ಪುಟ:Mysore-University-Encyclopaedia-Vol-6-Part-1.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಿಗಾರಿಕೆ ಕಾನೂನುಗಳು. ಅಗ್ನಿಪರ್ವತಗಳ ಬಳಿ ಸಿಕ್ಕುತ್ತದೆ. ಅದು ಖನಿಜಗಳ ರೂಪದಲ್ಲೂ ಸಿಕ್ಕುತ್ತದೆ. ಲೂಸಿಯಾನದಲ್ಲಿ 152 ಮೀ. ಆಳದಲ್ಲಿರುವ ಗಂಧಕವನ್ನು ಶಿಲೆಯ ಕಂಡಿಗಳನ್ನು ಕೊರೆದು ಕೊಳಾಯಿಗಳ ಮೂಲಕ ಹೆಚ್ಚು ಕಾಸಿದ ನೀರನ್ನು ಪಂಪ್‍ಮಾಡಿ ಕೆಳಕ್ಕೆ ಕಳುಹಿಸುತ್ತಾರೆ. ಕಾವಿನಿಂದ ಗಂಧಕ ಕರಗಿ ಕಂಡಿಯ ತಳವನ್ನು ಸೇರುತ್ತದೆ. ಅಲ್ಲಿಂದ ವಾಯು ಯಂತ್ರದಿಂದ ಮೇಲಕ್ಕೆ ಸಾಗಿಸಿ ವಿಶಾಲವಾದ ಆಯತಾಕಾರದ ಕಡಾಯಿಗಳಲ್ಲಿ ಶೇಖರಿಸುತ್ತಾರೆ. ಅಮೆರಿಕದ ಟೆಕ್ಸ್‍ಸ್ ಸಂಸ್ಥಾನದಲ್ಲಿ ಲಕ್ಷ ಟನ್‍ಗಟ್ಟಲೆ ಪ್ರಮಾಣದಲ್ಲಿ ಪ್ರತಿವರ್ಷವೂ ಗಂಧಕ ಉತ್ಪನ್ನವಾಗುತ್ತದೆ.

ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿಯೂ ಮನೆ ಕಟ್ಟಲು ಬೇಕಾದ ಬಗೆ ಬಗೆಯ ಸುಣ್ಣಕಲ್ಲು, ಮರಳು ಕಲ್ಲು, ಸ್ಲೇಟ್, ಗ್ರಾನೈಟ್ ಮತ್ತು ನೈಸ್ ಮೊದಲಾದ ಶಿಲೆಗಳಲ್ಲಿ ಕೆಲವಾದರೂ ಸಿಕ್ಕುತ್ತವೆ. ಕೆಲವು ಶಿಲೆಗಳಲ್ಲಿ ಸಹಜವಾಗಿಯೇ ಬಿರುಕುಗಳಿರುವವು. ಪದರಗಳ ಉದ್ದಕ್ಕೂ ಅವನ್ನು ಬಿಡಿಸಿ ತೆಗೆಯಬಹುದು. ಸಿಡಿಮದ್ದನ್ನು ಬಳಸಿ ಗಟ್ಟಿಯಾದ ಗ್ರಾನೈಟ್, ನೈಸ್ ಶಿಲೆಗಳ ಚಪ್ಪಡಿಗಳನ್ನು ಎಬ್ಬಿಸಬಹುದು. ಸ್ಲೇಟ್ ಒಂದು ರೂಪಾಂತರ ಶಿಲೆ, ಅದನ್ನು ಮೇಲ್ಚಾವಣಿಗೆ ಬಳಸಬಹುದು. ಹಾಗೂ ನೆಲಕ್ಕೆ ಹಾಸಬಹುದು. ಗ್ರಾನೈಟ್, ನೈಸ್ ಮತ್ತು ಪಾರ್ಫಿರಿ ಎಂಬ ಶಿಲೆಗಳು ಗಟ್ಟಿಯಾಗಿ ಬಾಳಿಕೆಗೆ ಬರುತ್ತವೆ. ಇವಕ್ಕೆ ಒಳ್ಳೆಯ ಮೆರಗನ್ನೂ ಕೊಡಬಹುದು. ಮನೆ ಕಟ್ಟಲು ಅಧಿಕ ಮೊತ್ತದಲ್ಲಿ ಕಲ್ಲನ್ನು ಬಳಸಿದರೂ ಅದಕ್ಕಿಂತ ಹೆಚ್ಚಾಗಿ ಕಲ್ಲನ್ನು ಪುಡಿಮಾಡಿ ರಸ್ತೆ ಕೆಲಸದಲ್ಲಿಯೂ ಕಾಂಕ್ರೀಟ್ ತಯಾರಿಸುವುದರಲ್ಲಿಯೂ ಬಳಸುತ್ತಾರೆ. ಇಟ್ಟಿಗೆ ಮಣ್ಣು ಸಾಮಾನ್ಯವಾಗಿ ಎಲ್ಲೆಲ್ಲೂ ಸಿಕ್ಕುತ್ತದೆ. ಉಷ್ಣದೇಶಗಳಲ್ಲಿ ಇಟ್ಟಿಗೆಯನ್ನು ಕೊಯ್ದು ಬಿಸಿಲಿನಲ್ಲಿ ಒಣಗಿಸುತ್ತಾರೆ.ಗೂಡುಗಳನ್ನು ಕಟ್ಟಿ ಮರಗಳನ್ನಿಟ್ಟು ಬೆಂಕಿಹಾಕಿ ಸುಡುವುದೂ ಉಂಟು. ಕಾರ್ಖಾನೆಗಳಲ್ಲಿ ಕುಲುಮೆಗಳನ್ನು ಕಟ್ಟಲು ಬಗೆಬಗೆಯ ವಿಶೇಷ ಪರಿಸ್ಥಿತಿಯ ಕಾವಿಟ್ಟಿಗೆಗಳು ಬೇಕು. ಇವನ್ನು ತಯಾರಿಸಲು ಬೇಕಾದ ಕ್ರೋಮೈಟ್, ಬಳಪದ ಕಲ್ಲು, ಮಣ್ಣು ಮೊದಲಾದ ಸಾಮಗ್ರಿಗಳು ನಮ್ಮ ದೇಶದಲ್ಲಿವೆ. ಮರಳು ಮತ್ತು ಗರಸು ನದೀಪಾತ್ರಗಳಲ್ಲಿ ಮತ್ತು ಕಡಲಕರೆಯಲ್ಲಿ ಸಿಕ್ಕುತ್ತವೆ. ಗುಂಡಿಗಳನ್ನು ತೋಡಿ ಇವನ್ನು ತೆಗೆಯುತ್ತಾರೆ. ಅನೇಕ ದಶಲಕ್ಷ ಘನ ಮೀಟರುಗಳ ಗಾತ್ರದಲ್ಲಿ ಇವು ನಮ್ಮ ದೇಶಕ್ಕೆ ಪ್ರತಿವರ್ಷವೂ ಬೇಕು. ಸಿಮೆಂಟ್, ಸುಣ್ಣಕಲ್ಲು, ಮಣ್ಣು ಮತ್ತು ಮರಳುಗಳನ್ನು ಬೆರಕೆ ಮಾಡಿ ತಯಾರಿಸಿದ ವಸ್ತು. ಇದಕ್ಕೆ ಹೆಚ್ಚಿನ ಗಿರಾಕಿ ಇದೆ.

