ಪುಟ:Mysore-University-Encyclopaedia-Vol-4-Part-1.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಸ್ವಾತಂತ್ರ್ಯ ಚಳವಳಿ

ನಂಜುಂಡಕವಿ ಬರೆದ ಕಂಪಿಲರಾಮನಾಥಚರಿತದಲ್ಲಿ ಅವರ ಸ್ವಭಾವ ಸಂಪನ್ನತೆಗಳ ವರ್ಣನೆಯಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅವರು ಬಹುಸಂಖ್ಯೆಯಲ್ಲಿ ಅದರ ಸೈನ್ಯಕ್ಕೆ ಸೇರಿ ಉತ್ತರದ ಗಡಿಪ್ರಾಂತವನ್ನು ಮುಸ್ಲಿಮರ ದಾಳಿಯಿಂದ ಕಾಪಾಡಿದ್ದರು. ಮುಂದೆ ಅವರು ಸುರಪುರಕ್ಕೆ ಬಂದು ನೆಲಸಿದರು.ಔರಂಗಜ಼ೇಬ್ ಕಾಲವಾದ(೧೭೦೭)ಮೇಲೆ ಮರಾಠರು ಪ್ರಬಲರಾಗಿ ಸುರಪುರದ ನಾಯಕರಿಂದ ಕಪ್ಪ ವಸೂಲು ಮಾಡುತ್ತಿದ್ದರು.ಅನಂತರ ನಿಜ಼ಾಮನೂ ಮರಾಠರೊಂದಿಗೆ ಸೇರಿಕೊಂಡು ಅವರಿಂದ ೫೦,೦೦೦ ರೂ. ಕಸಿದುಕೊಂಡ. ಈ ಮಧ್ಯೆ ಬ್ರಿಟಿಷರೂ ಈ ವ್ಯವಹಾರಗಳಲ್ಲಿ ಕೈಹಾಕಿ ಲಾಭ ಗಳಿಸಿದರು. ಈ ವ್ಯವಹಾರಗಳ ಪರಿಣಾಮವಾಗಿ ಸುರಪುರದ ಖಜಾನೆ ಬರಿದಾಯಿತು.೧೮೪೧ರಲ್ಲಿ ಸುರಪುರದ ರಾಜ ಕೃಷ್ಣಪ್ಪನಾಯಕ ಕಾಲವಾದಾಗ ಅವನ ಮಗ ವೆಂಕಟಪ್ಪನಾಯಕ ದೊರೆಯಾಗಿದ್ದ.ಮೆಡೋಸ್ ಟೇಲರನನ್ನು ರಾಜಕೀಯ ನಿಯೋಗಿಯಾಗಿ ಬ್ರಿಟಿಷ್ ಸರ್ಕಾರ ಸುರಪುರಕ್ಕೆ ಕಳುಹಿಸಿತು.ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೆ ದೊರೆಯ ವಿದ್ಯಾಭ್ಯಾಸದ ಮೇಲ್ವಿಚಾರಣೆ ನಡೆಸುವುದೂ ಟೇಲರನ ಕೆಲಸವಾಗಿತ್ತು. ಸಮರ್ಥನಾದ ಟೇಲರ್ ಆ ಎರಡು ಕಾರ್ಯಗಳನ್ನೂ ನೆರವೇರಿಸಿ ಎಲ್ಲರ ವಿಶ್ವಾಸವನ್ನೂ ಸಂಪಾದಿಸಿದ.