ಪುಟ:Mysore-University-Encyclopaedia-Vol-4-Part-2.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳೆ ಮತ್ತು ಕಳೆಯ ಹತೋಟಿ ಟೆಫ್ರೋಸಿಯ ಪರ್ಪ್ಯೂರಿಯಗಳನ್ನು (ಕೊಗ್ಗಿಲಿ) ಹಸುರೆಲೆ ಗೊಬ್ಬರವಾಗಿ ಉಪಯೋಗಿಸುವುದುಂಟು.ಒಪನ್ಶಿಯ (ಪಾಪಾಸುಕಳ್ಳಿ) ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಬಹಳ ಒಳ್ಳೆಯ ಕಚ್ಚಾವಸ್ತು.ಗದ್ದೆಗಳಲ್ಲಿ,ಸ್ಥಳದಲ್ಲೇ ಹಸುರು ಗೊಬ್ಬರ ಬೆಳೆಯದಿದ್ದೆಡೆ,ಕಳೆಗಳೇ ಆವರ್ತನ ಬೆಳೆಯಾಗಿ ನೈಟ್ರೇಟ್ ರೂಪದ ಸಾರಜನಕ ಪೋಲಾಗುವುದನ್ನು ತಪ್ಪಿಸುತ್ತವೆ.

ಕಳೆಗಳ ವರ್ಗೀಕರಣ.ಎಲ್ಲ ಬಗೆಯ ಕಳೆಸಸ್ಯಗಳು ಎಲ್ಲ ಕಡೆ ಸ್ವಲ್ಪ ಹೆಚ್ಚು ಕಡಿಮೆ ಬೆಳೆದರೂ ಅವನ್ನು ಕೆಳಕಂಡಂತೆ ವರ್ಗೀಕರಿಸಲು ಸಾಧ್ಯ:೧ ರಸ್ತೆ ಅಕ್ಕಪಕ್ಕದಲ್ಲಿ ಬೆಳೆಯುವ ಕಳೆಗಳು. ೨ ಬಂಜರು ಭೂಮಿಗಳ ಕಳೆ. ೩ ಬೇಸಾಯದ ಭೂಮಿಯಲ್ಲಿನ ಕಳೆ. ೪ ಜಲಕಳೆ. ೫ ಪರೋಪಜೀವಿ ಕಳೆಗಳು.

ಬೇಸಾಯದ ಭೂಮಿಯ ಕಳೆಗಳನ್ನು,ಕಳೆಗಳ ಜೊತೆಗೆ ಬೆಳೆಯುವ ಪೈರಿನ ಆಧಾರದ ಮೇಲೆ,ಯಾವ ಕಾಲದಲ್ಲಿ ಬೆಳೆಯುತ್ತವೆ ಎಂಬ ಆಧಾರದ ಮೇಲೆ ಮತ್ತು ಯಾವ ರೀತಿಯ ಮಣ್ಣಿನಲ್ಲಿ ಬೆಳೆಯುತ್ತವೆ ಎಂಬ ಅಂಶದ ಮೇಲೆ ೩ ಉಪವರ್ಗಗಳಾಗಿ ವಿಂಗಡಿಸಬಹುದು.ಈ ವರ್ಗೀಕರಣ ಬಹಳ ಸಮರ್ಪಕವೇನಲ್ಲ.ಒಂದು ಬಗೆಯ ಕಳೆ ಇನ್ನೊಂದೆಡೆ ಬೆಳೆಯುವುದು ಸಾಮಾನ್ಯ.

