ಪುಟ:Mysore-University-Encyclopaedia-Vol-4-Part-2.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಕನಕೋಟೆ-ಕಾಕಲ್ ೩೯೧

ರುದ್ರಮಹಾದೇವಿ ಎಲ್ಲ ಗಂಡಾಂತರಗಳನ್ನೂ ಧೈರ್ಯದಿಂದ ಎದುರಿಸುತ್ತ ಸಮರ್ಥ ರೀತಿಯಿಂದ ರಾಜ್ಯಭಾರ ಮಾಡಿದಳು, ಪೂರ್ವಭಾಗದಲ್ಲಿ ಗೋದಾವರಿಯ ಮತ್ತು ವೆಂಗಿಯ ಪ್ರದೇಶಗಳು ಕೆಲಕಾಲ ಕೈಬಿಟ್ಟು ಹೋಗಿ ಮತ್ತೆ ಸ್ವಾಧೀನವಾದವು. ಸೇವುಣರ ಆಕ್ರಮಣವನ್ನು ಶೌರ್ಯದಿಂದ ವಿರೋಧಿಸಿದಳು. ಪಾಂಡ್ಯರು ಆಕ್ರಮಿಸಿದ್ದ ಪ್ರದೇಶಗಳನ್ನು ಗೆದ್ದುಕೊಂಡಳು. ಈ ಸಮರಗಳಲ್ಲಿ ರುದ್ರಮಹಾದೇವಿಯ ಮಗಳ ಮಗನೂ ದತ್ತುಪುತ್ರನೂ ಆದ ಕುಮಾರ ರುದ್ರದೇವ ಪರಾಕ್ರಮದಿಂದ ಹೋರಾಡಿ ಜಯಗಳಿಸಿದ. ಆಂಧ್ರ ದೇಶದ ಮತ್ತು ಭಾರತದ ಚರಿತ್ರಾರ್ಹ ಮಹಿಳೆಯರಲ್ಲಿ ಈಕೆಯೂ ಒಬ್ಬಳು. ಸ್ತ್ರೀಯಾದರೂ ಈಕೆ ರಾಜಕಾರ್ಯದಲ್ಲಿಯೂ ಶೌರ್ಯ ಪರಾಕ್ರಮದಲ್ಲಿಯೂ ಯಾವ ರಾಜನಿಗೂ ಕಡಿಮೆಯಿರಲಿಲ್ಲ. ಪುರುಷವೇಷ ಧರಿಸಿ ಉತ್ಸಾಹದಿಂದ ಸಕಲ ರಾಜಕೀಯ ವ್ಯವಹಾರಗಳನ್ನೂ ನಿರ್ವಹಿಸುತ್ತಿದ್ದಳು. ಕೆಲವು ಸಂದರ್ಭಗಳಲ್ಲಿ ಸಮರಭೂಮಿಯಲ್ಲಿಯೂ ಮುನ್ನುಗ್ಗುತ್ತಿದ್ದದ್ದುಂಟು. ಈಕೆಯ ಆಳ್ವಿಕೆಯಲ್ಲಿ ಪ್ರಜೆಗಳು ಸುಖ ಸಮಾಧಾನಗಳಿಂದ ಬಾಳಿದರು. ರುದ್ರಮಹಾದೇವಿಯ ಮರಣಾನಂತರ ಕುಮಾರ ರುದ್ರದೇವ ೧೨೯೫ರಲ್ಲಿ ತನ್ನ ೩೫ನೇಯ ವಯಸ್ಸಿನಲ್ಲಿ ಪಟ್ಟವೇರಿದ. ಇವನಿಗೆ ಪ್ರತಾಪರುದ್ರನೆಂದೂ ಹೆಸರಿತ್ತು. ಇವನಿಗೆ ರಾಜನೀತಿ ಯುದ್ಧನೀತಿಗಳಲ್ಲಿ ಸಾಕಷ್ಟು ಅನುಭವವಿತ್ತು. ಶತ್ರುಗಳ ಆಕ್ರಮಣವನ್ನು ವಿರೋಧಿಸಲು ಇವನು ಸೈನ್ಯವನ್ನು ಸಂಗ್ರಹಿಸಿ ಅದರ ಬಲವನ್ನೂ ಸಂಘಟನೆಯನ್ನೂ ಹೆಚ್ಚಿಸಿದ. ಈ ಹೊತ್ತಿಗೆ ದಿಲ್ಲಿಯ ಸಿಂಹಾಸನವನ್ನು ಅಕ್ರಮಿಸಿದ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಉತ್ತರ ಭಾರತದಲ್ಲಿ ತನ್ನ ಆಧಿಪತ್ಯವನ್ನು ಸ್ಥಿರಗೊಳಿಸಿ ದಕ್ಷಿಣ ಭಾರತವನ್ನು ಜಯಿಸುವ ಮಹತ್ತ್ವಾಕಾಂಕ್ಷೆಯಿಂದ ದಂಡಯಾತ್ರೆಗಳಲ್ಲಿ ತೊಡಗಿದ. ೧೩೦೩ರಲ್ಲಿ ಕಾಕತೀಯ ರಾಜ್ಯದ ಮೇಲೆ ನಡೆದ ದಂಡಯಾತ್ರೆಯಲ್ಲಿ ದಿಲ್ಲಿಯ ಸೇನೆ ಪರಾಭವ ಹೊಂದಿತು.ಆನಂತರ ೧೩೧೦ರಲ್ಲಿ ಸುಲ್ತಾನನ ಸೇನಾಪತಿ ಮಲ್ಲಿಕ್ ಕಾಫರ್ ಪ್ರಚಂಡ ಸೈನ್ಯದೊಂದಿಗೆ ನುಗ್ಗಿ, ವಾರಂಗಲ್ ರಾಜಧಾನಿಗೆ ಮುತ್ತಿಗೆ ಹಾಕಿದ. ಪ್ರತಾಪರುದ್ರ ಸೋತು, ಅಪಾರ ಹಣ ಕೊಡಬೇಕಾಯಿತು. ಇದರಿಂದ ಆಂಧ್ರದಲ್ಲಿ ರಾಜಕೀಯ ಪರಿಸ್ಥಿತಿ ಆಸ್ಥಿರವಾಯಿತು. ಪ್ರತಾಪರುದ್ದ ಸುಲ್ತಾನನಿಗೆ ಕೊಡತಕ್ಕ ಪೊಗದಿಯನ್ನು ನಿಲ್ಲಿಸಿದನೆಂಬ ನೆಪಹೂಡಿ, ಸೈಬಾಧಿಕಾರಿ ಖುಸ್ರುಖಾನ ೧೩೧೮ರಲ್ಲಿ ವಾರಂಗಲ್ಲಿಗೆ ದಾಳಿಯಿಟ್ಟಾಗ ಪ್ರತಾಪರುದ್ರ ಮುನಃ ನಿರುಪಾಯನಾಗಿ ಕಪ್ಪ ತರಬೇಕಾಯಿತು. ಮುಂದೆ ದೆಹಲಿಯಲ್ಲಿ ರಾಜಕೀಯ ಕ್ರಾಂತಿ ನಡೆದು ಖಿಲ್ಜಿ ಸುಲ್ತಾನರ ಆಳ್ವಿಕೆ ಕೊನೆಗೊಂಡು ೧೩೨೦ರಲ್ಲಿ ತುಗಲಖ್ ಮನೆತನದ ಆಳ್ವಿಕೆ ಪ್ರಾರಂಭವಾಯಿತು. ಘಿಯಾಸುದ್ದೀನ್ ಈ ಮನೆತನದ ಮೊದಲ ಸುಲ್ತಾನ. ಈತ ತನ್ನ ಮಗ ಉಲುಫ್ ಖಾನನನ್ನು ೧೩೨೩ರಲ್ಲಿ ತೆಲಂಗಾಣದ ದಂಡಯಾತ್ರೆಗೆ ಕಳುಹಿಸಿದ. ಮೊದಲ ಸಲ ಈ ಆಕ್ರಮಣ ವಿಫಲವಾದುದರಿಂದ, ದೆಹಲಿಯ ಸೇನೆ ಬೇಗನೆ ಸುಸಂಘಟಿತವಾಗಿ ಎರಡನೇಯ ಸಲ ವಾರಂಗಲ್ಲಿನ ಮೇಲೆ ಎರಗಿತು. ಅಜಾಗರೊಕತೆಯಿಂದಾಗಿ ಪ್ರತಾಪರುದ್ರ ಈ ದಾಳಿಯನ್ನು ಎದುರಿಸಲಾರದೆ ಪರಾಜಯ ಹೊಂದಿ ರಾಜಧಾನಿಯನ್ನು ಶತ್ರುವಿನ ವಶಕ್ಕೆ ಒಪ್ಪಿಸಬೇಕಾಯಿತು. ಉಲುಫ್ ಖಾನ್ ಪ್ರತಾಪರುದ್ರನನ್ನೂ ಅವನ ಪರಿವಾರದವರನ್ನೂ ಬಂಧಿಸಿ ದಿಲ್ಲಿಗೆ ಕಳುಹಿಸಿದ. ಮಾರ್ಗದಲ್ಲಿ ಪ್ರತಾಪರುದ್ರ ಮೃತನಾದ. ಇವನ ಮರಣದೊಂದಿಗೆ ಕಾಕತೀಯರ ಆಳ್ವಿಕೆ ಮುಗಿಯಿತು. ತೆಲಂಗಾಣ ಪ್ರದೇಶದ ಮೇಲೆ ದೆಹಲಿಯ ಪ್ರಭುತ್ವ ಸ್ಥಾಪಿತವಾಯಿತು. (ಪಿ.ಬಿ.ಡಿ) ಕಾಕನಕೋಟೆ: ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿಗೆ ಸೇರಿದ ಸ್ಥಳ. ಖೆಡ್ಡಾಗಳಿಗೆ ಪ್ರಸಿದ್ಧ. ಮೈಸೂರಿಗೆ ೭೭ ಕಿಮೀ ದೂರದಲ್ಲಿದೆ. ದಟ್ಟವಾದ ಕಾಡಿನಿಂದ ಕೂಡಿದ ಈ ಪ್ರದೇಶದಲ್ಲಿ ತೇಗ, ಹೊನ್ನೆ, ನಂದಿ, ಬೀಟೆ ಮುಂತಾದ ಮರಗಳು ಹುಲುಸಾಗಿ ಬೆಳೆದಿವೆ. ಇಲ್ಲಿ ತೇಗದ ಮರಗಳನ್ನು ಬೆಳೆಯುವ ಸರ್ಕಾರಿ ನಡುತೋಟಗಳಿವೆ. ಕಾಕನಕೋಟೆಯು ಕಾಡು ಆನೆಗಳ ಬೀಡು. ಆನೆಗಳಿಂದ ಬೆಳೆಗಳಿಗೂ ಜನಜೀವನಕ್ಕೂ ಆಗಾಗ ತೊಂದರೆ ಆಗುವುದು ಸಾಮಾನ್ಯ ೧೮೭೩-೧೯೭೧ರ ವರೆಗೆ ನಡೆಸಿದ ೩೬ ಖೆಡ್ಡಾಗಲಲ್ಲಿ ೨೪ನ್ನು ಕಾಕನಕೋಟೆ ಪ್ರದೇಶದಲ್ಲೇ ನಡೆಸಲಾಯಿತು. ೧೯೬೮ರಲ್ಲಿ ಹಿಡಿಯಲಾದ ಆನೆಗಳ ಸಂಖ್ಯೆ ೮೮; ೧೯೭೧ರಲ್ಲಿ ೪೧. ಕಪಿಲಾ ಯೋಜನೆಯಿಂದಾಗಿ ಈ ಪ್ರದೇಶದ ಬಹುಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕಾಕರ್, ಏಮಿಲ್ ತಿಯೊಡೋರ್: ೧೮೪೧-೧೯೧೭. ಸ್ವಿಜ್ಜರ್ಲೆಂಡಿನ ಶಸ್ತ್ರ ವೈದ್ಯ, ಬರ್ನ್ ವಿಶ್ವವಿದ್ಯಾಲಯದಲ್ಲಿ ಪದವೀಧರನಾಗಿ (೧೮೬೫) ಬರ್ಲಿನ್, ಲಂಡನ್, ಪ್ಯಾರಿಸ್, ಬಿಯನ್ನಾಗಳಲ್ಲಿ ಅಭ್ಯಸಿಸಿದ. ವಿಯನ್ನಾದಲ್ಲಿ ಜಠರ ಶಸ್ತ್ರಕ್ರಿಯೆಗೆ ಹೆಸರಾಗಿದ್ದ ಬಿಲ್‍ ರಾತನ ವಿದ್ಯಾರ್ಥಿಯಾಗಿದ್ದ. ಬರ್ನ್ ನಲ್ಲಿ ರೋಗಿಬದಿಯ (ಕ್ಲಿನಿಕಲ್) ಶಸ್ತ್ರವೈದ್ಯದ ಪ್ರಾಧ್ಯಾಪಕನಾಗಿ (೧೮೭೨) ೪೫ ವರ್ಷಗಳ ಕಾಲ ಇಲಾಖೆಯ ಮುಖ್ಯಸ್ಥನಾಗಿದ್ದ. ಆಗಿನ ಕಾಲದಲ್ಲಿ (೧೮೮೧) ಸ್ವಿಜ್ಜರ್ಲೆಂಡಿನಲ್ಲಿ ಲಿಸ್ಟರ್ ತತ್ತ್ವಗಳನ್ನು ಇವನು ಮೊಟ್ಟಮೊದಲು ಜಾರಿಗೆ ತಂದ. ಆದರೂ ಈತನ ಮನೋಧರ್ಮ ಹೊಸ ವಿಧಾನಗಳನ್ನು ಸುಲಭವಾಗಿ ಒಪ್ಪಿಕೊಳ್ಳುವಂತಿತ್ತು. ಕೊನೆಗೆ ಪೂರ್ತಿ ನಂಜಿಲ್ಲದ (ಎಸೆಪ್ಟಿಕ್) ವಿಧಾನವನ್ನು ಒಪ್ಪಿಕೊಂಡು ಪ್ರಯೋಗದ, ಅಂಗಕ್ರಿಯೆಯ ಸೂತ್ರಗಳನ್ನು ಶಸ್ತ್ರವೈದ್ಯಕ್ಕೆ ಚೆನ್ನಾಗಿ ಅಳವಡಿಸುವುದರಲ್ಲಿ ಕಾಕರ್ ಮುಂದಾಳಾಗಿದ್ದ. ಅವನಿಗೆ ಹೆಸರು ತಂದ ಗುರಾಣಿಕ (ಥೈರಾಯ್ಡ್) ಗ್ರಂಥಿಯ ಪ್ರಬಂಧಗಳಿಗಾಗಿ ನೊಬೆಲ್ ಬಹುಮಾನ (೧೯೦೯) ದೊರೆಯಿತು. ಸುಮಾರು ೯೦೦೦ಕ್ಕೂ ಮೀರಿದ ಗಳಗಂಡದ ಶಸ್ತ್ರಕ್ರಿಯೆಗಳನ್ನು ನಡೆಸಿ ಬಲು ಅಪಾಯಕಾರ, ಕಷ್ಟಕರ ಆದದ್ದನ್ನು ತೀರ ಸರಳ ಎನಿಸುವಂತೆ ತೋರಿಸಿಕೊಟ್ಟ. ಈ ಶಸ್ತ್ರಕ್ರಿಯೆಯಿಂದ ಇವನ ರೋಗಿಗಳ ಸಾವಿನ ಸಂಖ್ಯೆ ಶೇ.