ವೆಂಕಟಪ್ಪನಾಯಕ ಪ್ರಾಪ್ತವಯಸ್ಕನಾದ ಮೇಲೆ ಟೇಲರ್ ಹಿಂತಿರುಗಿದ (೧೮೫೩).ಆಗ ಗವರ್ನರ್-ಜನರಲ್ ಆಗಿದ್ದವನು ಡಾಲ್ ಹೌಸಿ;ಇನ್ನೂ ಕೆಲಕಾಲ ರಾಜ್ಯದ ಆಡಳಿತದ ಮೇಲ್ವಿಚಾರಣೆ ನಡೆಸಿ ಸೂಕ್ತ ಸಲಹೆ ಕೊಡುವುದಕ್ಕೆ ಒಬ್ಬ ಬ್ರಿಟಿಷ್ ಅಧಿಕಾರಿಯನ್ನು ಇಟ್ಟುಕೊಂಡಿರಬೇಕೆಂದು ಆತ ದೊರೆಗೆ ತಿಳಿಸಿದ.ಹೊಸ ಅಧಿಕಾರಿಗಾಗಿ ವರ್ಷಕ್ಕೆ ೨೦,೦೦೦ ರೂ.ಖರ್ಚು ಮಾಡುವುದು ಆಗಿನ ಹಣಕಾಸು ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲವೆಂಬುದು ದೊರೆಯ ಉತ್ತರವಾಗಿತ್ತು. ನಿರ್ದಾಕ್ಷಿಣ್ಯವಾಗಿ ಬರೆದಿದ್ದ ಈ ಉತ್ತರವನ್ನೋದಿ ಡಾಲ್ ಹೌಸಿಗೆ ಅಸಮಾಧಾನವುಂಟಾಯಿತು.ಒಂದು ಕಡೆ ನಿಜ಼ಾಮನೂ ಇನ್ನೊಂದು ಕಡೆ ಬ್ರಿಟಿಷರೂ ಸುರಪುರ ರಾಜ್ಯದ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದುದರಿಂದ ವೆಂಕಟಪ್ಪನಾಯಕನ ಪೂರ್ವಿಕರು ಆಳುತ್ತಿದ್ದ ರಾಜ್ಯ ಆ ವೇಳೆಗಾಗಲೇ ಚಿಕ್ಕದಾಗಿತ್ತು ಅವರ ಸುಲಿಗೆಯಿಂದಾಗಿ ಸುರಪುರದ ಖಜಾನೆಯೂ ಬರಿದಾಗಿತ್ತು. ಜನರಲ್ಲಿ ಬ್ರಿಟಿಷರ ಬಗ್ಗೆ ಅಸಮಾಧಾನ ವ್ಯಾಪಕವಾಗಿ ಬೆಳೆದಿತ್ತು.ಬ್ರಿಟಿಷರನ್ನು ಭಾರತದಿಂದ ಓಡಿಸಿದ್ದಲ್ಲದೆ ಉಳಿಗಾಲವಿಲ್ಲ ಎಂಬುದ ೧೯ ವರ್ಷದ ಉತ್ಸಾಹಿ ಯುವಕ ವೆಂಕಟಪ್ಪನಾಯಕನಿಗೆ ಅರಿವಾಯಿತು.ಆತ ಸೈನ್ಯವನ್ನು ಬಲಗೊಳಿಸಲೆತ್ನಿಸಿದ. ರೋಹಿಲರು,ಅರಬರು ಮುಂತಾದವರನ್ನು ಸೈನ್ಯಕ್ಕೆ ಸೇರಿಸಿ ತರಬೇತಿ ಕೊಡಿಸಿದ.ನಾನಾ ಸಾಹೇಬನಿಗೆ ನಿಯೋಗ ಹೋಯಿತು.ಅಲ್ಲಿಂದಲೂ ನಿಯೋಗಿಗಳು ಸುರಪುರಕ್ಕೆ ಬಂದರು.