ಪುಟ:Mysore-University-Encyclopaedia-Vol-4-Part-2.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸೂತಿ ೩೦೮

ಹಾಕುವುದು ಪ್ರಾರಂಭವಾಯಿತು. ೧೬ನೆಯ ಶತಮಾನದ ಧಾರ್ಮಿಕ ಆಂದೋಲನದಲ್ಲಿ ಚರ್ಚಿನ ಅಮೂಲ್ಯ ಕಲಾಸಂಪತ್ತೆಲ್ಲ ನಾಶಗೊಂಡಿತು. ಕಸೂತಿಯ ಬಟ್ಟೆಗಳನ್ನೆಲ್ಲ ದಿನಬಳಕೆಯ ವಸ್ತುಗಳಾಗಿ ಉಪಯೋಗಿಸತೊಡಗಿದರು; ಮುತ್ತುರತ್ನಗಳನ್ನು ಕದ್ದೊಯ್ದರು. ಮೊದಲನೆಯ ಎಲಿಜ಼ಬೆತ್ ಕಾಲದಲ್ಲಿ ಕಸೂತಿ ಕಲೆ ಒಂದು ರೀತಿಯಲ್ಲಿ ತನ್ನ ಗತವೈಭವವನ್ನೇ ಮತ್ತೆ ಪಡೆಯಿತು. ೧೮ನೆಯ ಶತಮಾನದಿಂದೀಚೆಗೆ ಯಂತ್ರಗಳ ಪ್ರಭಾವದಿಂದಾಗಿ ನಮೂನೆಗಳು ಇನ್ನೂ ಸೂಕ್ಷ್ಮವಾದುವು.

ಹವ್ಯಾಸಿ ಕಸೂತಿಕಲೆ ಇಂಗ್ಲೆಂಡಿನಲ್ಲಿ ೧೯ನೆಯ ಶತಮಾನದಿಂದ ಪ್ರಾರಂಭವಾಯಿತು. ಜರ್ಮನಿಯಿಂದ ತರಿಸಲಾದ ಕೈಕುಂಚದಿಂದ ತಯಾರಿಸಿದ ಮಾದರಿಗಳನ್ನು ನೋಡಿ ಮೃದುವಾದ ಉಣ್ಣೆಯ ಮೇಲೆ ಕತ್ತರಿ ಕಸೂತಿ ಹಾಕುವ ವಿಧಾನ ಬಂತು. ಬರ್ಲಿನ್ ಉಣ್ಣೆಗಾರಿಕೆಯೆಂದು ಕರೆಯಲಾದ ಈ ಚಿತ್ರಗಳಲ್ಲಿ ಸುಮಾರು ೧೪,೦೦೦ಕ್ಕೂ ಹೆಚ್ಚು ಕಸೂತಿ ಮಾದರಿಗಳಿದ್ದವು. ಮುಂದಿನ ಅರ್ಧ ಶತಮಾನದಲ್ಲಿ ಚರ್ಚ್ ಕಸೂತಿ ಪುನಃ ಪ್ರಚಲಿತವಾಯಿತು. ೧೮೬೧ರಲ್ಲಿ ಪ್ರಾರಂಭವಾದ ವಿಲಿಯಂ ಮಾರಿಸನ ಅಂಗಡಿಯಲ್ಲಿ ಕಸೂತಿ ಪದಾರ್ಥಗಳು ವಿವಿಧ ನಮೂನೆಗಳಲ್ಲಿ ದೊರೆಯುತ್ತಿದ್ದುವು. ಕಸೂತಿ ಕಲೆಯನ್ನು ಕಲಿಸುವ ಅನೇಕ ಶಾಲೆಗಳು ೧೮೭೨ರ ಹೊತ್ತಿಗೆ ಪ್ರಾರಂಬವಾಗಿದ್ದುವು.