ಗಣಿಗಾರಿಕೆ ಕಾನೂನುಗಳು : ಖನಿಜ ನಿಕ್ಷೇಪಗಳ ಪೂರ್ವೇಕ್ಷಣ ಕಾರ್ಯ ವಿಧಾನ; ಪೂರ್ವೇಕ್ಷಕನ ಹಕ್ಕು ಬಾಧ್ಯತೆಗಳು; ಗಣಿಗಾರಿಕೆ ಕಾರ್ಯ ನಿಯಂತ್ರಣ; ಗಣಿ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ, ದುಡಿಮೆ, ವೇತನ ಇತ್ಯಾದಿ ವಿಚಾರಗಳನ್ನು ಕುರಿತ ನಿಬಂಧನೆಗಳು ಮುಂತಾದವನ್ನೊಳಗೊಂಡ ಕಾಯಿದೆಗಳು (ಮೈನಿಂಗ್ ಲಾಸ್). ಒಂದು ಪ್ರದೇಶದಲ್ಲಿ ಖನಿಜ ನಿಕ್ಷೇಪ ಇರುವ ಸಾಧ್ಯತೆಯ ಮತ್ತು ಅದನ್ನು ವಾಣಿಜ್ಯಕ ಗಾತ್ರದಲ್ಲಿ ಹೊರತೆಗೆಯುವ ಬಗ್ಗೆ ಸಾಮಾನ್ಯವಾಗಿ ಖಾಸಗಿ ಉದ್ಯಮವಲಯಕ್ಕೆ ಅವಕಾಶ ಇರುವ ಎಲ್ಲ ದೇಶಗಳಲ್ಲೂ ವ್ಯಾಪಕವಾದ ಕಾನೂನುಗಳಿರುತ್ತವೆ. ಇವನ್ನು ಸಂಬಂಧಪಟ್ಟವರು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯ.

ಗಣಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಸ್ಥೂಲವಾಗಿ ಎರಡು ಬಗೆ: 1 ರಿಯಾಯಿತಿ ಪದ್ಧತಿ (ಕನ್ಸೆಷನ್ ಸಿಸ್ಟೆಂ,) 2 ಗೊತ್ತುಗಾರಿಕೆ ಪದ್ಧತಿ (ಕ್ಲೇಮ್ ಸಿಸ್ಟೆಂ). ರಿಯಾಯಿತಿ ಪದ್ಧತಿ ಪ್ರಾಚೀನ ನಾಗರಿಕತೆಗಳಿರುವ ಬಹುತೇಕ ಎಲ್ಲ ದೇಶಗಳಲ್ಲೂ ಜಾರಿಯಲ್ಲಿದೆ. ಒಂದು ಪ್ರದೇಶದಲ್ಲಿಯ ಖನಿಜ ತೆಗೆಯುವ ಹಕ್ಕನ್ನು ಅಥವಾ ರಿಯಾಯಿತಿಯನ್ನು ಅಲ್ಲಿಯ ಸರ್ಕಾರವೋ ಆ ಪ್ರದೇಶದ ಒಡೆತನ ಹೊಂದಿರುವ ಖಾಸಗಿ ವ್ಯಕ್ತಿಯೋ ತನ್ನ ಸ್ವಂತ ವಿವೇಚನೆಗೆ ಅನುಗುಣವಾಗಿ ಮತ್ತು ಕೆಲವು ಸ್ಥೂಲ ನಿಬಂಧನೆಗಳಿಗೆ ಒಳಪಟ್ಟು ವ್ಯಕ್ತಿಗಳಿಗೋ ಸಂಸ್ಥೆಗಳಿಗೋ ಗುತ್ತಿಗೆಯಾಗಿ ಕೊಡುವುದು ರಿಯಾಯಿತಿ ಪದ್ಧತಿ. ನೆಲ ಹಿಂದೆ ರಾಜರ ಅಥವಾ ಊಳಿಗ ಮಾನ್ಯ ಪ್ರಭುಗಳ ಸ್ವತ್ತಾಗಿತ್ತು. ಆ ಕಾಲದಿಂದಲೂ ಈ ಪದ್ಧತಿ ಹಲವಾರು