ಪುಟ:Mysore-University-Encyclopaedia-Vol-4-Part-2.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗ್ರೆಸ್, ಭಾರತ ರಾಷ್ಟ್ರೀಯ

ಬ್ರಿಟಿಷ್ ನ್ಯಾಯದೃಷ್ಟಿಯಲ್ಲಿ ಇವರಿಗೆ ಅಪಾರ ನಂಬುಗೆಯಿತ್ತು. ಬ್ರಿಟನಿನಲ್ಲಿದ್ದ ಉದಾರವಾದಿ ನಾಯಕತ್ವದಿಂದ ಮೊದಮೊದಲು ಭಾರತೀಯರ ಈ ತೆರನಾದ ಭಾವನೆಗಳಿಗೆ ಪ್ರೋತ್ಸಾಹವೂ ಸಿಕ್ಕಿತ್ತು. ಬ್ರಿಟಿಷ್ ಸರ್ಕಾರದ ನೀತಿ ನಿರೂಪಣೆಯಲ್ಲಿ ಈ ಅಂಶ ಪ್ರಧಾನವಾಗಿ ಎದ್ದು ಕಾಣುತ್ತಿತ್ತು. ಭಾರತೀಯ ಪ್ರಜೆಗಳ ಹಿತಸಾಧನೆಯೇ ಬ್ರಿಟನಿನ ಕರ್ತವ್ಯವೆಂಬುದು ೧೮೧೩ರ ಸನ್ನದು ಕಾಯಿದೆಯಲ್ಲಿ (ಚಾರ್ಟರ್ ಆಕ್ಟ್) ಕಂಡುಬಂದಿದ್ದ ಒಕ್ಕಣೆ. ೧೮೩೩ರ ಸಂಸದೀಯ ಸಮಿತಿ ವ್ಯಕ್ತಪಡಿಸಿದ್ದಾದರೂ ಇದೇ ಆಶಯವನ್ನೇ. ತನ್ನ ಸರ್ಕಾರದ ದೃಷ್ಟಿಯಲ್ಲಿ ಭಾರತದ ದೇಶೀಯ ಪ್ರಜೆಗಳಿಗೂ ಬ್ರಿಟಿಷ್ ಪ್ರಜೆಗಳಿಗೂ ಯಾವ ವ್ಯತ್ಯಾಸವೂ ಇಲ್ಲವೆಂದೇ ಬ್ರಿಟಿಷ್ ರಾಣಿ ಹೊರಡಿಸಿದ ಘೋಷಣೆಯಲ್ಲೂ (೧೮೫೮) ಹೇಳಲಾಗಿತ್ತು. ಇದನ್ನೆಲ್ಲ ಭಾರತೀಯ ಮಧ್ಯಮವರ್ಗದ ಬುದ್ಧಿಜೀವಿಗಳು ಮನಸಾರ ನಂಬಿದ್ದರು.

ಆದರೆ ಬಹುಬೇಗ ಅವರಿಗೆ ಭ್ರಮನಿರಸನಕಾದಿತ್ತು. ಭಾರತದ ಲೋಕಸೇವಾ ಅಧಿಕಾರಿ ವರ್ಗಕ್ಕೆ ಭಾರತೀಯರನ್ನು ನೇಮಿಸಿಕೊಳ್ಳುವ ವಿಚಾರಾದಲ್ಲಿ ಸರ್ಕಾರ ಅನುಸರಿಸಿದ ಧೋರಣೆಯೇ ಮೊದಲ ಆಘಾತ. ಭಾರತೀಯ ಪ್ರಜೆಯಾದ ಸುರೇಂದ್ರನಾಥ ಬ್ಯಾನರ್ಜಿ ಆ ಸಂಬಂಧವಾದ ಸ್ಪರ್ಧಾ ಪರೀಕ್ಷೆಯಲ್ಲಿ ಜಯಶಾಲಿಯಾಗಿದ್ದರೂ ಅವರ ಹೆಸರನ್ನು ಪಟ್ಟಿಯಿಂದ ಕಿತ್ತುಹಾಕಲು ಪ್ರಯತ್ನ ನಡೆಯಿತು. ಕೊನೆಗೆ ರಾಣಿಯ ನ್ಯಾಯ ಪೀಠದಿಂದ (ಕ್ವೀನ್ಸ್ ಬೆಂಚ್) ಬಂದ ಆಜ್ಞೆಯಿಂದಾಗಿ ಬ್ಯಾನರ್ಜಿಯನ್ನು ನೇಮಿಸಿಕೊಳ್ಳಲಾಯಿತಾದರೂ ಯಾವುದೋ ಕುಂಟು ನೆವದಿಂದ ಅವರನ್ನು ಸ್ವಲ್ಪ ಕಾಲಾನಂತರ ವಜಾ ಮಾಡಲಾಯಿತು.