೧೭೮೨ರಲ್ಲಿ ಎಡಿನ್‍ಬರೋಗೆ ಬಂದಿದ್ದ ಇಟಲಿಯ ಕಸೂತಿ ಕೆಲಸಗಾರನೊಬ್ಬನಿಂದ ಒಂದು ರೀತಿಯ ಐರ್‍ಷೈರ್ ಬಿಳಿಕಸೂತಿ ಸ್ಕಾಟ್‍ಲೆಂಡಿನಲ್ಲಿ ಪ್ರಾರಂಭವಾಯಿತು. ಕಲಾಬತು ಕಲೆ ಬಹಳವಾಗಿ ಮುಂದುವರಿಯಿತು. ಅಲ್ಲಿಯವರು ಯುರೋಪಿನ ಬೇರೆ ದೇಶಗಳಿಂದ ಬಹಳವಾಗಿ ತೆರಿಗೆ ಮತ್ತು ಕಲಾಬತುಗಳನ್ನು ಆಮುದುಮಾಡಿಕೊಳ್ಳುತ್ತಿದ್ದರು. ಆ ಇಟಾಲಿಯನ್ ಕಲೆಗಾರನಿಗೆ ವಾರ್ಷಿಕ ಅನುದಾನವನ್ನು ನೀಡಿ ಮಸ್ಲಿನ್ ಕಸೂತಿಯಲ್ಲಿ ಸ್ಕಾಟ್ ಜನರಿಗೆ ತರಬೇತಿ ನೀಡುವಂತೆ ನೇಮಿಸಲಾಯಿತು. ಹೀಗಾಗಿ ೨೯ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ೫,೦೦,೦೦೦ ಜನ ಈ ಕಲೆಯಲ್ಲಿ ನಿಪುಣರಾಗಿ, ಈ ಉದ್ಯಮದ ಮತ್ತೊಂದು ಶಾಖೆ ಬೆಲ್‍ಫಾಸ್ಟ್‌ನಲ್ಲೂ ಪ್ರಾರಂಭವಾಯಿತು. ಬಿಳಿ ಕಸೂತಿಯಲ್ಲಿ, ಸಾಟಿನ್ ಮೇಲೆ ಹೂವುಗಳನ್ನು ಬಿಡಿಸುತ್ತಿದ್ದರು. ಸ್ಕಾಟ್ ಕಸೂತಿ ವಿಧಾನಗಳು ಬಹುತೇಕ ಇಂಗ್ಲೆಂಡಿನ ಮಾದರಿಯನ್ನೇ ಹೋಲುತ್ತವೆ.

ಐರ್ಲೆಂಡಿನಲ್ಲಿ ಮೊದಲಿಗೆ ಕಸೂತಿ ಕಲೆ ಡ್ರೊನೆಕ್ ಎಂಬ ಹೆಸರಿನಿಂದ ಅಲ್ಲಿಯ ಹೆಂಗಸರು ನಡೆಸುತ್ತಿದ್ದ ಒಂದು ಚಿಕ್ಕ ವ್ಯಾಪಾರೋದ್ಯಮವಾಗಿತ್ತು. ನಮೂನೆಗಳನ್ನು ಚರ್ಮದ ಮೇಲೆ ಬರೆದು ಅವನ್ನು ಪ್ರತಿಮಾಡಲಾಗುತ್ತಿತ್ತು. ಮೊದಲಿಗೆ ಕಸೂತಿಕಲೆಗೆ ಬಹಳ ಮನ್ನಣೆಯಿತ್ತು. ಅನಂತರ ಐರಿಷ್ ಬಿಳಿ ಕಸೂತಿಯನ್ನು ಸ್ಯಾಕ್ಸನಿಯ ಕಸೂತಿಯಂತೆಯೇ ಉತ್ತಮವಾದ ಕೇಂಬ್ರಿಕ್, ಲಿನೆನ್ ಮತ್ತು ಮಸ್ಲಿನ್ ಬಟ್ಟೆಗಳ ಮೇಲೆ ಹಾಕಲಾಗುತ್ತಿತ್ತು. ಮೆಟ್ರೊಪಾಲಿಟನ್ ಕಲಾ ಸಂಗ್ರಹಾಲಯದಲ್ಲಿರುವ ಇದರ ೧೯ನೆಯ ಶತಮಾನದ ಒಂದು ನಮೂನೆಯಲ್ಲಿ ದಪ್ಪ ಅಂಚಿನ ಹೂವುಗಳಿಂದೊಡಗೂಡಿದ ಕರವಸ್ತ್ರವೊಂದಿದೆ.

