ಪುಟ:Mysore-University-Encyclopaedia-Vol-4-Part-1.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಇತಿಹಾಸ

ಪೂರ್ವ ಪಶ್ಚಿಮ ಸಮುದ್ರಗಳ ನಡುವಣ ಇಡೀ ಭೂಭಾಗಕ್ಕೆ ಒಡೆಯರಾಗಿದ್ದರು. ಉದಾರನೀತಿಯ ವಿಶಾಲ ಮನೋಭಾವದ ಇವರು ಆಡಳಿತದಲ್ಲಿ ಜನಜೀವನ ಪ್ರಗತಿದಾಯಕವಾಗಿತ್ತು. ಅವಿರತಯುದ್ಧಗಳಿದ್ದಾಗ್ಯೂ ಸಾಮಾನ್ಯಜನತೆ ತಮ್ಮ ವೃತ್ತಿಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿತ್ತು. ಆಡಳಿತದಲ್ಲಿ ಅನಾವಶ್ಯಕ ಕೇಂದ್ರೀಕರಣವಿಲ್ಲದಿದ್ದು, ಪ್ರದೇಶಾಧಿಕಾರಿಗಳೂ ಸಾಮಂತರೂ ತಂತಮ್ಮ ಕ್ಷೇತ್ರಗಳಲ್ಲಿ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. ಗ್ರಾಮಾಡಳಿತದಲ್ಲಿ ವಿಕೇಂದ್ರೀಕರಣದಿಂದ ಉತ್ತಮ ಪರಿಣಾಮವುಂಟಾಯಿತು. ತಮ್ಮ ನಿತ್ಯಜೀವನ ಕ್ರಮವನ್ನು ಆವಶ್ಯಕತೆಗನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವಾಯಿತು. ಆಗ್ರಹಾರಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು. ಸೀಮಿತವಾಗಿಯಾದರೂ ಸ್ವಯಮಾಡಳಿತ ಪ್ರಜ್ಞೆ, ಪ್ರಜೆಗಳಲ್ಲಿ ವೃದ್ಧಿ ಹೊಂದಿ, ರಾಜ್ಯದ ಪ್ರಗತಿಗೆ ಸಾಧಕವಾಯಿತು. ಪರಸ್ಪರ ಸಹಕಾರೀ ಪ್ರಜ್ಞೆಯಿಂದ ಮೂಡಿದ ಸ್ವಯಮಾಡಳಿತ ಸಂಸ್ಥೆಗಳಿಗೆ ಈ ಮೊದಲೇ ಉಕ್ತವಾದ ಅಯ್ಯಾವೊಳೆಯ ಐನೂರ್ವರ ಸಂಘ ಉತ್ತಮ ನಿದರ್ಶನ. ಐಹೊಳೆಯಲ್ಲಿ ಐನೂರು ಮಂದಿ ಸದಸ್ಯರಿಂದ ಮೊದಲಿಗೆ ಸ್ಥಾಪಿತವಾದ ಇದು ವ್ಯಾಪಾರಿಗಳ, ವೃತ್ತಿಕಾರರ ಮತ್ತು ಕೆಲಸಗಾರರ ಸಂಸ್ಥೆಯಾಗಿದ್ದು ಇಡೀ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ದೇಶ ಗುಜುರಾತುಗಳಲ್ಲೂ ಪ್ರಾಬಲ್ಯ ಪಡೆದಿತ್ತು. ಕೈಗಾರಿಕೆಗಳಲ್ಲಿ ತೊಡಗಿದ್ದವರಿಗೆ ರಕ್ಷಣೆ ನೀಡಿ ಉತ್ತೇಜನಗೊಳಿಸುವುದೇ ಈ ಸಂಘದ ಧ್ಯೇಯವಾಗಿತ್ತು. ದೇಶ ವಿದೇಶಗಳಲ್ಲಿ ವ್ಯಾಪಾರ ನಡೆಸುತ್ತಾ ಭಾರತದ ಆರ್ಥಿಕ ಚಟುವಟಿಕೆಗೆ ಉತ್ತಮ ಉತ್ತೇಜನ ಕೊಡುವ ಸಂಸ್ಥೆ ಇದಾಗಿತ್ತು. ಯಾದವ ವಂಶದ ಆಳ್ವಿಕೆಯಲ್ಲಿ ಅಂಥ ಪ್ರಮುಖ ಘಟನೆಗಳಾವುವೂ ಸಂಭವಿಸಿಲ್ಲ. ೧೨ನೆಯ ಶತಮಾನದ ಅಂತ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಸ್ವತಂತ್ರರಾದ ಯಾದವರಲ್ಲಿ ೫ನೆಯ ಭಿಲ್ಲಮ ಮತ್ತು ೨ನೆಯ ಸಿಂಘಣರನ್ನುಳಿದರೆ ಇತರರು ದುರ್ಬಲರಾಗಿದ್ದರು. ಅವರ ಶಕ್ತಿಸಾಮರ್ಥ್ಯ ಮತ್ತು ಐಶ್ವರ್ಯಗಳೆಲ್ಲ ಹೊಯ್ಸಳ ರಾಜರೊಂದಿಗೆ ಹೋರಾಡುವುದರಲ್ಲೇ ವ್ಯಯವಾಯಿತು. ಅವರ ಪತನದಿಂದ ಉತ್ತರದ ಮುಸ್ಲಿಮರಿಗೆ ಕರ್ನಾಟಕದಲ್ಲಿ ಯಾವ ತಡೆಯೂ ಇಲ್ಲದಂತಾಯಿತು.

ಆದರೆ ದಕ್ಷಿಣ ಕರ್ನಾಟಕದಲ್ಲಿ ಕಲ್ಯಾಣ ಚಾಳುಕ್ಯರ ಉತ್ತರಾಧಿಕಾರಿಗಳಾದ ಹೊಯ್ಸಳರ ಕಾಲ ಸ್ಮರಣೇಯವಾದುದು. ಆರಂಭದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನನುಭವಿಸಿದರೂ ಕಲ್ಯಾಣ ಚಾಳುಕ್ಯರ ಸಾಮಂತರಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಬಾಳಬೇಕಾಗಿದ್ದರೂ ವಿಷ್ಣುವರ್ಧನ, ಇಮ್ಮಡಿಬಲ್ಲಾಳ, ಸೋಮೇಶ್ವರ ಮತ್ತು ಮುಮ್ಮಡಿ ಬಲ್ಲಾಳರಂಥ ಧೀರೋದಾತ್ತ ಸುಸಂಸ್ಕೃತ ದೊರೆಗಳ ನೇತೃತ್ವದಲ್ಲಿ ಅಪೂರ್ವ ಪ್ರಗತಿ ಸಾಧಿಸಿ ಕರ್ನಾಟಕವೇ ಅಲ್ಲದೆ ಭಾರತದ ಇತಿಹಾಸದಲ್ಲೇ ಈ ವಂಶ ಮನ್ನಣೆಗೆ ಪಾತ್ರವಾಯಿತು. ಈ ಆಳ್ವಿಕೆಯ ಗಮನಾರ್ಹಸಾಧನೆಯೆಂದರೆ ದೇಶಪ್ರೇಮ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ. ಆಗಿಂದಾಗ್ಗೆ ಈ ವಂಶದಲ್ಲಿ ತಲೆದೋರಿದ ಅಪ್ರತಿಮವೀರರ ನಾಯಕತ್ವದಲ್ಲಿ ದಕ್ಷಿಣ ಕರ್ಣಾಟಕ ಅಥವಾ ಮೈಸೂರು ಪ್ರದೇಶದಲ್ಲಿ ನೆರೆನಿಂದ ಚೋಳರ ಆಳ್ವಿಕೆಯನ್ನು ಕೊನೆಗಾಣಿಸಿದುದೇ ಅಲ್ಲದೆ ಅನಂತರ ಕಾಲದಲ್ಲಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಾಬಲ್ಯ ಪಡೆದು ದುಃಸ್ಥಿತಿಗೀಡಾದ ಚೋಳ ರಾಜರನ್ನು ರಕ್ಷಿಸಿ, ಚೋಳ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯರೆಂಬ ಬಿರುದಿಗೆ ಇವರು ಅರ್ಹರಾದರು. ಹೊಯ್ಸಳ ಬಾಹುಬಲದೆದುರು ಚೋಳ, ಪಾಂಡ್ಯ, ಯಾದವ, ಕಾಕರ್ತಿಯರಂಥ ಪ್ರಬಲರಾಜವಂಶಗಳೂ ಮತ್ತಿತರ ಸಣ್ಣಪುಟ್ಟ ರಾಜರೂ ತಲ್ಲಣಿಸಬೇಕಾಯಿತು. ಎರಡು ಶತಮಾನಗಳ ಅನಂತರ-೧೩ನೆಯ ಶತಕದಲ್ಲಿ-ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರವಾದ ದುರ್ಘಟನೆಯೊಂದು ಸಂಭವಿಸಿತು. ಉತ್ತರ ಭಾರತದಲ್ಲಿ ಆ ವೇಳೆಗೆ ಅಪ್ರತಿಹತವಾದ ಅಧಿಕಾರ ಪಡೆದಿದ್ದ ಮುಸ್ಲಿಮರ ದೃಷ್ಟಿ ದಕ್ಷಿಣದತ್ತ ಹೊರಳಿ ದಕ್ಷಿಣದ ಹಿಂದೂ ರಾಜ್ಯಗಳು ಒಂದೊಂದಾಗಿ ಅವರ ದಾಳಿಗಳಿಗೀಡಾಗಿ ನಿರ್ನಾಮವಾದುವು. ಯಾದವ, ಕಾಕತೀಯ ಮತ್ತು ಕಿರಿದಾದರೂ ಅಸಾಧಾರಣ ಶೌರ್ಯಪ್ರದರ್ಶಿಸಿದ ಕಂಪಿಲರಾಜ್ಯಗಳು ದೂಳೀಪಟವಾದರೂ ಮುಸ್ಲಿಮರ ಆಕ್ರಮಣ ಬಾಧೆಯನ್ನು ಸಮಯೋಚಿತವಾದ ಯುಕ್ತಿ ಶಕ್ತಿಗಳಿಂದ ಎದುರಿಸಿದ ಹಿಂದೂ ರಾಜನೆಂದರೆ ಆ ವಂಶದ ಕೊನೆಯ ದೊರೆಯಾದ ಮುಮ್ಮಡಿ ಬಲ್ಲಾಳ, ಕಾಲಕ್ರಮದಲ್ಲಿ ಈತ ಮುಸ್ಲಿಮರ ವಂಚನೆಗೀಡಾಗಿ ಅಳಿದರೂ ಈತನ ಯುಕ್ತಿಯುಕ್ತವಾದ ನೀತಿಯ ತಳಹದಿಯ ಮೇಲೆಯೇ ದಕ್ಷಿಣಭಾರತದ ಮಹೋನ್ನತ ಸಾಮ್ರಾಜ್ಯವೂ ಹಿಂದೂ ಧರ್ಮರಕ್ಷೆಣೆಗೆ ಬದ್ಧಕಂಕಣ ತೊಟ್ಟುದೂ ಆದ ವಿಜಯನಗರದ ಸ್ಥಾಪನೆಯಾಯಿತು.