ಮಾರ್ಪಾಡುಗಳಿಗೆ ಒಳಪಟ್ಟು ಬೆಳೆದುಕೊಂಡುಬಂದಿದೆ. ಸರ್ಕಾರವೋ ಗಣಿ ಹಕ್ಕುಗಳ ಒಡೆತನ ಹೊಂದಿದವನೋ ತನಗೆ ಸೂಕ್ತವೆನಿಸದಂಥವರನ್ನು ಆರಿಸಿ ಅಂಥವರಿಗೆ ಗಣಿಗಾರಿಕೆ ಹಕ್ಕು ನೀಡಬಹುದಾದ್ದು ಈ ಪದ್ಧತಿಯ ಅನುಕೂಲ. ಗಣಿ ಕೆಲಸ ನಡೆಸುವ ಹಕ್ಕು ಪಡೆದವರು ಅದಕ್ಕೆ ಪ್ರತಿಯಾಗಿ ಬಾಡಿಗೆಯನ್ನು, ತೆರಿಗೆಯನ್ನು ಅಥವಾ ಸ್ವಾಮಿಸ್ವವನ್ನು (ರಾಯಲ್ಟಿ) ಪಾವತಿ ಮಾಡಬೇಕು. ಒಳ್ಳೆಯ ವ್ಯವಸ್ಥೆ, ವಸೂಲಿ ಕಾರ್ಯದಲ್ಲಿ ಮಿತವ್ಯಯ, ಗಣಿಕಾರ್ಯದಲ್ಲಿ ಸ್ಥಿರತೆ-ಇವನ್ನು ಸಾಧಿಸಬಹುದೆಂಬುದು ಈ ಪದ್ಧತಿಯ ಅನುಕೂಲ. ಆದರೆ ಈ ಪದ್ಧತಿಯಲ್ಲಿ ಪ್ರತಿಕೂಲಗಳಿಲ್ಲದೆಯೂ ಇಲ್ಲ. ಸ್ವತ್ತಿಗೆ ಸಂಬಂಧಿಸಿದಂತೆ ಅಗಾಧ ಅಧಿಕಾರಗಳು ಕೆಲವೇ ಜನರ ಹಸ್ತಗಳಲ್ಲಿ ಕೇಂದ್ರೀಕೃತವಾಗುತ್ತವೆ. ಸ್ಪರ್ಧೆ ಎಡೆಯಿರುವುದಿಲ್ಲ. ಕೆಲವೇ ಜನರು ಭಾರಿ ಲಾಭ ಗಳಿಸುತ್ತಾರೆ. ಗಣಿಕಾರ್ಯದ ಹಕ್ಕು ಪಡೆದುಕೊಂಡವರು ತಮ್ಮ ಅನುಕೂಲಕ್ಕೆ ತಕ್ಕಂತೆ ಅದಿರನ್ನು ಅತಿಯಾಗಿ ತೆಗೆದು ಗಣಿಯನ್ನು ಶೀಘ್ರವಾಗಿ ಬರಿದು ಮಾಡುವ, ಅಥವಾ ಸಾಕಷ್ಟು ಅದಿರನ್ನು ತೆಗೆಯದೆ ಇರುವ ಸಂಭವವುಂಟು. ಆದರೆ ಗಣಿಯನ್ನು ಅಭಿವೃದ್ಧಿ ಸ್ಥಿತಿಯಲ್ಲಿಟ್ಟಿರುವ ಬಗ್ಗೆ ಸೂಕ್ತ ವಿಧಿಗಳನ್ನು ಕರಾರಿನಲ್ಲಿ ಸೇರಿಸುವುದರ ಮೂಲಕ ಈ ಸಂಭವವನ್ನು ನಿವಾರಿಸಿಕೊಳ್ಳಬಹುದು. ಇಂಥ ಗಣಿ ಕಂಪನಿಗಳ ಹಣಕಾಸಿನ ವಹಿವಾಟುಗಳ ಮೇಲೆ ಮತ್ತು ಬಂಡವಾಳ ನಿರ್ಮಾಣದ ಮೇಲೆ ಸರ್ಕಾರ ಸೂಕ್ತ ಹತೋಟಿ ಪಡೆಯಬಹುದು. ದೊಡ್ಡ ಕಂಪನಿಗಳು ಗಣಿಕಾರ್ಯದ ಹಕ್ಕು ಪಡೆಯುವುದರಿಂದ ಅವುಗಳ ನಿರ್ವಹಣೆಯಲ್ಲಿ ಮತ್ತು ಗಣಿಗಳ ಪೂರ್ವೇಕ್ಷಣೆಯಲ್ಲಿ ಮಿತವ್ಯಯವೂ ದಕ್ಷತೆಯೂ ಸಾಧಿಸಬಹುದೆಂದೂ ವಾದಿಸಲಾಗಿದೆ.