ಅಮೆರಿಕದಲ್ಲಿ ಮುಂಚಿನ ವಲಸೆಗಾರರು ತಮ್ಮ ತಾಯ್ನಾಡಿನಿಂದಲೇ ಕಸೂತಿ ಕಲೆಯನ್ನು ಕಲಿತುಬಂದಿದ್ದರೂ ಮೊದಮೊದಲಿಗೆ ವಸ್ತುಗಳ ಅಭಾವದಿಂದಾಗಿ ಕಸೂತಿ ಕಲೆ ಸುಗಮವಾಗಿ ಸಾಗಲಿಲ್ಲ. ಪ್ರತಿಯೊಂದು ವಸ್ತುವನ್ನೂ ಕೈಗಳಿಂದಲೇ ತಯಾರಿಸಬೇಕಿತ್ತು. ಅವರು ಉಣ್ಣೆಯ ಕಸೂತಿ ದಾರಗಳಿಂದ ಲಡಿಗಳನ್ನು ತಯಾರಿಸಿ, ಅವಕ್ಕೆ ಬಣ್ಣಹಾಕುತ್ತಿದ್ದರು. ನೀಲಿ ಬಣ್ಣ ಮುಖ್ಯವಾಗಿದ್ದು, ಅದಕ್ಕೇ ಕೆಲವು ಬೇರೆ ಬೇರೆ ಛಾಯೆಗಳನ್ನು ನೀಡುತ್ತಿದ್ದರು. ನೂಲುಯಂತ್ರದ ಬಳಕೆಗೆ ಮೊದಲು ಲಿನೆನನ್ನೆ ಉಪಯೋಗಿಸುತ್ತಿದ್ದರು. ಇಂಗ್ಗೆಂಡಿನಲ್ಲಿ ೧೭ನೆಯ ಶತಮಾನದಲ್ಲಿ ಬಹಳ ಪ್ರಚಲಿತವಾಗಿದ್ದ ಉಣ್ಣೆಯ ಕಸೂತಿ ದಾರವನ್ನೇ ಅಮೆರಿಕದ ಸ್ತ್ರೀಯರು ಬಳಸುತ್ತಿದ್ದರು. ಅನಂತರ ತುರ್ಕಿ ಕಸೂತಿಯ ಪ್ರಭಾವವೂ ಇವರ ಮೇಲೆ ಬಿದ್ದು ಮೆತ್ತೆಗಳೇ ಮೊದಲಾದವನ್ನು ಕಸೂತಿಯಿಂದ ಸಜ್ಜುಗೊಳಿಸುತ್ತಿದ್ದರು. ಇಂಗ್ಲೆಂಡಿನ ಕಲೆಗಿಂತಲೂ ಅಮೆರಿಕನ್ನರ ಕಲೆ ಹೆಚ್ಚು ಸರಳವಾಗಿತ್ತು.

