿಕೆ ಮತ್ತು ನೀರಾವರಿ ಅಭಿವೃದ್ಧಿ ಕಾರ್ಯಗಳು ಹಿಂದಿನಿಂದಲೂ ಇಲ್ಲಿ ನಡೆದಿವೆ. ಶಿವಸಮುದ್ರದ ಬಳಿಯಿಂದ ಉತ್ತರಕ್ಕೆ ವಿಶ್ವೇಶ್ವರಯ್ಯ ನಾಲೆಯ ಗದ್ದೆ ಬಯಲುಗಳಲ್ಲಿ ಕಬ್ಬು ಬತ್ತಗಳೂ ಅಲ್ಲಲ್ಲಿ ತೆಂಗುಗಳೂ ಹಬ್ಬಿವೆ. ಕೆರೆಗಳ ಬೇಸಾಯ ಸಾರ್ವತ್ರಿಕ. ಕೆರೆಗಳ ಸೀಮೆ 51800 ಚ.ಕಿ.ಮೀ ವಿಸ್ತಾರದಲ್ಲಿ ಹರಡಿದೆ. ಅನೇಕ ಕೆರೆಗಳ ದುರಸ್ತಿಯಲ್ಲಿಲ್ಲ. ಈ ಕೆರೆಗಳು ಹಿಂದಿನ ಶತಮಾನಗಳ ಸಾಮೂಹಿಕ ಕಾರ್ಯಶೀಲತೆಯ ಸಂಕೇತಗಳು. ದಕ್ಷಿಣ ಮೈದಾನ ಪ್ರದೇಶದಲ್ಲಿ ಸಾಗುವಳಿಗೆ ಒಳಪಡುವ ಭೂಮಿ ಸಾಮಾನ್ಯವಾಗಿ ಅರ್ಧದಷ್ಟಿದೆ. ಪಾವಗಡ, ಕೊಳ್ಳೇಗಾಲ ಮತ್ತು ಗುಬ್ಬಿಯಂಥ ಗುಡ್ಡನಾಡುಗಳಲ್ಲಿ ಶೇ.90ರ ವರೆಗೂ ಇದು ಏರಿರುವುದುಂಟು. ಮೈಸೂರಿನ ಸುತ್ತಣ ಮೂರು ತಾಲ್ಲೂಕುಗಳಲ್ಲಿ ಮಾತ್ರ ಶೇ.70ಕ್ಕಿಂತ ಹೆಚ್ಚು ಭೂಮಿ ಸಾಗುವಳಿಯಲ್ಲಿದೆ. ದಕ್ಷಿಣ ಮೈದಾನದ ದಕ್ಷಿಣಾರ್ಧದಲ್ಲಿ ಉತ್ತರಾರ್ಧದಲ್ಲಿರುವುದಕ್ಕಿಂತ ಕೆರೆಗಳ ಸಂಖ್ಯೆ ಹೆಚ್ಚು. ಅರೆಮಲೆನಾಡಿನ ಬಳಿಯ ಪಶಿಮ ಭಾಗದಲ್ಲಿ ಪೂರ್ವ ಭಾಗಕ್ಕಿಂತ ಕಡಿಮೆ. ಬೆಟ್ಟಸೀಮೆಗಳಾದ ಕನಕಪುರ, ಬಂಗಾರಪೇಟೆ, ಚಿಂತಾಮಣಿ ತಾಲ್ಲೂಕುಗಳಲ್ಲೂ ಹೆಚ್ಚು ಕೆರೆಗಳಿಲ್ಲ. ಉತ್ತರ ಮಧ್ಯಭಾಗದಲ್ಲಿ ಗೌರಿಬಿದನೂರಿನಿಂದ ಚಿಕ್ಕನಾಯಕನಹಳ್ಳಿಯ ವರೆಗೆ ಇವು ಅಧಿಕ. ದಕ್ಷಿಣ ವಿಶ್ವೇಶ್ವರಯ್ಯ ನಾಲೆಯ ಪ್ರದೇಶದ ದಕ್ಷಿಣ ಭಾಗದಲ್ಲೂ ಕಾವೇರಿ ಕಣಿವೆಯ ಬಹುಭಾಗದಲ್ಲೂ ಚನ್ನರಾಯಪಟ್ಟಣ ಮತ್ತು ನಾಗಮಂಗಲದ ಸುತ್ತಲೂ ತುಂಬ ಉತ್ತರದಲ್ಲೂ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ. ಬೆಂಗಳೂರಿನ ಹತ್ತಿರದ ತರಕಾರಿ ಕ್ಷೇತ್ರಗಳನ್ನೂ ಚಿಕ್ಕಬಳ್ಳಾಪುರ ಪ್ರದೇಶದ ಆಲೂಗೆಡ್ಡೆ ಪ್ರದೇಶವನ್ನೂ ಈ ಗುಂಪಿಗೆ ಸೇರಿಸಬಹುದು. ಸಾಗುವಳಿಗೆ ಒಳಪಟ್ಟ ನೆಲದಲ್ಲಿ ಹೊಲಗಳ ಪ್ರಮಾಣ ಅಧಿಕ. ಇಲ್ಲಿ ರಾಗಿ ಬೆಳೆಯುವುದೇ ಹೆಚ್ಚು. ಸಾಮಾನ್ಯವಾಗಿ ಜೋಳ, ಕಡಲೆ, ಅವರೆ, ತೊಗರಿ, ಎಳ್ಳು, ಹುಚ್ಚೆಳ್ಳು ಮತ್ತು ಹರಳುಗಳೊಂದಿಗೆ ಇದನ್ನು ಬೆಳೆಯುತ್ತಾರೆ. ಇದರ ಬಿತ್ತನೆಯಾಗುವುದು ಜುಲೈ ತಿಂಗಳಲ್ಲಿ ನಡುನಡುವಣ ಇತರ ಬೆಳೆಗಳ ಸಾಲುಗಳನ್ನು ಬಿಟ್ಟು ರಾಗಿಯನ್ನು ಕಟಾವು ಮಾಡುವುದು ಡಿಸೆಂಬರಿನಲ್ಲಿ. ಉಳಿದ ಬೆಳೆಯ ಫಸಲು ಸ್ವಲ್ಪ ನಿಧಾನ. ಜೋಳ ಮತ್ತು ಸಜ್ಜೆಯೂ ಮುಖ್ಯ ಬೆಳೆಗಳು. ನೆಲಗಡಲೆಯನ್ನೂ ಕೆಲವು ಕಡೆಗಳಲ್ಲಿ ಹೊಗೆಸೊಪ್ಪನ್ನೂ ಬೆಳೆಯುವುದುಂಟು.ಇವು ನಗದು ಬೆಳೆಗಳು. ತರಿ ಜಮೀನಿನ ಮುಖ್ಯ ಫಸಲೆಂದರೆ ಬತ್ತ.ಡಿಸೆಂಬರ್-ಜನವರಿ ಇದರ ಕೊಯ್ಲು ಕಾಲ. ಕಬ್ಬನ್ನೂ ಬೆಳೆಯುವುದುಂಟು. ಕೆಲವು ವಿಶಿಷ್ಠ ಪ್ರದೇಶಗಳಲ್ಲಿ ಹಿಪ್ಪುನೇರೆಳೆ ಮುಖ್ಯ ಬೆಳೆ. ಬತ್ತದ ಫಸಲು ತೆಗೆದ ಮೇಲೆ ಚಳಿಗಾಲದ ಬೆಳೆಯಾಗಿ ಕಡಲೆ, ಹುರುಳಿ ಮುಂತಾದವನ್ನು ಬೆಳೆಯಬಹುದು.ಆದರೆ ಇವು ಅಷ್ಟೇನೂ ಮುಖ್ಯವಲ್ಲ. ಕೆಲವು ಕಡೆಗಳಲ್ಲಿ ರಾಗಿಗೂ ನೀರಾವರಿಯನ್ನು ಬಳಸುವುದುಂಟು. ಇದರ ಫಸಲು ಇಳುವರಿ ಖುಷ್ಕಿ ರಾಗಿಗಿಂತ ಹೆಚ್ಚು. ಕೆರೆಯ ಅಥವಾ ಬಾವಿಯ ಕೆಳಗಿನ ತೋಟಗಳು ತೆಂಗು, ಅಡಕೆ, ವೀಳೆಯದೆಲೆ, ನಿಂಬೆ ಮತ್ತು ಮೆಣಸುಗಳಿಗೆ ಮೀಸಲು, ನದಿಪಾತ್ರದ ಒಣಮರುಳು ಬಯಲುಗಳಲ್ಲಿ ಕಲ್ಲಂಗಡಿ ಮುಂತಾದವನ್ನು ಬೆಳೆಯುವುದುಂಟು. ಇವು ನದಿಪಾತ್ರದ ಅಡಿಯ ನೀರನ್ನು ಬಳಸಿಕೊಳ್ಳೂತ್ತವೆ. ಬೆಂಗಳೂರಿನಂಥ ನಗರ ಪ್ರದೇಶಗಳ ಸುತ್ತ ತರಕಾರಿಗಳಿಗಾಗಿ ನೀರಾವರಿ ಬಳಕೆಯುಂಟು. ದಕ್ಷಿಣ ಮೈದಾನದ ಮುಖ್ಯ ಬೆಳೆ ರಾಗಿ ಬತ್ತಗಳಾದರೂ ಉತ್ತರ ಮೈದಾನದಲ್ಲಿ ಜೋಳವು ಪಶ್ಚಿಮ ಕರ್ನಾಟಕದಲ್ಲಿ ಬತ್ತವೂ ಸಾಮಾನ್ಯವಾಗಿ ಪ್ರಧಾನವಾಗಿರುವಷ್ಟು