೧ಕ್ಕೂ ಕಡಿಮೆ ಇತ್ತು. ಹೆಗಲಿನ ಕೀಲ್ತಪ್ಪಿಕೆಯನ್ನು ಸರಿಪಡಿಸುವ ವಿಧಾನವನ್ನು ಜಠರ,ಪುಪ್ಪುಸ, ಪತ್ತಕೋಶ, ನಾಲಗೆ, ಕಪಾಲನರಗಳು, ಬೂರಗಳ ಶಸ್ತ್ರಕ್ರಿಯಾವಿಧಾನಗಳಲ್ಲಿ ಬದಲಾವಣೆಗಳನ್ನೋ ಹೊಸ ವಿಧಾನಗಳನ್ನೋ ಜಾರಿಗೆ ತಂದ. ಕರುಳನ್ನು ಕತ್ತರಿಸಿ ತೆಗೆದು ಉಳಿದ ಕೊನೆಗಳನ್ನು ಮತ್ತೆಹೊಲಿದು ಸರಿಪಡಿಸಿದವರಲ್ಲಿ ಇವನೇ ಮೊದಲಿಗ. ಅಲ್ಲದೆ,ಹಲವಾರು ಉಪಾಯಗಳು, ಸಲಕರಣೆಗಳು, ಉಪಕರಣಗಳನ್ನು ಕಂಡುಹಿಡಿದ. ಈಗಲೂ ಅವನ ಹೆಸರಿನ ಚಿಮಟವೂ ಹಲಬಗೆಯ ಇರಿತಗಳೂ (ಇನ್‍ಸಿಷನ್ಸ್) ಎಲ್ಲೆಲ್ಲೂ ಬಳಕೆಯಲ್ಲಿವೆ. ಕಾಕರ್ ಯುರೋಪಿನ ಅನೇಕ ಪ್ರಸಿದ್ಧ ಶಸ್ತ್ರ ವೈದ್ಯರ ಗುರುವಾಗಿದ್ದ. ಇವನ ಶಸ್ತ್ರ ವೈದ್ಯರ ಪಠ್ಯಪುಸ್ತಕ (೧೮೯೨) ಹಲವು ಭಾಷೆಗಳಿಗೆ ಅನುವಾದಗೊಂಡು ಕೆಲವು ಆವೃತ್ತಿಗಳನ್ನೂ ಕಂಡಿದೆ. (ಡಿ.ಎಸ್‍.ಎಸ್‍.) ಕಾಕಲ್: ಎರಡು ಹೋಳಗಳಿಂದ ಕೂಡಿದ ಚಿಪ್ಪುಳ್ಯ ಕಾರ್ಡಿಯಂ ಎಂಬ ಶಾಸ್ತ್ರೀಯ ನಾಮದ ಸಾಗರವಾಸಿ ಮೃದ್ವಂಗಿ. ಹೃದಯಚಿಪ್ಪಿನ ಹುಳು ಎಂದು ಕರೆಯುವುದಿದೆ. ಇದು ಯೂಲಾಮೆಲಿಬ್ರಾಂಕಿಯ ಗಣದ ಕಾರ್ಡಿಡೀ ಕುಟುಂಬಕ್ಕೆ ಸೇರಿದ. ಚಿಪ್ಪಿನ ಹೋಳುಗಳಲ್ಲಿ ಪ್ರಮುಖವಾದ ಅಂಬೋಗಳು ಮತ್ತು ಹೋಳುಗಳ ಹೊರಮೈ ಮೇಲೆ ವಿಕಿರಣಗೊಳ್ಳುವ ದೆಬ್ಬೆಗಳು (ರಿಬ್ಸ್) ಇರುವುದು ಇವುಗಳ ವಿಶೇಷ ಲಕ್ಷಣ. ಅಲ್ಲದೆ ಎರಡು ಚಿಪ್ಪಿನ ಹೋಳುಗಳು ಮುಚ್ಚಿಕೊಂಡಾಗ ಹೃದಯದಾಕಾರವಾಗಿ ಕಾಣುವುದರಿಂದ ಈ ಮೃದ್ವಂಗಿಗಳಿಗೆ ಹೃದಯ ಚಿಪ್ಪಿನ ಹುಳುಗಳೆಂದೂ ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ಕಾಕಲ್‍ ಎಂದೂ ಹೆಸರು ಬಂದಿದೆ. ಪ್ರಪಂಚದ ಎಲ್ಲ ಸಾಗರಗಳಲ್ಲೂ ಕಾಣಬರುವ ಇವುಗಳಲ್ಲಿ ಸುಮಾರು ೫೩ ಜಾತಿಗಳೂ ೨೫೦ ಪ್ರಭೇಧಗಳೂ ಇವೆ. ಉಷ್ಣವಲಯದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಸಾಮಾನ್ಯವಾಗಿ ಉಬ್ಬರವಿಳಿತಗಳ ನಡುವಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೂ ಕೆಲವು ೧,೮೦೦` ಆಳದ ವರೆಗೂ ವ್ಯಾಪಿಸಿರುತ್ತವೆ. ಸಾಮಾನ್ಯವಾಗಿ ಮರಳು ಅಥವಾ ಮಣ್ಣಿನಲ್ಲಿ ೩ ಸಂಮೀ ಆಳದವರೆಗೆ ತಮ್ಮ ಪಾದದ ಸಹಾಯದಿಂದ ಬಿಲ ತೋಡಿ ಹುದುಗಿರುತ್ತವೆ. ಅಲ್ಲದೆ ಹಾಗೆಯೇ ಮಣ್ಣಿನಲ್ಲಿ ನೆಲ ಉಳುವ ರೀತಿಯಲ್ಲಿ ಚಲಿಸುತ್ತವೆ. ಈ ಪ್ರಾಣಿಯ ದೇಹವನ್ನು ಎರಡು ಸಮರೂಪದ ಚಿಪ್ಪುಗಳು ಆವರಿಸಿದೆ. ಚಿಪ್ಪುಗಳು ಲಿಗಮೆಂಟು ಮತ್ತು ಕೀಲುಹಲ್ಲುಗಳ (ಹಿಂಜ್‍ ಟೀತ್) ಸಹಾಯದಿಂದ ಬಂಧಿತವಾಗಿವೆ. ಚಿಪ್ಪುಗಳನ್ನು ಮುಚ್ಚುವುದಕ್ಕೆ ತೆಗೆಯುವುದಕ್ಕೆ ಸಹಾಯಕವಾಗಿ ದೇಹದಲ್ಲಿ ಅಡ್ಡಲಾಗಿ ಅಳವಡಿಸಿರುವ ಎರಡು ಪ್ರಬಲವಾದ ಸ್ನಾಯುಗಳಿವೆ. ಪಾದ ಸ್ನಾಯುಮಯವಾಗಿದ್ದು ತುದಿಯಲ್ಲಿ ಸ್ವಲ್ಪಮಟ್ಟಿಗೆ ಚೂಪಾಗಿದೆ. ಅಲ್ಲದೆ ಮಧ್ಯಭಾದಲ್ಲಿ ಮಂಡಿಯಂತೆ ಕೊಂಚ ಬಾಗಿದೆ. ಇದರ ಸಹಾಯದಿಂದ ಕಾಕಲ್ ಮರಳಿನ ಮೇಲೆ ನೆಗೆಬಲ್ಲುದು. ಚಿಪ್ಪುಗಳು ಸಾಮಾನ್ಯವಾಗಿ ಕಂದು, ಹಳದಿ, ಕೆಂಪು ಮೊದಲಾದ ಮೋಹಕ ಬಣ್ಣಗಳಿಂದ ಕೂಡಿದ್ದು ವರ್ಣರಂಜಿತವಾಗಿವೆ. ಅಲ್ಲದೆ ಮೇಲೆಲ್ಲ ಸುಪುಷ್ಟವಾದ ಕೆತ್ತನೆಯಂಥ ರಚನೆಯೂ ಉಂಟು. ಮ್ಯಾಂಟಲ್ ಪಾಲಿಗಳು ದೇಹದ ಹಿಂಭಾಗದಲ್ಲಿ ಪರಸ್ಪರ ಕುಡಿಕೊಮಡು ಎರಡು ಚಿಕ್ಕ ಜಲನಾಲೆಗಳಾಗಿ ರೂಪಗೊಂಡಿವೆ. ಒಂದು ನಾಲೆಯ ದ್ವಾರದ ಮೂಲಕ ಪ್ರಾಣಿಗೆ ಬೇಕಾದ ಸೂಕ್ಷ್ಮಜೀವಿಯನ್ನು ಒಳಗೊಂಡ ನೀರಿನ ಪ್ರವಾಹ ದೇಹವನ್ನು ಪ್ರವೇಶಿಸುತ್ತದೆ. ಮತ್ತೊಂದರಿಂದ ತ್ಯಾಜ್ಯವಸ್ತುಗಳಿಂದ ಕೂಡಿದ ನೀರಿನ ಪ್ರವಾಹ ದೇಹದಿಂದ ಹೊರಕ್ಕೆ ಬರುತ್ತದೆ. ಪಾದದ ಇಕ್ಕೆಡೆಗಳಲ್ಲಿ ಮತ್ತು ಹಿಂಭಾಗದಲ್ಲಿ ಶ್ವಸನಕಾರ್ಯದಲ್ಲಿ ನೆರವಾಗುವ ಎರಡು ಕಿವಿರುಗಳಿವೆ. ಕಾಕಲ್ ಪ್ರಾಣಿಗಳಲ್ಲಿ ಗಂಡು, ಹೆಣ್ಣು ಎಂಬ ಲಿಂಗಣೇದವಿದೆ. ಅಂಡಾನು ಮತ್ತು ಶುಕ್ರಾಣು ಪ್ರಾಣಿಗಳ ದೇಹದಿಂದ ಹೊರಬಂದು ಪರಸ್ಪರ ಕೂಡಿ ಯುಗ್ಮಾಣುವಾಗುತ್ತದೆ. ಇದರಿಂದ ಕೆಲವು ಕಾಲಾನಂತರ ಚಲನಸಾಮರ್ಥ್ಯವುಳ್ಳ ಚಿಕ್ಕ ಡಿಂಭಗಳು ಹೊರಬರುತ್ತವೆ. ಇವು ಸ್ವತಂತ್ರವಾಗಿ ಕೆಲಕಾಲ ಈಜಿ ಕಾಯಪರಿವರ್ತನೆ ಹೊಂದಿ ಕೊನೆಗೆ ನೀರಿನ ತಳಕ್ಕೆ ಹೋಗಿ ದೊಡ್ಡದಾಗುತ್ತವೆ. ಯುರೋಪಿನ ಪಶ್ಚಿಮ ತೀರದ ಜನರು ಕಾರ್ಡಿಯಂ ಮತ್ತು ಸೆರಾಸ್ಪೊಡರ್ಮ ಎಡ್ಯೂಲ್ ಎಂಬ ಹೃದಯ ಚಿಪ್ಪುಹುಳುಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಕಾರ್ಡಿಯಂ ಪ್ರಭೇದ ಥೇಮ್ಸ್ ನದೀ ಮುಖಜಭೂಮಿಯಲ್ಲಿ ಹೇರಳವಾಗಿ ಕಂಡುಬರುತ್ತದೆ.