ಹೀಗೆ ಬ್ರಿಟಿಷ್ ಸರ್ಕಾರಕ್ಕೆ ಸೇವೆ ಸಲ್ಲಿಸಲು ನಿರಾಕೃತರಾದ ವ್ಯಕ್ತಿಯೇ ಮುಂದೆ ರಾಷ್ಟ್ರೀಯ ಚಳವಳಿಯ ನಾಯಕರಾದರು. ಅವರಿಂದ ಕಲ್ಕತ್ತದ ಭಾರತೀಯ ಸಂಘದ ಸ್ಥಾಪನೆಯಾಯಿತು. ಮ್ಯಾಟ್ಜಿನಿಯಿಂದ ಸ್ಫೂರ್ತಿಗೊಂಡು ಅಖಿಲ ಭಾರತದ ವ್ಯಾಪ್ತಿಯುಳ್ಳ ಚಳವಳಿ ನಡೆಸುವುದು ಅದರೆ ಉದ್ದೇಶ. ಲೋಕಸೇವೆ, ಅಸ್ತ್ರಕಾಯಿದೆ, ದೇಶೀಯ ಪತ್ರಿಕಾ ಕಾಯಿದೆ ಮೊಂತಾದ ನಾನಾ ವಿಚಾರಗಳಲ್ಲಿ ಸರ್ಕಾರ ತಳೆದ ಧೋರಣೆಯನ್ನು ಪ್ರತಿಭಟಿಸಿ ಅಖಿಲ ಭಾರತ ಮಟ್ಟದಲ್ಲಿ ಸಭೆಗಳು ನಡೆದುವು. ಐರೋಪ್ಯ, ಬ್ರಿಟಿಷ್ ಪ್ರಜೆಗಳನ್ನು ಭಾರತೇಯ ನ್ಯಾಯಾಧೀಶರು ವಿಚಾರಣೆ ನಡೆಸಬಾರದೆಂಬ ನಿಯಮವನ್ನು ರದ್ದು ಮಾಡಲು ತಂದ ವಿಧೇಯಕವೊಂದನ್ನು (ನೋಡಿ-ಇಲ್ಬರ್ಟ್ ವಿಧೇಯಕ) ವಿರೋಧಿಸಲು ಭಾರತದಲ್ಲಿದ್ದ ಐರೋಪ್ಯರು ಸಂಘಟಿತರಾದ ಬಗೆಯನ್ನು ಕಂಡು, ಸಂಘಟನೆಯೇ ಗೆಲವಿಗೆ ತಳಹದಿಯೋಬುದನ್ನು ಭಾರತೀಯರೂ ಅರಿತುಕೊಂಡರು. ಇದರ ಫಲವೇ ಕಲ್ಕತ್ತದಲ್ಲಿ ಸಮಾವೇಶಗೊಂಡ (೧೮೮೩) ಭಾರತ ರಾಷ್ಟ್ರೀಯ ಸಮ್ಮೇಳನ.