ಇಂಗ್ಲೆಂಡ್ ಫ್ರಾನ್ಸ್‌ಗಳಂತೆ ಅಮೆರಿಕದಲ್ಲೂ ಮತ್ತೆ ಕಸೂತಿ ಕೆಲಸ ಉತ್ತಮಗೊಂಡಿತು. ಬಣ್ಣಬಣ್ಣದ ಬಟ್ಟೆಗಳ ಮೇಲೆ ಜಾಳಿಗೆಯ ಬಗೆಬಗೆಯ ಕಸೂತಿ ಹಾಕುತ್ತಿದ್ದರು. ೧೯ನೆಯ ಶತಮಾನದ ಮತ್ತೊಂದು ವಿಶಿಷ್ಟ ನಮೂನೆಯೆಂದರೆ ಅಸಮಾಕಾರಗಳ ರೇಷ್ಮೆಯ ವಸ್ತ್ರದ ತುಂಡುಗಳನ್ನು ಅಂಚುಸೇರಿಸಿ ಹೊಲಿದು ಅವುಗಳ ಮೇಲೆ ಕಸೂತಿ ಮಾಡುವುದು. ಅಮೆರಿಕದ ವಸ್ತ್ರ ತಯಾರಕರು ಮಾರುತ್ತಿದ್ದ ಕಚ್ಚಾ ಪದಾರ್ಥಗಳೊಡನೆ ನಾನಾತೆರದ ನಮೂನೆಗಳೂ ಕಸೂತಿ ವಿಧಾನಗಳೂ ಕೂಡಿರುತ್ತಿದ್ದುವು. ಇಂಗ್ಲೆಂಡಿನಂತೆ ಅಮೆರಿಕದಲ್ಲಿ ಶಾಲಾಬಾಲಕಿಯರು ತಮ್ಮ ಅಭ್ಯಾಸ ಕ್ರಮದಲ್ಲಿ ಕಸೂತಿಯನ್ನು ಕಲಿಯುತ್ತಿದ್ದರು. ಬಟ್ಟೆಗಳ ಮೇಲೆ ಬೇರೆ ಬೇರೆ ನಮೂನೆಯ ಹೊಲಿಗೆಗಳು, ಅಕ್ಷರಗಳು, ಬೈಬಲಿನ ಪದ್ಯಗಳೇ ಮೊದಲಾದವನ್ನು ಹೊಲಿಯಲಾಗುತ್ತಿತ್ತು. ಉಣ್ಣೆ, ರೇಷ್ಮೆ ಹಾಗೂ ಕ್ಯಾನ್‍ವಾಸ್‍ಗಳ ಮೇಲೆ ಕತ್ತರಿ ಹೊಲಿಗೆಯಲ್ಲಿ ನಿಸರ್ಗ ದೃಶ್ಯಗಳನ್ನೋ ಕಾವ್ಯಗಳು, ಬೈಬಲ್ ಮೊದಲಾದವುಗಳಲ್ಲಿ ಬರುವ ಸನ್ನಿವೇಶಗಳ ದೃಶ್ಯಗಳನ್ನೋ ಮಾದರಿಯಾಗಿಟ್ಟುಕೊಳ್ಳುತ್ತಿದ್ದರು. ಪೆನ್‍ಸಿಲ್ವೇನಿಯದಲ್ಲಿ ನೆಲೆಸಿದ ಜರ್ಮನರಿಂದ ಅಮೆರಿಕದ ಕಲೆಯ ಮೇಲೆ ಬಿದ್ದ ಜರ್ಮನಿಯ ಪರಂಪರಾಗತ ಕಸೂತಿ ಕಲೆಯ ಪ್ರಭಾವ ವಿಶೇಷವಾದದ್ದು.