ರಾಯಚೂರು ಮುಂತಾದ ಪ್ರದೇಶಗಳ ಪಾಳೆಯಗಾರರೂ ಜಮೀನ್ದಾರರೂ ಅವನಿಗೆ ನೆರವು ನೀಡುವ ಭರವಸೆಯಿತ್ತರು.ಸುರಪುರ ಪಿತೂರಿಯ ಕೇಂದ್ರವಾಯಿತು.ಇದೆಲ್ಲವೂ ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಯದಿರಲಿಲ್ಲ.ಲಿಂಗಸುಗೂರು,ಕರ್ನೂಲು,ಕಲಾದಗಿ ಧಾರವಾಡ ಮುಂತಾದ ಕಡೆಗಳಲ್ಲಿದ್ದ ಸೈನ್ಯಗಳಿಗೆ ಕರೆ ಹೋಯಿತು. ಕೆಲವು ದಿನಗಳಲ್ಲೇ ದೊಡ್ಡ ಸೈನ್ಯವೊಂದು ಸುರಪುರದ ಕೋಟೆಯೆದುರು ನಿಂತಿತು.ಆದರೆ ಅದನ್ನು ವಶಪಡಿಸಿಕೊಳ್ಳಲು ಬ್ರಿಟಿಷ್ ಸೈನ್ಯ ಮಾಡಿದ ಪ್ರಯತ್ನಗಳೆಲ್ಲ ವಿಫಲವಾದುವು. ಕೊನೆಗೆ ವಾಗನಗೇರಿ ಭೀಮರಾಯನೆಂಬ ದೇಶದ್ರೋಹಿ ಬ್ರಿಟಿಷರ ಸಹಾಯಕ್ಕೆ ದೊರೆಕಿದ. ಆತ ವೆಂಕಟಪ್ಪನಾಯಕನ ಆಪ್ತ ಸಲಹೆಗಾರ. ಕೋಟೆಯೊಳಕ್ಕೆ ಬರುವ ಗುಪ್ತದ್ವಾರವನ್ನು ಬ್ರಿಟಿಷರಿಗೆ ತೋರಿಸಿ, ಆ ಕೂಡಲೆ ವೆಂಕಟಪ್ಪನಾಯಕನ ಹತ್ತಿರ ಹೋಗಿ,ಶತ್ರುಗಳು ಒಳಗೆ ನುಗ್ಗಿದರು; ತಪ್ಪಿಸಿಕೊಂಡು ಹೋಗಿ ಎಂದು ಸಲಹೆಯಿತ್ತ ವೆಂಕಟಪ್ಪನಾಯಕ ಕೂಡಲೆ ಊರು ಬಿಟ್ಟು ಹೈದರಾಬಾದ್ ಕಡೆ ಹೊರಟ. ಅವನ ಜೊತೆ ಹೊರಟ ಭೀಮರಾಯ ದಾರಿಯಲ್ಲಿ ದೊರೆ ತಂದಿದ್ದ ಹಣ,ಜವಾಹಿರಿಯೆಲ್ಲವನ್ನೂ ಕದ್ದು ಪರಾರಿಯಾದ. ಹೈದರಾಬಾದ್ ತಲುಪಿದ ಕೂಡಲೆ ವೆಂಕಟಪ್ಪನಾಯಕನ ಗುರುತು ಸಿಕ್ಕಿ, ಅವನನ್ನು ಸಿಕಂದರಾಬಾದಿನಲ್ಲಿ ಬಂಧನದಲ್ಲಿಟ್ಟರು. ವಿಚಾರಣೆ ನಡೆದು ಅವನಿಗೆ ನಾಲ್ಕು ವರ್ಷ ಸಜಾ ವಿಧಿಸಲಾಯಿತು. ವೆಂಕಟಪ್ಪನಾಯಕನನ್ನು ಜೈಲಿಗೆ ಕೊಂಡೊಯ್ಯುತ್ತಿದ್ದಾಗ ದಾರಿಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡ.೧೮೬೧ರಲ್ಲಿ ಸುರಪುರವನ್ನು ನಿಜ಼ಾಂ ರಾಜ್ಯಕ್ಕೆ ಸೇರಿಸಲಾಯಿತು.(ನೋಡಿ-ವೆಂಕಟಪ್ಪನಾಯಕ ೨) ನರಗುಂದ;ಬಾಬಾ ಸಾಹೇಬ; ರಾಜರಾಗಲಿ ಜಮೀನ್ದಾರರಾಗಲಿ ದತ್ತುಸ್ವೀಕಾರಕ್ಕೆ ಸರ್ಕಾರದ ಅನುಮತಿ ಪಡೆಯಬೇಕು.ಹಾಗೆ ಮಾಡದಿದ್ದರೆ ದತ್ತು ಪುತ್ರ ಆಸ್ತಿಗೆ ಹಕ್ಕುದಾರನಾಗುವುದಿಲ್ಲ-ಎಂದು ಗವರ್ನರ್-ಜನರಲ್ ಡಾಲ್ ಹೌಸಿ ಹೊರಡಿಸಿದ ನಿರೂಪಿಸಿದ ಪರಿಣಾಮವಾಗಿ ಜನರಲ್ಲಿ ಅಸಮಧಾನವುಂಟಾಗಿತ್ತು;ಧಾರ್ಮಿಕ ಸಂಪ್ರದಾಯವಾಗಿದ್ದ ದತ್ತುಸ್ವೀಕಾರಕ್ಕೂ ಬ್ರಿಟಿಷರು ಅಡ್ಡಿಯೊಡ್ಡುತ್ತಾರೆ; ಆಸ್ತಿ ಕಬಳಿಸುವುದೇ ಇವರ ಉದ್ದೇಶ-ಎಂದು ಜನ ಭಾವಿಸಿದ್ದರು. ನರಗುಂದದ ಭಾಸ್ಕರರಾವ್ ಅಥವಾ ಬಾಬಾಸಾಹೇಬ ತನಗೇ ಮಕ್ಕಳಿಲ್ಲದ್ದರಿಂದ ದತ್ತು ಸ್ವೀಕಾರಕ್ಕೆ ಅನುಮತಿ ಕೇಳಿದ.ಅದು ಅವನಿಗೆ ದೊರಕಲಿಲ್ಲ. ಅದರಿಂದ ಆತ ಕೆರಳಿ ಬ್ರಿಟಿಷರನ್ನು ದೇಶದಿಂದ ಹೊಡೆದತ್ತಲು ನಿರ್ಧರಿಸಿದ.ದೇಶದ ನಾನಾಕಡೆಗೆ ಗುಪ್ತದೂತರನ್ನು ಕಳುಹಿಸಿ, ಬಂಡಾಯಕ್ಕೆ ಕರೆಕೊಟ್ಟ. ಉತ್ತರ ಭಾರತದಲ್ಲಾಗಲೇ ಬ್ರಿಟಿಷರಿಗೆ ವೀರೋಧವಾಗಿ ಬಂಡಾಯ ಪ್ರಾರಂಭವಾಗಿತ್ತು.ದತ್ತುಸ್ವೀಕಾರಕ್ಕೆ ಅನುಮತಿ ದೊರಕದಿರಲು ಮುಖ್ಯ ಕಾರಣನಾದ ಬ್ರಿಟಿಷ್ ಅಧಿಕಾರಿ ಮ್ಯಾನ್ ಸನ್ ಕೊಲೆಗೀಡಾದ. ಆದರೆ ಮ್ಯಾನ್ ಸನನ ಹತ್ತಿರ ಇದ್ದ ಕಾಗದಪತ್ರಗಳನ್ನು ನೋಡಿದಾಗ,ತನ್ನ ಅನುಯಾಯಿಗಳಲ್ಲೇ ಕೆಲವರು ದ್ರೋಹಿಗಳಿದ್ದುದು ಬಾಬಾಸಾಹೇಬನಿಗೆ ತಿಳಿದುಬಂತು.ಸೇಡು ತೀರಿಸಿಕೊಂಡದ್ದಾಯಿತು. ಇನ್ನು ಅವನಿಗೆ ಉಳಿದಿದ್ದ ಒಂದೇ ಮಾರ್ಗವೆಂದರೆ ನರಗುಂದದಲ್ಲಿ ನಿಂತು ಹೋರಾಡುವುದು. ಬ್ರಿಟೀಷ್ ಸೈನ್ಯ ನರಗುಂದದ ಕೋಟೆಗೆ ಮುತ್ತಿಗೆ ಹಾಕಿದಾಗ ಭೀಕರ ಕದನ ನಡೆಯಿತು. ಕೋಟೆ ಶತ್ರುಗಳ ಕೈವಶವಾಗುತ್ತದೆಂದು ತಿಳಿದಾಗ ಬಾಬಾ ಸಾಹೇಬ ಅಲ್ಲಿಂದ ತಪ್ಪಿಸಿಕೊಂಡ. ಆದರೆ ತೋರಗಲ್ ಕಾಡಿನಲ್ಲಿ ಹೋಗುತ್ತಿದ್ದಾಗ ಸೆರೆಸಿಕ್ಕಿದ.ಬೆಳಗಾಂವಿಯಲ್ಲಿ ವಿಚಾರಣೆ ನಡೆಸಿ ಅವನನ್ನು ಗಲ್ಲಿಗೇರಿಸಲಾಯಿತು.ಮುಂಡರಗಿ ಭೀಮರಾವ್ ಇನ್ನೊಬ್ಬ ಬಂಡಾಯಗಾರ. ಈತ ಶ್ರೀಮಂತ ಮನೆತನದವನಲ್ಲ; ಸ್ವಶಕ್ತಿಯಿಂದ ಬಾಳುತ್ತಿದ್ದ ಮಧ್ಯಮವರ್ಗದ ಮನೆತನಕ್ಕೆ ಸೇರಿದ್ದವ; ಆದರೆ ಮೇಧಾವಂತ,ಶೂರ,ಸಾಹಸಿ,ಉತ್ತಮ ಬೇಟೆಗಾರನೆಂದು ಹೆಸರು ಪಡೆದಿದ್ದ. ವಿದ್ಯಾವಂತನಾಗಿ ಹರಪನಹಳ್ಳಿ,ಬಳ್ಳಾರಿ ಈ ಎರಡು ಕಡೆಗಳಲ್ಲಿ ತಹಸೀಲ್ದಾರನಾಗಿ ಕೆಲಸ ಮಾಡಿದ್ದ.ನಾಡಿನ ಪರಿಸ್ಥಿತಿ,ಉತ್ತರ ಭಾರತದಲ್ಲಿ ನಡೆಯುತ್ತಿದ್ದ ವಿದ್ಯಾಮಾನಗಳು-ಎಲ್ಲರನ್ನೂ ಅರಿತಿದ್ದ ಅವನಿಗೆ ಬ್ರಿಟಿಷ್ ಸರ್ಕಾರದ ನೌಕರನಾಗಿರಲು ಸಾಧ್ಯವಾಗಲಿಲ್ಲ.ಹೆಮ್ಮಿಗಿಯ ಕೆಂಚನಗೌಡ, ಸೊರಟೂರಿನ ದೇಸಾಯಿ ಮುಂತಾದ ನಾಯಕರನ್ನೂ ಅವರ ಅನುಯಾಯಿಗಳನ್ನೂ ಕೂಡಿಕೊಂಡು ಒಂದು ಪಡೆ ನಿರ್ಮಿಸಿ ಡಂಬಳದ ಖಜಾನೆಯನ್ನು ಲೂಟಿ ಮಾಡಿ ಕೊಪ್ಪಳಕ್ಕೆ ಹೋಗಿ ಅದರ ಕೋಟೆಯನ್ನು ವಶಪಡಿಸಿಕೊಂಡ.ಆಗ ಸರ್ಕಾರ ಎಚ್ಚತ್ತು ಹೈದರಾಬಾದ್,ರಾಯಚೂರು,ಧಾರವಾಡ ಮುಂತಾದ ಕಡೆಗಳಿಂದ ಸೈನ್ಯವನ್ನು ತರಿಸಿತು.ಕೊಪ್ಪಳದ ಸುತ್ತ ಭಾರಿ ಕದನ ನಡೆಯಿತು.