೧ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಳೆಯುವ ಕಳೆ:ಆಲ್ಟರ್ ನ್ಯಾಂತೆರ ಎಕೈನೇಟ (ಮುಳ್ಳುಹೊನಗೊನೆ),ಗ್ರಾಂಫ್ರೀನ ಸಿಲೋಸಿಯಾಯ್ಡಿಸ್,ಯೂಫೋರ್ಬೈಯ ಪೈಲುಲಿಫೆರ (ಕೆಂಪುನೆನೆ ಅಕ್ಕೀ ಸೊಪ್ಪು) ಮತ್ತು ಸೈನೋಡಾನ್ ಡ್ಯಾಕ್ಟಿಲನ್ (ಗರಿಕೆ ಹುಲ್ಲು) ಮುಂತಾದ ಕಳೆಗಳು ಮುಖ್ಯವಾಗಿ ರಸ್ತೆಯ ಅಕ್ಕಪಕ್ಕದಲ್ಲಿರುತ್ತವೆ.ನೆಲೆದೆ ಮೇಲೆಯೇ ಹಬ್ಬಿ ಬೆಳೆಯುವುದರಿಂದ ಎದ್ದು ಕಾಣುವುದಿಲ್ಲ.ದನ,ಜನ ಮತ್ತು ವಾಹನಗಳ ಹಾವಳಿಯನ್ನು ಎಉರಿಸಿ ಬದುಕಬಲ್ಲ ಸಾಮರ್ಥ್ಯ ಇವಕ್ಕಿವೆ.ಈ ಕಾರಣದಿಂದ ಮತ್ತು ಇವು ಉತ್ಪನ್ನಮಾಡುವ ಹೆಚ್ಚು ಬೀಜಗಳ ದೆಸೆಯಿಂದ ಇವುಗಳ ಜಾತಿ ಹಾಳಾಗದೇ ಉಳಿದಿದೆ.

೨ ಬಂಜರು ಭೂಮಿ ಮತ್ತು ಬೇಲಿಗಳಲ್ಲಿನ ಕಳೆ:ಪರಿಸರದ ಸೊಬಗನ್ನು ಈ ಕಳೆಗಳು ಹಾಳುಮಾಡುತ್ತವೆ.ಈ ಗುಂಪಿನಲ್ಲಿ ಹಿಪ್ಟಿಸ್ ಸುಯೇವೆಲೆನ್ಸ್,ಲ್ಯೂಕಾಸ್ ಆಸ್ಬೆರ (ತುಂಬೆ),ಸ್ಟಾಕಿಟಾರ್ಫೆಟ ಇಂಡಿಕ (ಕಾಡು ಉತ್ತರಾಣಿ),ಅಕಿರಾಂತಸ್ ಆಸ್ಬೆರ (ಉತ್ತರಾಣಿ),ಕ್ಯಾಸಿಯ ಟೋರ (ಗಂಡು ತಗಚೆ),ಕ್ಯಾಲೋಟ್ರೋಪಿಸ್ ಜೈಗಾಂಶಿಯ (ಎಕ್ಕದ ಗಿಡ),ಆರ್ಜಿಮೋನ್ ಮೆಕ್ಸಿಕಾನ (ದತ್ತೂರಿ ಗಿಡ),ಒಪನ್ಶಿಯ (ಪಾಪಾಸುಕಳ್ಳಿ),ಲಂಟಾನ ಕ್ಯಾಮೆರ(ಲಂಟವಾಣಿಗಿಡ),ಅಜಿರೇಟಂ (ಎರಾಳೆ ಗಿಡ) ಮತ್ತು ಮಿಮೋಸ ಪ್ಯೂಡಿಕ (ಮುಟ್ಟಿದರೆ ಮುನಿ)-ಇವನ್ನು ಹೆಸರಿಸಬಹುದು.ಇವು ಮೂಲಿಕೆ ಅಥವಾ ಪೊದೆ ಸಸ್ಯಗಳಾಗಿರಬಹುದು.ಇಲ್ಲವೇ ವಾರ್ಷಿಕ,ದ್ವೈವಾರ್ಶಿಕ ಅಥವಾ ಬಹುವಾರ್ಷಿಕ ಸಸ್ಯಗಳಾಗಿರಬಹುದು.ಇವುಗಳಲ್ಲಿ ಕೆಲವು ವಿಷಪೂರಿತವಾದವು.ದತ್ತೂರಿ ಗಿಡ ಮತ್ತು ಎಕ್ಕದ ಗಿಡ ಇಂಥವು ಔಷಧಿಯಾಗಿ ಬಳಕೆಗೆ ಬರುತ್ತವೆ.ಬೀಜದಿಂದಲೂ ಬಳ್ಳಿಯಿಂದಲೂ ಇವುಗಳ ವಂಶಾಭಿವೃದ್ಧಿಯಾಗುತ್ತದೆ.ಇವುಗಳ ನಾಶ ಕಷ್ಟ.ಹೂ ಬಿಡುವುದಕ್ಕೆ ಮುಂಚೆ,ಇವನ್ನು ಕಿತ್ತು ಸುಡುವುದು ಇವುಗಳ ಹತೋಟಿಗೆ ಸೂಕ್ತ ಮಾರ್ಗ.

೩ ಬೇಸಾಯದ ಭೂಮಿಯ ಕಳೆಗಳು:ಸಿಲೋಶಿಯ ಅರ್ಜೆಂಸಿಯ (ಅಣ್ಣೆ ಸೊಪ್ಪು),ಸಾಂಕಸ್ (ಕಾಡುಸಣ್ಣ ಹೊಗೆಸೊಪ್ಪು),ಟ್ರೈಡಾಕ್ಸ್ ಪ್ರೊಕಂಬೆನ್ಸ್ (ಗಬ್ಬು ಸಣ್ಣಶಾವಂತಿ),ಸ್ಟ್ರೈಗ,ಓರೊಬ್ಯಾಂಕೆ (ಬೆಂಕಿಗಿಡ) ಮತ್ತು ಹುಲ್ಲು ಜಾತಿಯ ಕಳೆಗಳು ಕೃಷಿಭೂಮಿಯಲ್ಲಿ ಇದ್ದು ಬೆಳೆಗಳ ಜೊತೆ ಸ್ಪರ್ಧಿಸುತ್ತವೆ.ಇವುಗಳ ಹತೋಟಿಗೆ ಅನೇಕ ಪ್ರಯತ್ನಗಳನ್ನು ಮಾಡಿದರೂ ಇವುಗಳ ಮೂಲೋಚ್ಚಾಟನೆ ಆಗದೇ ಉಳಿಯುತ್ತವೆ.ಇವುಗಳ ಅಸಂಖ್ಯಾತ ಬೀಜಗಳು,ಬಳ್ಳಿಗಳಿಂದ ಹರಡಿ ಬೆಳೆಯುವ ಶಕ್ತಿ,ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮುಂತಾದವುಗಳಿಂದ ಇವು ಮಾನವ ಶಕ್ತಿಗೆ ಮಣಿಯದೆ ನಿಂತಿವೆ.ಬೇಸಾಯದ ಭೂಮಿಯಲ್ಲಿನ ಕಳೆಗಳಲ್ಲಿ ಮುಖ್ಯವಾದವು ಇವು:ಬತ್ತದ ಗದ್ದೆಗಳಲ್ಲಿ ಬೆಳೆಯುವ ಅರ್ವ ಲ್ಯಾನೇಟ (ಬಿಳಿಹಿಂಡೀ ಸೊಪ್ಪು),ಎರಿಯೊಕಾಲಾನ್,ಸೈಪರಸ್ ರೊಟಂಡಸ್ (ಕೊನ್ನಾರಿಗೆಡ್ಡೆ),ಜೋಳದ ಪೈರಿನೊಂದಿಗೆ ಬೆಳೆಯುವ ಸ್ಟ್ರೈಗ,ಸೋರ್ಗಮ್ ಹ್ಯಾಲೆಪೆನ್ಸ್,ಗೋದಿ ಬೆಳೆಯೊಂದಿಗಿರುವ ಕೀನೋಪೋಡಿಯಮ್ ಆಲ್ಬಮ್ (ಕಾಡು ಓಮು) ಮತ್ತು ಉಮ್ಮತ್ತಿಗಿಡ.ಇವಲ್ಲದೆ ಓರೊಬ್ಯಾಂಕೆ (ಬೆಂಕಿಗಿಡ),ಡೈಜೆರ ಆರ್ವೆನ್ಸಿಸ್,ಜಸ್ಟಿಸಿಯ,ಅಮರ್ಯಾಂತಸ್ ಸ್ಟೈನೋಸಸ್ (ಮುಳ್ಳು ಕೀರೇಸೊಪ್ಪು),ಗರಿಕೆ ಹುಲ್ಲು,ಅಕ್ಯಾಂತೋಸ್ಪರ್ಮಮ್ ಹಿಸ್ಟಿಡಮ್,ಅಣ್ಣೆ ಸೊಪ್ಪು ಮೊದಲಾದವೂ ಮುಖ್ಯವಾದವು.

೪ ಜಲಕಳೆಗಳು:ಇವು ನೀರಿನಲ್ಲಿ ಬೆಳೆಯುವ ಕಳೆಗಿಡಗಳು.ಕೊಳ,ಹಳ್ಳ ಮತ್ತು ಕಾಲುವೆಗಳಲ್ಲಿ ಇವು ಸರ್ವೇಸಾಮಾನ್ಯ.ಇವು ಕಾಲುವೆಗಳಲ್ಲಿ ನೀರು ಹರಿಯುವುದಕ್ಕೆ ಅಡಚಣೆ ಮಾಡುತ್ತವೆ.ಇಲ್ಲವೇ,ದುರ್ಗಂಧ ಉಂಟುಮಾಡಿ ನೀರನ್ನು ಹೊಲಸು ಮಾಡುತ್ತವೆ.ಇವನ್ನು ಕೂಡಿಸಿ ಸುಟ್ಟು,ನಾಶ ಮಾಡಬಹುದು,ಇಲ್ಲವೇ ರಾಸಾಯನಿಕಗಳಿಂದ ನಿವಾರಿಸಬಹುದು.ಜಲಕಳೆಗಳಲ್ಲಿ ಮುಖ್ಯವಾದವು ಇವು:ಐಕಾರ್ನಿಯ,ಪಿಸ್ಟಿಯ,ಹೈಡ್ರಿಲ ಮತ್ತು ವ್ಯಾಲಿಸ್ನೇರಿಯ.

೫ ಪರೋಪಜೀವಿ ಕಳಗಳು:ತಮ್ಮ ಆಹಾರಕ್ಕೆ ಮತ್ತು ಆಸರೆಗೆ ಬೇರೆ ಸಸ್ಯಗಳನ್ನು ಅವಲಂಬಿಸಿ ಜೀವಿಸುವಂಥವು ಇವು.ಸ್ಟ್ರೈಗ,ಓರೊಬ್ಯಾಂಕೆ(ಬೆಂಕಿಗಿಡ),ಲೊರ್ಯಾಂತಸ್ ಮತ್ತು-ವಿಸ್ಕಮ್ ಇವು ಮುಖ್ಯ ಉದಾಹರಣೆಗಳು.ಇವು ಜೋಳ,ಬತ್ತ,ಹೊಗೆಸೊಪ್ಪು ಮುಂತಾದ ಬೆಳೆಗಳಿಗೆ ತಗುಲಿ ಅಪಾರ ನಷ್ಟವನ್ನುಂಟು ಮಾಡುತ್ತವೆ.

ಕಳೆಗಳ ಹತೋಟಿ:ಭೂಮಿಯಲ್ಲಿ ಮಾನವ ಕೃಷಿ ಮಾಡಿ ತನಗೆ ಬೇಕಾದ ಸಸ್ಯಗಳನ್ನು ಬೆಳೆಸಲು ಪ್ರಾರಂಭಿಸಿದಾಗಿನಿಂದ ಕಳೆ ಹತೋಟಿ ಸಮಸ್ಯೆ ಅವನ ಮುಂದೆ ಇದ್ದೇ ಇದೆ.ಕೃಷಿ ಉದ್ಯಮದಲ್ಲಿನ ಯಶಸ್ಸು ಕಳೆ ಮತ್ತಿತರ ಪೀಡೆಗಳೆದುರು ಸತತವಾದ ಹೋರಾಟದಿಂದಲೇ ಸಾಧ್ಯ.ವ್ಯವಸಾಯದ ಉಗಮದಿಂದ ಈಗ್ಗೆ ಒಂದು ದಶಕದ ಹಿಂದಿನವರೆಗೆ ಕಳೆಹತೋಟಿ ಕೈಯಿಂದ ಕೀಳುವುದು ಇಲ್ಲವೇ ಎತ್ತಿನಿಂದ ಎಳೆಯಲ್ಪಟ್ಟ ಕುಂಟೆ ಮುಂತಾದ ಸಾಧನಗಳಿಂದಷ್ಟೇ ಆಗುತ್ತಿತ್ತು.ಇತ್ತೀಚೆಗೆ ಕಂಡುಹಿಡಿಯಲ್ಪಟ್ಟ ಹಾರ್ಮೋನ್ ಕಳನಾಶಕಗಳ ಬಳಕೆಯಿಂದ ಕಳೆ ಹತೋಟಿಯಲ್ಲಿ ಒಂದು ಬಗೆಯ ಕ್ರಾಂತಿಯೇ ಆಗಿದೆ ಎನ್ನಬಹುದು.ಈ ಕಳೆನಾಶಕಗಳು ಸಲ್ಫ್ಯೂರಿಕ್ ಆಮ್ಲ,ಸೋಡಿಯಂ ಕ್ಲೋರೇಟ್ ಮುಂತಾದ ರಾಸಾಯನಿಕಗಳಿಗಿಂತ ಮೇಲು.ಇವನ್ನು ಅತಿ ಸ್ವಲ್ಪ ಪ್ರಮಾಣದಲ್ಲಿ ನಿಂತಿರುವ ಪೈರಿನ ಮಧ್ಯೆ ಕಳೆಗಳ ನಾಶಕ್ಕೆ ಬಳಸಬಹುದು.ಯಾಂತ್ರಿಕ ಬೇಸಾಯ ಬಳಕೆಯಲ್ಲಿರುವ ಪಾಶ್ಚಾತ್ಯ ದೇಶಗಳಲ್ಲಿ,ಇವುಗಳ ಪ್ರಯೋಗ ಸಾಮಾನ್ಯ.ಆದರೆ ಭಾರತದಲ್ಲಿ ಹಿಡುವಳಿ ಮಿತಿ,ರೈತರ ಅಜ್ಞಾನ,ಸ್ಪ್ರೇಯರ್ ಮುಂತಾದ ಸಲಕರಣೆಗಳ ಬಳಕೆ ಮತ್ತು ರಿಪೇರಿಗಿರುವ ತೊಂದರೆ ಈ ಕಾರಣಗಳಿಂದ ಕಳೆನಾಶಕಗಳ ಬಳಕೆ ಬೆಳೆದಿಲ್ಲ.ಭಾರತದಲ್ಲಿ ಅಗ್ಗವಾಗಿ ಕೂಲಿ ಸಿಕ್ಕುವುದರಿಂದ ಕೈಯಿಂದ ಕಳೆ ತೆಗೆಸುವುದು ಇತರ ಕ್ರಮಗಳಿಗಿಂತ ಹೆಚ್ಚು ರೂಢಿಯಲ್ಲಿದೆ.ಏಕವಾರ್ಷಿಕ ಮತ್ತು ದ್ವೈವಾರ್ಷಿಕ ಕಳೆಗಳನ್ನು ಸುಲಭವಾಗಿ ವಿವರಿಸಬಹುದಾದರೂ ಬಹುವಾರ್ಷಿಕ ಕಳೆಗಳ ನಿವಾರಣೆ ಕಷ್ಟ.ಏಕೆಂದರೆ ಇವು ಬೀಜಗಳಿಂದಲೂ,ಬೇರು ಗೆಡ್ಡೆಗಳಿಂದಲೂ ವೃದ್ಧಿಸುತ್ತವೆ.ಇವುಗಳ ಹಾವಳಿಯನ್ನು ಉಳುಮೆ,ಬೆಳೆ ಪರಿವರ್ತನೆ ಮತ್ತು ರಾಸಾಯನಿಕಗಳಿಂದ ಸ್ವಲ್ಪ ಮಟ್ಟಿಗೆ ನಿವಾರಿಸಬಹುದು.ಇತ್ತೀಚೆಗೆ ಕಳೆ ನಿರ್ಮೂಲನೆಗೆ ವಿವಿಧ ಬಗೆಯ ಯಂತ್ರಗಳೂ ಬಂದಿವೆ.ಅವು ಕಳೆಯನ್ನು ಮತ್ತು ಹುಲ್ಲನ್ನು ನೆಲಮಟ್ಟಕ್ಕೆ ಕತ್ತರಿಸಬಲ್ಲವು.