ಕಸೂತಿ ಕಲೆ ಜನಪ್ರಿಯವಾಗುತ್ತಿದ್ದ ಹಾಗೆಯೇ ಉಡುಪುಗಳ ಮೇಲೂ ಕಲೆಗಾರಿಕೆಯ ಕೆಲಸ ಪ್ರಾರಂಭವಾಯಿತು. ಪ್ರತಿಯೊಂದು ಮಾದರಿಯ ಬಿಳಿಯ ಮಸ್ಲಿನ್ ಬಟ್ಟೆಯ ಮೇಲೂ ಹತ್ತಿ ಅಥವಾ ರೇಷ್ಮೆಯ ಎಳೆಗಳಿಂದ ಕಸೂತಿ ಮಾಡಲಾಗುತ್ತಿತ್ತು. ಸ್ರ್ತೀಯರಿಗೆ ಮೀಸಲಾದ ಪತ್ರಿಕೆಗಳಲ್ಲೂ ನಮೂನೆಗಳನ್ನು ಮತ್ತು ಕಸೂತಿ ವಿಧಾನಗಳನ್ನು ಪ್ರಕಟಿಸಲಾಗುತ್ತಿತ್ತು. ೧೯ನೆಯ ಶತಮಾನದ ಅಂತ್ಯದ ಹೊತ್ತಿಗೆ ವಿಲಿಯಂ ಮಾರಿಸನ ಪ್ರಭಾವದಿಂದಾಗಿ ಎಲ್ಲ ಕೈಕೆಲಸದ ಪದಾರ್ಥಗಳ ಮೇಲೂ ಕಲೆಗಾರಿಕೆ ಪ್ರಾರಂಭವಾಯಿತು. ಅನಂತರದಲ್ಲಿ ಯುರೋಪಿನಲ್ಲಿ ಸಂದುಹೋದ ನಾನಾ ಯುಗಗಳಲ್ಲಿ ಪ್ರಚಲಿತವಿದ್ದ ಶೈಲಿಗಳಲ್ಲಿ ಕಸೂತಿ ಕೆಲಸ ಪ್ರಾರಂಭವಾಯಿತು. ೨೦ನೆಯ ಶತಮಾನದ ಪ್ರಾರಂಭದಲ್ಲಿ ಕಂಡುಬಂದ ಪ್ರವೃತ್ತಿಯೆಂದರೆ ನಿಸರ್ಗ ದೃಶ್ಯಗಳ ಚಿತ್ರಣ. ಹೊಗೊಂಚಲು, ಹಾರುವ ಹಕ್ಕಿ, ಬೆಟ್ಟಗಳೇ ಮೊದಲಾದವು ರೇಷ್ಮೆಯ ಬಟ್ಟೆಗಳ ಮೇಲೆ ಸಾಟಿನ್ ಹೊಲಿಗೆಯಿಂದ ಸೂಕ್ತವಾದ ಹಿಂಬದಿಯ ಛಾಯೆಯಲ್ಲಿ ಮೂಡಿಬರುತ್ತಿದ್ದವು. ಮೂಲವೇ, ತದ್ವತ್ ಎಂಬಷ್ಟು ಇವು ಚೆನ್ನಾಗಿದ್ದುವು. ಅನಂತರದಲ್ಲಿ ಅನೇಕ ಕುಶಲ ಕಲೆಗಾರರ ಸಂಘಗಳ ಸ್ಥಾಪನೆಯಾಗಿ ಕಸೂತಿ ಒಂದು ರೀತಿಯ ಅಲಂಕರಣ ಹಾಗೂ ಮನರಂಜನೆಯ ಕಲೆಯಾಗಿ ಜನಪ್ರಿಯಾಗಿ ಉಳಿದುಬಂದಿದೆ.

ಏಷ್ಯದಲ್ಲಿ: ಪುರಾತನ ಇರಾನಿನ ಕುಶಲಕಲೆಗಾರಿಕೆಯಲ್ಲಿ ನಿಸರ್ಗಾನುಕರಣೆಯೇ ಪ್ರಧಾನ ಲಕ್ಷಣ. ಆಮುಖಾನ, ಉಡುಪು, ಪರದೆ, ಹಾಸುವ ವಸ್ತ್ರಗಳು, ಮೆತ್ತೆಗಳೇ ಮೊದಲಾಗಿ ಎಲ್ಲ ವಸ್ತುಗಳ ಮೇಲೆ ಕಸೂತಿ ಮಾಡಲಾಗುತ್ತಿತ್ತು. ಇಸ್ಲಾಂ ಕಲೆಯಲ್ಲಿ ಮನುಷ್ಯರ ಹಾಗೂ ಅವರ ನಿತ್ಯಚಟುವಟಿಕೆಗಳಾದ ಬೇಟೆಗಾರಿಕೆ, ಭೋಜನಕೂಟ ಮೊದಲಾದವುಗಳ ಚಿತ್ರಣವಿದೆ. ಪ್ರಕೃತಿಪ್ರಿಯರಾದ ಮುಸ್ಲಿಮರ ಕಲೆಯಲ್ಲಿ ಗಿಡ ಬಳ್ಳಿಗಳು ಮತ್ತು ಹೂವು ಹಣ್ಣುಗಳು ಎಲ್ಲೆಲ್ಲೂ ಎದ್ದುಕಾಣುತ್ತವೆ. ಪರ್ಷಿಯನ್ ಕಸೂತಿಗಾರಿಕೆ ೧೬ನೆಯ ಶತಮಾನಕ್ಕಿಂತಲೂ ಹಳೆಯದೆಂದು ಹೇಳಲಾಗುವುದಿಲ್ಲ. ಮಾರ್ಕೊಪೊಲೊ ತನ್ನ ಪ್ರವಾಸ ಕಾಲದಲ್ಲಿ ಅಲ್ಲಿಗೆ ಭೇಟಿ ನೀಡಿದಾಗ ಕಸೂತಿ ಕಲೆಗಾರರನ್ನು ನೋಡಿದ್ದುದಾಗಿ ಹೇಳಿದ್ದಾನೆ. ಮೊದಲಿಗೆ ಪರ್ಷಿಯದಲ್ಲಿ ಕೇವಲ ಕಸೂತಿಯಿಂದಲೇ ವಸ್ತ್ರಗಳನ್ನು ತುಂಬಿಸಲಾಗುತ್ತಿದ್ದು ಅನಂತರ ಬಣ್ಣಗಳ ಸೂಕ್ತ ಸಂಯೋಜನೆಯೂ ಬಂತು. ೧೭ನೆಯ ಮತ್ತು ೧೮ನೆಯ ಶತಮಾನಗಳ ಹೊತ್ತಿಗೆ ವಿವಿಧ ನಮೂನೆಗಳು ಬಳಕೆಗೆ ಬಂದುವು. ಪರ್ಷಿಯನರು ಅನುಸರಿಸುತ್ತಿದ್ದ ಸರಪಳಿ ಹೊಲಿಗೆ ಭಾರತಕ್ಕೂ ಬಂದು ಇಲ್ಲಿಂದ ಇಂಗ್ಲೆಂಡ್ ಮೊದಲಾದ ದೇಶಗಳಿಗೂ ಹೋಯಿತು. ಇರನಿನಲ್ಲಿ ಈಗ ಕಸೂತಿ ಕಲೆಗೆ ಹೆಚ್ಚಿನ ಪ್ರಾಮುಖ್ಯವೇನೂ ಇಲ್ಲ.

ಚೀನದೊಂದಿಗೆ ವಾಣಿಜ್ಯ ಸಂಬಂಧ ಬೆಳೆಸಿದ ಎಲ್ಲ ದೇಶಗಳ ಪ್ರಭಾವವೂ ಅಲ್ಲಿಯ ಕಸೂತಿ ಕಲೆಯ ಮೇಲೆ ಬಿದ್ದಿದೆ. ಪರ್ಷಿಯದ ಪ್ರಭಾವವಂತೂ ಗಣನೀಯವಾದದ್ದು, ರೇಷ್ಮೆ ಕೈಗಾರಿಕೆ ಚೀನದಲ್ಲಿ ಬೆಳೆದುಬಂದದ್ದು ಹೀಗೆಯೇ. ಕಸೂತಿಯ ಅತ್ಯಂತ ಪುರಾತನ ಮಾದರಿಯೆಂದರೆ ಪೂರ್ವ ತುರ್ಕಿಸ್ತಾನದಲ್ಲಿ ದೊರೆಯುವ ಕೆಲವು ಕೃತಿಗಳು. ಇವು ತು ಅಂಗ್ ಸಾಮ್ರಾಜ್ಯದಲ್ಲಿ ತಯಾರಾದವೆಂದೂ ಸುಮಾರು ೬ನೆಯ ಅಥವಾ ೭ನೆಯ ಶತಮಾನದ್ದೆಂದೂ ಹೇಳಬಹುದು. ಚೀನದ ಜನರ ಅತಿಸಾಂಪ್ರದಾಯಿಕತೆ ಹಾಗೂ ಸಂಕೀರ್ಣ ಹೃದಯಗಳಿಂದಾಗಿ ಮೊದಲಿನ ಕಲೆಯ ಬಗ್ಗೆ ನಿರ್ದಿಷ್ಟವಾಗಿ ಹೇಳುವುದು ಕಷ್ಟವಾಗುತ್ತದೆ. ಆದರೂ ೧೮ನೆಯ ಶತಮಾನದಿಂದೀಚೆಗೆ ಅನೇಕ ನಿದರ್ಶನಗಳು ದೊರಕುತ್ತವೆ. ಚೀನೀಯರಿಗೆ ಅಲಂಕರಣವೇ ಕಸೂತಿಯ ಮುಖ್ಯ ಉದ್ದೇಶ ಹನ್ನೆರಡು ವಿಧವಾದ ಆಭರಣಗಳನ್ನು ಸಮ್ರಾಟ ತನ್ನ ಪೋಷಾಕಿನಲ್ಲಿ ಧರಿಸುತ್ತಿದ್ದ. ಸೂರ್ಯ, ಮೂರು ಕಾಲುಗಳುಳ್ಳ ಪಕ್ಷಿ, ಮೊಲವನ್ನೊಳಗೊಂದ ಚಂದ್ರ, ನಕ್ಷತ್ರಗಳು, ಬೆಟ್ಟಗುಡ್ಡಗಳು ಮೊದಲಾದವು ಈ ಆಭರಣಗಳು. ನಾಗರಿಕ ಹಾಗೂ ಮಿಲಿಟರಿ ಅಧಿಕಾರಿಗಳು ಬೇರೆ ಬೇರೆ ವೈಯಕ್ತಿಕ ಲಾಂಛನಗಳನ್ನು ಧರಿಸುತ್ತಿದ್ದು. ಇವರ ಕಸೂತಿ ಕಲೆ ನಿರ್ದಿಷ್ಟವಾಗಿಯೂ ನಿಖರವಾಗಿಯೂ ಇತ್ತು ಪೀಕಿಂಗಿನಲ್ಲಿ ಚೀನೀಯರ ಕಸೂತಿ ವಿಶೇಷ ಶೈಲಿಯೊಂದಿತ್ತು. ಮಾಸದ ಚಿನ್ನ ಬೆಳ್ಳ ಎಳೆಗಳನ್ನು ಕಸೂತಿಯಲ್ಲಿ ಉಪಯೋಗಿಸಲಾಗುತ್ತಿತ್ತು. ಹೂ ಗಿಡ, ಋತುಮಾನಗಳು, ಪೀಠೋಪಕರಣ, ಪರದೆ, ಉಡುಪು ಮೊದಲಾದ ಪದಾರ್ಥಗಳ ಮೇಲೆ ಸ್ಪಷ್ಟವಾಗಿ ಮೂಡುತ್ತಿದ್ದವು.

ಜಪಾನೀಯರ ಕಸೂತಿ ಕಲೆ ಅನೇಕ ವಿಧಗಳಲ್ಲಿ ಚೀನದ್ದನ್ನೇ ಅನುಸರಿಸಿದರೂ ಅದಕ್ಕಿಂತ ಮಿಗಿಲಾಗ ಚಿತ್ರಾತ್ಮಕವಾಗಿಯೂ ಮನೋರಂಜಕವಾಗಿಯೂ ಇದೆ. ೧೭-೧೮ನೆಯ ಶತಮಾನಗಳ ಜಪಾನಿ ಕಸೂತಿ ಮಾದರಿಗಳು ಪರಂಪರೆ ಚಿತ್ರಗಳು, ಆದರೆ ಶತಮಾನದ ಕೊನೆಯಲ್ಲಿ ಹೂಗಿಡ, ದೋಣಿ, ಜಲಪಾತ, ತೊರೆ ಮೊದಲಾದವು ಉತ್ತಮವಾಗಿ ಕಸೂತಿಯಲ್ಲಿ ಮೂಡಿಬಂದುವು. ಇಲ್ಲಿಯ ಕಿರಿಯೋಸ ಒಂದು ಒಳ್ಳೆಯ ಮಾದರಿ, ಬಣ್ಣದ ರೇಷ್ಮೆಬಟ್ಟೆಗಳ ಮೇಲೆ ಚಿನ್ನದ ಎಳೆಗಳನ್ನು ವಿಶಿಷ್ಟ