ಗೊತ್ತುಗಾರಿಕೆ ಪದ್ಧತಿ ಉಗಮಿಸಿದ್ದು ಅಮೆರಿಕ ಸಂಯುಕ್ತಸಂಸ್ಥಾನದಂಥ ನೂತನ ದೇಶಗಳಲ್ಲಿ ಗಣಿಗಾರಿಕೆ ಆರಂಭವಾದ ಸಮಯದಲ್ಲಿ. ಕ್ಯಾಲಿಫೋರ್ನಿಯದಲ್ಲೂ ಆಸ್ಟ್ರೇಲಿಯದಲ್ಲೂ ಹೊಸದಾಗಿ ಬೆಳಕಿಗೆ ಬಂದ ಚಿನ್ನದ ಗಣಿಗಳೆಡೆಗೆ ಪೂರ್ವೇಕ್ಷಕರು ಧಾವಿಸಿದರು. ಚಿನ್ನದ ಆಸೆಯಿಂದ ಹೀಗೆ ಹೋದವರಲ್ಲೇ ಪರಸ್ಪರ ಬಡಿದಾಟ ಉಂಟಾದಾಗ ಅದನ್ನು ನಿವಾರಿಸಲು ಗೊತ್ತುಗಾರಿಕೆ ಕಾನೂನುಗಳು ಸೃಷ್ಟಿಯಾದುವು. ಯಾರು ಯಾವ ಸ್ಥಳದಲ್ಲಿ ಖನಿಜ ನಿಕ್ಷೇಪಗಳನ್ನು ಪತ್ತೆ ಹಚ್ಚುತ್ತಾರೋ ಆ ಸ್ಥಳದಲ್ಲಿ ಗಣಿ ಕಾರ್ಯ ಕೈಗೊಳ್ಳುವ ಹಕ್ಕು ಅವರದಾಗುತ್ತದೆ ಎಂಬುದು ಸ್ಥೂಲವಾಗಿ ಇವುಗಳ ತತ್ತ್ವ. ಸಣ್ಣಪುಟ್ಟ ಹಕ್ಕುಗಳು ಉದ್ಭವಿಸಿದಾಗ ಅವನ್ನೆಲ್ಲ ಕ್ರೋಡೀಕರಿಸುವುದು ಅವಶ್ಯವಾಗುತ್ತದೆ. ಇಲ್ಲದಿದ್ದರೆ ಗಣಿಕಾರ್ಯ ಲಾಭದಾಯಕವಾಗದಿರಬಹುದು ; ಬಂಡವಾಳ ವ್ಯರ್ಥವಾಗಬಹುದು.