ಗಂಗರಸರ ಉತ್ತರಾಧಿಕಾರಿಗಳೂ ಕೆಲಕಾಲ ಚಾಳುಕ್ಯರ ಸಾಮಂತರೂ ಆಗಿದ್ದ ಹೊಯ್ಸಳರು ಆ ರಾಜರುಗಳ ಆಡಳಿತ ಪದ್ಧತಿಯನ್ನೇ ಅನುಸರಿಸಿದರೂ ಸಮಯೋಚಿತವಾದ ಕೆಲವು ಮಾರ್ಪಾಡು ಮಾಡಿಕೊಂಡಿದ್ದರು. ಕೇಂದ್ರ, ಪ್ರಾಂತೀಯ ಮತ್ತು ಗ್ರಾಮೀಣ ಹಂತಗಳಲ್ಲಿ ಆಡಳಿತ ವ್ಯವಸ್ಥಿತವಾಗಿತ್ತು. ವಿವಿಧ ಅಧಿಕಾರಿಗಳ ಮೇಲೆ ಮಂತ್ರಿಮಂಡಳ, ರಾಣಿ, ರಾಜಬಂಧುಗಳೂ-ಇವರಿಂದ ರಾಜ ಸಲಹೆ ಪಡೆದು ಮುಕ್ತ ಉಸ್ತುವಾರಿವಹಿಸುತ್ತಿದ್ದ. ಪಂಚಪ್ರಧಾನರೆಂದು ಶಾಸನಗಳಲ್ಲಿರುವ ಉಲ್ಲೇಖದಿಂದ ಐದು ಮಂತ್ರಿಗಳಿದ್ದರೆಂಬುದು ವ್ಯಕ್ತವಾಗುತ್ತದೆ. ಸಂಧಿವಿಗ್ರಹಿ (ಒಳಾಡಳಿತ ಮತ್ತು ವಿದೇಶ ಸಚಿವ), ಶ್ರೀಕರಣಾಧಿಕಾರಿ (ರಾಜ್ಯಾಡಳಿತ ಸಚಿವ), ಹಿರಿಯ ಭಾಂಡಾರಿ (ಹಣಕಾಸಿನ ಸಚಿವ), ಸೇನಾಧಿಕಾರಿ (ರಕ್ಷಿಣಾ ಸಚಿವ) ಮತ್ತು ಮಹಾಪಸಾಯತ (ರಾಜಮನೆತನದ ವ್ಯವಹಾರ ಸಚಿವ)-ಇವರೇ ಪಂಚಪ್ರಧಾನರು. ರಾಜ ಧಾರ್ಮಿಕ ಮತ್ತು ಸಮಾಜಿಕ ವ್ಯವಸ್ಥೆಗಳ ಪಾಲಕನಾದ್ದು ಪ್ರಜಾಕೋಟಿಯ ಇಹಪರಗಳೆರಡರ ಒಳಿತಿಗೂ ದುಡಿಯುತ್ತಿದ್ದ. ಆನೆ ಮತ್ತು ಅಶ್ವಬಲಗಳಿಂದ ಕೂಡಿದ್ದ ಸೇನೆಯ ಮುಖ್ಯ ಅಂಗ ಕಾಲ್ಬಲವಾಗಿತ್ತು. ರಾಜನನ್ನು ತಮ್ಮ ಪ್ರಾಣತ್ಯಾಗದಿಂದಲಾದರೂ ರಕ್ಷಿಸುವ ಪಣತೊಟ್ಟಿದ್ದ ಗರುಡರೆಂಬ ವಿಶಿಷ್ಟಯೋಧರು ತಮ್ಮ ಶಕ್ತಿ ಸಾಮರ್ಥ್ಯಗಳಿಗೆ ಹೆಸರಾದವರು. ಸಾಮಂತರು ರಾಜನ ಹತೋಟಿಗೊಳಪಟ್ಟಿದ್ದರೂ ತಮ್ಮ ಪ್ರದೇಶಗಳಲ್ಲಿ ಸ್ವಯಮಾಡಳಿತ ನಡೆಸುತ್ತಿದ್ದರು. ನಾಡ ಪ್ರಭು, ನಾಡ ಗೌಡ ಮತ್ತು ನಾಡ ಸೇನಬೋವರೆಂಬ ಇತರ ಅಧಿಕಾರಿಗಳು ಇದ್ದರು.