ಭಾರತದ ಪ್ರಜೆಗಳ ಮಾನಸಿಕ, ನೈತಿಕ, ಸಾಮಾಜಿಕ ಮತ್ತು ರಾಜಕೀಯ ಪುನರುಜ್ಜೀವನಕ್ಕಾಗಿ ಕಲ್ಕತ್ತ ವಿಶ್ವವಿದ್ಯಾಲಯದ ಪದವೀಧರರು ಸುಸಂಘಟಿತರಾಗಬೇಕೆಂದು ಆಲೆನ್ ಆಕ್ಟೇವಿಯನ್ ಹ್ಯೂಂ ಆಯುವಕರಿಗೆ ಕರೆ ಕೊಟ್ಟದ್ದು ಅದೇ ವರ್ಷವೇ. ಭಾರತ ಸರ್ಕಾರಕ್ಕೆ ಸಾಮಾನ್ಯ ಜನರ ಅರೆ-ಕೊರೆಗಳನ್ನೂ ಆಶೋತ್ತರಗಳನ್ನೂ ಅರಿಕೆ ಮಾಡಿಕೊಳ್ಳಲು ಅಖಿಲ ಭಾರತ ಸಂಸ್ಥೆಯೊಂದು ಅಗತ್ಯವೆಂಬುದನ್ನು ಮನಗಂಡ ಹ್ಯೂಂ ಆ ವಿಚಾರವಾಗಿ ಸರ್ಕಾರದೊಂದಿಗೂ ಸಮಾಲೋಚನೆ ನಡೆಸಿದ. ಸರ್ಕಾರದಿಂದ ಉತ್ತೇಜಕ ಪ್ರತಿಕ್ರಿಯೆ ದೊರಕಿದ್ದರಿಂದ ಆತ ಮುಂದುವರಿದ. ಅನೇಕ ಪ್ರಮುಖ ಭಾರತೀಯರ ಸಹಕಾರ ದೊರಕಿತು. ೧೮೮೫ರ್ ಕ್ರಿಸ್^ಮಸ್ ವಾರದಲ್ಲಿ ಬೊಂಬಾಯಿಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಪ್ರಾಥಮಾಧಿವೇಶನ ನಡೆಯಿತು. ಕಲ್ಕತ್ತದಲ್ಲಿ ಭಾರತ ರಾಷ್ಟ್ರೀಯ ಸಮ್ಮೇಳನದ ದ್ವಿತೀಯಾಧಿವೇಶನ ನಡೆದದ್ದೂ ಅದೇ ಸಮಯದಲ್ಲೆ. ರಾಷ್ಟ್ರದಲ್ಲಿ ಜಾಗೃತಿ ಸಾಧಿಸುವ ಉದ್ದೇಶದಿಂದ ಅಖಿಲ ಭಾರತದಲ್ಲಿ ಏಕೈಕ ಸಂಸ್ಥೆಯಿರಬೇಕೆಂಬ ಉದ್ದೇಶದಿಂದ ಭಾರತ ರಾಷ್ಟ್ರೀಯ ಕಾಂಗ್ರೆಸಿನಲ್ಲಿ ಭಾರತ ರಾಷ್ಟ್ರೀಯ ಸಮ್ಮೇಳನ ವಿಲೀನವಾಯಿತು.

ಭಾರತ ರಾಷ್ಟೀಯ ಕಾಂಗ್ರೆಸಿನ ಪ್ರಥಮ ಅಧಿವೇಶನದಲ್ಲಿ ಭಾಗವಹಿಸಿದ ಪ್ರತಿನಿಧಿಗಳ ಸಂಖ್ಯೆ ಕೇವಲ ೭೧. ಅಂದಿನಿಂದ ವರ್ಷವರ್ಷವೂ ಕ್ರಿಸ್^ಮಸ್ ಸಮಯದಲ್ಲಿ ಅದರ ಅಧಿವೇಶನ ಒಂದೊಂದು ನಗರದಲ್ಲಿ ಸೇರಿತ್ತಿತ್ತು. ಅಧಿವೇಶನ ನಡೆಯುತ್ತಿದ್ದಲ್ಲೆಲ್ಲ ಸ್ಥಳೀಯ ಜನ ಅತೀವ ಉತ್ಸಾಹ ತಳೆಯುತ್ತಿದ್ದರು. ಕ್ರಮೇಣ ಅಖಿಲ ಭಾರತದ ಪ್ರತಿನಿಧಿಗಳ ಸಂಖ್ಯೆಯೂ ಅಧಿಕಗೊಂಡಿತು. ರಾಷ್ಟ್ರಾಕಾರಣಕ್ಕಾಗಿ ಶ್ರಮಿಸುವ ಎಲ್ಲ ನಿಷ್ಠಾವಂತರೂ ಪರಸ್ಪರವಾಗಿ ಅರಿತುಕೊಳ್ಳಬೇಕು. ಬರಲಿರುವ ವರ್ಷದಲ್ಲಿ ಅನುಸರಿಸುವ ಕಾರ್ಯಕ್ರಮವನ್ನು ನಿರ್ಧರಿಸಿಕೊಳ್ಳಬೇಕು. ಈ ಸಮ್ಮೇಳನದಲ್ಲೇ ದೇಶಿಯ ಸಂಸತ್ತಿನ ಅಂಕುರಾರ್ಪಣವಾಗಬೇಕು. ಇದನ್ನು ಸರಿಯಾಗಿ ನಿರ್ವಹಿಸಿದರೆ ಯಾವುದೇ ಬಗೆಯ ಪ್ರಾತಿನಿಧಿಕ ಸಂಸ್ಥೆಗಳಿಗೆ ಭಾರತ ಅನರ್ಹವೆಂಬ ಸವಾಲಿಗೆ ಇದು ಜವಾಬೂ ಆಗಬಹುದು_ಎಂದು ಪ್ರಥಮಾಧಿವೇಶನದ ಪ್ರಣಾಳಿಕೆಯಲ್ಲಿ ಹ್ಯೂಂ ಹೇಳಿದ ಮಾತು ಸಾರ್ಥಕವಾಯಿತು.