ಮೇಲಣ ವಿವೇಚನೆಯ ದೃಷ್ಟಿಯಲ್ಲಿ ಒಟ್ಟಿನಲ್ಲಿ ಗಣಿಗಾರಿಕೆ ಕಾನೂನುಗಳಿಗೆ ಸಂಬಂಧಿಸಿದಂತೆ ಎರಡು ಮೂಲಭೂತ ತತ್ತ್ವಗಳನ್ನು ಗುರುತಿಸಬಹುದು: 1) ಗಣಿ ನಿರ್ವಾಹಕರು ತಮ್ಮ ಕಾರ್ಯಾಚರಣೆಗೆ ಒಳಪಟ್ಟ ಭೂ ಸ್ವತ್ತಿನ ಮೇಲೆ ರದ್ದು ಮಾಡಲಾಗದಂಥ ಸ್ವಸ್ವ (ಟೈಟ್ಲ್) ಪಡೆಯುವ ಹಕ್ಕು. ಇದಕ್ಕೆ ಪ್ರತಿಯಾಗಿ ನಿರ್ದಿಷ್ಟವಾದ ಮತ್ತು ಅವರ ಕಾರ್ಯವ್ಯಾಪ್ತಿಗೆ ಒಳಪಟ್ಟ ಕೆಲವು ಷರತ್ತುಗಳನ್ನು ಅವರು ಪೂರೈಸಬೇಕಾಗುತ್ತದೆ. 2) ಗಣಿಯಿಂದ ಬರುವ ಲಾಭದ ಮೇಲೆ ಗೊತ್ತಾದ ಬಾಡಿಗೆ, ಸ್ವಾಮಿಸ್ವ ಅಥವಾ ತೆರಿಗೆಯನ್ನು ಪಡೆಯಲು ಸರ್ಕಾರಕ್ಕೆ ಅಥವಾ ಸ್ವತ್ತಿನ ಒಡೆಯನಿಗೆ ಹಕ್ಕು ಇರುತ್ತದೆ. ಸ್ವತ್ತು ಹಾಗೂ ಕಾರ್ಮಿಕರ ರೂಪದಲ್ಲಿರುವ ಬಂಡವಾಳ ವಿನಾಕಾರಣವಾಗಿ ಅನುಪಯೋಗಿಯಾಗಿರದಂತೆ ಗಣಿಯಲ್ಲಿ ನಿರಂತರವಾಗಿ ನ್ಯಾಯವಾದ ಹಾಗೂ ಪರಿಣಾಮಕಾರಿಯಾದ ಕಾರ್ಯ ನಡೆಯುವುದಾಗಿ ನಿರೀಕ್ಷಿಸುವ ಹಕ್ಕೂ ಸರ್ಕಾರಕ್ಕೆ ಅಥವಾ ಸ್ವತ್ತಿನ ಒಡೆಯರಿಗೆ ಉಂಟು. ಎಲ್ಲ ದೇಶಗಳ ಕಾನೂನುಗಳಲ್ಲೂ ಸ್ಥೂಲವಾಗಿ ಈ ಎರಡು ತತ್ತ್ವಗಳು ಅಂತರ್ಗತವಾಗಿರುತ್ತವೆ.

ಗಣಿ ಕಾರ್ಮಿಕರಿಗೆ ಸೂಕ್ತವಾದ ವೇತನ ಪಾವತಿ, ಅವರ ಕೆಲಸದ ಕಾಲದ ನಿಯಂತ್ರಣ, ಅಪಘಾತ ಪರಿಹಾರ ಮತ್ತು ವಿಮೆ, ವಿರಾಮವೇತನ, ಸಹಾಯಾರ್ಥ ನಿಧಿ, ಕಾರ್ಮಿಕ-ವ್ಯವಸ್ಥಾಪಕ ಸಂಬಂಧಗಳು, ಕಾರ್ಮಿಕ ವ್ಯಾಜ್ಯಗಳ ಇತ್ಯರ್ಥ, ಕಾರ್ಮಿಕ ಕಲ್ಯಾಣ, ಕಾರ್ಮಿಕ ಸೌಲಭ್ಯಗಳು, ಆರೋಗ್ಯ ರಕ್ಷಣೆ, ನೈರ್ಮಲ್ಯ ಸಾಧನೆ, ಕೆಲಕೆಲವು ಗಣಿಗಳಿಗೆ ವಿಶಿಷ್ಟವಾದ ಕಾಯಿಲೆಗಳ ನಿವಾರಣೆ ಮುಂತಾದ ಅನೇಕ ವಿಚಾರಗಳನ್ನು ಕುರಿತ ಕಾನೂನುಗಳೂ ಜಾರಿಯಲ್ಲಿವೆ.