ಕಳೆಗಳು ಬೆಳೆಯದಂತೆ ತಡೆಯುವುದು ಅವು ಬೆಳೆದ ಮೇಲೆ ಕೈಗೊಳ್ಳುವ ಹತೋಟಿ ಕ್ರಮಕ್ಕಿಂತ ಉತ್ತಮ.ಶುದ್ಧವಾದ ಬಿತ್ತನೆಗಳು,ಸ್ವಚ್ಛವಾದ ಸಾಗುವಳಿ,ಸಕಾಲದಲ್ಲಿ ಗೊಬ್ಬರ ಹಾಕುವುದು,ಬದು ಮತ್ತು ಮೂಲೆಗಳ ಒಪ್ಪ ಇವುಗಳಿಂದ ಕಳೆಗಳ ಹತೋಟಿ ಸಾಧ್ಯ.ಭಾರತದಲ್ಲಿ ಬೀಜ ಪರೀಕ್ಷಣದ ಅನುಕೂಲತೆ ಹೆಚ್ಚಾಗಿ ಇಲ್ಲದಿರುವುದರಿಂದ ರೈತರೇ ತಮ್ಮ ಬಿತ್ತನೆಯನ್ನು ಒಪ್ಪ ಮಾಡಿಕೊಳ್ಳುವುದು ಅವಶ್ಯಕ.

ಇಷ್ಟೆಲ್ಲ ಎಚ್ಚರಿಕೆ ವಹಿಸಿದ ಮೇಲೂ ಕಳೆ ಬಂದರೆ,ಕೆಲವು ಪರಿಹಾರ ಕ್ರಮಗಳ ಅನುಸರಣೆ ಅನಿವಾರ್ಯ,ಇವನ್ನು ಕಳೆಗಳ ಜಾತಿಗೆ ಅನುಗುಣವಾಗಿ ವ್ಯತ್ಯಾಸ ಮಾಡಬೇಕಾಗುತ್ತದೆ.ಸ್ಥೂಲವಾಗಿ ಯಾಂತ್ರಿಕ,ಜೈವಿಕ,ಸಾಗುವಳಿ ಮತ್ತು ರಾಸಾಯನಿಕ ಕ್ರಮಗಳು ಎಂದು ವರ್ಗೀಕರಿಸಬಹುದು.

೧.ಯಾಂತ್ರಿಕ ಕ್ರಮಗಳು:ಕೈಯಿಂದ ಕಳೆ ಕೀಳುವುದು,ಕುಂಟೆ ಹೊಡೆಯುವುದು,ಮಧ್ಯಂತರ ಉಳುಮೆ,ಕಳೆ ತರಿಯುವುದು,ನೀರು ನಿಲ್ಲಿಸುವುದು,ಸುಡುವುದು,ನೆಲ ಹಸನು ಮಾಡುವುದು ಇವೆಲ್ಲ ಕ್ರಮಗಳನ್ನೂ ಇಲ್ಲಿ ಸೇರಿಸಬಹುದು.