ಪ್ರಪಂಚದ ಇತರ ಹಲವು ದೇಶಗಳಂತೆ ಭಾರತದಲ್ಲೂ ಮೇಲ್ಕಂಡ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಕಾನೂನುಗಳುಂಟು. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಗಣಿಗಳ ಅಭಿವೃದ್ಧಿಗಾಗಿ ಅವುಗಳ ಕಾರ್ಯವನ್ನು ಅಂಕೆಯಲ್ಲಿಡುವ ಬಗ್ಗೆ 1957ರಲ್ಲಿ ಗಣಿಗಳು ಮತ್ತು ಖನಿಜಗಳ ನಿಬಂಧನೆ ಮತ್ತು ಅಭಿವೃದ್ಧಿ ಕಾಯಿದೆ ಜಾರಿಗೆ ಬಂತು. ಈ ಶಾಸನದ ಅಥವಾ ಇದಕ್ಕೆ ಅನುಗುಣವಾಗಿ ರಚಿತವಾದ ನಿಯಮಗಳ ಪ್ರಕಾರ ಪೂರ್ವೇಕ್ಷಣ ಕಾರ್ಯದ ಅನುಜ್ಞೆ ಅಥವಾ ಗುತ್ತಿಗೆ ಪಡೆಯದೆ ಯಾರಿಗೂ ಪೂರ್ವೇಕ್ಷಣಕಾರ್ಯ ಅಥವಾ ಗಣಿ ಕಾರ್ಯದಲ್ಲಿ ಕೈ ಹಚ್ಚಲು ಸಾಮಾನ್ಯವಾಗಿ ಸಾಧ್ಯವಿಲ್ಲ. ಭಾರತೀಯ ಪ್ರಜೆಗಳಿಗೆ ಅಥವಾ ಭಾರತೀಯರೇ ಹೆಚ್ಚಿನ ಪಾಲು ಪಡೆದಿರುವ ಸಂಸ್ಥೆಗಳಿಗೆ ಮಾತ್ರ ಇದನ್ನು ಪಡೆಯುವ ಅರ್ಹತೆಯುಂಟು.

ಒಂದು ರಾಜ್ಯದಲ್ಲಿ ಒಬ್ಬನಿಗೆ ಪೂರ್ವೇಕ್ಷಣೆಗೆ 50 ಚ.ಮೈ.ಗಿಂತ, ಗುತ್ತಿಗೆಗೆ 10 ಚ.ಮೈ.ಗಿಂತ ಹೆಚ್ಚು ಸ್ಥಳ ಸಿಗಲಾರದು. ಆದರೆ ಕೇಂದ್ರ ಸರ್ಕಾರ ಗಣಿಯ ಅಭಿವೃದ್ಧಿಗಾಗಿ ಹೆಚ್ಚು ಸ್ಥಳವನ್ನು ಕೊಡಬೇಕೆಂದು ಅಭಿಪ್ರಾಯಪಟ್ಟಲ್ಲಿ ಈ ಪರಿಮಿತಿಗಿಂತ ಹೆಚ್ಚಿಗೆ ಸ್ಥಳ ಕೊಡಬಹುದು. ಅನುಜ್ಞೆಯ ಮತ್ತು ಗುತ್ತಿಗೆಯ ಅವಧಿ, ಅರ್ಜಿಯನ್ನು ಮಾಡುವ