೨.ಜೈವಿಕ ಕ್ರಮಗಳು:ಮಾರಕ ಕೀಟ,ಇಲ್ಲವೇ ರೋಗಾಣುಗಳ ಪ್ರಯೋಗದಿಂದ ಕಳೆಗಳ ನಾಶ ಸಾಧ್ಯ ಎಂಬ ಅಂಶ ಇತ್ತೀಚೆಗೆ ಕಂಡುಬಂದಿದೆ.ಇವು ಕಳೆಗಳಲ್ಲದೆ ರೈತರಿಗೆ ಮಾರಕವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ.ಪಾಪಾಸ್ ಕಳ್ಳಿಯನ್ನು ಸಿಫಿನೀಶ್ ಕೀಟಗಳ ಪ್ರಯೋಗದಿಂದ ದಕ್ಷಿಣ ಭಾರತದಲ್ಲಿ ನಾಶಪಡಿಸಲಾಯಿತು.ಕೆಲವೆಡೆ ಬದನೆ,ಹೊಗೆಸೊಪ್ಪು ಗಿಡಗಳ ಪರೋಪಜೀವಿಯಾದ ಓರೊಬ್ಯಾಂಕೆಯನ್ನು ಕೆಲವು ಬಗೆಯ ರೋಗಾಣುಗಳು ಆಶ್ರಯದಾತ ಗಿಡಗಳಿಗೆ ತೊಂದರೆ ಮಾಡದೆ ನಾಶ ಮಾಡಿದ ನಿದರ್ಶನಗಳಿವೆ.ದ್ವಿದಳ ಜಾತಿಗೆ ಸೇರಿದ ಕ್ಯಾಲಪಗೋನಿಯಮ್ ಮ್ಯೂಕುನಾಯ್ಡಿಸ್ ಎಂಬ ಸಸ್ಯವನ್ನು ತೆಂಗಿನ ತೋಟಗಳಲ್ಲಿ ಬೆಳೆಸುವುದರಿಂದ ಉಳಿದ ಹುಲ್ಲು-ಕಳೆಗಳನ್ನು ತಡೆಯಬಹುದೆಂದು ಕಂಡುಬಂದಿದೆ.

೩.ಸಾಗುವಳಿ ಕ್ರಮಗಳು:ಸೂಕ್ಷ್ಮ ಸಾಗುವಳಿ ಕ್ರಮಗಳು,ಪೈರು ಶೀಘ್ರವಾಗಿ ಬೆಳೆಯುವುದಕ್ಕೆ ಅನುಕೂಲ ಪರಿಸ್ಥಿತಿಯನ್ನು ಒದಗಿಸಿ ಕಳೆ ಸಸ್ಯದ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತದೆ.ಇವುಗಳಲ್ಲಿ ಮುಖ್ಯವಾಗಿ ಹುಲುಸಾಗಿ ಬೆಳೆಯಬಲ್ಲ ಬಿತ್ತನೆ,ಸಾಕಷ್ಟು ಬೀಜ,ಸಕಾಲಿಕ ಬಿತ್ತನೆ ಗೊಬ್ಬರ,ಬೆಳೆಯ ಆವರ್ತನೆ ಮುಂತಾದುವು ಸಹಾಯಕ.

೪.ರಾಸಾಯನಿಕ ಕಳೆ ನಿವಾರಣಾ ಕ್ರಮಗಳು:ಭಾರತದಲ್ಲಿ ಈ ದಿಕ್ಕಿನಲ್ಲಿ ಪ್ರಪ್ರಥಮ ಪ್ರಯತ್ನ ನಡೆದಿದ್ದು ೧೯೩೭ರಲ್ಲಿ ಲೂಥ್ರ ಅವರಿಂದ.ಅವರು ಸೋಡಿಯಂ ಆರ್ಸಿನೈಟ್